ಸ್ವಯಂ ಅರಿವುನು ಜಾಗ್ರತಗೊಳಿಸಿದ ಶರಣ: ಹಾವಿನಹಾಳ ಕಲ್ಲಯ್ಯ
೧೨ ನೇ ಶತಮಾನದಲ್ಲಿ ಬಸವಣ್ಣನವರು ಪ್ರಾರಂಭಿಸಿ, ಪ್ರಾಯೋಗಿಸಿದ ವೈಚಾರಿಕ ಕ್ರಾಂತಿ ವಿಶಿಷ್ಠವಾದದು. ಮನುಷ್ಯ ಮನುಷ್ಯರಲ್ಲಿ ಯಾವ ಮೇಲು ಕೀಳುಗಳಿಲ್ಲ, ಜಾತಿ ಬೇಧಗಳಿಲ್ಲ ಮತ್ತು ಲಿಂಗಬೇಧಗಳಿಲ್ಲದ ಸಮಾನತೆಯ ತತ್ವ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ಹೀಗೆ ಆಕರ್ಷಿತರಾದವರು ಈ ಶರಣ ಧರ್ಮದ ತೊರೆಗೆ ಬಂದು ಸೇರಿದರು. ಬಸವಣ್ಣನವರಿಂದ ಪ್ರಭಾವಿತರಾಗಿ ತಮ್ಮ ನಿಲುವುಗಳನ್ನು ಶರಣ ಧರ್ಮದಲ್ಲಿ, ವಚನಗಳಲ್ಲಿ ಪ್ರತಿಪಾದಿಸಿದರು.
ಅಂತಹ ಶರಣರಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಹಾವಿನಹಾಳ ಕಲ್ಲಯ್ಯನು ಪ್ರಮುಖನು. ಕಲ್ಲಯ್ಯ ಬಸವಣ್ಣನವರ ಸಮಕಾಲೀನವನು. ವಿಜಯಪೂರದಿಂದ ವಾಯುವ್ಯಕ್ಕೆ ೩೬ ಮೈಲಿಗಳ ಅಂತರದಲ್ಲಿರುವ ಹಾವಿನಾಳ ಗ್ರಾಮದವನು. ಕಲ್ಲಯ್ಯನು ಅಕ್ಕಸಾಲಿಗ ಶಿವಯ್ಯನ ಮಗ. ರುದ್ರಮುನಿಯ ಶಿಷ್ಯ. ಮುಂದೆ ಸೊಲ್ಲಾಪೂರದ ಸಿದ್ದರಾಮರ ಪ್ರಭಾವಕ್ಕೆ ಒಳಗಾಗಿ ಅವರ ಜೊತೆ ಧರ್ಮಕಾರ್ಯಗಳಲ್ಲಿ ನಿರತನಾದ. ಹಾವಿನಾಳ ಕಲ್ಲಯ್ಯನ ಸಮಾಧಿಯು, ಸೋಲ್ಲಾಪುರದಲ್ಲಿ ಸಿದ್ದರಾಯರ ಸಮಾಧಿಯ ಬಳಿಯಲ್ಲಿಯೇ ಇದೆ. ಹಾವಿನಾಳ ಕಲ್ಲಯ್ಯನು “ಮಹಾಲಿಂಗ ಕಲ್ಮೇಶ್ವರ” ಎನ್ನುವ ಅಂಕಿತನಾಮದಲ್ಲಿ ಬರೆದಿರುವ ೬೦ ವಚನಗಳು ಮಾತ್ರ ಲಭ್ಯವಾಗಿವೆ. “ಹಾವಿನಾಳ ಕಲ್ಲಿದೇವನ ವಚನಗಳು ಹಿಂದಿನ ಕಾಲದ ವಚನಗಳಂತೆ ಅರ್ಥಬೋಧಕವು ಮನೋಹರವು ಆಗಿರುತ್ತವೆ. ಅವನ ವಿಚಾರಗಳು ಬಸವಾದಿ ಪ್ರಮಥರ ವಿಚಾರಗಳಂತೆ ಉದಾರವಾದವುಗಳೂ ಪೂರ್ಣ ಭಕ್ತಿಯುಳ್ಳವುಗಳು ಇರುತ್ತವೆ” ಎಂದು ಫ.ಗು.ಹಳಕಟ್ಟಿಯವರು ಅಭಿಪ್ರಾಯ ಪಡುತ್ತಾರೆ. ವೇದಗಳನ್ನು ವಿಶಿಷ್ಠವರ್ಣದವರು ಮಾತ್ರ ಅಧ್ಯಯನ ಮಾಡಬೇಕು ಎನ್ನುವ ಜನಸಾಮಾನ್ಯರ ಭಾವನೆಯನ್ನು ಬದಲಿಸಿದನು.ಯಾವ ಪಂಡದವರು ಬೇಕಾದರು ಅವುಗಳ ಪಠಣ ಮಾಡಬಹುದೆಂಬುದನ್ನು ತೋರಿಸಲು ಹಾವಿನಾಳ ಕಲ್ಲಯ್ಯನು ನಾಯಿಯಿಂದ ವೇದವನ್ನು ಓದಿಸಿದನು ಎನ್ನುವ ಘಟನೆಯನ್ನು ಅವನ ಚರಿತ್ರೆಯನ್ನು ಬರೆದ ಅನೇಕ ಗ್ರಂಥಕಾರರು ತಮ್ಮ ಗ್ರಂಥಗಳಲ್ಲಿ ಉದಾಹರಿಸಿರುವುದುಂಟು. ವೇದ ಉಪನಿಷತ್ತುಗಳು ಉಚ್ಛವರ್ಗದ ಬ್ರಾಹ್ಮಣರು ಮಾತ್ರ ಪಠಣ ಮಾಡಬೇಕು ಎನ್ನುವ ಧಾರ್ಮಿಕ ನಿಯಮವನ್ನು ಮುರಿಯುವುದಲ್ಲದೆ ನಾಯಿಯ ಕಡೆಯಿಂದ ವೇದಗಳನ್ನು ಉದ್ಘೋಷಿಸಿದನೆಂಬುದು ಅವನ ಚರಿತ್ರೆಯಲ್ಲಿ ಬರುವ ಮುಖ್ಯ ವಿಷಯವಾಗಿದೆ. ಹರಿಹರ ಕವಿಯು ಈತನ ಚರಿತ್ರೆಯನ್ನು ತನ್ನ ರಗಳೆಯಲ್ಲಿ ಬಹುಸುಂದರವಾಗಿ ಹೇಳಿದ್ದಾನೆ.
ನಾಯಿಯಿಂದ ವೇದವನ್ನು ಉದ್ಘೋಷಿಸಿದ ಎನ್ನುವುದು ಅತಿಶಯೋಕ್ತಿಯಾದರೂ, ವೇದ ಉಪನಿಷತ್ತಗಳು ಜ್ಞಾನದ ಮೂಲಗಳು ಅವುಗಳನ್ನು ಯಾರು ಬೇಕಾದರು ಓದಬಹುದು. ಬ್ರಾಹಣರು ಮಾತ್ರ ಅವುಗಳನ್ನು ಓದಲು ಅರ್ಹರು, ಬೇರೆಯವರು ಓದಿದರೆ ಮತ್ತು ಕೇಳಿದರೆ ತಪ್ಪು ಎನ್ನುವ ಉಚ್ಛವರ್ಗದವರು ವಿಧಿಸಿದ ಧಾರ್ಮಿಕ ನಿಯಮವನ್ನು ಉಲ್ಲಂಘಿಸಿ ಎಲ್ಲರು ಓದಬಹುದು ಎನ್ನುವುದನ್ನು ಕಲ್ಲಯ್ಯ ತೋರಿಸಿಕೊಟ್ಟಿರುವುದನ್ನು ನಾವು ಗಮನಿಸಬೇಕು. ಉಚ್ಛವರ್ಗದವರು ಓದಿನ ಕುರಿತಾಗಿ ವಿಧಿಸಿದ ನಿಯಮಗಳನ್ನು ಮುರಿದು ಭಂಡತನ ತೋರಿದವನು ಕಲ್ಲಯ್ಯ ಎನ್ನುವುದು ತಿಳಿಯುತ್ತದೆ. ಇವನ ೬೦ ವಚನಗಳನ್ನು ಓದಿದಾಗ ಕಲ್ಲಯ್ಯ ವೇದ ಉಪನಿಷತ್‌ಗಳನ್ನು ಓದಿಕೊಂಡವನಾಗಿದ್ದ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಫ.ಗು. ಹಳಕಟ್ಟಿಯವರು ಅಭಿಪ್ರಾಯ ಪಡುವಂತೆ ಕಲ್ಲಯ್ಯನು ರೇವಣಸಿದ್ದೇಶ್ವರನ ಸಮಕಾಲೀನವನು. ಬಸವೇಶ್ವರಕ್ಕಿಂತ ಮೊದಲಿನವ. ಅವನು ಕಲ್ಯಾಣಕ್ಕೆ ಹೋಗಿ ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಿಲ್ಲವೆಂದು ತೋರುತ್ತದೆ ಎಂದು ಹೇಳುತ್ತಾರೆ. ಆದರೆ ಸಿದ್ದರಾಮರ ಒಡನಾಡಿಯಾದ ಕಲ್ಲಯ್ಯ ಕಲ್ಯಾಣಕ್ಕೆ ಹೋಗಿರಲಿಲ್ಲವೇ ಎನ್ನುವುದು ಪ್ರಶ್ನೆ—?
ಹೆಚ್ಚಿನ ಅಧ್ಯಯನದಿಂದ ಈ ವಿಷಯದ ಮೇಲೆ ಬೆಳಕು ಚೆಲ್ಲಬೇಕು.
ಗುರು ಆಚಾರವೇ ಶಿಷ್ಯ
ಜ್ಞಾನವೇ ಲಿಂಗ ಪರಿಣಾಮವೇ ತಪ
ಸಮತೆ ಎಂಬುದೇ ಯೋಗ ನೋಡಾ
ಈಸುವನರಿಯದೇ ಲೋಚ ಬೋಳಾದರೇನು?
ಮಹಾಲಿಂಗ ಕಲ್ಮೇಶರು ದೇವರು ನಗುವನು.
ಅರಿವೇ ಗುರು ಆಚಾರವೇ ಶಿಷ್ಯ
ತನ್ನ ಅರಿವು ತನಗೆ ಗುರುವಾಗಬೇಕು. ಅರಿವು ಮನುಷ್ಯನ ಆಂತರಿಕ ಪ್ರೇರಣೆ ಮತ್ತು ಆಂತರಿಕ ತಿಳುವಳಿಕೆ. ಭೌತಿಕವಾದ ಗುರು ಹೊರಗಿನಿಂದ ಪ್ರೇರಣೆ ನೀಡಿ ನಮಗೆ ತಿಳುವಳಿಕೆ ಮೂಡಿಸಬಹುದು. ಅದು ತಾತ್ಕಾಲಿಕವಾಗಿರುತ್ತದೆ. ಆದ್ದರಿಂದ ಮನುಷ್ಯನ ಅಂತರಂಗದಲ್ಲಿ ಉಂಟಾದ ತಿಳುವಳಿಕೆ ಶಾಶ್ವತವಾದುದು.
ಅದಕ್ಕೆ ಅರಿವೇ ಗುರುವಾಗಬೇಕು. ಆಚಾರವೇ ಶಿಷ್ಯನಾಗಬೇಕು. ಎಂದರೆ ಬಾಹ್ಯವಾಗಿ ಮಾಡುವ ಕಾರ್ಯಗಳು ಇನ್ನೋಬರು ಅಥವಾ ಸಮಾಜ ಒಪ್ಪಿ ಅನುಕರಿಸಿದರೆ ಬೇರೆ ಭೌತಿಕ ಶಿಷ್ಯರ ಅವಶ್ಯಕತೆ ಇಲ್ಲ. ಅಂತರಂಗದ ಅರಿವು ಮತ್ತು ಬಾಹ್ಯಕ್ರಿಯೇ ಒಂದೇ ಆಗಬೇಕು.
ಜ್ಞಾನವೇ ಲಿಂಗ ಪರಿಣಾಮವೇ ತಪ
ಜ್ಞಾನವೇ ಲಿಂಗವಾಗಬೇಕು. ಆ ಲಿಂಗವನ್ನು ಪೂಜಿಸಬೇಕು. ಅರಿವೇ ಗುರುವಾದವನಿಗೆ ಭೌತಿಕ ಕುರುಹು ಆದ ಲಿಂಗದ ಅವಶ್ಯಕತೆಯೇ ಇಲ್ಲ. ಜ್ಞಾನವನ್ನೇ ಲಿಂಗವೇಂದು ಪೂಜಿಸಬೇಕು, ಗೌರವಿಸಬೇಕು ಮತ್ತು ಪಸರಿಸಬೇಕು. ಸಮಾಜಕ್ಕೆ ಒಳಿತಿಗಾಗಿ ವಿನಿಯೊಗಿಸಬೇಕು. ಈ ಎಲ್ಲದರ ಫಲವೇ ತಪಸ್ಸಿದ್ದಂತೆ. ಕಾಡಿಗೆ ಹೋಗಿ ಏಕಾಂತದಲ್ಲಿ ತಪಸ್ಸನ್ನು ಆಚರಿಸುವ ಅಗತ್ಯವಿಲ್ಲ. ಸಮಾಜದಲ್ಲಿದ್ದುಕೊಂಡು ಸತ್ಕಾರ್ಯಗಳನ್ನು ಮಾಡಿದರೆ ತಪಸ್ಸು ಆಚರಿಸಿದಷ್ಠೆ ಫಲವನ್ನು ಪಡೆಯುತ್ತೇವೆ ಎನ್ನುವ ಪ್ರಾಯೋಗಿಕವಾದ ಚಿಂತನೆಯನ್ನು ಈ ವಚನದಲ್ಲಿ ಕಾಣಬಹುದು.
ಸಮತೆ ಎಂಬುದೇ ಯೋಗ ನೋಡಾ
ಆತ್ಮ ಪರಮಾತ್ಮನನ್ನು ಕೂಡಿಸುವುದೇ ಯೋಗ ಹಾಗೆಯೇ ಗುರು ಹೆಚ್ಚು ಶಿಷ್ಯ ಕಡಿಮೆ, ಲಿಂಗ ಹೆಚ್ಚು ಜ್ಞಾನ ಕಡಿಮೆ, ತಪಸ್ಸು ಹೆಚ್ಚು ಸತ್ಕಾರ್ಯ ಕಡಿಮೆ ಎನ್ನುವ ಅಸಮಾನತೆಯಿಂದ ಹೊರಬಂದ ಸಮಾನತೆಯ ಭಾವವನ್ನು ಕಾಣಬೇಕು. ಸಮಾಜದಲ್ಲಿಯು ಸಮತೆಯ ಭಾವ ಮನುಷ್ಯ ಮನುಷ್ಯರ ಮಧ್ಯವು ಮೂಡಬೇಕು. ಹಾಗೇ ಮೂಡಿದರೆ, ಸಮಾನತೆಯ ಭಾವ ತಾಳಿದರೆ ಅದುವೇ ಯೋಗ.
ಸಾಧನೆಗೆ ಸಮಾನವಾದ ಸಾಧನೆಯಾಗುತ್ತದೆ. ಆದರೆ ಇವುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾದ ಮನುಷ್ಯನು ಬಾಹ್ಯ ಆಡಂಬರಗಳಾದ ಜಪ ತಪ ಯೋಗ ಎಂದು ಶ್ರಮ ಪಟ್ಟು ತಲೆ ಬೋಳು ಮಾಡಿಕೊಂಡವರನ್ನು ಕಂಡರೇ ಕಲ್ಮೇಶ್ವರ ದೇವರು ನಗುವನು ಎಂದು ವಿಡಂಬನೆ ಮಾಡುತ್ತಾನೆ.
ತನ್ನ ಅರಿವೇ ತನಗೆ ಗುರುವಾಗಬೇಕು. ತಾನು ಆಚರಿಸುವ ಕ್ರಿಯೆಗಳು ಅಥವಾ ಕಾರ್ಯಗಳು ಇನ್ನೋಬ್ಬರು ಒಪ್ಪಿ ಅನುಕರಿಸುವಂತಿದ್ದರೆ ಆಚಾರವೇ ಶಿಷ್ಯನಾಗುತ್ತಾನೆ. ಬೇರೆ ಶಿಷ್ಯರ ಅವಶ್ಯಕತೆ ಇಲ್ಲ. ಜ್ಞಾನವೇ ಲಿಂಗವಾಗಬೇಕು. ಸತ್ಕಾರ್ಯಗಳನ್ನು ಮಾಡಿದರೆ ತಪವನ್ನು ಆಚರಿಸಿದಂತೆ. ಇವೆಲ್ಲವುಗಳು ಸಮಾನತೆ ಸಾಧಿಸುವುದೇ ಯೋಗ ಎನ್ನುವ ಕಲ್ಲಯ್ಯನ ವಚನದ ಆಶಯ. ಸಾದಕನಿಗೆ ಲಿಂಗಾಂಗ ಸಾಮರಸ್ಯಸಾಧಿಸಲು ಭೌತಿಕ ಕುರುಹುಗಳ ಅವಶ್ಯಕತೆ ಇರುವುದಿಲ್ಲ ಎನ್ನುವ ನಿಲುವನ್ನು ಸ್ಪಷ್ಟಪಡಿಸುತ್ತಾನೆ.
ಶರಣ ಸಂಬಂಧವನರಿದಾತಂಗೆ ಕುಲಛಲಮದವೆಂಬುದಿಲ್ಲ
ಲಿಂಗ ಸಂಬಂಧವನರಿದಾತಂಗೆ ಶೀಲ ಸಂಬಂಧವಿಲ್ಲ.
ಪ್ರಸಾದ ಸಂಬಂಧವನರಿದಾತಂಗೆ ಇಹಪರವೆಂಬುದಿಲ್ಲ.
ಇಂತಿ ತ್ರಿವಿಧ ಸಂಭಂಧವನರಿದಾತಂಗೆ ಮುಂದೇನು ಇಲ್ಲ
ಮಹಾಲಿಂಗ ಕಲ್ಮೇಶ್ವರ ನಿಮ್ಮ ಶರಣಂಗೆ.
ತನನ್ನು ತಾನು ಶರಣನೆಂದುಕೊಳ್ಳುವವನಿಗೆ ಕುಲದಮದವಿರಬಾರದು. ಅದನ್ನು ಅರಿದವನು ಮಾತ್ರ ಶರಣ. ಛಲ ಮದವಿರಬಾರದು ತಾನು ಅಧಿಕಾರವಂತ, ಶಕ್ತಿವಂತ ಎನ್ನುವ ಅಹಂ ಭಾವವನ್ನು ಅಳಿದವನು ಶರಣ. ಲಿಂಗಕ್ಕೆ ತನನ್ನು ಅರ್ಪಿಸಿಕೊಂಡವನಿಗೆ ಮಡಿ, ಮೈಲಿಗೆ, ಪವಿತ್ರ ಅಪವಿತ್ರ ಎನ್ನುವ ಭಾವನೆಗಳು ಇರಬಾರದು.
ಪ್ರಸಾದದ ಮಹತ್ವವನ್ನರಿತು ದಾಸೋಹ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜದಲ್ಲಿ ತನ್ನ ತನು, ಮನ, ಧನವನ್ನು ಸತ್ಕಾರ್ಯಕ್ಕೆ ಸಮರ್ಪಿಸಿದವನಿಗೆ ಇಹಪರ ಎಂದರೆ ಮರ್ತಲೋಕಮತ್ತು ಸ್ವರ್ಗ ಲೋಕ ಬೇರೆ ಇಲ್ಲ. ಅಲ್ಲಿ ಸಿಗುವ ಎಲ್ಲ ಆನಂದವನ್ನು ಅವನು ಇಲ್ಲಿಯೇ ಅನುಭವಿಸುತ್ತಾನೆ.
ಶರಣ ಲಿಂಗ ಪ್ರಸಾದದ ಈ ಮೂರು ವಿಧಗಳ ಸಂಬಂಧವನ್ನು ಅರಿತವನಿಗೆ ಮತ್ಯಾವ ಸಾಧನೆಯನ್ನು ಮಾಡುವ ಅವಶ್ಯಕತೆ ಇಲ್ಲ ಎಂದು ತುಂಬಾ ಮಾರ್ಮಿಕವಾಗಿ ವಾಸ್ತವ ನೆಲೆಗಟ್ಟಿನಲ್ಲಿ ಪರಮಸುಖಿಯಾಗುವ ತತ್ವವನ್ನು ಹಾವಿನಾಳ ಕಲ್ಲಯ್ಯ ತನ್ನ ವಚನದಲ್ಲಿ ವಿವರಿಸಿದ್ದಾನೆ.
ತಾನಿಲ್ಲದ ಮುನ್ನವೇ ಗುರುವೆಲ್ಲಿಯದೋ? ಲಿಂಗವೆಲ್ಲಿಯದೋ? ಜಂಗಮವೆಲ್ಲಿಯದೋ, ಪ್ರಸಾದವೆಲ್ಲಿಯದೋ? ಪರಮೆಲ್ಲಿಯದೋ, ಸ್ವಯವೆಲ್ಲಿಯದೋ, ತನಗೆ ತೋರಿದ ಗುರು, ತನಗೆ ತೋರಿದ ಲಿಂಗ ತನಗೆ ತೋರಿದ ಜಂಗಮ, ತನಗೆ ತೋರಿದ ಪ್ರಸಾದ, ತನಗೆ ತೋರಿದ ಪರ, ತನಗೆ ತೋರಿದ ಸ್ವಯ ಗುರುವೆಂದರಿದವನು ತಾನೆ, ಲಿಂಗವೆಂದರಿದವನು ತಾನೆ, ಜಂಗಮವೆಂದರಿದವನು ತಾನೆ, ಪ್ರಸಾದವೆಂದರಿದವನು ತಾನೆ, ಪರವೆಂದರಿತವನು ತಾನೆ ಸ್ವಯವೆಂದರಿತವನು ತಾನೆ ಇಂತಿವೆಲ್ಲವ ಹೆತ್ತರಿವು ತಾನೇ ಸ್ವಯಂ ಜೋತಿ ಮಹಾಲಿಂಗ ಕಲ್ಮೇಶ್ವರ.
ಸ್ವಪರಿಕಲ್ಪನೆಗೆ ಹೆಚ್ಚು ಮಹತ್ವ ಕೊಟ್ಟ ವಚನಕಾರ ಹಾವಿನಹಾಳ ಕಲ್ಲಯ್ಯ ಎನ್ನುವುದು ಅವನ ಬಹಳಷ್ಟು ವಚನಗಳಿಂದ ತಿಳಿದು ಬರುತ್ತದೆ. ‘ತಾನು’ ಅನ್ನುವುದು ಸಯಂ ಅರಿವು. ಮೊದಲು ತನ್ನ ಅಸ್ತಿತ್ವ ಇದ್ದಾಗ ಮಾತ್ರ ಗುರು,ಲಿಂಗ,ಜಂಗಮ,ಪ್ರಸಾದ ಮುಂತಾದ ವಿಷಯಗಳ ಕುರಿತು ಅರಿತುಕೊಳ್ಳಲು ಸಾಧ್ಯ ಎಂದು ತುಂಬಾ ಮಾರ್ಮಿಕವಾಗಿ ಹೇಳಿದ್ದಾನೆ. ಈ ವಚನವನ್ನು ಆಧುನಿಕ ಮನೋವಿಜ್ಞಾನದ “ಸ್ವಯಂ ಪರಿಕಲ್ಪನೆಯ ಹಿನ್ನಲೆಯಲ್ಲಿ ವಿಶ್ಲೇಷಿಸಿದರೆ, ಕಾಲ್‌ರೋಜರನು ತನ್ನ ಸ್ವಯಂಪರಿಕಲ್ಪನೆಯ ಸಿದ್ದಾಂತದಲ್ಲಿ ‘ಸ್ವಯಂ’ ಕುರಿತು ವಿವರಿಸುತ್ತಾನೆ. ಸ್ವಯಂ ಎನ್ನುವುದು ಸ್ವಂತ ಚಿತ್ರ, ಆತ್ಮ ಗೌರವ ಮತ್ತು ಆದರ್ಶ ಸ್ವಯಂ ಅನ್ನುವ ಪ್ರಮುಖ ಅಂಶಗಳನ್ನು ಒಳಗೂಂಡಿದೆ. ನಾನು ಎನ್ನುವುದು ಇಲ್ಲಿ ಅಹಂ ಅಲ್ಲ ಸ್ವಂತಿಕೆ.
ತಾನಿಲ್ಲದ ಮುನ್ನವೇ ಗುರು ಎಲ್ಲಿಯದು ಲಿಂಗವೆಲ್ಲಿಯದು?
ತಾನು ಅನ್ನುವ ಸ್ವಯಂ ಅಸ್ತಿತ್ವ ಇದ್ದಾಗಲೇ ಗುರು ಎನ್ನುವ ಅರಿವು ಉಂಟಾಗುವುದು. ಸ್ವಯಂ ಅಸ್ತಿತ್ವವೇ ಇಲ್ಲದಿದ್ದರೆ ಗುರುವು ಇಲ್ಲ ಲಿಂಗವೂ ಇಲ್ಲ ಎಂದು ಪ್ರಶ್ನಿಸುತ್ತಾನೆ. ಮುಂದೆ ತನಗೆ ತೋರಿದ ಗುರು, ಲಿಂಗ ಜಂಗಮ, ಪ್ರಸಾದ ಪರ, ಸ್ವಯಂ ಇವುಗಳು ಸ್ವಯಂ ಪ್ರತಿಬಿಂಬಗಳು. ಇವುಗಳ ಕುರಿತಾಗಿ ನನ್ನ ಮನಸ್ಸಿನಲ್ಲಿ ಮೂಡಿದ ಪ್ರತಿಬಿಂಬಗಳಿಗೆ ಅನುಗುಣವಾಗಿ ಅವುಗಳನ್ನು ನಾನು ಅರಿತುಕೊಳ್ಳುತ್ತೇನೆ ಎಂದು ಹೇಳುತ್ತಾನೆ.
ಮುಂದೆ ಗುರುವೆಂದರಿತವನು, ಲಿಂಗವೆಂದರಿತವನು, ಜಂಗಮವೆಂದರಿತವನು, ಪ್ರಸಾದವೆಂದರಿತವನು, ಪರವೆಂದರಿತವನು, ಸ್ವಯಂವೆಂದರಿತವನು, ತಾನೆ ಎನ್ನುತ್ತಾನೆ. ಅಂದರೆ ಇದನ್ನು ಮನೋವಿಜ್ಞಾನದ ಪರಿಭಾಷೆಯಲ್ಲಿ ಸ್ವಯಂ ಆದರ್ಶ ಎಂದು ಕರೆಯುತ್ತಾರೆ. ಈ ಸ್ವಯಂ ಆದರ್ಶಗಳನ್ನು ಅರಿತವನು ತಾನೆ ಸ್ವಯಂಜ್ಯೋತಿಯಾಗಿ ಜ್ಞಾನದ ಬೆಳಕನ್ನು ಪಸರಿಸುತ್ತಾನೆ. ಆದ್ದರಿಂದ ಮೊದಲು ತನ್ನನ್ನು ತಾನು ಅರಿಯಬೇಕು. ಭೌತಿಕ/ಅಭೌತಿಕ ಸಂಗತಿಗಳಲ್ಲಿ ತನ್ನ ಪ್ರತಿಬಿಂಬವನ್ನು ಗುರುತಿಸಬೇಕು. ತನ್ನ ಆದರ್ಶಗಳನ್ನು ತಾನು ಅರಿತು ಸ್ವಯಂ ಪ್ರಕಾಶಮಾನವಾಗಿರಬೇಕು. ಯಾವಾಗ ನಮ್ಮೋಳಗೆ ಸ್ವಯಂ ಪ್ರಭೇ ಬೆಳಗುತ್ತದೆಯೋ ಆಗ ನಮ್ಮ ಸುತ್ತಲಿನ ಅಂಧಕಾರವು ತಾನೆ ತಾನಾಗಿ ಅಳಿಯುತ್ತದೆ ಎನ್ನುವ ತತ್ವವನ್ನು ಕಲ್ಲಯ ಈ ವಚನದಲ್ಲಿ ಅತ್ಯಂತ ಮನೋಜ್ಞವಾಗಿ ಸ್ವಯಂ ಪರಿಕಲ್ಪನೆಯನ್ನು ವಿವರಿಸುತ್ತಾನೆ.
ಹಸಿಯ ಕಪಾಲದಲ್ಲಿ ಉಂಬನೆಂಬರು ಅದು ಹುಸಿಯೇ?
ಸದ್ಬಕ್ತನ ಮುಖದಲ್ಲಿ ಉಂಬನಾಗಿ
ಆಸ್ತಿಗಳ ತೊಟ್ಟಿಹನೆಂಬರು ಅದು ಹುಸಿಯೇ?
ಸದ್ಬಕ್ತ ದೇಹಿಕ ದೇವನಾಗಿ
ಚರ್ಮವ ಹೊದ್ದಿಹನೆಂಬರು ಅದು ಹುಸಿಯೇ?
ಅದೆಂತೆಂದೊಡೆ ಮಹಾಲಿಂಗ ಕಲ್ಮೇಶ್ವರದೇವಾ ನಿಮ್ಮ ಸುಳುಹು ಪರಕಾಯ ಪ್ರವೇಶವಾಗಿಹುದು.
ಈ ವಚನದಲ್ಲಿ ಪರಮಾತ್ಮ ಮತ್ತು ಜೀವಾತ್ಮ ಬೇರೆ ಬೇರೆ ಇಲ್ಲ ಎನ್ನುವುದನ್ನು ತಿಳಿಯ ಪಡಿಸುತ್ತಾನೆ. ಪರಮಾತ್ಮನ ಅಸ್ತಿತ್ವವ ಅವನ ಭಕ್ತನಲ್ಲಿಯೇ ಲೀನವಾಗಿದೆ. ಸದ್ಭಕ್ತನ ಮುಖಾಂತರವೇ ಊಟಮಾಡುತ್ತಾನೆ. ಶಿವನು ಕಾಲಭೈರವನಾಗಿ ಅಸ್ತಿಗಳ ಮಾಲೆಯನ್ನು ಧರಿಸಿದನೆವಂದು ಹೇಳುವರು. ಅದು ಸುಳ್ಳಲ್ಲ. ಭಕ್ತನ ದೇಹದಲ್ಲಿರುವ ಎಲ್ಲ ಅಸ್ತಿಗಳು ಶಿವನಿಗೆ ಹಾರವಿದ್ದಂತೆ ಎಂದು ಹೇಳುತ್ತಾನೆ. ಶಿವನು ಚರ್ಮವನ್ನು ಹೊಯ್ದುಕೊಂಡಿರುವನೆಂಬರು ಅದು ಸುಳ್ಳಲ್ಲಾ. ಮಹಾಲಿಂಗ ಕಲ್ಮೇಶ್ವರನು ಪರಕಾಯ ಪ್ರವೇಶ ಮಾಡಿ ಭಕ್ತನಲ್ಲಿಯೇ ಲೀನನಾಗಿದ್ದಾನೆ ಎಂದು ಹೇಳಿರುವನು. ಆತ್ಮ ಮತ್ತು ಪರಮಾತ್ಮ ಒಂದೇ ಎನ್ನುವುದನ್ನು ಸಾಧಿಸಲು ತನ್ನ ವಚನದಲ್ಲಿ ಶಿವನ ಲೀಲೆಗಳನ್ನು ರೂಪಕಗಳನ್ನಾಗಿ ಬಳಸಿಕೊಂಡಿದ್ದಾನೆ.
ಜಾಗ್ರತ್ ಸ್ವಪ್ನ ಸುಷುಪ್ತಿಗಳಲ್ಲಿ ತಟ್ಟುವ ಮುಟ್ಟುವ
ಕೊರೆತ ನೆರೆತಗಳ ಹಿಡಿದವನೇ ಶರಣನು? ಹಿಡಿಯನು.
ಅದೇನು ಕಾರಣವೆಂದರೆ ಅವೆಲ್ಲವು ನಿನ್ನ ಮಾಯೆ ಎಂಬುದು ಬಲ್ಲವನಾಗಿ
ಇದು ಕಾರಣ ಮಹಾಲಿಂಗ ಕಲ್ಮೇಶ್ವರ ನಿಮ್ಮ ಶರಣರು ನಿಜ ಕಲಿಗಳು.
ಆತ್ಮನಿಗೆ ಜಾಗ್ರತ್, ಸ್ವಪ್ನ, ಸುಷಪ್ತ ಎಂಬ ಮೂರು ಆವಸ್ಥೆಗಳಿವೆಯಂದು ನಮಗೆ ಮಾಂಡೋಕೋಷನಿಷತ್ ತಿಳಿಸುತ್ತದೆ. ಜಾಗೃದಾವಸ್ಥೆಯಲ್ಲಿ ಆತ್ಮ ಬಾಹ್ಯ ಪ್ರಜ್ಞೆಯುಳ್ಳವನಾಗಿ ಸ್ಥೂಲ ವಿಷಯಗಳನ್ನು ಅನುಭವಿಸುತ್ತಾನೆ. ಸೂಪ್ತಾವಸ್ಥೆಯಲ್ಲಿ ಅಂತ:ಪ್ರಜ್ಞನಾಗಿ ಸೂಕ್ಷ್ಮ ವಿಷಯಗಳನ್ನು ಅನುಭವಿಸುತ್ತಾನೆ.
ಸುಷುಪ್ತಿಯಲ್ಲಿ ಬಯಕೆಗಳಾಗಲಿ ಸ್ವಪ್ನಗಳಾಗಲೀ ಇರುವುದಿಲ್ಲ. ದೃಗ್‌ದೃಶ್ಯಗಳಿಲ್ಲದೆ ಎಲ್ಲವೂ ಒಂದಾಗಿರುತ್ತದೆ. ಈ ಆವಸ್ಥೇಯಲ್ಲಿ ಆತ್ಮ ಪ್ರಜ್ಞಾನ ಘನನೂ, ಆನಂದಮಯವೂ, ಆನಂದ ಯೋಗಿಯೂ
ಆಗಿರುತ್ತಾನೆ.
ಆದರೆ ಶರಣರು ಈ ಎಲ್ಲ ಆವಸ್ಥೆಗಳಿಗೆ ಸಿಲುಕದೆ ಅದನ್ನು ಮೀರಿ ನಿಂತವರಾಗಿದ್ದಾರೆ. ಯಾಕೆಂದರೆ ಇದೆಲ್ಲವು ಅವರಿಗೆ ಮಾಯೆಯಾಗಿ ಕಾಣುತ್ತದೆ.ಆ ಮಾಯೆಯನ್ನು ಗೆಲ್ಲುವ ಕೌಶಲ್ಯವನ್ನು ಶರಣರು ಬಲ್ಲವರಾಗಿದ್ದಾರೆ. ಶರಣರು ಮನವನ್ನು ಆಕ್ರಮಿಸುವ ಮಾಯೆಯನ್ನುವ ವೈರಿಯನ್ನು ಗೆಲ್ಲುವ ಸೈನಿಕರಾಗಿದ್ದಾರೆ. ಹಾಗಾಗಿ ಅವನು ಅತ್ಮನ ಎಲ್ಲ ಆನಂದವನ್ನು ಅನುಭವಿಸುತ್ತಾನೆ. ಎಂದು ಕಲ್ಲಯ್ಯ ತನ್ನ ವಚನದಲ್ಲಿ ಹೇಳಿರುತ್ತಾನೆ.
ಒಲಿದು ಒಲಿಸಿಕೊಳ್ಳಬೇಕು ಒಲಿದಲ್ಲದೇ ಇಲ್ಲ
ಹಲವು ಕೊಂಬೆಗಳಿಗೆ ಹಾರದಿರು ಮನವೇ
ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ, ಅಟ್ಟಿದಡೆ, ಒತ್ತಿದಡೆ, ನಿಷ್ಠೆಯ ಬಿಡದಿರ್ದಡೆ
ತನ್ನನೀವ ಮಹಾಲಿಂಗ ಕಲ್ಮೇಶ್ವರಾ.
ಪರಮಾತ್ಮನ ಅನುಗ್ರಹ ಪಡೆಯಬೇಕಾದರೆ ಮೊದಲು ಅವನನ್ನು ಪ್ರೀತಿಸಬೇಕು. ಅವನಿಗೆ ಶರಣಾಗಬೇಕು ಪ್ರೀತಿಸದೇ ಒಲಿಸಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ಮನವು ನಿಷ್ಠೆಯಿಂದ, ವಿಧೇಯತೆಯಿಂದ ಗೌರವ ಪೂರ್ವಕವಾಗಿ ಸ್ಥಿರವಾಗಿ ಇರಬೇಕು. ಏಕೆಂದರೆ ದೇವೆರು ಅಟ್ಟಿನೋಡುವ ನಿರ್ಲಕ್ಷ ಮಾಡಿ ನೋಡುತ್ತಾನೆ. ಹಲವಾರು ಪರೀಕ್ಷೆಗಳನ್ನು ಒಡ್ಡುತ್ತಾನೆ. ಆಗ ಭಕ್ತನು ಚಂಚಲ ಚಿತ್ತನಾಗದೆ ನಂಬಿಗೆಯಿಂದ ಅವನ ಪರೀಕ್ಷೆಗಳನ್ನು ಜಯಿಸಿದರೆ ಅವನು ಭಕ್ತರಿಗೆ ತನ್ನನ್ನೇ ಕೊಟ್ಟು ಬಿಡುತ್ತಾನೆ ಎಂದುಹೇಳುತ್ತಾನೆ. ಶರಣನಾದವನಿಗೆ ಸಮರ್ಪಣ ಭಾವನೆಯಿರಬೇಕು ಎನ್ನುವ ಆಶಯವನ್ನು ಕಾಣುತ್ತೆವೆ.
ಹೀಗೆ ತನ್ನ ಅರವತ್ತು ವಚನಗಳಲ್ಲಿ ಅರಿವಿನ ಕುರಿತು,ಸ್ವಯಂ ಕುರಿತು ತುಂಬಾ ಮನೋಜ್ಞವಾಗಿ ಹೇಳಿದ್ದಾನೆ.
-ಡಾ.ನಿರ್ಮಲಾ ಬಟ್ಟಲ
ಬೆಳಗಾವಿ.