ಅಳುವಿನಲೆಯ ಹೊಸ ಪಯಣ

ವಾಸ್ತವದ ಒಡಲು

ಅಳುವಿನಲೆಯ ಹೊಸ ಪಯಣ

ಮುಂಸ್ಸಂಜೆಯ ಹೊತ್ತು. ಬಾನಿನಲ್ಲಿ ಸೂರ್ಯ ತನ್ನ ಬಿಡುವಿಲ್ಲದ ಕೆಲಸ ಮುಗಿಸಿಕೊಂಡು ಹೊರಟ ಸಮಯ. ತನ್ನ ಛಾಪು ಮೂಡಿಸುತ್ತಿರುವಂತೆ ಬಾನೆಲ್ಲಾ ಕೆಂಪು ಅಡರಿತ್ತು.

ಆ ಹೊತ್ತಿಗೆ ಅಲ್ಲೇ ಮುಂಜಾನೆಯಿಂದ ನಡೆದ ಮದುವೆಯ ಸಡಗರಕ್ಕೊಂದು ಪೂರ್ಣ ವಿರಾಮ ಹಾಕುವ ಕ್ಷಣ. ಅದು ವಿವಾಹ ಪದ್ಧತಿಯ ಕೊನೆಯ ಹಂತವೂ ಹೌದು. ಮದುಮಗಳ ಕೆನ್ನೆ ಮುಳುಗುವ ಸೂರ್ಯನೊಂದಿಗೆ ಪೈಪೋಟಿ ನಡೆಸುತ್ತಿರುವಂತೆ ಗುಲಾಬಿ ವರ್ಣಕ್ಕೆ ತಿರುಗಿತ್ತು. ಎಲ್ಲರಿಗೂ ಕಣ್ಣೀರು ತನ್ನಿಂದ ತಾನೇ ಹೊರ ಚಿಮ್ಮುತ್ತಿತ್ತು. ಹೆತ್ತವರ ಪಾಡಂತೂ ಹೇಳ ತೀರದು. ಕಂಬನಿಯ ಧಾರೆಯಲಿ ಮಿಂದೆದ್ದಿದ್ದರು. ಮನಕಲಕುವ ದೃಶ್ಯ. ವಿದಾಯ ಎಲ್ಲರ ಮನಸು ಆರ್ದ್ರಗೊಳಿಸಿತ್ತು.

ಬೆಳಿಗ್ಗೆಯಿಂದ ಸಂಜೆಯವರೆಗೂ ಬಂಧು ಬಾಂಧವರು ಬಂದು ಬಂದು ಉಂಡು ಹೋಗಿದ್ದರು. ತೀರಾ ಹತ್ತಿರದ ಸಂಬಂಧಿಕರು ಹೆಣ್ಣನ್ನು ಕಳಿಸುವವರೆಗೆ ಇರಲೇಬೇಕೆಂದು ಅಲ್ಲೇ ನಿಂತಿದ್ದರು. ಅದುವರೆಗೂ‌ ಉಟ್ಟು ತೊಟ್ಟು ಸಂಭ್ರಮಿಸುತ್ತಿದ್ದವರು, ಮದುಮಗಳು ಹೊರಡುವ ಹೊತ್ತಿಗೆ ಮುಖ ಸಣ್ಣ ಮಾಡಿಕೊಂಡಿದ್ದರು. ಇನ್ನೇನು ಉಡಿಯಕ್ಕಿಯ ಹಿಡಿದು ಕಾರನ್ನೇರಬೇಕು ಎನ್ನುವಷ್ಟರಲ್ಲಿ ಯಾರಿಗೂ ತಡೆದುಕೊಳ್ಳಲಾಗಲಿಲ್ಲ. ದುಃಖದ ಕಟ್ಟೆಯೊಡೆಯಿತು. ಅವಳ ಅಪ್ಪ, ಅಮ್ಮ, ತಂಗಿ, ತಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಸೋದರತ್ತೆ, ಮಾಮ, ಹೃದಯಕ್ಕೆ ಹತ್ತಿರವಾದವರೆಲ್ಲಾ ಕರಗಿ ನೀರಾಗಿದ್ದರು.

ಇತ್ತೀಚೆಗೆ ಬಂಧುಗಳ ಮದುವೆಯಲ್ಲಿ ಭಾಗಿಯಾದಾಗ ಕಂಡ ಚಿತ್ರಣವಿದು. ಆಗ ನನಗೂ ಕಣ್ಣಿರ ತಡೆ ಹಿಡಿಯಲಾಗದೆ ಕರಗಿ ಹೋಗಿದ್ದೆ. ಹೆತ್ತವರೊಂದಿಗಿನ ಮಕ್ಕಳ ಸಂಬಂಧವೇ ಹಾಗೆ. ಬಿಡಿಸಲಾಗದಂತೆ ಬಾಂಧವ್ಯ ಬೆಸೆದುಕೊಂಡಿರುತ್ತದೆ. ವಾಸ್ತವವಾದಿಗಳಾಗಿ ತಾತ್ವಿಕತೆಯ ಮೂಲಕ ಚಿಂತಿಸಿದರೆ ಕಣ್ಣೀರು ಬರುವುದಿಲ್ಲ ಎನ್ನುವ ಊಹೆ ಸುಳ್ಳಾಗಿತ್ತು.

ಬಹಳ ಹಿಂದೆ ಆದ ವೈಯಕ್ತಿಕ ಅನುಭವ ನೆನಪಿಗೆ ಬರಲಾರಂಭಿಸಿತು. ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಅಂದು ಮದುವೆಯಾದ ದಿನ. ಅವ್ವ ತನ್ನ ಜೀವವನ್ನೇ ಕೊಡುತ್ತಿರುವಂತೆ ಸಂಕಟದಿಂದ ಕಣ್ಣೀರಿಡುತ್ತಿದ್ದಳು. ಅದನ್ನು ನೋಡಿ ನನ್ನೊಳಗಾದ ವೇದನೆ ಹೇಳಿಕೊಳ್ಳಲಾಗದು. ಬಿಗಿದಪ್ಪಿದ ಅವ್ವನ ಅಪ್ಪುಗೆಯಲಿ ಸಂಕಟ, ಅಳು, ಕಣ್ಣೀರು.

ಇನ್ನು ಕಾರು ಹೊರಡಲನುವಾಯಿತು. ದುಃಖ ಉಕ್ಕಿ ಕಣ್ಣೀರು ಒರೆಸಿಕೊಳ್ಳುತ್ತಲೇ ಎಲ್ಲರಿಗೂ ಕೈ ಮಾಡಿದ್ದೆ. ಕಾರು ಭರ್ರ್ ಎಂದು ಮುಂದಕ್ಕೋಡಿದಾಗ ನನ್ನ ಅಳು ತಹಬದಿಗೆ ಬಂದಿತ್ತು. ಪಕ್ಕದಲ್ಲಿ ಕುಳಿತಿದ್ದ ಪತಿ,
‘ಬೀದರ ಬಿಟ್ಟು ಇನ್ನೂ ಐದು ನಿಮಿಷ ಆಗಿಲ್ಲ, ಆಗಲೇ ಅಳು ನಿಂತು ಹೋಯಿತು. ಕೊನೆ ಪಕ್ಷ ಹಳ್ಳಿಖೇಡದವರ್ಗು ಅಳ್ತಿಯೋ ಏನೋ ಅನ್ಕೊಂಡಿದ್ದೆ.’
ಆ ಮಾತಿಗೆ ಕಾರಲ್ಲಿದ್ದ ಅಕ್ಕ, ಭಾವ, ಡ್ರೈವರ್ ಎಲ್ಲರೂ ನಕ್ಕಿದ್ದರು. ಆ ದುಃಖವೇ ಹಾಗೆ. ಅದಕ್ಕೆ ಬೇಗ ಮರೆಸುವ ಶಕ್ತಿಯೂ ಇರುತ್ತದೆ.

ಈ ಜೀವನದಲ್ಲಿ ನಡೆಯುವ ಎಲ್ಲಾ ಕಹಿ ಘಟನೆಗಳು ನೆನಪಿನಲ್ಲಿ ಉಳಿಯುವಂತಿದ್ದರೆ ಮನುಷ್ಯ ಬಹಳ ಅಸಹಾಯಕನಾಗುತ್ತಿದ್ದ. ಅದಕ್ಕಾಗಿಯೇ ಈ ಪ್ರಕೃತಿ ನಿಯಮದಲ್ಲಿ ‘ಮರೆವು’ ಎನ್ನುವ ಶಕ್ತಿಯಿದೆ. ‘ಮರೆವು ಒಂದು ವರ!’ ಹಿರಿಯರು ಹೇಳುವ ಈ ಗಾದೆ ಮಾತು ಚಾಲ್ತಿಯಲ್ಲಿರುವುದಕ್ಕೂ ಇದೇ ಕಾರಣ. ಹಳೆಯ ನೆನಪಿನಿಂದ ವಾಸ್ತವಕ್ಕಿಳಿದೆ.

ಮದುಮಗಳು ಹೊರಟು ಹೋದ ನಂತರ ಅವಳ ತಾಯಿಗೆ ನನ್ನನ್ನು ನೋಡಿ ಇನ್ನೂ ದುಃಖವಾಯಿತು. ಈಗ ಸಮಾಧಾನ ಪಡಿಸುವ ಸರದಿ ನನ್ನದಾಗಿತ್ತು.
‘ಒಳ್ಳೆ ಮನೆ, ಒಳ್ಳೆ ಜನ ಅದಾರ. ಯಾಕ್ ಚಿಂತಿ ಮಾಡ್ತೀರಿ?’

‘ಹಂಗಲ್ರಿ ಇನ್ಮುಂದ ಅಕಿನ ಬಿಟ್ಟು ನಾವ್ ಇರಾಬೇಕಲ್ರಿ. ಹ್ಯಾಂಗ್ ಇರಬೇಕ್ರಿ? ಅದ್ಕಾ ತ್ರಾಸ ಆಕೈತ್ರಿ. ಮಂದಿ ಭಾಳ ಛಲೋ ಅದಾರ್ರಿ. ಅದ್ಕೇನ ಚಿಂತಿ ಇಲ್ರಿ’ ಮತ್ತೆ ಅವರ ದುಃಖ ಒತ್ತರಿಸಿಕೊಂಡು ಬಂತು.

‘ಇರಲಿ ಇರಲಿ ಸಮಾಧಾನ ಮಾಡ್ಕೊಳಿ’ ಎಂದು ಸಂತೈಸಿದೆ.

ಇನ್ನೂ ಗಟ್ಟಿಮುಟ್ಟಾಗಿದ್ದ ಹುಡುಗಿಯ ಅಜ್ಜಿ ನನ್ನ ಕೈ ಹಿಡಿದು ನಿಧಾನಕೆ ಅಮುಕುತ್ತಲೇ ಇದ್ದರು. ಅವರಿಗೆ ಮಾತೇ ಹೊರಡುತ್ತಿಲ್ಲ. ಅವರ ಕೈಯ ಮೇಲೆ ನನ್ನ ಎಡಗೈ ಇಟ್ಟೆ, ಸಮಾಧಾನ ಮಾಡಿಕೊಳ್ಳಿ ಎನ್ನುವಂತೆ. ಆ ಹಿರಿಯ ಜೀವಕೆ ಅಷ್ಟು ಸಾಂತ್ವನ ಸಾಕಾಗಿತ್ತು. ಎಲ್ಲರೂ ಮೌನವಾಗಿದ್ದೆವು. ವಿಧಿ ಇಲ್ಲದೆ ಸಮಾಧಾನ ಪಟ್ಟುಕೊಂಡು ತಮ್ಮ ತಮ್ಮ ಮನೆಗೆ ಹಿಂದಿರುಗ ಬೇಕಾಯಿತು.

ನನ್ನ ಮನಸಿನಿಂದ ಹೆಣ್ಣು ಕಳಿಸಿ ಕೊಡುವ ದೃಶ್ಯ ಕಣ್ಣಿಗೆ ಕಟ್ಟಿದಂತೆ ಅಚ್ಚೊತ್ತಿಕೊಂಡಿತ್ತು. ಅವ್ವ, ಅಜ್ಜಿ, ಅಜ್ಜಿಯ ತಾಯಿಯವರೆಗೆ ಮನಸು ಹಿಂದಕ್ಕೋಡಿತು. ಅದಕ್ಕೂ ಹಿಂದೆ ಯಾರಿದ್ದರು? ಗೊತ್ತಿಲ್ಲ. ಆದರೆ ಈ ಪರಂಪರೆ ಎಂದಿನಿಂದಲೂ ನಡೆಯುತ್ತಲೇ ಬಂದಿದೆ. ಇದು ಹೀಗೇ ಮುಂದುವರಿಯುತ್ತಲೇ ಇರುತ್ತದೆ. ನನ್ನ ಮಗಳು, ಮೊಮ್ಮಗಳು, ಮರಿಮೊಮ್ಮಗಳು… ಮುಂದೊಂದು ದಿನ ನಾವಿರುವುದಿಲ್ಲ! ಆದರೆ ಯಾವುದೂ ನಿಲ್ಲುವುದಿಲ್ಲ…

ಪ್ರತಿಯೊಂದು ಹೆಣ್ಣು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವುದೊಂದು ಪದ್ಧತಿ. ಇದು ಸಾಮಾಜದಲ್ಲಿರುವ ವ್ಯವಸ್ಥೆ. ಮನುಷ್ಯ ತನ್ನ ಅನುಕೂಲಕ್ಕೆ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಂಡಿರಲು ಮಾಡಿಕೊಂಡಿರುವ ಒಂದು ವ್ಯವಸ್ಥಿತವಾದ ವ್ಯವಸ್ಥೆ. ಇದು ಹೆಚ್ಚುಕಡಿಮೆ ಎಲ್ಲರೂ ಒಪ್ಪಿಕೊಂಡಿರುವ ‘ಒಪ್ಪಿತ ವ್ಯವಸ್ಥೆ’.

ಯಾವ ಹೆಣ್ಣಿಗೂ ಇದರ ಪರಿಕಲ್ಪನೆ ಇಲ್ಲ ಎಂದು ಹೇಳಲಾಗುವುದಿಲ್ಲ. ಅದು ಪೂರ್ವ ನಿರ್ಧರಿತ. ಆದರೂ ಆ ಕ್ಷಣಕ್ಕೆ ಆಗುವ ಅನುಭವವು ಹೀಗೆ. ಆ ಸಮಯ ಬಂದು ಎದುರಿಗೆ ನಿಂತಾಗ, ಅಗಲಿಕೆಯ ನೋವನ್ನು ಸಹಿಸಲಾಗದೆ ಗದ್ಗದಿತ ಆಗುವುದು ಸತ್ಯ.

ಮೊನ್ನೆ ಮದುವೆಯಾದ ಹುಡುಗಿ ಮನೆಗೆ ಕಾಲ್ ಮಾಡಿದೆ. ‘ಹೇಗಿದಿರಿ? ಮಗಳು ಹೋದ ಮೇಲೆ ಮನೆ ಬಿಕೋ ಎನ್ನುತ್ತಿರಬಹುದು.’

‘ಹೌದ್ರಿ, ಅಕಿ ಹೋದಾಗಿಂದ ಮನಿ ಭಾಳ ಭಣಭಣ ಅನ್ನಕ್ಹತ್ತೈತ್ರಿ. ಅಕಿನ ನೆನಪು ಮಾಡಕೊಳ್ಳಾರ್ದೆ ಒಂದು ಕ್ಷಣನೂ ಕಳದಿಲ್ರಿ.’

‘ಖರೆ ನೋಡ್ರಿ. ಗಂಡನ ಮನಿಗಿ ಹೋಗ ಮುಂದ ನನಗೂ ಹಿಂಗೇ ಆಗಿತ್ತು. ನೀ ಗಂಡನ ಮನಿಗೆ ಹೋಗ ಮುಂದು ಹೀಂಗೇ ಆಗಿತ್ತು. ಈಗ ನಿನ್ ಮಗಳು. ನಾವಿಲ್ಲದೆ ನಮ್ ಅವ್ವ ಅಪ್ಪ ಹೆಂಗ್ ದಿನಗಳದಿರಬೇಕು? ಹಂಗಾ ನಾವು ಕಳಿಯೋದು. ಅತ್ತು ಅತ್ತು ಸಣ್ಣ ಅಗಬ್ಯಾಡ. ಇದು ಎಲ್ಲರ ಪಾಲಿಗೂ ಕಟ್ಟಿಟ್ಟ ಬುತ್ತಿ.’

‘ನೀವನೂದು ಖರೆರಿ. ತಿಳಿದು ನೋಡಿದ್ರ, ಏನು ಇಲ್ರೀಪಾ. ನಾನೇ ನನ್ನಷ್ಟಕ ಸಮಾಧಾನ ಮಾಡ್ಕೊತೀನ್ರೀ. ನೀವು ಅದ್ಹಂಗ ದುಃಖ ಮಾಡ್ಕೊಳೊದ್ರಾಗ ಏನೂ ಸುಖ ಇಲ್ರಿ. ನಮ್ ಮಕ್ಳಿಗ್ ಚಂದಾಗಿ ಜೀವನ ಮಾಡಾಕ ಬಿಟ್ಟು ದೂರಿಂದ ನೋಡಿ ಸಂತೋಷ್ ಪಡ್ ಬೇಕು.’
ಆಕೆ ಸಮಾಧಾನದಿಂದ ಇಷ್ಟು ಮಾತನಾಡಿದ ಮೇಲೆ ನನಗೂ ಅದೇನೋ ನಿರಾಳ ಭಾವ ಮೂಡಿ ನಿಟ್ಟುಸಿರುಬಿಟ್ಟೆ.

ಸಿಕಾ ಕಲಬುರ್ಗಿ

Don`t copy text!