ಬೇಲಿ ಮೇಲಿನ ಹೂವು
ಡಾ ಶಶಿಕಾಂತ್ ಪಟ್ಟಣ ಸರ್ ಅವರ ಬೇಲಿ ಮೇಲಿನ ಹೂವು ಹೊಸ ಕವನ ಸಂಕಲನ ಸಾಕಷ್ಟು ವಿಷಯಗಳ ಹೊತ್ತು ಬಂದಿರುವ ಒಂದು ಪ್ಯಾಕೇಜ್ ಸಂಕಲನ ಎನ್ನಬಹುದು. ಈ ಸಂಕಲನದಲ್ಲಿ ಪ್ರಕೃತಿಯ ಕುರಿತು, ಪ್ರಕೃತಿಯ ಮೇಲಿನ ದೌರ್ಜನ್ಯ, ನವಿರು ಹಾಸ್ಯ, ಮಧುರ ಪ್ರೀತಿ, ವಾಸ್ತವದ ಅನೇಕ ಚಿತ್ರಣಗಳು, ಹದಗೆಟ್ಟ ವ್ಯವಸ್ಥೆ ವಿರುದ್ಧ ಏನೂ ಮಾಡಲು ಆಗದ ಆಕ್ರೋಶ, ಬಸವ, ಬುದ್ಧ, ಅಂಬೇಡ್ಕರರ ತತ್ವ ಕುರಿತ ಕವಿತೆ …. ಹೀಗೆ ಒಟ್ಟಾರೆ ಹೇಳುವುದಾದರೆ ಇದು ಒಂದು ರೀತಿಯಲ್ಲಿ ಬದುಕಿನ ಸಂಗಮ….
ದಿನನಿತ್ಯದ ಬದುಕಿನಲ್ಲಿ ನಾವು ಅನುಭವಿಸಿದ ಅಥವಾ ನಮ್ಮ ಪ್ರಜ್ಞೆಯನ್ನು ಕಾಡುವ ಅನೇಕ ಸಂಗತಿಗಳು ಇಲ್ಲಿವೆ… ನಾವು ಒಂದು ವಿಷಯಕ್ಕೆ ಮುಖಾಮುಖಿ ಆದಾಗ ಅದನ್ನು ಕಾವ್ಯವಾಗಿ ಅನಾವರಣಗೊಳಿಸಲು ಒಂದು ಸೂಕ್ಷ್ಮ ಸಂವೇದನೆ ಕವಿಯಾದವರಿಗೆ ಅಥವಾ ಯಾವುದೇ ಬರಹಗಾರರಿಗೆ ಬೇಕಾಗುತ್ತದೆ. ಅಂತಹ ಸೂಕ್ಷ್ಮ ಸಂವೇದನೆ ಇವರ ಈ ಸಂಕಲನದಲ್ಲಿ ಉದ್ದಕ್ಕೂ ಕಾಣುತ್ತದೆ.
ಮಾಧ್ಯಮ ಹೆತ್ತ ಭೂತಗಳು ಇಂದಿನ ವಾಸ್ತವತೆಯ ಅರಿವು ಮೂಡಿಸುವ ಕವಿತೆ. ಜೊತೆಗೆ ‘ಬದುಕುತ್ತಿದ್ದೇವೆ ಸತ್ತವರ ಹಾಗೆ’ ಎಂಬ ಅಸಹಾಯಕ ನೋವು ಪ್ರತಿಬಿಂಬಿತವಾಗಿದೆ.
ಬಸವ ಭಾರತ, ನನ್ನ ದೇಶ ಭಾರತ,ಝೆಂಡಾ ಬೇರೆ ಅಜೆಂಡಾ ಒಂದೇ, ಜಯಂತಿ, ಹಗರಣ ಮುಂತಾದ ಅನೇಕ ಕವಿತೆಗಳು ನಾಡಿನ ಸ್ಥಿತಿ ಗತಿ ತೊರಿಸುವುದರೊಂದಿಗೆ ಕವಿಗೆ ಜಾತಿ ಧರ್ಮ ಅಂತಸ್ತಿನ ಹಂಗಿಲ್ಲದ ಸ್ನೇಹ ಪ್ರೀತಿಯ ನಾಡು ಕಟ್ಟುವ ಆಶಯ ಪ್ರಸ್ತುತ ಎಲ್ಲರೂ ಬಯಸುವ ಮನಸ್ಥಿತಿಗೆ ಹಿಡಿದ ಕನ್ನಡಿ. ಇದು ಹೇಗೆಂದರೆ ಎಲ್ಲರಿಗೂ ಸ್ವರ್ಗ ಬೇಕು ಯಾರೂ ಸಾಯಲು ತಯಾರಿಲ್ಲ ಎನ್ನುವ ಹಾಗೆ….ನಾವೇ ಸೃಷ್ಟಿ ಮಾಡಬೇಕೇ ಹೊರತು ಬೇರೆ ಯಾರೂ ನಮಗಾಗಿ ಸೃಷ್ಟಿಸಲಾರರು… ಕವಿಯ ಆಶಯ ಎಲ್ಲರದೂ ಕೂಡಾ.
ಬಸವ ಪ್ರಜ್ಞೆ, ಅಲ್ಲಮ, ಬುದ್ಧ,ಶರಣರು,ಸಂತರು ತತ್ವಜ್ಞಾನ, ಆಧ್ಯಾತ್ಮಿಕತೆಯ ಒಳಗೊಂಡಂತೆ ಕೂಡ ಸಾಕಷ್ಟು ಕವಿತೆಗಳು ಇದರಲ್ಲಿವೆ. ಈ ತತ್ವಗಳ ಅಳವಡಿಸಿಕೊಳ್ಳುವುದರ ಕುರಿತು ಹಾಗೂ ಈ ವಿಚಾರವಾಗಿಯೇ ಪಟ್ಟಣ ಸರ್ ಅವರ ಆಳವಾದ ಅಧ್ಯಯನ ಗೋಚರವಾಗುತ್ತದೆ ಹಾಗೂ ಇದರ ಕುರಿತ ಅವರ ವೈಚಾರಿಕ ನೆಲೆಯಲ್ಲಿ ಬಂದಂತಹ ಕವಿತೆಗಳು ಕೂಡಾ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಭೂಮಿ ಉಳಿಯಲಿ, ಮುಂಗಾರು ಮಳೆ ಮುಂತಾದ ಪ್ರಕೃತಿ ಕುರಿತು ಬರೆಯುವಾಗ ಪ್ರಕೃತಿ ಮೇಲಾಗಿರುವ ದೌರ್ಜನ್ಯ ಕಂಡು ಮರುಗುವ ಕವಿ ಭೂಮಿ ಉಳಿಯಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆ.
ಸಂಕಲನದ ಶೀರ್ಷಿಕೆಯ ಕವಿತೆ ಬೇಲಿ ಮೇಲಿನ ಹೂವು ಒಂದು ಉತ್ತಮ ಕವಿತೆ. ಜಗತ್ತಿನ ಸೃಷ್ಟಿಯಲ್ಲಿ ಹೂವೆಲ್ಲವೂ ಒಂದೇ ಆದರೂ… ಮಲ್ಲಿಗೆ, ಸಂಪಿಗೆ,ಕಮಲ, ಗುಲಾಬಿ ಗಳು ಅರಳಿ ಸಾರ್ಥಕ ಆಗುವುದಕ್ಕೂ, ಬೇಲಿ ಮೇಲಿನ ಹೂವೊಂದು ಯಾರ ಅರಿವಿಗೂ ಬಾರದೆ ಮೌನದಲಿ ಅರಳಿ ನಕ್ಕು ಯಾವುದೇ ಗುಡಿ, ಚರ್ಚ್, ಮಸೀದಿ ಪೂಜೆ, ಅಲಂಕಾರಕ್ಕೆ ಬಾರದೇ ಅನಾಥ ಶವಗಳಿಗೆ ತೂರುವ ಹೆಸರಿಲ್ಲದ ಹೂವುಗಳಾಗಿಬಿಟ್ಟಿರುವುದು ಕವಿಗೆ ಎಷ್ಟೊಂದು ಸುಂದರ ಹೂಗಳ ನಿರರ್ಥಕ ಬಾಳು ಕಾಣಿಸುವುದು ಕವಿ ಮನದ ಸೂಕ್ಷ್ಮತೆಯನ್ನು ಎತ್ತಿ ಹಿಡಿಯುತ್ತದೆ. ಬಾಳು ಕೂಡ ಹೀಗೆಯೇ ಅಲ್ಲವೇ… ಒಬ್ಬರು ತುಂಬಾ ಚೆನ್ನಾಗಿ ಬಾಳಿದರೆ ಮತ್ತೊಬ್ಬರು ಹೇಳ ಹೆಸರಿಲ್ಲದೆ ಹುಟ್ಟಿ ಬದುಕು ಮುಗಿಸುತ್ತಾರೆ. ಎಲ್ಲರೂ ಮನುಷ್ಯರೇ ಆದರೂ ಬದುಕು ದಕ್ಕುವ ರೀತಿ ವಿಭಿನ್ನ ಎನ್ನುವುದು ಎಂತಹಾ ವಿಪರ್ಯಾಸ ಅನಿಸುತ್ತದೆ.
ಈ ಸಂಕಲನದಲ್ಲಿ ಉದ್ದಕ್ಕೂ ಸಾಕಷ್ಟು ಕವಿತೆಗಳು ಕಾಡುತ್ತವೆ. ನನಗೆ ಎಲ್ಲವನ್ನೂ ಹೇಳಲು ಆಗದಿದ್ದರೂ ಒಟ್ಟಾರೆಯಾಗಿ ಒಂದು ಸೂಕ್ಷ್ಮತೆ ಇರುವ ಕವಿತೆಗಳ ಓದಿದ ಸಂತಸ. ಪಟ್ಟಣ ಸರ್ ಅವರ ಕಾವ್ಯದ ಓದಿನ ಆಸಕ್ತಿ, ಆಳವಾದ ಅಧ್ಯಯನ ಎಲ್ಲವೂ ಇಲ್ಲಿ ಅಗೋಚರವಾಗಿ ಕೆಲಸ ಮಾಡಿವೆ ಎಂಬುದನ್ನು ಹೇಳಬಯಸುತ್ತೇನೆ. ಸಾಹಿತ್ಯ ಸೇವೆಯಲ್ಲಿ ಅದಮ್ಯ ಆಸೆ ಆಸಕ್ತಿ ಇರುವ ಸರ್ ಇಂದ ಮತ್ತಷ್ಟು ಕೃತಿಗಳು ಬರಲಿ ಎಂದು ಆಶಿಸುತ್ತೇನೆ.
–ಮಮತಾ ಶಂಕರ್
ಬೆಳಗಾವಿ