ಸ್ನೇಹದ ಮಧುಶಾಲೆ

 

ಸ್ನೇಹದ ಮಧುಶಾಲೆ

ಗಜ಼ಲ್ ಗುಲ್ಜಾರ್

 

ಕವಿ-ಡಾ. ಮಲ್ಲಿನಾಥ ಎಸ್. ತಳವಾರ

ಪುಸ್ತಕಗಳ ಪ್ರತಿಗಳಿಗಾಗಿ ಸಂಪರ್ಕಿಸಿ…
📞 99863 53288

ಸ್ನೇಹದ ಮಧುಶಾಲೆಯತ್ತ ಮುಖ ಮಾಡುವ
ಮೊದಲು ಡಾ. ಮಲ್ಲಿನಾಥ ಗುರುಗಳು ಇನ್ನೂ ಎರಡು ಗಜ಼ಲ್ ಸಂಕಲನಗಳನ್ನು ಲೋಕಾರ್ಪಣೆ ಮಾಡಿ ಗಜ಼ಲ್ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ. ಅದರ ಜೊತೆಜೊತೆಗೆ ಗಜ಼ಲ್ ರಚನೆಗೆ ಉಪಯುಕ್ತ ಮಾಹಿತಿಯನ್ನು ಓದುಗರಿಗೆ ಒದಗಿಸಿದ್ದಾರೆ. ಹೀಗಾಗಿ ಇವರ ಗಜ಼ಲ್ ಸಂಕಲನಗಳು ಕಲಿಕಾರ್ಥಿಗಳಿಗೆ ಗಜ಼ಲ್ ಕುರಿತು ಮಾಹಿತಿ ಒದಗಿಸುವ ಕಣಜಗಳಾಗಿವೆ. ಈ ಬಾರಿ ಕೂಡಾ ಬಹರಗಳ ಕುರಿತು ಮಾಹಿತಿಯನ್ನು ಸ್ನೇಹದ ಮಧುಶಾಲೆ ಸಂಕಲನದಲ್ಲಿ ಹಂಚಿಕೊಂಡಿದ್ದಾರೆ. ಈ ಗಜ಼ಲ್ ಸಂಬಂಧಿತ ಮಾಹಿತಿ ಕ್ರೋಢೀಕರಣಕ್ಕೆ ಸ್ವತಃ ಅಧ್ಯಯನ ಗೈದು..ಓದುಗ ಬಂಧುಗಳ ಕಲಿಕೆಗೆ ಸಹಾಯ ಆಗುವಂತೆ ಗಜ಼ಲ್ ಛಂದಸ್ಸನ್ನು ಬೋಧಿಸಿದ್ದಾರೆ. ಬೆಹರ್ ಎಂದರೇನು ಎಷ್ಟು ಪ್ರಕಾರಗಳು ಎಂಬುದನ್ನು ಸವಿವರವಾಗಿ ಪ್ರಸ್ತುತ ಪಡಿಸಿದ್ದಾರೆ.

ಸ್ನೇಹದ ಮಧುಶಾಲೆ.. ಶೀರ್ಷಿಕೆಯೇ ಸೂಚಿಸುವಂತೆ ಸ್ನೇಹದ ಪ್ರತೀಕವಾಗಿ.. ಪ್ರಕಟವಾದ ಕೃತಿಯಿದು. ಶಾಲಾ ಜೀವನದ ಗೆಳೆಯರ ಬಳಗವು ತಮ್ಮ ಕವಿಮಿತ್ರರ ಗಜ಼ಲ್ ಪುಸ್ತಕವನ್ನು ಪ್ರಕಟಿಸಿ..ಸ್ನೇಹದ ಪ್ರಾಮುಖ್ಯತೆಯನ್ನು ಪ್ರಚುರ ಪಡಿಸಿದ್ದಾರೆ. ಕವಿ ತಮ್ಮ ಶಾಲಾ ಅಂಗಳದಲ್ಲಿ ಬಚ್ಚಿಟ್ಟು ಮರೆತ ಆ ಬಾಲ್ಯದ ಸಿಹಿ ಕಹಿ ನೆನಪುಗಳನ್ನು.. ಬಾಲ್ಯ ಸ್ನೇಹಿತರನ್ನು ನೆನೆದು ಹನಿಗಣ್ಣಾಗಿದ್ದಾರೆ. ಜೀವನದ ಸುವರ್ಣ ಯುಗವೆಂದರೆ ನಮ್ಮ ಬಾಲ್ಯ. ಕವಿ ಮಲ್ಲಿನಾಥ ಗುರುಗಳು ಅದನ್ನು ನೆನೆದು ಅನುಭವಗಳನ್ನು ಹಂಚಿಕೊಂಡಾಗ..ಇದನ್ನು ಓದಿದ ಪ್ರತಿಯೊಬ್ಬರ ಬಾಲ್ಯ ಸ್ಮರಣೆಗೆ ಬರದಿರಲಾರದು. ಹತ್ತು ಹಲವಾರು ಕೀಟಲೆಗಳು, ಜಗಳಗಳು ನಗು ಅಳುವಿನ ಸಂದರ್ಭಗಳನ್ನು ಬಹಳ ರಸವತ್ತಾಗಿ ಕವಿ ಹೇಳಿಕೊಂಡಿದ್ದಾರೆ. ಬದುಕಿನ ಪಯಣದಲ್ಲಿ ಮೃತ್ಯುವಿನ ಪಾಶಕ್ಕೆ ಬಲಿಯಾಗಿ ತಮ್ಮ ಪಯಣವನ್ನು ಮೊಟಕುಗೊಳಿಸಿ ಅಗಲಿದ ಸ್ನೇಹಿತರನ್ನು ಕೂಡ ಮರೆಯದೇ ನೆನೆದು ಶೃದ್ಧಾಂಜಲಿ ಅರ್ಪಿಸಿದ್ದಾರೆ.

(ಕವಿ-ಡಾ. ಮಲ್ಲಿನಾಥ ಎಸ್. ತಳವಾರ)

ರಕ್ತ ಹಂಚಿಕೊಳ್ಳದಿದ್ದರೂ..ಅದಕ್ಕೂ ಮೀರಿದ ಅವಿನಾಭಾವ ಸಂಬಂಧ ಈ ಗೆಳೆತನ. ಇದನ್ನು ದಿಟಗೊಳಿಸಿದ ಗೆಳೆಯರ ಗುಂಪನ್ನು ಹೊಂದಿರುವ ಮಲ್ಲಿನಾಥ ಗುರುಗಳೇ ಭಾಗ್ಯವಂತರು.

1996 ರ ಬ್ಯಾಚ್ ನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಾಗಿದ್ದ ಈ ಸ್ನೇಹಿತರು.. ತಾವು ಕಲಿತ ಶಾಲಾ ಅಂಗಳದಲ್ಲಿಯೇ ಗೆಳೆಯನ ಗಜ಼ಲ್ ಸಂಕಲನವನ್ನು ಲೋಕಾರ್ಪಣೆ ಗೊಳಿಸಿ..ಸಂತಸ ಪಟ್ಟಿದ್ದಾರೆ. 1996 ರ ವರ್ಷದ ದ್ಯೋತಕವಾಗಿ ಈ ಸ್ನೇಹದ ಮಧುಶಾಲೆಯಲ್ಲಿ 96 ಗಜ಼ಲ್ ಪ್ಯಾಲೆಗಳಿವೆ.
ಉರ್ದು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಅಬ್ದುಲ್ ರಬ್ ಉಸ್ತಾದ್ ಸರ್ ಅವರ ವಿದ್ವತ್ಪೂರ್ಣ ಮುನ್ನುಡಿಯು ಬಹಳಷ್ಟು ಗಜ಼ಲ್ ಪರಂಪರೆಯ ಜ್ಞಾನವನ್ನು ಹಂಚಿ, ಈ ಕೃತಿಯ ತೂಕವನ್ನು ಹೆಚ್ಚಿಸಿದೆ.
ಇನ್ನು, ಬೆನ್ನುಡಿ ಬರೆದವರು ಶ್ರೀ. ಕೆ. ಆಯ್. ಬಡಿಗೇರ ಪ್ರಾಚಾರ್ಯರು ಪ. ಪೂ. ಕಾಲೇಜ್ ರಾವೂರ. ಇವರು ನನಗನಿಸಿದಂತೆ..ಮಲ್ಲಿನಾಥ ಗುರುಗಳ ಗುರುಗಳಾಗಿದ್ದರು ಎಂದು. ತಮ್ಮ ವಿದ್ಯಾರ್ಥಿಯ ಗುಣ ಸ್ವಭಾವದ ಬಗ್ಗೆ ಅತಿ ಪ್ರೀತಿಯಿಂದ ಹಂಚಿಕೊಂಡ ಗುರುಗಳ ಪ್ರತಿ ಗೌರವ ಹೆಚ್ಚಾಯಿತು.

ಸಂಕಲನದ ಮೊದಲ ಗಜ಼ಲ್ ತರಹೀ ಗಜ಼ಲ್ ಆಗಿದ್ದು, ಪಂಚಾಕ್ಷರಿ ಹಿರೇಮಠ ಅವರು ಭಾಷಾಂತರಿಸಿದ ಮಿರ್ಜಾ ಗಾಲಿಬ್ ಅವರ ಗಜ಼ಲ್ ನ ಸಾನಿ ಮಿಸ್ರಾ ಮುಂದುವರೆದು ತರಹೀ ಗಜ಼ಲ್ ಆಗಿದೆ.
ಮೂಲ ಗಜ಼ಲ್ ನ ಆಶಯ ಭಂಗವಾಗದಂತೆ..ಮುಂದುವರೆಸಿದ ಕವಿಯ ಜಾಣ್ಮೆ ಮೆಚ್ಚುವಂತದ್ದು. ಸಂಕಲನವು ಅನೇಕ ಪ್ರಕಾರದ ಗಜ಼ಲ್ ಗಳನ್ನು ಒಳಗೊಂಡಿದೆ. ಸೆಹ್ ಗಜ಼ಲ್ ಕೂಡ ಓದಲು ಲಭ್ಯವಿದೆ ಇದರಲ್ಲಿ. ಅದರಂತೆ.. ಇನ್ನೂ ತರಹಿ ಗಜ಼ಲ್ ಗಳು ಮಾತ್ರೆಯಾಧಾರಿತ ಬೆಹರ್ ಗಜ಼ಲ್ ಗಳು ಕೂಡ ಗಮಪ ಸೆಳೆಯುತ್ತವೆ.

ನಿನ್ನ ಆದರ್ಶಗಳು ಪುಸ್ತಕಗಳಲ್ಲಿ ಮರಿ ಹಾಕುತಿವೆ
ಮೌಲ್ಯಗಳನ್ನು ಕೊಲ್ಲುತಿರುವರು ನಿನ್ನ ಹೆಸರಿನಲ್ಲಿ

ಗಾಂಧೀಜಿ ಅವರ ಸಿದ್ಧಾಂತ ಮತ್ತು ಮೌಲ್ಯಗಳು ಬೆಲೆ ಕಳೆದುಕೊಂಡು ಸವಕಲಾದ ಬಗೆಗಿನ ಬೇಸರವನ್ನು ಈ ಶೇರ್ ಹೊರಹಾಕಿದೆ.

ಆಜಾದಿಯ ಅರ್ಥ ತಿಳಿಯೋಣ ಬನ್ನಿ
ಗುಲಾಮಿಯ ಬಂಧ ಅಳಿಸೋಣ ಬನ್ನಿ

ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಷ್ಟೋ ಸಮಯವಾದರೂ ನಿಜವಾದ ಅರ್ಥದಲ್ಲಿ ನಮಗೆ ಸ್ವಾತಂತ್ರ್ಯ ದೊರಕಿಲ್ಲ. ಏನಾದರೊಂದು ಗುಲಾಮಿತನ ತಲೆಯೇರಿದೆ. ಇದು ಕವಿಯ ಅಸಹನೆಗೆ ಕಾರಣವಾಗಿದೆ. ಸಮಾಜದಲ್ಲಿಯ ಅಸಮಂಜಸ ವಿಧಾನಗಳನ್ನು ಬದಲಿಸಬೇಕು ಎನ್ನುವ ಸಾಮಾಜಿಕ ಕಳಕಳಿಯ ತುಡಿತ ಈ ಗಜ಼ಲ್ ನಲ್ಲಿ ಕಂಡುಬರುತ್ತದೆ.

ಬದುಕೆಂಬುದು ತಯಾರಿ ಇಲ್ಲದ ಚದುರಂಗದ ಆಟ
ಗೆಲ್ಲುವ ತುಡಿತದವರಿಗೆ ಸೋಲುಗಳೆಲ್ಲ ಬರಲಿಬಿಡು

ಈ ಶೇರ್, ಬದುಕಿನ ನಗ್ನಸತ್ಯವನ್ನು ಹೇಳುತ್ತಿದೆ. ಬದುಕು ಅನಿರೀಕ್ಷಿತ ಅಪಘಾತಗಳ ಸರಮಾಲೆ. ಈ ಕ್ಷಣ ಏನು ನಡೆಯುವುದೋ ಗೊತ್ತಿಲ್ಲ. ಸೋಲೋ ಗೆಲುವೋ..ಸುಖವೋ ದುಃಖವೋ..ಅಳುವೋ ನಗುವೋ..ಗೊತ್ತಿಲ್ಲ.. ಅಲ್ಲವೆ.

ಅನುಕಂಪ ಕೊಲ್ಲುತಿದೆ ನನ್ನನ್ನು
ಅಸಹಾಯಕತೆ ದಹಿಸುತಿದೆ ನನ್ನನ್ನು

ಈ ಶೇರ್.. ಮಾನವನ ಅಸಹಾಯಕ ಪರಿಸ್ಥಿತಿಯ ಪರಿಚಯ ನೀಡುತ್ತದೆ. ಬೇಕಾಗಿರದ ಅನುಕಂಪ ಜೀವ ತೆಗೆಯುತ್ತಿದ್ದರೆ..ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ಜೀವಂತ ಸುಡುತ್ತಿದೆ. ನಿಜಕ್ಕೂ ಇದು ತ್ರಿಶಂಕು ಸ್ಥಿತಿ.

ಒಂದಕ್ಕಿಂತ ಒಂದು ರಸಪೂರ್ಣ ಔಚಿತ್ಯ ಪೂರ್ಣ, ಧ್ವನಿ ಪೂರ್ಣ ಗಜ಼ಲ್ ಗಳ ಗುಲ್ದಸ್ತಾ ಇದು. ಅನೇಕ ಬಗೆಯ ಹೂಗಳನ್ನು ಗಜ಼ಲ್ ಗುಲ್ಜಾರ್ ನಿಂದ ಆರಿಸಿ ಗುಲ್ದಸ್ತದ ರೂಪದಲ್ಲಿ ಸಿಂಗರಿಸಿ ನಮ್ಮ ಕೈಯಲ್ಲಿ ಇಟ್ಟಿದ್ದಾರೆ ಗಜ಼ಲ್ ಗುರುಗಳು. ಈ ಸಂಕಲನವು ಸ್ನೇಹದ ಪ್ರತೀಕವಾಗಿ ಜನ್ಮತಳೆದು..ಮಿತ್ರತ್ವವನ್ನು ಅಮರಗೊಳಿಸಿದೆ. ಎಲ್ಲರ ಪುಸ್ತಕ ಸಂಗ್ರಹದಲ್ಲಿ ಇರಲೇ ಬೇಕಾದ ಪುಸ್ತಕವಿದು. ಗಜ಼ಲ್ ಬಗೆಗಿನ ಎಲ್ಲಾ ಸಂದೇಹಗಳಿಗೆ ಉತ್ತರ ಒದಗಿಸುವ ಪುಸ್ತಕ ಸ್ನೇಹದ ಮಧುಶಾಲೆ.. ಎಂದು ಹೇಳುತ್ತಾ, ಡಾ. ಮಲ್ಲಿನಾಥ ಅವರಮುಂದಿನ ಸಾಹಿತ್ಯಿಕ ಪಯಣ ಸುಗಮವಾಗಿ ಸಾಗಲಿ ಎಂದು ಹಾರೈಸುವೆ..

ಶಮಾ. ಜಮಾದಾರ.
ಯರಗಟ್ಟಿ.

Don`t copy text!