ಏಕಾಂತದಲಿ ಕಾಡುವ ಒಂಟಿತನ

ಏಕಾಂತದಲಿ ಕಾಡುವ ಒಂಟಿತನ

ಈ ಜಗತ್ತು ಎಷ್ಟು ದೊಡ್ಡದಾಗಿದೆ! ಅಸಂಖ್ಯಾತ ಜನರ ಜಾತ್ರೆ! ಸಾಗರದ ನೀರಿನಂತೆ, ಆಕಾಶದಲಿ ಮಿನುಗುವ ನಕ್ಷತ್ರಗಳಂತೆ, ವಿಶಾಲ ಭೂರಮೆಯಂತೆ, ಅಳೆದು ತೂಗಲಾಗದು. ಇಲ್ಲಿಗೆ ನಿರಂತರ ಪಯಣಿಗರಾಗಿ ಬಂದು ಹೋಗುವವರ ಸಂಖ್ಯೆಯ ಲೆಕ್ಕವಿಟ್ಟವರಾರೂ ಸಿಗಲಿಕ್ಕಿಲ್ಲ. ಸಿಗುವುದೇ ಇಲ್ಲ ಎಂದರೂ ಸರಿಯೆ.

ಈ ಜೀವ ಚೈತನ್ಯದ ಬಿಂದುವಿನ ಮೂಲಕ್ಕೆ ಹೋಗಿ ಆಲೋಚಿಸಿದರೆ, ಯಾವುದೋ ಒಂದು ಜೀವಕಣದಿಂದ ಉದ್ಭವವಾಗಿ, ಮಾಂಸದ ಮುದ್ದೆಯಾಗಿ ರೂಪುಗೊಳ್ಳುವುದೊಂದು ಸೋಜಿಗವೇ. ಕೊನೆಗೆ ಎಲ್ಲಾ ಅಂಗಾಂಗಗಳು ‘ಅವ್ವ’ ಎನ್ನುವ ಜೀವ, ಪ್ರಾಣದ ಮೂಲಕ ತಿಕ್ಕಿ, ತೀಡಿಸಿಕೊಂಡು, ಮೊದಲ ಅಳುವಿನೊಂದಿಗೆ ಈ ವಿಶಾಲ ಪ್ರಪಂಚದ ಭೂ ಸ್ಪರ್ಶ ಮಾಡಿದಾಗ, ಹೆತ್ತವರ ಕಣ್ಮಣಿ! ಅವರೇ ದಿಕ್ಕು, ದಿಸೆ ಎಲ್ಲವೂ!

ಜೀವವೊಂದು ಪರಿವಾರದ ಅಂಗವಾಗಿ, ಒಡಹುಟ್ಟಿದವರ ಒಡನಾಟದಲ್ಲಿ ಬೆಸೆಯುತ್ತ, ಭದ್ರವಾಗಿ, ಬೆಳೆಯುತ್ತ, ತಿಳುವಳಿಕೆಯುಳ್ಳ ವ್ಯಕ್ತಿಯಾಗಿ ಮಾರ್ಪಾಡಾದಾಗ, ವೈಯಕ್ತಿಕ-ಕೌಟುಂಬಿಕ ಮತ್ತು ಸಾಮಾಜಿಕ ಮುಖದ ಅನಾವರಣ. ತನ್ನ ಸುತ್ತಲೂ ಸಂಬಂಧಗಳ ಸೂತ್ರಗಳನು ಬಳ್ಳಿಯಂತೆ ಹಬ್ಬಿಸಿಕೊಂಡು, ತನ್ನ ಜೀವ ಪಯಣದ ಹಾದಿ ಸುಗಮಗೊಳಿಸಿಕೊಳ್ಳುವುದು ಸುಲಭ ಸಾಧ್ಯವಾಗಿ ಪರಿಣಮಿಸುತ್ತದೆ.

ಒಂದು ಹೆಣ್ಣಿಗಾಗಿ ಒಂದು ಗಂಡನ್ನು, ಒಂದು ಗಂಡಿಗಾಗಿ ಒಂದು ಹೆಣ್ಣನ್ನು, ಈ ಪ್ರಕೃತಿ ಸೃಷ್ಟಿಸಿಯೇ ಸೃಷ್ಟಿಸಿರುತ್ತದೆ ಎನ್ನುವ ನಂಬಿಕೆ ಜಾಗೃತವಾದಾಗ ‘ಮದುವೆ’ ಎನ್ನುವ ಮೂರಕ್ಷರದ ಮಹತ್ವ ಮೈ ಮನಗಳಲಿ ಸಿಂಚನವಾಗಿ ನಲಿದಾಡುವಂತೆ ಮಾಡುತ್ತದೆ. ಜೀವನದ ಗುರಿ ಮುಗಿಲಿಗೇರಿದರೆ ಆಶ್ಚರ್ಯಪಡುವಂತಿಲ್ಲ. ಒಂದು ಜೀವಕ್ಕೆ ಇನ್ನೊಂದು ಜೀವವೇ ಆಸರೆ ಎಂದು ತಿಳಿದು ಏಳು ಹೆಜ್ಜೆಯ, ಮೂರು ಗಂಟಿನ ಶಾಸ್ತ್ರ ಅಥವಾ ಉಂಗುರ ಬದಲಾವಣೆ ಅಥವಾ ಮೂರು ಬಾರಿ ಕುಬೂಲ್ ಹೈ ಉಚ್ಛಾರ!

ಏನಿದು? ಇದರರ್ಥವೇನು? ಉತ್ತರದ ಹುಡುಕಾಟಕ್ಕೆ ಮತ್ತೆ ಏಳುವ ಪ್ರಶ್ನೆಗಳು. ಸಾಮಾಜಿಕ ವ್ಯವಸ್ಥೆಯೊ? ಮನದ ಮಹತ್ವಾಕಾಂಕ್ಷೆಯೊ? ದೈಹಿಕ ಬಯಕೆಯೊ? ದೇಹ ವಾಂಛೆಯೊ? ವಯಸ್ಸಿನ ಪ್ರಕೃತಿ ಸಹಜ ಆಕರ್ಷಣೆಯೊ? ಎಲ್ಲವನ್ನೂ ಒಪ್ಪಿಕೊಳ್ಳುವ ಅನಿವಾರ್ಯತೆಯೊ? ಒಟ್ಟಿನಲ್ಲಿ ಗಂಡು ಹೆಣ್ಣಿನ ಮಿಲನದ ಸಂತೋಷ, ಸಂಭ್ರಮ, ಸಡಗರದ ಆಹ್ಲಾದಕರ, ಹಿತಕರ ಜೀವನ ಶೈಲಿ. ‘ಬಿಟ್ಟೆನೆಂದರೆ ಬಿಡದೀ ಮಾಯೆ’ ಎನ್ನುವಂತೆ ಒಂದರ ಹಿಂದೆ ಒಂದು ಆಸೆ, ಆಕಾಂಕ್ಷೆ, ಆಮಿಷಗಳ ಸರಮಾಲೆಗಳ ಸಾಲು ಸಾಲು! ಆಗ ಮನಸು ಹೊಳೆವ, ಮಿನುಗುವ, ಸಾವಿರಾರು ದೀಪಗಳ ಸ್ತಂಭ!

ಹೀಗೇ ಸಂಬಂಧಗಳು ಜೇಡರ ಬಲೆಯಂತೆ ಹಬ್ಬಿಕೊಂಡು ಹೊರ ಹೊಮ್ಮಿರುವಾಗ, ಬೇರ್ಪಡಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬಂಧನದ ಬಿಗಿತ. ಆ ಬಂಧನದ ಬಿಗಿತದಲ್ಲಿ ಜವಾಬ್ದಾರಿಗಳ ಹೊರೆಯಿಂದಾಗಿ ಇನ್ನೂ… ಇನ್ನೂ ಭಾರ. ಅದೆಷ್ಟೇ ಭಾರವೆನಿಸಿದರೂ, ಅರೆ ಇಷ್ಟೆ ತಾನೆ? ಮಾಡಿ ಮುಗಿಸಿದರಾಯಿತು ಎನ್ನುವ ನಿರಾಳ ಭಾವಕೆ ದೈತ್ಯ ಶಕ್ತಿ. ಇಂತಹ ಪಳಗಿದ ಆಟಗಾರನಂತೆ ಜೀವನದಾಟ ಆಡುವಾಗ ಎಲ್ಲವೂ ನಾನೇ, ಎಲ್ಲವೂ ನನ್ನಿಂದಲೇ, ಎಲ್ಲರೂ ನನ್ನವರೇ, ಭಾವ ತೀವ್ರತೆಗಳಿಂದ ಎದೆ ತುಂಬಿ ನಿಂತ ಸ್ಥಿತಿಯಲ್ಲಿ, ಕೇವಲ ಸಂತೃಪ್ತಿ ಬಿಟ್ಟರೆ ಬೇರೇನೂ ಕಾಣದ ಕುರುಡುತನ.

ಕರುಳ ಬಳ್ಳಿಗಳು ಉದರ ಹರಿದು ಹೊರ ಬಂದಾಗ ಈ ಜಗತ್ತಿನಲ್ಲಿ ಇದೊಂದೇ ಜೀವ ನನ್ನದು ಎನ್ನುವ ಭ್ರಮೆ ಬಹುಕಾಲ ಕಾಡುವುದು ಸಹಜ. ಕೊನೆಗೊಂದು ದಿನ ಆ ಭ್ರಮೆ ಕಳಚಿದಾಗ ಅಕ್ಷರಶಃ ಹುಚ್ಚು ಹಿಡಿಯುವುದೊಂದೇ ಬಾಕಿ. ಹೆತ್ತವರ ನಿರ್ಗಮನ, ಕೈ ಹಿಡಿದವರು ನಾಪತ್ತೆ, ಹೆತ್ತು, ಹೊತ್ತು, ಸಾಕಿ ಸಲಹಿದವರು ಎಲ್ಲೆಲ್ಲೋ? ನಾನು, ನನ್ನವರು, ನನ್ನಿಂದ, ನನ್ನವರಿಗಾಗಿ ಎಲ್ಲವೂ ನಿರ್ಗಮನವಾಗುವ ವೇಳೆಗೆ ಜೀವ ಸೋತು ಸಣ್ಣಗಾಗಿ ದಣಿದ ಭಾವದಲಿ ವ್ಯಕ್ತಿ ಮೌನಿ!

ಇಂತಹ ಬ್ರಹ್ಮಾಂಡದಲಿ, ಬಂದು ಹೋಗುವ ಈ ಜನ ಜಾತ್ರೆಯಲ್ಲಿ, ಸಾಧನೆ ಗೈದ ಸಾಮಾಜಿಕ ವಲಯದಲ್ಲಿ, ಎಲ್ಲವನ್ನೂ ಪಡೆದ ಬದುಕಿನ ಸಂತೃಪ್ತಿಯಲ್ಲಿ ‘ನಾನು’ ಒಂಟಿ ಎನ್ನುವ ಭಾವ ಮೂಡಿದರೆ, ಅದಕ್ಕೆ ಯಾರು ಹೊಣೆ? ಆ ಹೊಣೆಗಾರಿಕೆಗೆ ಯಾರು ಜವಾಬ್ದಾರರು? ಪ್ರಶ್ನೆ ಹಾಕಿಕೊಂಡು ಹುಡುಕುತ್ತ ಹೋದರೆ, ಸಿಕ್ಕಿದ್ದು ಯಾರು ಗೊತ್ತೆ? ಮತ್ತೆ ಅದೇ ‘ನಾನು!!!’ ಏನಿದರ ಅರ್ಥ? ಬದುಕಿನುದ್ದಕ್ಕೂ ಏಳುತ್ತಿದ್ದ ಎಲ್ಲಾ ಪ್ರಶ್ನೆಗಳು, ತಲ್ಲಣಗಳು, ಸವಾಲುಗಳು, ಎಲ್ಲದಕ್ಕೂ ಉತ್ತರ ಪಡೆಯುತ್ತಿದ್ದ ಜೀವ, ಇಂದು ನಿರುತ್ತರ.

ಓಹ್! ಈ ಬದುಕು ಇಷ್ಟೆನಾ? ಅನ್ನುವ ಹಂತ ತಲುಪಿದಾಗ ಬದುಕಲು ದಿನಗಳೇ ಉಳಿದಿರುವುದಿಲ್ಲ. ಕಾಲನಾ ಕರೆ ವಿಚಿತ್ರವಾಗಿ ರಿಂಗಣಿಸುತ್ತಿರುತ್ತದೆ. ಆ ರಿಂಗಣದ ತಲ್ಲಣದಲ್ಲೇ ಇನ್ನೊಂದಿಷ್ಟು ಬಾಕಿ ತೀರಿಸುತ್ತ, ಒದ್ದಾಡುತ್ತ, ಪರಿತಪಿಸುವಾಗ ಬರುವ ಆಲೋಚನೆಗಳಿಗೆ ಲೆಕ್ಕವಿದೆಯೇ? ಖಂಡಿತಾ ಇಲ್ಲ. ಆ ಸ್ಥಿತಿಯಲ್ಲೂ ‘ನಾನು ಯಾರು?’, ‘ಎಲ್ಲಿಗೆ ಹೊರಟಿರುವೆ?’ ಪ್ರಶ್ನೆಗಳ ಸುತ್ತಲೇ ಗಿರಕಿ ಹೊಡೆಯುವ ಮನಸಿಗೆ ದಣಿವೇ ಇಲ್ಲ.

ಹೀಗೆ ಏಕಾಂದಲಿ ಕಾಡುವ ಒಂಟಿತನಕೆ ಒಂದಿಷ್ಟು ಗೆರೆಗಳ ಮೂಡಿಸಬಹುದು, ಆ ಗೆರೆಗಳ ಸೇರಿಸಿ ಸುಂದರ ಚಿತ್ತಾರವನೂ ಆಗಿಸಬಹುದು. ಅದಕ್ಕೆ ಒಂದೊಂದೇ… ಒಂದೊಂದೇ… ಬಣ್ಣಗಳನೂ ತುಂಬಬಹುದು.

ದೇಹ ಕೃಶವಾಗಿ, ಕಣ್ಣು ಮಂಜಾಗಿ, ಕಿವಿ ಮಂದವಾಗಿ, ಮಾತು ತೊದಲಿ, ತೊಗಲು ಜೋತು ಬಿದ್ದು, ತಪ್ಪು ಹೆಜ್ಜೆಗೆ ತಪ್ಪದಂತೆ ಆಸರೆ ಬೇಕಾಗಿ, ಅಸಹಾಯಕ ಆದಾಗಲೂ ದೃಢವಾಗಿ ಎದ್ದು ನಿಲ್ಲಬಹುದು. ನಿಂತು ನೋಡುವ ಮನಸು ಮಾಡಿದರೆ ಸ್ವಚ್ಛವಾಗಿಯೇ ಕಾಣುತ್ತದೆ, ಸ್ಪಷ್ಟವಾಗಿಯೇ ಕೇಳಿಸುತ್ತದೆ. ಕೇವಲ ಅಂತರಂಗದ ದೃಷ್ಟಿ, ಶ್ರವ್ಯದಿಂದ ಮಾತ್ರ!

ಈ ಜನಸಾಗರದಲಿ ನಾನೊಂದು ಹನಿ. ನಾನೊಂದು ಬಿಂದು. ಏಕಾಂತದಲಿ ಕಾಡುವ ಒಂಟಿತನ, ಒಂಟಿತನವೇ ಅಲ್ಲ. ಅದನ್ನೂ ಸಂಭ್ರಮಿಸಬಹುದು, ಸಡಗರಿಸಬಹುದು, ಏಕೆಂದರೆ ಆ ಒಂಟಿತನ ಅತ್ಯಮೂಲ್ಯ! ಅನನ್ಯ! ಏಕಾಂತದ ಒಂಟಿತನ ಅಂದರೆ ಧ್ಯಾನಸ್ಥ ಸ್ಥಿತಿ. ಅಲ್ಲಿ ನಾ, ನೀ ಅಷ್ಟೇ. ಮತ್ತಾರೂ ಇಲ್ಲ, ಮತ್ತೇನೂ ಇಲ್ಲ. ಒಂದು ಉಸಿರು ಸಹ ಇಲ್ಲ!
ಬನ್ನಿ ನನ್ನಂತೆಯೆ ನೀವೂ ಸಂಭ್ರಮಿಸಿ.

ಸಿಕಾ

Don`t copy text!