ಸರಳತೆ: ಅಗಸರು,ಮೋಚಿ,ಟೇಲರ್ ಮತ್ತು ಹಡಪದ ಗೆಳೆಯರು
ಸರಳತೆಯ ಪಾಠ ನಾನು ಆಗಾಗ ಹೇಳಿಸಿಕೊಳ್ಳುತ್ತಾ ಇರುತ್ತೇನೆ. ಇದರಿಂದ ನನಗೇನೂ ಬೇಸರ ಇಲ್ಲ. ‘ನಿನ್ನ ಬಟ್ಟೆ ನೀನ ಒಕ್ಕೋ, ಸಾಧ್ಯ ಆದರ ಇಸ್ತ್ರಿನೂ ಮಾಡ್ಕೋ, ಬೂಟು ಚಂದಾಗಿ ಪಾಲಿಸು ಮಾಡ್ಕೋ… ‘ ಹೀಗೆ ಏನೇನೋ?
ಕಾಯಕ ಸಂಸ್ಕೃತಿಯ ಮಡಿವಾಳರು, ಮೋಚಿಗಳು, ಹಡಪದ ಸ್ನೇಹಿತರ ಜೊತೆ ನಂದು ಸಣ್ಣಾವ ಇದ್ದಾಗಿಂದ ಚಂದ ಗೆಳೆತನ. ‘ಇವೇನು ಭಾರಿ ಬಸವಣ್ಣನ ತುಂಡ ಆಗ್ಯಾನ’ ಅಂತ ಯಾಕ ಅಂತಿದ್ರು ಎಂದು ಈಗ ತಿಳ್ಯಾಕ ಶುರುವಾಗಿದೆ. ಏಕೆಂದರೆ ತಳ ಸಮುದಾಯದ, ನೆಲ ಮೂಲದ ಗೆಳೆಯರ ಮೇಲೆ ಸದಾ ಪ್ರೀತಿ, ವಿಶ್ವಾಸ ಮತ್ತು ಅಕ್ಕರೆ.
ಒಂದು ಸಣ್ಣ ಡಬ್ಬಿ ಅಂಗಡಿಯಲ್ಲಿ ಕಟಿಂಗ್ ಮಾಡುತ್ತಿದ್ದ ಹನುಮಂತ ಈಗ ದೊಡ್ಡ ಅಂಗಡಿ, ತಿರುಗೋ ಕುರ್ಚಿ ಇಟ್ಟಾನ. ಡಬ್ಬಿ ಅಂಗಡಿ ಇದ್ದಾಗ್ಯೂ ನಾ ನಿಸ್ಸಂಕೋಚವಾಗಿ ತಿಂಗಳಿಗೊಮ್ಮೆ ಹೋಗುತ್ತಿದ್ದೆ. ಈಗಲೂ ಅದೇ ಹನುಮಂತನ ಹತ್ತಿರ ಹೋಗ್ತೀನಿ. ಎಷ್ಟೋ ಸಲ ರೊಕ್ಕ ಒಯ್ಯದೇ ಇದ್ದಾಗ ಉದ್ರಿ ಹೇಳಿ ಬಂದದ್ದು ಇದೇ.
‘ಅವರು ಪಾಪ ದುಡಕೊಂಡ ತಿನ್ನೋರು, ಹಂಗ ಉದ್ರಿ ಹೇಳಬಾರದು’ ಎಂಬ ಉಪದೇಶ ಕೇಳಿಯೂ ನಕ್ಕು ಸುಮ್ಮನಾಗುತ್ತೇನೆ. ಈಗ ಉದ್ರಿ ಹೇಳೋ ಪ್ರಸಂಗ ಬರಂಗಿಲ್ಲ, ಹನುಮಂತ ಫೋನ್ ಪೇ ಇಟ್ಟಾನ. ಊರಿಗೆ ಹೋದ್ರ, ಹಡಪದ ಗೆಳೆಯ ಮಹಾದೇವನನ್ನು ಕಂಡು ಬರ್ತೀನಿ. ಸಾಹಿತ್ಯ ಸಮ್ಮೇಳನದ ಸಮಯದಾಗ ಹಡಪದ ಅಪ್ಪಣ್ಣ ಸಮಾಜದ ಗೆಳೆಯರು ಸನ್ಮಾನ ಮಾಡಿ ಹೋದದ್ದು ಅವಿಸ್ಮರಣೀಯ.
ಊರಲ್ಲಿ ಅಗಸರ ಗಾಳೆವ್ವ, ಮತ್ತವಳ ಮಗಳು ಹುಲಿಗೆಮ್ಮ ಬಟ್ಟೆ ಒಗೆಯಾಕ ಬರ್ತಿದ್ರು, ಈಗ ಆಕಿ ಆ ಕೆಲಸ ಬಿಟ್ಟು ಎಳನೀರು, ಕಬ್ಬಿನ ಹಾಲು ಮಾರಾಟ ಮಾಡ್ತಾಳ.
‘ಮಗ ಬಟ್ಟಿ ತೊಳ್ಯಾಕ ಒಲ್ಲೆ ಅಂತಾನಣ್ಣ’ ಅಂದಳು.
ಮೊನ್ನೆ ಊರಿಗೆ ಹೋದಾಗ ಕಬ್ಬಿನ ಹಾಲು ಕುಡಿಸಿ ರೊಕ್ಕ ಬ್ಯಾಡಂದ್ರ ಸುಮ್ನೆ ಬಂದೆ. ರೊಕ್ಕ ತಗದು ಕೊಡೋದು ಯಾಕೋ ದಿಮಾಕ ಅನಿಸ್ತು. ಅಲ್ಲೆ ಜುಲಮಿ ಮಾಡಿ ಕೊಟ್ರ ಸೊಕ್ಕು ತೋರಿಸಿದೆಂಗ ಆಕ್ಕೈತಿ ಅನಿಸ್ತು. ಮನಿಗೆ ಬಂದ ಮ್ಯಾಲ ತಮ್ಮನ ಮಗನ ಕೈಲಿ ಒಂದಿಷ್ಟು ಹೆಚ್ಚು ಹಣ ಕಳಿಸಿ ಸಮಾಧಾನ ಮಾಡ್ಕೊಂಡೆ.
ಸುಂದರವಾಗಿ ಬಟ್ಟೆ ಹೊಲಿಯುವ ‘ಸುಂದರ ಟೇಲರ್’ ಸಣ್ಣ ಸಂದಿಯಲ್ಲಿ, ಪುಟ್ಟ ಅಂಗಡಿ ಇಟ್ಟಿದ್ದಾನೆ. ಯಾವುದೇ ಸಹಾಯಕರಿಲ್ಲದೆ ಅದ್ಭುತವಾಗಿ ಹೊಲಿಯುತ್ತಾನೆ. ಹದಿನೈದು ವರ್ಷಗಳಿಂದ ಬಟ್ಟೆ ಹೊಲೆಯುವ ಸುಂದರನ ಜೊತೆಗೆ ನಾ ಯಾವತ್ತೂ ಚೌಕಾಶಿ ಮಾಡುವುದಿಲ್ಲ. ಇದೇ ಕಾರಣದಿಂದ ರೆಡಿಮೇಡ್ ಬಟ್ಟೆ ಖರೀದಿ ಮಾಡುವುದೇ ಇಲ್ಲ. ನನ್ನ ಅನೇಕ ವಿಐಪಿ ಗೆಳೆಯರನ್ನು ಅವನಿಗೆ ಪರಿಚಯ ಮಾಡಿಕೊಟ್ಟ ನಾನು, ಅವನ ಪಾಲಿನ ಬ್ರ್ಯಾಂಡ್ ಅಂಬ್ಯಾಸಡರ್. ತುರ್ತಾಗಿ, ಅಷ್ಟೇ ಸುಂದರವಾಗಿ ಕಾಣುವಂತೆ ಹೊಲಿಯುವ ಮತ್ತು ಅದನ್ನು ವಿವರಿಸುವದನ್ನು ಕೇಳಿ, ನಾ ಅರ್ಧ ಟೇಲರ್ ಆಗಿ ಹೋಗಿದ್ದೇನೆ.
ಸರಳತೆ ಹೆಸರಿನ್ಯಾಗ ನಮ್ಮ ಕೆಲಸ ನಾವ ಮಾಡ್ಕೊತಿವಿ ಅಂತ ವಾಷಿಂಗ್ ಮಶಿನ್ ತರಿಸಿದ್ರ ಅಗಸರು ಎಲ್ಲಿಗೆ ಹೋಗಬೇಕ? ನಾವ ಬೂಟು ಪಾಲಿಸು ಮಾಡಕೊಂಡ್ರ ನಮ್ಮ ಮೋಚಿಗಳು ಏನು ಮಾಡಬೇಕು?
ಅವರ ಜಾಗದಲ್ಲಿ ಈಗ ಮಶಿನ್ ಬಂದು ತಳ ಸಮುದಾಯದ ಕೆಲಸಗಳು ನಾಶವಾಗಿವೆ.
ನಮ್ಮ ಕೆಲಸ ನಾವು ಮಾಡಿಕೊಳ್ಳಬೇಕು ನಿಜ, ಆದರೆ ಅಲ್ಲಿ ಮಶಿನುಗಳು ಆಕ್ರಮಿಸಬಾರದು.
ಮನೆಗೆ ಬಂದ ಪಾಲಿಸು ಡಬ್ಬಿಗಳು ಮೋಚಿಗಳ ಬದುಕು ಕಸಿದುಕೊಂಡಿವೆ. ಶ್ರಮ ಸಂಸ್ಕೃತಿ ಜೊತೆಗೆ ಗ್ರಾಮೀಣ ಸಾಮರಸ್ಯವನ್ನು ಕಳೆದುಕೊಂಡ ದೌರ್ಭಾಗ್ಯಶಾಲಿಗಳು ನಾವು. ನಗರೀಕರಣ, ಆಧುನಿಕತೆ, ಶಿಸ್ತು ಮತ್ತು ಹೈಜಿನ್ ಅಹಮಿಕೆಯಲ್ಲಿ ದುಡಿಯುವವರನ್ನು ಅವಮಾನಿಸುವ ರೋಗ ಮಧ್ಯಮ ವರ್ಗದವರದಾಗಿದೆ.
‘ಅಯ್ಯ ಅವರು ಸ್ವಚ್ಛ ಇರಂಗಿಲ್ಲ, ಕರ್ರಗ ಇರ್ತಾರ, ಗಲೀಜು’ ಇತ್ಯಾದಿ ಇತ್ಯಾದಿ ದುರಹಂಕಾರದ ಮಾತುಗಳು ಬೇರೆ. ಇವರ ಶಿಸ್ತಿನ ಅಂತರಂಗ ಬಲ್ಲ ನನಗೆ, ಇಂತಹ ಮಾತು ಕೇಳಿದಾಗ ಉಕ್ಕಿ ಬರುವ ಸಿಟ್ಟನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುತ್ತೇನೆ.
ಮಧ್ಯಮ ಮತ್ತು ಶ್ರೀಮಂತ ವರ್ಗದ ಕೃತಕ ಹೊಸತನ ಅರ್ಥಹೀನ. ಅವಿವೇಕದ ಮತ್ತು ಅಹಂಕಾರದ ಮಾತುಗಳನ್ನು ‘ಸುಪಿರಿಯಾರಿಟಿ’ ಅಂದುಕೊಂಡಿದ್ದಾರೆ. ಅರ್ಧಂಬರ್ದ ಇಂಗ್ಲಿಷ್ ಮಾತಾಡೋದು, ತಮ್ಮ ಮನೆಯ ನಾಯಿಯನ್ನು ಮತ್ತು ಮಕ್ಕಳ ಕಾನ್ವೆಂಟ್ ಅಂಕಗಳನ್ನು ಕೊಂಡಾಡುವ ಅಮ್ಮಂದಿರ ವರ್ತನೆ ನನಗೆ ತಮಾಷೆಯ ವಸ್ತು. ಬಂದವರಿಗೆ ಒಂದು ಕಪ್ ಚಹಾ ಮಾಡಿಕೊಟ್ಟದ್ದನ್ನು ಮಹಾ ಸಾಧನೆ ಎಂದು ಕಂಡವರ ಮುಂದೆ ಕೊಚ್ಚಿಕೊಂಡು ಚಹಾ ಕುಡಿದವರ ಮಾನ ಹರಾಜು ಹಾಕೋ ಜನರಿಗೆ, ಶ್ರಮಿಕರ ಬೆಲೆ ಹೇಗೆ ಗೊತ್ತಿರುತ್ತದೆ. ಬುಟ್ಟಿ ಹೊತ್ತು ಮಾರುವವರ ಜೊತೆಗೆ ಗಂಟೆಗಟ್ಟಲೆ ಚೌಕಾಶಿ. ಮಾಲುಗಳಿಗೆ ಹೋದಾಗ ಪ್ರೈಸ್ ಟ್ಯಾಗ್ ನೋಡಿ ಮುಚಗೊಂಡು ಕೊಟ್ಟು ಬರೋ ದ್ವಂದ್ವ. ಇದಕ್ಕೆ ನಾವು, ನಮ್ಮ ಮನೆಯವರು ಕೂಡ ಹೊರತಲ್ಲ ಎಂಬ ವಿಶಾದ ಬೇರೆ!
ಬೆಂಗಳೂರಿನ ಉರಿ ಬಿಸಿಲಿನಲ್ಲಿ ಗಾಳಿ ಬೀಸುತ್ತಾ ಮೋಚಿ ಮೂರ್ತಿ ಕುಳಿತಿದ್ದ. ಈ ಮೂರ್ತಿ ನನಗೆ ಮೂರು ದಶಕಗಳಿಂದ ಪರಿಚಯ. ಏನೇನೂ ಕಾರಣ ಇಟ್ಟುಕೊಂಡು ತಿಂಗಳಿಗೆ ಒಮ್ಮೆ ಬೆಂಗಳೂರಿಗೆ ಬಂದಾಗ ಮೂರ್ತಿ ಮೂಲಕ ಬೂಟುಗಳು ಮೋಕ್ಷ ಹೊಂದುತ್ತವೆ. ಊರಲ್ಲಿ ಇದ್ದರೆ ನಾನಂತೂ ಅದರ ತಂಟೆಗೆ ಹೋಗೋದೇ ಇಲ್ಲ. ಈ ಕುರಿತು ಯಾರಾದರೂ ಕೇಳಿದರೆ, ‘ನನ್ನ ಯೋಗ್ಯತೆ ನೋಡ್ತಾರ, ಬೂಟಲ್ಲ’ ಎಂದು ತಮಾಶೆ ಮಾಡಿ ಸುಮ್ಮನಾಗ್ತೇನೆ. ಪಾಲೀಸು ಮಾಡುವಾಗ ಮೂರ್ತಿಯ ಯೋಗಕ್ಷೇಮ ಮತ್ತು ಅವನ ಮಕ್ಕಳ ವಿದ್ಯಾಭ್ಯಾಸ ವಿಚಾರಿಸಿದೆ. ಮೂರು ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನ ನಡೆಸಲು ಮೂರ್ತಿ ದಿನಕ್ಕೆ ಗರಿಷ್ಠ ಮೂರು ನೂರು ರೂಪಾಯಿ ಗಳಿಸಲೇಬೇಕಂತೆ, ‘ಅದಕ್ಕಿಂತ ಹೆಚ್ ಆಗಕಿಲ್ಲ ಸಾ’ ಅಂದಾಗ ಅದೇನೋ ಸಂಕಟ.
ಸರಳತೆ, ಆಧುನೀಕರಣ, ಮಾಲುಗಳು, ಬ್ಯಾಂಡೆಡ್ ಬಟ್ಟೆಗಳು… ಸಾಲು ಸಾಲಾಗಿ ಅಪ್ಪಳಿಸಿದಂತಾಯಿತು.
ಮನೆಯಲ್ಲಿನ ಪಾಲೀಸು ಡಬ್ಬಿ ಮೂರ್ತಿಯ ಅನ್ನ ಕಸಿದುಕೊಂಡಿದೆ ಎನಿಸಿ ಬೇಸರವಾಯಿತು. ಮಾಲುಗಳ ಸಂಸ್ಕೃತಿಗೆ ಮಾರು ಹೋಗಿ ಬಡವರ ಹೊಟ್ಟೆಗೆ ಹೊಡೆದು, ದೇಸಿಯತೆ ಕುರಿತು ಭಾಷಣ ಮಾಡೋದು ಬೇಡ ಎನಿಸಿ ಮೌನವಾದೆ.
ಪ್ರೊ.ಸಿದ್ದು ಯಾಪಲಪರವಿ ಕಾರಟಗಿ.