ವಿಶ್ವ ಪುಸ್ತಕ ಮತ್ತು ಹಕ್ಕು ಸ್ವಾಮ್ಯ ದಿನ
ಏಪ್ರಿಲ್ ೨೩ರನ್ನು ವಿಶ್ವ ಪುಸ್ತಕ ಮತ್ತು ಹಕ್ಕು ಸ್ವಾಮ್ಯದಿನ ಎಂಬುದಾಗಿ ಆಚರಿಸಲು ಯುನಿಸ್ಕೋ ೧೯೯೫ರಲ್ಲಿ ನಿರ್ಥರಿಸಿತು. ಅಂದಿನಿಂದ ಇಂದಿನವರೆಗೂ ಆಚರಿಸುತ್ತಿದ್ದೇವೆ. ಈ ಬಾರಿಯ ಘೋಷ ವಾಕ್ಯ ” ಸಣ್ಣ ಮಕ್ಕಳಿಗಾಗಿ “ಪುಸ್ತಕಗಳು ನಿಮಗಾಗಿಯೇ, ನೀವು ಒಂಟಿಯಲ್ಲ” ಎಂಬುದಾಗಿ ಇದೆ. ಬಹಳಷ್ಟು ಲೇಖಕರ ಜನ್ಮದಿನ ಅಥವಾ ಪುಣ್ಯ ತಿಥಿ ಏಪ್ರಿಲ್ 23ಕ್ಕೆ ಬರುವ ಕಾರಣ ಈ ದಿನವನ್ನು ವಿಶ್ವ ಪುಸ್ತಕ ದಿನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.
ಪುಸ್ತಕಗಳು ಜ್ಞಾನದ ಪ್ರತೀಕ. ಹಿಂದು ಮಾನ್ಯತೆಯ ಪ್ರಕಾರ ಪುಸ್ತಕಗಳನ್ನು ಸರಸ್ವತಿಯ ಪ್ರತೀಕವೆಂದು ಪೂಜಿಸುತ್ತೇವೆ. ಮೊದಲು ಪುಸ್ತಕವನ್ನು ಮಸ್ತಕದಲ್ಲೇ ಅಚ್ಚೊತ್ತುವಷ್ಟು ಶ್ರಮವಹಿಸಿ ಯುಕ್ತಿ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ನಂತರ ಪುರಣ ಇತಿಹಾಸಗಳ ರಚನೆಯಾಗ ತೊಡಗಿದಾಗ ತಾಳೆಗರಿ ತಾಮ್ರ ಪತ್ರ, ಶಾಸನಗಳಲ್ಲಿ ಬರೆಯುವುದು ಆರಂಭವಾಯಿತು.
3-4ಶತಮಾನಗಳಿಂದ ವೈಜ್ಞಾನಿಕ ಆವಿಷ್ಕಾರದಿಂದ ಮುದ್ರಣ ಯಂತ್ರ ಪುಸ್ತಕ ವಾರ್ತಾ ಪತ್ರಿಕೆಗಳು ಬೆಳೆದವು. ಹೊಸ ಹೊಸ ತಂತ್ರಜ್ಞಾನ ಮತ್ತು ಯುವ ಜನರ ಓದಿನ ಹವ್ಯಾಸ ಕಡಿಮೆಯಾಗುವುದರ ಅಪಾಯ ಕಂಡ ಹಿನ್ನೆಲೆಯಲ್ಲಿ ಈ ರೀತಿಯ “ವಿಶ್ವ ಪುಸ್ತಕ ಮತ್ತು ಹಕ್ಕು ಸ್ವಾಮ್ಯ ದಿನ”ವನ್ನು ಆಚರಿಸುವ ವಿಚಾರ ವಿಶ್ವಸಂಸ್ಥೆಯ ಸದಸ್ಯ ಸಂಸ್ಥೆಗೆ ಬಂದಿತು.
ಇಂದಿನ ದಿನದಲ್ಲಿ ಪುಸ್ತಕ ಉದ್ಯಮವೂ ಬಹು ದೊಡ್ಡ ಉದ್ಯಮವಾಗಿದೆ. ಬೇರೆ ಉದ್ಯಮಗಳಲ್ಲಿ ಕಳ್ಳತನದ ಭಯ ಇರುವಂತೆ ಪುಸ್ತಕಗಳ ಮತ್ತು ಬರವಣಿಗೆಗಳ ಕಳ್ಳತನ ನಡೆಯುತ್ತಿರುವದುರಿಂದ ಹಕ್ಕು ಸ್ವಾಮ್ಯತೆಯು ಕೂಡ ಮಹತ್ವವೆನಿಸುತ್ತದೆ. ಹೇಗೆ ಎಲ್ಲ ಸಾಮಗ್ರಿಗಳು , ಮನೋರಂಜನಾ ವಲಯದಲ್ಲಿ ಹಕ್ಕು ಸ್ವಾಮ್ಯತೆ ಇದೆಯೋ ಅದೇ ರೀತಿ ಪುಸ್ತಕಗಳಿಗೂ ಹಕ್ಕು ಸ್ವಾಮ್ಯ ಪಡೆದರೆ ಆ ಪುಸ್ತಕದ ಹೆಸರು ಮತ್ತು ಮಾಹಿತಿ ಬರೆದವರ ಹೆಸರಿನಲ್ಲಿ ಉಳಿಯುತ್ತದೆ.
ಇಂದಿನದಿನದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗೆ ಬರೆಯುವವರ ಸಂಖ್ಯೆ ಏರುತ್ತಿದೆ. ಮಾಹಿತಿ ಕಳ್ಳತನದ ಹಾವಳಿಯೂ ಇರುವುದರಿಂದ ಜನರೆಲ್ಲರಿಗೂ ಪುಸ್ತಕ ಮತ್ತು ಹಕ್ಕು ಸ್ವಾಮ್ಯತೆಯ ಬಗೆಗೆ ತಿಳಿಸುವುದು ಉತ್ತಮ ನಡೆ ಅದನ್ನು ಯುನಿಸ್ಕೋ ಮಾಡುತ್ತಲಿದೆ.
ಪುಸ್ತಕ ಜ್ಞಾನದ ಸಂಕೇತವಂತೂ ಸರಿಯೇ ಸರಿ ಜೊತೆಗೆ ಮುನುಷ್ಯನ ಆಪ್ತ ಮಿತ್ರ. ಯಾರೇ ಜೊತೆಗೆ ಇರಲಿ ಅಥವಾ ಇರದೇ ಹೋಗಲಿ ಪುಸ್ತಕಗಳು ಮನುಷ್ಯನೊಂದಿಗೆ ಮಾತನಾಡುತ್ತವೆ. ಅವನಲ್ಲಿರುವ ಭಾವನೆಗಳನ್ನು ಬಡಿದೆಬ್ಬಿಸುತ್ತದೆ, ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ, ಸೃಜನಾತ್ಮಕವಾಗುವಂತೆ ಪ್ರೇರೇಪಿಸುತ್ತದೆ. ಪುಸ್ತಕಗಳು ಕಸಿದುಕೊಳ್ಳಲಾಗದ ಸಂಪತ್ತಾಗಿದೆ. ಕೆಲವರು ಭೌತಿಕವಾದ ಪುಸ್ತಕಗಳನ್ನು ಕದಿಯ ಬಹುದು ಆದರೆ ಪುಸ್ತಕ ಮುಖೇನ ಕಲಿತ ವಿದ್ಯೆಯನ್ನು ಜ್ಞಾನವನ್ನು ಕದಿಯಲಾಗುವುದಿಲ್ಲ. ಆದ್ದರಿಂದ ಪುಸ್ತಕಗಳು ಅಮೂಲ್ಯವಾದ ಸಂಪತ್ತಾಗಿದೆ.
–ಮಾಧುರಿ ದೇಶಪಾಂಡೆ ಬೆಂಗಳೂರು