e-ಸುದ್ದಿ, ಮಸ್ಕಿ
ಎನ್‍ಆರ್‍ಬಿಸಿ 5ಎ ಕಾಲುವೆ ವಿಚಾರದಲ್ಲಿ ನಾನು ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿರುವೆ. ಮುಗ್ದ ರೈತರಿಗೆ ನನ್ನ ಮೇಲೆ ತಪ್ಪು ಕಲ್ಪನೆ ಬರುವಂತೆ ಕೆಲವರು ಬಿಂಬಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಈಗಾಗಲೇ ರೈತ ಹೊರಾಟಗಾರರನ್ನು ಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿಸಿ ವಾಸ್ತವ ಸ್ಥಿತಿಯನ್ನು ಮನಗಾಣಿಸಲಾಗಿದೆ. ಸರ್ಕಾರ ತಾಂತ್ರಿಕ ವರದಿಯನ್ನು ಕೇಳಿದೆ. ತಾಂತ್ರಿಕ ವರದಿ ಬಾರದ ಕಾರಣ ವಿಳಂಬವಾಗಿದೆ ಎಂದರು.
ನಂದವಾಡಗಿ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭವಾಗಿದ್ದು ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡರೆ 5ಎ ಕಾಲುವೆ ವ್ಯಾಪ್ತಿಯ ಗ್ರಾಮಗಳು ನೀರಾವರಿಗೆ ಒಳಪಡಲಿವೆ ಎಂದರು. ಚುನಾವಣೆ ಘೋಷಣೆಯಾಗುವ ಒಳಗಾಗಿ ಯೋಜನೆ ಅನುಷ್ಠಾನದ ಬಗ್ಗೆ ಘೋಷಣೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇದು ಅಸಾಧ್ಯ. ಸರ್ವೆ ಕಾರ್ಯ ಮುಗಿದ ನಂತರ ಪ್ರಮಾಣಿಕವಾಗಿ ಯೋಜನೆ ಅನುಷ್ಠಾನದ ಬಗ್ಗೆ ಪ್ರಯತ್ನಿಸುವೆ. ರೈತರು ಸುಳ್ಳು ಸುದ್ದಿಗಳಿಗೆ ಅವಕಾಶ ಕೊಡದೆ ಮತ್ತೊಮ್ಮೆ ನನಗೆ ಆರ್ಶೀವಾದ ಮಾಡಲಿ ಎಂದು ಮನವಿ ಮಾಡಿದರು.
——————
ಪಕ್ಷ ಬಿಡುವುದು ಅವರಿಗೆ ಬಿಟ್ಟದ್ದು ಃ ತುಂಗಭದ್ರಾ ಕಾಡ ಅಧ್ಯಕ್ಷ ಬಸನಗೌಡ ತುರ್ವಿಹಾಳ ಪಕ್ಷ ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ಮುಖಂಡರು ಹುಬ್ಬಳ್ಳಿಯಲ್ಲಿ ನಡೆಸಿದ ಸಂಧಾನ ಸಭೆಯಲ್ಲಿ ಪಕ್ಷದಲ್ಲಿ ಉಳಿಯುವುದಾಗಿ ತಿಳಿಸಿದ್ದಾರೆ. ಅವರ ಹಿಂಬಾಲಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಬಂದಿದ್ದು ಅವರ ವಿವೇಚನೆಗೆ ಬಿಟ್ಟದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.
ಯಾವುದೇ ಕ್ಷಣದಲ್ಲಿ ಉಪ ಚುನಾವಣೆಯಲ್ಲಿ ಘೋಷಣೆಯಾಗಲಿ ಚುನಾವಣೆ ಎದುರಿಸಲು ಸಿದ್ಧ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಮಹಾದೇವಪ್ಪಗೌಡ ಪಾಟೀಲ, ತಿಮ್ಮಗೌಡ ಗುಡದೂರು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ ಇದ್ದರು.