ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು
ಏರಿ ನೀರುಂಬಡೆ, ಬೇಲಿ ಕೈಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯಿಯ ಮೊಲೆ ಹಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವ
-ಬಸವಣ್ಣ
ಪ್ರಕೃತಿಯಲ್ಲಿರುವ ಯಾವುದೇ ವ್ಯಕ್ತಿಯಾಗಲಿ ವಸ್ತುವಾಗಲಿ ವಿರುದ್ಧವಾದಾಗ ಉಂಟಾಗುವ ದುಷ್ಪರಿಣಾಮಗಳ ಜೊತೆಗೆ ಈ ಭೂಮಿಯ ಮೇಲೆ ನಮ್ಮನ್ನು ರಕ್ಷಣೆ ಮಾಡುವ ರಕ್ಷಕರೇ ಭಕ್ಷಕರಾದರೆ ನಾವು ಯಾರನ್ನು ಪ್ರಶ್ನಿಸಲು ಸಾಧ್ಯವಿದೆ ಎಂದು ಹೇಳುತ್ತಲೇ ನಿಸರ್ಗದಲ್ಲಿ ವಿರುದ್ಧವಾಗಿ ಯಾವುದೇ ಆಗಲಿ ನಡೆದು ಹೋದರೆ ಎಲ್ಲವೂ ನಾಶವಾಗುವುದು ಎಂಬುದನ್ನು ಕೆಲವು ಸಾಂಕೇತಿಕ ಉದಾಹರಣೆಗಳ ಮೂಲಕ ಬಸವಣ್ಣನವರು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ
ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ
ನಾವು ಒಲೆಯ ಬೆಂಕಿಯಿಂದ ಅಡುಗೆಯನ್ನು ಮಾಡಿಕೊಂಡು ಎಲ್ಲರೂ ಊಟ ಮಾಡಿ ಬದುಕಬಹುದು. ಮನೆಯಲ್ಲಿರುವ ಒಲೆಯ ಬೆಂಕಿಯನ್ನು ನಮ್ಮ ಕೆಲಸ ಕಾರ್ಯಗಳ ನಂತರ ನಾವು ಆರಿಸಬಹುದು. ಭೂಮಿಗೆ ಬಿದ್ದರೆ ಆ ಬೆಂಕಿಯನ್ನು ನಂದಿಸಲು ನಮ್ಮಿಂದ ಸಾಧ್ಯವಿಲ್ಲ
ಏರಿ ನೀರುಂಬಡೆ
ಕೆರೆಯ ನೀರನ್ನು ತಡೆಯುವ ಕಾರ್ಯಕ್ಕಾಗಿಯೇ ಒಡ್ಡನ್ನು ಕಟ್ಟಿದಾಗ ನೀರನ್ನು ತಡೆಯಬೇಕಾದ ಒಡ್ಡು ಅಲ್ಲಿರುವ ನೀರನ್ನು ಕುಡಿದರೆ ನಾವು ಏನು ಮಾಡಲು ಸಾಧ್ಯವಿದೆ.
ಬೇಲಿಕೆಯ್ಯಮೇವಡೆರ
ರಕ್ಷಿಸಲೆಂದು ಬೇಲಿ ಹಾಕಿದಾಗ ರಕ್ಷಿಸಬೇಕಾದ ಬೇಲಿಯೇ ಅಲ್ಲಿರುವ ಬೆಳೆಗಳನ್ನು ತಿಂದು ನಾಶಮಾಡಿದರೆ ನಾವು ಏನು ಮಾಡಲು ಸಾಧ್ಯವಿದೆ.
ನಾರಿ ತನ್ನ ಮನೆಯಲ್ಲಿ ಕಳುವಡೆ
ಮನೆಯನ್ನು ಸಂರಕ್ಷಿಸಿ ಉತ್ತಮ ರೀತಿಯಲ್ಲಿ ಬೆಳಗಬೇಕಾದ ಹೆಂಡತಿಯು ತನ್ನ ಮನೆಯಲ್ಲಿ ಕಳ್ಳತನ ಮಾಡಿ ಮನೆ ಹಾಳು ಮಾಡುತ್ತಿದ್ದರೆ ಯಾವ ಪ್ರಯೋಜನವಿದೆ. ಹೆಂಡತಿಯಾದವಳು ದುರಾಚಾರಗಳನ್ನು ಮೈಗೂಡಿಸಿಕೊಂಡಿರುವ ಸದ್ಗುಣ ಸಂಪನ್ನ ಸದಾಚಾರದಿಂದ ಕೂಡಿದ್ದರೆ, ಮಾತ್ರ ಮನೆತನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಸಾಧ್ಯ.
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ತಾಯಿಯ ಎದೆಹಾಲು ದೇವಲೋಕದ ಅಮೃತಕ್ಕೆ ಸಮಾನವಾದುದು. ಮಗುವಿಗೆ ಹಾಲನ್ನುಣಿಸಿ ಜೀವವನ್ನು ರಕ್ಷಿಸುವ ತಾಯಿಯ ಎದೇ ಹಾಲೇ ವಿಷವಾಗಿ ಪರಿಣಮಿಸಿದರೆ ನಾವು ಏನು ಮಾಡಲು ಸಾಧ್ಯವಿದೆ .
ಇನ್ನಾರಿಗೆ ದೂರುವೆ ಕೂಡಲಸಂಗಮದೇವ
ನಮ್ಮನ್ನು ರಕ್ಷಿಸಬೇಕಾದ ಕೂಡಲಸಂಗಮದೇವ ನಮಗೆ ಈ ರೀತಿಯ ಪ್ರಕೃತಿಗೆ ವಿರುದ್ಧವಾದ ಕಷ್ಟ-ಕಾರ್ಪಣ್ಯಗಳನ್ನು ನೀಡಿದರೆ ನಾನು ಯಾರಲ್ಲಿ ಹೇಳಿಕೊಳ್ಳಲಿ ಎಂದು ಪ್ರಶ್ನಿಸುತ್ತಿದ್ದಾರೆ.
ಈ ಭೂಮಿಯಲ್ಲಿ ಪ್ರಕೃತಿಗೆ ವಿರುದ್ಧವಾದ ಕಾರ್ಯಗಳು ನಡೆಯುತ್ತಿದ್ದರೆ ಅವುಗಳಿಗೆಲ್ಲ ಉತ್ತರ ಕೊಡಬೇಕಾದವನು ಕೂಡಲ ಸಂಗಮದೇವನಾಗಿದ್ದಾನೆ.
ಎಂದು ಹೇಳುತ್ತಾ ನಮ್ಮನ್ನು ರಕ್ಷಿಸಬೇಕಾದ ಆ ದೇವರೇ ನಮ್ಮನ್ನು ಕೈಬಿಟ್ಟರೆ ನಾವು ಯಾರಲ್ಲಿ ಬೇಡಲು ಸಾಧ್ಯವೆಂದು ದೈವತ್ವದ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ.
ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ