e-ಸುದ್ದಿ ಮಸ್ಕಿ
ಬಿಜೆಪಿಯ ಹಿರಿಯ ಮುಖಂಡ ತುಂಗಭದ್ರಾ ಕಾಡ ಅಧ್ಯಕ್ಷ ಬಸನಗೌಡ ತುರ್ವಿಹಾಳ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಕೈ ಹಿಡಿಯಲು ಸಜ್ಜಾಗಿದ್ದಾರೆ. ಈಗಾಗಲೇ ಒಂದು ಸುತ್ತು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಿ.ವಿ.ನಾಯಕ ಅವರ ಜತೆಗೂ ಚರ್ಚಿಸಿದ್ದಾರೆ. ಶುಕ್ರವಾರ ಕೆಪಿಸಿಸಿ ಅಧೈಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಶನಿವಾರ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್.ಬಸನಗೌಡ ತುರ್ವಿಹಾಳ ಕಾಂಗ್ರೆಸ್‍ನ ಪ್ರತಾಪಗೌಡ ಪಾಟೀಲ ವಿರುದ್ಧ ಕೇವಲ 213 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಪ್ರತಾಪಗೌಡ ಪಾಟೀಲ ಬಿಜೆಪಿ ಸೇರ್ಪಡೆಯಾದ ಮೇಲೆ ಇವರಿಬ್ಬರ ಸಂಬಂಧ ಎಣ್ಣೆ ಸಿಗೇಕಾಯಿ ರೀತಿಯಲ್ಲಿದ್ದರು. ರಾಜ್ಯದ ಬಿಜೆಪಿ ವರಿಷ್ಠರು ಇಬ್ಬರ ನಡುವೆ ನಡೆಸಿದ ಬೆಸುಗೆ ಗಟ್ಟಿಗೊಳ್ಳದೆ ಮತ್ತಷ್ಟು ಬಿರಾಕಾಗಿದ್ದು ಬಸನಗೌಡ ತುರ್ವಿಹಾಳ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.
ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಪ್ರತಾಪಗೌಡ ಪಾಟೀಲ್ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯ ನಾಯಕರು ಸ್ಪಷ್ಟ ಪಡಿಸಿದ್ದು, ಆರ್.ಬಸನಗೌಡ ತುರ್ವಿಹಾಳ ಈಗಾಗಲೇ ತೆರೆಮರೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುವ ವೇದಿಕೆಯನ್ನು ಸಿದ್ದತೆ ಮಾಡಿಕೊಂಡಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಉಪಚುನಾವಣೆಗೆ ಮುನ್ನವೇ ರಾಜಕೀಯ ಕಾವು ಹೆಚ್ಚಾಗಿದೆ.
ಕಾದು ಕುಳಿತ ಕಾಂಗ್ರೆಸ್: ಕಳೆದ ಬಾರಿ ಕಾಂಗ್ರೆಸ್ ವಶದಲ್ಲಿದ್ದ ಮಸ್ಕಿ ಕ್ಷೇತ್ರವನ್ನು ಈ ಬಾರಿಯೂ ಹೇಗಾದರೂ ಮಾಡಿ ತನ್ನ ವಶದಲ್ಲಿಯೇ ಇಟ್ಟುಕೊಳ್ಳಬೇಕೆಂದು ಹಠಕ್ಕೆ ಬಿದ್ದರಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇಲ್ಲಿಯವರೆಗೆ ಎಲ್ಲಯೂ ಹೇಳದೆ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಆರ್.ಬಸನಗೌಡ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಅವರಿಗೆ ಟಿಕೇಟ್ ನೀಡಿ ಬಿಜೆಪಿಗೆ ಪಾಠ ಕಲಿಸಬೇಕು ಎಂಬ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ ಫಲ ಕೊಡುತ್ತಾ ಕಾದು ನೋಡಬೇಕಾಗಿದೆ.