ಸುಳ್ಳುಗಳ ಸುತ್ತಲೂ ಬದುಕು ಇರಬಹುದೇ!!!

ಸುಳ್ಳುಗಳ ಸುತ್ತಲೂ ಬದುಕು ಇರಬಹುದೇ!!!

ಸುಳ್ಳು ಅದೆಷ್ಟು ಕೆಟ್ಟದ್ದು, ಸುಳ್ಳು ಸಹಿಸಕಾಗಲ್ಲ, ಸುಳ್ಳು ಸಮಾಜಕ್ಕೆ ಕೆಡಕು ಮನುಜನಿಗೂ ಎಲ್ಲಿ ನೀಡುವುದು ಒಳಿತು? ಸುಳ್ಳಿಂದ ಸಂಸಾರಗಳೂ ಹಾಳು, ಸುಳ್ಳಿನ ಸುಳಿಯಲ್ಲಿ ಸಿಲುಕಿ ಸತ್ತೂ ಹೋದವರಿದ್ದಾರೆ. ಸುಳ್ಳೆಂದರೆ ಬರೀ ಸುಳ್ಳಲ್ಲ, ಅದೊಂದು ಅಸತ್ಯ, ಅರ‍್ಮ, ಅನೈತಿಕವಾದ ಅಂಶ. ಹೀಗೆ ಸುಳ್ಳಿನ ಬಗೆಗೆ ಅನೇಕ ಮಾತುಗಳನ್ನು ಹೇಳಿದ್ದಾಯ್ತು, ಕೇಳಿದ್ದೂ ಆಯಿತು.

ಆದರೆ ಬದುಕೆಂಬ ಜಟಕಾ ಬಂಡಿ ಮುನ್ನಡೆಯಲೂ ಕೆಲ ಸಮಯ, ಸಂಸಾರಗಳಲ್ಲಿ ಸುಳ್ಳಿನ ಹಾದಿ ಹಿಡಿಯಬೇಕಾಗುತ್ತದೆ. ಸಂಸಾರ ಜೋಡಿಸಲೂ ಸುಳ್ಳು ಸಹಕರಿಸುತ್ತದೆ. ಸುಂದರ ಬದುಕಿಗೆ ಸುಳ್ಳೂ ಕೆಲವೊಮ್ಮೆ ಸೊಗಸಾಗಿ ಬಿಡುತ್ತದೆ ಎಂದು ಹೇಳಿದರೆ ನಂಬುವಿರಾ? ಇಲ್ಲ ನಂಬಲಸಾಧ್ಯ. ಅಲ್ಲವೇ? ಹೌದು ನಿಜ.

ಆದರೆ ಜೀವನ ಎಂಬುದೊಂದು ರಹಸ್ಯ, ಅದೊಂದು ಅಚ್ಚರಿಯೇ ಸರಿ. ಆದ್ದರಿಂದ ಈ ಜೀವನದಲ್ಲಿ ಏನಾದರೂ ಆಗಬಹುದು, ಹೇಗಾದರೂ ಆಗಬಹುದು, ಅಂದ ಮೇಲೆ ಸುಳ್ಳೂ ಕೆಲವೊಮ್ಮೆ ಸಾವನ್ನು ಗೆಲ್ಲುತ್ತದೆ, ಸುಳ್ಳೂ ಕೆಲವೊಮ್ಮೆ ಬದುಕುಳಿಸುತ್ತದೆ ಎಂದು ಹೇಳಿದರೆ ಅದನ್ನೂ ನಾವು ನಂಬಲೇ ಬೇಕಾಗುತ್ತದೆ. ಇದಕ್ಕೆ ನಾವೆಲ್ಲಾ ಆತ್ಮಸಾಕ್ಷಿಯಾಗಿ ಒಪ್ಪಲೇ ಬೇಕಾದ, ಅನೇಕ ಘಟನಾವಳಿಗಳನ್ನು ನಮ್ಮ ಸುತ್ತಮುತ್ತ ಕೇಳಲ್ಪಟ್ಟಿರುತ್ತೇವೆ.

ಒಮ್ಮೆ ಯಾವನೋ ಒಬ್ಬ ವ್ಯಕ್ತಿ ಏನೋ ವಿಷಕಾರಿ ಜಂತುವನ್ನು ತಿಳಿಯದೇ ಸೇವಿಸಿದ್ದನಂತೆ, ಅದರ ಬಗ್ಗೆ ಆ ವ್ಯಕ್ತಿಗೆ ತಿಳಿಸದೇ ಹೇಗೋ ವಾಂತಿ ಮಾಡಿಸಲಾಯಿತಂತೆ, ಆಗ ಆ ವ್ಯಕ್ತಿ ಬದುಕುಳಿದು ಬಿಟ್ಟನಂತೆ. ಆದರೆ ಹಲವು ವರ್ಷಗಳ ನಂತರ ಅವನಿಗೆ ಈ ಮಾಹಿತಿ ತಿಳಿಸಿದಾಗ, ತಕ್ಷಣ ಅಬ್ಬಾ!! ಹೌದಾ? ‘ತಾನು ವಾಂತಿ ಮಾಡಿದಾಗ ವಿಷಕಾರಿ ಜಂತು ಹೊರಬಂದಿತ್ತಾ’ ಎಂದು ಗಾಬರಿ ಪಟ್ಟು ಸತ್ತೇ ಹೋದನಂತೆ.

ನೋಡಿ! ಅದೆಷ್ಟೋ ವರ್ಷ ಒಂದು ಸುಳ್ಳಿನಿಂದ ಬದುಕುತ್ತಿದ್ದ ಜೀವ, ಸತ್ಯ ಹೊರಬಂದ ಮೇಲೆ ಸತ್ತೇ ಹೋಯಿತಂತೆ. ಹೀಗೆಲ್ಲಾ ಹಲವಾರು ಘಟನೆಗಳನ್ನು ನಾವು ಕಂಡಿದ್ದೇವೆ ಕೇಳಿದ್ದೇವೆ.

ಅದೇ ರೀತಿ ಕರೊನಾ ಎಂಬ ಮಹಾ ಮಾರಿ ನಮ್ಮ ಬದುಕಿಗೆ ಅಂಟಿಕೊಂಡಾಗ ನಾವೆಲ್ಲರೂ ಅದರ ಕರಾಳ ಛಾಯೆಯಿಂದ ಹೊರಬರಲು ಅದೆಷ್ಟೋ ದೊಡ್ಡ ಧೈರ‍್ಯ ಮಾಡಬೇಕಾಯಿತು. ಜೀವಗಳನ್ನು ಉಳಿಸಲು ಅದೆಷ್ಟೋ ಸುಳ್ಳುಗಳನ್ನು ಹೇಳಿಯೂ ಆಗಿತು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಉಳಿವಿಲ್ಲ ಎಂಬ ಮಾತು ಇಲ್ಲಿ ಪಲ್ಲಟವಾಗಿ, ಬದುಕುಳಿಯುವ ಭರವಸೆಗಳ ಮುಂದೆ ನೈತಿಕತೆಗಳನ್ನು ಬದಿಗೊತ್ತಿ ನಾವೆಲ್ಲಾ ಸುಳ್ಳುಗಳನ್ನೇ ಸಹಿಸಿಕೊಂಡು, ಸತ್ಯಗಳನ್ನು ದೂರಮಾಡಿದ ಸಂಸಾರಗಳು ಕಣ್ಣಮುಂದೆಯೇ ನೋಡಿದ್ದೇವೆ. ಅಂದ ಹಾಗೆ ಈ ಕರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಸಿಲುಕಿ ಸುಸ್ತಾದ ಕುಟುಂಬಗಳ ಅವಸ್ಥೆಯಂತೂ ಕೇಳಲಸಾಧ್ಯ. ಅದೆಷ್ಟೋ ಸುಳ್ಳುಗಳನ್ನೇ ಹೇಳಿ ಒಬ್ಬರ ಜೀವವನ್ನೇ ಬದುಕಿಸಿದ್ದೇವೆ.

ಅದರಂತೆ ನನಗೂ ಈ ಸುಳ್ಳಿನ ಮಹಿಮೆ, ಸುಳ್ಳಿನ ತಾಕತ್ತು ಸತ್ಯಕ್ಕಿಂತ ಕೆಲಬಾರಿ ಹೆಚ್ಚಾಗಿದೆಯಲ್ಲಾ ಎಂದು ಅನ್ನಿಸಿಬಿಡುವಂಥ ಅನುಭವಗಳಾಗಿದ್ದು ಈ ಕರೊನಾದ ಕರಾಳ ಛಾಯೇಯಲ್ಲಿಯೇ..

ನಾನೂ ಸ್ವತಃ ಕರೊನಾ ಗೆ ತುತ್ತಾಗಿ ಅದರ ವಿರುದ್ಧ ಹೋರಾಡಿ, ಅದೆಷ್ಟೋ ದಿನಗಳ ನಂತರ ಬದುಕುಳಿದು ಆಸ್ಪತ್ರೆಯಿಂದ ಹೊರಬಂದಾಗ ಎಲ್ಲರೂ ಸಂತಸ ಪಟ್ಟಿದ್ದು ನಿಜವೇ. ಆದರೆ “ನಮ್ಮ ಅಮ್ಮ ಎಲ್ಲಿದ್ದಾರೆ? ಹೇಗಿದ್ದಾರೆ? ಅವರೊಂದಿಗೆ ಒಮ್ಮೆಯಾದರೂ ಮಾತನಾಡಲು ಅನುವು ಮಾಡಿ ಕೊಡಿ” ಎಂದು ಎಲ್ಲರ ಮುಂದೆ ಅಂಗಲಾಚಿಸಿದರೂ ಒಬ್ಬರೂ ಒಮ್ಮೆಯಾದರೂ ಅಮ್ಮನೊಂದಿಗೆ ನನ್ನ ಭೇಟಿಯನ್ನು ಮಾಡಿಸಲೇ ಇಲ್ಲ. ನಾನು ಸತತ ಮೂರು- ಮೂರುವರೆ ತಿಂಗಳು ಆಕ್ಸಿಜನ್ ಮೇಲಿದ್ದು ನಂತರ ಅದ್ಹೇಗೋ ಬಚಾವಾದರೂ, ನನ್ನ ಜೀವದ ಪರಿಸ್ಥಿತಿಯು ಮತ್ತೇ ಯಾವರೀತಿಯ ನೋವು ಅನುಭವಿಸುವಂಥ ಸ್ಥಿತಿಯಲ್ಲಿರಲಿಲ್ಲ, ಸತ್ಯವನ್ನೂ ಅರಗಿಸಿಕೊಳ್ಳುಲಾಗದೇ ಶಕ್ತಿಗುಂದಿದಾಗ ಕೈಹಿಡಿದಿದ್ದು ಸುಳ್ಳೇ ಎಂದೆನಿಸಿದಂತಿತ್ತು.

ಅಮ್ಮ ತೀರಿಹೋಗಿ ಅದೆಷ್ಟೋ ತಿಂಗಳುಗಳಾದರೂ ನನಗೆ ಮಾತ್ರ ಅಮ್ಮ ಇಲ್ಲದ ಸತ್ಯ ತಿಳಿದಿರಲೇ ಇಲ್ಲ. “ಅಮ್ಮ ಯಾವುದೋ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಮೊಬೈಲ್ ಫೋನ್ ಬಳಸಲೂ ನಿರ್ಬಂಧಿಸಲಾಗಿದೆ ಆದ್ದರಿಂದ ಅಮ್ಮನಿಗೆ ಬರೀ ಆಸ್ಪತ್ರೆಗೆ ಹೋಗಿಯೇ ನೋಡಲು ಸಾಧ್ಯ” ಎಂಬ ಮಹಾ ಸುಳ್ಳಿನ ಸುತ್ತಲೂ ನನ್ನ ಬದುಕುಳಿಯುವ ಧೈರ‍್ಯಕ್ಕೆ ಅಮ್ಮನ ಇರುವಿಯ ಸುಳ್ಳೇ ಸಾಥ್ ನೀಡಿದ್ದು ನಿಜವೇ.
ಆಗ ತಾನೇ ಕರೊನಾದಿಂದಾಗಿ ಅಪ್ಪನನ್ನು ಕಳೆದುಕೊಂಡ ಮರುದಿನವೇ ನಾವೆಲ್ಲರೂ ಸಹ ಕರೊನಾ ಪಾಸಿಟಿವ್ ಆಗಿ ಆಸ್ಪತ್ರೆ ಸೇರಬೇಕಾಯಿತು. ಅಮ್ಮನಿಗೆ ನಾನು ನೋಡಿದ್ದು ಮಾತ್ರ ಮೇ ತಿಂಗಳ ಏಳನೇ ತಾರೀಕು. ಅದಾದ ಮೇಲೆ ನಾನೂ ಆಸ್ಪತ್ರೆ ಸೇರಿಕೊಂಡಿದ್ದೆ, ನಂತರ ನಾನು ಆಸ್ಪತ್ರೆಯಿಂದ ಹೊರ ಬರುವಷ್ಟರಲ್ಲಿ ಜೂನ್ ಎಂಟನೇ ತಾರೀಕು. ಈ ಮಧ್ಯೆ ಅಮ್ಮ ತೀರಿಹೋಗಿದ್ದು ಜೂನ್ ನಾಲ್ಕನೇಯ ತಾರೀಕಾಗಿದ್ದರೂ, “ ಅಮ್ಮ ಇನ್ನು ಬದುಕುತ್ತಿದ್ದಾರೆ, ಆಸ್ಪತ್ರೆ ಯಿಂದ ಬಹುಬೇಗ ಹಿಂದಿರುಗುತ್ತಾರೆ, ಆ ಭಗವಂತನಲ್ಲಿ ಪ್ರಾರ್ಥಿಸು” ಎಂದು ಹೇಳುವ ಜನರ ಸುಳ್ಳಿನ ಮಧ್ಯೆಯೇ ನಾನು ಬದುಕಲೂ ಸಾಧ್ಯವಾಗಿತು.

ಅಮ್ಮನಿಲ್ಲದ ಆ ಕಠೋರ ಸತ್ಯ ಸಂಗತಿ ಮಾತ್ರ ನನಗೆ ತಿಳಿಸಿದ್ದು ಸೆಪ್ಟೆಂಬರ್ ಇಪ್ಪತ್ತೇಳಕ್ಕೆ. ಹೀಗೆ ಅಮ್ಮನ ಇರುವಿಕೆಯ ಸುಳ್ಳು ಜೂನ್, ಜುಲೈ, ಆಗಸ್ಟ್ ಸೆಪ್ಟೆಂಬರ್ ವರೆಗೆ‌ ನಾನು ಧೈರ‍್ಯ ತುಂಬಿಕೊಂಡು ಬದುಕುಳಿಯಲು ಸಹಕರಿಸಿತು. ಅದೇನೋ ಆ ನಾಜೂಕು ದೈಹಿಕ, ಮಾನಸಿಕ, ಅನಾರೋಗ್ಯದ ಸ್ಥಿತಿಯಲ್ಲಿ ಅಮ್ಮನಿಲ್ಲದ ಸತ್ಯ ನನ್ನ ಕಿವಿಗೆ ಬಿದ್ದಿದ್ದರೆ ನಾನೂ ಸತ್ತೇ ಹೋಗುತ್ತಿದ್ದೇನೋ ಎಂಬ ಸತ್ಯದೊಂದಿಗೆ ಬದುಕುತ್ತಿದ್ದೇನೆ.

ಅಮ್ಮ ಇದ್ದಾರೆಂಬ ಸುಳ್ಳೇ ನನಗೆ ಈಗ ಜೀವ ನೀಡಲು ಸಹಕರಿಸಿದೆ ಎಂಬಂತೆ ಬದುಕುತ್ತಿದ್ದೇನೆ. ಅಮ್ಮ ಎಲ್ಲರನ್ನಗಲಿ ಇಂದು ವರ್ಷವೇ ಆಗಿದೆ ಆದರೆ ನನಗೆ ಮಾತ್ರ ಅಮ್ಮ, ನನ್ನಿಂದ ಅಗಲಿ ಇನ್ನೂ ವರ್ಷವಾಗಲೇ ಇಲ್ಲ!!

ನೋಡಿ ಹೇಗಿದೆ ಈ ಸುಳ್ಳಿನ ಮಹಿಮೆ, ಸುಳ್ಳೂ ಸಹ ಸಜ್ಜನವೇ, ಸುಳ್ಳೂ ಸತ್ಯವಂತವೇ, ಸುಳ್ಳಿನಲ್ಲೂ ಒಂಥರಾ ಶಕ್ತಿ ಅಡಗಿದೆ ಎಂಬುದು ಇಂಥ ಅನುಭವಗಳಿಂದ ಭಾಸವಾಗುತ್ತದೆ. ಅಲ್ಲವೇ!!??

ಫರ್ಹಾನಾಜ್ ಮಸ್ಕಿ
ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು…

One thought on “ಸುಳ್ಳುಗಳ ಸುತ್ತಲೂ ಬದುಕು ಇರಬಹುದೇ!!!

  1. ತಮ್ಮ ಮಾತು ಅಕ್ಷರಶಃ ಸತ್ಯ ರಿ… ಕಾಲಕ್ಕೆ ತಕ್ಕಂತೆ ಸುಳ್ಳು ಜೀವ ನೀಡುತ್ತದೆ, ಜೀವವನ್ನು ಉಸಿರಾಡುವಂತೆ ಮಾಡುತ್ತದೆ. ಕಷ್ಟದಿಂದ ಪಾರು ಮಾಡುತ್ತದೆ. ಕಹಿಯಾದ ಸತ್ಯ ನುಡಿಯುವುದು ಬೇಡ.. ಎಂದು ಹಿರಿಯರು ಹೇಳಿದ್ದಾರೆ… ಇದರಿಂದ ಸಿಗುವ ಸಂಪತ್ತಿಗಿಂತ ಆಪತ್ತುಗಳೇ ಹೆಚ್ಚು….. ಇದು ಸುಳ್ಳಿನ ಧನಾತ್ಮಕ ಅಂಶವಾದರೆ… ಋಣಾತ್ಮಕ ಅಂಶ ಬಹು ಘೋರವೂ ಆಗಿರುತ್ತದೆ… ಸುಳ್ಳು ಎಂದು ಸಾಬೀತಾದ ದಿನ ಉಸಿರುಗಟ್ಟಿಸುತ್ತದೆ… ಆಶಾ ಗೋಪುರ, ನಂಬಿಕೆಯ ಕನ್ನಡಿ ಚೂರಾಗಿ ನಂಬಿದವರ ಕೈಗೇ ಚುಚ್ತುತ್ತದೆ. ಸತ್ಯ ತಿಳಿದಿದ್ದರೆ ಮೊದಲೇ ಪರಿಹಾರ ಹುಡುಕಬಹುದಿತ್ತು, ಆದರೆ ಈಗ ಕೈ ಮೀರಿ ಹೋಗಿದೆ ಎಂಬ ದರುಳ ಪರಿಸ್ಥಿತಿಗಳು ನಮ್ಮೆದುರಿಗೆ ನಗುತ್ತಾ ನಿಂತಿರುತ್ತವೆ ನೋಡಿ… ಆಗ ಆಗುವ ಮಾನಸಿಕ ವೇದನೆ… ಸಾವಿಗಿಂತಲೂ ಘೋರ… 

    ಸುಳ್ಳಿನ ಮಾಲೆ ಪ್ರರಂಭದಲ್ಲಿ ಘಮಘಮಿಸಿದರೂ ಅದಕ್ಕೆ ಕೊಳೆಯುವ ಗುಣವಿದೆ.. ನಂತರ ಅದರ ದುರ್ವಾಸನೆ… ಗಬ್ಬುನಾಥ.. ಸುಳ್ಳು ಹೇಳಿದವರ ಜೊತೆಗೆ ಅದನ್ನು ನಂಬಿದವರಿಗೆ ಉರುಲಾಗುತ್ತದೆ… ಇದಕ್ಕೆ ಉದಾಹರಣೆಯಾಗಿ ಮಾಧ್ಯಮದಲ್ಲಿ ಇತ್ತೀಚೆಗೆ ಆದ ಘಟನೆ ಸಾಕ್ಷಿಯಾಗಿದೆ. ಇದನ್ನೂ ಮೀರಿ… ಅನೈತಿಕತೆಯಲ್ಲಿ ಯಾವ ಪಾಪಪ್ರಜ್ಞೆ, ಪಶ್ಚಾತ್ತಾಪ ಇಲ್ಲದೇ ಮುಂದುವರೆಯುವವರೂ ಇದಾರೆ… ಇಂತಹ ಕಥೆಗಳು ಶಾಂತಂ ಪಾಪಂ… ಧಾರಾವಾಹಿಯಲ್ಲಿ ಅನೇಕ ಸಲ ತೋರಿಸಿದ್ದಾರೆ.‌‌ “ಪಾಪದ ಕಥೆಗಳು ಆದರೆ ಪಾಠ ಕಲಿಸುವ ಕಥೆಗಳು” ನೋಡಿದವರು ಬದಲಾಡಬೇಕು… ಇಲ್ಲದಿದ್ದರೆ ಬದುಕು ಮೂರಾಬಟ್ಟೆ ಆಗುವುದು ನಿಶ್ಚಿತ. ತಮ್ಮ ಲೇಖನದಂತೆ, ಖಂಡಿತ ಸುಳ್ಳಿನ ಸುತ್ತಲೂ ಬದುಕು ಇದೆ.

    ಮತ್ತೆ ತಮ್ಮ ತಂದೆ, ತಾಯಿಯ ಅಗಲಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ… ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ…. ಒಳ್ಳೆ ಲೇಖನ ರಿ.

Comments are closed.

Don`t copy text!