ಲಿಂಗವನರಿತು

ಲಿಂಗವನರಿತು

ಲಿಂಗವನರಿತು ಅಂಗ ಲಯವಾಗಬೇಕು.
ಅಂಕುರ ತೋರಿ ಬೀಜ good ನಷ್ಟವಾದಂತೆ,
ಸ್ವಯಂಭು ತೋರಿ ಪ್ರತಿಷ್ಠೆ ನಷ್ಟವಾದಂತೆ,ಅರ್ಕೇಶ್ವರ ಲಿಂಗವ ಅರಿದ ಗೊತ್ತಿನ ಒಲುಮೆ

-ಮಧುವಯ್ಯ

ಹನ್ನೆರಡನೆಯ ಶತಮಾನದ ಸಾಮಾಜಿಕ ಧಾರ್ಮಿಕ ಕ್ರಾಂತಿ ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಚರಿತ್ರೆ,
ಬಸವಣ್ಣನವರು ಕೈಗೊಂಡ ಸಮಾನತೆಯ ಆಂದೋಲನ ಅಂದಿನ ಅಸ್ಪ್ರಶ್ಯ ಮತ್ತು ಶ್ರೇಷ್ಟ ವರ್ಗ ವರ್ಣದವರ ರಕ್ತ ಸಂಬಂಧ ಇಂದಿಗೂ ಕಲ್ಪನೆಗೆ ಮೀರಿದ ಕ್ರಾಂತಿ.
ಅಂತಹ ದಿವ್ಯ ಕ್ರಾಂತಿಯಲ್ಲಿ ಹುತಾತ್ಮರಾದ ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣ ಮಂತ್ರಿ ಮಧುವರಸ ಅಥವಾ ಮಧುವಯ್ಯ.
ಇದು ಮಧುವಯ್ಯನವರ ವಚನ.
ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಶಾಂತರಸ ಚಂದಿಮರಸ ಸಕಳೆಸ ಮಾದರಸ ಅಕ್ಕ ನಾಗಮ್ಮ ಗಂಗಾOಬಿಕೆ ಶಿವಲೆಂಕ ಮಂಚ ಅರಸರು ಕೊಂಡಿ ಮಂಚಣ್ಣ ಮುಂತಾದ ಇನ್ನೂ ಅನೇಕರು ಬ್ರಾಹ್ಮಣ ಸಮುದಾಯದ ಹಿನ್ನೆಲೆಯಿಂದ ಬಂದ ಪ್ರಗತಿಪರ ವಚನಕಾರರು ಇದ್ದರು.
ಆದರೆ ಬ್ರಾಹ್ಮಣ ಹಿರಿಯ ಮಂತ್ರಿ ಮಧುವಯ್ಯ ಬಸವಣ್ಣನವರ ಕಡು ವಿರೋಧಿ. ಹರಳಯ್ಯನವರು ಬಸವಣ್ಣನವರಿಗೆ ವಿಶೇಷವಾಗಿ ಮಾಡಿದ ಚಮ್ಮಾವುಗೆ ತಾನು ದರ್ಪದಿಂದ ತೊಟ್ಟು ನಂತರ ಅನೇಕ ಪೀಡೆ ರೋಗಕ್ಕೆ ತುತ್ತಾಗಿ
ಪಶ್ಚಾತಾಪ ಭಾವದಿಂದ ಬಸವಣ್ಣನವರನ್ನು ಭೇಟಿ ಆಗಲು. ಅವರು ಹರಳಯ್ಯನವರು ಚರ್ಮ ಹದ ಮಾಡಿದ ನೀರನ್ನು ಮಧುವಯ್ಯನವರು ಸ್ನಾನಕ್ಕೆ ಬಳಸಲು ಸೂಚಿಸಿ ಮೈಯಲ್ಲಿನ ಬೆಂಕಿ ಉರಿತದ ನೋವಿಗೆ ಉಪಶಮನ ಆರೈಕೆ ಹೊಂದಿ ನಿರಾಳವಾದರು ಮಧುವರಸರು.
ಮುಂದೆ ಲಿಂಗಾಯತ ಧರ್ಮ ಸ್ವೀಕರಿಸಿ ತಮ್ಮ ಮಗಳಾದ ಲಾವನಣ್ಯಳನ್ನು ಹರಳಯ್ಯನವರ ಮಗ ಶೀಲವಂತನಿಗೆ ಕೊಟ್ಟು ಮದುವೆ ಮಾಡಿದರು.

ಲಿಂಗವನರಿತು ಅಂಗ ಲಯವಾಗಬೇಕು.

ಲಿಂಗ ಒಂದು ವಸ್ತು ಉಪಾದಿಕ ಸಾಧನ ಪೂಜೆಗೆ ಬೇಕಾದ ಜಡ ಎಂಬ ತಪ್ಪು ಕಲ್ಪನೆಗಳನ್ನು ದೂರ ಮಾಡಿ ಲಿಂಗ ಸಮಷ್ಟಿ ಲಿಂಗ ಜಂಗಮ ಚೇತನ ಎಂಬ ಲಿಂಗದ ಮೂಲ ಆಶಯ ಜನರಿಗೆ ಅರ್ಥೈಸಿದ ಬಸವಣ್ಣನವರಂತೆ ಮಧುವವರಸ ಶರಣರ ಲಿಂಗ ಚಿಂತನೆ ಗಮನ ಸೆಳೆದಿದೆ.
ಸಮಷ್ಟಿ ಎಂಬ ಲಿಂಗವನ್ನು ಸಂಪೂರ್ಣವಾಗಿ ಅರಿತು ಭಕ್ತ ತನ್ನ ಅಂಗ ಭಾವ ಕಳೆದು ಕೊಳ್ಳಬೇಕು ಲಿಂಗದೊಳಗೆ ಅಂಗ ಕೂಡಿಕೊಳ್ಳಬೇಕು.
ಅಂಗದ ಮೇಲೆ ಲಿಂಗದೊಳಗಿನ ಅಂಗ ಎಂತಾಗಬೇಕು.
ಇಡಿ ಜಗತ್ತೆ ಲಿಂಗಮಯ ಹೀಗಾಗಿ ಅಂಗ ಭಾವ ಲಯವಾಗ ಬೇಕು. ಇದು ಅವರ ಆಶಯ.

ಅಂಕುರ ತೋರಿ ಬೀಜ ನಷ್ಟವಾದಂತೆ,

ಭೂಮಿಯಲ್ಲಿ ಬೀಜವನ್ನು ಹಾಕಿದಾಗ ನೀರು ಗಾಳಿ ಬೆಳಕು
ಭೂಮಿಯ ಶಕ್ತಿಯಿಂದ ಅಲ್ಲಿ ಅಂಕುರ ಮೂಡುತ್ತದೆ.
ಅಂಕುರ ಅಥವಾ ಮೊಳಕೆ ಚಿಗುರಿದಲ್ಲಿ ಬೀಜ ತನ್ನ ಅಸ್ತಿತ್ವ ಕಳೆದುಕೊಂಡಂತೆ. ಭಕ್ತ ತನ್ನ ಅಂಗವು ಈ ಪಂಚ ಮಹಾಭೂತಗಳಿಂದ ಲಿಂಗ ಜ್ಞಾನ ಮೊಳಕೆಯೊಡೆದ ಮೇಲೆ
ತನ್ನ ಅಂಗ ಭಾವ ನಷ್ಟವಾಗಬೇಕು.ಅಂಕುರ ಇದು ಜೀವದ ಪ್ರಗತಿಯ ಸಂಕೇತ.
ಚಲನಶೀಲ ಮೊಳಕೆ ಘನ ಬೀಜದ ಆಹಾರಕ್ಕೆ ಮಾತ್ರ ಮೀಸಲಾಗಿದ್ದು ಮೊಳಕೆ ಒಡೆದರೆ ಬೀಜವು ತನ್ನ ಸಂಪೂರ್ಣ ಅಸ್ತಿತ್ವ ಕಳೆದು ಕೊಳ್ಳುತ್ತದೆ.

ಸ್ವಯಂಭು ತೋರಿ ಪ್ರತಿಷ್ಠೆ ನಷ್ಟವಾದಂತೆ
ಸ್ವಯಂಭು ತೋರಿ ಅಂದರೆ ಜೀವ ಜಾಲ ಜೈವಿಕ ವಿಕಾಸದಲ್ಲಿ
ವ್ಯಕ್ತಿಯ ಬೌದ್ಧಿಕ ಭೌತಿಕ ಬೆಳವಣಿಗೆ ಆದಾಗ ವ್ಯಕ್ತಿಯ ಅಹಂ ಭಾವ ವ್ಯಕ್ತಿ ಪ್ರತಿಷ್ಟೆ ನಷ್ಟವಾಗುತ್ತದೆ.
ಬೌದ್ಧಿಕ ವೈಚಾರಿಕ ನೆಲೆಯಲ್ಲಿ ವ್ಯಕ್ತಿಯ ವಿಕಾಸ ಆಗಬೇಕು. ತನ್ನ ಕುಲ ಮದ ಹಣ ಮದ ಮುಂತಾದ ಅಷ್ಟಮದಗಳು ಸಂಪೂರ್ಣ ನಷ್ಟವಾಗಬೇಕು. ಇದು ಮಧುವರಸರ ಆಶಯ.

ಅರ್ಕೇಶ್ವರ ಲಿಂಗವ ಅರಿದ ಗೊತ್ತಿನ ಒಲುಮೆ

ಅರ್ಕೇಶ್ವರ ಲಿಂಗ. ಇಲ್ಲಿ ಅರ್ಕೇಶ್ವರ ಎಂಬ ಜ್ಞಾನ ಅರಿವು ಸಮಷ್ಟಿಯ ಸಂಕೇತ ಸಮಷ್ಟಿ ಭಾವ ಅಭಿವೃದ್ಧಿ ಹೊಂದುತ್ತಿರುವ ಅರಿವಿನ ಆಂದೋಲನ. ಇಂತಹ ಹಂತದಲ್ಲಿ ವ್ಯಕ್ತಿಯ ಭಕ್ತನ ವ್ಯಕ್ತಿಗತ ಹಿತ ನಷ್ಟವಾಗಬೇಕು. ಇಂತಹ ಜ್ಞಾನವು ಸಮತೆ ಕರುಣೆ ಪ್ರೀತಿ ಮತ್ತು ಗೊತ್ತಿರುವ ಸೈದ್ದಾಂತಿಕ ಒಲವು ಅದುವೆ ಲಿಂಗ ತತ್ವ. ಇಲ್ಲಿ ಭಕ್ತ ತಾನೆ ಶಿವನಾಗುವ ಒಲವು ಪ್ರೀತಿ ಅಂಗ ಲಿಂಗ ಸಾಮರಸ್ಯದಿಂದ ಮಾತ್ರ ಸಾಧ್ಯ ಎನ್ನುತ್ತಾರೆ ಮಧುವರಸರು.
ಸಮಷ್ಟಿ ಲಿಂಗ ಸಾಮರಸ್ಯದಿಂದ ತಾನು ಜಗದೊಳಗಿನ ಅವಿಭಾಜ್ಯ ಅಂಗ. ತನ್ನಿಂದಲೇ ಜಗತ್ತು ಅಥವಾ ಸಮಾಜ ಎನ್ನುವವರಿಗೆ
ಸಮಾಜದೊಳಗೆ ನೀನು ಒಬ್ಬ ಎಂಬ ಮಾರ್ಮಿಕ ಆಶಯ ಈ ವಚನ ಹೊಂದಿದೆ.


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!