ಗುಹೇಶ್ವರನಿಗೆ ಪುನರ್ಜನ್ಮ ವೇ ಸೂತಕ
ಅಲ್ಲಮರು ಕಲ್ಯಾಣದ ಬಹುದೊಡ್ಡ ಅನುಭಾವಿಗಳು, 12 ನೇ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದಾರೆ. ಶಿವಶರಣರಿಗೆ ಭಕ್ತಿ ವೈರಾಗ್ಯವನ್ನು ಬೋಧಿಸಿದರು. ತಮ್ಮ ವಚನಗಳ ಮೂಲಕ ಅಂತರಂಗ ಬಹಿರಂಗಗಳನ್ನು ಶೋಧಿಸಲೆತ್ನಿಸಿದರು. ವೈರಾಗ್ಯ ಮೂರ್ತಿಯಾದ ಅಲ್ಲಮಪ್ರಭುದೇವರ ವಚನಗಳು ಅನುಭಾವದ ರತ್ನಗಣಿಗಳು. ಮೊಗೆದಷ್ಟು ಆಳ, ವಿಸ್ತಾರಕ್ಕೆ ವಿಸ್ತಾರ.
ಬಸವಣ್ಣನವರದು ಭಕ್ತಿ ಮಾರ್ಗ, ಅಲ್ಲಮರದು ಅರಿವಿನ ಮಾರ್ಗ. ಅನುಭಾವದ ಅರಿವಿನಲಿ ಲೋಕಕಲ್ಯಾಣವನ್ನು ಹಾಗೂ ಉನ್ನತವಾದ ಆಧ್ಯಾತ್ಮಿಕ ಮತ್ತು ವಾಸ್ತವಿಕ ನಿಲುವನ್ನು ಕಂಡವರು ಅಲ್ಲಮ ಪ್ರಭುದೇವರು. ಅಧ್ಯಾತ್ಮಿಕ ಅನುಭವ ಹಾಗೂ ಲೌಕಿಕ ನಿಲುವನ್ನು ಅಲ್ಲಮಪ್ರಭುದೇವರು ಬೆಡಗಿನ ಮೂಲಕ ಅಭಿವ್ಯಕ್ತಿಪಡಿಸಿರುವುದೇ ಹೆಚ್ಚು. ಸಾಮಾನ್ಯವಾಗಿ ಎಲ್ಲ ಶರಣರು ಬೆಡಗಿನ ವಚನಗಳನ್ನು ಬರೆದಿದ್ದಾರೆ. ಆದರೆ ಅಲ್ಲಮ ಪ್ರಭುವಿನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯಾರೂ ಬೆಡಗಿನ ವಚನಗಳನ್ನು ಬರೆದಿಲ್ಲ. ಕೇವಲ ಸಂಖ್ಯೆಯಿಂದ ಮಾತ್ರವಲ್ಲ. ಗುಣದ ದೃಷ್ಠಿಯಿಂದಲೂ ಪ್ರಭುದೇವನ ಬೆಡಗಿನ ವಚನಗಳಿಗೆ ಅದ್ವಿತೀಯ ಸ್ಥಾನವಿದೆ. ಇಂತಹ ಅವರ ಬೆಡಗಿನ ವಚನಗಳಿಂದಾಗಿ, ʼಬೆಡಗಿನ ವಚನ ಪದ್ಧತಿಗೆʼ ಒಂದು ಹೊಸ ತೇಜಸ್ಸು, ಹೊಸ ಕಾಂತಿ ಬಂದಿದೆ. ಪ್ರಭುದೇವರ ಬೆಡಗಿನ ವಚನಗಳು ಕೇವಲ ಬುದ್ಧಿಯ ಚಮತ್ಕಾರಗಳಾಗಿರದೇ, ಆಂತರಿಕ ಅನುಭವವನ್ನು ಗರ್ಭೀಕರಿಸಿಕೊಂಡಿರುವ ಕಲಾತ್ಮಕ ಸೃಷ್ಠಿಯ ಕಾವ್ಯಪ್ರತಿಮೆಗಳಾಗಿವೆ. ಇಂತಹ ಪ್ರತಿಮೆಗಳ ರಚನೆಯಲ್ಲಿ ಪ್ರಭುದೇವ ತಂದಿರುವ ವೈವಿಧ್ಯ ಮತ್ತು ತೋರಿರುವ ಪ್ರಯೋಗಶೀಲತೆಗಳು ಆಧುನಿಕರ ಮೆಚ್ಚುಗೆಗೂ ಪಾತ್ರವಾಗಬಲ್ಲವು ಆದರೆ ಅಲ್ಲಮಪ್ರಭು ಅವರ ವಚನಗಳಲ್ಲಿರುವ ಬೆಡಗನ್ನು ಒಡೆದು ಅರ್ಥೈಸಿಕೊಂಡು ಆನಂದಿಸುವುದು ಸುಲಭದ ಕೆಲಸವಲ್ಲ.
ಅಲ್ಲಮ ಪ್ರಭುದೇವರ ವಚನಗಳು ದೀನ ದಲಿತರನ್ನು ಸಂತೈಸುವ, ಅಜ್ಞಾನಿಗಳನ್ನು ಎಚ್ಚರಿಸುವ, ಆದ್ಯಾತ್ಮ ಸಾಧನೆಯಲ್ಲಿ ತೊಡಗಿರುವ ಸಾಧಕರಿಗೆ ಸರಿಯಾದ ಮಾರ್ಗ ತೋರಿಸುವ ನಿಟ್ಟಿನಲ್ಲಿ ಅಪ್ರತಿಮವಾಗಿವೆ. ಅವರ ನೇರ ನಿಷ್ಠುರ ನುಡಿಗಳು ಜ್ಞಾನದ ದಿವ್ಯ ಜ್ಯೋತಿಗಳಾಗಿವೆ.
ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ,
ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
(ಅಲ್ಲಮಪ್ರಭುದೇವರು. ಸಮಗ್ರ ವಚನ ಸಂಪುಟ ೨ ವಚನದ ಸಂಖ್ಯೆ: 822)
ಅರಿತು ಜನ್ಮವಾದವರಿಲ್ಲ
ಹುಟ್ಟು ಆಕಸ್ಮಿತ, ಯಾರು ಸಹ ತಾವು ಮಾನವರಾಗಿ ಅಥವಾ ಪ್ರಾಣಿ ಪಕ್ಷಿಗಳಾಗಿ ಹುಟ್ಟಬೇಕೆಂದು ಬಯಸಿ ಅಥವಾ ಅರಿತು ಹುಟ್ಟಿರುವುದಿಲ್ಲ , ಜಗತ್ತಿನ ಎಲ್ಲ ಜೀವಿರಾಶಿಗಳಲ್ಲಿಯೂ ಹುಟ್ಟು ಎಂಬುದು ಆಕಸ್ಮಿಕವಾಗಿರುತ್ತದೆ ಹೊರತು ಬಯಸಿ , ಇಚ್ಛಿಸಿ ಜನ್ಮ ತಾಳಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ
ಸತ್ತು ಮರಳಿ ತೋರುವರಿಲ್ಲ
ಮಾನವ ಅಥವಾ ಯಾವುದೇ ಜೀವಿ ಸತ್ತ ನಂತರ ಮರಳಿ ಭೂಮಿಗೆ ಬರಲಾರದು. ಆದರೆ ನಮ್ಮ ಸಂಪ್ರದಾಯವಾದಿಗಳು, ವೈದಿಕರು ಹಾಗೂ ಭವಿಷ್ಯಗಾರರು ಹಿಂದಿನ ಜನ್ಮ ಮುಂದಿನ ಜನ್ಮ ಎಂದು ಜನರಲ್ಲಿ ಮೌಢ್ಯವನ್ನ ತುಂಬುತ್ತಿರುತ್ತಾರೆ. ಪ್ರಸ್ತುತ ವಿದ್ಯಮಾನದಲ್ಲೂ ಅನೇಕ ಜನ ಪುನರ್ಜನ್ಮ ಹಾಗೂ ಭವಿಷ್ಯ ಹೇಳುವ ಜನರಿಂದ ಮೋಸಹೋಗುವುದನ್ನು ನಾವು ಕಾಣುತ್ತೇವೆ. ಜನರಿಗೆ ಭಯಭೀತಿ ಹುಟ್ಟಿಸಿ ನಿರಂತರ ಶೋಷಣೆ ಹಾಗೂ ಸುಲಿಗೆಯನ್ನು ಮಾಡುತ್ತಿರುತ್ತಾರೆ. ಈ ವಚನವು ಅಂತವರಿಗೆ ಎಚ್ಚರಿಸುವ ಹಾಗೂ ಅವರನ್ನು ಭಯಮುಕ್ತರನ್ನಾಗಿಸುವ ಅನುಭಾವಿ ವಚನವಾಗಿದೆ ಇಂತಹ ಶೋಷಣೆಯನ್ನು ಕಡಾಕಂಡಿತವಾಗಿ ನಿರಾಕರಣೆ ಮಾಡಿದ ನಮ್ಮ ದಿಟ್ಟ ಹಾಗೂ ನೇರ ನಿಲುವಿನ ಶರಣರು ಪುನರ್ಜನ್ಮವನ್ನು, ಕರ್ಮ ಸಿದ್ಧಾಂತವನ್ನು ಸರಾಸಗಾಟವಾಗಿ ನಿರಾಕರಿಸಿ ಭಯಮುಕ್ತ ಸಮಾಜವನ್ನು ಕಟ್ಟಲು ಬಯಸಿದ್ದ ದಿಟ್ಟ ಧೀರರು ಆಗಿದ್ದಾರೆ.
ಶರಣ ಅಂಬಿಗರ ಚೌಡಯ್ಯನವರು ಪುನರ್ಜನ್ಮವುಂಟೇ ಎಂದು ಪ್ರಶ್ನಿಸಿದ ಈ ವಚನವನ್ನು ನೋಡಬಹುದು.
*ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ ?
ನೀರಿನಿಂದಾದ ಮುತ್ತು ನೀರಪ್ಪುದೇ ?
ಮೀರಿ ಪೂರ್ವಕರ್ಮವನು ಹರಿದ ಭಕ್ತಂಗೆ
.
ಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ?
ಕಟ್ಟಿಹೆ ಬಿಟ್ಟಿಹೆವೆಂಬ ದಂದುಗ ನಿಮಗೇಕೆ?
ತೆರನನರಿಯದೆ ಹಲವು ತೊಪ್ಪಲ ತರಿತಂದು ಮೇಲೊಟ್ಟಲೇಕೊ?
ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ಶಿವ ತೆರಹಿಲ್ಲದಿಪ್ಪನೆಂದಾತನಂಬಿಗರಚೌಡಯ್ಯ
ಹಾಲಿನಿಂದಾದ ತುಪ್ಪ ಕ್ರಿಯೆ ಅಳಿದು ಮತ್ತೆ ಹಾಲಾಗುವುದೆ? ನೀರಿನಲ್ಲಿ ಹುಟ್ಟಿದ, ನೀರಿನಿಂದಾದ ಮುತ್ತು ಮತ್ತೆ ನೀರಾಗುವುದೆ? ಮೀರಿ ಪೂರ್ವಕರ್ಮವನು ಹರಿದ ಭಕ್ತನಿಗೆ ಮತ್ತೆ ಬೇರೆ ಜನ್ಮ ಉಂಟೆ?
ಕಟ್ಟಿಹೆ ಬಿಟ್ಟಿಹೆನೆ೦ಬ ಆತಂಕ ನಿಮಗೇಕೆ ಭಕ್ತರೆ? ಅರ್ಥವಿಲ್ಲದ ನೆಲೆಯಿಲ್ಲದ ತಪ್ಪಲು ತಂದು ಅನಗತ್ಯ ಒಟ್ಟಲೇಕೊ? ಜಂಗಮ ಬಂದಲ್ಲಿ ತೆರನರಿತು ಅರ್ಪಿಸಿದಡೆ ಶಿವನೊಪ್ಪುವ ಎಂದು ಹೇಳಿದ್ದಾರೆ.
ಶರಣರು ಕರ್ಮಸಿದ್ಧಾಂತವನ್ನು ಪುನರ್ಜನ್ಮವನ್ನು ಒಪ್ಪಲಿಲ್ಲ ಮತ್ತು ಕಟುವಾಗಿ ವಿರೋಧಿಸಿದರು. ಅದರಂತೆಯೇ, ಅಲ್ಲಮ ಪ್ರಭುಗಳು ಇನ್ನೊಂದು ವಚನದಲ್ಲಿ
ಸತ್ತು ಹುಟ್ಟಿ ಕೆಟ್ಟವರೆಲ್ಲರು
ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು. ಸಾಯದ ಮುನ್ನ ಸ್ವಯವನರಿದಡೆ ದೇವನೊಲಿವ ನಮ್ಮ ಗುಹೇಶ್ವರನು
(ಸಮಗ್ರ ವಚನ ಸಂಪುಟ – 2 ರಲ್ಲಿಯ 606 ನೆ ವಚನ)
ಅಲ್ಲಮರ ಈ ವಚನವು ಪುನರ್ಜನ್ಮ ಹಾಗೂ ದೇವಲೋಕ, ಸ್ವರ್ಗ ಇಂತಹ ಕಲ್ಪನೆಗಳನ್ನು ಅಲ್ಲಗಳೆದು ಸಾಯದ ಮುನ್ನ ಅರಿವನ್ನು ಕಾಣು ಎಂದು ಎಚ್ಚರಿಸಿದ್ದಾರೆ.
ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
ದುರಭಿಮಾನ ಎಂದರೆ ಇಲ್ಲಿ ಕುಟಿಲಬುದ್ಧಿ, ಕಪಟ, ಗಳಿಸುವ ಆಶೆ ಎಂದರ್ಥ, ಇಂತಹ ದುರಭಿಮಾನದಿಂದ ಘಟಿಸದ್ದನ್ನು ಘಟಿಸುತ್ತದೆ ಎಂದು ಭವಿಷ್ಯ ನುಡಿಯುವ ದುರಭಿಮಾನವನ್ನು ಹೊತ್ತು ನಡೆಯದ ಘಟನೆಗಳನ್ನು ಘಟಿತವಾಗುವದೆಂದು ಎಂದು ನಂಬಿಸಿ , ಅಥವಾ ಅಘಟಿತವಾದ ಸಂಗತಿಗಳನ್ನು ನಡೆಯುತ್ತವೆ ಎಂದು ತಾರಾಬಲ ಜ್ಯೋತಿಷ್ಯ, ಭವಿಷ್ಯ, ಕುಂಡಲಿ ಮಂತ್ರ ಮುಂತಾದ ಕೃತಕ ಸಾಧನಗಳಿಂದ ಸುಳ್ಳು ಹೇಳುವ ಮನುಷ್ಯರನ್ನು, ಸಂಪ್ರದಾಯವಾದಿ ಗಳನ್ನು ಸನಾತಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಅಲ್ಲಮ ಪ್ರಭುಗಳು ನೈಸರ್ಗಿಕವಾಗಿ ಸಹಜವಾದ ದೇಹವನ್ನು ಪಡೆದು ಸುಳ್ಳು ಹೇಳುವ ಪ್ರಾಪಂಚಿಕರನ್ನು ಏನೆನ್ನಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಇಂತಹ ವೈಚಾರಿಕ ಚಿಂತನ ಅಲ್ಲಮರದ್ದು,
ಇಂದಿನ ಯುಗದಲ್ಲೂ ದೃಶ್ಯ ಮಾಧ್ಯಮಗಳಲ್ಲಿ ಟಿ ವಿ ಸಾಮಾಜಿಕ ಜಾಲತಾಣಗಳಲ್ಲಿ ಪೂರ್ವ ಜನ್ಮ ವೃತ್ತಾಂತವನ್ನು ಕೊಚ್ಚುತ್ತಾರೆ ಪುನರ್ ಜನ್ಮದ ಭೀತಿ ಹುಟ್ಟಿಸುತ್ತಾರೆ ಕರ್ಮಸಿದ್ಧಾಂತವನ್ನು ಬೋಧಿಸಿ ಜನರನ್ನು ಶೋಷಣೆ ಮಾಡುವ ಜನರಿಗೆ ಚೀಮಾರಿ ಹಾಕುತ್ತಾರೆ ಅಲ್ಲಮ ಪ್ರಭುದೇವರು.
ಒಟ್ಟಾರೆ ಈ ವಚನದಲ್ಲಿ ಪುನರ್ಜನ್ಮ ಕರ್ಮ ಸಿದ್ಧಾಂತ ಜ್ಯೋತಿಷ್ಯ ವಿದ್ಯೆಯಂತಹ ಮೌಢ್ಯತನವನ್ನು, ಮೋಸದ ಜಾಲವನ್ನು, ಕಪಟತನವನ್ನು ಅಲ್ಲಗಳೆದು ಯಾರೊಬ್ಬರೂ ತಮ್ಮ ಜನ್ಮದ ರಹಸ್ಯವನ್ನು ಅರಿತುಕೊಂಡು ಜನ್ಮ ತಾಳುವದಿಲ್ಲ ಹಾಗೂ ಸತ್ತ ಮೇಲೆ ಮತ್ತೆ ಹುಟ್ಟುವದಿಲ್ಲ, ನಡೆಯದ ಘಟನೆಗಳನ್ನು ನಡೆಯುತ್ತವೆ ಎಂದೂ ಭವಿಷ್ಯನುಡಿದು ಜನರನ್ನು ಮೋಸಗಳಿಸುವವರ ವಿರುದ್ಧ ಕಿಡಿ ಕಾರಿದ್ದಾರೆ ನಮ್ಮ ಶರಣರುʼ
ಶರಣರು ಕರ್ಮ ಸಿದ್ಧಾಂತವನ್ನು ಒಪ್ಪಲಿಲ್ಲ ಮತ್ತು ಅದನ್ನು ಕಟುವಾಗಿ ವಿರೋಧಿಸಿದರು. ಹಿಂದಿನ ಜನ್ಮವಿಲ್ಲ ಮುಂದೆ ಇನ್ನೊಂದು ಜನ್ಮವೂ ಇಲ್ಲʼ ನುಡಿದಂತೆ ನಡೆ ಇದೇ ಜನ್ಮ ಕಡೆ ʼ ಇದು ಶರಣರ ಸ್ಪಷ್ಟವಾಣಿಯಾಗಿತ್ತು.
ಆಧಾರ ಗ್ರಂಥ
1. ಅಲ್ಲಮಪ್ರಭುದೇವರು. ಸಮಗ್ರ ವಚನ ಸಂಪುಟ
2. ಡಾ.ಶಶಿಕಾಂತ.ರುದ್ರಪ್ಪ ಪಟ್ಟಣ ಪುಣೆ ಅವರ ಲೇಖನ , ಅಲೆಮಾರಿ ಅಲ್ಲಮ – ಬಯಲಾದ ಹೆಚ್ಚೆ ಗುರುತು, 2020 ಏಪ್ರಿಲ 11, http://blog.scienxt.com/
3. ಸಮಗ್ರ ವಚನ ಸಂಪುಟಗಳು
-ಡಾ. ದಾನಮ್ಮ ಚ ಝಳಕಿ
ಬೆಳಗಾವಿ