ಬಸವ ಬೆಳಗು

ಕೃತಿ ಪರಿಚಯ

ಬಸವಕುಮಾರ ಪಾಟೀಲರ 60ನೇ ಜನ್ಮದಿನದ ಶುಭಸಂದರ್ಭದಲ್ಲಿ ಬಿಡುಗಡೆಯಾದ ಬಸವ ಬೆಳಗು ಕೃತಿಯು ಅವರ ಬದುಕು ಸಾಧನೆಗಳ ಚಿತ್ರಣವಾಗಿದೆ. ಅಪಾರವಾದ ಬಸವ ಪ್ರೀತಿ ಕರುಣೆಗಳ ಮನದಲ್ಲಿ ಹೊತ್ತು ಒಬ್ಬ ಸಾಮಾನ್ಯ ವ್ಯಕ್ತಿ ಜನ ಶಕ್ತಿಯಾಗಿ ಬೆಳೆದ ಯಶೋಗಾಥೆ ಒಂದು ದಂತಕಥೆಯಂತೆ ತೋರುವ ಕೃತಿಯು ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ಚಂದ್ರಪ್ಪ ಭುತಮುರ್ಗೆ ಅವರ ಸಾಹಿತ್ಯದಲ್ಲಿ ಅರಳಿದೆ.

ತಮ್ಮ ಸ್ವಾರ್ಥಕ್ಕಾಗಿ ಕೈಮುಗಿಯುವ ಜನರಿಗಿಂತ ಸಮಾಜಸೇವೆಯಲ್ಲಿ ಇರುವವರನ್ನು ಗುರುತಿಸಿ ಗೌರವಿಸಬೇಕು ಎಂದು ಸತತವಾಗಿ 40 ವರ್ಷಗಳಿಂದ ತಮ್ಮನ್ನೇ ತಾವು ಸಮಾಜಕ್ಕೆ ಅರ್ಪಿಸಿಕೊಂಡ ಆದರ್ಶ ವ್ಯಕ್ತಿಗೆ ಮಾರುಹೋಗಿ ಈ ಪುಸ್ತಕವನ್ನು ಬರೆದಿರುವದಾಗಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರು ದಾಖಲಿಸುವರು.

ಪ್ರಸ್ತುತ ನಾಡಿಗೆಲ್ಲಾ ಪರಿಚಿತರೇ ಆಗಿರುವ ಬಸವ ಕುಮಾರ್ ಪಾಟೀಲರ ಕೇವಲ ರೂಢಿಯ ಪರಿಚಯದ ಕೃತಿ ಇದಲ್ಲ ಅವರ ಜೀವನ ಸಾಧನೆಯ ದಾಖಲೆ ಎಂದು ಮುನ್ನುಡಿಯಲ್ಲಿ ನಾಡೋಜ ಡಾ. ಗೊ.ರು.ಚ. ಅವರು ಅಭಿಪ್ರಾಯ ಮಂಡಿಸುವರು. ಮಹನೀಯರ ಜೀವನ ಸಾಧನೆಯ ದರ್ಶನವಾದ ಇದೊಂದು ಅಪರೂಪದ ಕೃತಿ ಎಂದು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಬೆನ್ನುಡಿಯಲ್ಲಿ ವ್ಯಕ್ತಪಡಿಸಿರುವರು.

ಸಾವಿರಾರು ಜನರ ರೋಲ್ ಮಾಡೆಲ್ ಆಗಿರುವ ಬಸವಕುಮಾರ್ ಪಾಟೀಲ್ ಅವರು ಬಸವ ಪೀಠದ ಹೆಮ್ಮೆಯ ಕುವರ ಆಗಿದ್ದಾರೆ, ಅವರಿಗೆ ಬಸವ ಕರುಣೆ ಸದಾ ಇರಲೆಂದು ಪೂಜ್ಯ ಶ್ರೀ ಮಾತೆ ಗಂಗಾದೇವಿ ಯವರು ಶುಭ ಹಾರೈಸಿದ್ದಾರೆ.

ಬಸವ ಭೂಮಿಯು ಮತ್ತೆ ಬಸವಾದಿ ಪ್ರಮಥರಿಂ ವೈಭವದಿ ಬೆಳಗಬೇಕು, ಬಿಸಿರಕ್ತ ತರುಣರಿಂ ಹುರಿದುಂಬಿಸಲ್ಕಿಂದು ರಣಭೇರಿ ಮೊಳಗಬೇಕು ಎಂಬ ಕವಿವಾಣಿ ಬಸವ ಕುಮಾರರು ಸಾಬೀತು ಮಾಡಿದ್ದರು ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಮನದಮಾತು ಬಿಚ್ಚಿ ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿದ್ದಾರೆ.

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹಾಗೂ ಅನೇಕ ಸಚಿವರು, ಪೂಜ್ಯರು ,ಗಣ್ಯರು ಅವರಿಗೆ ಈ ಸಂದರ್ಭದಲ್ಲಿ ಶುಭಕೋರಿದ್ದಾರೆ.

ಪುಸ್ತಕವು ನಾಲ್ಕು ಆಯಾಮಗಳಲ್ಲಿ ವಿಸ್ತೃತವಾಗಿ ಅವರ ಬದುಕನ್ನು ಬಿಚ್ಚಿಟ್ಟಿದೆ.

1.ನೆನಪಿನಂಗಳ ಸಂದರ್ಶನ
2. ಬಸವಕುಮಾರರ ಕಾರ್ಯಚಟುವಟಿಕೆಗಳ ಪಕ್ಷಿನೋಟ (ಭಾವಚಿತ್ರಗಳು)
3.ಕ್ಷೇತ್ರಕಾರ್ಯದ ಹಾದಿಯಲ್ಲಿ
4. ಅನುಭವದ ಪರಿ ನೂರ್ವರಿಗೆ ನೂರು ಪರಿ.

ನೆನಪಿನಂಗಳ ಸಂದರ್ಶನ ಮಾಲೆಯಲ್ಲಿ 60 ವರ್ಷಗಳು ಸಂದದಕ್ಕೆ ಸಾಂಕೇತಿಕವಾಗಿ 60 ಪ್ರಶ್ನೆಗಳನ್ನು ಕೇಳಲಾಗಿದೆ. ಅದು ಬಸವಕುಮಾರರ ಸಂಸ್ಕಾರ, ಬಾಲ್ಯ, ಕುಟುಂಬ, ಸಾಧನೆ, ಸಂಘಟನೆಯ ಕಡಿದಾದ ಹಾದಿಯಲ್ಲಿ ಮಾನಸಿಕ ತುಮುಲ, ಸಂಘರ್ಷ, ಎಲ್ಲವುಗಳ ಮೊತ್ತವಾಗಿದೆ.

ಅವರ ತಂದೆ ತಾಯಿಗಳ ವ್ಯಕ್ತಿತ್ವವನ್ನು ಈ ನಾಲ್ಕು ಸಾಲುಗಳಲ್ಲಿ ಬಸವಕುಮಾರರು ಈ ರೀತಿಯಾಗಿ ಕಟ್ಟಿ ಕೊಡುವವರು.

ಬೇರಿಳಿಸಿ ಬೆವರಿಳಿಸಿ ಭೂಮಿಯ ಉತ್ತವರು ಕಕ್ಕುಲತೆಯಿಂದ ಬದುಕು ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಸಿದವರು ಎಂದು. ಹಳ್ಳಿಗಳಲ್ಲಿ ಆಕಳು ಹೋರಿ ಎತ್ತುಗಳೊಂದಿಗೆ ಒಡನಾಟ, ಮಣ್ಣಿನ ಜೊತೆಗೆ ಅದಮ್ಯ ಪ್ರೀತಿ, ಕೃಷಿ ಕಾಯಕ ಎಲ್ಲವನ್ನು ಬಸವಕುಮಾರರು ಸಂಭ್ರಮಿಸಿದ್ದಾರೆ.

,”ಬ್ರಹ್ಮಚರ್ಯವೇ ಜೀವನ” ಎಂಬ ಪುಸ್ತಕದಿಂದ ಪ್ರಭಾವಿತರಾದ ಬಸವ ಕುಮಾರರು ತಮ್ಮ ಕಾಲೇಜು ದಿನಗಳಲ್ಲಿ ನೈತಿಕತೆಯ ಮಹತಿಯನ್ನು ಅರಿತು ದುಶ್ಚಟಗಳಿಂದ ದೂರವಿದ್ದು ಅತ್ಯಂತ ಸಂಯಮಿಯಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವರು.
*”ಹತ್ತಿರಕ್ಕೆ ಬರುತ್ತಾರೆ ಹೆಗಲಿಗೆ ಹೆಗಲು ತಾಗಿಸಿ ಹಲೋ ಎಂದು ಹಲ್ಕಿರಿದು ನೀನೆ ಭೂಪತಿ ಎಂದು ಉಬ್ಬಿಸಿ, ಸುತ್ತ ಮೆತ್ತಗೆ ಸೌದೆಯೊಟ್ಟುತ್ತಾರೆ ಯಾವಾಗ ಕಡ್ಡಿ ಗೀಚುತ್ತಾರೆ ಏನೋ”* ಎಂಬ ಜಿ.ಎಸ್ .ಶಿವರುದ್ರಪ್ಪನವರ ಮಾತಿನಂತೆ ಅವರು ಯಾವತ್ತೂ ಎಚ್ಚೆತ್ತುಕೊಂಡಿದ್ದರು.

ಅವರು 1983ರಲ್ಲಿ ವೀರಶೈವ ತರುಣ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವರು. ಅದೇ ಮುಂದೆ ಬಸವದಳವಾಗಿ ಮಾರ್ಪಟ್ಟಿತು. ಅವರ ಸಂಘಟನೆಯ ಹಾದಿಯಲ್ಲಿನ ನಡೆ ಮಾತ್ರ ಅಗ್ನಿದಿವ್ಯದ ಮಾರ್ಗವೇ ಸರಿ. ತಮ್ಮ ಸುಖ-ದುಃಖ, ಹೆಸರು, ಕೀರ್ತಿ, ಆಸೆ -ಆಕಾಂಕ್ಷೆಗಳನ್ನೆಲ್ಲಾ ಗಂಟುಕಟ್ಟಿ ತಮ್ಮನ್ನೇ ತಾವು ಸಂಘಟನೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯಕ್ಷೇತ್ರಕ್ಕೆ ಧುಮುಕಿದರು. ರಾಷ್ಟ್ರೀಯ ಬಸವದಳ ಕಟ್ಟಲು ನಿದ್ರೆ ನೀರಡಿಕೆ ಇಲ್ಲದೆ,ಹಗಲಿರುಳೂ ಪಟ್ಟಶ್ರಮ,ಹಣಬಲ,ಜನಬಲ ಇಲ್ಲದೆ ಇದ್ದರೂ ಅವರ ಹೋರಾಟದ ಕೆಚ್ಚು ಅವರನ್ನು ಗೌರೀಶಂಕರ ಶಿಖರವಾಗಿಸಿತು.

ಪೂಜ್ಯ ಮಾತಾಜಿ ಹಾಗೂ ಪೂಜ್ಯ ಲಿಂಗಾನಂದ ಸ್ವಾಮಿಗಳು ಇವರ ನಿಸ್ವಾರ್ಥ ಸೇವೆ, ಬಸವಭಕ್ತಿಯ ಅನನ್ಯತೆ, ಸಂಘಟನಾ ಚತುರತೆ,ಅವಿರತ ಶ್ರಮ ಎಲ್ಲವುಗಳನ್ನು ಮನಗಂಡು ರಾಜಕುಮಾರ ಎಂಬ ಹೆಸರಿನ ಬದಲಾಗಿ ಬಸವಕುಮಾರ ಎಂಬ ಹೆಸರನ್ನು ಕರುಣಿಸಿದರು. ಅವರಿಗೆ ರಾಷ್ಟ್ರೀಯ ಬಸವದಳದ ನೊಗವನ್ನು ಹೆಗಲಿಗೇರಿಸಿದರು. ಬಸವಕುಮಾರರು ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು, ಪ್ರಧಾನ ಸಂಘಟಕರು ಆಗಿ ಕಾರ್ಯನಿರ್ವಹಿಸಿದರು. ನಂತರ ವಿಶ್ವಧರ್ಮದ ಮಹಾಸಭಾ ರಾಜ್ಯ ಕಾರ್ಯದರ್ಶಿಗಳಾಗಿಯೂ ಸಾಕಷ್ಟು ಸೇವೆಯನ್ನು ಸಲ್ಲಿಸಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಜನ ಮೊದಮೊದಲಿಗೆ ಬೆರಳೆಣಿಕೆಯಷ್ಟಿದ್ದವರು ಸಾವಿರಾರು ಜನ ಸೇರುವಂತೆ ಮಾಡಿ ಅಲ್ಲಿಂದಲೆ ಬಸವಕಾರ್ಯಗಳು ಆರಂಭವಾದವು. ಹಳ್ಳಿಹಳ್ಳಿಗಳಲ್ಲಿ ಕೂಡಾ ಸೈಕಲ್ ಮೇಲೆ,ಕಾಲ್ನಡಿಗೆಗಳ ಮೂಲಕ ಸಂಚರಿಸಿ ಪರಿಣಾಮಕಾರಿ ಪಥಸಂಚಲನೆ ಹಾಗೂ ಜಯಘೋಷಗಳಿಂದ ಜನರಲ್ಲಿ ಉತ್ತೇಜನ ನೀಡಿ ಸಂಘಟನೆಯನ್ನು ಬೃಹತ್ ಆಗಿ ಬೆಳೆಸಿದರು.

ಬಸವಜ್ಯೋತಿ ಕಾರ್ಯಕ್ರಮ, ಬಸವ ತತ್ವ ತರಬೇತಿ,ಕಮ್ಮಟ,ಸಮ್ಮೇಳನ, ಪ್ರವಚನ, ಶರಣ ಕ್ಷೇತ್ರ ಪ್ರವಾಸ ಮುಂತಾದವುಗಳ ಮೂಲಕ ಶರಣತತ್ವ ಪ್ರಸಾರದಲ್ಲಿ ಅಭೂತಪೂರ್ವ ಸಾಧನೆಗೈದದ್ದು ಶ್ಲಾಘನೀಯ. ಇಷ್ಟೆ ಅಲ್ಲದೆ ವಾಚನಾಲಯಗಳ ಸ್ಥಾಪನೆ ಮಾಡಿ ಬಸವಮಂಟಪ ಕಟ್ಟಡವನ್ನೂ ವಿಸ್ತರಣೆ ಮಾಡಿದರು. ಸರಕಾರದಿಂದ ಬಸವಜಯಂತಿಯ ಆಚರಣೆಗೆ ಒತ್ತಾಯಿಸಿ ಹೋರಾಡಿ ಯಶಸ್ಸನ್ನು ಪಡೆದರು. ಪ್ರಾಣಿಬಲಿ ತಡೆಗಾಗಿ ಹೋರಾಟ, ಬಸವಣ್ಣನವರಿಗೆ ಅಗೌರವ ಅವಮಾನವಾದಾಗ ಹೋರಾಟ,ಕಲಬುರಗಿಯ ವಿಶ್ವವಿದ್ಯಾಲಯ ಕೆ ಬಸವಣ್ಣವರ ಹೆಸರಿಡಲು ಹೋರಾಟ, ರೈತಪರ ಹೋರಾಟ,ಮಧ್ಯಪಾನ ನಿಶೇಧಕ್ಕಾಗಿ ಆಂದೋಲನ ಹೀಗೆ ಲೆಕ್ಕವಿಲ್ಲದಷ್ಟು ಹೋರಾಟದ ಮೂಲಕ ಸಾಮಾಜಿಕ ಕಾರ್ಯಗೈದಿದ್ದು ಅವರ ಅಪ್ರತಿಮ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ

ಇಷ್ಟೆಲ್ಲ ಮಾಡಿ ಹೆಸರು ಮಾಡಿದ ನಿಮಗೆ ಹೇಗೆನಿಸುವುದು ಎಂದಾಗ ಬಸವಕುಮಾರರು “ಆಪ್ಕಿ ಕೃಪಾ ಸೆ ಸಬ್ ಕಾಮ್ ಹೋ ರಹಾ ಹೈ , ಕರತಾ ಹೈ ಮೇರಾ ಮಾಲಿಕ್ ಮೇರಾ ನಾಮ ಹೋರಹಾಹೈ”ಎಂದು ರಾಮದೇವಬಾಬಾರ ಮಾತನ್ನು ನೆನಪಿಸಿಕೊಳ್ಳುತ್ತಾ ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಎಂಬ ಬಸವ ನುಡಿಗೆ ಸಾಕ್ಷಿಯಾಗಿ ನಿಲ್ಲುವರು. ಹೀಗೆ ಎರಡು ದಶಕಗಳವರೆಗೆ ಬಿಡುವಿಲ್ಲದೆ ದುಡಿದು ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಮನಸ್ಥಿತಿ ಹೇಗಿತ್ತು ಎಂದಾಗ ಹೇಳುವರು…..
ಹುಟ್ಟಿದ ಕನಸು ಸತ್ತುಹೋಯಿತು ವಸಂತಕಾಲದಿ ನಳನಳಿಸಬೇಕಿದ್ದ ವನವೇ ಒಣಗಿ ಹೋಯಿತು, ಒಣಗಿ ಚೆಲ್ಲಾಪಿಲ್ಲಿಯಾಗಿದ್ದ ಎಲೆಗಳನ್ನು ಆಯ್ದುಕೊಳ್ಳಲೆ ಹೊಸದೊಂದು ವಿಶ್ವವನ್ನು ರೂಪಿಸಲೆ, ಯಾವ ಹಾದಿಯಲ್ಲಿ ಹೆಜ್ಜೆ ಹಾಕಲಿ ನಾನು”

ಹೀಗೆ ಅತಿಯಾದ ನೋವನ್ನು ಅನುಭವಿಸಿ ಕೆಲವು ಕಾಲ ಮೌನವಾದ ಅವರು ನಂತರ ಮತ್ತೆ ವಿಶ್ವಧರ್ಮ ಮಹಾಸಭಾ ರಚನೆಯಾದಾಗ ಕಾರ್ಯದರ್ಶಿಗಳಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದರು. ಅನಂತರ ಸಿದ್ದೇಶ್ವರ ಸ್ವಾಮಿಗಳ ಸಲಹೆಯಂತೆ ಶೈಕ್ಷಣಿಕ ಸೇವೆಯತ್ತ ಗಮನಹರಿಸಿ ಕಲ್ಯಾಣ ಕರ್ನಾಟಕ ಪ್ರತಿಷ್ಟಾನದ ಪ್ರತಿಷ್ಠಾಪನೆಯನ್ನು ಮಾಡುವರು ಇದರ ಮೂಲಕ ಸಾವಿರಾರು ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಹಾಗೂ ಪ್ರಾವೀಣ್ಯತೆ ಗಾಗಿ ವಿಶೇಷ ಕಾರ್ಯಾಗಾರ ಕಮ್ಮಟ ಏರ್ಪಡಿಸುವುದು, ವಸತಿ,ವಿದ್ಯಾಭ್ಯಾಸ ವೆಚ್ಚ ಭರಿಸುವದು ಅಲ್ಲದೆ ಅವರ ಕುಟುಂಬದವರಿಗೆ ವಿದ್ಯಾಭ್ಯಾಸದ ಅರಿವು ಮೂಡಿಸುವುದರ ಮೂಲಕ ಶಿಕ್ಷಣ ಜಾಗೃತಿಯನ್ನೇ ಮಾಡಿದರು.

ಸಾಮಾಜಿಕ ಕಾರ್ಯಕರ್ತರು ಎಂದರೆ ಬೀದಿಯಲ್ಲಿನ ಹಣ್ಣಿನ ಮರದ ಹಾಗೆ ಹಣ್ಣು ಬಿಟ್ಟುಷ್ಟೂ ಹೊಡೆತ ಹೆಚ್ಚು ಎಂದು ಅನುಭವಿಕ ನುಡಿಯನ್ನು ಹೇಳುತ್ತಾ ಬಸವಕುಮಾರರು ಎಲ್ಲರಲ್ಲೂ ಗುಣ ಅವಗುಣ ಇರುತ್ತವೆ ಅವುಗಳನ್ನು ಎತ್ತಿ ಹೇಳದೆ ಅವರ ಸದ್ಗುಣಗಳನ್ನು ಮೆಚ್ಚಿ ಬೆನ್ನು ತಟ್ಟುವುದರಿಂದ ಸಂಘಟನೆ ಬೆಳೆಯಲು ಸಾಧ್ಯ ಎಂದು ಮನದ ಮಾತನ್ನು ಕಳಕಳಿಯಿಂದ ನುಡಿವರು.
ನೀ ಕೊಟ್ಟ ಆಯುಷ್ಯ ಉಳ್ಳನ್ನಕ್ಕ ಲಿಂಗ ಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು ಎಂಬ ಅಕ್ಕನ ನುಡಿಯಂತೆ, ಸತತವಾಗಿ 40 ವರ್ಷಗಳ ಕಾಲ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು ದಣಿವಿಲ್ಲದೆ ನಿರಂತರವಾಗಿ ಇನ್ನು ಮಾಡುತ್ತಲೆ ಇರುವ ಒಬ್ಬ ಅನನ್ಯ ಬಸವಪಥಿಕ, ಶರಣಜೀವಿಯಾದ ಬಸವಕುಮಾರರು ಉಪಮಿಸಬಾರದ ಉಪಮಾತೀತರು. ಅವರ ಅಪ್ರತಿಮ ಬದುಕಿನ ಪುಟಗಳು ಸಾವಿರಾರು ಜನರಿಗೆ ಪ್ರೇರಣೆಯಾಗಿ ಪುಸ್ತಕ ಸಾರ್ಥಕತೆಯನ್ನು ಕಾಣಲಿ ಎಂದು ಆಶಿಸುತ್ತೇನೆ.

ಸುನಿತಾ ಮೂರಶಿಳ್ಳಿ,
ಶಿವಶಕ್ತಿ, ಮಂಜುನಾಥ ಪುರ, ಮಾಳಮಡ್ಡಿ, ಧಾರವಾಡ 580007.
9986437474

Don`t copy text!