ಅಥಣೀಶರ “ಮಹಾತ್ಮರ ಚರಿತಾಮೃತ’’ ವಿಶ್ವವಂದ್ಯರ ಜೀವನ ಅನಾವರಣ
ಅಥಣಿಯ ಜಂಗಮಕ್ಷೇತ್ರ ಮೋಟಗಿಮಠದ ಪೂಜ್ಯ ಪ್ರಭುಚನ್ನಬಸವ ಮಹಾಸ್ವಾಮಿಗಳು ರಚಿಸಿದ ಮೇರು ಕೃತಿ ೨೧೬ ವಿಭೂತಿಪುರಷರ, ವಿಶ್ವವಂದ್ಯರ ಚರಿತ್ರೆ ಹೊಂದಿದ್ದು, ಐದುನೂರು ಕೃತಿಗಳ ಅಧ್ಯಯನದಿಂದ ವಿಷಯ ಸಂಗ್ರಹಿಸಲ್ಪಟ್ಟಿದೆ, ೧,೧೦೦ ಪುಟಗಳ ಈ ಕೃತಿಯ ಬೆಲೆ ರೂ. ೨೦೦೦. ಅಥಣಿ ಮೋಟಗಿಮಠದ ಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆ ಪ್ರಕಾಶನದಲ್ಲಿ, ಬೆಂಗಳೂರಿನ ಸ್ವಾö್ಯನ ಪ್ರಿಂರ‍್ಸ್ದಲ್ಲಿ ಅಂದವಾಗಿ, ಆಕರ್ಷಕವಾಗಿ ಮುಖಪುಟವನ್ನು ಹೊಂದಿ ಮುದ್ರಣಗೊಂಡಿದೆ. ಈ ಕೃತಿಯ ಲೋಕಾರ್ಪಣೆಯು ಸಪ್ಟೆಂಬರ್ ೨೫ ಶನಿವಾರ ರಂದು ಬೆಂಗಳೂರಿನ ವಿಜಯನಗರದಲ್ಲಿಯ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಂಡಿದೆ..
ನಾಡಿನ ಸರ್ವಧರ್ಮಗಳ ಹರಗುರುಚರ ಮೂರ್ತಿಗಳು, ಚಿಂತಕರು, ಸಾಹಿತಿಗಳು, ಭಕ್ತಾಧಿಗಳು ಪಾಲ್ಗೊಂಡಿದ್ದರು.
ಇದೀಗ ಕೇವಲ ನಾಲ್ಕು ತಿಂಗಳಲ್ಲಿ ಮತ್ತೆ ಎರಡನೇ ಮುದ್ರಣಗೊಂಡಿದ್ದು ಅದೂ ಕೂಡ ಲೋಕಾರ್ಪಣೆಗೊಂಡಿತು. ಅಥಣಿಯಲ್ಲಿ ಮೊನ್ನೆ ಮಾರ್ಚ ೨೧ ರಂದು ಆನೆಯ ಅಂಬಾರಿ ಮೇಲೆ ಗ್ರಂಥದ ಭವ್ಯ ಮೆರವಣಿಗೆ ನಡೆಯಿತು.
ಕರೋನಾದಂತ ಜಾಗತಿಕ ಪೆಂಡಾಮಿಕ್ ಸಮಯದಲ್ಲಿ ಸುಮ್ಮನೆ ಕೂಡದೆ, ಮೊದಲಿನಿಂದಲೂ ಸಜೃನಶೀಲತೆಯನ್ನು ಮೈಗೂಡಿಸಿಕೊಂಡು ಬಂದಿರುವ ಅಥಣಿಯ ಪೂಜ್ಯ ಪ್ರಭುಚನ್ನಬಸವ ಸ್ವಾಮೀಜಿಯವರು ಈ ಸಮಯದ ಸದುಪಯೋಗ ಪಡೆದುಕೊಂಡು ಏನಾದರೂ ಸತ್ಕಾರ್ಯ ಮಾಡಬೇಕೆಂದು ಛಲತೊಟ್ಟು ಅಣಿಯಾಗಿದ್ದರ ಫಲಶೃತಿಯೇ ಈ ಬೃಹತ್ ಮೇರುಕೃತಿ “ಮಹಾತ್ಮರ ಚರಿತಾಮೃತ ಗ್ರಂಥ’’. ಮೋಟಗಿಮಠದ ಶ್ರೀಗಳು ಸ್ವತಃ ಸಾಹಿತಿ, ಪ್ರಖಂಡ ವಾಗ್ಮಿಗಳು. ವೈಚಾರಿಕ ಚಿಂತಕರು, ಬಸವ ಅನುಯಾಯಿಗಳು. ಸಮಸಮಾಜದ ಹಿನ್ನಲೆಯಲ್ಲಿ ಎಲ್ಲ ಧರ್ಮಿಯರನ್ನು ಅಪ್ಪಿಒಪ್ಪಿಕೊಂಡವರು. ಈ ಹಿನ್ನಲೆಯಲ್ಲಿ ಪೂಜ್ಯರಿಂದ ಇಂತಹದೊAದು ಮಹತ್ ಕೃತಿ ಹೊರಬರಲು ಸಾಧ್ಯವಾಗಿದೆ. ಇದೊಂದು ಸಾಹಿತ್ಯ ಕ್ಷೇತ್ರದಲ್ಲಿ ವಿನೂತನ ಪ್ರಯೋಗವೆನ್ನಲಾಗಿದೆ.
ಪ್ರಸ್ತುತ ಕೃತಿಯಲ್ಲಿ `ಅ’ಕಾರಾದಿ ಕ್ರಮದಂತೆ, ಆದಿಕವಿ ಮಹರ್ಷಿ ವಾಲ್ಮೀಕಿಯವರಿಂದ ಇಂದಿನ ಆಧುನಿಕ ವಿಶ್ವಕವಿಗಳವರೆಗೆ ಅಂದರೆ ಜೈನಧರ್ಮದ ಮಹಾವೀರ, ಶಾಂತಿಧೂತ ಬುದ್ಧ, ಹನ್ನೆರಡನೆ ಶತಮಾನದ ಅಪ್ಪ ಬಸವಣ್ಣರಂಥ ದಾರ್ಶನಿಕರ, ತದನಂತರದ ಶಂಕರ, ರಾಮಾನುಜ, ಮಧ್ವರಂತಹ ಆಚಾರ್ಯರರ, ಸ್ವಾಮೀ ವಿವೇಕಾನಂದ, ಯೇಸು, ಮಹಮ್ಮದ ಪೈಗಂಬರ, ಗುರುನಾನಕ ಹೀಗೆ ಧರ್ಮ ಪ್ರವರ್ತಕರನ್ನೊಳಗೊಂಡು, ಶಿಶುನಾಳ ಶರೀಫ್, ಬಂದೇನವಾಜ, ಹಾಗೂ ಸಜ್ಜಲಗುಡ್ಡದ ಶರಣಮ್ಮ, ಗಡಿಂಗ್ಲಜದ ಚಂದ್ರಮ್ಮತಾಯಿ, ಮೀರಾ, ಅಂಡಾಳರAತ ಮಹಿಳಾ ಅನುಭಾವಿಗಳು, ಅಂಕಲಗಿ ಅಡವಿಸಿದ್ದೇಶ್ವರ, ಅಥಣಿ ಶಿವಯೋಗಿಗಳು, ಹಾನಗಲ್ ಕುಮಾರಸ್ವಾಮಿಗಳು, ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ, ಮುರಗೋಡ ಮಹಾಂತ ಶಿವಯೋಗಿಗಳು ಹೀಗೆ ಪೂಜ್ಯರುಗಳ ಬದುಕು ಕುರಿತಾಗಿ ೨೧೬ ಮಹ್ಮಾರ ಚರಿತ್ರೆಗಳನ್ನು ಒಂದೇ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಪ್ರಚಾರದಲ್ಲಿರದ ಎಲೆಮರೆಯ ಕಾಯಿಯಂತಿರುವ ಮಹಾತ್ಮರನ್ನು ಪರಿಚಯಿಸಿದ್ದು ವಿಶೇಷವಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಉತ್ತರಪ್ರದೇಶ, ಬಿಹಾರ ಮತ್ತು ಆಂಧ್ರ ಹೀಗೆ ದೇಶದ ವಿವಿದೆಡೆಯ ದಾರ್ಮಿಕ ಮುಖಂಡರು, ಸೂಫಿಸಂತರ ಪರಿಚಯವಿದೆ. ಮುಖ್ಯವಾಗಿ ಜಾತಿ, ಮತ, ಪಂಥ, ಗಡಿಗಳನ್ನು ಮೀರುವ ಪ್ರಯತ್ನ ಈ ಕೃತಿಯಲ್ಲಿ ಮಾಡಿದ್ದಾರೆ. ಮೂಢನಂಬಿಕೆ, ಕಂದಾಚಾರ, ಅಸ್ಪçಶ್ಯತೆ, ಅನಕ್ಷರತೆ ಮೊದಲಾದವುಗಳನ್ನು ನಿವಾರಿಸುವ ದಿಸೆಯಲ್ಲಿ ಉಲ್ಲೇಖಗಳನ್ನು ಮಾಡಿದ್ದಾರೆ.
ಕೃತಿಗೆ ಮುನ್ನುಡಿಯನ್ನು ಬಹುಭಾಷಾ ವಿಶಾರದ ನಾಡೋಜ ಡಾ.ಹಂಪ ನಾಗರಾಜಯ್ಯರವರು ಬರೆದಿದ್ದು. “ಈ ಕೃತಿಯು ಪ್ರಾಚೀನ ಕಾಲದ ಗದ್ಯಗ್ರಂಥ ವಡ್ಡಾರಾಧನೆಯಂತೆ ಮನೋಜ್ಞ ಗದ್ಯ ಕಥನಕಾವ್ಯವಾಗಿ ಮೈದಾಳಿದೆ, ಕೃತಿ ರಚನೆಗೆ ಅದೆಷ್ಟು ಓದಿದ್ದಾರೆಂದರೆ ಅವರ ಓದಿನ ಹರಹಿಗೆ ಬೆರಗು ಆವರಿಸುತ್ತದೆ’’ ಎಂದಿರುವುದು ಪೂಜ್ಯರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿದೆ. ಹದುಳ ನುಡಿಯನ್ನು ಬಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ಬರೆದಿದ್ದು “ ಗ್ರಂಥ ನೋಡಿ ಕಣ್ಣಿಗೆ ಒತ್ತಿಕೊಂಡು, ಶಿರಬಾಗಿ ಶರಣು ಸಲ್ಲಿಸಿ, ತಲೆಯ ಮೇಲೆ ಇಟ್ಟುಕೊಂಡೆ. ಹೃದಯ ತುಂಬಿ ಬಂದು ದೀರ್ಘದಂಡ ನಮನ ಸಲ್ಲಿಸಿದೆ. ಬಸವತಂದೆ ಪೂಜ್ಯರ ಹೃದಯದಲ್ಲಿ ಪ್ರತಿಭೆಯ ನಿಧಿಯೇ ದಯಪಾಲಿಸಿದ್ದಾರೆ.’’ ಎಂದಿರುವ ನುಡಿಗಳನ್ನು ನೋಡಿದಾಗ (ಇಲ್ಲಿ ನನಗೆ ಅಥಣಿ ಶಿವಯೋಗಿಗಳು ಅಪ್ಪ ಬಸವಣ್ಣನವರ ವಚನಕಟ್ಟುಗಳನ್ನು ತಲೆಯಮೇಲೆ ಹೊತ್ತು ಗೌರವಿಸಿದ್ದು ನೆನಪಾಗುತ್ತದೆ).
ವಿಜಯಪೂರ ಜ್ಞಾನಯೋಗಾಶ್ರಮದ ಜ್ಞಾನನಿಧಿ ಪೂಜ್ಯ ಸಿದ್ಧೇಶ್ವರ ಅಪ್ಪಗಳವರು ಕೃತಿ ಕುರಿತು “ಇದೊಂದು ಅಮೂಲ್ಯ ಹೊತ್ತಿಗೆ, ಇದರಲ್ಲಿನ ದೇಶಪ್ರೇಮ ಹಾಗೂ ವಿಶ್ವಪ್ರೇಮಗಳ ಸಂದೇಶ ಅವಶ್ಯ ಓದಬೇಕಾದ ಕೃತಿ. ಶ್ರೀ ಪ್ರಭುಚನ್ನಬಸವ ಸ್ವಾಮಿಗಳು ಕವಿಗಳು ವಿಶ್ವಾರಾಧಕರು’’ ಎಂದು ಆಶೀರ್ವದಿಸಿದ್ದಾರೆ.
ಪೂಜ್ಯ ಜಗದುರು ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು “ಇದು ಬರಿಯ ಕಾಗದದ ಕಟ್ಟಲ್ಲ, ಇದೊಂದು ಚಿನ್ಮಯ ಶಕ್ತಿ, ಮಾರ್ಗದರ್ಶಕ ದೀಪಸ್ತಂಭ’’ಎAಬ ಕುವೆಂಪು ಅವರ ಮಾತುಗಳನ್ನು ನೆನೆದು ಶುಭ ಕೋರಿದ್ದಾರೆ.
ಎರಡು ವರುಷದ ಈ ಕರೋಣಾ ಪರಿಸ್ಥಿತಿಯಲ್ಲಿ ಎಲ್ಲರ ಮನಸ್ಸು ಖಿನ್ನತೆಯಲ್ಲಿದ್ದರೆ, ನಮ್ಮ ಅಥಣೀಶರ ಮನಸ್ಸು ಹೊಸತು ಹೊಸತಿನ ಅನ್ವೇಷಣೆಗಾಗಿ ಅಣಿಯಾಗಿರುತ್ತಿತ್ತು. ಸದಾ ಹೊಸತನ್ನು ಪರಿಚಯಿಸುವದು ಅವರ ಕಾಯಕ. ಇದಕ್ಕಾಗಿ ಸುಮಾರು ಐದುನೂರು ಕೃತಿಗಳ ಓದು, ಟಿಪ್ಪಣಿ, ಹೆಚ್ಚಿನ ಮಾಹಿತಿಗಾಗಿ ಮಹಾತ್ಮರ ಅನುಭಾವ ಕೇಳುವುದು, ಕ್ಷೇತ್ರಕಾರ್ಯ ಎಲ್ಲವುಗಳನ್ನು ಸದ್ದಿಲ್ಲದೆ ಮಾಡಿದ ಪರಿಶ್ರಮದ ಫಲವೇ ಈ ಕೃತಿ. ಅದು ಅವರ ಸಾಧನೆಯ ಹಿರಿಮೆಗೊಂದು ಗರಿ ಎನ್ನಬೇಕು.
ಈಗಾಗಲೇ ಕೃತಿ ಕುರಿತು ಅನೇಕ ಪೂಜ್ಯರು, ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಮೈಸೂರು ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿ ಚುಂಚನಗಿರಿಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಇನ್ನೂ ಅನೇಕ ಪೂಜ್ಯರುಗಳಲ್ಲದೆ, ಕಲಿಕೇರಿಯ ಪಂ.ರಾಜಗುರು ಗುರುಸ್ವಾಮಿ, ಡಾ. ಪ್ರದೀಪಕುಮಾರ ಹೆಬ್ರಿ, ಸಂಗೀತ ಸಾಮ್ರಾಟಗಾರ ಹಂಸಲೇಖಾ, ಚನಬಸಪ್ಪ ಚೌಗಲಾ ಕೃತಿಕುರಿತಾದ ಕವನಗಳನ್ನು ರಚಿಸಿದ್ದಾರೆ.
ಕೃತಿಯ ಕುರಿತು ನಾಡಿನಾದ್ಯಂತ ತುಂಬ ಮೆಚ್ಚುಗೆ ವ್ಯಕ್ತವಾಗಿದ್ದು. ಪೂಜ್ಯರನ್ನು ಆಹ್ವಾನಿಸಿ ಪ್ರಶಸ್ತಿ. ಬಿರುದು ನೀಡಿ ಗೌರವಿಸಿದ್ದಾರೆ. ಪೂಜ್ಯ ಪ್ರಭುಚನ್ನಬಸವ ಸ್ವಾಮೀಜಿಯವರ ಪರಿಶ್ರಮದ ಈ ಬೃಹತ್ ಗ್ರಂಥ ಕನ್ನಡ ಸಾಹಿತ್ಯ ಲೋಕದ ಮೇರುಕೃತಿಯಾಗಿದ್ದು, ಮುಂದಿನ ದಿನಮಾನಗಳಲ್ಲಿ ಎಲ್ಲ ಭಾಷೆಗಳಲ್ಲಿ ಅನುವಾದಗೊಂಡು ಇದು ವಿಶ್ವಮಾನ್ಯಕ್ಕೆ ಸಲ್ಲುವಂತಾಗಲಿ ಎಂದು ಹಾರೈಸೋಣ.
ಲೇಖಕಿ: ರೋಹಿಣಿ ಯಾದವಾಡ. ಅಥಣಿ. ಮೊ. ೯೫೯೧೫೩೬೧೫೬.