ಆರೋಗ್ಯ ಸಹಾಯಕರೆಂಬ ಹೊರಳು ಹಾದಿ ಪಯಣಿಗರು
ಆರೋಗ್ಯ ಇಲಾಖೆಯ ಆಧಾರ ಸ್ಥಂಭಗಳೆಂದರೆ ಅಕ್ಷರಶಃ ಆರೋಗ್ಯ ಸಹಾಯಕರು ಎಂಬುದೊಂದು ಕಾಲವಿತ್ತು. ಆದರೆ ವರ್ತಮಾನದ ವ್ಯಾಖ್ಯಾನ ವಿಭಿನ್ನವಾಗಿದೆ. ಶ್ರೀಸಾಮಾನ್ಯರಿಂದ ಹಿಡಿದು ಹೈ ಫೈ ಚಿಂತನ ಚಿತ್ತಗಳಿಗೆ ಆರೋಗ್ಯ ಇಲಾಖೆ ಎಂದರೆ ಆಶಾ ಕಾರ್ಯಕರ್ತೆಯರು ಎಂಬ ಜನಪ್ರಿಯ ನುಡಿಗಟ್ಟುಗಳ ಸರಳ ಲೆಕ್ಕಾಚಾರ. ಮತ್ತು ಅದರದೇ ಬಾಹುಳ್ಯ. ಪ್ರಭುತ್ವ ಮತ್ತು ಇಲಾಖೆಗಳ ಕಣ್ಣಲ್ಲಿ ಉಲ್ಲೇಖಾರ್ಹ ಇನ್ನೊಂದು ವರ್ಷನ್ ಹೀಗಿದೆ: ಆರೋಗ್ಯ ಇಲಾಖೆಯೆಂದರೆ ಡಾಕ್ಟರ್, ನರ್ಸ್, ಕಂಪೌಂಡರ್ ಎಂಬ ಚರ್ವಿತ ಚರ್ವಣ ಹಳತು ತಿಳಿವಳಿಕೆ. ಹೀಗಾಗಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಸಹಾಯಕರ ಅಸ್ಮಿತೆ ಮತ್ತು ಅಗತ್ಯತೆ ಯಾವ ಹಂತದಲ್ಲಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.
ಕಳೆದ ವರ್ಷ೨೦೨೧ ರ ಮೇ ೨೭ ರಂದು ಸರಕಾರ ಆರೋಗ್ಯ ಸಹಾಯಕರ ಪದನಾಮಗಳನ್ನು ಬದಲಾವಣೆ ಮಾಡಿ ಹೊಸದೊಂದು ಬಿರುಗಾಳಿಯನ್ನೇ ಸೃಷ್ಟಿಸಿತು. ವಿಶೇಷವಾಗಿ ಬಹುಸಂಖ್ಯಾತ ಮಹಿಳಾ ಆರೋಗ್ಯ ಸಹಾಯಕಿಯರನ್ನು ಒಂದು ಬಗೆಯ ಅಸಹಾಯಕ ಸ್ಥಿತಿಯಲ್ಲಿ ತಂದು ನಿಲ್ಲಿಸಿತು. ಪದನಾಮ ಬದಲಾವಣೆ ಮೂಲಕ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರ ಅಖಂಡ ಐಕ್ಯತೆಯನ್ನು ಸರಕಾರ ಒಡೆದು ಹಾಕಿತು. ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ ಅದು ಸಂಘಟನೆಗಳ ಸ್ವಯಂಕೃತ ಅಪರಾಧ. ನಾವು ನಮ್ಮ ಮಹಿಳೆಯರ ಪದನಾಮ ಬದಲಾವಣೆಗೆ ವಿನಂತಿ ಮಾಡಿಕೊಂಡಿರಲಿಲ್ಲ. ಸರಕಾರ ನೀಡಿರುವ ಪಿ.ಎಚ್.ಸಿ.ಒ. ಎಂಬ ಪದನಾಮ ನಮಗೆ ಹೇರಿಕೆಯಾಗಿದೆ. ಹಾಗೆಂದು ಮಹಿಳಾ ಸಂಘಟನೆಯೊಂದು ತನ್ನ ಅಸಮ್ಮತಿಯನ್ನು ತೋರಿ ತಮ್ಮ ಪದನಾಮ “ಪಬ್ಲಿಕ್ ಹೆಲ್ತ್ ಆಫಿಸರ್” ಎಂದು ಮರು ಬದಲಾವಣೆ ಮಾಡಬೇಕೆಂದು ಖುದ್ದಾಗಿ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ, ಸಂಬಂಧಿಸಿದ ಮತ್ತಿತರರಿಗೆ ಮನವಿ ಸಲ್ಲಿಸಿತು.
ಅದೇನೇ ಇರಲಿ ಗ್ರಾಮೀಣ ಸಮುದಾಯದ ಮನೆ ಬಾಗಿಲುಗಳ ಆರೋಗ್ಯ ಸೇವಾಮೂಲವೇ ಆಗಿದ್ದ ಆರೋಗ್ಯ ಉಪಕೇಂದ್ರವೆಂಬ ಜನಾರೋಗ್ಯ ಸೇವಾರಥ ಕುಂಠಿತಗೊಂಡಿತು. ಆರೋಗ್ಯ ಸಹಾಯಕರೆಂಬ ಹಳ್ಳಿಗಳ ಆರೋಗ್ಯ ಉಪಕೇಂದ್ರ ರಥದ ಎರಡು ಚಕ್ರಗಳನ್ನು ಬೇರ್ಪಡಿಸಿತು. ಅದಕ್ಕೆ ಮುನ್ನವೇ ಕೇಂದ್ರ ಸರಕಾರ ಪ್ರಾಯೋಗಿಕವಾಗಿ ಎಂ. ಎಲ್. ಎಚ್. ಪಿ. ಗಳನ್ನು ಜನಾರೋಗ್ಯ ರಥದೊಳಗೆ ಕೂಡಿಸಿ ಬಿಟ್ಟಿತ್ತು. ಗ್ರಾಮೀಣ ಜನಾರೋಗ್ಯ ಸಂಸ್ಕೃತಿಯ ಆರೋಗ್ಯ ಉಪಕೇಂದ್ರದ ಆರೋಗ್ಯ ಸಹಾಯಕರ ತಾಯಿಬೇರುಗಳು ಸಡಿಲಗೊಳ್ಳಲು ಮತ್ತು ಆರೋಗ್ಯ ಸಹಾಯಕರ ಅಸ್ಮಿತೆಗೆ ಧಕ್ಕೆ ತರಲು ಸರಕಾರದ ಇಂತಹ ನೀತಿಗಳು ದಾರಿಯಾದವು.
ಪುರುಷ ಮತ್ತು ಮಹಿಳೆಯರನ್ನು ಪ್ರತ್ಯೇಕಗೊಳಿಸಿ, ಲಿಂಗ ತಾರತಮ್ಯವನ್ನು ಪದನಾಮ ಬದಲಾವಣೆ ಮೂಲಕ ಉಲ್ಬಣ ಗೊಳಿಸಿತು. ಇದರ ಬದಿಪೆಟ್ಟು ಗ್ರಾಮೀಣ ಜನಾರೋಗ್ಯದ ಮೇಲೆ ಬೀಳದಿರದು. ಸೌಹಾರ್ದಯುತ ಮತ್ತು ಮಧುರ ಬಾಂಧವ್ಯದ ಸ್ಥಳೀಯ ಆರೋಗ್ಯಸೇವಾ ಸಂಬಂಧಗಳ ಬಂಧುರತೆಗೆ ಧಕ್ಕೆ ಬಾರದಿರದು. ದಶಕಗಳ ಹಿಂದೆ ಗ್ರಾಮೀಣ ಆರೋಗ್ಯ ಸಹಾಯಕಿಯರಿಗಿದ್ದ ಲೈಂಗಿಕ ಕಿರುಕುಳದಂತಹ ಘೋರ ಶೋಷಣೆ ಪ್ರಸ್ತುತ ನಿಯಂತ್ರಣದ ಹಂತ ತಲುಪಿದೆಯಷ್ಟೇ. ಆದರೆ ಶೋಷಣೆಯ ಸ್ವರೂಪ ಬದಲಾಗಿದೆ ಎಂಬುದನ್ನು ಮರೆಯಬಾರದು. ಆಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಿಂದ ತಾಲ್ಲೂಕು, ಜಿಲ್ಲೆ ಮತ್ತು ರಾಜಧಾನಿ ಮಟ್ಟದ ಅಧಿಕಾರಶಾಹಿಯ ದಮನಕಾರಿ ಕುಣಿಕೆಯಿಂದ ಬಿಡುಗಡೆ ಪಡೆದಿಲ್ಲ.
ಇಂತಹ ದಮನಿತ ಮಹಿಳೆಯರ ಆತ್ಮಹತ್ಯೆ ಯತ್ನಗಳ ಅನೇಕ ಪ್ರಕರಣಗಳು ವರದಿಯಾಗುತ್ತಲಿವೆ. ಇಂತಹ ಪ್ರಕರಣಗಳ ಸಂದರ್ಭದಲ್ಲಿ ಅಕ್ಷರಶಃ ಫೀಲ್ಡಿಗಿಳಿದು ಪ್ರತಿಭಟನೆ ಮಾಡಬೇಕಾದ ಸಂಘಟನೆಗಳು ಮನವಿ ಪತ್ರಗಳ ಅರ್ಪಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಪ್ರದರ್ಶನಗಳಿಗೆ ಸೀಮಿತಗೊಂಡಿವೆ. ಈ ಹಿಂದೆ ಪುರುಷ ಮತ್ತು ಮಹಿಳಾ ಸಂಘಟನೆಗಳ ಐಕ್ಯತೆ ಶಕ್ತಿಯ ಒಗ್ಗಟ್ಟಿರುವಾಗ ಇಂತಹ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಖರ ಪ್ರತಿಭಟನೆಗಳು ಜರುಗುತ್ತಿದ್ದವು. ಅಂತಹ ಹೋರಾಟದ ಹತ್ತಾರು ನಿದರ್ಶನಗಳು ನನ್ನ ನೆನಪಿನ ಸಂಚಿಯಲ್ಲಿವೆ. ಪ್ರತ್ಯೇಕಗೊಂಡ ಮೇಲೆ ದಮನಿತ ಆರೋಗ್ಯ ಸಹಾಯಕರ ಹೋರಾಟಕ್ಕೆ ನ್ಯಾಯ ದಕ್ಕಿಸಿ ಕೊಳ್ಳಲು ಸಾಧ್ಯವೆ.? ಈ ಎಲ್ಲ ಅಪಸವ್ಯಗಳ ನಡುವೆ ಹಳ್ಳಿಗಳ ಆರೋಗ್ಯ ಉಪಕೇಂದ್ರ ಉಳಿಸುವವರು ಯಾರು.? ಅದು ಹೆಸರಿಗಷ್ಟೇ ‘ಕ್ಷೇಮಕೇಂದ್ರ’ ಆಗಬಾರದು. ನಿಜವಾದ ಉಪಕೇಂದ್ರ ಉಳಿಯದಿದ್ರೆ ಹಳ್ಳಿಯ ಆರೋಗ್ಯ ಹದಗೆಟ್ಟು ಹೋಗುತ್ತದೆ.
ಹದಿನೇಳು ವರ್ಷಗಳ ಹಿಂದೆ ೨೦೦೫ ರ ೧೫ ನೇ ಎಪ್ರಿಲ್ ಮಾಹೆಯಿಂದ ಜಾರಿಗೆ ಬಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರಿಗೆ ಸಹಾಯಕರಾಗಿ ಬಂದರು. ಆದರೆ ಮುಂದೊಂದು ದಿನ ಅವರೇ ಆರೋಗ್ಯ ಇಲಾಖೆಯ ಪಿಲ್ಲರ್ ಪದವಿ ಪಡೆದು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಆಶಾ ಕಾರ್ಯಕರ್ತೆಯರು ಟ್ರೇಡ್ ಯುನಿಯನ್ ಸಂಘಟನೆಗಳಡಿಯಲ್ಲಿ ಸಂಘಟಿತ ಮತ್ತು ಸಶಕ್ತ ಹೋರಾಟದ ಮೂಲಕ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಅವರ ಹೋರಾಟದ ಪರಂಪರೆ. ಅಷ್ಟಕ್ಕೂ ಅವರು ಸರಕಾರಿ ನೌಕರರಲ್ಲ. ಅವರ ಹೋರಾಟದ ವೈಖರಿಗಳೊಂದಿಗೆ ಸರಕಾರಿ ನೌಕರರ ಸಂಘಟನೆಗಳನ್ನು ತಾದಾತ್ಮ್ಯಗೊಳಿಸಲಾಗದು.
ಆಶಾ ಕಾರ್ಯಕರ್ತೆಯರು ಮತ್ತು ಇತ್ತೀಚಿನ ಹೊರಗುತ್ತಿಗೆ ಆಧಾರದ ಸಮುದಾಯ ಆರೋಗ್ಯಾಧಿಕಾರಿ ನಾಮಾಂಕಿತ ಶುಶ್ರೂಷಕರ ಪೂರ್ವದಲ್ಲಿ ಗ್ರಾಮೀಣ ಆರೋಗ್ಯ ಸೇವೆಗಳು ಯಶಸ್ವಿಯಾಗಿ ಮುನ್ನಡೆ ಸಾಧಿಸಿರುವುದನ್ನು ನಿರಾಕರಿಸಲಾಗದು. ಅವುಗಳ ಬೆಳವಣಿಗೆಗಳ ಅಂದರೆ ವಿವಿಧೋದ್ದೇಶ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಪೂರ್ವದ ಆರೋಗ್ಯ ಸೇವೆಗಳ ಅಭಿವೃದ್ಧಿ ಗಮನೀಯ. ಆಗ ವಿವಿಧ ಹೆಸರುಗಳ ಪದನಾಮಗಳಲ್ಲಿ ಆರೋಗ್ಯ ಸಹಾಯಕರು ಕಾರ್ಯನಿರ್ವಾಹಕ ಸಿಬ್ಬಂದಿಯಾಗಿ ಜನಾರೋಗ್ಯ ಅಭಿವೃದ್ಧಿ ಮತ್ತು ಹತ್ತಾರು ಸಾಂಕ್ರಾಮಿಕ ರೋಗಗಳ ನಿರ್ಮೂಲನೆಗೆ ಕಾರಣರಾಗಿದ್ದಾರೆ. ಸಿಡುಬು, ಕುಷ್ಠರೋಗ, ನಾರುಹುಣ್ಣು, ಇತ್ತೀಚೆಗೆ ಪೋಲಿಯೋ ನಿರ್ಮೂಲನೆ ಸೇರಿದಂತೆ ಅನೇಕ ರೋಗಗಳ ನಿಯಂತ್ರಣ ಮಾಡುವಲ್ಲಿ ನಿಸ್ಸಂದೇಹವಾಗಿ ಆರೋಗ್ಯ ಸಹಾಯಕರ ಪಾತ್ರ ಶ್ಲಾಘನೀಯ.
ತನ್ಮೂಲಕ ಸದೃಢ ಆರೋಗ್ಯ ಕರ್ನಾಟಕ ಕಟ್ಟಿದವರು ನಮ್ಮ ಆರೋಗ್ಯ ಸಹಾಯಕರು. ದುರಂತದ ಸಂಗತಿಯೆಂದರೆ ಗ್ರಾಮ ಸಮುದಾಯದ ಸ್ವಾಸ್ಥ್ಯಪ್ರಜ್ಞೆಯನ್ನು ಹೊಂದಿರುವ ಇದೊಂದು ಬಗೆಯ ಸುಸ್ಥಿರವಲ್ಲದ ಅಸಂಘಟಿತ ಕಾಯಕ ವಲಯ. ಅಂತೆಯೇ ಅವರಿಗೆ ಕಾಯಕಪ್ರಜ್ಞೆ ಇದೆ. ಆದರೆ ಕೇಡರ್ ಪ್ರಜ್ಞೆ ಕಡಿಮೆ. ವೃತ್ತಿ ಘನತೆಯ ಅರಿವಿನ ಕೊರತೆ. ಹೀಗಾಗಿ ಪದನಾಮ ಬದಲಾವಣೆ ನಂತರ ಒಂದು ವರ್ಷದಲ್ಲಿ ಅದರ ವಿಘಟನೆಯ ಮಾರ್ಗಗಳು ತೀವ್ರ ಸ್ವರೂಪದಲ್ಲಿವೆ. ಪುರುಷರು ಮತ್ತು ಮಹಿಳೆಯರದು ಎಂಬ ಪ್ರತ್ಯೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಪ್ರಾಯಶಃ ಅದು ಅನಿವಾರ್ಯವಾಗಿತ್ತು.
ಸಹಜವಾಗಿ ಹೊಸ ಹೆಸರಿನ ಸಂಘಟನೆಗಳಿಗೆ ಶಿಶುರೋಗಗಳ ಭಾದೆ. ಅವಕ್ಕೆ ಮುಂಗಡವಾಗಿ ಲಸಿಕೆಗಳು ದೊರಕದೇ ವ್ಯವಸ್ಥಿತ ಸಂಘಟನೆಯ ತೀವ್ರಕೊರತೆ. ಪುರುಷರು ಮತ್ತು ಮಹಿಳಾ ಆರೋಗ್ಯ ಸಹಾಯಕರು ಏಕನಾಮದ ಧ್ವಜದಡಿಯಲ್ಲಿ ಮಾಡುತ್ತಿದ್ದ ಹೋರಾಟದ ಕಸುವು ಟಿಸಿಲೊಡೆದು ಸಹಜ ಶಿಥಿಲತೆಯ ಪ್ರಲಾಪ. ಹೋರಾಟಗಳು ಎಂಬ ಪದದ ಅರ್ಥ ಇತ್ತೀಚೆಗೆ ಸಾಮಾಜಿಕ ವಲಯಗಳಲ್ಲೇ ಕ್ಲೀಷೆಯ ಸವಕಲು ಸ್ವರೂಪ ತಾಳಿದೆ. ಅದೇನಿದ್ದರೂ ವಾಟ್ಸ್ಯಾಪ್ ಮೂಲಕವೇ ಸಂಘಟನೆಗಳು ಹೆಚ್ಚು ಉಸಿರಾಡುತ್ತಿವೆ. ಸಾಮಾಜಿಕ ಜಾಲತಾಣಗಳು ‘ಟೂಲ್ಸ್’ ಗಳಾಗಿ ಬಳಕೆಯಾಗಬೇಕು. ಬದಲು ಪರಿವರ್ತನೆ ಮತ್ತು ಪರ್ಯಾಯದ ಮಾರ್ಗಸೂಚಿ ಪಾತ್ರಗಳಾಗುತ್ತಿರುವುದು ದುರಂತ.
ಸಂಘಟನೆಯ ವೇಗ, ಆವೇಗ ನಿರೀಕ್ಷಿತ ಪ್ರಮಾಣದ ಅಳತೆಗೋಲು ತಲುಪಿಲ್ಲವೆಂಬ ಅಂಬೋಣ ಅನೇಕರದು. ದಶಕಗಳ ಹಿಂದೆ ಕೆ. ವನಮಾಲಾ, ದಸ್ತಗೀರಸಾಬ, ಏಸುದಾಸ, ಎನ್. ರಾಜಣ್ಣನಂತಹ ಅನೇಕರು ಸಾಕ್ಷೀಪ್ರಜ್ಞೆಯಂತೆ ಕಟ್ಟಿ ಬೆಳೆಸಿದ ಸಂಘಟನೆ ಮುಕ್ಕಾದಾಗ ನನ್ನಂಥವರಿಗೆ ಸಹಜ ಸಂಕಟ. ಬೇಡಿಕೆ ಈಡೇರಿಕೆಯದು ಎರಡನೆಯ ಮಾತು. ಏಕೆಂದರೆ ಸಣ್ಣದೊಂದು ಕೆಲಸಗೇಡಿ ಬೇಡಿಕೆ ಈಡೇರಿಸಿಕೊಳ್ಳುವ ಮೂಲಕ ನಾಯಕತ್ವದ ಪಟ್ಟಭದ್ರ ಹಿತಾಸಕ್ತಿಗೆ ಹಾತೊರೆಯುವ ಮನಸುಗಳದ್ದೇ ಹೇರಾಪೇರಿ. ಕಾಯಕ ನಿಷ್ಠೆಯ ಸುಸ್ಥಿರ ಮತ್ತು ಅಗತ್ಯ ಬೇಡಿಕೆ ಯಾವುದೆಂಬುದೇ ಅರಿಯದ ನಿರ್ವಾತ ನಿರ್ಮಾಣ.
ಹೊಸ ತಲೆಮಾರಿನ ತವಕ ತಲ್ಲಣಗಳಿಗೆ, ಹಿರೀಕರ ಮಾರ್ಗದರ್ಶನ ಮತ್ತು ಅನುಭವಗಳ ಕೊರತೆ. ಅದರಿಂದಾಗಿ ವಾಟ್ಸ್ಯಾಪ್ ವಿಶ್ವ ವಿದ್ಯಾಲಯಗಳ ಮೊರೆ ಹೋಗುತ್ತಿರುವುದು ಅವರ ಪಾಲಿಗೆ ಅನಿವಾರ್ಯ. ವಾಟ್ಸ್ಯಾಪುಗಳ ತುಂಬಾ ಎಷ್ಟೋಬಾರಿ ಅನಾರೋಗ್ಯಕರ ಚರ್ಚೆಗಳದ್ದೇ ವೃಥಾಲಾಪ. ಅಂದು ಹತ್ತು ಪೈಸೆಯ ಕಾರ್ಡು ಬರೆದು ” ಬೆಂಗಳೂರಿನಲ್ಲಿ ಇಂತಹ ದಿವಸ ಸತ್ಯಾಗ್ರಹವಿದೆ ಬರ್ರಿ ಅಂತ ಕರೆದರೆ ಸಾಕಿತ್ತು.” ದೂರದ ಬೆಳಗಾವಿ, ಬಿಜಾಪುರ, ಕಲಬುರಗಿ ಕಡೆಯಿಂದ ದಂಡಿ ದಂಡಿಯಾಗಿ ಆರೋಗ್ಯ ಸೈನಿಕರ ದಂಡೇ ಬರುತ್ತಿತ್ತು. ವಾರಗಟ್ಟಲೇ ರೊಟ್ಟಿಬುತ್ತಿ ಕಟಗೊಂಡು ಬಂದು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದರು. ಅಂತಹ ನ್ಯಾಯಯುತ ಮತ್ತು ಸಂಘಟಿತ ಪ್ರತಿಭಟನೆಯ ಸೊಲ್ಲು ಎಲ್ಲಿ ಹೋಯಿತು.?
ಇವತ್ತು ಎಲ್ಲರ ಕೈಯಲ್ಲೂ ಜಗತ್ತು ಅಂಗೈಗೆ ಸಿಗುವ ಸಾಮಾಜಿಕ ಜಾಲತಾಣಗಳಿವೆ. ಆದರೆ ಸಂಘಟಿತ ಸಶಕ್ತ ಜನಸತ್ತೆಯ ಶಿಸ್ತು ಮತ್ತು ಸಂಯಮಗಳು, ಸಹಕಾರ ಹಾಗೂ ಸಮನ್ವಯತೆಗಳ ತೀವ್ರ ತತ್ವಾರ. ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಸಂಘಟನೆ ರೂಪುಗೊಳ್ಳಬೇಕು. ಇತ್ತೀಚೆಗಷ್ಟೇ ಕಲಬುರಗಿ ಜಿಲ್ಲೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಅತ್ಯಂತ ಅಚ್ಚುಕಟ್ಟಾಗಿ ಚುನಾವಣೆಗಳನ್ನು ಜರುಗಿಸಿತು. ಕಲಬುರ್ಗಿ ಜಿಲ್ಲೆಯ ಎಲ್ಲರೂ ಸಂಘದ ಸದಸ್ಯತ್ವ ಪಡೆದರು. ನಿಯಮಾನುಸಾರ ಮತ್ತು ಕಾನೂನಾತ್ಮಕವಾಗಿ ಜಿಲ್ಲಾ ಸಂಘಕ್ಕೆ ಚುನಾವಣೆ ಜರುಗಿಸಿದ್ದು ರಾಜ್ಯದ ಎರಡೂ ಸಂಘಗಳಿಗೆ ಮಾದರಿ. ನೂತನ ವೇತನ ಆಯೋಗ ರಚನೆಯ ಈ ಸಂದರ್ಭದಲ್ಲಿ ನನ್ನ ಈ ಸಂವೇದನೆಗಳು ಮುಂದಿನ ಹೋರಾಟದ ಸಾಂಘಿಕ ಹಾದಿಗೆ ಸಣ್ಣದೊಂದು ಹಣತೆಯ ಬೆಳಕಾದರೆ ಅಷ್ಟು ಸಾಕು.
–ಮಲ್ಲಿಕಾರ್ಜುನ ಕಡಕೋಳ
9341010712