ಸ್ವಾಮಿಗಳಿಗೆ ಸಂಬಂಧಿಕರು ಯಾರು ?
ವೀರಕ್ತ ಸ್ವಾಮೀಜಿಗಳಾದವರಿಗೆ ಸಂಸಾರ ಇರುವುದಿಲ್ಲ. ಸಂಸಾರ ಇರುವುದಿಲ್ಲ ಎಂಬ ಕಾರಣಕ್ಕೆ ಅವರು ವಿರಕ್ತರು. ಸ್ವಾಮೀಜಿಗಳು ನಮ್ಮ ನಿಮ್ಮಂತೆಯೇ ತಾಯಿ ಗರ್ಭದಿಂದ ಜನಿಸಿದವರು. ಹುಟ್ಟುತ್ತಲೇ ಅವರಿಗೂ ತಂದೆ, ತಾಯಿ, ಬಂಧು ಬಳಗ ಎಲ್ಲರೊಂದಿಗೆ ಬೆರೆತು ಜೀವಿಸುತ್ತಿರುತ್ತಾರೆ. ಆದರೆ ಯಾವಾಗ ಸ್ವಾಮೀಜಿಯಾಗುವ ಸಂಕಲ್ಪ ತೊಟ್ಟು ಮರಿಗಳಾಗಿ ಅಧ್ಯಯನಕ್ಕೆ ತೊಡುಗುವಾಗಲೇ ಕರಳು ಬಳ್ಳಿಯ ಸಂಬಂಧ ಕಡಿದುಕೊಂಡು ಸಮಾಜಮುಖಿ ಕೆಲಸಕ್ಕೆ ಅರ್ಪಿಸಿಕೊಳ್ಳುವುದಿದೆಯಲ್ಲ ಅದಕ್ಕೆ ಗಟ್ಟಿ ಗುಂಡಿಗೆಯೇ ಬೇಕು.
ಸಂಸಾರಿಕರಾದ ನಮಗೆ ಮನೆಗೆ ಬಂದು ಮನೆಯಲ್ಲಿರುವ ಕುಟುಂಬಸ್ಥರು ಕೆಲ ಹೊತ್ತು ಕಾಣಾದಾದಾಗ ಚಡಪಡಿಸುತ್ತೇವೆ. ಆದರೆ ಸ್ವಾಮೀಜಿಗಳು ಅವರು ಕೂಡ ನಮ್ಮಂತೆಯೇ ಮನುಷ್ಯರು. ಅವರು ಕುಟುಂಬವನ್ನು ತೊರೆದು ಸ್ವಾಮೀಜಿಗಳಾಗುವಾಗ ಅವರ ವೇದನೆ, ಚಡಪಡಿಕೆ, ಸಂಕಲ್ಪ, ತ್ಯಾಗ ಯಾವುದು ಅವರನ್ನು ಕಾಡುತ್ತಿರುತ್ತವೆ ಎಂಬ ನನ್ನ ಪ್ರಶ್ನಗೆ ಸಮರ್ಪಕ ಉತ್ತರ ಕೊಟ್ಟವರು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧಲಿಂಗ ಮಹಸ್ವಾಮಿಗಳು.
ಸ್ವಾಮೀಜಿಗಳಿಗಳಿಗೆ ಭಕ್ತರೇ ಬಂಧು ಬಳಗ, ನಾವು ನಮ್ಮ ಕುಟುಂಬವನ್ನು ತೊರೆದು ಮಠಕ್ಕೆ ಬಂದಾಗಲೇ ಒಡಹುಟ್ಟಿದವರ ಕರುಳ ಬಳ್ಳಿಯ ಸಂಬಂಧ ಕಿತ್ತಿಕೊಂಡು ಭಕ್ತರ ಸಂಬಂಧ ಬೆಸೆದುಕೊಳ್ಳುತ್ತೇವೆ. ನಮ್ಮ ಕಷ್ಟಕ್ಕೆ ನಮ್ಮ ಸುಖಕ್ಕೆ ನಮ್ಮ ಭಕ್ತರೇ. ನಿಮ್ಮ ನಿಮ್ಮ ಮನೆಗಳಿಗೆ ನಿಮ್ಮ ಬಂಧುಗಳು ಬಂದಾಗ ಎಷ್ಟೋ ಸಂತೋಷ ಪಟ್ಟು ಆತಿಥ್ಯ ಮಾಡುತ್ತೀರೋ ಹಾಗೇ ನಮ್ಮ ಮಠಕ್ಕೆ ಭಕ್ತರು ಬಂದಾಗ ನಾವು ಸಂತೋಷ ಪಡುತ್ತೇವೆ. ನಿಮ್ಮ ಆತಿಥ್ಯವೇ ನಮಗೆ ಪರಮಾನಂದ ಎಂದು ತಿಳಿಸಿ ಸ್ವತಃ ಅವರೇ ನಮಗೆ ತಮ್ಮ ಕೈಯಾರೆ ಪ್ರಸಾದ ಬಡಿಸಿ ಬಂಧುಗಳಂತೆ ನೋಡಿಕೊಳ್ಳುವ ಮೂಲಕ ನಮಗೆಲ್ಲ ಹೊಸಗಣ್ಣು ತೆರೆಸಿದವರು ಡಾ.ಸಿದ್ದಲಿಂಗ ಮಹಾಸ್ವಾಮಿಗಳು.
ನಾನು ಮತ್ತು ನನ್ನ ಗೆಳೆಯರು ಅವರ ಸಂಪರ್ಕಕ್ಕೆ ಬಂದುದೇ ಒಂದು ಸುದೈವ. ನಮ್ಮ ಊರು ರಾಯಚೂರು ಜಿಲ್ಲೆಯ ಮಸ್ಕಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಡಾ.ಸಿದ್ಧಲಿಂಗ ಮಹಾಸ್ವಾಮಿಗಳನ್ನು ಆಹ್ವಾನಿಸಲು ಗದುಗಿಗೆ ಡಾ.ಶಶಿಕಾಂತ ಅವರೊಂದಿಗೆ ನಾನು, ಮಹಾಂತೇಶ ಮಸ್ಕಿ, ದಯಾನಂದ ಜೋಗಿನ್ ಹೋಗಿದ್ದೇವು. ಡಾ.ಶಶಿಕಾಂತ ಕಾಡ್ಲೂರು ಅಜ್ಜವರಿಗೆ ನಮ್ಮನ್ನು ಪರಿಚಯಿಸಿ ಮಸ್ಕಿ ಶಾಲೆಯಲ್ಲಿ ಕಸಬಾಲಿಂಗಸುಗೂರಿನ ಶ್ರೇಷ್ಟ ಗುರುವರ್ಯ ಷಡಕ್ಷರಪ್ಪ ಮಾಸ್ತರ ಮಸ್ಕಿಯ ಶಾಲೆಯನ್ನು ಅಭಿವೃದ್ದಿ ಪಡಿಸಿದ್ದಲ್ಲದೆ ಕಲಬುರ್ಗಿ ಪ್ರಾಂತದಲ್ಲಿಯೇ ಶ್ರೇಷ್ಠ ಶಾಲೆಯನ್ನಾಗಿ ರೂಪಿಸಿದ್ದಾರೆ. ಅವರ ಶಿಷ್ಯರು ಇವರು ಎಂದು ಪರಿಚಯಿಸಿದರು. ನಮ್ಮ ಕಾರ್ಯ ಚಟುವಟಿಕೆ ತಿಳಿದುಕೊಂಡು ಮಸ್ಕಿಗೆ ಬರಲು ಒಪ್ಪಿಕೊಂಡರು
ಹಂಡೇ ಹಾಲು ಕುಡಿದಷ್ಟು ಸಂತೋಷ ಪಡುವ ಸ್ವಾಮೀಜಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಂದರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅಂದಿನ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರನ್ನು ಶತಮಾನೊತ್ಸವ ಕಾರ್ಯಕ್ರಮಕ್ಕೆ ಕರೆತಂದಿದ್ದರು. ಪೂಜ್ಯ ಡಾ.ಸಿದ್ಧಲಿಂಗ ಮಹಾಸ್ವಮೀಜಿ ಅಂದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡುವಾಗ ಮನಸಾರೆ ಹರಸಿದರು.
ಈ ಭಾಗ ನಿಜಾಮನ ಆಳ್ವಿಕೆಯಿಂದಾಗಿ ಮೊಗಲಾಯಿ ಭಾಗ ಎಂದು ಪ್ರಸಿದ್ದಿ. ಇಲ್ಲಿನ ಜನ ಶಿಕ್ಷಣದಿಂದ ವಂಚಿತರು. ಈ ಪ್ರದೇಶದ ಜನರು ಭಾಷೆ, ಧರ್ಮದ ಮೇಲೆ ತುಳಿತಕ್ಕೆ ಒಳಗಾದವರು. ಆಡಳಿತ ಭಾಷೆ ಉರ್ದು, ಜನರಾಡುವ ಭಾಷೆ ಮರಾಠಿ ಮತ್ತು ತೆಲುಗು, ನಡುವೆ ಕನ್ನಡವನ್ನು ಉಳಿಸಿಕೊಂಡು ಬಂದದ್ದೆ ಒಂದು ಪವಾಡ. ಅದಕ್ಕೆ ಈ ಭಾಗದಲ್ಲಿದ್ದ ಸಣ್ಣ ಪುಟ್ಟ ಮಠ ಮಾನ್ಯಗಳು ಕಾರಣ ಎಂದು ಇತಿಹಾಸವನ್ನು ತಲಸ್ಪರ್ಶಿಯಾಗಿ ತಿಳಿಸಿದ್ದಲ್ಲದೆ ಶತಮಾನೋತ್ಸವ ಕಾರ್ಯಕ್ರಮ ಮುಂಬೈ ಕರ್ನಾಟಕದ ಧಾರವಾಡ ಹುಬ್ಬಳ್ಳಿಗಿಂತ ಕಡಿಮೆ ಇಲ್ಲದಂತೆ ಅಚ್ಚುಕಟ್ಟಾಗಿ ಮಾಡಿದ್ದಕ್ಕೆ ಶತಮಾನೋತ್ಸವ ಸಮಿತಿಯ ಸದಸ್ಯರನ್ನು ಅಭಿನಂಧಿಸಿದರು.
ಅಂದಿನಿಂದ ಅಜ್ಜವರ ಒಡನಾಡದಿಂದಾಗಿ ನಾವು ಗದುಗಿನ ಮಠದ ಭಕ್ತರೇ ಆಗಿಬಿಟ್ಟೆವು. ನಾವು ಸ್ಥಾಪಿಸಿದ ಮಸ್ಕಿ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆಯ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ೨೫ ವರ್ಷದ ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಕಾರ್ಯಚಟುವಟಿಕೆಗಳನ್ನು ನೋಡಿ ಬಹಿರಂಗ ಸಭೆಗಳಲ್ಲಿ ನಮ್ಮ ಶಾಲೆಯ ಸಾಧನೆಯನ್ನು ಮೆಚ್ಚಿ ನನಗೆ ಹಂಡೆ ಹಾಲು ಕುಡಿದಷ್ಟು ಸಮತೋಷವಾಗಿದೆ ಎಂದು ಅಭಿಮಾನದಿಂದ ಹೇಳುವ ಮೂಲಕ ನಾವು ಮತ್ತಷ್ಟು ಸಮಾಜ ಮುಖಿ ಕೆಲಸ ಮಡುವಂತೆ ಪ್ರೇರೇಪಿಸಿದ್ದಾರೆ.
ಷಡಕ್ಷರಪ್ಪ ಮಾಸ್ಟರ್ ಅವರ ಅಭಿನಂದನ ಸಮಾರಂಭ ಮಾಡಿದ್ದು ಅವರ ಕುರಿತು ‘ಷಡಕ್ಷರ’ ಪುಸ್ತಕ ಪ್ರಕಟಿಸಿದ್ದು ಶಾಲೆ ನಡೆಸುವಾಗಿನ ಅನೇಕ ಸಮಸ್ಯಗಳಿಗೆ ಶ್ರೀಗಳು ನಮಗೆ ಪರಿಹಾರದ ಮಾರ್ಗ ಸೂಚಿಸಿದ್ದು, ಹಿರಿಯರಾದ ಶ್ರೀಗಿರಿರಾಜ ಹೊಸಮನಿ, ಮಹಾಂತೇಶ ಮಸ್ಕಿ, ದಯಾನಂದ ಜೋಗಿನ್, ಪ್ರಕಾಶ ಮಸ್ಕಿ ಹಾಗೂ ನನಗೆ ಶ್ರೀಮಠದಿಂದ ಸತ್ಕರಿಸಿ ಬಟ್ಟೆ ಬರಿ ಮಾಡಿ ಬೀಗರಂತೆ ನಮ್ಮನ್ನು ನೋಡಿಕೊಂಡಿದ್ದು ನೋಡಿದರೆ ಅವರೊಂದಿನ ನಮ್ಮ ಒಡನಾಟಕ್ಕೆ ದೈವ ಸಂಕಲ್ಪ ಕಾರಣವಾಗಿರಬೇಕು.
ಬಸವಾದಿ ಪ್ರಮಥರ ನಡೆ ನುಡಿಯ ಜಾಡು ಹಿಡಿದಿದ್ದ ನಮಗೆ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಮಹಾದಂಡ ನಾಯಕರೇ ಆಗಿದ್ದರು. ಗದುಗಿನ ಜಗದ್ಗುರು ಶ್ರೀತೋಂಟದಾರ್ಯ ಮಠ ಕೇವಲ ಮಠವಾಗದೆ ನಮ್ಮ ಪಾಲಿಗೆ ಬೀಗರ ಮನೆಯೇ ಆಗಿತ್ತು. ನಾವು ನೆನಪು ಮಾಡಿಕೊಂಡಾಗಲೆಲ್ಲ ಶ್ರೀಮಠಕ್ಕೆ ಹೋಗುತ್ತಿದ್ದವು. ಅವರೊಂದಿಗೆ ಮಾತಾಡುವುದಿದೆಯಲ್ಲ. ಅದೊಂದು ಅನನ್ಯ ಭಾವ. ವಿಶ್ವವಿದ್ಯಾಲಯದಲ್ಲಿ ಸಾವಿರಾರು ಪುಸ್ತಕ ಒದಿದಾಗ ಸಿಗುವ ಅನುಭವ ಅಜ್ಜವರ ಮಾತಿನೊಂದಿಗೆ ಸಿಗುತ್ತಿತ್ತು. ನಮ್ಮ ಜ್ಞಾನ ತನ್ನಿಂದ ತಾನೇ ವಿಸ್ತಾರ ಆಗುತ್ತಿತ್ತು. ಅವರೊಬ್ಬ ನಡೆದಾಡು ವಿಶ್ವವಿದ್ಯಾಲಯವೇ ಆಗಿದ್ದರು.
ಕರುಳ ಬಳ್ಳಿಯ ಸಂಬಂಧ ಕಡಿದು ಕೊಂಡಿದ್ದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಭಕ್ತರಾದ ನಾವು ಸಂಬಂಧಿಗಳಾಗಿದ್ದೇವುು. ಎಂಬುದೆ ನಮಗೆ ಧನ್ಯತಾ ಭಾವ ಮೂಡುತ್ತದೆ. ಅವರಿಲ್ಲದ ಎರಡು ವರ್ಷ ನಮಗೆ ಅನಾಥ ಪ್ರಜ್ಞೆ ಕಾಡಿದರೂ ಈಗಿನ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ತಾಯಿ ಸ್ಥಾನದಲ್ಲಿ ನಿಂತು ಶ್ರೀಮಠವನ್ನು, ಶ್ರೀಮಠದ ಭಕ್ತರನ್ನು ಪೊರೆಯುತ್ತಿರುವರು.
–ವೀರೇಶ ಸೌದ್ರಿ ಮಸ್ಕಿ
ಪಾರ್ವತಿ ನಗರ ಮಸ್ಕಿ
ರಾಯಚೂರು ಜಿಲ್ಲೆ
ಜಂಗಮವಾಣಿ-೯೪೪೮೮೦೫೦೬೭