ಅಜಗಣ್ಣನವರ ವಚನಗಳಲ್ಲಿ ಶಿವಾಚಾರ
ಜಾಗತೀಕರಣದಿಂದ ಆವೃತ್ತವಾದ ಈ ಜಗತ್ತು ಅನುಭಾವದ ಹಸಿವಿನಿಂದ ನರಳಿತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಅನುಭಾದ ಅನುಭೂತಿಯು ಒಂದು ಸಿದ್ಧ ಮಾದರಿಯ ನೆಲೆಯಿಂದ ಲಭ್ಯವಾಗುವುದಿಲ್ಲ. ಅದಕ್ಕೆ ಧರ್ಮದ ಶಾಸ್ತ್ರೀಯ ಚೌಕಟ್ಟು ಗಳು ಮತ್ತು ಮಾನಸಿಕ ಅಧ್ಯಯನಗಳು ನಮ್ಮನ್ನು ವಿಶ್ವಾತ್ಮಕ ಮಾದರಿಯ ನೆಲೆಯಲ್ಲಿ ಕಾಣಲು ಬಯಸುತ್ತದೆ.
ಆದ್ದರಿಂದ ಆಧ್ಯಾತ್ಮದ ವಿಶ್ವವು ಒಂದು ನಿಗೂಢ ಪಯಣ. ಇದಕ್ಕೆ ಅನುಭಾವದ ತರ್ಕ, ವಚನಗಳ ವ್ಯಾಖ್ಯಾನಗಳ ಪರಿಚಯ ಬೇಕಾಗುತ್ತದೆ. ಹೀಗಾಗಿ ಅರ್ಥ ವಿಸ್ತಾರತೆಯನ್ನು ಹೆಚ್ಚಿಸುವ ಷಟ್ ಸ್ಥಲಗಳು , ಅಷ್ಟಾವರಣಗಳು ಪರಮ ಆತ್ಮದಲ್ಲಿ ಒಂದಾಗುವ ಘಟ್ಟಗಳು. ಇವು ಭಕ್ತಿಯ ಸೋಪಾನಗಳಾಗಿ ವಿವರಿಸುತ್ತವೆ.
ವಚನಕಾರರ ಸಿದ್ದಾಂತದಲ್ಲಿ ಸ್ಥಲ ಎನ್ನುವ ಪದ ವಿಶಿಷ್ಠವಾದದ್ದು. ಇದಕ್ಕೆ ಸೋಪಾನ ಮೆಟ್ಟಿಲು ಎಂದು ಬಳಸಲಾಗುತ್ತದೆ. ವಚನಕಾರರ ಸ್ಥಲ ಸಿದ್ದಾಂತಗಳನ್ನು ಆರು ಸ್ಥಲಗಳಾಗಿ ಹೇಳುತ್ತದೆ. ಪರಶಿವನ ಸೃಷ್ಟಿಯ ಶಕ್ತಿಯನ್ನು ಮಾಯೆ ಅಥವ ಶಕ್ತಿ ಎಂದು ಗುರುತಿಸಲಾಗಿದೆ. ಹೀಗಾಗಿ ಧರ್ಮದ ಸಾಂದ್ರತೆಯನ್ನು ನಿರೂಪಿಸುವಾಗ ಲಿಂಗಾಂಗ ಸಾಮರಸ್ಯದಲ್ಲಿ ಕೊನೆಯಾಗುತ್ತದೆ. ಇದನ್ನೇ ಶರಣರು ಪಂಚಾಚಾರದಲ್ಲಿ ವಿವರಿಸಿದರು.
ಲಿಂಗಾಚಾರ | ಅಂಗದ ಶುದ್ಧಿ ||
ಸದಾಚಾರವು | ಮನದ ಶುದ್ಧಿ ||
ಶಿವಾಚಾರ | ಧನದ ಶುದ್ಧಿ ||
ಗಣಾಚಾರ | ನಡೆಯ ಶುದ್ಧಿ ||
ಭೃತ್ಯಾಚಾರ | ನುಡಿಯ ಶುದ್ಧಿ ||
ಇಂತಪ್ಪ | ಪಂಚಾಚಾರಗಳಿಂದ ||
ಜಡ ದೇಹ | ಶುದ್ದವಾಗಿಪ್ಪುದು ||
ಇದು ವಚನಕಾರರ ಶಾಸ್ತ್ರೀಯ ಅಧ್ಯಯನವಾಗಿದೆ. ಅಜಗಣ್ಣನ ವಚನಗಳಲ್ಲಿ ಶರಣ ಮೀಮಾಂಸೆಯ ಪಂಚಾಚಾರಗಳಲ್ಲಿ ಮೂರನೆ ಆಚಾರ ಈ ಶಿವಾಚಾರ. ಶಿವಾಚಾರದ ಆಂತರಿಕ ಪರಿಕಲ್ಪನೆಗಳ ಮೂಲಕ ಪ್ರವೇಶಿಸುವ ಪ್ರಯತ್ನ ಈ ಲೇಖನದ್ದು.
ಶಿವಾಚಾರ ಕುರಿತು ಶರಣರು ಸನಾತನ ಭಾವದ ಅರಿವನ್ನು ಕೊಟ್ಟರು. ಜಗದ ಜನರೆಲ್ಲಾ ಒಂದೇ ಎಂಬ ಸಮತಾ ಭಾವನೆಯೇ ಶಿವಾಚಾರವೆಂದು ಸ್ಪಷ್ಟಪಡಿಸಬಹುದು. ಇಲ್ಲಿ ಪ್ರತಿಯೊಬ್ಬನ ಸಮತ್ವದ ಜೊತೆಗೆ ಸಮಾಜದ ಆಗು-ಹೋಗುಗಳ ಸಮತೋಲನವನ್ನು ಕಂಡುಕೊಳ್ಳಬಹುದು. ವರ್ಣ, ಜಾತಿ, ಆಶ್ರಮಗಳಲ್ಲಿ ಭೇದ ಭಾವವನ್ನು ಕಾಣಲಾಗುವುದಿಲ್ಲ.
ಚೆನ್ನಬಸವಣ್ಣನವರು ಅಜಗಣ್ಣನವರ ವ್ಯಕ್ತಿತ್ವದಬಗ್ಗೆ ಹೀಗೆ ಹೇಳಿದ್ದಾರೆ. ಆದ್ಯರ ಅರವತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ, ಅಜಗಣ್ಣನ ಐದು ವಚನಕ್ಕೆ ಮಹದೇವಿಯಕ್ಕನ ಒಂದು ವಚನ ನಿರ್ವಚನ. ಮಹಾದೇವಿಯಕ್ಕನನ್ನು ಬಿಟ್ಟರೆ ಎರಡನೇ ಸ್ಥಾನವೇ ಅಜಗಣ್ಣನದು. ಅಜಗಣ್ಣನ ಜೀವನದ ಆಧ್ಯಾತ್ಮ ಹೀಗಿದೆ. ಒಂದು ದಿನ ರಾತ್ರಿ ಘಟಸರ್ಪ ಒಂದು ತನ್ನ ಫಣಾಫಣಿಯನ್ನು ನೆಲದ ಮೇಲಿರಿಸಿ ಅದರ ಬೆಳಕಿನಲ್ಲಿ ಆಹಾರ ಹುಡುಕಲು ಹೋದಂತೆಯೇ ಶಿವ ಮಂತ್ರೋಚ್ಚಾರ ಸ್ವರವನ್ನು ಕೇಳಿ ಆ ಸರ್ಪವು ಲಗುಬಗೆಯಿಂದ ಬಂದು ಆ ಫಣಿ ರತ್ನವನ್ನು ಮೊದಲಿನಂತೆ ಹೆಡೆಯಲ್ಲಿ ಹುದುಗಿಸಿ ಕೊಂಡು ಹರಿದು ಮಾಯವಾಯಿತಂತೆ. ಸರ್ಪಕ್ಕೆ ರತ್ನ ಒಂದಿರುವಂತೆ ಮಾನವನಿಗೂ ರತ್ನವೊಂದಿದೆ. ಅದೇ ಇಷ್ಟ ಲಿಂಗವೆಂಬ ರತ್ನವನ್ನು ಸರ್ಪದಂತೆ ಜತನವಾಗಿರಿಸಲಾರೆನೆ? ಅಂದಿನಿಂದ ಬಹಿರಂಗ ಪೂಜೆ ಮಾಯವಾಗಿ ಅಂತರಂಗದ ಆರಾಧನೆ ಗುಪ್ತ ಭಕ್ತಿಯ ದರ್ಶನ ಪ್ರಾರಂಬವಾಯಿತು. “ಅಂಡಜ ಪ್ರಾಣಿಯಾದ ಈ ಹಾವು ಅಮೂಲ್ಯ ಪ್ರಕಾಶಮಯ ರತ್ನವನ್ನು ಗುಪ್ತವಾಗಿರಿಸಿಕೊಂಡಂತೆ ಸ್ವ-ಪ್ರಕಾಶದ ಸೌಂದರ್ಯದ ಮಹಾ ಲಿಂಗದ ಮಂತ್ರವನ್ನು ಅಂತರಂಗದಲ್ಲಿ ಅಡಗಿಸಿ ಆರಾಧಿಸಲು ಪಿಂಡಜರಾದ ಮಾನವರಿಗೇಕೆ ಸಾದ್ಯವಿಲ್ಲ. ಇದು ಅಜಗಣ್ಣನ ಅಮೂರ್ತ ದಾರ್ಶನಿಕತೆ.
ಈಗಿನ ಗದಗ ಜಿಲ್ಲೆಯ ಲಕ್ಕುಂಡಿಯ ಒಕ್ಕಲುತನ ಕುಟುಂಬದಲ್ಲಿ ಅಜಗಣ್ಣ ಮುಕ್ತಾಯಕ್ಕ ಜನಿಸುತ್ತಾರೆ. ಇವರ ಅಣ್ಣ ತಂಗಿಯ ಪ್ರೇಮ ಅದ್ಭುತವಾದದ್ದು. ದೇಹ ಬೇರೆಯಾದರೂ ಅಣ್ಣ ತಂಗಿಯರ ಆತ್ಮ ಒಂದೇ ಆಗಿತ್ತು. “ಅಜ” ಅಂದರೆ ಬ್ರಹ್ಮ. ಅಜಂ ಅಂದರೆ ನಿರ್ವಿಕಲ್ಪ. “ಗ’ ಎಂಬ ಪ್ರತ್ಯಯ ಸೇರಿಸಿದಾಗ ಅಜಗ ಬ್ರಹ್ಮ. ಬ್ರಹ್ಮನ ಮಟ್ಟಿಕ್ಕೆ ಬ್ರಹ್ಮತ್ವ ಪಡೆದವನು ಎಂಬ ಉಲ್ಲೇಖಗಳು ಸ್ಪಷ್ಟವಾಗುತ್ತವೆ. ವಚನ ಸಾಹಿತ್ಯ ಚರಿತ್ರೆಯಲ್ಲಿ ಅಜಗಣ್ಣನ ಕೇವಲ ಹತ್ತು ವಚನಗಳು ಲಭ್ಯವಾಗಿವೆ.
ಅಜಗಣ್ಣನ ಈ ವಚನ.
ಅಷ್ಟ ತನು ಮೂರ್ತಿ ಶಿವನೆಂಬೆ | ಕಷ್ಟ ಜೀವಿಗಳ ಏನೆಂಬೆನಯ್ಯ ||
ಯುಗ ಜುಗಂಗಳು ಪ್ರಳಯದಲ್ಲಿ | ಧರೆ ಜಲದಲ್ಲಿ ಅಡಗಿತ್ತು ||
ಅಗ್ನಿ ವಾಯುವಿನಲ್ಲಿ ಅಡಗಿತ್ತು | ವಾಯು ಆಕಾಶದಲ್ಲಿ ಅಡಗಿತ್ತು ||
ಆಕಾಶ ಅತೀತನಲ್ಲಿ ಅಡಗಿತ್ತು | ಆದಿ ಅನಾದಿಯೊಳಡಗಿತ್ತು ||
ಅನಾದಿ ನಿಜದೊಳಡಗಿತ್ತು | ಇಂತೀ ಅಷ್ಟ ತನು ಒಂದರೊಳಗೊಂದು ||
ಹುಟ್ಟುವಲ್ಲಿ ಎಂದಳಿದೆನೆಂದು | ಹುಟ್ಟಿ ದೆನೆಂದು ಬಲ್ಲವರುಂಟೆ ||
ಹುಟ್ಟಿದವ ಅಳಿದವನೆಂಬ ಶಬ್ದವ | ನುಡಿಯಲಾಗದು ಇದು ಕಾರಣ ||
ನಮ್ಮ ಮಹಾಘನ | ಸೋಮೇಶ್ವರನು ||
ಮಾಡಿದಡಾದವು ಬೇಡ | ಬೇಡ ಎಂದಡೆ ಮಾದವು ||
ಚರಾಚರ ಜಗತ್ತೆಲ್ಲಾ ಆ ಶಿವನ ಪ್ರಸಾದ, ಅವನ ಪ್ರತೀಕ, ಅವನ ಪ್ರಭೆ, ಎಂಬುದನ್ನು ಅಜಗಣ್ಣ ಕಂಡುಕೊಳ್ಳುತ್ತಾ ಹೋಗುತ್ತಾನೆ. ಪೃಥ್ವಿ, ಅಪ್ಪು, ವಾಯು, ತೇಜ, ಆಕಾಶ, ಸೂರ್ಯ, ಚಂದ್ರ, ಜೀವಾತ್ಮ. ಈ ಜಗತ್ತು ಸೃಷ್ಟಿಯ ಸಾಲು . ವಚನ ಸಾಹಿತ್ಯದ ಶಾಸ್ತ್ರೀಯ ಜ್ಞಾನದ ಅಂಗೀಕಾರ. ಶಿವಲಿಂಗ ಸೃಷ್ಟಿ ಬೆಳಗು ಪ್ರಕಾಶ. ಕವಿ ಪ್ರತಿಭೆಯ ಶಬ್ದಗಳು. ಅಜಗಣ್ಣನ ಬೆಳಗಿನ ತತ್ವಗಳಾಗಿವೆ. ಬೆಡಗಾಗಿವೆ.
ಸ್ವತಃ ಶಿವನೇ ಪ್ರಾಣಲಿಂಗವಾಗಿ ಬರುವ ಆದ್ಯಾತ್ಮದ ಅನುಭಾವಿಕ ಸ್ಥಿತಿ. “ಶಿವ ಎಂಬುದು ಎರಡು ಮೂಲಭೂತ ಮಗ್ಗಲನ್ನು ನಿರ್ದೇಶಿಸುತ್ತದೆ. ಶಿವ ಎನ್ನುವ ಪದ ಅಕ್ಷರಶಃ “ಯಾವುದು ಇಲ್ಲವೊ ಅದು”. ಆಧುನಿಕ ವಿಜ್ಞಾನ ಕೂಡಾ ಎಲ್ಲವೂ ಶೂನ್ಯದಿಂದಲೇ ಸೃಷ್ಟಿಯಾಗುತ್ತವೆ ಮತ್ತೆ ಶೂನ್ಯದಲ್ಲಿಯೆ ಲೀನವಾಗುತ್ತವೆ ಎಂಬ ಅಂಶವನ್ನು ಸಾದರ ಪಡಿಸಿದೆ. ಅಸ್ತಿತ್ವದ ತಳಹದಿ ಮತ್ತು ಬ್ರಹ್ಮಾಂಡದ ಮೂಲಭೂತ ಗುಣವು ಅಗಾಧ ಶೂನ್ಯವೆ. Galaxies, ಆಕಾಶಗಂಗೆ ಒಂದು ಚಿಕ್ಕ ಸಂಭವ ಅಷ್ಟೇ. ಕೇವಲ ಚಿಟಿಕೆಯಷ್ಟು. ಉಳಿದಿದ್ದೆಲ್ಲ ವಿಶಾಲವಾದ ಶೂನ್ಯ ಆಕಾಶ. ಇದನ್ನು ಶಿವ ಎಂದು ನಿರ್ದೇಶಿಸಲಾಗುತ್ತದೆ.
ಅಜಗಣ್ಣನ ಪ್ರಕಾರ ಬ್ರಹ್ಮಾಂಡದ ಉಗಮ ಸ್ಥಾನ ಶಿವನ ಪ್ರಸಾದ ವಾಗಿದೆ. “ಹುಟ್ಟಿದೆನೆಂದು ಬಲ್ಲವರುಂಟೆ? ಹುಟ್ಟಿದವ ಅಳಿದವನೆಂಬ ಶಬ್ದವ ನುಡಿಯಲಾಗದು” ಅಜಗಣ್ಣನ ಪ್ರಕಾರ ಜೀವಿಯ ಕ್ಷಣಿಕತೆಯನ್ನು ವಿಸ್ತರಿಸುತ್ತಾ ಬ್ರಹ್ಮಾಂಡದ ಉಗಮ ಸ್ಥಾನ ಮತ್ತು ಇದೇ ಎಲ್ಲವನ್ನು ಸೆಳೆದು ನುಂಗುವ ಅಂತಿಮ ಸತ್ಯವೂ ಕೂಡ. ಎಲ್ಲವೂ ಶಿವನಲ್ಲಿ ವಿಲೀನವಾಗುತ್ತದೆ.
ಶಿವಾಚಾರವನ್ನು ನಿರ್ಮಲ ಮನಸ್ಸಿನಿಂದ ಅರ್ಪಿಸಿಕೊಂಡ ನಂತರ ಸಮಾಜದ ಮೇಲು ಕೀಳುಗಳು ಇಲ್ಲವಾಗುತ್ತವೆ. ಎಲ್ಲರನ್ನೂ ಸಮಭಾವನೆಯಿಂದ ಕಾಣುವ ಸೂಕ್ಷ್ಮ ಸಂವೇದನಾ ಶೀಲತೆ ಇದಾಗಿದೆ. “ಲಿಂಗಾಚಾರವೆ ಪ್ರಾಣವಾಗುವ ಶಿವಾಚಾರಕ್ಕೆ ಜೀವ ಚೈತನ್ಯ ತುಂಬುವ ಹಂತವಾಗಿ ಮುಂದುವರೆಯುತ್ತದೆ. ಶಿವಾಚಾರಿಗಳು ಸಾಕ್ಷಾತ್ ಶಿವನ ಸ್ವರೂಪರು. ಎಲ್ಲೆಲ್ಲೂ ಶಿವನ ದರ್ಶನವನ್ನು ಕಾಣಬಲ್ಲರು. ಸೃಷ್ಟಿ ಸ್ಥಿತಿ ಲಯ ನಿಗ್ರಹ ಅನುಗ್ರಹ ಗಳೆಂಬ ಪಂಚಕೃತ್ಯಗಳು. ಪರಶಿವ ಸ್ವರೂಪಿಗಳಾದ ಆರಾಧಕರಿಗೆ ಶಿವನೇ ಭಕ್ತರ ರಕ್ಷಕ ಮತ್ತಾರೂ ಅಲ್ಲ ಎಂಬುದೆ ಶಿವಾಚಾರ ವೆನಿಸುತ್ತದೆ.
ಅಜಗಣ್ಣನ ಈ ಮಾತು “ಲಿಂಗ ಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ ಗುರು ದ್ರೋಹಿಗಳ ಏನೆಂಬೆ” ಇದು ಕಾರಣ”ಗುರು ಲಿಂಗ ಜಂಗಮ ತತ್ವವು ಆದ್ಯಾತ್ಮಿಕ ಸೀಮೆಯ ಸಾಮಾಜಿಕ ರಕ್ಷಣೆಯ ಶಕ್ತಿಯಾಗಿ ಕಂಡಿತು. ಹೀಗಾಗಿ ಶಿವಾಚಾರ ಎನ್ನುವುದು ಆದ್ಯಾತ್ಮಿಕ. ಸಂಕಲ್ಪದ ಸಾಮಾಜಿಕ ರೂಪ.
ಅಜಗಣ್ಣ ಶಿವಭಕ್ತಿಯನ್ನು ಹೊರಗಡೆ ತೋರಿಸದೆ ದಾರ್ಶನಿಕನಂತೆ ನಿರಾಡಂಬರದ ಧ್ಯಾನ ಧಾರಣೆಗಳೆ ಅವನ ಸಾಧನೆಯ ಸೂತ್ರಗಳಾದವು. ಅಜಗಣ್ಣ ಅನಾಚಾರಿ ಎಂಬ ಮಾತು ಪ್ರಚಲಿತವಾಯಿತು. ಗೆಳೆಯರ ಕೀಟಲೆಗಳಿಂದ ಬೇಸತ್ತು ಇಷ್ಟಲಿಂಗ ಕೊಡು ಎಂದು ಅಪಹಾಸ್ಯಮಾಡಿದಾಗ ಲಿಂಗವನ್ನು ಅಂಗೈಯಲ್ಲಿ ಬಿಗಿಯಾಗಿ ಹಿಡಿದುಕೊಂಡು ದೃಷ್ಟಿ ನಸುಳಿಸಿ ಬಾಯಲ್ಲಿ ಹಾಕಿಕೊಂಡು ಓಃ ನಮಃ ಶಿವಾಯವೆಂದು ನುಂಗಿ ಬಿಟ್ಟನು. ಅದು ಅವನ ಹೃದಯ ಕಮಲದಲ್ಲಿ ಜ್ಯೋತಿರ್ಲಿಂಗವಾಗಿ ತಳಿಸಿತಂತೆ. ಇಂತಹ ಚಾರಿತ್ರಿಕ ಸಮೀಕ್ಷೆಗಳಿಂದ ಅಜಗಣ್ಣ ಒಬ್ಬ ಗುಪ್ತ ಶರಣ. ಪ್ರಚಾರ ಬಯಸದ ಗುಪ್ತ ಭಕ್ತನಾಗಿದ್ದನೆಂಬುದು ಸ್ಪಷ್ಟಪಡಿಸಬಹುದು. ಅಜಗಣ್ಣನ ಈ ವಚನ
ಆಯಃ ಕರ್ಮಚ | ವಿತ್ತಂಚ ವಿದ್ಯಾ ||
ನಿಧನ ಮೇವಚ | ಎಂದು ಇದಕ್ಕಂಜಿ ||
ಉಮ್ಮಳಿಸುವ | ಮಾಯಾ ಪ್ರಸೂತ ||
ಮಾನವ ನೋಡಾ | ಆಯುಷ್ಯವೇ ||
ಲಿಂಗ ಕ್ರಿಯೆ | ಜಂಗಮ ನಿಧನವೇ ||
ಸುಜ್ಞಾನ ವಿದ್ಯೆಯೇ | ಶಿವಮಂತ್ರ ||
ದೇಹವೇ | ದಾಸೋಹಮ್ಮೆಂದು ||
ಶ್ರೀಗುರು ಬರದನಾಗಿ | ಹೊಟ್ಟೆಯ ಶಿಶುವಿಗೆ ||
ಬೇರೆ ಬಟ್ಟಲು | ಬಯಸುವರೊಳೆ ||
ಮಹಾಘನ | ಸೋಮೇಶ್ವರನಲ್ಲಿ ||
ಅಯೋನಿ | ಸಂಬವನಾದ ಶರಣಂಗೆ ||
ಸಾಮಾಜಿಕ ನೆಲೆಯ ಸ್ವರೂಪದ ಸಮತೆ ಶಿವಾಚಾರದಲ್ಲಿ ಕಂಡು ಬರುವ ಒಂದು ಪ್ರಮುಖ ಅಂಶವಾದರೆ ಇನ್ನೊಂದು ವ್ಯಕ್ತಿತ್ವ ವಿಕಾಸದ ಹಂತ. ವಾಸ್ತವವಾಗಿ ಇವೆರಡೂ ಬೇರೆಯಲ್ಲ. ಸಾಮಾಜಿಕ ಸಂಪೂರ್ಣತೆ ಸಾಧಿಸಬೇಕಾದರೆ ಅದು ಬೌದ್ಧಿಕ ನಿರೂಪಣೆಗಳಿಂದ, ಪ್ರತಿ ಸಾಧನೆಗಳಿಂದ ಆಗಲಾರದು. ವೈಯಕ್ತಿಕ ವಿಕಾಸದ ನೈತಿಕ ವ್ಯಾಖ್ಯಾನದ ಮೂಲಕ ನಡೆ ನುಡಿಗಳಲ್ಲಿ ಅಳವಡಬೇಕು.
ಅಜಗಣ್ಣನ ಪ್ರಕಾರ, ಆಯಃ ಕರ್ಮಚ ವಿತ್ತಂಚ ವಿದ್ಯಾ ಎನ್ನುವ ಮೂಲಕ ಶಿವಾಚಾರದ ಅನುಭವ ಗುರು ಹಸ್ತದಿಂದ ಬಂದದ್ದಾಗಿದೆ. ಇಲ್ಲಿ ಲಿಂಗ ಸಾಮಾಜಿಕ ನೆಲೆಯ ಸ್ವರೂಪದ ಬೆಳಕಾಗಿದೆ. ಅಜಗಣ್ಣನ ಪ್ರಕಾರ ಸಾಮಾಜಿಕವಾಗಿ ಧರ್ಮ ಜಿಜ್ಞಾಸೆ ಮಾಡಿದ ಮೇಲೆ ಶಿವ ಜಿಜ್ಞಾಸೆ ಮಾಡುವುದು ಸರಿಯಲ್ಲ. ಪಾರಮಾರ್ಥಿಕದಲ್ಲಿ ಇಚ್ಚಾ ಜ್ಞಾನ ಕ್ರಿಯಾ ಶಕ್ತಿಗಳು ಲೌಕಿಕರಲ್ಲಿ ಆಶೆ ಜ್ಞಾನಗಳಾಗಿವೆ. ಸಂಸಾರದ ಮಾಯಾ ಪ್ರಪಂಚದಲ್ಲಿ “ಹೊಟ್ಟೆಯ ಶಿಶು” ಆಂತರಿಕ ಸಂವೇದನೆಯ ಒಡಲ ಶಕ್ತಿಗೆ ತಾನೇ ತಾಯಿಯಾಗುವುದು. ಸಮಾಜದಲ್ಲಿ ಶಿವಮಂತ್ರದಿಂದ ಶಿವಾಚಾರ ಗಟ್ಟಿ ಗೊಳಿಸುವುದು. ಅಜಗಣ್ಣ ಮತ್ತು ಶಿವನ ನಡುವೆ ಎರಡು ಒಪ್ಪಂದಗಳು. ಒಂದು ಶಿವಾಚಾರದಿಂದ ಕೂಡಿದ ಸಾಮಾಜಿಕ ಕಲ್ಪನೆ ಇನ್ನೊಂದು ಸಂಸಾರದ ಮಾಯೆಯ ಕಲ್ಪನೆ.
“ಅಯೋನಿಯಲ್ಲಿ ಹುಟ್ಟಿದ ಶಿಶು ನಾನು” “ಅ” ಮನುಷ್ಯನಾಗಿ ಹುಟ್ಟಿ ಕೀರ್ತಿವಂತನಾಗುವುದು. ಮತ್ತು ಸಾಧಕನ ಉತ್ಪತ್ತಿ ರಹಿತವಾದ ಜ್ಞಾನವೆಂಬ ಸುರಧೇನು. ಆಂತರ್ಯದಲ್ಲಿ ಘನೀಕರಿಸಿ ಕೊಳ್ಳುವ ಸ್ಥಿತಿ. ಹೀಗಾಗಿ ಪಂಚಾಚರವೆಂಬ ನಾವಿಣ್ಯತೆಯನ್ನು ವಚನಕಾರರು ಶರಣ ಧರ್ಮದಲ್ಲಿ ಸೋಪಾನ ಗಳನ್ನಾಗಿ ನಿರ್ಮಿಸಿದರು.
ಈ ಹಿನ್ನೆಲೆಯಲ್ಲಿ ಅಜಗಣ್ಣ ವಿವಾಹ ವಾದರೂ ಸುಖಿ ಸಂಸಾರವಾಗಿರಲಿಲ್ಲ. ಅಣ್ಣ-ತಂಗಿಯ ಗುರು ಶಿಷ್ಯರ ಬಾಂದವ್ಯ ಗಟ್ಟಿಯಾದಂತೆಲ್ಲಾ ಮುಕ್ತಾಯಕ್ಕ ವಿವಾಹವಾಗಿ ಹೋಗುವ ಸನ್ನಿವೇಶ ಬರುತ್ತದೆ. ಅಣ್ಣನನ್ನು ಅಗಲಲಾಗದೆ ದುಖಿಸುವಾಗ ಅಜಗಣ್ಣ ಹೀಗೆ ಹೇಳುತ್ತಾನೆ. ಹಿತ್ತಲಲ್ಲಿ ಒಂದು ಮಲ್ಲಿಗೆಯ ಗಿಡ ನೆಡು. ಆ ಗಿಡ ಬೆಳೆದಂತೆಲ್ಲಾ ನನ್ನ ಉನ್ನತಿ. ಅದು ಒಣಗಿದರೆ ಸಾವು ಎಂಬ ಸೂಚನೆ ಕೊಡುತಾನೆ. ಕೆಲ ದಿನಗಳ ನಂತರ ಗಿಡ ಒಣಗುವುದು. ಅಜಗಣ್ಣನ ಲಿಂಗೈಕ್ಯತೆ ಇದು ದೈವದ ವಿಶಿಷ್ಠತೆ. ಅಣ್ಣ ತಂಗಿಯ ಭಾವಗರ್ಭ ಇದಾಗಿದೆ. ಅಜಗಣ್ಣನು ಬಾಗಿಲಿನ ಮಣಿಕಟ್ಟಿಗೆ ತಲೆ ಒಡೆದು ಕೊನೆಯಾದ ವಿಷಯ ತಿಳಿದ ಮುಕ್ತಾಯಕ್ಕ ಮುಕ್ತ ಕೇಶಿಯಾಗಿ ಲಕ್ಕುಂಡಿಗೆ ಬರುತ್ತಾಳೆ. ಇದು ದುಃಖ ಪ್ರಣೀತ ಸನ್ನಿವೇಶ.
ಮುಕ್ತಾಯಕ್ಕ ಅಕ್ಕಮಹಾದೇವಿಯ ನಂತರ ಪ್ರಮುಖ ವಚನಕಾರ್ತಿ. ತನ್ನ ವಚನಗಳನ್ನು ಅಜಗಣ್ಣ ಅಜಗಣ್ಣ ತಂದೆ ಎಂದು ನಿರೂಪಿಸಿದ್ದಾಳೆ. ಆಕೆ ಏರಿದ ಆದ್ಯಾತ್ಮದ ನೆಲೆ ವಚನ ಸಾಹಿತ್ಯದಲ್ಲಿ ಜೀವ ತುಂಬಿದ ಮೌಲ್ಯಗಳು.
ತನ್ನ ಜೀವನದ ಆದ್ಯಾತ್ಮಿಕ ಭ್ರಾತೃವಾತ್ಸಲ್ಯದ ಸಾಕಾರ ನಿರಾಕಾರವಾಗಿದ್ದರಿಂದ ಮನೆಯಲ್ಲ ಇಡೀ ಲೋಕವೇ ಬರಿದಾಗಿ ಕಂಡ ಮುಕ್ತಾಯಕ್ಕ ದಿಕ್ಕುಗೆಟ್ಟು ಶೋಕ ಸಂತಪ್ತಳಾದಳು. ಇಷ್ಟು ದಿವಸ ಸಾಕಾರ ರೂಪದಲ್ಲಿದ್ದ ಅಣ್ಣ ನಿರಾಕಾರ ಆದನಲ್ಲಾ? ಮುಂದೆ ನನ್ನ ಗತಿ ಏನೆಂದು ಅಳುತ್ತಾ ಇರುವಾಗ ಆಗ ಅಲ್ಲಮಪ್ರಭು ಬರುತ್ತಾರೆ. ವಚನ ಸಹಿತ್ಯದಲ್ಲಿ ಅಲ್ಲಮ ಪ್ರಭು ಮುಕ್ತಾಯಕ್ಕರ ಸಂವಾದ ಶರಣ ದರ್ಶನದ ಚಾರಿತ್ರಿಕ ಸಮೀಕ್ಷೆ ಯಾಗಿದೆ. ಮುಕ್ತಾಯಕ್ಕನ ಈ ವಚನ
ಅಲರೊಳಡಗಿದ | ಪರಿಮಳದಂತೆ ||
ಪತಂಗದೊಳ | ಅಡಗಿದ ಅನಲದಂತೆ ||
ಶಶಿಯೊಳಡಗಿದ | ಷೋಡಶ ಕಳೆಯಂತೆ ||
ಉಲುಹಡಗಿದ | ವಾಯುವಿನಂತೆ ||
ಸಿಡಿಲೊಳಡಗಿದ ಗಾತ್ರದ | ತೇಜದಂತಿರಬೇಕಯ್ಯ ||
ಯೋಗಿ ಎನ್ನ | ಅಜಗಣ್ಣ ತಂದೆ ||
ಯೋಗದಲ್ಲಿ ದೇಹವನ್ನು ವಜ್ರ ಕಾಯವಾಗಿಸಿ ಕೊಳ್ಳುವುದು ಸಾಧಕರ ಸಾಧನೆ. ಕಾಯಕ್ಕೆ ಬಲಿಷ್ಠತೆ ಬರಬೇಕಾದರೆ ದೇಹ ದಂಡನೆಯ ಕಠಿಣ ವ್ರತ ಮಾಡ ಬೇಕಾಗುತ್ತದೆ. ಸಂಸಾರ ವ್ಯಾಮೋಹದ ಹಂಗು ಹರಿಯಬೇಕಾಗುತ್ತದೆ. ಶರೀರ ರಹಸ್ಯ ಬೆನ್ನು ಹತ್ತಿದವನಿಗೆ ವಿರಕ್ತಿ ನಿರಾಕರಣೆ ದೇಹಕ್ಕೆ ಪ್ರಖರತೆ ಕೊಡುವ ರೂಪಗಳು.
ಯೋಗದಲ್ಲಿ ಪರಮ ಶ್ರೇಷ್ಠತೆಯನ್ನು ಬೆಡಗಿನ ಅರ್ಥಕೋಶದಲ್ಲಿ ಕಾಣ ಬೇಕು. ಪತಂಗ ದೀಪದ ಬೆಳಕಿನ ಸುಂದರತೆಗೆ ಮಾರು ಹೋದರೆ ರೆಕ್ಕೆಯನ್ನು ಸುಟ್ಟುಕೊಳ್ಳಬೇಕಾಗುತ್ತದೆ. ಸಾಧಕನು ಅಂತರಂಗದ ಅ ಜ್ಞಾನ ಕಳಚಿದರೆ ಪರಿಶುಭ್ರವಾದ ಹುಣ್ಣುಮೆ ಚಂಂದಿರನ ಷೋಡಶ ರೂಪದ ಸುಂದರತೆ ನಿನಗೊಲಿಯುತ್ತದೆ. ಸಿಡಿಲಿನಲ್ಲಿ ಅಡಗಿದ ಬೆಳಕು ಭಾವ ಸನ್ನಿಹಿತವಾದ ಅಂತರಂಗದಲಿ ಶಿವೋಹಂ ಎಂಬ ಪ್ರಣವ ತೇಜಪುಂಜ ಪ್ರತಿದ್ವನಿಸುತ್ತದೆ. ಸ್ಥೂಲ ಸೂಕ್ಷ್ಮ ಅಸಮತೆ ದಾರ್ಶನಿಕರ ನೈತಿಕಾರ್ಥಗಳು.
ಶಿವಾಚಾರದಲ್ಲಿ ಅಂಗ ಸಂಗವ ಬಿಟ್ಟು ಲಿಂಗ ಸಂಗಿಯಾಗ ಬೇಕು. ಹೀಗಾಗಿ ಶರಣರ ಆಶಯ ಗುರಿಗಳು ಪ್ರಧಾನವಾಗಿ ಮೂರು ತೆರನಾದವುಗಳು.
೧. ಜಾತಿಯ ವ್ಯವಸ್ಥೆ
೨. ಮಹಿಳೆಯ ಸ್ಥಾನ ಮಾನ
೩. ಅಂಧ ಶ್ರದ್ದೆಗಳು
ಶಿವಾಚಾರದಲ್ಲಿ ವ್ಯಕ್ತಿ ತಾನು ಶಿವಸ್ವರೂಪ ವೆಂದು ಕಂಡು ಕೊಳ್ಳುವುದರ ಜೊತೆಗೆ ಸಮಾಜವೂ ಶಿವಸ್ವರೂಪವೆಂದು ಭಾವಿಸುತ್ತಾನೆ.
–ಡಾ. ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.