ಪುಸ್ತಕ ಹೊತ್ತ ಕಂಟ್ಲ್ಯಾ ಸವಾರಿ

ಪುಸ್ತಕ ಹೊತ್ತ ಕಂಟ್ಲ್ಯಾ ಸವಾರಿ

ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಬಾಲ್ಯದ ಪ್ರಭಾವ ಗಾಢವಾಗಿರುತ್ತದೆ. ಚಿಕ್ಕವರಿದ್ದಾಗ ತಿಂದ ತಿಂಡಿ ತಿನಿಸುಗಳು, ಕೆಲವು ವ್ಯಕ್ತಿಗಳೊಂದಿಗೆ ಕಳೆದ ಸಮಯ, ಆಗಿನ ಒಳ್ಳೆಯ ಹವ್ಯಾಸಗಳು, ಅರ್ಥಪೂರ್ಣ ಘಟನೆಗಳು ಮುಂತಾದವು ಇಡೀ ಬದುಕಿನುದ್ದಕ್ಕೂ ತನ್ನ ಛಾಪನ್ನು ಮೂಡಿಸುತ್ತಲೇ ಇರುತ್ತದೆ. ಆಗ ನಾವು, ಇಂದು ಹೀಗಿರಲು ಕಾರಣ, ಹಿಂದೆ ಹಾಗೆ ಇದ್ದದ್ದು ಎಂದು ಖಚಿತವಾಗಿ ಹೇಳಬಹುದು.

ಇಷ್ಟೆಲ್ಲಾ ಪೀಠಿಕೆ ಹಾಕಲು ಅಪ್ಪ ಮತ್ತು ಅವನ ಪುಸ್ತಕ ಸಂಗಾತಿಯ ನೆನಪು. ಇಂದು ಅಪ್ಪನ ದಿನಚರಿ ನೋಡಿದರೆ ಅವರ ಬಾಲ್ಯ ಹೇಗಿತ್ತು ಎಂದು ಊಹೆ ಮಾಡುವಂತಾಯಿತು. ಅವನು ಆಗಾಗ ತನ್ನ ಅನುಭವ ಹಂಚಿಕೊಂಡಾಗಲೂ ಅನೇಕ ವಿಷಯಗಳು ಗಮನಕ್ಕೆ ಬರುತ್ತಿದ್ದವು.

ಅಪ್ಪ ದಿನದ ಬಹುಭಾಗ ಪುಸ್ತಕ ಹಿಡಿದೇ ಕುಳಿತಿರುತ್ತಾನೆ. ಒಂದು ರ‌್ಯಾಕ್ ತುಂಬಾ ಪುಸ್ತಕಗಳು ಅವನ ಓದಿಗಾಗಿ ಕಾಯುತ್ತಾ ಕುಳಿತಿರುತ್ತವೆ. ಕೆಲವು ಪುಸ್ತಕಗಳಿಗೇ ಲಾಟರಿ ಹೊಡೆದಂತೆ ಎರಡೆರಡು ಬಾರಿಯೂ ಓದಿ ಖುಶಿ ಪಡುವುದಿದೆ. ನಾನು ಮಗಳು, ನನ್ನ ಮಕ್ಕಳು ನಮಗೆ ಸಾಧ್ಯವಾದಾಗ ಮಾತ್ರ ಅವರಿಗೆ ಸಮಯ ಕೊಡಲು ಆಗುತ್ತಿತ್ತು. ಆದರೆ ಅಪ್ಪ ಯಾರಿದ್ದರೇನು? ಇಲ್ಲದಿದ್ದರೇನು? ತನ್ನ ಪಾಡಿಗೆ ತಾನು ಓದುವುದರಲ್ಲಿ ಮಗ್ನ.

‘ಅಪ್ಪ ನಿನ್ನ ಓದು ನೋಡಿ ನನಗೆ ಓದಲು ಸಮಯ ಸಿಗುವುದಿಲ್ಲ ಅಂತ ಹೊಟ್ಟೆಕಿಚ್ಚು ಆಗುತ್ತದೆ’
‘ಅಪ್ಪ ನಿನ್ನಷ್ಟು ನಾ ಓದಿದ್ದರೆ ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿದ್ದೆ. ಇಲ್ಲ ಈ ದೇಶವನ್ನೇ ಆಳುತ್ತಿದ್ದೆ’
‘ಅಪ್ಪ ನಿನಗೆ ಓದಲು ಸಮಯವೋ ಸಮಯ. ಇಡೀ ದಿನ ನಿನ್ನದೇ’
ಹೀಗೆ ಏನೆಲ್ಲಾ ಹೇಳುತ್ತಿದ್ದೆ. ಅಪ್ಪ ಇರುವ ಕೆಲವೇ ಕೆಲವು ಹಲ್ಲುಗಳ ಪ್ರದರ್ಶನ ಮಾಡುತ್ತ ಜೋರಾಗಿ ನಗುತ್ತಿದ್ದ.

‘ನೀ ಓದ್ಬೇಕ್ ಮಗಾ ಓದುದ್ರೆ ಬರಿಲಾಕ್ ಬರ್ತುದ್’. ಅಪ್ಪನ ಈ ಮಾತಿಗೆ ಹೌದೆಂಬಂತೆ ತಲೆ ಹಾಕುತ್ತಿದ್ದೆ.

ಅಪ್ಪನ ಓದಿನ ಹಿಂದಿನ ಒಂಟಿತನ ನೆನಪಾದರೆ ಕರುಳು ಚುರುಕ್ ಎನ್ನುತ್ತದೆ. ಅವ್ವ ಹೋಗಿ ಹತ್ತು ವರ್ಷಗಳ ಮೇಲಾಯಿತು. ಜೋಡಿ ಇಲ್ಲದ ಒಂಟಿ ಬದುಕಿನ ಅವರ ಅನುಭವದ ಆಳಕ್ಕೆ ಇಳಿದು ತಿಳಿದುಕೊಳ್ಳುವುದು ಕಷ್ಟ. ಆದರೂ ಸಾಧ್ಯವಾದಷ್ಟು ಸಮಯ, ಮಾತುಕತೆ, ಚರ್ಚೆ ನಡೆದೇ ಇರುತ್ತದೆ.

ಅಪ್ಪ ಪುಸ್ತಕ ಪ್ರೇಮಿ. ಈ ಪರಿ ಪುಸ್ತಕ ಓದಲು ಕಾರಣವೂ ಇದೆ. ಹಿಂದೆ ಅಜ್ಜ ಪುಸ್ತಕ ಮತ್ತು ರೆಡಿಮೇಡ್ ಬಟ್ಟೆ ವ್ಯಾಪಾರಿಯಾಗಿದ್ದರು. ರೆಡಿಮೇಡ್ ಕ್ಲಾತ್ ಎಂದರೆ ಸಿದ್ದಬಟ್ಟೆ ಎಂದು ಅವ್ವ ಕಿಚಾಯಿಸುತ್ತಿದುದು ಚೆನ್ನಾಗಿ ನೆನಪಿದೆ.

ಅಪ್ಪ ಚಿಕ್ಕವನಿದ್ದಾಗ ಅಂದರೆ ಸ್ವಾತಂತ್ರ್ಯ ಸಿಕ್ಕ ಸಂದರ್ಭ. ಬೀದರ ಜಿಲ್ಲೆಯ ಔರಾದ ತಾಲೂಕಿನಲ್ಲಿ ವಾಸ. ಅದರ ಸುತ್ತಮುತ್ತ ಮಹಾರಾಷ್ಟ್ರ ಮತ್ತು ತೆಲಂಗಾಣ ಪ್ರದೇಶ. ಹತ್ತಿರವಿದ್ದ ಎಲ್ಲಾ ಹಳ್ಳಿಗಳಿಗೂ ಪುಸ್ತಕ ಹೊತ್ತುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದರು.

ಆಗ ಊರಿಂದೂರಿಗೆ ಹೋಗಲು ಕಾಲ್ನಡಿಗೆ, ಕುದುರೆ ಅಥವಾ ಕಂಟ್ಲ್ಯಾದ ಮೇಲೆ ಸವಾರಿ ಹೋಗ ಬೇಕಾಗುತ್ತಿತ್ತು. ಈ ಕಂಟ್ಲ್ಯಾ ಅಂದರೆ ಎತ್ತು. ಎತ್ತನ್ನು ಶ್ರಮ ಸಂಸ್ಕೃತಿಗೆ ಅಳವಡಿಸಲು ಅದರ ಬೀಜವನ್ನು ನಿಷ್ಕ್ರಿಯ ಗೊಳಿಸುತ್ತಿದ್ದರು. ಹಾಗೆ ಮಾಡುವುದರಿಂದ ಎತ್ತಿನ ಸಿಟ್ಟು ಮಾಯವಾಗಿ ಶಾಂತ ಸ್ವಭಾವದ್ದಾಗುತ್ತಿತ್ತು. ಅಂತಹ ಎತ್ತುಗಳನ್ನು ಕಂಟ್ಲ್ಯಾ ಎಂದು ಕರೆಯುತ್ತಿದ್ದರು.

ಊರಲ್ಲಿ ಯಾರಾದರು ಹೆಣ್ಣುಮಕ್ಕಳು ತವರಿಗೆ ಬಂದಿದ್ದರೆ, ಮತ್ತೆ ಗಂಡನ ಮನೆಗೆ ಹೋಗಲು, ಅಜ್ಜನ ಕಂಟ್ಲ್ಯಾ ಕೇಳಿ ಪಡೆಯುತ್ತಿದ್ದರು. ಇದ್ದದ್ದರಲ್ಲೇ ಸ್ಥಿತಿವಂತ ಅಜ್ಜ ಪರೋಪಕಾರಿಯೂ ಆಗಿದ್ದ. ಪ್ರೀತಿಯಿಂದ ಕಂಟ್ಲ್ಯಾನ ಸಾಕಿ ಸಲಹಿದ್ದ.

ಸುತ್ತಮುತ್ತಲಿನ ಹಳ್ಳಿಗಳಿಗೆ ವ್ಯಾಪಾರಕ್ಕೆಂದು ಹೋಗುವಾಗ, ಎರಡು ಪೆಟ್ಟಿಗೆ ಪುಸ್ತಕಗಳನ್ನು ಜೋಡಿಸಿ, ಕಂಟ್ಲ್ಯಾದ ಎರಡು ಮಗ್ಗುಲಿಗೆ ನೇತು ಹಾಕಿ, ಬೆನ್ನ ಮೇಲೆ ಅಪ್ಪನನ್ನು ಕೂರಿಸಿಕೊಂಡು, ಅಜ್ಜ ಕಾಲ್ನಡಿಗೆಯಲ್ಲಿ ಪ್ರವಾಸ ಹೊರಡುತ್ತಿದ್ದ. ಐದರಿಂದ ಇಪ್ಪತ್ತು ಕಿಲೋಮೀಟರ್ ದೂರದ ದಾರಿಯನ್ನು ಕಂಟ್ಲ್ಯಾ ಅರಾಮಾಗಿ ಕ್ರಮಿಸುತ್ತಿದ್ದ.
ಮಹಾರಾಷ್ಟ್ರದಲ್ಲಿ ಇರುವ ಊರುಗಳಾದ ಧೂಳೆ, ಹಣೆಗಾಂವ, ಏಡೂರು, ನಾಗಮಾರಪಳ್ಳಿ, ವಜ್ಜರ್, ದೇವಣಿ ಮುಂತಾದಲ್ಲಿಗೆ ಕಂಟ್ಲ್ಯಾ ಸವಾರಿ. ಇನ್ನು ಕುಸನೂರು, ಕಮಾಲನಗರ ಮುಂತಾದ ಕನ್ನಡದ ಊರುಗಳಿಗೆ ಹೋಗ ಬೇಕಾದರೆ ತಲೆಯ ಮೇಲೆ ಹೊತ್ತು, ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು.

ಊರು ತಲುಪಿದ ಮೇಲೆ ನೆಂಟರ ಮನೆಗೆ ಹೋಗಿ ತಂಗುವುದು. ನೆಂಟರು ಶಾವಿಗೆ ಹಾಕಿ, ಅನ್ನ ಬ್ಯಾಳೆ ಮಾಡುತ್ತಿದ್ದರು. ಇವರಿಗೆ ಊಟ ಮಾಡಿಸುವುದರೊಂದಿಗೆ ಕಂಟ್ಲ್ಯಾಗೆ ಮೇವು ಕೂಡ ಹಾಕಬೇಕಿತ್ತು. ಎಲ್ಲಾ ವ್ಯವಸ್ಥೆಯನ್ನು ಪ್ರೀತಿಯಿಂದ ಒಬ್ಬರಿಗೊಬ್ಬರು ಮಾಡಿಕೊಳ್ಳುತ್ತಿದ್ದ ಕಾಲವದು.

ಸದಾ ಪುಸ್ತಕದ ಗಂಟು, ಪುಸ್ತಕದ ಪೆಟ್ಟಿಗೆ, ಪುಸ್ತಕದ ಅಂಗಡಿಯೊಂದಿಗೇ ಅಪ್ಪನ ಬಾಲ್ಯದ ದಿನಗಳ ನಂಟು. ಎಲ್ಲೇ ಹೋದರು ಓದುವುದು ನಿರಂತರ ನಡೆದೇ ಇರುತ್ತಿತ್ತು. ಅಪ್ಪ ಚಿಕ್ಕವನಿದ್ದಾಗಿನಿಂದ ದೊಡ್ಡವನಾಗುವವರೆಗೂ ಅಜ್ಜ ಮತ್ತು ಅಜ್ಜನ ಪುಸ್ತಕದ ವ್ಯಾಪಾರದೊಂದಿಗೆ ಬೆಳೆದ.

ಅಪ್ಪನಿಗೆ ತಿಳುವಳಿಕೆ ಬರಲು ಆರಂಭವಾದ ಮೇಲೆ ಕಾದಂಬರಿ ಓದುವ ಹವ್ಯಾಸ ಬೆಳೆಯಿತು. ಓದಿನ ವಿಸ್ತಾರ ಹೆಚ್ಚಾದಂತೆಲ್ಲಾ ಭಾವನಾ ಜೀವಿಯಾಗಲು ಆರಂಭಿಸಿದ. ಅಜ್ಜ ಪಕ್ಕಾ ವ್ಯಾಪಾರಿ. ಕನ್ನಡ, ಮರಾಠಿ ಭಾಷೆ, ಮೋಡಿ ಲಿಪಿ ಕಲಿತಿದ್ದ. ಲೆಕ್ಕ ಪತ್ರ ಮಾಡುವಷ್ಟು ತಿಳುವಳಿಕೆ ಬೆಳೆಸಿಕೊಂಡಿದ್ದ. ಆದರೆ ಓದುಗನಾಗಿರಲಿಲ್ಲ. ಅದೇ ಅಪ್ಪ ಉತ್ತಮ ಓದುಗನಾಗಲು ಅಜ್ಜ ಕಾರಣನಾದ.

ಒಮ್ಮೆ ಕಾದಂಬರಿಯೊಂದನ್ನು ಓದುತ್ತ ಓದುತ್ತ ಅಪ್ಪ ಭಾವನಾ ಲೋಕಕ್ಕೆ ಹೋಗಿ ತನ್ನನ್ನು ತಾ ಮರೆತು ಬಿಟ್ಟಿದ್ದ. ಅಲ್ಲಿಯ ಹೃದಯಸ್ಪರ್ಶಿ ಪ್ರಸಂಗಕ್ಕೆ ಸ್ಪಂದಿಸಿ, ಕಣ್ಣೀರು ಹಾಕುತ್ತ ಓದಲಾರಂಭಿಸಿದ. ಅದನ್ನು ಗಮನಿಸಿದ ಅಜ್ಜ ವ್ಯಗ್ರನಾದ.

‘ಪುಸ್ತಕ್ ಓದ್ತಿ ಮತ್ತ ಆಳ್ತಿ? ಸೂಳೆಮಗ ಅಳಬ್ಯಾಡ ಅಂದ್ರ ಓದ್ತಿ ಅಳ್ತಿ ಓದ್ತಿ ಅಳ್ತಿ?’ ಎಂದು ಹೇಳುತ್ತ ಹೊಡೆಯುತ್ತಿದ್ದನಂತೆ. ಅಪ್ಪನನ್ನು ಎಷ್ಟು ಪ್ರೀತಿಸುತ್ತಿದ್ದನೋ ಅಷ್ಟೇ ಸಿಟ್ಟೂ ಇತ್ತು. ‘ಸಿದ್ದಬಟ್ಟೆಯವರ ಸಿಟ್ಟು ಖಾನ್‌ದಾನಿ ಸಿಟ್ಟು’ ಎಂದು ಅಜ್ಜನ ಕಾಲದಿಂದಲೇ ಖ್ಯಾತಿ ಪಡೆದಿತ್ತು. ಆದರೆ ಅಜ್ಜನ ಸಿಟ್ಟನ್ನು ನಾ ನೋಡಿಯೇ ಇಲ್ಲ. ಮೊಮ್ಮಗಳಾಗಿ ಮಾಯದ ಮಾತುಗಳನ್ನೇ ಅನುಭವಿಸಿದ್ದೆ. ಅದೇನೇ ಇದ್ದರು ಅಜ್ಜ ಪುಸ್ತಕಗಳ ಭಂಡಾರವನ್ನೇ ಓದಲು ಅಪ್ಪನಿಗೆ ಕೊಟ್ಟಿದ್ದಂತೂ ಸತ್ಯ.

ಇಂದಿಗೂ ಅಪ್ಪ ಪುಸ್ತಕಗಳನ್ನು ಹಿಡಿಯುವಾಗ ಸುಂದರವಾದ ಸಿನಿಮಾ ನಟಿಯನ್ನು ಸ್ಪರ್ಶಿಸಿದಂತೆ ನವಿರಾಗಿ ಮುಟ್ಟುತ್ತಾನೆ. ಅವುಗಳಿಗೆ ಪ್ರೀತಿಯಿಂದ ಅಂಗಿ ತೊಡಿಸಿದಂತೆ ಕವರ್ ಹಾಕುತ್ತಾನೆ. ಹಾಳೆಗಳ ಕಿವಿ ಮಡಿಚುವುದೇ ಇಲ್ಲ. ಎಲ್ಲಿ ನೋವು ಆಗುತ್ತದೋ ಎನ್ನುವ ಹಿತಭಾವ. ಹೊಸ ಪುಸ್ತಕ ಕಂಡರಂತು ಮಕ್ಕಳಂತೆ ಹಿಗ್ಗಿ ಬಿಡುವ ಮುಗ್ದತೆ.

ಚಿಕ್ಕವಳಿದ್ದಾಗ ಏನಾದರು ಬೇಕಾದರೆ ಸುತ್ತಿ ಬಳಸಿ ಅಪ್ಪನನ್ನು ಕೇಳುತ್ತಿದ್ದೆ. ಅದನ್ನು ಕೊಡಿಸುವ, ಕೊಡಿಸದೆ ಇರುವ ಮನಸ್ಸನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಈಗ ಅಪ್ಪನ ಸರದಿ. ಅವನಿಗೆ ಪುಸ್ತಕದ ಅಂಗಡಿಗೆ ಹೋಗುವ ಹುಚ್ಚು. ಅಲ್ಲಿ ಒಂದಿಷ್ಟು ಕೈಯಾಡಿಸಿ ಇಷ್ಟವಾದ ಕೃತಿಗಳನ್ನು ಖರೀದಿಸುವ ಉಮೇದು. ಆಗಾಗ ಕೇಳುವುದೂ ಇದೆ.

‘ಮಗಾ ಆ ಕಾರ್ಯಕ್ರಮ ಮುಗಿಸಿ ಬರುವಾಗ ಪುಸ್ತುಕ್ ಖರೀದಿ ಮಾಡ್ದುರ್ ಛಲೊ ಇತ್ತು. ರೊಕ್ಕ ಇಟ್ಕೊಂಡಿರು’ ಎನ್ನುವಾಗ ಅಪ್ಪನ ಪುಸ್ತಕ ಪ್ರೀತಿ ಮನಸಿಗೆ ನಾಟುತ್ತದೆ.
ನವ ಕರ್ನಾಟಕ, ಸಪ್ನಾ ಬುಕ್ ಹೌಸ್, ಸಿದ್ಧಲಿಂಗೇಶ್ವರ ಬುಕ್ ಡಿಪೊ, ವಿಶ್ವವಿದ್ಯಾಲಯದ ಪುಸ್ತಕದಂಗಡಿ, ಬಸವ ಸಮಿತಿಯ ಪುಸ್ತಕ ಮಳಿಗೆ, ಹೀಗೆ ಒಂದಲ್ಲ ಒಂದು ಕಡೆಯಿಂದ ಖರೀದಿಸುವ ತುಡಿತ ಇಂದಿಗೂ ಇದೆ.

ಅಪ್ಪನ ಬಾಲ್ಯ ಅಷ್ಟೇ ಅಲ್ಲ ವೃದ್ಧಾಪ್ಯದ ದಿನಗಳೂ ಪುಸ್ತಕ ಪ್ರಪಂಚದಲ್ಲೇ ಕಳೆಯುತ್ತಿದೆ. ಅಪ್ಪನನ್ನೂ, ಪುಸ್ತಕದ ಪೆಟ್ಟಿಗೆಗಳನ್ನೂ ಹೊತ್ತುಕೊಂಡು ಹೋಗುತ್ತಿದ್ದ ಕಂಟ್ಲ್ಯಾ ಮತ್ತು ಅಜ್ಜನಷ್ಟು ಅಲ್ಲದಿದ್ದರೂ, ಅಪ್ಪನಿಗಾಗಿ ಒಂದಿಷ್ಟು ಪುಸ್ತಕಗಳನ್ನು ತಂದು ಕೊಡಲೇ ಬೇಕು ಎನಿಸುತ್ತದೆ.

ಸಿಕಾ, ಕಲಬುರ್ಗಿ

Don`t copy text!