ಧ್ಯಾನದಲಿ ಧೇನಿಸಲು ಜಗತ್ತು ಶೂನ್ಯ
ನನ್ನ ನಾ ಮರೆತು ಅರ್ಧ ಪದ್ಮಾಸನದಲಿ ಒಂದು ಗಂಟೆಯ ಕಾಲ ಸುದೀರ್ಘ ಮೌನದಲಿ ಕುಳಿತಿದ್ದೆ. ಆ ಮೌನಕೆ ಇನ್ನೊಂದು ಹೆಸರೇ ‘ಧ್ಯಾನ’. ಆ ಧ್ಯಾನದಲಿ ಎಲ್ಲಾ ಮರೆತು ಲೀನವಾಗಿ, ನಾ ಎನ್ನುವುದ ಕಳೆದುಕೊಂಡು, ಹೊರ ಬಂದಾಗ, ಅದೇನೋ ಹೊಸತನದ ಬೆಳಕು! ಬಹಳ ಹೊತ್ತು ನಿದ್ರಿಸಿ ಕಣ್ಬಿಟ್ಟ ಸ್ಥಿತಿಗಿಂತಲೂ ಮುದದ ಅನುಭವ. ಸುತ್ತಮುತ್ತ ಯಾರೂ ಇರಲಿಲ್ಲ. ಒಬ್ಬಳೆ ಏಕಾಂತದಲಿ ಕುಳಿತ ಸಮಯ. ಮನಸು ಬಾಲ್ಯದ ಕಡೆ ಓಡಿತು…
ಆ ದಿನಗಳಲ್ಲಿ ಅಜ್ಜಿಯ ಮನೆಗೆಂದೇ ಬೇಸಿಗೆ ರಜೆ ಕಳೆಯಲು ಹೋಗುತ್ತಿದ್ದೆವು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಪ್ರಕೃತಿ ಹಸಿರು ಸೀರೆಯನುಟ್ಟು ಮೈ ಚೆಲ್ಲಿ ನಿಂತಂತೆ. ನಿಸರ್ಗದ ಸಂಪತ್ತು ಹೇರಳ. ಅಲ್ಲಿ ರಾಶಿ ರಾಶಿ ಹೂವು, ಹಣ್ಣು, ತರಕಾರಿ. ಪ್ರಕೃತಿಯ ಸಿರಿತನಕೆ ಹುಚ್ಚು ಹಿಡಿಸುವ ತೀವ್ರತೆ. ನಾವು ಐದು ಜನ ಮಕ್ಕಳು ದಿನಾ ಒಂದಾಗಿ, ಒಂದೊಂದು ಕಡೆ ತಿರುಗಾಟಕ್ಕೆ ಹೊರಡುತ್ತಿದ್ದೆವು. ನದಿ ತೀರ, ಹೊಳೆ ದಂಡೆ, ಗುಡ್ಡ, ಬೆಟ್ಟ, ಉದ್ಯಾನವನ ಮುಂತಾದ ಕಡೆಗೆಲ್ಲಾ ಹೋಗಿ ಬರುತ್ತಿದ್ದೆವು.
ಹಾಗೆ ಹೋದಾಗ ನನಗಾಗುತ್ತಿದ್ದ ಅನುಭವ ಅನನ್ಯ. ಈಗ ನೆನಪಿಸಿಕೊಂಡರೆ ವಿಚಿತ್ರವೆನಿಸುತ್ತದೆ. ಚಿಕ್ಕ ವಯಸ್ಸಿನ ಆ ಮನಸ್ಥಿತಿ ಹುಡುಗಾಟದ್ದು, ಹುಡುಕಾಟದ್ದಲ್ಲ. ಆದರೆ ಬಹಳ ಆಳವಾಗಿ ಚಿಂತಿಸುತ್ತ ಕೂತು ಬಿಡುತ್ತಿದ್ದೆ.
ಒಂದು ದಿನ ಬೆಳಿಗ್ಗೆ ಎದ್ದು ಸಿದ್ದರಾದೆವು. ಅಜ್ಜಿ ಮನೆಯ ಮಲೆನಾಡ ತಿಂಡಿಯ ಅದ್ಭುತ ಸವಿ. ಅಕ್ಕಿ ಕಡುಬು, ನೀರು ದೋಸೆ ಮತ್ತು ಚಟ್ನಿ, ಜೊತೆಯಲ್ಲಿ ಕಾಫಿ, ಗಡದ್ದಾಗಿ ತಿಂದು ಓಟ ಶುರು. ತೀರ್ಥಹಳ್ಳಿಯ ಆನಂದಗಿರಿ ಗುಡ್ಡದ ಕಡೆ ಹೊರಟೆವು. ಗುಡ್ಡದ ಬುಡದಲ್ಲಿ ನಿಂತಾಗ ಅದರ ತುದಿಯ ಮಂಟಪ ಚಿಕ್ಕದಾಗಿ ಕಾಣುತ್ತಿತ್ತು. ಮೇಲೆ ಹತ್ತಿಕೊಂಡು ಹೋದಂತೆಲ್ಲಾ ಮಂಟಪ ದೊಡ್ಡದಾಗಲು ಆರಂಭಿಸಿತು. ಗಮ್ಯ ತಲುಪಿದಾಗ ಮಂಟಪದೆದುರು ನಾವು ಬಹಳ ಚಿಕ್ಕವರಾಗಿ ಕಾಣುತ್ತಿದ್ದೆವು.
ಅಲ್ಲಿ ಎತ್ತರದಲ್ಲಿ ನಿಂತು ಸುತ್ತಲೂ ಕೆಳಗೆ ನೋಡಿದರೆ, ದಟ್ಟ ಹಸಿರು ಗಿಡ, ಮರಗಳ ರಾಶಿ, ಹಾವು ಹರಿದಂತೆ ಸೊಟ್ಟ ಗೆರೆಗಳಂತಿರುವ ರಸ್ತೆಗಳ ತಿರುವುಗಳು, ಪುಟ್ಟ ಪುಟ್ಟ ಪೆಟ್ಟಿಗೆಯಂತೆ ಕಾಣುವ ಮನೆಗಳ ಆಕಾರ, ಅಲ್ಲಲ್ಲಿ ಜಲಧಾರೆಗಳ ತಿಳಿ ನೀಲಿ ಬಣ್ಣ. ರಮಣೀಯ ದೃಶ್ಯಕೆ ಮನಸು ಸೋಲುತ್ತಿತ್ತು. ಮಂಟಪದ ಒಂದು ಕಂಬಕ್ಕೆ ಒರಗಿ ಕುಳಿತದ್ದು ಗಮನಕ್ಕೇ ಬರುತ್ತಿರಲಿಲ್ಲ. ಆ ನಿಸರ್ಗದ ಮಡಿಲ ಕೂಸಾಗಿ ಕಳೆದು ಹೋಗುವಾಸೆ. ಆದರೆ ‘ರಾಣಿ… ರಾಣಿ… ನಡಿ ಹೋಗಣ’ ಎನ್ನುವ ಕರೆಗೆ ಓಗೊಟ್ಟು ಮನಸಿಲ್ಲದ ಮನಸಿನಿಂದ ಹೊರಡುತ್ತಿದ್ದೆ. ಇದೇ ಅನುಭವ ಕೋಳಿಕಾಲು ಗುಡ್ಡ ಮತ್ತು ಸಿಬ್ಬಲು ಗುಡ್ಡದ ಮೇಲೂ ಆಗುತ್ತಿತ್ತು.
ಊರಲ್ಲಿ ಹರಿಯುವ ತುಂಗೆ ಕೈ ಬೀಸಿ ಕರೆದ ಹಾಗಾಗಿ ಅಲ್ಲಿಗೆ ಓಡುತ್ತಿದ್ದೆವು. ಅಲ್ಲಿ ಹರಿಯುವ ನೀರಿಗೆ ದೃಷ್ಟಿ ಹಾಯಿಸಿದರೆ ಸಾಕು, ನೋಟ ಕೀಳದಂತೆ ಅಲ್ಲೇ ನೆಟ್ಟಿರುತ್ತಿತ್ತು. ಲೆಕ್ಕವಿಲ್ಲದಷ್ಟು ಕರಿ ಬಂಡೆಗಲ್ಲುಗಳು. ಒಂದು ಪುಟ್ಟ ಕಲ್ಲಿನ ಮೇಲೆ ಕೂತು, ನೀರಲ್ಲಿ ಕಾಲುಗಳ ಇಳಿ ಬಿಟ್ಟರೆ, ಪ್ರಪಂಚ ಮರೆಯುವ ತಲ್ಲೀನತೆ. ಅಲ್ಲಿಂದಲೂ ನನ್ನನ್ನು ಒತ್ತಾಯದಿಂದ ಎಳೆದುಕೊಂಡು ಮನೆಗೆ ಹೋಗುತ್ತಿದ್ದರು.
ಪುಟ್ಟ ನದಿ ಕುಶಾವತಿಯಲ್ಲಿ ಇಳಿದರೆ ಮೊಣಕಾಲವರೆಗೂ ನೀರು. ಹೆಚ್ಚು ಆಳವಿರಲಿಲ್ಲ. ಆ ನೀರಿನಲ್ಲಿ ಕುಳಿತು ಬಿಡುತ್ತಿದ್ದೆ. ತಳದಲ್ಲಿರುವ ಮರಳ ರಾಶಿಯ ಸ್ಪರ್ಶದ ಅನುಭವ. ನೀರಿನಿಂದ ಹೊರ ಬರಲು ಮನಸಿರುತ್ತಿರಲಿಲ್ಲ. ಅಲ್ಲಿಂದಲೂ ಒತ್ತಾಯದಿಂದ ಎಳೆದು ಹೊರ ತರುತ್ತಿದ್ದರು. ಮನೆಗೆ ಹಿಂದಿರುಗುವಾಗ ಉದ್ಯಾನವನದಲ್ಲಿ ತೊಟ್ಟ ಬಟ್ಟೆ ಒಣಗುವವರೆಗೂ ಆಟವಾಡುವುದು ಅನಿವಾರ್ಯವಿತ್ತು. ಇಲ್ಲದಿದ್ದರೆ ಅಜ್ಜಿಯಿಂದ ಪೂಜೆ ಇರುತ್ತಿತ್ತು. ಆದರೂ ಅದ್ಹೇಗೋ ಏನೊ ಅಜ್ಜಿಗೆ ಅನುಮಾನ ಬಂದೇ ಬರುತ್ತಿತ್ತು.
‘ಯಾಕ್ರೊ ಎಲ್ರೂ ಹೊಳೆಗೇನಾದ್ರು ಹೋಗಿ ಬಂದ್ರಾ? ಬಿಳಿ ಬಿಳಿ ಸ್ವಚ್ಛ ಕಾಣ್ತಿದಿರಿ. ನೀರಲ್ಲಿ ತೊಳ್ದಿಟ್ಹಂಗೆ. ಆಟ ಆಡಿ ಬಂದ್ಹಾಗಿದೆ.’
ಅಜ್ಜಿಗೆ ಉತ್ತರ ಕೊಡದೆ ಗಪ್‌ಚಿಪ್ ಆದರೆ ಸಾಕು, ಅವಳಿಗೆ ಪೂರ್ತಿ ಖಾತ್ರಿಯಾಗುತ್ತಿತ್ತು.
ಹೀಗೆ ಪ್ರಕೃತಿಯ ಜೊತೆಯಲ್ಲಿ ಧ್ಯಾನಸ್ಥಳಾಗುವ ಸ್ವಭಾವ ಅಂದಿನಿಂದಲೇ ಇತ್ತು. ಮಾಡುವ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಮಾಡುವ ಧ್ಯಾನಸ್ಥ ಸ್ಥಿತಿಯೂ ಇತ್ತೆಂದು ಈಗ ಅನಿಸುತ್ತಿದೆ. ಏಕೆಂದರೆ ಈಗ ‘ಧ್ಯಾನ ಅಂದರೇನು?’ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಪ್ತರೊಬ್ಬರ ಸೂಚನೆಯಂತೆ ಧ್ಯಾನ ಶಿಬಿರದಲ್ಲಿ ಭಾಗವಹಿಸಿದೆ. ಅಲ್ಲಿ ಕಳೆದ ಮೂರು ದಿನಗಳು ಬದುಕಿನ ಅತ್ಯಮೂಲ್ಯ ಕ್ಷಣಗಳು!!!
ಮನುಷ್ಯನ ಹೊರ ಲೋಕ, ಹೊರ ಪ್ರಪಂಚ, ಹೊರ ಜಗತ್ತು ಇರುವಂತೆಯೇ ಒಳಪಯಣವೂ ಇದೆ ಎಂದು ಖಾತ್ರಿಯಾದ ದಿನಗಳು. ಕಣ್ಣು ಮುಚ್ಚಿದಾಗ ಕತ್ತಲಾವರಿಸುವುದು ಸತ್ಯ. ಆದರೆ ಮುಚ್ಚಿದ ಕಂಗಳಡಿಯ ಜಗತ್ತಿನಲ್ಲಿ ಬೆರಗಿನ ಮಹಾ ಬೆಳಕಿನ ಮಿಂಚು. ಅದನ್ನು ಅನುಭವಿಸಿಯೇ ಅನುಭಾವಿಸಬೇಕು. ಅದುವರೆಗೂ ಪರಿಪೂರ್ಣ ಅರ್ಥವಾಗದ ಅಲ್ಲಮ, ಅಕ್ಕಮಹಾದೇವಿ ತಿಳಿಯಲಾರಂಭಿಸಿದರು. ಓಶೋ ಹೇಳುವ ತಾತ್ವಿಕ ವಿಚಾರಗಳ ಮಂಥನ ನಡೆಯಲು ಸಹಾಯ ಮಾಡಿದ ಧ್ಯಾನ ಶಿಬಿರವದು. ಮನಸು ತೃಪ್ತಿಯಾಯಿತು. ಸಂತೃಪ್ತಿಯಾಯಿತು. ಮೌನದಿಂದಲೇ ಬದುಕು ಗೆದ್ದ ಮಹಾಪುರುಷ ಬುದ್ಧನ ಆದರ್ಶದ ಆಳದರಿವು.
ಹೊರ ಪ್ರಪಂಚದ ತೊಂದರೆ, ನೋವುಗಳಿಗಾಗಿ ಈಗ ಅನಗತ್ಯ ದುಃಖಿಸುವುದಿಲ್ಲ. ನೋವು ಮರೆಸುವ ಶಕ್ತಿ ಅಂತರಂಗದ ಪಯಣಕೆ ಇದೆ ಎಂಬುದನ್ನು ಧ್ಯಾನ ನಿರೂಪಿಸಿದೆ.
ಅಂದಿನಿಂದ ಇಂದಿನವರೆಗೆ ಪ್ರತಿನಿತ್ಯ ಧ್ಯಾನವೂ ಸಂಗಾತಿ.
ಈಗ ಪ್ರಕೃತಿಯ ಮಡಿಲು ಲಭ್ಯವಿಲ್ಲ. ಗುಡ್ಡ ಇಲ್ಲ, ಬೆಟ್ಟ ಇಲ್ಲ, ಹೊಳೆ ದಂಡೆ ಇಲ್ಲ, ನದಿ ನೀರಿಲ್ಲ. ಸಂಸಾರದ ಜಂಜಾಟದಲ್ಲಿ ಜೀಕುತ್ತ… ಜೀಕುತ್ತ… ಸಾಗಿದೆ ಜೀವನ. ಆದರೂ ಬೆಳಗಿನ ಜಾವದ ಒಂದೂವರೆ ಗಂಟೆ ಸಮಯವನ್ನು ಮಾತ್ರ ದಕ್ಕಿಸಿಕೊಂಡಿರುವೆ.
ಅದು ಜೀವನೋತ್ಸಾಹಕ್ಕೆ ಮುನ್ನುಡಿ ಬರೆದಂತೆ!
ಜೀವ ಚೈತನ್ಯದ ಆಗರ!
ಅರಿವಿನ ಅರಮನೆ!
ಧ್ಯಾನದಲಿ ಧೇನಿಸಲು ಜಗತ್ತು ಶೂನ್ಯ!
ನಿಜ, ಆದರೆ,
ಮನುಷ್ಯನಿಗೆ ಆ ಶೂನ್ಯ ಜಗತ್ತಿನಲ್ಲೂ ಏನೇನೊ ಕೆಲಸಗಳ ಮಾಡುತ್ತ ಬದುಕುವ ಅನಿವಾರ್ಯತೆಯ ಬಹುದೊಡ್ಡ ಸವಾಲು!
ಈ ಸಮಯದಲಿ ನೆನಪಾಗುವುದು ಅವ್ವ ಹೇಳುತ್ತಿದ್ದ ಬಸವಣ್ಣನ ವಚನ!
‘ಹೊತ್ತಾರೆ ಎದ್ದು ಅಗ್ಫವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯುವೊಯ್ಯದ ಮುನ್ನ ತೊತ್ತುಗೆಲಸವ ಮಾಡು ಕೂಡಲಸಂಗಮದೇವನ’
–ಸಿಕಾ ಕಲಬುರ್ಗಿ
ಪ್ರೀಯ ಓದುಗರೇ,
e-ಸುದ್ದಿ ಅಂತರಜಾಲ ಪತ್ರಿಕೆಗೆ ಸುದ್ದಿ, ಲೇಖನ, ಜಾಹಿರಾತು ಕಳಿಸುವವರು ಸಂಪಾದಕರಾದ ವೀರೇಶ ಸೌದ್ರಿ ಅವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.
ದೂರವಾಣಿ ಸಂಖ್ಯೆ-9448805067
e-ಸುದ್ದಿ ಗೆ ಚಂದಾದಾರರಾಗಲು ಸುದ್ದಿಯ ಕೆಳಗಡೆ ಬಲಬಾಗಲ್ಲಿ ಕಾಣಿಸುವ ಕೆಂಪು ಬೆಲ್ ಬಟನ್ ಒತ್ತಿ. ನಮ್ಮ ಎಲ್ಲಾ ಪ್ರಕಟಣೆಗಳನ್ನು ಓದಬಹುದು.