ವಿಶ್ವ ಕಾವ್ಯ ದಿನ
ಕಾವ್ಯ ಎಂದರೆ ಕವಿತೆ ಹಾಡಬಹುದಾದ ರಚನೆ. ಗೇಯ ರೂಪದಲ್ಲಿ ಭಾವ, ಲಯ ತಾಳಗಳಿಗೆ ಹೊಂದುವಂತೆ ರಚಿಸಿದ ಕವಿಯ ಭಾವನೆಯನ್ನು ತಿಳಿಸುವ ರಚನೆಯಾಗಿದೆ, ಎಲ್ಲ ಭಾಷೆಗಳಲ್ಲಿ ಕಾವ್ಯ ಪರಂಪರೆಗೆ ಪ್ರೋತ್ಸಾಹ ನೀಡಲು ಯುನೆಸ್ಕೋ ಮಾರ್ಚ ೨೧ನೇ ತಾರೀಖನ್ನು ೧೯೯೯ರಿಂದ ವಿಶ್ವ ಕಾವ್ಯ ದಿನವನ್ನಾಗಿ ಆಚರಿಸಲಾಗುತ್ತದೆ.
ಕಾವ್ಯವು ಮನಸ್ಸಿನ ಭಾವನೆಯನ್ನು ಹೊರ ಹಾಕುವ ಉತ್ತಮ ಕಲೆಯಾಗಿದೆ. ಕವಿತ್ವ ಎಲ್ಲರಿಗೂ ಬರುವುದಿಲ್ಲ, ಮೊದಲೆಲ್ಲಾ ಕವಿತೆ ಒಂದು ಪ್ರತಿಭೆ ಅದು ಸ್ವತಃ ಬರುತ್ತದೆ ಎಂಬ ಭಾವನೆ ಇತ್ತು, ಇಂದು ಸತತವಾಗಿ ಅಧ್ಯಯನ ಮತ್ತು ಅಭ್ಯಾಸ ಮಾಡಿದರೆ ಪದ್ಯ ಗದ್ಯ ಎಲ್ಲವನ್ನೂ ಮೈಗೂಡಿಸಿಕೊಳ್ಳಬಹುದೆಂಬ ಕಾಲವಾಗಿದೆ.
ಕಾವ್ಯವು ಬಹಳ ಸರಳವೂ ಹಾಗೂ ಕ್ಲಿಷ್ಟವೂ ಕೂಡ ಏಕೆಂದರೆ ಹಾಡುಗಳನ್ನು ಕಟ್ಟಲು ವಿಶೇಷ ಓದು ಅಥವಾ ಅಧ್ಯಯನವೇನು ಬೇಕಾಗಿಲ್ಲ ಆದ್ದರಿಂದ ಬಹಳ ಸರಳ. ಆದರೆ ಸಾಗರವನ್ನು ಒಂದು ಬಿಂದಿಗೆಯಲ್ಲಿ ತುಂಬ ಬೇಕಾದ್ದರಿಂದ ಕ್ಲಿಷ್ಟಕರವೂ. ಗದ್ಯ ರಚನೆಯಲ್ಲಿ ಪದಗಳ ಮಿತಿ ಅಥವಾ ಪ್ರಾಸ ಛಂದಸ್ಸು ಅಲಂಕಾರಗಳು ಅವಶ್ಯಕವಿರುವುದಿಲ್ಲ. ಆದರೆ ಕಾವ್ಯಕ್ಕೆ ಪ್ರಾಸ, ಅಲಂಕಾರ ಛಂದಸ್ಸು ಎಲ್ಲವೂ ಬಹು ಮುಖ್ಯವೆನಿಸುತ್ತದೆ.
ಪ್ರಾಚೀನ ಕಾಲದಲ್ಲಿ ಕಾವ್ಯವು ಕ್ಲಿಷ್ಟಕರವೂ ಮತ್ತು ರಾಜಾಶ್ರಯದ ಕವಿಗಳಿಗೆ ಮಾತ್ರ ಸಿಮೀತವಾಗಿತ್ತು. ಮಧ್ಯಕಾಲದಲ್ಲಿ ಜನ ಸಾಮಾನ್ಯರ ಗೀತೆಗಳಾಯಿತು, ಈಗಂತೂ ನವ್ಯಕಾವ್ಯದಲ್ಲಿ ಹೆಚ್ಚು ಶ್ರಮವಿಲ್ಲದೆ ಭಾವಾಭಿವ್ಯಕ್ತಿಯನ್ನು ಸರಳವಾಗಿ ಕವಿತೆಗಳಲ್ಲಿ ಕಾಣಬಹುದು.
ಸಾಮಾನ್ಯವಾಗಿ ಇಂದಿನ ಕವಿಗಳು ಮೊದಲು ಆರಂಭಿಸುವುದೇ ಕವನಗಳ ರಚನೆಯಿಂದ, ಕಾವ್ಯವು ಸಾಮಾನ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತದೆ. ಚುಟುಕ, ಹನಿಗವನಗಳಿಂದ ಆರಂಭಿಸಿ ನಂತರ ಅರ್ಥವತ್ತಾದ ರಮ್ಯವಾದ ಕಾವ್ಯದ ರಚನೆಗಳು ಆರಂಭವಾಗುತ್ತದೆ.
ಪ್ರಸ್ತುತ ಗದ್ಯಕ್ಕೆ ಇರುವಷ್ಟು ಪ್ರೋತ್ಸಾಹ ಕಾವ್ಯಕ್ಕೆ ದೊರೆಯುತ್ತಿಲ್ಲ. ಕವನ ಸಂಕಲಗಳ ಪ್ರಕಟಣೆ ಗದ್ಯ ಪ್ರಕಾರದ ಮುದ್ರಣಕ್ಕಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ.
ಎಲ್ಲರಿಗೂ ವಿಶ್ವ ಕಾವ್ಯ ದಿನದ ಶುಭಾಶಯಗಳು
–ಮಾಧುರಿ ಬೆಂಗಳೂರು