ಬಸವಕಲ್ಯಾಣವನ್ನು ಧಾರ್ಮಿಕ ಪ್ರವಾಸೋದ್ಯೋಮ ಕ್ಷೇತ್ರವಾಗಿ ನಿರ್ಮಾಣ ಮಾಡುವಲ್ಲಿ ಸರ್ಕಾರ ಬದ್ಧ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೀದರದಿಂದ e-ಸುದ್ದಿ
ವರದಿ-ವೀರೇಶ ಅಂಗಡಿ ಗೌಡುರ
ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿಕಾಸ ಅಕಾಡೆಮಿ ಕಲಬುರ್ಗಿಯವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿ ನಿರ್ಮಿಸುವ ವಿವಿಧ ಅನಾವರಣ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕಿ ಬಸವೇಶ್ವರರ ಮೂರ್ತಿಗೆ ಪುಷ್ಪ ಅರ್ಪಿಸುವ ಮೂಲಕ ಮುಖ್ಯಮಂತ್ರಿ,ನಿಕಟ ಪೂರ್ವ ಮುಖ್ಯ ಮಂತ್ರಿ ನಾಡಿನ ವಿವಿಧ ಮಠಗಳ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅನುಭವ ಮಂಟಪದ ನಿರ್ಮಾಣದ ಆರಂಭ ಅಮೃತಗಳಿಗೆ ಸಾಕ್ಷಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂಢನಂಬಿಕೆ , ಕಂದಾಚಾರ ಇಂದಿಗೂ ಆಚರಣೆಯಲ್ಲಿರುವದು ವಿಷಾದನೀಯ. ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ ಎಂದು ಹೇಳುವ ನಾವು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದ್ದು ಇದಕ್ಕೆ ಸರಕಾರ ಸರ್ವ ರೀತಿಯಿಂದಲೂ ಸಹಕಾರ ನೀಡುತ್ತದೆ . ಮುಂದಿನ ತಿಂಗಳಿನಿಂದಲೇ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
೧೨ ನೇ ಶತಮಾನವು ಪರಿವರ್ತನಾ ಶತಮಾನವಾಗಿತ್ತು. ವೈಚಾರಿಕ ಕ್ರಾಂತಿ ಮಾಡಿದ ಬಸವೇಶ್ವರ ನಡೆದಾಡಿದ ಈ ಪುಣ್ಯಭೂಮಿಯಲ್ಲಿ ನಾವುಗಳು ಜಿವಿಸುತ್ತಿರುವದೇ ಪೂಣ್ಯ. ಈ ಭಾಗದ ಹಿರಿಯರಾದ ಬಸವರಾಜ ಪಾಟೀಲ್ ಸೇಡಂ ರವರ ಕಲ್ಯಾಣ ಕರ್ನಾಟಕ ಕ್ಷೇತ್ರದ ಅಭಿವೃದ್ಧಿಯ ತುಡಿತ ನಿಜಕ್ಕೂ ಮೆಚ್ಚುವಂತದ್ದು. ಅವರ ಕಾರ್ಯಗಳಿಗೆ, ಆಶಯಗಳಿಗೆ ಸರ್ಕಾರ ಸರ್ವ ರೀತಿಯಿಂದಲೂ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ತಿಳಿಸಿದರು.ಮೇ ಮೋದಲನೆಯ ವಾರದಿಂದಲೇ ಕಾಮಗಾರಿ ಆರಂಭ ಮಾಡಲಾಗುವದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಮಾತನಾಡಿ ಈ ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪ ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ. ಪ್ರತಿ ಆರು ತಿಂಗಳಿಗೊಮ್ಮೆ ಸ್ವತಃ ನಾನೇ ಬಂದು ಕಾಮಗಾರಿಯನ್ನು ವೀಕ್ಷಣೆ ಮಾಡಿ ಸ್ಥಿತಿ ಗತಿ ಪರಿಶಿಲಿಸುತ್ತೆನೆ. ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿಕಾಸ್ ಅಕಾಡೆಮಿಯ ಮುಖ್ಯಸ್ಥರಾದ ಬಸವರಾಜ ಪಾಟೀಲ್ ಸೇಡಂ ಅವರ ಆಶಯದಂತೆ ಮುಂದಿನ ದಿನಗಳಲ್ಲಿ ಪ್ರತಿನಿತ್ಯ 5000ಕ್ಕೂ ಅಧಿಕ ಪ್ರವಾಸಿಗರು, ಭಕ್ತರು ಬಸವಕಲ್ಯಾಣಕ್ಕೆ ಪ್ರವಾಸ ಬರುವಂತಾಗಬೇಕು. ಜಗತ್ತಿಗೆ ಬಸವಣ್ಣನವರ ಸಂದೇಶಗಳನ್ನು ಸಾರಬೇಕು ಎನ್ನುವುದೇ ನಮ್ಮ ಒಂದು ಆಶಯವಾಗಿದೆ.
ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ನಾಡಿನ ಎಲ್ಲಾ ಪೂಜ್ಯರು,ಭಕ್ತರು,ಶರಣರು ಕಾತುರತೆಯಿಂದ ಎದುರು ನೋಡುತ್ತಿರುವ ಅನುಭವ ಮಂಟಪ ನಿರ್ಮಾಣ ಮಾಡಿ ಅವರಿಗೆ ನಿಡೋಣ
ಎಂದರು.
ಬಸವ ಕಲ್ಯಾಣದ ಪರುಷಕಟ್ಟೆ ಅಭಿವೃದ್ಧಿಗಾಗಿ ಅಲ್ಲಿರುವ 54 ಮುಸ್ಲಿಂ ಬಾಂಧವರು ಮನೆ ಖಾಲಿ ಮಾಡಿ ಸ್ಥಳಾವಕಾಶ ನೀಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಉತ್ತಮ ಕಾರ್ಯಕ್ಕಾಗಿ ಎಲ್ಲರೂ ಒಂದಾಗಿ ಕೈ ಜೋಡಿಸಿರುವುದಕ್ಕೆ ನಾನು ಮನಃಪೂರ್ವಕವಾಗಿ ಅಭಿನಂದಿಸುವೆ. ಈ ಕಲ್ಯಾಣವು ಪುಣ್ಯ, ಕರ್ಮ, ಧರ್ಮದ ಭೂಮಿಯಾಗಿದೆ. ಶರಣರ ಪಾದದ ಧೂಳಿನಿಂದ ಪಾವನ ವಾದದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿ ಪ್ರಸ್ತಾವಿಕವಾಗಿ ಮಾತನಾಡಿದ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಬಸವರಾಜ ಪಾಟೀಲ್ ಸೇಡಂ ಅವರು ಕಲ್ಯಾಣ ಕರ್ನಾಟಕದ ಬಸವಕಲ್ಯಾಣವು ವೈಚಾರಿಕ ಕ್ರಾಂತಿಯ ಕೇಂದ್ರವಾಗಲಿದೆ .ಪ್ರತಿನಿತ್ಯ ಕನಿಷ್ಠ ಐದು ಸಾವಿರ ಯಾತ್ರಿಗಳು ಬಂದು ವೀಕ್ಷಣೆ ಮಾಡುವ ಯಾತ್ರಾ ಸ್ಥಳವಾಗಿ ನಿರ್ಮಾಣವಾಗಲಿದೆ. ದೂರದಿಂದ ಬರುವ ಮಠಾಧೀಶರು ಶರಣರು ಪಾದಯಾತ್ರೆಯ ಮೂಲಕ ಕಲ್ಯಾಣಕ್ಕೆ ಬಂದು ಹಲವು ಕಾಲ ತಂಗುವ ಮೂಲಕ ಮತ್ತೊಮ್ಮೆ ಶರಣರ ಬಿಡು ಎಂದೆನಿಸಿಕೊಳ್ಳುವಂತೆ ಬಸವಕಲ್ಯಾಣವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವುದೇ ನಮ್ಮ ಗುರಿಯಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು .
ಕಾರ್ಯಕ್ರಮವನ್ನು ಉದ್ದೇಶಿಸಿ ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಆಶಿರ್ವಚನ ನೀಡಿ ಜಗತ್ತಿನ ಅತ್ಯಂತ ಶ್ರೇಷ್ಠ ಪುಣ್ಯಭೂಮಿ ಬಸವನ ಕಲ್ಯಾಣ. ಇಂತಹ ಕಲ್ಯಾಣ ನಾಡಿನ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ಅನುಭವ ಮಂಟಪ ಸಂಪೂರ್ಣಗೊಳಿಸಿ ಇಡಿ ನಾಡಿಗೆ ಉತ್ತಮ ಸಂದೇಶವನ್ನು ಸಾರಬೇಕಾಗಿದೆ. ಬಸವರಾಜ ಪಾಟೀಲ್ ಸೇಡಂ ಅಂದರೆ ಕಲ್ಯಾಣ ಕರ್ನಾಟಕದ ಅಬ್ದುಲ್ ಕಲಾಂ ಇದ್ದಂತೆ ಎಂದು ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.
ಬಸವಕಲ್ಯಾಣದ ಪರುಷ ಕಟ್ಟೆಯ ಅಭಿವೃದ್ಧಿಗಾಗಿ ಸುತ್ತಲಿನ 54 ಮುಸ್ಲಿಂ ಕುಟುಂಬಗಳು ತಮ್ಮ ಮನೆ ಬಿಟ್ಟು ಕೊಡಲು ಒಪ್ಪಿಗೆ ಸೂಚಿಸಿದ್ದಕ್ಕಾಗಿ ಮುಸ್ಲಿಂ ಸಮಾಜದ ಹಿರಿಯರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇತರರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದೇವರು, ಹಾರಕೂಡ ಚನ್ನವೀರ ಶಿವಾಚಾರ್ಯರು, ಹಲಸೂರಿನ ಡಾ. ಶಿವಾನಂದ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯರು, ಅಕ್ಕ ಗಂಗಾಂಬಿಕ ,ಪ್ರಣವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ಸಚಿವ ಭಗವಂತರಾಯ ಖೂಬಾ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ,ಸಂಸದರಾದ ಡಾ. ಉಮೇಶ್ ಜಾಧವ್, ವಿಧಾನಪರಿಷತ್ ಸದಸ್ಯರಾದ ರಘುನಾಥ್ ಮಲ್ಕಾಪುರೆ ,ಶಶಿಲ್ ನಮೋಶಿ, ಸೇರಿದಂತೆ ಇನ್ನಿತರ ರಾಜಕೀಯ ಮುಖಂಡರು,ವಿಕಾಸ ಅಕಾಡೆಮಿಯ ಸಂಚಾಲಕರು ,ಕಲ್ಯಾಣ ಕರ್ನಾಟಕ ಸಂಘದ ಸಂಯೋಜಕರು, ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರೇವಣಸಿದ್ದಪ್ಪ ಜಲಾದೆ ನಡೆಸಿಕೊಟ್ಟರು ನಡೆಸಿಕೊಟ್ಟರು.