ಚಿ. ಉದಯಶಂಕರ್ ಅವರಿಗೆ ಜನುಮದಿನದ ಶುಭಾಶಯಗಳು.
ಚಿ. ಉದಯಶಂಕರ್ ಕನ್ನಡದ ಚಿತ್ರರಂಗದ ಮಹಾನ್ ಸಾಹಿತಿ. ಕನ್ನಡಕ್ಕಾಗಿ ಕೆಲಸ ಮಾಡಿದ ಇಂತಹ ಮಹನೀಯರನ್ನು ನೆನೆಯುವುದು ಹೆಮ್ಮೆಯ ವಿಷಯವಾಗುತ್ತದೆ.
ಚಿ. ಉದಯಶಂಕರ್ 1934ರ ಫೆಬ್ರವರಿ 18ರಂದು ಚಿಟ್ಟನಹಳ್ಳಿಯಲ್ಲಿ ಜನಿಸಿದರು.
ಸೀನು ಸುಬ್ಬು ಸುಬ್ಬು …. ಬಲು ಅಪರೂಪ ನಮ್ ಜೋಡಿ ಹಾಡು ತಕ್ಷಣವೇ ನೆನಪಿಗೆ ಬಂತು. ಅವರು ಮತ್ತು ಶಿವರಾಂ ಈ ಹಾಡನ್ನು ಹೇಳಿ ನರ್ತಿಸಿಕೊಂಡು, ಜೊತೆಯಲ್ಲಿ ಅಂದಿದ್ದ ಹಲವಾರು ಹಾಸ್ಯ ನಟರು ಅವರ ಜೊತೆ ಇದ್ದು, ಆ ಸನ್ನಿವೇಶ ಮುದ ನೀಡುವಂತದ್ದು. ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಆನಂದ್ ಚಿತ್ರದಲ್ಲಿ ಸುಧಾರಾಣಿ ಅವರ ಅಪ್ಪನಾಗಿ ಚಿ. ಉದಯಶಂಕರ್ ಅವರು ಹಾಸ್ಯಭರಿತವಾಗಿ ಹೇಳುತ್ತಿದ್ದ ಸಂಭಾಷಣೆ ಕೂಡಾ ನೆನಪಿಗೆ ಬರುತ್ತಿದೆ. ಮತ್ತೊಂದು ಚಿತ್ರ ‘ಜೀವನ ಚಕ್ರ’ದಲ್ಲಿ ವಿಶಿಷ್ಟ ರೀತಿಯ ಉದ್ಯಮಿಯಾಗಿ ಅವರು ವಿಷ್ಣುವರ್ಧನ್ ಅವರ ಬಾಸ್ ಆಗಿ ನಟಿಸಿರುವುದು ಕೂಡಾ ನೆನಪಿನಲ್ಲಿ ಉಳಿದಿದೆ. ‘ಹಾಲು ಜೇನು’ ಚಿತ್ರದಲ್ಲಿ ‘ಆನೆಯ ಮೇಲೆ ಅಂಬಾರಿ ಕಂಡೆ ….’ ಹಾಡಿನ ಕೊನೆಯಲ್ಲಿ ‘ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ’ ಎಂದು ರಾಜ್ ‘ ಅವರು ಉದಯಶಂಕರ್ ಅವರನ್ನು ಕಾಣುವುದನ್ನು ನೋಡಿದ ನೆನಪು ಸಹಾ ಮರುಕಳಿಸುತ್ತಿದೆ.
ಒಬ್ಬ ಮಹಾನ್ ಹಾಡು ರಚನೆಗಾರನನ್ನು, ಚಿತ್ರ ಸಾಹಿತಿಯನ್ನು ಕೆಲವೊಂದು ಸಣ್ಣ ಪಾತ್ರಗಳ ಮೂಲಕ ಗುರುತಿಸುತ್ತಿದ್ದೇನೆ ಎಂದು ನಿಮಗನ್ನಿಸಿದ್ದರೆ ಆಶ್ಚರ್ಯವಿಲ್ಲ. ಈ ಚಿತ್ರರಂಗದಲ್ಲಿ ನಾವು ತೆರೆಯಮೇಲೆ ಮೂಡುವ ನಟ ನಟಿಯರನ್ನು ನೆನಪಿಸಿಕೊಳ್ಳುವಷ್ಟು ಅವುಗಳಲ್ಲಿ ಜೀವ ತುಂಬಿದ ಆತ್ಮೀಯ ಚೇತನಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಡಿಮೆಯೇ! ಚಿ. ಉದಯಶಂಕರ್ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಚಿತ್ರಗೀತೆಗಳನ್ನು ಬರೆದಿದ್ದರೋ, ಎಷ್ಟೊಂದು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರೋ ಅದರ ಲೆಕ್ಕ ಇಟ್ಟವರು ಯಾರು! ಉದಯಶಂಕರರು ಹರಿಸಿದ ಹಾಡಿನ ಮಳೆಗೆ ಲೆಕ್ಕ ಇಡಲು ಸಾಧ್ಯವೇ!
‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’, ‘ನಾವಾಡುವ ನುಡಿಯೇ ಕನ್ನಡ ನುಡಿ’, ‘ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ’, ‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು’, ‘ಶಾರದೆ ದಯೆ ತೋರಿದೆ’, ‘ಮುತ್ತಿನ ಹನಿಗಳು ಸುತ್ತಲೂ ಮುತ್ತಲೂ’, ‘ನಾದಮಯ ಈ ಲೋಕವೆಲ್ಲಾ’, ‘ಜೊತೆಯಲಿ ಜೊತೆ ಜೊತೆಯಲಿ’, ‘ಓ ಪ್ರಿಯತಮ, ಕರುಣೆಯಾ ತೋರೆಯಾ’, ‘ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ’, ‘ಬಂದೆಯ ಬಾಳಿನ ಬೆಳಕಾಗಿ’, ‘ಎಂದೆಂದೂ ನಿನ್ನನು ಮರೆತು’, ‘ಒಲಿದ ಜೀವ ಜೊತೆಯಲಿರಲು ಬಾಳು ಸುಂದರ’, ‘ಬಾನಲ್ಲು ನೀನೆ ಭುವಿಯಲ್ಲು ನೀನೆ’, ‘ರಘುಪತಿ ರಾಘವ ರಾಜಾರಾಂ ..(ಗಾಂಧೀ ನಗರ ಚಿತ್ರದ್ದು), ‘ಒಮ್ಮೆ ನಿನ್ನನ್ನು ಕಣ್ತುಂಬಾ’, ‘ಎಲ್ಲೆಲ್ಲು ಸಂಗೀತವೆ’, ‘ಆಹಾ ಮೈಸೂರು ಮಲ್ಲಿಗೆ’, ‘ಶಿಲೆಗಳು ಸಂಗೀತವಾ ಹಾಡಿವೆ’, ‘ಬಾನಿನ ಅಂಚಿಂದ ಬಂದೆ’, ‘ರಂಗ ಬಾರೋ ಮುದ್ದು ರಂಗ ಬಾರೋ’, ‘ಜಗದೀಶ ಸರ್ವೇಶ ಗೌರೀಶ ಮಲ್ಲೇಶ’ ಹೀಗೆ ಚಿ. ಉದಯಶಂಕರ್ ಅವರು ರಚಿಸಿದ ಹಾಡುಗಳನ್ನು ಬರೆಯುತ್ತಾ ಹೋಗಬಹುದು. ನನ್ನ ನೆನಪಿಗೆ ಶಕ್ತಿಗೆ ಕೊನೆ ಇದೆಯೇ ವಿನಃ ಉದಯಶಂಕರ್ ಅವರ ಚಿತ್ರಗೀತೆಗಳ ಸಂಖ್ಯೆಗಲ್ಲ.
ಚಿ ಉದಯಶಂಕರ್ ಅವರು ತಮ್ಮ ಸರಳ ಸಜ್ಜನಿಕೆ ಹಾಗೂ ಚಿತ್ರರಂಗದವರಲ್ಲಿನ ಆತ್ಮೀಯ ಒಡನಾಟದಿಂದ ಹೆಸರಾದವರು. ಹಾಗಾಗಿ ಅವರ ಕಾಲದಲ್ಲಿ ಮೂಡಿದ ಚಿತ್ರಗೀತೆಗಳ ಸಿಂಹಪಾಲು ಸೃಷ್ಟಿ ಅವರದ್ದೇ ಆಗಿದೆ. ಡಾ. ರಾಜ್ ಕುಮಾರ್ ಮತ್ತು ಚಿ. ಉದಯಶಂಕರ್ ಅತ್ಯಂತ ಆತ್ಮೀಯ ಒಡನಾಡಿಗಳು. ಚಿ. ಉದಯಶಂಕರ್ ಅವರ ನಿಧನದ ನಂತರ ರಾಜ್ ತಮಗೆ ಚಿತ್ರರಂಗದ ಜೀವನದಲ್ಲಿ ಆಸಕ್ತಿ ಕಡಿಮೆಯಾಯಿತು ಎಂದು ಮುಕ್ತವಾಗಿ ಹೇಳಿದ್ದುಂಟು. ಅಂತಹ ವಿಶಿಷ್ಟ ಸ್ನೇಹ ಅವರಿಬ್ಬರದು.
ಚಿ. ಉದಯಶಂಕರ್ ಅವರು ತಮ್ಮ ಚಿತ್ರರಂಗದ ಕಾಯಕವನ್ನು ಆರಂಭಿಸಿದ್ದು ‘ಸಂತ ತುಕಾರಾಂ’ ಚಿತ್ರದಲ್ಲಿ ಹಾಡುಗಳನ್ನು ರಚಿಸುವುದರ ಮೂಲಕ. ಅವರ ತಂದೆ ಚಿ. ಸದಾಶಿವಯ್ಯನವರು ಅತ್ಯಂತ ಪ್ರಸಿದ್ಧ ಚಿತ್ರ ಸಾಹಿತ್ಯ ರಚನಕಾರರಾಗಿದ್ದರು. ನಾನು ಚಿಕ್ಕಂದಿನಲ್ಲಿ ಚಿ. ಉದಯಶಂಕರ್ ಅವರ ರೇಡಿಯೋ ಸಂದರ್ಶನ ಕೇಳಿದ ನೆನಪಾಗುತ್ತಿದೆ. ಒಮ್ಮೆ ಸದಾಶಿವಯ್ಯನವರನ್ನು ಯಾರೋ ಹಾಡು ಬರೆಯಲು ಹೇಳಿದರಂತೆ. ಸದಾಶಿವಯ್ಯನವರು ಬರೆದುಕೊಟ್ಟರು. ಹಾಡಿನಲ್ಲಿ ಮಾದಕತೆ ಇನ್ನೂ ಹೆಚ್ಚಿರಬೇಕಿತ್ತು ಎಂಬ ಆಶಯ ನಿರ್ಮಾಪಕರಿಗಿತ್ತು. ಅದನ್ನು ಮಾಡಲು ಒಪ್ಪದ ಚಿ. ಸದಾಶಿವಯ್ಯನವರು ಹೇಳಿದರಂತೆ, “ನೋಡಿ ನನ್ನ ಮನೋಧರ್ಮಕ್ಕೆ ಇದಕ್ಕಿಂತ ಬೇರೆಯ ರೀತಿಯಲ್ಲಿ ಬರೆಯುವುದು ಸಹ್ಯವಾಗದು. ಹಾಗೆ ನಿಮ್ಮ ಆಶಯವಿದ್ದಲ್ಲಿ ನನ್ನ ಮಗನ ಕೈಲಿ ಬರೆಸಿಕೊಳ್ಳಿ” ಎಂದು. ಹೀಗೆ ಒಂದು ರೀತಿಯಲ್ಲಿ ತಮ್ಮ ತಂದೆಯವರು ಮಾಡುತ್ತಿದ್ದ ಸ್ವಚ್ಛ ಕೆಲಸ ಹಾಗೂ ತಾವು ಬದುಕಿದ್ದ ಚಿತ್ರರಂಗದಲ್ಲಿ ನಡೆಸಿದ ಒಡಂಬಡಿಕೆಯ ಬದುಕಿನ ಬಗೆಗೆ ಅವರು ನೀಡಿದ ವಿಡಂಬನೆಯ ಚಿತ್ರಣ ಕೂಡಾ ಇದಾಗಿತ್ತು ಎನಿಸುತ್ತದೆ.
ಚಿ. ಉದಯಶಂಕರ್ ಅವರ ಅನೇಕ ಗೀತೆಗಳು ಸರಳತೆಯಲ್ಲೂ ಆಧ್ಯಾತ್ಮದ ಅನಂತತೆಯನ್ನು ಚೆಲ್ಲುವಂತಿವೆ. ಬಾನಲ್ಲು ನೀನೆ ಭುವಿಯಲ್ಲು ನೀನೆ, ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ ಮುಂತಾದ ಅನೇಕ ಗೀತೆಗಳು ಈ ಸಾಲಿಗೆ ಸೇರಿದಂತಹವು.
ಚಿ. ಉದಯಶಂಕರ್ ಸರಳತೆಯಲ್ಲಿ ಸುಂದರತೆಯನ್ನು ಸೃಷ್ಟಿಸಿ ಚಿತ್ರರಸಿಕರಲ್ಲಿ ಗಳಿಸಿದ ಸ್ಥಾನ ಎಲ್ಲ ಪ್ರಶಸ್ತಿಗಳನ್ನೂ ಮೀರುವಂತದ್ದು.
ಚಿ. ಉದಯಶಂಕರ್ ಅವರ ಮಕ್ಕಳು ಸಹಾ ಚಿತ್ರರಂಗದಲ್ಲಿ ನಟರಾಗಿ ಹೆಸರು ಮಾಡಿದರು. ಅವರ ಒಬ್ಬ ಮಗ ಅಪಘಾತದಲ್ಲಿ ಅವರ ಕಣ್ಣೆದುರೇ ಸಾವನ್ನಪ್ಪಿದ್ದು ಅವರನ್ನು ತುಸು ಗಂಭೀರರನ್ನಾಗಿಸಿತು. ಇನ್ನೂ ಅಂತಹ ವಯಸ್ಸಾಗಿಲ್ಲದಿದ್ದ ಅವರು 1990ರ ದಶಕದಲ್ಲೇ ವಿಧಿವಶರಾಗಿದ್ದು ಕನ್ನಡ ಚಿತ್ರರಂಗಕ್ಕೆ ಆದ ಬಹುದೊಡ್ಡ ನಷ್ಟ. ಚಿತ್ರರಂಗದಲ್ಲಿ ಅಪಾರ ಕೊಡುಗೆಗಳನ್ನಿತ್ತ ಚಿ. ಉದಯಶಂಕರ್ ಇಲ್ಲಿನ ಚಿತ್ರರಂಗಾಸಕ್ತರ ಹೃದಯದಲ್ಲಿ ಚಿರವಿರಾಜಮಾನರು.