ಅಹಲ್ಯಾ ಬಾಯಿ ಹೋಳ್ಕರ್
ಪ್ರಪಂಚದಲ್ಲಿ ಲೆಕ್ಕವಿಲ್ಲದಷ್ಟು ಜನರು ಹುಟ್ಟುತ್ತಾರೆ. ಆದರೆ, ಅವರಲ್ಲಿ ನಿಜವಾದ ಮನುಷ್ಯರೆನ್ನಿಸಿಕೊಳ್ಳುವ ಜನರು ಬಹಳ ಕಡಿಮೆ. ಸಾಗರದ ತಟದಲ್ಲಿ ಮಳಲು,ಶಂಖ, ಚಿಪ್ಪುಗಳು ರಾಶಿರಾಶಿಯಾಗಿ ಬಿದ್ದಿರುತ್ತವೆ; ಆದರೆ ಅವುಗಳಲ್ಲಿ ಅಮೂಲ್ಯವಾದ ಮುತ್ತು ಬಹಳ ಕಷ್ಟದಿಂದ ದೊರೆಯುತ್ತದೆ.
ಅಹಲ್ಯಾ ಬಾಯಿಯು ಕೂಡ ಹಿಂದೂ ಧರ್ಮದಲ್ಲಿ ಹುಟ್ಟಿದ ಅಂತಹ ಒಂದು ಅಮೂಲ್ಯ ಮುತ್ತು ಎಂದರೆ ತಪ್ಪಾಗಲಾರದು.
ಭಾರತದ ಅಮೂಲ್ಯ ಮಹಿಳಾ ರತ್ನಗಳ ಪೈಕಿ ಅಹಲ್ಯಾ ಬಾಯಿ ಕೂಡ ಒಬ್ಬರು. ಈಕೆ ಮಹಾನ್ ಶಿವ ಭಕ್ತಳು ಆಗಿದ್ದಳು. ಅಹಲ್ಯಾ ಬಾಯಿ ಜೀವನದಲ್ಲಿ ಬಹಳಷ್ಟು ದುಃಖಗಳನ್ನು ಸಾಕಷ್ಟು ನೋವುಗಳನ್ನು ಉಂಡರು ಕೂಗ್ಗದೆ ಸೆಟೆದು ನಿಂತ ದಿಟ್ಟ ಧೀರ ಮಹಿಳೆ. ಅಹಲ್ಯಾ ಬಾಯಿಯು ಓರ್ವ ಅಸಾಮಾನ್ಯ ಪ್ರತಿಭಾಸಂಪನ್ನ ನಾರಿ.
ಚೌಂಡಿ ಎಂಬ ಒಂದು ಚಿಕ್ಕ ಗ್ರಾಮದಲ್ಲಿ ಜನಿಸಿ , ಒಂದು ವಿಶಾಲ ರಾಜ್ಯದ ರಾಣಿಯಾಗಿ ತನ್ನ ಪರಮ ತೇಜಸ್ವಿ ,ಕರ್ಮಠ ಮತ್ತು ಮಹಾ ಜೀವನದಿಂದ ತನ್ನ ಜೀವನ ಕಾಲದಲ್ಲಿ ತಾಯಿಯಾಗಿ, ಸತಿಯಾಗಿ, ದೇವಿಯಾಗಿ ಪೂಜೆಗೊಂಡು, ಚಿರಂತನ ಅಸಾಧಾರಣ ಕೀರ್ತಿ ಪಡೆದ ಮಹಿಳೆ ಅಹಲ್ಯಾ ಬಾಯಿ.
ದಕ್ಷಿಣ ಭಾರತದ ಔರಂಗಾಬಾದ್ ಜಿಲ್ಲೆಯ ಚೌಂಡಿ ಎಂಬ ಪುಟ್ಟ ಗ್ರಾಮದಲ್ಲಿ ಮಾಣಕೋಜಿ ಶಿಂಧೆ ಮತ್ತು ಸುಶೀಲಾ ದಂಪತಿಗಳ ಮಗಳಾಗಿ 1725 ರಲ್ಲಿ ಜನಿಸಿದಳು. ತಂದೆ ಸಾಮಾನ್ಯ ಗೃಹಸ್ಥ ಗ್ರಾಮದ ಪಟೇಲ. ಆತ ಬಹಳ ಸಾತ್ವಿಕ ಧರ್ಮಪರಾಯಣ ವ್ಯಕ್ತಿ.
ತಾಯಿ ಸುಶೀಲಾ ಮಹಾ ವಿದುಷಿ, ನಮ್ರತೆಯ ಮೂರ್ತಿ, ಧರ್ಮದ ಪ್ರತಿಮೆ ಹಿಂದೂ ಧರ್ಮದ ಕರ್ಮಗಳನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಿದ್ದಳು.
ಮಗಳಿಗೆ ದಂಪತಿಗಳು ಒಳ್ಳೆಯ ಸಂಸ್ಕಾರ, ಧರ್ಮದ ಅರಿವು ಮೂಡಿಸಿದ್ದರು. ಈ ದಂಪತಿಗಳಿಗೆ ಐವರು ಗಂಡು ಮಕ್ಕಳು ಇದ್ದರು. ಅಹಲ್ಯಾ ಬಾಯಿ ಒಬ್ಬಳೇ ಹೆಣ್ಣು ಮಗಳು.
ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ ಹಾಗಾಗಿ ಮನೆಯಲ್ಲಿ ತಂದೆ ಮಗಳಿಗೆ ಓದು ಬರಹ ಕಲಿಸಿದ್ದರು. ಕೆಲವು ಧಾರ್ಮಿಕ ಗ್ರಂಥಗಳನ್ನು ಓದಿಸಿದ್ದರು.
ಒಂದು ದಿನ ಗೋಧುಳಿ ಸಮಯದಲ್ಲಿ ಶಿವನ ಗುಡಿಯಲ್ಲಿ ಆರತಿಯಾಗುತ್ತಲಿತ್ತು. ಯಾತ್ರಿಕರು ನೆರದಿದ್ದರು . ಆ ಮಂದಿರದಲ್ಲಿ ಹಾಜರಿದ್ದ ಯಾತ್ರಿಕರಲ್ಲಿ ಸುಬೇದಾರ ಮಲ್ಹಾರರಾವ್ ಹೋಳ್ಕರ್ ಮತ್ತು ಅವರ ಸಹಾಯಕರು ಇದ್ದರು.
ಪೂಜೆಯ ಸಾಮಾಗ್ರಿಗಳು ಇರುವ ತಟ್ಟೆಯೊಂದಿಗೆ ಎಂಟು ವರ್ಷದ ಬಾಲಕಿಯಾದ ಅಹಲ್ಯಾ ಬಾಯಿ ಅಲ್ಲಿಗೆ ಬಂದಳು ಆಕೆಯ ಸಾತ್ವಿಕ ತೇಜಸ್ಸು ಎಲ್ಲರ ಕಣ್ಣ ಮನ ಸೆಳೆಯಿತು ಅವಳನ್ನು ಮಂತ್ರಮುಗ್ಧರಾಗಿ ನೋಡುತ್ತಾ ನಿಂತರು.
ಭಾರತ ಇತಿಹಾಸದ ಸುವರ್ಣಮಯ ಕ್ಷಣಗಳು ಆಗಿದ್ದವು. ಬಾಲಕಿ ಅಷ್ಟೊಂದು ಸುಂದರಿಯೂ ಆಗಿರಲಿಲ್ಲ ಮತ್ತು ಆಕರ್ಷಣೆವುಳ್ಳವಳೂ ಆಗಿರಲಿಲ್ಲ ಬಣ್ಣವು ಸಾದುಗಪ್ಪು ಇತ್ತು. ಆದರೆ ಅವಳ ಮುಖದಲ್ಲಿ ಅಪೂರ್ವ ತೇಜವಿತ್ತು.ಅವಳ ಕಣ್ಣುಗಳಲ್ಲಿ ಅನಿರ್ವಚನೀಯ ಶಾಂತಿಯಿತ್ತು . ಕೇವಲ ಎಂಟು ವರ್ಷಗಳ ವಯಸ್ಸಿನಲ್ಲಿ ಪ್ರೌಢಿಮೆ, ವ್ಯವಹಾರದಲ್ಲಿ ಶಾಲೀನತೆ ಗಾಂಭೀರ್ಯ ಮತ್ತು ಮರ್ಯಾದೆ ಇತ್ತು.
ಮಲ್ಹಾರ ರಾವ್ ಅವರು ದೇಶದಲ್ಲಿ ಬಹಳ ಸುತ್ತಾಡಿದ್ದರು.ಆದರೆ ಇಂಥ ಉಜ್ವಲ ಭವಿತವ್ಯದ ಬಾಲಕಿ ಅವರಿಗೆ ಕಂಡಿದ್ದಿಲ್ಲ.
ಮಲ್ಹಾರ ರಾವ್ ಅವರು ತಮ್ಮ ಮಗನಾದ ಖಂಡೇರಾವ್‍ನಿಗೆ ಈಕೆಯನ್ನು ತಂದುಕೊಳ್ಳುವ ನಿರ್ಧಾರ ಆ ಕ್ಷಣದಲ್ಲಿ ಮಾಡಿದರು .
ಮಗ ಖಂಡೇರಾವ್ ಅವರ ಒಬ್ಬನೇ ಮಗ ತಂದೆಯಂತೆ ಪರಾಕ್ರಮಿಯೂ, ತೇಜಸ್ವಿಯು ಆಗಿರಲಿಲ್ಲ. ಅವನು ಬಹಳ ಹಠಮಾರಿಯೂ, ಉದ್ದಂಡನೂ, ದುರ್ಗುಣಿಯೂ ಮದ್ಯಪಾನ ಪ್ರೀಯನು ಆಗಿದ್ದ ಮಲ್ಹಾರ ರಾವ್ ನಿಗೆ ಮಗನ ಚಿಂತೆ ಬಹಳವಾಗಿ ಬಾಧಿಸುತ್ತಿತ್ತು.
ಅಹಲ್ಯಾ ಬಾಯಿಯನ್ನು ಕಂಡ ಕೂಡಲೇ ಮಲ್ಹಾರ ರಾವ್ ನಿಗೆ ಅನಿಸಿದ್ದು ಮಗ ಖಂಡೇರಾವ್ ನ ಕೆಟ್ಟ ಹಾದಿಯಿಂದ ಒಳ್ಳೆಯ ಹಾದಿಗೆ ತಂದು ರಾಜ್ಯದ ಶಾಸನ ಸೂತ್ರಗಳನ್ನು ಹಿಡಿದು ರಾಜ್ಯಭಾರ ನಡೆಸಬಲ್ಲ ಸುಯೋಗ ಕನ್ಯೆ ಎಂದರೆ ಅದು ಅಹಲ್ಯಾ ಬಾಯಿ ಮಾತ್ರ.
ಎಂಟು ವರ್ಷದ ಅಹಲ್ಯಾ ಬಾಯಿಯ ವಿವಾಹ ಹನ್ನೆರಡು ವರ್ಷದ ಖಂಡೇರಾವ್ ಜೊತೆ ನಡೆಯಿತು.
ಅಹಲ್ಯಾ ಬಾಯಿ ಹೋಳ್ಕರ್ ವಂಶದ ಹೊಸ್ತಿಲದ ಮೇಲೆ ಚರಣಗಳನ್ನು ಇಟ್ಟ ದಿನದಿಂದಲೇ ಹೋಳ್ಕರ್ ವೈಭವ ಮತ್ತು ಶಕ್ತಿ ಉತ್ತರೋತ್ತರ ಹೆಚ್ಚಾಗುತ್ತಾ ನಡೆಯಿತು.
ಮಾಲ್ಹಾರರಾವ್ ಗೆ ಮೂರು ಜನ ಪತ್ನಿಯರು ಅವರ ಮೆಚ್ಚುಗೆ ಗಳಿಸಿದಳು ಅಹಲ್ಯಾ.
ಮುಂದೆ ಖಂಡೇರಾವ್‌ನ ದುರ್ಗುಣಗಳ ಬಿಡಿಸಿ ಒಬ್ಬ ಉತ್ತಮ ವ್ಯಕ್ತಿಯನ್ನಾಗಿಸಿದಳು. ರಾಜ್ಯಕಾರ್ಯದಲ್ಲಿ ಆಸಕ್ತಿ ಮೂಡಿಸಿದಳು.
ಮಲ್ಹಾರ ರಾವ್ ಸೊಸೆ ಅಹಲ್ಯಾ ಬಾಯಿಗೆ ರಾಜ್ಯ ನೀತಿ, ಯುದ್ಧ ನೀತಿ ಶಿಕ್ಷಣ, ಕೊಡಿಸಿದನು ಮತ್ತು ರಾಜ್ಯಭಾರದ ಹೊಣೆ ವಹಿಸಿದನು.
ಅಹಲ್ಯಾ ಬಾಯಿಗೆ ಇಬ್ಬರು ಮಕ್ಕಳು ಮಾಲೇರಾವ ಮತ್ತು ಮುಕ್ತಬಾಯಿ .ಅಹಲ್ಯಾ ಬಾಯಿಯ ಜೀವನದಲ್ಲಿ ಸುಖ ಸಂತೋಷ ತುಂಬಿದ್ದವು . ಆದರೆ ಈ ಸಂತೋಷವನ್ನು ಕೆಲಕಾಲ ಮಾತ್ರವೇ, ಮುಂದೆ 1754 ರಲ್ಲಿ ನಡೆದ ಯುದ್ಧದಲ್ಲಿ ಖಂಡೇರಾವ್ ಮೃತಪಟ್ಟನು. ದುಃಖ ಮುಗಿಲು ಮುಟ್ಟಿತ್ತು ಅಹಲ್ಯಾ ಬಾಯಿ ಹೃದಯಬಿರಿವ ವಿಳಾಪವನ್ನು ಕಂಡು ಮಲ್ಹಾರ ರಾವ್ ಪುತ್ರ ಶೋಕವನ್ನು ಮರೆತು ಅಹಲ್ಯಾ ಬಾಯಿಯನ್ನು ಸಮಾಧಾನಗೊಳಿಸಿದ.
ಅಹಲ್ಯಾ ಬಾಯಿಗೆ ಮಲ್ಹಾರ ರಾವ್ ರಾಜ್ಯದ ಕುರಿತು ಪ್ರತಿಯೊಂದು ತಿಳಿಸಿಕೊಟ್ಟಿದ್ದ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಿದ್ದ .
ಮುಂದೆ ಮಲ್ಹಾರ ರಾವ್ ಮರಣ ಹೊಂದಿದ ಅಹಲ್ಯಾ ಬಾಯಿಯ ಮಗ ಕೂಡ ಮರಣ ಹೊಂದಿದ ಅಹಲ್ಯಾ ಬಾಯಿ ಜೀವನದಲ್ಲಿ ಬಹಳಷ್ಟು ಕಷ್ಟದ ದಿನಗಳು ಎದುರಾದವು .
ಈ ದುಃಖದಿಂದ ಇಂದೂರಲ್ಲಿರುವುದು ಭಾರವೆನಿಸತೊಡಗಿತು. ಮಾನಸಿಕ ನೆಮ್ಮದಿಗಾಗಿ ಹಿಮಾಲಯಕ್ಕೆ ಹೋಗಬಯಸಿದಳು ಆದರೆ ವಿವೇಕ ಕರ್ತವ್ಯ ನಿಷ್ಠೆ ತಡೆಯಿತು. ಆದರೂ ಇಂದೂರಿನಲ್ಲಿ ಇರುವುದು ಬೇಡವಾಗಿತ್ತು. ಆದ್ದರಿಂದ ರಾಜಧಾನಿಯ ಸಲುವಾಗಿ ಯೋಗ್ಯ ಸ್ಥಳವನ್ನು ಹುಡುಕಲು ರಾಜ್ಯದಲ್ಲಿ ಪ್ರವಾಸ ಕೈಗೊಂಡಳು. ನರ್ಮದಾ ನದಿಯ ತೀರದಲ್ಲಿ ರಾಜಧಾನಿ ಕಟ್ಟುವುದು ಸೂಕ್ತವೆನಿಸಿ ಮಹೇಶ್ವರವನ್ನು 1766 ರಲ್ಲಿ ರಾಜಧಾನಿಯಾಗಿ ಮಾಡಿಕೊಂಡಳು.
ಮಗಳು ಮುಕ್ತಬಾಯಿಯ ಒಬ್ಬನೇ ಮಗ ಖಾಯಿಲೆ ಬಂದು ತೀರಿಹೋದ ಮತ್ತು ಮುಕ್ತಬಾಯಿಯ ಗಂಡನು ತೀರಿಕೊಂಡ . ಮಗಳು ಗಂಡನ ಜೊತೆ ಸತಿಸಹಗಮನ ಮಾಡಲು ನಿರ್ಧರಿಸಿದಳು. ಅಹಲ್ಯಾ ಬಾಯಿಗೆ ತಡೆಯಲಾಗದ ದುಃಖ. ಮಗಳಿಗೆ ತಿಳಿ ಹೇಳುವ ಯತ್ನ ವಿಫಲವಾಯಿತು. ನರ್ಮದಾ ನದಿಯ ದಡದಲ್ಲಿ ಅಳಿಯ ಮಗಳ ಚಿತೆ ಹೊತ್ತಿ ಉರಿಯುತ್ತಿರುವದ ಕಂಡು ಅಹಲ್ಯಾ ಬಾಯಿ ಕುಸಿದು ಬಿದ್ದಳು.
ಅಹಲ್ಯಾ ಬಾಯಿಯ ಜೀವನ ಕಲ್ಲು ಮುಳ್ಳಿನ ಹಾದಿಯಾಯ್ತು. ಸುತ್ತಲೂ ಶತೃಗಳ ಕಾಟ ಎಲ್ಲವನ್ನೂ. ಸಂಭಾಳಿಸಿಕೊಂಡು ಧೃತಿಗೆಡದೆ ಸಾಗಿದಳು.
ಅನೇಕ ಧಾರ್ಮಿಕ ಮಂದಿರಗಳು ನಿರ್ಮಿಸಿದಳು. ಮೊಘಲ್‌ರ ದಾಳಿಯಿಂದ ನಾಶಗೊಂಡ ಲೆಕ್ಕವಿಲ್ಲದಷ್ಟು ಹಿಂದೂ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದಳು ಆಗಿನ ಕಾಲದಲ್ಲಿ ಕೋಟಿಗಟ್ಟಲೆ ಹಣ ವ್ಯಯಮಾಡಿ ಹಿಂದೂ ಧರ್ಮದ ಮಂದಿರಗಳನ್ನು ಉಳಿಸಿದಳು.
ಭಾರತದಲ್ಲಿ ತೀರ್ಥಸ್ಥಳಗಳು ಅಗಣಿತವಿರುವಂತೆ ಅಹಲ್ಯಾ ಬಾಯಿಯು ನಿರ್ಮಿಸಿದ ಸ್ಥಳಗಳು ಅಗಣಿತವಿಗಿವೆ.
ಉತ್ತರದಲ್ಲಿ ಹಿಮಾಲಯದ ಉತ್ತುಂಗ ಶಿಖರಗಳಿಂದ ಮೊದಲುಗೊಂಡು ದಕ್ಷಿಣದ ತುದಿಯಾದ ಕನ್ಯಾಕುಮಾರಿಯವರೆಗೆ ಪ್ರಯಾಣ ಮಾಡುವ ಯಾತ್ರಿಕರು ಪ್ರತಿಯೊಂದು ಕ್ಷೇತ್ರದಲ್ಲೂ ಅಹಲ್ಯಾ ಬಾಯಿಯ ಒಂದಲ್ಲ ಒಂದು ನಿರ್ಮಾಣ ಕಾರ್ಯವನ್ನು ನೋಡುತ್ತಾರೆ.
ಮಂದಿರ,ಧರ್ಮಶಾಲೆ, ಸ್ನಾನ ಘಟ್ಟ, ಅನ್ನಛತ್ರ, ಗೂಡಾಣು ದೊರೆಯದೆ ಇರದು ಆಕೆ ಶಿವನ ಭಕ್ತಳಾಗಿದ್ದ ಕಾರಣ ದೇಶದ ತುಂಬೆಲ್ಲ ಹಬ್ಬಿದ ದ್ವಾದಶ ಜ್ಯೋತಿರ್ಲಿಂಗ ಗಳ ನಿರ್ಮಾಣ ಮಾಡಿದ್ದಾಳೆ.
ಕಾಶಿಯಲ್ಲಿನ ವಿಶ್ವನಾಥ ಮಂದಿರವನ್ನು ಪುನರ್ ನಿರ್ಮಾಣ ಮಾಡಿದ ಕೀರ್ತಿ ಅಹಲ್ಯಾ ಬಾಯಿ ಹೋಳ್ಕರ್ ದು ಈ ದಿವ್ಯ ಚೇತನ ಅದೇಷ್ಟೋ ದೇವಾಲಯ ಪುನರ್ ನಿರ್ಮಾಣ ಮಾಡದೆ ಹೋಗಿದ್ದರೆ ನಮಗೆ ನಮ್ಮ ಕಾಶಿಯಂತ ಹಿಂದೂಗಳ ಪುಣ್ಯ ಕ್ಷೇತ್ರ ಇರುವುದೇ ತಿಳಿಯುತ್ತಿರಲಿಲ್ಲ.
ಪ್ರಜೆಗಳಿಗೆ ಆಕೆ ಬರೀ ರಾಣಿಯಾಗಿರಲಿಲ್ಲ ಮಾತೃ ಹೃದಯದ ತಾಯಿಯಾಗಿ ದ್ದಳು. ‘ಯಥಾ ರಾಜಾ ತಥಾ ಪ್ರಜಾ’ ಎಂಬ ಗಾದೆಗೆ ಅನುಸಾರವಾಗಿ ಪ್ರಜೆಗಳೂ ಪರಮ ಧಾರ್ಮಿಕರಾಗಿದ್ದರು. ದೇಶದ ಬೇರೆ ಬೇರೆ ಭಾಗಗಳಲ್ಲಿ ಬರಗಾಲ ಬಂದರೂ ಅಹಲ್ಯಾ ಬಾಯಿಯ ರಾಜ್ಯದಲ್ಲಿ ಒಮ್ಮೆಯೂ ಬರಲಿಲ್ಲ.. ಆಕೆಯ ಕಾಲದಲ್ಲಿ ದೈವಿ ದುರ್ಘಟನೆ ಆಗಿರಲಿಲ್ಲ.
ಆಕೆಯ ಕಾರ್ಯದಿಂದ ಜನತೆಯ ಹೃದಯ ಪರಿವರ್ತನೆ ಆಯಿತು.ಸುಲಿಗೆಗಾರರು, ಕಳ್ಳರು, ಕೊಲೆಗಡುಕರು ಮುಂತಾದ ದುಷ್ಟರ ಮೇಲೂ ಆಕೆಯ ಜೀವನದ ಪರಿಣಾಮವಾಗಿತ್ತು, ಕೆಟ್ಟ ದಾರಿಯನ್ನು ಬಿಟ್ಟು ಒಳ್ಳೆಯ ನಾಗರಿಕರಾಗಿದ್ದರು.
“ಈ ಲೋಕೋತ್ತರ ಮಹಿಳೆಯು ತನ್ನ ಅನೇಕ ಸದ್ಗುಣಗಳಿಂದಾಗಿ ಮಹಾ ರಾಷ್ಟ್ರಕ್ಕೆ ಅಷ್ಟೇ ಅಲ್ಲ ಇಡೀ ಮಾನವ ಜಾತಿಗೆ ಭೂಷಣವಾಗಿದ್ದಾಳೆ.”
ಅಹಲ್ಯಾ ಬಾಯಿ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಸ್ತ್ರೀ ಕುಲದ ಹೆಮ್ಮೆ.
–ಶ್ರೀ ಮತಿ ಕವಿತಾ ಹಿರೇಮಠ
ಕವಿತಾಳ