ಗಜಲ್
ಅಂತರಂಗದಿ ಸಹಜ ಒಲವು ಮೂಡಲು ಸಮಯಬೇಕು
ಪುಟ್ಟಹಕ್ಕಿ ಗರಿಬಿಚ್ಚಿ ಮುಗಿಲಿಗೆ ಹಾರಲು ಸಮಯಬೇಕು
ನಿಜವಾದ ಪ್ರೀತಿಯ ನಡಿಗೆಯದು ಮುಗಿಯದು ಗೆಳೆಯ
ನಂಬಿರುವ ಹೃದಯದ ಹತ್ತಿರಕೆ ಸಾಗಲು ಸಮಯಬೇಕು
ಎಷ್ಟೊಂದು ಹೆಜ್ಜೆ ಹಾಕುವುದು ಕತ್ತಲೆ ದಾರಿಸವೆಸಲು
ಇರುಳದು ಕಳೆದು ಬೆಳಕು ಮೂಡಲು ಸಮಯಬೇಕು
ನೋವಿನ ಬೆಂಕಿಗೆ ಶಮನದ ಹಂಬಲದ ಅವಸರವೇನಿದೆ
ಊದಿಕೊಂಡ ಗಾಯ ತಾನೆ ಮಾಯಲು ಸಮಯಬೇಕು
ಬದುಕೇ ಬೇಡೆಂದು ಅನ್ನನೀರು ಬಿಟ್ಟುಕೂತರೇನು ‘ಗಿರಿ’
ಸಾವು ಬೇಕೆಂದಾಗ ಬಾರದು ಸಾಯಲು ಸಮಯಬೇಕುು
– ಮಂಡಲಗಿರಿ ಪ್ರಸನ್ನ