ಬಸವಣ್ಣ ಸ್ವಯಂಪ್ರಸಾದಿಯಾದನಯ್ಯಾ.
ತನುವಿಡಿದು ದಾಸೋಹವ ಮಾಡಿ,
ಗುರುಪ್ರಸಾದಿಯಾದ ಬಸವಣ್ಣ.
ಮನವಿಡಿದು ದಾಸೋಹವ ಮಾಡಿ,
ಲಿಂಗಪ್ರಸಾದಿಯಾದ ಬಸವಣ್ಣ.
ಧನವಿಡಿದು ದಾಸೋಹವ ಮಾಡಿ,
ಜಂಗಮಪ್ರಸಾದಿಯಾದ ಬಸವಣ್ಣ.
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ,
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯಾ.
-ಅಕ್ಕ ಮಹಾದೇವಿ
ಅಕ್ಕ ಮಹಾದೇವಿ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಶ್ರೇಷ್ಟ ಮತ್ತು ಅನುಭಾವಿ ಕವಿಯತ್ರಿ. ತನ್ನ ಬದುಕನ್ನು ತನ್ನ ಇಚ್ಛೆಯಂತೆ ಬದುಕಬಲ್ಲ ಮಹಿಳೆ ಎಂದು ತೋರಿಸಿ ಕೊಟ್ಟ ದಿಟ್ಟ ಶರಣೆ. ಅವಳು ಮಲ್ಲಿಕಾರ್ಜುನ ತನ್ನ ಗಂಡ ಎಂದು ನಂಬಿದವಳು ಗುರು ಪಥದಲ್ಲಿ ಸಾಗುವುದಕ್ಕೆ ಆತ್ಮದ ಸಂಗಾತಿ ಉಂಟು ಎಂದು ಧೈರ್ಯದಿಂದ ಅದ್ವೈತ ಭಾವದಲ್ಲಿ ಹೇಳಿದ ಅಕ್ಕ ಮಹಾದೇವಿ ಮುಂದೆ ಕಲ್ಯಾಣದ ಪರಿಸರದಲ್ಲಿ ಬೆಳೆದ ವಾತಾವರಣ ಸೃಷ್ಟಿ ಮತ್ತು ವ್ಯಕ್ತಿಯ ಸಂಬಂಧದ ಸ್ವರೂಪ ಲಿಂಗ ರೂಪದಲ್ಲಿ ಹೊರಹಾಕುವ ಹೊಸತನವನ್ನು ತನ್ನ ಬೌದ್ಧಿಕ ಪ್ರತಿಭೆ ಇನ್ನೂ ಹೆಚ್ಚಿಗೆ ವಿಸ್ತರಿಸಿ ಗುರು ಲಿಂಗ ಜಂಗಮ ಮಂತ್ರ ವಿಭೂತಿ ರುದ್ರಾಕ್ಷಿ ಪಾದೋದಕ ಮತ್ತು ಪ್ರಸಾದ ಎಂಬ ಅಷ್ಟಾವರಣ ಅವತರಣಿಕೆಗಳ ಅನಾವರಣ ಮಾಡಿ ಪ್ರಸಾದ ಎಂಬುದು ಪ್ರಸನ್ನತೆ ಮತ್ತು ಪ್ರಜ್ಞೆ ಎಂದು ಹೇಳಿ ತನ್ನ ಸುತ್ತಲಿನ ಮಾಯಾ ಪ್ರಪಂಚದ ಸಂಕೋಲೆ ಕಳಚಿಕೊಂಡು ಮುಕ್ತಳಾದಳು ಅಕ್ಕ.
ತನುವಿಡಿದು ದಾಸೋಹವ ಮಾಡಿ,
ಗುರುಪ್ರಸಾದಿಯಾದ ಬಸವಣ್ಣ
ಭಕ್ತ ತನ್ನ ಸುತ್ತಲಿನ ಜಗತ್ತನ್ನು ತನ್ನ ತನುವಿನ ಜೀವಜಾಲದ ಮೂಲಕ ಅನುಭವಿಸುತ್ತಾನೆ. ಆದರೆ ಬಸವಣ್ಣ ಒಬ್ಬ ಪ್ರಧಾನಿ ದಂಡ ನಾಯಕ ಆರ್ಥ ಮಂತ್ರಿ ಆದರೂ ಸಹಿತ ತನ್ನ ತನುವನ್ನು ಶಕ್ತಿಯಾಗಿ ಬಳಸಿ ತನುವಿನ ಮೂಲಕ ದಾಸೋಹವನ್ನು ಮಾಡುತ್ತಾ ಅಂತಪ್ಪ ಅರಿವನ್ನು ಎಲ್ಲರಲ್ಲಿಯೂ ಮೂಡಿಸಿ ಗುರು ಪ್ರಸಾದವಾದನು ಬಸವಣ್ಣ. ಇಲ್ಲಿ ಅರಿವೇ ಗುರು ಪ್ರಜ್ಞೆ ಪ್ರಸನ್ನತೆ ಪ್ರಸಾದ .ಹೀಗಾಗಿ ಶ್ರಮಿಕ ವರ್ಗದ ಪರವಾಗಿ ನಿಂತ ಬಸವಣ್ಣ ಕಾಯ ಶ್ರಮದ ಮೂಲಕ ಬರುವ ಆದಾಯವನ್ನು ಸಂಪತ್ತು ಧನ ಕಾಳು ಧಾನ್ಯಗಳನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಬಳಸಬೇಕು . ಹಾಗೆ ಬಳಸಿ ಬಸವಣ್ಣ ಗುರು ಪ್ರಸಾದೀ ಆದನು.
ಮನವಿಡಿದು ದಾಸೋಹವ ಮಾಡಿ,
ಲಿಂಗಪ್ರಸಾದಿಯಾದ ಬಸವಣ್ಣ.
ಮನಸ್ಸು ಅತ್ಯಂತ ಚಂಚಲ ಹರಿದಾಡುವ ತೀವ್ರ ಭಾವ .ಬಸವಣ್ಣ ತನ್ನ ತನು ಮನ ಶುದ್ಧವಾಗಿಟ್ಟು ಕೊಂಡು ಲಿಂಗ ಇಲ್ಲಿ ಸಮಷ್ಟಿ ಅಂತ ತಿಳಿಯಬೇಕು ಸಮಾಜಕ್ಕೆ ಸಮುದಾಯ ಸಮಷ್ಟಿಗೆ ದಾಸೋಹವ ಮಾಡಿ ಲಿಂಗ ಪ್ರಸಾದಿಯಾದನು ಬಸವಣ್ಣ. ಮನಸ್ಸನ್ನು ಗಟ್ಟಿಗೊಳಿಸುವ ಮತ್ತು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಆಶಯ ಹೊಂದಿದ್ದ ಬಸವಣ್ಣ ತನ್ನ ಮನವಿಡದು
ಲಿಂಗಕ್ಕೆ ದಾಸೋಹವ ಮಾಡಿದನು ಬಸವಣ್ಣ ಹೀಗಾಗಿ ತನ್ನ ತನು ಮನದ ಶುದ್ಧನಾಗಿ ಲಿಂಗ ಪ್ರಸಾದಿಯಾದನು ಬಸವಣ್ಣ.
ಧನವಿಡಿದು ದಾಸೋಹವ ಮಾಡಿ,
ಜಂಗಮಪ್ರಸಾದಿಯಾದ ಬಸವಣ್ಣ
ಶರಣರು ಧನ ಕನಕ ಚಿನ್ನ ವಸ್ತು ಒಪ್ಪಿದವರಲ್ಲ ನನ್ನ ದೃಷ್ಟಿಯಲ್ಲಿ ಗಾಢವಾದ ಘನತೆ ಘನ ಅಸ್ಮಿತೆ ಹಿಡಿದು ಜಂಗಮ ಪ್ರಸಾದವ ಮಾಡಿದ ಬಸವಣ್ಣ ಧನ ಇಲ್ಲಿ ಕೊಟ್ಟವರು ದೊಡ್ಡವರು ಪಡೆದುಕೊಂಡವರು ಚಿಕ್ಕವರು ಎಂದು ಶ್ರೇಣೀಕೃತ ಸಾಮಾಜಿಕ ಧಾರ್ಮಿಕ ಸ್ಥಿತ್ಯಂತರ ಕಂಡು ಬರುತ್ತವೆ. ಹೀಗಾಗಿ ತನ್ನ ಸರ್ವಾಂಗ ಲಿಂಗ ಹಿಡಿದು ಜಂಗಮ ಅಂದರೆ ಜೀವ ಜಾಲ ಚೈತನ್ಯದ ಒಳಿತಿಗೆ ದುಡಿದನು ಬಸವಣ್ಣ ನನ್ನ ಅರ್ಥದಲ್ಲಿ ದನದ ಬದಲಾಗಿ ಘನ ಪದ ಬಳಕೆ ಸೂಕ್ತ ಎಂದೆನಿಸುತ್ತದೆ . ವಚನಗಳ ಸಂಕಲನದ ಸಂದರ್ಭದಲ್ಲಿ ಘನದ ಬದಲಾಗಿ ಧನ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆ ತಳ್ಳಿ ಹಾಕುವ ಹಾಗಿಲ್ಲ.
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ,
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯಾ.
ಹೀಗೆ ತನ್ನ ತನು.ಮನ ಧನ ಘನ ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿ ಚೆನ್ನಮಲ್ಲಿಕಾರ್ಜುನನ ದೃಷ್ಟಿಯಲ್ಲಿ ಬಸವಣ್ಣ ಸ್ವಯಂ ಪ್ರಸಾದಿಯಾದ
ಬಸವಣ್ಣ ಸ್ವಯಂ ಲಿಂಗ ಗುರು ಜಂಗಮದ ಪ್ರತೀಕವೂ ಹೌದು . ಉಳಿದ ಶರಣರು ಅಷ್ಟಾವರಣ ಕಾಯ ಗುಣಗಳು ಎಂದು ನಂಬಿ ನಡೆದರೆ ಇಂತಹ ಅರಿವಿನ ಆಂದೋಲನವನ್ನು ಹುಟ್ಟು ಹಾಕಿದ ಬಸವಣ್ಣನೇ ಗುರು ಲಿಂಗ ಜಂಗಮ ಮತ್ತು ಪ್ರಸಾದಿ ಎಂದು ಹೇಳಿದ್ದಾಳೆ ಅಕ್ಕ ಮಹಾದೇವಿ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ