ಹವಾ ಮಲ್ಲಿನಾಥನ ‘ಅವತಾರ’ದ ಹವೆಯ ಕುರಿತು…

ಹವಾ ಮಲ್ಲಿನಾಥನ ‘ಅವತಾರ’ದ ಹವೆಯ ಕುರಿತು…

ಆತ ಹೆಚ್ಚು ಮಾತನಾಡುವುದಿಲ್ಲ. ಅಕ್ಷರಶಃ ಮಿತಭಾಷಿ. ಅಷ್ಟಕ್ಕೂ ಯಾವತ್ತೋ ಆಡುವ ಮಾತು ಸಹಿತ ಮುತ್ತಿನಂತಹ ಮಾತೇನು ಆಗಿರುವುದಿಲ್ಲ. ಗಡ್ಡ ಜಡೆಯ ಜಟಾಧಾರಿ. ವಾರಕ್ಕೊ, ತಿಂಗಳಿಗೋ ಎಂಬಂತೆ ಅಪರೂಪಕ್ಕೊಮ್ಮೆ ಜಳಕ. ಅದೂ ಹಂಡೆಗಟ್ಟಲೇ ಬಿಸಿನೀರಿನ ಜಬರ್ದಸ್ತ್ ಜಳಕ. ಜಾತಿ, ಮತ, ಪಂಥ, ಪೂಜೆ, ಪುನಸ್ಕಾರ ಇದ್ಯಾವುದರ ಆಚರಣೆ ಮುಂಚಿನಿಂದಲೂ ಇಲ್ಲವೇ ಇಲ್ಲ. ಆದರೆ ಎದೆಗೆಬಿದ್ದ ಅಕ್ಷರದಂತೆ ಕೋಟಿಲಿಂಗ ಪ್ರತಿಷ್ಠಾಪನೆಯ ಕನಸು. ಕರೆದವರ ಮನೆಯಲ್ಲಿ ರೊಟ್ಟಿ ಚಟ್ನಿಯನ್ನೇ ಆನಂದದಿಂದ ಉಂಡು ನೆಮ್ಮದಿಯ ಡೇಕರಿಕೆ, ಸಂತಸದ ತೇಗು ಬಿಡುತ್ತಾನೆ. ನೆಮ್ಮದಿ ಎಂಬುದೇ ಅವನ ಪಾಲಿನ ಅಧ್ಯಾತ್ಮ. ಅವನಿಗೆ ತಳಸಮುದಾಯದ ಒಡನಾಟವೆಂದರೆ ಹಂಡೆಹಾಲು ಕುಡಿದಷ್ಟು ಸಂಭ್ರಮ. ಹಾಗೆಂದು ಮೇಲ್ವರ್ಗದ ಸಿರಿವಂತರ ಸೋಬತಿ ಇಲ್ಲವೆಂದಲ್ಲ.

ಕ್ಷಮಿಸಿ, ನಾನು ಏಕವಚನದಲ್ಲಿ ಸಂಬೋಧಿಸಿದ ಅಸಮಾಧಾನ ನಿಮಗನಿಸಿದರೆ ಅದೆಲ್ಲ ಮುಜುಗರ ಆತನಿಗೆ ಅನಿಸುವುದಿಲ್ಲ. ಯಾಕೆಂದರೆ ಆತ ವಚನಗಳ ವಿವೇಕದಲ್ಲಿ ಪುಳಕಗೊಳ್ಳುವ ವಚನಾನಂದನಲ್ಲ. ಹಾಗೆಂದು ಅಪ್ಪಟ ಅವಧೂತ ಬದುಕು ಅಂತನೂ ಅನಿಸಲ್ಲ. ಜನಪ್ರಿಯ ಧಾರ್ಮಿಕ ಲೋಕದ ‘ಅಚಲ’ ಪ್ರೀತಿಯ ಒಂದು ಬಗೆಯ ಲೀಲಾಮಯಿ ಬೋಲೇನಾಥ. ಒಟ್ಟಿನಲ್ಲಿ ‘ಇದಮಿತ್ತಂ’ ಎಂದು ಕರಾರುವಾಕ್ಕಾಗಿ ಹೇಳಲಾಗದ ಮತ್ತು ಹೇಳದಿರಲಾಗದ ಸ್ಥಿತಪ್ರಜ್ಞೆ ಅವನದು. ಲೋಕದ ಜನರು ಮತ್ತು ಅವನ ಸಂಬಂಧಗಳನ್ನು ಕೆಲವು ಪ್ರಗತಿಪರರು ‘ರಿಲಿಜಿಯಸ್ ಹಿಪಾಕ್ರಸಿ’ ಎಂದು ಕರೆದು ಕೈ ತೊಳೆದು ಕೊಳ್ಳುವಷ್ಟು ಬೀಸು ಸರಳತೆ ಅದಲ್ಲ. ಪಠಾಣ ದಿರಿಸಿನ ಸಮವಸ್ತ್ರ. ಪೈಜಾಮ ಮತ್ತು ಎದೆ ಮೇಲೆ ಎರಡೆರಡು ಕಿಸೆ, ಸಿಪಾಯಿ ಅಂಗಿಯ ಹೆಗಲಿಗೆ ಹೊಲಿಗೆಗುಂಡಿ ಜುಬ್ಬದ ಪಟ್ಟಿಗಳು. ತಲೆಗೊಂದು ಸ್ಕಾರ್ಫ್. ಅದು ಗಣಪತಿ ಸಚ್ಚಿದಾನಂದ ಕಟ್ಟುವ ಶೈಲಿಯದು. ಇದು ಅವನ ಉಡುಗೆ ತೊಡುಗೆ.

ಖಂಡುಗಗಟ್ಟಲೇ ಜನಪ್ರಿಯತೆಯ ಭಂಡಾರ. ಉಲ್ಲಸಿತ ಚಿತ್ತದ ವಿಚಿತ್ರ ವ್ಯಕ್ತಿತ್ವ. ಯಾವುದೇ ಫಿಲಾಸಫಿಕಲ್ ಕೋಶ ಓದದಿದ್ದರೂ ದೇಶ ತಿರುಗಾಟಕ್ಕೆ ಹೇಳಿ ಮಾಡಿಸಿದ ಪ್ರಚಂಡ ಅಲೆಮಾರಿ. ಅಹಂಕಾರ ನಿರಸನದ ಸುಖಾನುಭೂತಿ. ಬೆಡಗಿನ ಲೀಲೆಗಳ ಸಲಿಲ ನಡಿಗೆಯ ನೆನಪು ತರಿಸುವ ಆತ ಬರುತ್ತಾನೆಂಬ ಸುದ್ದಿ ಬರುತ್ತಿದ್ದಂತೆ ನೂರಾರು ಜನರು ಎಲ್ಲೆಲ್ಲಿಂದಲೋ ಓಡೋಡಿ ಬರುತ್ತಾರೆ. ಆತನ ಹಿಂದೆ ಮುಂದೆ ಹತ್ತಾರು ಕಾರು, ಜೀಪು. ಲೆಕ್ಕವಿಲ್ಲದಷ್ಟು ದ್ವಿಚಕ್ರ ವಾಹನಗಳು ದಂಡಿಯಾಗಿ ಜಮಾಯಿಸುತ್ತವೆ. ಖಾಯಷ್ ಪಟ್ಟು ಕಾಸ್ಟಲೀ ಕಾರುಗಳನ್ನು ಹತ್ತಿ ನೂರೈವತ್ತು ಕಿ.ಮಿ. ವೇಗದ ಬಿರುಗಾಳಿಯಂತೆ ಖುದ್ದು ಓಡಿಸಬಲ್ಲ ಸರದಾರ. ಇದ್ದಕ್ಕಿದ್ದಂತೆ ಯಾರದಾದರೂ ಸಣ್ಣದೊಂದು ಬೈಕ್ ಹತ್ತಿ ಎಲ್ಲೆಂದರಲ್ಲಿ ಪ್ರತ್ಯಕ್ಷಗೊಳ್ಳುವ ಚಿದ್ವಿಲಾಸದ ಚಮತ್ಕಾರ.

ಒಟ್ಟಿನಲ್ಲಿ ಆತ ಬರುವಲ್ಲಿ, ಆತ ಬಂದಮೇಲೆ ಮತ್ತು ಬರುವ ಮೊದಲು ಕೂಡಾ ಆತನದೇ ಹವಾ. ಆತನ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಆತನ ಕುರಿತಾದ ತರಹೇವಾರಿ ಝಲಕಿನ ವಾತಾವರಣ ನಿರ್ಮಾಣ. ಅದೊಂದು ತೆರನಾದ ಸಮೂಹ ಸನ್ನಿಯೆಂದರೆ ಪಕ್ಕಾ ಅದೂ ಅಲ್ಲ. ಆದರೆ ಅಪಾರ ನಂಬುಗೆಯಿಂದ ಅಷ್ಟೆಲ್ಲ ಜನ ಮುಗಿ ಬೀಳುತ್ತಾರಲ್ಲ. ಬೆಲ್ಲಕ್ಕೆ ನೊಣ ಮುಕುರುವಂತೆ ಮುಕುರುತ್ತಾರಲ್ಲ, ಅದೆಲ್ಲ ಸುಮ್ನೇನಾ.? ಅದರಿಂದ ಜನರಿಗೇನು ಉಪಯೋಗ.? ಉಪಯೋಗ ಇಲ್ದಿದ್ರೇ ಯಾಕೆ ಬರ್ತಾರೆ. ಜನರೇನು ದಡ್ಡರೇನು.? ಜನರಿಗೆ ಲಾಭ ಇದೆಯೋ ಇಲ್ಲವೋ ಗೊತ್ತಿಲ್ಲ. ಅವನಿಗಂತೂ ಖಂಡಿತಾ ಲುಕ್ಸಾನಿಲ್ಲ.

ಅದಕ್ಕೆ ಸಬೂಬಿನಂತೆ ಅವನ ಮೇಲಿನ ಸಮ್ಮೋಹಕ ಭಕ್ತಿಭಾವದ ಪಾರಮ್ಯದಿಂದಾಗಿ ಕರ್ನಾಟಕ ಸೇರಿದಂತೆ ಗುಜರಾತ, ಮಹಾರಾಷ್ಟ್ರ, ತೆಲಂಗಾಣ, ಉ.ಪ್ರ, ದೂರದ ದಿಲ್ಲಿಯಲ್ಲಿ ಮಠ, ಕುಟೀರ, ಆಶ್ರಮಗಳು ನೂರಾರು ಸಂಖ್ಯೆಯಲ್ಲಿ ತಲೆಯೆತ್ತಿ ನಿಂತಿವೆಯಂತೆ. ಪುಣೆ ಬಳಿಯ ಬಿಗುವಾನ್ ಪ್ರದೇಶದಲ್ಲಿ ಸಹಸ್ರ ಕೋಟಿ ಬೆಲೆಬಾಳುವ ಮುಖ್ಯ ಮಠ. ಕೋಟಿ ಕೋಟಿ ಕಿಮ್ಮತ್ತಿನ ಹತ್ತಾರು ಕಾರುಗಳು. ನಿರಗುಡಿಯ ಆರಂಭದ ದಿನಗಳಲ್ಲಿ ನೂರಾರು ನಾಯಿಗಳನ್ನು ಸಾಕಿದ್ದು ಅವುಗಳಿಗೆ ಮದುವೆ ಮಾಡಿಸಿದ್ದು, ಜನಗಳು ಮಟಕಾ ನಂಬರ್ ಆಸೆಗಾಗಿ ಹಿಂಡುಗಟ್ಟಲೇ ಬರುತ್ತಿದ್ದುದು ಅದೆಲ್ಲ ಹಳೆಯ ಮಜಕೂರ.

ಈ ಎಲ್ಲ ಬೆಳವಣಿಗೆಗೆ ಏನಿಲ್ಲವೆಂದರೂ ಮುರ್ನಾಲ್ಕು ದಶಕಗಳ ಚರಿತ್ರೆ. ಕನ್ನಡ, ಮರಾಠಿ, ತೆಲುಗು, ಹಿಂದಿ… ಹೀಗೆ ಐದಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲ. ಇಂತಿಪ್ಪ ಅವನ ಕುರಿತು ನನ್ನದೊಂದು ಪುಟ್ಟ ಪ್ರೊಫೈಲ್. ವೈಭವೋಪೇತವಾದ ಎಲ್ಲ ಎಣಿಕೆಯ ಪ್ಯಾರಾಮೀಟರುಗಳನ್ನು ಮೀರಿದ ಅಚ್ಚರಿಗಳಿವೆ. ಅವನ ಕುರಿತು ಲೋಕ ನಕಾಶೆಯ ಮೈತುಂಬಾ ಮೊಗೆದಷ್ಟು ಉಮೇದಿನ ಕಲರ್ಫುಲ್ ಅಧ್ಯಾಯಗಳಿವೆ. ಒಮ್ಮೆ ಭೆಟ್ಟಿಕೊಟ್ಟರೆ ಮತ್ತೆ ಮತ್ತೆ ಭೆಟ್ಟಿಗಳು ಸೃಷ್ಟಿಯಾಗಲೇಬೇಕು. ಅದೆಲ್ಲವನ್ನು ನೀವು ಕಣ್ಣಾರೆ ಕಂಡು, ಕಿವಿಯಾರೆ ಕೇಳಿಯೇ ಸಂಭ್ರಮಿಸಬೇಕೆಂಬುದು ಬಲ್ಲ ಅನುಭವಿಗಳ ಅಂಬೋಣ.

ಅದೊಂದು ದರ್ಶನಾವತಾರ ಮತ್ತು ಲೋಕೋಪಯೋಗಿ ಮರುಳು ಭಾಗ್ಯ. ಹೀಗೆ ಇನ್ನೂ ಏನೇನೋ ಹೇಳಿಕೆ ಕೇಳಿಕೆಗಳ ಪ್ರಗಾಥ ಪ್ರಪಂಚವನ್ನೇ ಮರು ಸೃಷ್ಟಿಸಿ ಬಿಡುವುದೇ ಸೋಜಿಗ. ಈ ಅಚ್ಚರಿಯನ್ನು ಅಷ್ಟು ಸರಳವಾಗಿ ನಿರ್ಲಕ್ಷಿಸಲಾಗದು. ಅಂದಹಾಗೆ ಅಂತಹದ್ದೊಂದು ಅನಿರ್ವಚನೀಯ ವ್ಯಕ್ತಿತ್ವದ ಹೆಸರು ಹವಾ ಮಲ್ಲಿನಾಥ ಮಹಾರಾಜ. ಹೌದು ಆತ ಮಹಾರಾಜನೇ ಹೌದು. ಈ ಕುಬೇರ ಮಹಾರಾಜನ ಹೆಸರಲ್ಲೇ ಹವಾ ಇದೆ. ಅದು ಅಪ್ಪ ಅಮ್ಮ ಇಟ್ಟ ಹೆಸರಲ್ಲ. ಆಳಂದ ತಾಲೂಕಿನ ನಿರಗುಡಿ ಗ್ರಾಮದ ನವಣಿ ಮನೆತನದ ಬಡ ಜಂಗಮರ ಕುಟುಂಬದಲ್ಲಿ ಜನನ. ಅಪ್ಪ ಅವ್ವ ಇಟ್ಟ ಹೆಸರು ಮಲ್ಲಯ್ಯ. ತಮ್ಮ ಬೀಗರ ಊರು ಅಮರಜಾ ಹಳ್ಳಕೊಳ್ಳದ ‘ಕೊರಳ್ಳಿ’ಯಲ್ಲಿ ಮಲ್ಲಯ್ಯ ಐದನೇ ಈಯತ್ತೆವರೆಗೆ ಓದಿದ್ದು. ಹದಿವಯಸ್ಸಿನಲ್ಲೇ ಧ್ಯಾನಸ್ಥ ಅವಸ್ಥೆಯ ಅನುಷ್ಠಾನದ ಪುಟ್ಟ ಅನುಭವ. ಆನಂತರದ್ದೆಲ್ಲ ಊಹೆಗೂ ಮೀರಿದ ಸೆಲಿಬ್ರಿಟಿ ರೆಕಾರ್ಡ್.

ಅಂದಹಾಗೆ ಕಳೆದ ಶತಮಾನದ ನನ್ನ ಹಿರಿಯ ಗೆಳೆಯ ಉಪ್ಪಿನ ಸಿದ್ಧರಾಮ “ಅವತಾರ” ಹೆಸರಿನ ಪುಸ್ತಕ ರಚಿಸಿದ್ದಾರೆ. ಅದು ಹವಾ ಮಲ್ಲಿನಾಥ ಮಹಾರಾಜನ ಜನಜನಿತ ಜೀವನ ಅವತಾರಗಳ ಚಿತ್ರಣ. ನನ್ನ ಮೊಬೈಲಿಗೆ ‘ಅವತಾರ’ ಪುಸ್ತಕದ ಪಿಡಿಎಫ್ ಕಳಿಸಿ “ಕಡಕೋಳ ನೀನು ಈ ಪುಸ್ತಕ ಕುರಿತು ಬಿಡುಗಡೆಗೆ ಮೊದಲೇ ಪತ್ರಿಕೆಗೆ ಬರೀಬೇಕೆಂದು” ಶತಮಾನ ಗೆಳೆತನದ ಸಲುಗೆಯಿಂದ ಉಪ್ಪಿನ ಕೇಳಿಕೊಂಡರು. ‘ಅವತಾರ’ವು ಹವಾ ಮಲ್ಲಿನಾಥ ಮಹಾರಾಜನ ಹವೆಯೊಳಗೆ ಅನುಸಂಧಾನಗೊಂಡಿದೆ.
ಸಗೋತ್ರದ ಸದಮಲ ಪ್ರೀತಿಯಿಂದ ಸಂಪ್ರೀತಗೊಂಡಂತಿದೆ. ಅವತಾರವನ್ನು ಧೇನಸ್ಥನಾಗಿ ಓದುವಷ್ಟು ಸವುಡು ನನಗಿರಲಿಲ್ಲ. ಸಿದ್ಧರಾಮ ಉಪ್ಪಿನ ಪ್ರೀತಿಯ ಭಕ್ತನಾಗಿ, ಪತ್ರಕರ್ತನಾಗಿ, ಲೇಖಕನಾಗಿ ಅವತಾರ ಅನುರೂಪಿಸಿದ್ದಾರೆ. ಉಪ್ಪಿನ ಹೇಳುವಂತೆ ಅಂತಹ ಪುಣ್ಯಾವಕಾಶ ಬೇರೆ ಯಾರಿಗೂ ದೊರಕಿಲ್ಲವಂತೆ.

ಹವಾ ಮಲ್ಲಯ್ಯನ ಹತ್ತಾರು ಮಂದಿ ಅಭಿಮಾನಿ ಭಕ್ತ ಭಕ್ತೆಯರನ್ನು ಸಂದರ್ಶನ ಮಾಡಿ ಬರೆದಿದ್ದಾರೆ. ಅವರೆಲ್ಲ ಫಲಾನುಭವಿಗಳ ಇಷ್ಟಾರ್ಥಗಳು ಸಿದ್ಧಿಗೊಂಡ ಕಥಾವಳಿಗಳನ್ನು ಸಿದ್ದರಾಮ ಆಕರ್ಷಕ ಶೀರ್ಷಿಕೆಗಳ ಮೂಲಕ ಚಿತ್ರಿಸಿದ್ದಾರೆ. ನೂರಾರು ಮಂದಿಗೆ “ಹವಾ ಮಲ್ಲಯ್ಯ ಅಂದದ್ದೆ” ಆಗಿದೆಯಂತೆ. ಥೇಟ್ ಪವಾಡ ಸದೃಶವಾದ ಘಟನೆಗಳಿಗೆ ಉಪ್ಪಿನ ಉಪ್ಪು ಖಾರ ಸವರದೇ ಎಲ್ಲಿಯೂ ಅವುಗಳನ್ನು ಪವಾಡಗಳೆಂದು ಕರೆಯದೇ ಅಗದೀ ಸೋಜಾಗಿ ಉಣ ಬಡಿಸಿದ್ದಾರೆ. ಅವುಗಳಲ್ಲಿ ಸೋಳಾಣೆ ಸುಳ್ಳಿಲ್ಲ ಎಂಬ ಮತಿತಾರ್ಥ ಅವರದು.

ಹವಾ ಮಲ್ಲಿನಾಥ ಮಹಾಚರಿತೆಯ ಅವತಾರದಲ್ಲಿ ಇಪ್ಪತ್ತೈದು ಅಧ್ಯಾಯಗಳಿದ್ದು, ಒಂದೊಂದು ಅಧ್ಯಾಯ ಮುಗಿದ ಮೇಲೆ ಮುರ್ನಾಲ್ಕು ಸಾಲುಗಳ ಸಿದ್ಧರಾಮ ಹವಾವಾಣಿ. “ಹಣವಿದ್ದರೆ ಏನಾದರೂ ಖರೀದಿಸಬಹುದು. ಆದರೆ ಜನರ ಹೃದಯಗಳಲ್ಲಿ ಜಾಗ ಖರೀದಿಸಲಾಗದು.” ಇದೊಂದು ಸ್ಯಾಂಪಲ್. ಸಂಪ್ರದಾಯ ಮೀರಿದ ಇದೊಂದು ಬಗೆಯ ಬರವಣಿಗೆಯ ಹೊಸ ವಿನ್ಯಾಸ. ಹಾಗೆಯೇ ಇದು ಪಾಪ ಪುಣ್ಯದ ಪುರಾಣ ಕಥೆಯಲ್ಲ. ಕಣ್ಮುಂದಿನ ಪರಮಾತ್ಮನ ಸುಲಲಿತ ಸನ್ನಿವೇಶಗಳ ಲೀಲೆ ಎಂದು ತಮ್ಮ ಹೆಡೆಬಿಚ್ಚಿದ ಮಾತುಗಳಲ್ಲಿ ಉಪ್ಪಿನ ಬಿಚ್ಚಿಟ್ಟಿದ್ದುಂಟು.

ಬೇಕಾದರೆ ಫಲಾನುಭವಿಗಳನ್ನು ಮಾತಾಡಿಸಿ ಅವತಾರ ಓದುಗರು ಖಚಿತ ಪಡಿಸಿಕೊಳ್ಳಲೆಂಬಂತೆ ಅದಕ್ಕೆ ಪುರಾವೆಯಾಗಿ ಅವರ ಫೋಟೊ ಮತ್ತು ಮೊಬೈಲ್ ನಂಬರುಗಳನ್ನು ಅಡಿ ಟಿಪ್ಪಣಿಯಂತೆ ನೀಡಿದ್ದಾರೆ. ಅಂತೆಯೇ
ತಕರಾರಿ ಲೇಖಕ ಸಿದ್ಧರಾಮ ಉಪ್ಪಿನ ಜಗಳವಿಲ್ಲದೇ ಏನನ್ನೂ ಒಪ್ಪುವುದಿಲ್ಲ. ತನ್ನನ್ನೂ ಸಹಿತ ಎನ್ನುವ ದಿಟದ ಮಾತನ್ನು ಅವತಾರದ ಮುನ್ನುಡಿಯಲ್ಲಿ ರಾಗಂ ಬರೆದಿದ್ದಾರೆ. ಹವಾ ಮಲ್ಲಿನಾಥ ‘ದಣಿವರಿಯದ ಅಂಬಿಗ’ ಎಂದು ಹಿನ್ನುಡಿಯಲ್ಲಿ ವೀಣಾ ಬನ್ನಂಜೆ ಕರೆದಿದ್ದಾರೆ. ಆರಂಭಗೊಂಡ ಅಲ್ಪಾವಧಿಯಲ್ಲೇ ಪುಸ್ತಕ ಪ್ರಕಟಣೆಗಳ ಬೆರಗಿನ ದಾಖಲೆ ನಿರ್ಮಿಸಿದ ಕಡಣಿಯ ಬೆರಗು ಪ್ರಕಾಶನ ‘ಅವತಾರ’ ಪ್ರಕಟಿಸಿದೆ. ಅವತಾರ ನಾಳೆ ಭಾನುವಾರ ಫೆ. 27 ರಂದು ಯಳಮೇಲಿಯಲ್ಲಿ ಬಿಡುಗಡೆ ಆಗಲಿದೆ. ಅವತಾರದ ಕಾರಣಿಕ ಪುರುಷ ಹವಾ ಮಲ್ಲಿನಾಥ ಮಹಾರಾಜನೇ ಲೋಕಾರ್ಪಣೆ ಮಾಡಲಿದ್ದು ಅವತ್ತು ಅದೆಷ್ಟು ಅಭಿಮಾನಿಗಳು ಜಮಾಯಿಸುತ್ತಾರೆಂದು ಕಾಯ್ದು ನೋಡಬೇಕು. ಹೇಳಲು ಬಾರದು ಬಂದವರೆಲ್ಲರೂ ಒಂದೊಂದು ಅವತಾರ ಕೊಂಡರೆ ಅವತಾರ ಅವತ್ತೇ ಖಾಲಿ ಆಗಬಹುದು.

ದಿಲ್ಲಿ ನೊಂದಣಿಯ ಜಯಭಾರತ ಮಾತಾ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿರುವ ‘ಹವಾ ಮಲ್ಲಿನಾಥ ಹವೆಯನ್ನು’ ಬಳಸಿಕೊಳ್ಳಲು ರಾಜಕಾರಣಿಗಳು ಒಳಗೊಳಗೇ ಹಾಕುತ್ತಿರುವ ಡಾವುಪೇಚಿನ ಹವಣಿಕೆಗಳು ಸಹಜ. ಎಡ-ಬಲಗಳ ಎರಡರಿಯದೇ ಎಲ್ಲಪಕ್ಷಗಳ ಕುರಿತಾಗಿ ಏಕೋಭಾವದ ಯತಾರ್ಥತೆ ಹವಾ ಮಲ್ಲಯ್ಯ ಮುತ್ಯಾನದು. ಹಾಗೆಂಬುದು ಜನರ ನಂಬುಗೆ. ಇಂತಹ ನಂಬುಗೆಗಳೇ ಸಾಂಬನ ಅರಮನೆ ಇದ್ದಂತೆ.

ನಿರಗುಡಿಯ ಮಲ್ಲಯ್ಯನೆಂಬ ಬಿಗುವಾನಿನ ಭಗವಾನನ ಕುರಿತು ನಾನು ಓದಿ, ಕೇಳಿ ಕಲೆಹಾಕಿದ ಸಕಲೆಂಟು ಮಾಹಿತಿಗಳು ಯಾವುದೇ ನಿರ್ಧಾರಕ್ಕೆ ತಂದು ನಿಲ್ಲಿಸುತ್ತಿಲ್ಲ. ಗೊತ್ತಿಲ್ಲ ಅದೇಕೋ ನನಗೆ ಕಡಕೋಳ ಮಡಿವಾಳಪ್ಪನ ಶಿಷ್ಯೋತ್ತಮ ಖೈನೂರು ಕೃಷ್ಣಪ್ಪನ ತತ್ವಪದವೊಂದು ಎಡಬಿಡದೇ ಕಾಡುತ್ತಿದೆ. ಅದು ಹೀಗಿದೆ :

ನಡು ಜಡಿಯಲಿ ಹುಟ್ಯಾನ ಸ್ವಾಮಿ
ನಡಗತಾವ ನವಖಂಡ ಭೂಮಿ
ಅಂವ ತಿರಗತಾನ ನಾಲ್ಕೂರು ಸೀಮಿ//

ಅಸರಂತ ಹಸಿ ಹುಸಿ ನುಡದಾನ/
ಹಸಿ ಕೆಸರಿಗೆ ಬೆಂಕಿಹಚ್ಚಿ ನಡದಾನ//

-ಮಲ್ಲಿಕಾರ್ಜುನ ಕಡಕೋಳ
9341010712

Don`t copy text!