ಸೂರ್ಯ ನಿಲ್ಲದೆ ಹಗಲುಂಟೆ ಅಯ್ಯಾ

ಸೂರ್ಯ ನಿಲ್ಲದೆ ಹಗಲುಂಟೆ ಅಯ್ಯಾ

ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಎಂಬ ಅಂಕಿತದಲ್ಲಿ ಉರಿಲಿಂಗಪೆದ್ದಿಯ 366 ವಚನಗಳು ಇದುವರೆಗೂ ದೊರೆತಿವೆ. ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಿದ್ದ ತಂದೆತಾಯಿಗಳು ಇವನಿಗೆ ಪೆದ್ದಣ್ಣ ಎಂಬ ಹೆಸರಿಟ್ಟರು. ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ ಪೆದ್ದಣ್ಣ ಒಮ್ಮೆ ಉರಿಲಿಂಗ ದೇವರಮನೆಗೆ ಕನ್ನ ಹಾಕಿದ. ಆಗ ಉರಿಲಿಂಗಿಂಗ ದೇವರು ನಂದವಾಡ ಗ್ರಾಮದ ಸೂರ್ಯಯ್ಯನಿಗೆ ದೀಕ್ಷೆ ನೀಡುತ್ತಿದ್ದರು. ಇದನ್ನು ಕಂಡು ಮನಪರಿವರ್ತನೆ ಹೊಂದಿದ ಪೆದ್ದಣ್ಣ ದಿನವೂ ಉರಿಲಿಂಗಪೆದ್ದಿಗಳ ಮಠಕ್ಕೆ ಒಂದೊಂದು ಹೊರೆ ಸೌಧೆ ತಂದು ಹಾಕುತ್ತಿದ್ದ. ಕೊನೆಗೊಂದು ದಿನ ಗುರುವನ್ನು ಕಾಡಿ ಬೇಡಿ ದೀಕ್ಷೆಯನ್ನು ಪಡೆದು ಉರಲಿಂಗಪೆದ್ದಿ ಎಂಬ ಹೆಸರನ್ನು ಧರಿಸಿ ,ಗುರುವಿಗೆ ತಕ್ಕ ಶಿಷ್ಯ ಆದನು. ಗುರುವಿನ ನಂತರ ಸಕಲ ಶಾಸ್ತ್ರ ಪಾರಂಗತನಾಗಿ ತಾನೇ ಆ ಪೀಠಕ್ಕೆ ಒಡೆಯನಾದ.

ಉರಿಲಿಂಗ ಪೆದ್ದಿ ವಚನಗಳ ಆಶಯದಲ್ಲಿ
ಚಿಂತೆಯಿಲ್ಲದೆ ಅತಿ ಶ್ರೇಷ್ಠವಾದ ಮನಸ್ಥಿತಿಯನ್ನು ಶಿವ ಧ್ಯಾನದಿಂದ ಸಾಧಿಸಬಹುದು . ಮಂಗಳಕರವಾದ ಲಿಂಗವನು ಅಂಗದಲ್ಲಿ ಧರಿಸಿದವನು ಅನ್ಯ ಲಿಂಗವನ್ನು ನೆನೆಯಲಾರನೆಂದು. ಉರಿಲಿಂಗಪೆದ್ದಿಯ ವಚನಗಳು ನಿರೂಪಿಸುತ್ತವೆ .

ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ ? 
ದೀಪ ಇಲ್ಲದೆ ಬೆಳಕುಂಟೆ ಅಯ್ಯಾ?
ಪುಷ್ಪವಿಲ್ಲದೆ ಪರಿಮಳವನರಿಯಬಹುದೆ ಅಯ್ಯಾ? 
ಸಕಲವಿಲ್ಲದೆ ನಿಷ್ಕಲವ ಕಾಣಬಾರದು. ಮಹಾಘನ ನಿರಾಳ ಪರಶಿವನಿಂದ ಅಂಗವು ತೋರಿತ್ತು ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾಯ

ಪ್ರತಿಯೊಬ್ಬ ವ್ಯಕ್ತಿಯೂ ಚಿಂತೆ ಚಾಂಚಲ್ಯದಿಂದ ಕೂಡಿರದೆ ದೈವಭಕ್ತಿಯನ್ನು ಮೈಗೂಡಿಸಿಕೊಂಡು ಪರಿಶುದ್ಧ ಮನಸ್ಸನ್ನು ಹೊಂದಿ ಸರ್ವ ಸ್ಥಾನಗಳಲ್ಲೂ ಶಿವಲಿಂಗವನ್ನು ಕಾಣುತ್ತಾ ಸದ್ಭಕ್ತಿ ಸಂಪನ್ನರಾಗಿ ಅಂತರಂಗ ಸಿದ್ಧಿ ಶುದ್ಧಿಯೊಂದಿಗೆ ಮುಕ್ತಿ ಪಡೆಯಬೇಕೆಂಬ ಸಂದೇಶವನ್ನು ಸಾರುವ ಸಂದರ್ಭದಲ್ಲಿ ಈ ವಚನವು ಮೂಡಿಬಂದಿದೆ

ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ?

ಜಗತ್ತಿಗೆ ಜೀವಕಳೆಯನ್ನು ತುಂಬಿ ಬೆಳಕನ್ನು ನೀಡುವ ಸೂರ್ಯನಿಲ್ಲದೆ ಹಗಲು ಎಂಬುದಿಲ್ಲ. ನಮ್ಮ ದಿನನಿತ್ಯದ ಚಟುವಟಿಕೆಗಳು ನಡೆಯಬೇಕಾದರೆ ಸೂರ್ಯನ ಬೆಳಕು ನಮಗೆ ಅತಿ ಅವಶ್ಯಕವಾದದು

ದೀಪ ಇಲ್ಲದೆ ಬೆಳಕುಂಟೆ ಅಯ್ಯಾ? 

ಹಾಗೆಯೇ ರಾತ್ರಿಯ ಸಮಯದಲ್ಲಿ ನಾವು ದೀಪವಿಲ್ಲದೇ ಬೆಳಕನ್ನು ಕಾಣಲು ಸಾಧ್ಯವಿಲ್ಲ .ನಾವು ಹಗಲಿನಲ್ಲಿ ಸೂರ್ಯನಿಂದ ಬೆಳಕನ್ನು ಕಂಡರೆ ರಾತ್ರಿಯ ಸಮಯದಲ್ಲಿ ದೀಪದಿಂದ ಬೆಳಕನ್ನು ಕಾಣುತ್ತೇವೆ.

ಪುಷ್ಪವಿಲ್ಲದೆ ಪರಿಮಳವನರಿಯಬಹುದೆ ಅಯ್ಯಾ?

ಅಲ್ಲದೇ ಹೂವಿಲ್ಲದೆ ಸುವಾಸನೆಯನ್ನು ಪಡೆಯಲು ಸಾಧ್ಯವಿಲ್ಲ. ಸುಗಂಧ ಭರಿತವಾದ ಸುವಾಸನೆಯ ಅನುಭವವನ್ನು ಪಡೆಯಲು ನಮಗೆ ಪುಷ್ಪಗಳ ಅಗತ್ಯವಿದೆ .

ಸಕಲವಿಲ್ಲದೆ ನಿಷ್ಕಲವ ಕಾಣಬಾರದು. ಮಹಾಘನ ನಿರಾಳ ಪರಶಿವನಿಂದ ಅಂಗವು ತೋರಿತ್ತು ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾಯ

ಈ ಜಗತ್ತಿನಲ್ಲಿ ಮಹಾಘನ ನಾದ ಶ್ರೇಷ್ಠನಾದ ‘ಸರ್ವೋತ್ತಮನಾದ ಶಿವಲಿಂಗವು ನಮಗೆ ಎಲ್ಲೆಲ್ಲಿ ತೋರುವುದೋ ಅಲ್ಲೆಲ್ಲವೂ ನಾವು ಪರಿಶುದ್ಧತೆಯನ್ನು ಕಾಣಬಹುದು. ಪರಿಶುದ್ಧವಾದ ಮನಸ್ಸನ್ನು ಹೊಂದದ ಸ್ಥಳಗಳಲ್ಲಿ ಲಿಂಗವೂ ಕೂಡ ಉದ್ಭವಿಸದು .
ಮಹಾ ಘನತೆಯನ್ನು ಹೊಂದಿದ ಅತಿ ಶ್ರೇಷ್ಠನಾದ ಚಿಂತಾ ಮುಕ್ತ ನೆನೆಸಿದ ಆ ಪರ ಶಿವನಿಂದಲೇ ಭೂಮಿಯಲ್ಲಿ ನಾವು ಲಿಂಗವನ್ನು ಕಾಣಲು ಸಾಧ್ಯವಾಗಿದೆ .ಯಾವ ಸ್ಥಳದಲ್ಲಿ ಪರಿಶುದ್ಧವಾದ ಮನಸ್ಸನ್ನು ಹೊಂದಿ ಸದ್ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ ಯೋ ಅಲ್ಲಿ ಶಿವಲಿಂಗವು ಉದ್ಭವಿಸುತ್ತದೆ ಎಂದು ಹೇಳುತ್ತಾ ಉರಿಲಿಂಗ ಪೆದ್ದಿಯವರು ಪ್ರತಿಯೊಬ್ಬರಲ್ಲೂ ಭಕ್ತಿರಸವನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಈಶಾವಾಸ್ಯಮಿದಂ ಸರ್ವಂ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಅರಿತು ಪರಿಶುದ್ಧ ಮನಸ್ಸನ್ನು ಹೊಂದುವುದರೊಂದಿಗೆ ಶಿವಭಕ್ತಿಯನ್ನು ಮೈಗೂಡಿಸಿಕೊಂಡು ಶಿವಭಕ್ತರಾಗಿ ಮುಕ್ತಿ ಪಡೆಯಬೇಕೆಂಬ ಮಹತ್ವದ ಅಂಶವನ್ನು ಕಾಣಬಹುದು.

ಪ್ರೊ ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ

Don`t copy text!