ಕಲ್ಯಾಣದ ಕಲ್ಯಾಣಿ – ನೀಲಮ್ಮ
ಬಸವಣ್ಣನವರ ಜೀವನದಲ್ಲಿ ವಿಚಾರ ಪತ್ನಿಯಾಗಿ, ಅವರಿಗೆ ಅನುಕೂಲೆಯಾದ ಸತಿಯಾಗಿ, ಸತಿಧರ್ಮ ಪಾಲಿಸುತ್ತಲೇ ವೈಚಾರಿಕತೆಯನ್ನು ಅಳವಡಿಸಿಕೊಂಡು ಆತ್ಮಜ್ಞಾನದ ಕಡೆ ಸಾಗಿದ ನೀಲಾಂಬಿಕೆ ಶರಣೆಯರಲ್ಲಿಯೇ ಶ್ರೇಷ್ಠಮಟ್ಟದ ಶರಣೆಯಾಗಿದ್ದಾಳೆ.
ನೀಲಾಂಬಿಕೆಯನ್ನು ನೀಲಮ್ಮ, ನೀಲಾಂಬಿಕೆ ನೀಲಲೋಚನ ಹಾಗೂ ನೀಲಲೋಚನೆಯಮ್ಮ ಎಂಬ ಹೆಸರುಗಳ ಉಲ್ಲೇಖ ಪ್ರಾಚೀನ ಕಾವ್ಯಗಳಲ್ಲಿ ಕಂಡುಬರುತ್ತದೆ.
ಮಹಾಮನೆಯ ದಾಸೋಹದ ಒಡತಿಯಾಗಿ ನಿತ್ಯವೂ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳಿಗೆ ದಾಸೋಹದಲ್ಲಿ ಬಸವಣ್ಣನವರು, ಕುಟುಂಬ ವರ್ಗದವರು ಇತರ ಶರಣರೂ ಅಲ್ಲಿ ಪಾಲ್ಗೊಂಡಿದ್ದರೂ, ಮಹಾಮನೆಯ ದಾಸೋಹದ ಸಂಪೂರ್ಣ ಉಸ್ತುವಾರಿ ನೀಲಾಂಬಿಕೆಯದೇ ಆಗಿತ್ತು.
ಅತ್ಯಂತ ನಿಷ್ಠೆ, ಪರಿಶುದ್ಧತೆಯಿಂದ ಸದಾ ಹಸನ್ಮುಖಿಯಾಗಿ ಈ ಕಾರ್ಯದಲ್ಲಿ ತೊಡಗಿಕೊಂಡಿರುವ ನೀಲಾಂಬಿಕೆಯ ಜವಾಬ್ದಾರಿಯುತ ನಡವಳಿಕೆ, ಕರ್ತವ್ಯ ಪ್ರಜ್ಞೆ, ಕಾಯಕದಲ್ಲಿನ ಶ್ರದ್ಧೆ ಇವೆಲ್ಲವೂ ಆಕೆಯನ್ನು ಇನ್ನಷ್ಟು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತವೆ
ಗಂಗಾಂಬಿಕೆ ಮತ್ತು ನೀಲಾಂಬಿಕೆ ಸತಿಯರ ಪಾತ್ರ ಬಸವಣ್ಣನವರ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಸದಾ ಬಸವಣ್ಣವರ ಏಳ್ಗೆಯನ್ನು ಬಯಸಿದ ಇರ್ವರೂ ಹಾಕಿಕೊಂಡ ಮೌಲ್ಯಗಳು ಆದರ್ಶಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಅಕ್ಕನ ಗಾಂಭೀರ್ಯ ಗಂಗಾಂಬಿಕೆಯಲ್ಲಿದ್ದರೆ, ತಂಗಿಯ ಕ್ರಿಯಾಶೀಲತೆ ನೀಲಾಂಬಿಕೆಯಲ್ಲಿ ಎದ್ದು ಕಾಣುತ್ತದೆ. ಬಸವಣ್ಣನವರ ಎಲ್ಲ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದು ಅತ್ಯಂತ ಸಂಯಮಿಯಾಗಿ, ಪ್ರೀತಿ, ವಿಶ್ವಾಸ, ಆದರ ಅಭಿಮಾನಗಳಿಂದ ಅವರೊಡನೆ ಇದ್ದು,ಅವರ ಒಳಿತನ್ನು ಬಯಸುವ ನೀಲಾಂಬಿಕೆಯ ಸ್ಥಾನ ಅತ್ಯಂತ ಉತೃಷ್ಟವಾಗಿದೆ.
ಬಸವಣ್ಣನವರ ಎರಡನೇಯ ಧರ್ಮಪತ್ನಿಯಾದ ನೀಲಾಂಬಿಕೆಯ ತಂದೆ, ತಾಯಿ, ಕಾಲ ಸ್ಥಳ ಮುಂತಾದ ವಿಷಯಗಳ ಕುರಿತಾಗಿ ಸಾಕಷ್ಟು ಭಿನ್ನಾಪ್ರಾಯಗಳಿವೆ. ಹರಿಹರನು “ಸಿರಿ ಸರಸ್ವತಿ ಶಚಿಗಳಂ ಕೀಳ್ಮಾಡುವ ತನ್ನರಸಿ ಮಾಯಿದೇವಿ” ಎಂದಿದ್ದಾನೆ. ನೀಲಾಂಬಿಕೆಯ ಇನ್ನೊಂದು ಹೆಸರು ಮಾಯಾದೇವಿ ಎಂದು ತಿಳಿದು ಬರುತ್ತದೆ. ಭೀಮಕವಿಯು ʼಗಂಗಾಂಬಿಕೆʼ ಯೊಂದಿಗೆ ʼಮಾಯಾದೇವಿʼ ಎಂಬ ಹೆಸರನ್ನು ಬಳಸಿದ್ದಾನೆ. ಮಾಯಾದೇವಿಯ ತಂದೆ ತಾಯಿಯ ಕುರಿತು ಹರಿಹರ ಹೇಳಿಲ್ಲ ಆದರೆ ಸಿದ್ಧರಸ ಮಂತ್ರಿಯ ಆಸ್ತಿಗೆ ಬಸವಣ್ಣನವರು ವಾರಸುದಾರರಾದರೆಂದು ಹೇಳಿದ್ದಾನೆ. ʼ ವೀರಶೈವಾಮೃತ ಮಹಾಪುರಾಣʼ ದಲ್ಲಿ ಸಿಧ್ಧರಸನ ಮಗಳು ನೀಲಲೋಚನ ಎಂದು ಹೇಳಿದೆ. ಲಕ್ಕಣ್ಣ ದಂಡೇಶನ ʼ ಶಿವತತ್ವ ಚಿಂತಾಮಣಿʼಯಲ್ಲಿ “ ತನ್ನನುಜ ಕನ್ನರಿಯಿಂದ ಕಿರಿಯಳಾ ತರುಣೆ ನೀಲಾಂಬಿಕೆ” ( ಶಿವತತ್ವ ಚಿಂತಾಮಣಿ ಪದ್ಯ – 67, ಪು 265) ಬಿಜ್ಜಳನ ತಂಗಿ ನೀಲಾಂಬಿಕೆ ಎಂದಿದೆ. ಆದರೆ ಈ ಕೃತಿಯಲ್ಲಿ ಸಿದ್ಧರಸನ ಪ್ರಸ್ತಾಪವಿಲ್ಲ.
ಬಿಜ್ಜಳನು ಮಂಗಳವಾಡಿಯಲ್ಲಿ ಮಾಂಡಲಿಕನಾಗಿದ್ದಾಗ, ಸಿದ್ಧರಸನು ದಣ್ಣಾಯಕನಾಗಿದ್ದ. ಬಿಜ್ಜಳನ ತಂದೆ ಪೆರ್ಮಾಡಿ ಹಾಗೂ ಸಿದ್ಧರಸರು ಆಪ್ತ ಸ್ನೇಹಿತರಾಗಿದ್ದರು. ಪೇರ್ಮಾಡಿ ಸಾಯುವಾಗ ಬಿಜ್ಜಳನ ರಕ್ಷಣೆ ಪೋಷಣೆಯ ಬಾರವನ್ನು ಸಿದ್ಧರಸನಿಗೆ ಒಪ್ಪಿಸಿದನು. ಪೇರ್ಮಾಡಿಯ ಪತ್ನಿ ಪತಿಯೊಂದಿಗೆ ಸತಿಹೋದಳು. ಸತಿ ಹೋಗುವ ಮುನ್ನ ಸಿದ್ಧರಸನ ಪತ್ನಿ ಪದ್ಮಗಂಧಿಯನ್ನು ಕರೆದು ಕರ್ಣದೇವನ ಪೋಷಣೆಯ ಬಾರವನ್ನಾಕೆಗೆ ವಹಿಸಿದಳು. ಪದ್ಮಗಂಧಿ ತನ್ನ ಮಗಳು ನೀಲಲೋಚನೆಯೊಂದಿಗೆ ಕರ್ಣದೇವನಿಗೂ ಮೊಲೆಯೂಡಿ ಸಲುಹಿದಳು. ನೀಲಲೋಚನೆ, ಕರ್ಣದೇವ ಹಾಗೂ ಬಿಜ್ಜಳರು ಒಡಹುಟ್ಟಿದವರಂತೆ ಬೆಳೆದು ಬಂದರು.
ಪದ್ಮಗಂಧಿ ಸಿದ್ಧರಸರು ಮರಣಹೊಂದಲು ಬಿಜ್ಜಳನು ನೀಲಲೋಚನೆಯನ್ನು ತನ್ನ ಅರಮನೆಗೆ ಕರೆತಂದನು. ಬಿಜ್ಜಳನು ಮಂಗಳವಾಡದಿಂದ ಕಲ್ಯಾಣಕ್ಕೆ ಬಂದು ನೆಲೆಸಿದಾಗ ಜೊತೆಗೆ ತಂಗಿ ನೀಲಲೋಚನೆಯನ್ನು ತನ್ನ ಅರಮನೆಗೆ ಕರೆತಂದನು. ಆಕೆ ಬಿಜ್ಜಳನ ಒಡಹುಟ್ಟಿದವಳಂತೆ ಅವನ ಅರಮನೆಯಲ್ಲೇ ಬೆಳೆದಳು.
ಬಲದೇವಮಂತ್ರಿ ಮತ್ತು ಸಿದ್ಧರಸರು ಬಸವಣ್ಣನವರ ತಾಯಿ ಮಾದಲಾಂಬಿಕೆಯ ಸಹೋದರರಾಗಿದ್ದರು. ಬಲದೇವಮಂತ್ರಿಯ ಮಗಳು ಗಂಗಾಂಬಿಕೆಯೊಡನೆ ಬಸವಣ್ಣನವರ ವಿವಾಹವಾದ ಮೇಲೆ ಬಸವಣ್ಣನವರು ಕರಣಿಕಕಾಯಕ ಕೈಗೊಂಡು ಕಲ್ಯಾಣದಲ್ಲಿ ಹೊಸ ಸಂಸಾರಹೂಡಿದರು. ಒಂದು ಸಲ ಬಿಜ್ಜಳನ ಓಲಗದಲ್ಲಿಯ ಲಿಪಿಯನ್ನೋದಿ ಸಿಂಹಾಸನದ ಕೆಳಗಿದ್ದ ಅರವತ್ನಾಲ್ಕು ಕೋಟಿ ಧನವನ್ನು ಕಂಡುಹಿಡಿದರು. ಅದರಿಂದ ಸಂತುಷ್ಟನಾದ ಬಿಜ್ಜಳನು ಬಸವಣ್ಣನವರಿಗೆ ಮಂತ್ರಿ ಪದವಿಯನ್ನಿತ್ತನು. ತಂಗಿ ನೀಲಲೋಚನೆಯನ್ನು ಬಸವಣ್ಣನವರಿಗಿತ್ತು ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟನು
ಚಿಕ್ಕಂದಿನಲ್ಲಿ ತಂದೆ ತಾಯಿ ಕಳೆದುಕೊಂಡ ನೀಲಲೋಚನೆ ಬಿಜ್ಜಳನ ಅರಮನೆಯಲ್ಲಿ ಬೆಳೆದಳು. ಅಲ್ಲಿ ಸಂಗೀತ, ಸಾಹಿತ್ಯಗಳ ಅಭ್ಯಾಸದಲ್ಲಿ ಬಲ್ಲಿದಳಾದಳು. ವಿನಯ ವಿದ್ಯಾಭರಿತಳಾಗಿ ನೀಲಲೋಚನೆ ಬಸವಣ್ಣನವರ ಭಕ್ತಿ, ಆತ್ಮಶಕ್ತಿ ಮೃದುಹೃದಯಕ್ಕೆ ಮಾರುಹೋಗಿ ತನ್ನನ್ನು ಸಂಪೂರ್ಣವಾಗಿ ಬಸವಣ್ಣನವರಿಗರ್ಪಿಸಿದಳು. ಬಸವಣ್ಣ ನೀಲಾಂಬಿಕೆಗೆ ಪ್ರತಿ ಗುರು, ಆರಾಧ್ಯದೈವವಾದರೂ ಬಸವಣ್ಣನ ಆಶೆ ಆಕಾಂಕ್ಷೆಗಳನ್ನು ಈಡೇರಿಸಲು ನೀಲಾಂಬಿಕೆ ಹಗಲಿರಳು ಶ್ರಮಿಸುತ್ತಿದ್ದಳು. ಕಾಯಕವೇ ಕೈಲಾಸವೆಂಬ ಬಸವವಾಣಿಯನ್ನು ಮನಗಂಡು ನೀಲಾಂಬಿಕೆ ಮಹಾಮನೆಯ ದಾಸೋಹದ ಕಾರ್ಯಭಾರವನ್ನು ಹೊತ್ತಳು.
ಲಕ್ಕಣ್ಣದಂಡೇಶನು” ಶಿವತತ್ವ ಚಿಂತಾಮಣೆ”ಯಲ್ಲಿ “ ಅವಳ ಕಂದ ಬಾಲಸಂಗ ಎನ್ನ ಕಂದ ಚೆನ್ನಲಿಂಗ” ಎಂದು (ಶಿವತತ್ವ ಚಿಂತಾಮಣೆ, ಪದ-73,ಪು. 267) ಗಂಗಾಂಬಿಕೆ ಹೇಳಿದಂತಿದೆ. ಚಾಮರಸನ ಪ್ರಕಾರ ನೀಲಾಂಬಿಕೆ – ಬಸವಣ್ಣನವರಿಗೆ ಸಂಗಮೇಶ್ವರನೆಂಬ ಹೆಸರಿನ ಮಗನಿದ್ದುದು ತಿಳಿದುಬರುತ್ತದೆ. ಆದರೆ ಆತ ಚಿಕ್ಕವನಿರುವಾಗಲೇ ಮಗ ಮರಣ ಹೊಂದಿದನು. ಜ್ಞಾನನಿಧಿ ನೀಲಾಂಬಿಕೆ ಮಗನ ಮರಣದಿಂದ ದುಃಖತಪ್ತಳಾಗಿ ಕುಳಿತುಕೊಳ್ಳಲಿಲ್ಲ. ಎಲ್ಲ ಶಿವನಿಚ್ಛೆ ಎಂದರಿತು ಸುಖದುಃಖಗಳ ತಾಕಲಾಟಕ್ಕೆ ಬಾಗದೇ ಕಾಯಕನಿರತಳಾದಳು.
ತನ್ನ ಮಾತೃವಾತ್ಸಲ್ಯವನ್ನು ಮಹಾಮನೆಯ ಶರಣರಿಗೆ ಇತ್ತಳು. ಗುಡ್ಡಾಪುರದ ದಾನಮ್ಮ, ವೀರವಿರಾಗಿಣಿ ಅಕ್ಕಮಹಾದೇವಿಯಂಥ ಹಿರಿಯ ಶರಣೆಯರೆಲ್ಲ ನೀಲಾಂಬಿಕೆಯ ತಾಯಿಹೃದಯದ ಸವಿಯನ್ನನುಭವಿಸಿದರು. ಅಂತೆಯೇ ಅಕ್ಕಮಹಾದೇವಿ ತನ್ನ ಒಂದು ವಚನದಲ್ಲಿ” ಅವ್ವ ನೀಲವ್ವನ ಮೋಹದ ಮಗಳು” ತಾನೆಂದು ಹೇಳಿಕೊಂಡಿದ್ದಾರೆ.
ವೈಚಾರಿಕತೆ ಹಾಗೂ ಆದ್ಯಾತ್ಮಿಕದ ಮೇರುಪರ್ವತವಾದ ನೀಲಾಂಬಿಕೆ “ ಸಂಗಯ್ಯ” ಎಂಬ ಅಂಕಿತದಲ್ಲಿ 293 ಸ್ವರವಚನಗಳನ್ನು ಹಾಗೂ ಕಾಲಜ್ಞಾನ ವಚನಗಳನ್ನು ಬರೆದಿದ್ದಾಳೆ. ಇವಳ ವಚನಗಳು ಹೆಚ್ಚಾಗಿ ಬಸವಣ್ಣನವರ ಕುರಿತಾಗಿಯೇ ಇವೆ.
ನೀಲಾಂಬಿಕೆಯ ವಚನಗಳನ್ನು ವಿಶ್ಲೇಷಣೆ ಮಾಡುವುದಾದರೆ, ಅಲ್ಲಿ ಅವಳ ನೋವು-ನಲಿವು, ಆಧ್ಯಾತ್ಮಿಕತೆ, ಲೋಕಜ್ಞಾನ, ಇತರ ಶರಣ-ಶರಣೆಯರ ಮೇಲೆ ಇಟ್ಟ ಅಭಿಮಾನ, ಕೌಟುಂಬಿಕ ಪ್ರೀತಿ ಇತ್ಯಾದಿಗಳಲ್ಲಿ ತೆರೆದು ತೋರುತ್ತಾ ಹೋಗುತ್ತವೆ. ಅವಳ ಅಂತರಂಗದ ಭಾವತರಂಗ ಮಿಡಿಯುವುದು, ಬಸವಯ್ಯ ಮತ್ತು ಸಂಗಯ್ಯರಿಗಾಗಿ, ಅವಳ ಬಹುಪಾಲ ವಚನಗಳು ಬಸವಣ್ಣನವರು ಕಲ್ಯಾಣ ಬಿಟ್ಟು ಕೂಡಲಸಂಗಮಕ್ಕೆ ಬಂದು ಐಕ್ಯರಾದ ಮೇಲೆ ರಚಿತವಾದಂತೆ ಕಾಣುತ್ತದೆ. ಬಸವಣ್ಣನವರ ಮೇಲೆ ನೀಲಾಂಬಿಕೆಗಿರುವ ಅತುಲಪ್ರೇಮ, ಅಪಾರಗೌರವ, ಅಮಿತಸ್ನೇಹ, ಅಮೇಯ ಭಕ್ತಿ, ಅನ್ಯೋನ್ಯ ದಾಂಪತ್ಯ ಪ್ರೀತಿ – ಇವೆಲ್ಲ ಅವಳಲ್ಲಿ ಮಿಳಿತವಾಗಿ ಅವಳ ಜೀವನ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತದೆ.
ಮಡದಿ ಎನ್ನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನಗೆ
ಉಭಯ ಕುಳವ ಹರಿದು ಬಸವಂಗೆ
ಶಿಶುವಾನಾದೆನು ಬಸವನೆನ್ನ ಶಿಶುವಾದನು
ಪ್ರಮಥರು ಪುರಾತನರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಾನಡಗಿದೆ
ಎನ್ನುವಲ್ಲಿ ವೈಚಾರಿಕತೆಯನ್ನು ಕಾಣುತ್ತೇವೆ, ಬಸವಣ್ಣನವರ ಪತ್ನಿಯಾಗಿ ಸತಿಧರ್ಮಕ್ಕೆ ಬದ್ಧಳಾಗಿ ಪ್ರಮಥರು ಪುರಾತನರು ಎಲ್ಲ ಶರಣರ ಸಾಕ್ಷಿಯಾಗಿ ಪತಿ ಮಾರ್ಗದಲ್ಲಿ ನಡೆಯುತ್ತೇನೆ ಎಂಬ ಅಚಲತೆ ಕಾಣಬಹುದು.
ಬಸವನ ಅನುಭವದಿಂದ ವಿವರವ ಕಂಡು
ವಿಚಾರಪತ್ನಿಯಾದೆನಯ್ಯಾ ಸಂಗಯ್ಯಾ
ಆಸೆ- ಆಕಾಂಕ್ಷೆಗಳನ್ನು ತ್ಯಾಗ ಮಾಡುವುದು ಅಷ್ಟು ಸುಲಭದ ಮಾತೇನಲ್ಲ ಏಕೆಂದರೆ ರಾಜನ ಆಸ್ಥಾನದಲ್ಲಿದ್ದು, ವೈಭೋಗಗಳನ್ನು ಕಣ್ತುಂಬಿದ್ದ ಈ ನಯನಕ್ಕೆ ಆಸೆಗಿಂತ ವಿಚಾರ ಮುಖ್ಯವಾಯಿತು, ಆದ್ದರಿಂದಲೇನೋ ಬಸವನೊಂದಿಗೆ ಕೊಡಿ ವಿಚಾರವಂತೆಯಾದೆನೆಂಬುದನ್ನು ಮನಸಾರೆ ಪ್ರತಿಪಾದಿಸುತ್ತಾಳೆ
ನಾನು ನಿಮ್ಮವಳಲ್ಲವಯ್ಯಾ, ನಾನು ಅನಿಮಿಷನವರವಳು,
ನಾನು ನಿಮ್ಮವಳಲ್ಲವಯ್ಯಾ, ನಾನು ಅಜಗಣ್ಣನವರವಳು,
ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಭುವಿನಸಂತತಿಯವಳು,
ನಾನು ನಿಮ್ಮವಳಲ್ಲವಯ್ಯಾ, ನಾನು ಮಾದಾರಚೆನ್ನಯ್ಯನ ಮೊಮ್ಮಗಳು,
ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಸಾದಿಗಳ ಮನೆಯ ಕೀಳುದೊತ್ತು,
ನಾನು ನಿಮ್ಮವಳಲ್ಲವಯ್ಯಾ, ಸಂಗಯ್ಯ,
ನಾನು ಬಸವಯ್ಯನ ಮನೆಯ ತೊತ್ತಿನಮಗಳು.
ಎನ್ನುವಲ್ಲಿ ಆಕೆಯ ವಿನಯ, ವಿಧೇಯತೆಗಳು, ಕಿಂಕರತೆಯನ್ನು ಕಾಣುತ್ತೇವೆ. ಬಸವಣ್ಣನವರು “ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂದು ಹೇಳಿಕೊಂಡರೆ, ಅವರು ಮಾದಾರ ಚೆನ್ನಯ್ಯನ ಮನೆಯ ಮಗನು ಎಂದರೆ ಇವಳು ಮಾದಾರ ಚೆನ್ನಯ್ಯನ ಮೊಮ್ಮಗಳು ಎನ್ನುತ್ತಾಳೆ. ಭಕ್ತಸಂಕುಲದ ಬಗ್ಗೆ ಅವಳಿಗಿರುವ ಶ್ರದ್ಧೆ, ನಿಷ್ಠೆ ಅಪರಿಮಿತವಾದುದಾಗಿದೆ.
ಎನಗೆ ಹಾಲೂಟವನ್ನಿಕ್ಕುವ ತಾಯೆ,
ಎನಗೆ ಪರಿಣಾಮವ ತೋರುವ ತಾಯೆ,
ಪರಮಸುಖದೊಳಗಿಪ್ಪ ತಾಯೆ, ಪರವಸ್ತುವ ನಂಬಿದ ತಾಯೆ,
ಬಸವನ ಗುರುತಾಯೆ,
ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ
ಈ ವಚನದಲ್ಲಿ ಅಕ್ಕನಾಗಮ್ಮನನ್ನು ತಾಯಿಸ್ವರೂಪವಾಗಿ ಕಂಡಿದ್ದಾಳೆ, ಬಹುಶಃ ಈ ಭಾವನಾತ್ಮಕತೆಯೇ ನೀಲಮ್ಮನನ್ನು ಅತ್ಯಂತ ಮೃದುಮಧುರ ಬಾಂಧವ್ಯದ ಸಂಕೇತವಾಗಿ ನಿಲ್ಲಿಸುತ್ತದೆ.
ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ
ಪುಣ್ಯವಿಲ್ಲದ ಪಾಪಿಯ?
ನಾನು ಇಹಪರಕ್ಕೆ ದೂರಳಯ್ಯಾ
ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ
ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ
ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ
ಎನಗೆ ಹೆಣ್ಣು ನಾಮವಿಲ್ಲವಯ್ಯಾ
“ ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ” ಎಂಬಲ್ಲಿ ಅವಳು ಹೆಣ್ಣಾಗಿ, ಒಪ್ಪಬೇಕಿರುವ ವ್ಯವಸ್ಥೆಯನ್ನು ಈ ವಚನ ತಿಳಿಸುತ್ತದೆ. ಅಖಂಡ ಸ್ತ್ರೀ ಚಿಂತನೆ ನೆಲೆಯಲ್ಲಿ ನೀಲಾಂಬಿಕೆಯ ನೋವು, ವಿಷಾದ ವಚನಗಳಲ್ಲಿ ಹೆಪ್ಪುಗಟ್ಟಿದೆ.. ಈ ವಿಷಾದವು ಅನೇಕ ಬೆಡಗಿನ ವಚನಗಳ ಮೂಲಕವೂ ಅಭಿವ್ಯಕ್ತವಾಗಿದೆ. ಸ್ತ್ರೀಪರ ಧ್ವನಿಯಾಗಿ ಆ ಕಾಲದ ಶೋಷಣೆ ಮತ್ತು ಪ್ರಗತಿ ಎರಡನ್ನೂ ಮೇಳೈಸುವ ಅರ್ಥಪೂರ್ಣ ಧ್ವನಿಯನ್ನು ಕಾಣಬಹುದಾಗಿದೆ.
ಕಲ್ಯಾಣದ ಕ್ರಾಂತಿಯನ್ನು ನೋಡಲಾರದ ಮೃದಹೃದಯಿ ಬಸವಣ್ಣನವರು ಕೂಡಲಸಂಗಮಕ್ಕೆ ತೆರಳುತ್ತಾರೆ. ಸಂಗಮನಾಥನ ಸಾನಿಧ್ಯದಲ್ಲಿ ಮನ ನೆಮ್ಮದಿ ಪಡೆದೊಡನೆ ಪತ್ನಿಯರಿಗೆ ಹೇಳದೇ ಬಂದುದರ ಅರಿವಾಗುತ್ತದೆ. ಆಗ ಹಡಪದಪ್ಪಣ್ಣನವರನ್ನು ಕರೆದು ತಮ್ಮ ವಿಚಾರ ಪತ್ನಿ ನೀಲಮ್ಮನ್ನವರನ್ನು ಬರಹೇಳಲು ತಿಳಿಸುತ್ತಾರೆ. ಕಲ್ಯಾಣಕ್ಕೆ ಬಂದ ಅಪ್ಪಣ್ಣನ್ನವರು ನೀಲಮ್ಮನರಿಗೆ ಬಸವಣ್ಣನವರ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಆ ಸಂದರ್ಭದಲ್ಲಿ ನೀಲಮ್ಮನ್ನವರು ಹೇಳುವ ವಚನ ತುಂಬಾ ಅರ್ಥಗರ್ಭಿತವಾಗಿದೆ.
ನೋಡು ನೋಡು ನೋಡು ಲಿಂಗವೇ,
ನೋಡು ಬಸವಯ್ಯನವರು ಮಾಡುವಾಟವ
ಸಂಗಮಕ್ಕೆ ಬಸವಯ್ಯನವರು ನಮ್ಮನು ಬರಹೇಳಿದರಂತೆ,
ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ ?
ಹೀಗೆ ಈ ವಚನದಲ್ಲಿ ಲಿಂಗವನ್ನು ಕೇಳುವಲ್ಲಿ ನೀಲಾಂಬಿಕೆಯ ಕೆಚ್ಚು, ಆತ್ಮ ಶಕ್ತಿ ತೋರಿಬರುತ್ತದೆ. ನೀಲಮ್ಮನ ವೈಚಾರಿಕತೆ ಹಾಗೂ ದಿಟ್ಟತನಕ್ಕೆ ಇದು ಸಾಕ್ಷಿಯಾಗಿದೆ.
ಬಸವಣ್ಣನ ಐಕ್ಯದ ಸುದ್ದಿ ತಿಳಿದಾಗ ನೀಲಾಂಬಿಕೆಯ ಆಧ್ಯಾತ್ಮ ಶಕ್ತಿಗಿಂತ ಹೆಣ್ತನ ಹಿರಿದಾಗಿ ನಿಲ್ಲುತ್ತದೆ. ದುಃಖ ಹೃದಯವನ್ನಾವರಿಸುತ್ತದೆ. ಆಗ ನೀಲಾಂಬಿಕೆ ಈ ರೀತಿ ಪ್ರಲಾಪಿಸುತ್ತಾಳೆ.
ಕಾಮಿತ ಸುಖವ ಕಂಗೋಳಿಸಿದ ಗುರುವೆ,
ಕಲ್ಪಿತವ ನಷ್ಟವ ಮಾಡಿದ ಗುರುವೆ,
ಎನಲಿಲ್ಲದ ಮೂರ್ತಿಯೆ ಎತ್ತಲಡಗಿದೆಯಯ್ಯಾ ಗುರುವೆ?
ಸುಖದುಃಖವನೊಂದು ರೂಪಮಾಡಿದ ಗುರುವೆ
ಎತ್ತಲಡಗಿದೆಯಯ್ಯಾ, ಸಂಗಯ್ಯನ ಗುರುಬಸವಾ?
ಎಂದು ಅಳುತ್ತಿರುವುದನ್ನು ಕಂಡು ಮಹಾಮನೆಯ ಶರಣೆರೆಲ್ಲ ನೀಲಾಂಬಿಕೆಯನ್ನು ಸಂತೈಸಲು ಬರುತ್ತಾರೆ ಅವರಿಗೆ ನೀಲಾಂಬಿಕೆ ಹೀಗೆ ಹೇಳುತ್ತಾಳೆ.
ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,
ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು.
ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು.
ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು,
“ಎನಗಿನ್ನೇನು ಎನ್ನಯ್ಯನೈಕ್ಯವನೈದಿದ ಬಳಿಕ” ಎಂದು ನೀಲಾಂಬಿಕೆ ದುಃಖಿಸುವದನ್ನು ಕಂಡು ಚೆನ್ನಬಸವಣ್ಣ ಹೀಗೆ ಹೇಳುತ್ತಾನೆ.
ಸಂಗಮನಾಥನು ಬಾರೊ ಬಸವ ಎಂದು ಕೈವಿಡಿದು ತೆಗೆದಪ್ಪಿ ಮುದ್ದಾಡಿಸಿ
ತರ್ಕೈಸಿಕೊಂಡು ನಿನ್ನ ಹೊರಗಿರಿಸಲಾರೆನೆಂದು ತನ್ನ ಹೃದಯಕಮಲದಲ್ಲಿ
ಇಂಬಿಟ್ಟುಕೊಂಡ ಕೊಡಲಚೆನ್ನಸಂಗಯ್ಯಂಗೆ ಬಸವ ಪ್ರಾಣಲಿಂಗವಾದ
ಎಂದು ಹೇಳಿದಾಗ ನೀಲಾಂಬಿಕೆಯ ಮನದ ದುಃಖಾಗ್ನಿ ಶಮನವಾಯಿತು. ಆಗ ಚೆನ್ನಬಸವಣ್ಣನು ಹೇಳಿದ ಅನುಭವವಾಣಿಯನ್ನಾಲಿಸಿದ ನೀಲಾಂಬಿಕೆ ತನ್ನ ಕರದಿಷ್ಟ ಲಿಂಗದಲ್ಲಿಯೆ ಐಕ್ಯಳಾ ಸಂದರ್ಭದ ಮಾತುಗಳು ಇಂತಿವೆ
ಅಟ್ಟಡವಿಯಲ್ಲಿ ಕಣ್ಣುಗೆಟ್ಟ ಪಶುವಿನಂತೆ ನಾನು ಪ್ರಳಾಪಿಸುತ್ತಿದ್ದೆನಯ್ಯಾ
ಕಡುದುಃಖದಿಂದ ಮರುಗಲು ಶರಣ ಚೆನ್ನಣ್ಣನರಿದು
ʼಶಿವ ಶಿವಾʼ ಎಂಬ ಮಂತ್ರವನರುಹಿ
ಅಳಲುವ ಬಳಲಿಕೆಯ ಕಳೆದನಯ್ಯ
ಸಂಗಯ್ಯನಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎನ್ನುತ್ತಿದ್ದೆನು
ತನ್ನನ್ನು ಲೌಕಿಕ ದುಃಖದಿಂದ ಪಾರುಮಾಡಿ ಆಧ್ಯಾತ್ಮ ಬೋಧೆಯನ್ನು ಮಾಡಿದ ಚೆನ್ನಬಸವಣ್ಣನವರನ್ನು ಭಕ್ತಿಪೂರ್ವಕವಾಗಿ ನೆನೆಯುವುದು ಇಲ್ಲಿ ಬಿಂಬಿತವಾಗಿದೆ. ಅವಳ ಬಹಳಷ್ಟು ವಚನಗಳಲ್ಲಿ ಬಸವಣ್ಣನವರ ಅಗಲಿಕೆಯ ನೋವು ವ್ಯಕ್ತವಾಗುವದನ್ನು ಹಾಗೂ ಅದಕ್ಕೆ ಅವಳ ಮನಸ್ಸು ಮಿಡಿಯುವ ವಿಧಾನವನ್ನು ಕಾಣುತ್ತೇವೆ
ಬಸವಣ್ಣನವರ ಬದುಕಿನಲ್ಲಿ ನೀಲಾಂಬಿಕೆಯ ಪಾತ್ರ ಪ್ರಮುಖವಾಗಿದೆ. ಸಮಾಜ ಸುಧಾರಣೆ, ಆಧ್ಯಾತ್ಮ ಸಾಧನೆ, ಧಾರ್ಮಿಕ ಜಾಗೃತಿಯ ಮಹಾಮಣಿಹವನ್ನು ಹೊತ್ತ ಬಸವಣ್ಣನಿಗೆ ಹಿನ್ನೆಲೆ, ಮುನ್ನೆಲೆಯಾಗಿ ದುಡಿದ ಇವಳು ಅವರ ಜೀವನ ಪಥದಲ್ಲಿ ಸಹಧರ್ಮಿಣಿಯಾಗಿ ಹೆಜ್ಜೆ ಹಾಕಿದ್ದಾಳೆ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ಐಕ್ಯದ ನಂತರ ಇವಳು ತಾಳಿಕೋಟೆ ಬಳಿಯಿರುವ ರಕ್ಕಸ ತಂಗಡಿಯಲ್ಲಿ ಐಕ್ಯಳಾಗುತ್ತಾಳೆ.
ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ
ಕರಸ್ಥಲ ಮನಸ್ಥಲವಾಯಿತ್ತು ಬಸವಾ
ಸಂಗಯ್ಯಾ, ಬಸವ ಹೋದನತ್ತ
ನಾನಡಗಿದೆನಯ್ಯಾ ನಿಮ್ಮಲಿತ್ತ
ಇಂದು ಆ ಪ್ರದೇಶವನ್ನು ತಂಗಡಗಿ ಎಂದು ಕರೆಯುತ್ತಾರೆ ಆಪ್ರದೇಶದಲ್ಲಿ ಸ್ವಲ್ಪ ಹೊತ್ತು ʼತಂಗಿʼ ʼಅಡಗಿದ್ದʼ ರಿಂದ ಆಸ್ಥಳವನ್ನು ತಂಗಡಗಿ ಎಂಬ ಹೆಸರು ಬಂದಿತೆಂದು ವಿದ್ವಾಂದರು ಅಭಿಪ್ರಾಯಪಟ್ಟಿದ್ದಾರೆ.
ಸೂಕ್ಷ್ಮಮತಿಯೂ, ವಿಶಾಲ ಮನೋಭಾವದವಳೂ, ಉದಾರಚರಿತಳೂ , ಮೃದು ಸ್ವಭಾವದವಳೂ ಆದ ನೀಲಾಂಬಿಕೆಯು ಇತರ ಶರಣೆಯರಿಗಿಂತ ಭಿನ್ನವಾಗಿ ವೈಶಿಷ್ಟ್ಯವಾಗಿ ನಿಲ್ಲುತ್ತಾಳೆ. ಜನಮನದಲ್ಲಿ ಆಕೆಯ ನೆನಪು ಅಚ್ಚೊತ್ತಿದಂತಿದೆ.
–ಡಾ ದಾನಮ್ಮ ಝಳಕಿ
ಬೆಳಗಾವಿ.