ನಾವು -ನಮ್ಮವರು
ಉತ್ತರಪ್ರದೇಶದ ಲಕ್ನೋ ಸಮೀಪದ ಅಂಬೇಡಕರನಗರ ಜಿಲ್ಲೆಯ ಅರುಣಿಮಾ ಸಿನ್ಹಾ, 2011 ರಲ್ಲಿ, ಕೇಂದ್ರ ಔದ್ಯಮಿಕ ಭದ್ರತಾ ದಳ (CISF) ಪರೀಕ್ಷೆ ಬರೆಯಲು ದಿಲ್ಲಿಗೆ ಹೋಗುವಾಗ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಿಂದ ಇಬ್ಬರು ಸರಗಳ್ಳರು ಆಕೆಯನ್ನು ಕೆಳಗೆ ದೂಡಿದರು. ಪಕ್ಕದ ಹಳಿಯಲ್ಲಿ ರಭಸದಿಂದ ಚಲಿಸುತ್ತಿದ್ದ ಇನ್ನೊಂದು ರೈಲು ಆಕೆಯ ಕಾಲಿನ ಮೇಲೆ ಹಾದುಹೋಯಿತು. ಪ್ರಜ್ಞೆ ತಪ್ಪಿದ ಅರುಣಿಮಾ ಎಚ್ಚೆತ್ತಾಗ ದಿಲ್ಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿದ್ದಳು. ಜಜ್ಜಿಹೋಗಿದ್ದ ಆಕೆಯ ಎಡಗಾಲನ್ನು ಕತ್ತರಿಸಲಾಗಿತ್ತು. ಆದರೆ ಅರುಣಿಮಾ ಎದೆಯಲ್ಲಿ ಆರದ ಕಿಚ್ಚೊಂದನ್ನು ಕಾಪಾಡಿಕೊಂಡಿದ್ದಳು. “Impossible” ಎಂದು ಹೇಳಬಹುದಾಗಿದ್ದ ”ಮೌಂಟ್ ಎವರೆಸ್ಟನ್ನು ಏರುತ್ತೇನೆ,” ಎಂದು ಹೇಳಿಕೊಂಡಳು.
ಕೃತಕ ಕಾಲು ಜೋಡಿಸಿಕೊಂಡು ಆಸ್ಪತ್ರೆಯಿಂದ ಹೊರಬಿದ್ದ ಬಳಿಕ ಆಕೆ ಮಾಡಿದ ಮೊದಲ ಕೆಲಸ, ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿಪಾಲ್ ಅವರನ್ನು ಭೇಟಿಯಾಗಿದ್ದು. ಬಚೇಂದ್ರಿಪಾಲ್ ಈ ಹುಡುಗಿಯ ಛಲದಿಂದ ಎಷ್ಟು ಪ್ರಭಾವಿತರಾದರು ಎಂದರೆ, ”ನೀನು ಈಗಾಗಲೇ ನಿನ್ನ ಹೃದಯದಲ್ಲಿ ಎವರೆಸ್ಟನ್ನು ಏರಿ ಆಗಿದೆ; ಈಗ ನೀನು ಅದನ್ನು ದೈಹಿಕವಾಗಿ ಏರಿ ಜಗತ್ತಿಗೆ ತೋರಿಸಬೇಕಿದೆ ಅಷ್ಟೇ” ಎಂದರು. 2013 ಮೇ 21 ರಂದು, 52 ದಿನಗಳ ನಡಿಗೆಯ ಬಳಿಕ ಜಗತ್ತಿನ ಅತ್ಯಂತ ಎತ್ತರದ ಪರ್ವತ ಎವರೆಸ್ಟ್ ಶಿಖರ ಆಕೆಯ ಕಾಲ ಕೆಳಗಿತ್ತು. ಏಷ್ಯಾದ ಮೌಂಟ್ ಎವರೆಸ್ಟ್ (8848 Mtr), ಯೂರೋಪಿನ ಮೌಂಟ್ ಎಬ್ರಸ್ (5642 Mtr), ಆಫ್ರಿಕಾದ ಮೌಂಟ್ ಕಿಲಿಮಂಜಾರೋ (5895 Mtr), ಆಸ್ಪ್ರೇಲಿಯಾದ ಮೌಂಟ್ ಕೋಸಿಸ್ಕೋ (2228 Mtr), ದಕ್ಷಿಣ ಅಮೆರಿಕಾದ ಮೌಂಟ್ ಅಕೊಂಕಾಗುವಾ (6960), ಅಂಟಾರ್ಕ್‌ಟಿಕಾದ ಮೌಂಟ್ ವಿನ್ಸನ್ (4892 Mtr) ಗಳನ್ನು ಏರಿದ್ದಾಳೆ. ದುರಂತ, ಅವಮಾನ, ಸೋಲಿನ ಅಗ್ನಿದಿವ್ಯದಿಂದ ಎದ್ದು ಬಂದ ಭಾರತೀಯ ಮಹಿಳೆಯರನ್ನು ಹೆಸರಿಸುವುದಾದರೆ, ಮೊದಲ ಸಾಲಿನ ನಿಲ್ಲುವ ಅರುಣಿಮಾ ಸಿನ್ಹಾ, ನಿಸ್ಸಂಶಯವಾಗಿ ಬೆಟ್ಟದಂಥ ಗುಂಡಿಗೆಯ ದಿಟ್ಟೆ.
ಅರುಣಿಮಾ ಸಿನ್ಹಾ ಇವತ್ತು ಯಾಕೆ ನೆನಪಾದಳು ಅಂದ್ರ ಕಲ್ಯಾಣ ಕರ್ನಾಟಕದ ಪ್ರಭಾವತಿ ಈರಣ್ಣ ಪಾಟೀಲ ಇಂಥ ಧೀರ, ದಿಟ್ಟ ಮಹಿಳೆಯರ ಸಾಲಿನಲ್ಲಿ ನಿಲ್ಲುವಂಥಾ ವ್ಯಕ್ತಿತ್ವ. ಅಂಗವೈಕಲ್ಯತೆಗೆ ಸಾವಾಲೆಸೆದು ಬಸವಾದಿ ಶರಣರ ಸಾಹಿತ್ಯ ಸೇವೆ, ದೃಷ್ಯ ಮಾಧ್ಯಮ ವಾಹಿನಿಗಳಲ್ಲಿ ವಾರ್ತಾ ವಾಚಕಿಯಾಗಿ, ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಸಾಹಿತ್ಯದಲ್ಲಿ ಅನುಪಮ ಮತ್ತು ಅಪ್ರತಿಮ ಸಾಧನೆ ಮಾಡಿದವರು ಪ್ರಭಾವತಿ ಈರಣ್ಣ ಪಾಟೀಲ.
ಶ್ರೀಮತಿ ಪ್ರಭಾವತಿ ಈರಣ್ಣ ಪಾಟೀಲ ಅವರು ಗುಲ್ಬರ್ಗಾ ಜಿಲ್ಲೆಯ ಜೇವರ್ಗಿಯಲ್ಲಿ 03.03.1975 ರಂದು ಜನಿಸಿದರು. ಶ್ರೀ ಅಮೃತಗೌಡಾ ಪಾಟೀಲ ಮತ್ತು ಶ್ರೀಮತಿ ಬಸ್ಸಮ್ಮ ಅವರ ಪುತ್ರಿ. ಬಸವರಾಜ ಪಾಟೀಲ ಮತ್ತು ಸೋಮಶೇಖರ ಪಾಟೀಲ ಇಬ್ಬರು ಸಹೋದರರು. MBBS ಮಾಡುತ್ತಿರುವ ಗೌರೀಶ್ ಮತ್ತು PUC ಎರಡನೇ ವರ್ಷ ಕಲಿಯುತ್ತಿರುವ ಗೌತಮ ಇಬ್ಬರು ಗಂಡು ಮಕ್ಕಳು. ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣವನ್ನು ಜೇವರ್ಗಿಯಲ್ಲಿ ಪೂರೈಸಿದರು. B.Ed ಶಿಕ್ಷಣವನ್ನು ಯಾದಗಿರಿಯಲ್ಲಿ ಮತ್ತು ಸ್ನಾತಕೋತ್ತರ ಪದವಿ (M.A.) ಯನ್ನು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಪಡೆದರು. ಪ್ರಸ್ತುತ ಬಳ್ಳಾರಿಯ SSA Govt Degree College ಮತ್ತು ವೀರಶೈವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ತಂದೆ ತಾಯಿಯವರ ಇಚ್ಛೆಯಂತೆ ಶ್ರೀ ಈರಣ್ಣ ಅವರನ್ನು ವಿವಾಹವಾದ ಬಳಿಕ ಪತಿಯೊಂದಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ಹೀಗೆ ಹಲವಾರು ಕಡೆ ಬದುಕಿನ ಪಯಣ ಮಾಡಿದ್ದಾರೆ. ಅನಿರೀಕ್ಷಿತವಾಗಿ ಅನಾರೋಗ್ಯದಿಂದ ಪತಿ ಕೆಲಸ ಕಳೆದುಕೊಂಡಾಗ ಬಾಳ ಬದುಕಿನ ಬಂಡಿಯನ್ನು ನಡೆಸುವ ಜಾವಾಬ್ದಾರಿಯನ್ನು ಹೊತ್ತುಕೊಂಡರು. ಅತ್ಯಂತ ಆಶ್ಚರ್ಯ ಮತ್ತು ಸಾಹಸದ ಸಂಗತಿ ಅಂದರೆ ಎರಡು ಮಕ್ಕಳಾದ ಬಳಿಕ ಶಿಕ್ಷಣವನ್ನು ಮುಂದುವರೆಸಿ ಉಪನ್ಯಾಸಕಿಯಾಗುವ ಮಟ್ಟಕ್ಕೆ ಬೆಳೆದು ನಿಂತದ್ದು.
ಮಾಸ್ಟರ್ ಹಿರಣ್ಣಯ್ಯನವರು ಚಂದನ ವಾಹಿನಿಯ ಒಂದು ಸಂದರ್ಶನದಲ್ಲಿ ಹೇಳಿದ ಮಾತು ಶ್ರೀಮತಿ ಪ್ರಭಾವತಿ ಈರಣ್ಣ ಪಾಟೀಲ ಅವರಿಗೆ ಅಕ್ಷರಶಃ ಒಪ್ಪುತ್ತದೆ. ಹಿರಣ್ಣಯ್ಯನವರು ಹೇಳತಾರೆ “ಸಮಾಜ ಒಂದು ಮುಕ್ತ ವಿಶ್ವ ವಿದ್ಯಾಲಯವಿದ್ದಂತೆ. ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿಗೆ ಸಮಾಜ ಕಲಿಸುವ ಪಾಠ ಇದೆಯಲ್ಲಾ ಅದು ಯಾವ ವಿಶ್ವ ವಿದ್ಯಾಲಯದಲ್ಲೂ ಸಿಗಲಾರದಂಥಾ ಪಾಠ”. ತಮ್ಮ 26 ನೇ ವಯಸ್ಸಿನಲ್ಲಿ ಎರಡು ಪುಟ್ಟ ಕಂದಮ್ಮಗಳ ಜೊತೆಗೆ ಪತಿಯ ಅಸ್ಪತ್ರೆಯ ಖರ್ಚನ್ನು ನಿಭಾಯಿಸಲು ಏಕ ಕಾಲಕ್ಕೆ ಮೂರು ಕಡೆ ಉಪನ್ಯಾಸಕಿಯಾಗಿ ಕೆಲಸ ಮಾಡಿದವರು.
ಬದುಕಿನ ಸಂಘರ್ಷ ಅಂತಾ ನಾವೆಲ್ಲಾ ಕುಳಿತು ಮಾತನಾಡತೀವಿ, ಪೇಪರಗಳಲ್ಲಿ ಓದತೀವಿ, TV ಗಳಲ್ಲಿ ನೋಡತೀವಿ ಅದನ್ನೆಲ್ಲಾ ಅಕ್ಷರಶಃ ಅನುಭವಿಸಿದವರು ಶ್ರೀಮತಿ ಪ್ರಭಾವತಿ ಈರಣ್ಣ ಪಾಟೀಲ ಅವರು.
ತಮ್ಮೊಳಗಿದ್ದ ಲೇಖಕಿ, ಕವಿಯಿತ್ರಿಯನ್ನು ಜಾಗೃತಗೊಳಿಸಿದ ಶ್ರೀಮತಿ ಪ್ರಭಾವತಿ ಈರಣ್ಣ ಪಾಟೀಲ ಅವರು ರಾಜ್ಯಮಟ್ಟದಲ್ಲಿ ಹಲವಾರು ಕಡೆ ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಸಮಾಜ ಸೇವೆಯಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ವಚನ ಸಾಹಿತ್ಯದಲ್ಲಿ ವಿಶೇಷ ಒಲವಿರುವ ಶ್ರೀಮತಿ ಪ್ರಭಾವತಿ ಈರಣ್ಣ ಪಾಟೀಲ ಅವರು ಚಿತ್ರದುರ್ಗದ ಶ್ರೀ ಮುರುಘಾ ಮಠದವರು ನಡೆಸುವ “ವಚನ ಕಮ್ಮಟದ” ಸಂಯೋಜಕರು. ವಚನ ಸಾಹಿತ್ಯದಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರಶಸ್ತಿ ಪಡೆಯುವಂತೆ ಮಾಡಿದವರು. ಈ ಕಾರ್ಯವನ್ನು ಗುರುತಿಸಿದ ಶ್ರೀ ಮುರುಘಾ ಮಠದಿಂದ “ಶಿಕ್ಷಣ ಪ್ರೇಮಿ” ಮತ್ತು “ಶಿಕ್ಷಕ ರತ್ನ” ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ರಾಜ್ಯ ಮಟ್ಟದ ಕೆ. ಎಸ್. ನ ಕಾವ್ಯ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.
ರಾಜ್ಯ ಮಟ್ಟದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಅನೇಕ ಲೇಖನಗಳು, ಕವಿತೆಗಳು ಮತ್ತು ಬಿಡಿ ಬರಹಗಳು ಹೆಸರಾಂತ ದಿನ ಪತ್ರಿಕೆ ವಾರ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. “ಪದವೀಧರ ವೇದಿಕೆ” ಯ ರಾಜ್ಯಾಧ್ಯಕ್ಷೆಯಾಗಿ ಮತ್ತು “ಸಮರ ಸೇನೆ” ಯ ಜಿಲ್ಲಾಧ್ಯಕ್ಷೆಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೈಸೂರು ಮಲ್ಲಿಗೆಯ ಕವಿ ಕೆ. ಎಸ್. ನರಸಿಂಹ ಸ್ವಾಮಿಯವರ “ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ” ಎಂಬಂತೆ, ಛಲವೇ ಮನುಷ್ಯರೂಪ ತಾಳಿ ನಿಂತಂಥ ವ್ಯಕ್ತಿತ್ವ ಮತ್ತು ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಶ್ರೀಮತಿ ಪ್ರಭಾವತಿ ಈರಣ್ಣ ಪಾಟೀಲ ಅವರು ಜೀವಂತ ಸಾಕ್ಷಿ. ಇಂಥ ಸಾಹಸೀ ಮಹಿಳೆ ನಮ್ಮ ಕಲ್ಯಾಣ ಕರ್ನಾಟಕದ ಹೆಮ್ಮೆಯ ಪುತ್ರಿ.
ಪರಿಚಯ ಲೇಖನ-ವಿಜಯಕುಮಾರ ಕಮ್ಮಾರ
ತುಮಕೂರು