ಒಬ್ಬರ ಮನವ ನೋಯಿಸಿ ಗಂಗೆಯಲಿ ಮುಳುಗಿದರೇನು

ವಚನ ವಿಶ್ಲೇಷಣೆ

ಒಬ್ಬರ ಮನವ ನೋಯಿಸಿ ಗಂಗೆಯಲಿ ಮುಳುಗಿದರೇನು

ಒಬ್ಬರ ಮನವ ನೋಯಿಸಿ 
ಒಬ್ಬರ ಮನೆವ ಘಾತವ ಮಾಡಿ
ಗಂಗೆಯ ಮುಳುಗಿದಡೇನಾಗುವುದಯ್ಯಾ
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು?
ಕಳಂಕ ಬಿಡದಾಯಿತ್ತಯ್ಯಾ
ಅದು ಕಾರಣ
ಒಬ್ಬರ ಮನವ ನೋಯಿಸದವನೆ*
ಮನೆಯ ಮಾಡದವನೆ
ಪರಮಪಾವನ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ

                             -ಶಿವಯೋಗಿ ಸಿದ್ಧರಾಮೇಶ್ವರರು

ಒಬ್ಬರ ಮನವ ನೋಯಿಸಿ

ಎಷ್ಟೊ ಸಲ ನಮಗರಿವಿದ್ದೋ ಇಲ್ಲದೆಯೊ
ಮಾತು ಮನವನ್ನು ನೋಯಿಸುವ ಆಯುಧ ವನ್ನಾಗಿ
ಮಾಡಿಕೋಳ್ಳುತ್ತೇವೆ.
ಸರ್ವಜ್ಞ ಹೇಳುವಂತೆ ಮಾತೆ ಎಲ್ಲ ಕೇಡುಕಿನ ಮೂಲ.
ಮಾತಿನಿಂ ಹಗೆ ಹೊಲೆಯ ಮಾತಿನಿಂ ಹಗೆ ಕೊಲೆಯ
ಮಾತಿನಿಂ ಸರ್ವಸಂಪದವು ಲೋಕಕೆ ಮಾತೇ ಮಾಣಿಕ್ಯ ಸರ್ವಜ್ಞ”
ಅದನ್ನು ಮಾಣಿಕ್ಯದಂತೆ ಅಪರೂಪ ವಾದದ್ದು. ಅದರ ಮೌಲ್ಯವನ್ನು ಮಾತನಾಡುವವನು ಅರಿತಿರಬೇಕು. ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಮಾತನಾಡುವ ಸಾಮರ್ಥ್ಯವಿದೆ. ತನ್ನ ಮನಸ್ಸಿನ ಭಾವನೆಗಳನ್ನ ಮಾತಿನ ಮೂಲಕ ಹೊರ ಹಾಕುತ್ತಾನೆ. ಹಾಗಾಗಿ ದೇವರು ಮಾನವ ಪ್ರಾಣಿಗೆ ಮಾತ್ರ ಕೊಟ್ಟ ಈ ವಿಶೇಷ ಶಕ್ತಿಯನ್ನು ಗೌರವಯುತವಾಗಿ ಬೆಳೆಸಿಕೊಳ್ಳಬೇಕು.

ಅದಕ್ಕೆ ಬಸವಣ್ಣವರು
“ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ
ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ” ಎಂದು ಹೇಳಿದ್ದಾರೆ.
ನಾವಾಡುವ ಮಾತಿನ ಮೌಲ್ಯವನ್ನು
ತಿಳಿಸಿದ್ದಾರೆ.
ನಮ್ಮ ಮಾತಿನ ಮೂಲಕ ನಾವು ಇನ್ನೊಬ್ಬರ ಮನಸನ್ನು ನೋಯಿಸುತ್ತೆವೆ. ಅಸಹನೆಯಿಂದ ಕೊಂಕು, ವ್ಯಂಗ್ಯ ನುಡಿಗಳನ್ನಾಡಿದರೆ, ಅಸೂಯೆಯಿಂದ ಸುಳ್ಳಾಡಿಡುವುದು , ಚಾರಿತ್ರ್ಯ ವಧೆ ಮಾಡುವುದು.ಮತ್ತು ಅಪಹಾಸ್ಯ ಮಾಡುವುದರಲ್ಲಿ ತೋಡಗುತ್ತೇವೆ. ಅಹಂಕಾರದಿಂದ ದರ್ಪದ ಬಿರು ನುಡಿಗಳನ್ನು ಆಡುವದರ ಮೂಲಕ ಮನಸು ನೋಯಿವಂತೆ ಮಾಡುತ್ತೆವೆ. ಈ ಎಲ್ಲಾ ರೀತಿಯ ಮಾತುಗಳು ಆಯುಧಕ್ಕಿಂತಲೂ ಆಳವಾಗಿ ಮನಸನ್ನು ಘಾಸಿಗೋಳಿಸುತ್ತವೆ. ವ್ಯಕ್ತಿಯ ಆತ್ಮ ಬಲವನ್ನು ಕುಗ್ಗಿಸುತ್ತದೆ. ಅಂತಹ ಮಾತುಗಳನ್ನಾಡುವುದು ಪಾಪವೆ. ಎಂದು ಹೇಳುತ್ತಾರೆ.

ಮನೆವ ಘಾತವ ಮಾಡಿ

ಮನೆಗೆ ಆಘಾತವಾಗುವಂತ ಕೆಲಸಗಳಾದ ಕೊಲೆ ಸುಲಿಗೆ,ಕಳ್ಳತನ ಮತ್ತು ಅಪಹರಣದಂತಹ ಕೃತ್ಯವನ್ನು ಮಾಡುವುದು ಮತ್ತು ಸಾಮಾಜಿಕವಾಗಿ ಅಪಮಾನ ಮಾಡುವುದು. ಆರ್ಥಿಕ ನಷ್ಟ ಉಂಟಾಗುವಂತೆ ಮಾಡುವುದು. ಬೆಳೆದು ನಿಂತ ಪೈರುಗಳಿದ್ದ ಹೊಲಕ್ಕೆ ದನಕರುಗಳನ್ನು ಬಿಡುವುದು. ಕೂಡಿಟ್ಟ ಬಣಿವೆಗೆ ಬೆಂಕಿ ಹಾಕುವುದು. ಸಾಲಕ್ಕೆ ಚಕ್ರಬಡ್ಡಿ ವಸೂಲಿ ಮಾಡುವದು. ಮಹಿಳೆಯರ ಅಸಹಾಯಕತೆಯನ್ನ ದುರುಪಯೋಗ ಪಡಿಸಿಕೊಳ್ಳುವದು. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು. ಕುಟುಂಬದ ಸದಸ್ಯರ ನಡುವೆ ಮನಸ್ತಾಪ ತಂದಿಡುವುದು. ಸಾಮಾಜಿಕ ಬಹಿಷ್ಕಾರ ಹಾಕುವುದು, ಅಪಪ್ರಚಾರ ಮಾಡುವುದು.ಮತ್ತು ಇವೆಲ್ಲವುಗಳಗೆ ಪರೋಕ್ಷವಾಗಿ ಪ್ರೇರಣೆ ನೀಡುವುದು ಮನೆಯನ್ನು ನಾಶಮಾಡುವಂತ ಕಾರ್ಯಗಳು.
ಇಂತಹ ಕೃತ್ಯಗಳನ್ನು ಮಾಡಿ.

ಗಂಗೆಯ ಮುಳುಗಿದಡೇನಾಗುವುದಯ್ಯಾ

ಯಾವ ಮಾತು ಕೃತಿಗಳನ್ನು ಮಾಡಬಾರದು, ಅಂಥವುಗಳನ್ನು ಮಾಡಿ. ಗಂಗೆ ಪವಿತ್ರಳು ಆ ನದಿಯಲ್ಲಿ ಮುಳುಗಿಹಾಕಿದರೆ
ಎಲ್ಲ ಪಾಪಗಳು ಪರಿಹಾರವಾಗುತ್ತವೆ ಎಂದು ನಂಬಿ ದೂರದ ಕಾಶಿಯಲ್ಲಿರುವ ಗಂಗೆಯಲ್ಲಿ ಮಿಂದರೆ ಪಾಪ ಪರಿಹಾರ ವಾಗುವುದೆ ಎಂದು ಸಿದ್ಧರಾಮ ಪ್ರಶ್ನಿಸುತ್ತಾರೆ.

ಚಂದ್ರನು ಗಂಗೆಯ
ತಡಿಯಲ್ಲಿದ್ದಡೇನು?
ಕಳಂಕ ಬಿಡದಾಯಿತ್ತಯ್ಯಾ
ಎಲ್ಲ ಪಾಪಗಳನ್ನು ಗಂಗೆಯೇ ತೋಳೆಯುವುದಾದರೆ… ಚಂದ್ರು ನೀ ಕಪ್ಪು ಕಲೆ ಗಳೆಕೆ ಹೋಗಿಲ್ಲ ಎನ್ನುವ ವೈಚಾರಿಕ ಪ್ರಶ್ನೆಯನ್ನು ಕೇಳುತ್ತಾರೆ.
ಎಲ್ಲಾ ಪಾಪವನ್ನು ತೊಳೆಯುವ ಗಂಗೆ ಶಿವನ ಜಡೆಯಲ್ಲಿ ಇರುವುದು. ಕಳಂಕವನ್ನು ಹೊತ್ತಿರುವಂತಹ ಚಂದ್ರನು ಕೂಡ ಶಿವನ ಜಡೆಯಲ್ಲಿ, ಗಂಗೆಯ ತಡಿಯಲ್ಲಿ ಇರುವನು ಆದರೆ ಅವನ ಮೇಲಿರುವ ಕಳಂಕ ಹೋಗಿದೆಯೆ ಹಾಲು ಬೆಳದಿಂಗಳು ನೀಡುವ ಚಂದ್ರ ಗಂಗೆಯ ಸಾಮಿಪ್ಯದಲ್ಲಿದ್ದು ತನ್ನ ಕಲೆಗಳನ್ನು / ಕಳಂಕವನ್ನು ತೋಳೆದುಕೋಳ್ಳಲಾಗಿಲ್ಲ. ಅಂತಹದರಲ್ಲಿ ಮನೆ ಮನ ನೋಯಿಸುವಂತಹ ಪಾಪವನ್ನು ಮಾಡಿ ಗಂಗೆಯಲ್ಲಿ ಮುಳುಗಿದರೆ ಪಾಪ ನಾಶವಾಗುತ್ತದೆ ಎನ್ನುವ ಭ್ರಮೆ ಸರಿಯೇ ಎಂದು ಸಿದ್ಧರಾಮರು ಪ್ರಶ್ನಿಸುತ್ತಾರೆ.

ಅದು ಕಾರಣ
ಒಬ್ಬರ ಮನವ ನೋಯಿಸದವನೆ
ಒಬ್ಬರ ಮನವ ಘಾತವ ಮಾಡಿದವನೆ
ಪರಮಪಾವನ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ

ನಾವು ಪಾಪಗಳನ್ನು ಕಳೆದುಕೊಂಡು ಪರಮಪಾವನ ವಾಗಬೇಕಾದರೆ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡರೆ ಸಾಕು. ಇನ್ನೊಬ್ಬರ ಮನೆ ಮುರಿಯುವಂತಹ ಕೆಲಸಗಳನ್ನು ಮಾಡದಿದ್ದರೂ ಸಾಕು. ಅಂತಹ ಒಂದು ಸುಂದರ ಮನಸ್ಸನ್ನು ಹೊಂದಿದ್ದರೆ ಪಾಪ ಮುಕ್ತರಾಗಲು ಪಾವನರಾಗಲು ಗಂಗೆಯಲ್ಲಿ ಹೋಗಿ ಮುಳುಗೇಳುವ ಅವಶ್ಯಕತೆ ಇಲ್ಲ ಎಂದು ಸಿದ್ಧರಾಮರು ತಮ್ಮ ಈ ವಚನದಲ್ಲಿ ಹೇಳಿದ್ದಾರೆ ಮನುಷ್ಯನ ಆಲೋಚನೆ ,ಚಿಂತನೆ , ಮತ್ತು,ಮಾಡುವ ಕಾರ್ಯಗಳು ಉತ್ತಮವಾಗಿರಬೇಕು ಎಂದು ಈ ವಚನ ಸಾರುತ್ತದೆ

ಹಾಗೆಯೇ ನಾವು ನಡೆ-ನುಡಿಯಲ್ಲಿ ಶುದ್ಧವಾಗಿದ್ದರೆ ಪಾಪಕರ್ಮಗಳು ನಮ್ಮನ್ನು ಬಾಧಿಸುವುದಿಲ್ಲ ಎಂದು ಅತ್ಯಂತ ಮನೋಜ್ಞವಾಗಿ ಹೇಳಿದ್ದಾರೆ ಈ ವಚನದಲ್ಲಿ ವ್ಯಕ್ತಿಯ ವರ್ತನೆ ಮತ್ತು ಮನಸ್ಥಿತಿಯು ಹೇಗಿರಬೇಕು ಎನ್ನುವುದನ್ನು ಮಾರ್ಗದರ್ಶನ ಮಾಡುವಂತಿದೆ. ಇನ್ನೋಬ್ಬರಿಗೆ ಕೇಡು ಬಗೆಯದ ಸ್ವಾಸ್ಥ್ಯ ಮನಸ್ಥಿತಿಯನ್ನು ರೂಢಿಸಿಕೋಳ್ಳಬೇಕೆಂದು ಹೇಳಿದ್ದಾರೆ.

ಡಾ. ನಿರ್ಮಲ ಬಟ್ಟಲ

 

Don`t copy text!