ಹರಿದ ಹೊಕ್ಕಳ ಬಳ್ಳಿಯ ಕಾವ್ಯಾನುಭವ

ಹರಿದ ಹೊಕ್ಕಳ ಬಳ್ಳಿಯ ಕಾವ್ಯಾನುಭವ

ಗೆಳೆಯ ಕೆ.ವರದೇಂದ್ರ ಅವರು ತಮ್ಮ ಚೊಚ್ಚಲ ಕವನ ಸಂಕಲನವಾದ ‘ಹರಿದ ಹೊಕ್ಕಳ ಬಳ್ಳಿ’ಗೆ ಮೊದಲ ಓದುಗನಾಗಿ ನನ್ನ ಕಾವ್ಯಾನುಭವವನ್ನು ಹಂಚಿಕೊಳ್ಳುವಂತೆ ಕೇಳಿಕೊಂಡರು. ಆ ಕೇಳಿಕೆಯೊಂದಿಗೆ ಅವರಲ್ಲಿ ತಮ್ಮ ಕಾವ್ಯರೂಪದ ಲೋಕಾನುಭವಗಳು ಲೋಕದ ಮುಂದೆ ಮೊದಲ ಬಾರಿಗೆ ಪ್ರಕಟಗೊಳ್ಳುವಾಗ ಸಹೃದಯರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಸಹಜವಾಗಿ ಹಿಂಜರಿಕೆಯನ್ನು ವ್ಯಕ್ತಪಡಿಸಿದರು.

ಬೆಳವಣಿಗೆ ಎಂಬುದು ಯಾವತ್ತೂ ಏಕಕಾಲಕ್ಕೆ ಪರಿಪೂರ್ಣತ್ವವನ್ನು ಪಡೆಯುವುದಿಲ್ಲ. ಈ ವಾಸ್ತವ-ಸತ್ಯಗಳು ಲೋಕಾನುಭವದೊಂದಿಗೆ ಬದುಕುವ ಎಲ್ಲರಿಗೂ ತಿಳಿದಿರುವ ಸಂಗತಿಯಾದರೂ, ಈಗಾಗಲೇ ಪ್ರಬುದ್ಧತೆಯೊಂದಿಗೆ ಬದುಕುತ್ತಿರುವವರ ಮುಂದೆ ಹೊಸದಾಗಿ ನಿಲ್ಲುವಾಗ ತನ್ನ ಬಗ್ಗೆ ಅವರ ಪ್ರತಿಕ್ರಿಯೆಯ ಬಗೆಗೆ ಸಂಕೋಚ ಮತ್ತು ಆತಂಕಗಳು ಮನದಲ್ಲಿ ಸುಳಿದಾಡುತ್ತವೆ. ಆದರೆ ಹೊಸಬರಲ್ಲಿ ಸಹಜವಾಗಿರುವ ಇಂಥ ಮನಸ್ಥಿತಿಯನ್ನು ನಿವಾರಿಸಿ ಅವರಲ್ಲಿ ಧೈರ್ಯ ಮತ್ತು ಉತ್ಸಾಹಗಳನ್ನು ತುಂಬುತ್ತ ಸೂಕ್ತ ಮಾರ್ಗದರ್ಶನದೊಂದಿಗೆ ಅವರ ಚಲನೆಗೆ ಪೋಷಕಾಂಶವಾದರೆ ಬದುಕು ಅರ್ಥಪೂರ್ಣವೂ, ಸಂಮೃದ್ಧವೂ ಆಗುತ್ತದೆ.
ಒಟ್ಟು ೪೫ ಕವಿತೆಗಳ ಕೂಡುಕಟ್ಟು ಈ ಹರಿದ ಹೊಕ್ಕಳ ಬಳ್ಳಿ. ‘ಕಾವ್ಯ ಎನ್ನುವುದು ತೀರಾ ಭಾವಾತಿರೇಕದ ಒಂದು ಅಭಿವ್ಯಕ್ತಿರೂಪ’ ಎಂಬುದು ನಮ್ಮ ಸಮಾಜದಲ್ಲಿ ಕವಿ ಮತ್ತು ಕವಿತೆಯ ಬಗೆಗಿರುವ ಸಹಜವಾದ ಅಪವಾದವೋ, ನಂಬಿಗೆಯೋ ಆಗಿಬಿಟ್ಟಿದೆ. ಆದರೆ ಕಾವ್ಯ ಎಂಬುದು ಕವಿ ಎಂಬ ಹಣೆಪಟ್ಟಿಯುಳ್ಳವನ ಅಭಿವ್ಯಕ್ತಿರೂಪವಾಗಿರದೇ, ನಮ್ಮೆಲ್ಲರ ಅರಿವಿಗೆ ಬಾರದಂತೆ ನಮ್ಮೊಳಗೆ ಆಗಾಗ ಲೋಕದ ಘಟನೆಗಳಿಗೆ ರಸಾತ್ಮಕವಾಗಿ ಮೈದಾಳಿ ಪ್ರಕಟಗೊಳ್ಳುವ ಸ್ಪಂದನಾತ್ಮಕ ಭಾವಗಳು; ಪ್ರತಿಯೊಬ್ಬರಲ್ಲೂ ಕವಿತ್ವ ಸಾಕಾರಗೊಳ್ಳುವ ಹವಣಿಕೆಯನ್ನು ಕಾಣುತ್ತೇವೆ. ಆದರೆ ಅಂಥ ಭಾವಸ್ಥಿತಿ ತೀವ್ರತರವಾಗಿ, ಶಕ್ತಿಯುತವಾಗಿ ಹೊರಹೊಮ್ಮಿದವರಲ್ಲಿ ಕವಿತ್ವದ ಪೂರ್ಣರೂಪವನ್ನು ಕಾಣುತ್ತೇವೆ ಅಷ್ಟೆ. ಹೀಗಾಗಿ ಕಾವ್ಯವು ಪ್ರತಿಯೊಬ್ಬ ಮನುಷ್ಯನ ಸಹಜವಾದ ಮನಸ್ಥಿತಿ ಎನ್ನಬಹುದಾಗಿದೆ. ಇಂಥ ಸಶಕ್ತ ಮನಸ್ಥಿತಿಯುಳ್ಳ ಕವಿಯಾಗಿ ಮಿತ್ರ ಕೆ.ವರದೇಂದ್ರ ಅವರು ‘ಹರಿದ ಹೊಕ್ಕಳ ಬಳ್ಳಿ’ ಎಂಬ ಪ್ರಥಮ ಕಾವ್ಯ ಸಂಕಲನದ ಮೂಲಕ ಲೋಕದ ಸಮ್ಮುಖದಲ್ಲಿ ನಿಲ್ಲುತ್ತಿದ್ದಾರೆ.
ಲೋಕದ ಚೇಷ್ಟೆಗಳಿಗೆ ಮುಖಾಮುಖಿಯಾಗುವಾಗ ಕವಿಯಾಗುವವನಿಗೆ ಕುತೂಹಲಗಳು, ಪ್ರಶ್ನೆಗಳು ಹೆಚ್ಚುತ್ತಾ ಅವುಗಳ ಕುರಿತಂತೆ ಮತ್ತಷ್ಟು ಅನುಭವಕ್ಕಾಗಿ ಹಾತೊರೆಯುತ್ತ ಅಂತಿಮವಾಗಿ ತಮಗೆ ದಕ್ಕಿದ ಆ ಎಲ್ಲಾ ಮೂಲದ ಅನುಭವಗಳಿಗೆ ಶಬ್ದ ದೀಕ್ಷೆ ನೀಡಲು ಸಜ್ಜಾಗುತ್ತಾನೆ. ಇದೊಂದು ಆತನ ಸಾಧನೆ ಮತ್ತು ಸಿದ್ಧಿಗಳ ನೆಲೆಯಾಗಿ ನಡೆಯುವ ಸೃಷ್ಟಿಕ್ರಿಯೆ. ಇದು ಬಹು ವಿಶಿಷ್ಟವಾದುದು.. ಇಂಥ ಭಾವನೆ ಕವಿ ವರದೇಂದ್ರರಲ್ಲಿ

ಸಾಧನೆಗೆ
ಎಲ್ಲೆ ಮೀರುವ ಹಸಿವು
ಸಾಧಕ ಮತಿಗೆ
ಛಲದ ಹಸಿವು
ಫಲಕೋ.. ಇನ್ನೂ
ದುಡಿಸುವ ಹಸಿವು (ಹಸಿವು)

ಎಂಬುದಾಗಿ ಸ್ಪಂದನಾಶೀಲವಾದ ಕವಿಮನೋಭಾವದ ಸಿಡಿಗಳನ್ನು ಪ್ರಕಟಗೊಳಿಸುತ್ತದೆ. ಆದರೆ ಈ ಹಂತದಲ್ಲಿ ಮನಸ್ಸು ಅತಿ ತೀವ್ರತೆಗೀಡಾಗಿ ತಾಳ್ಮೆಗೆಟ್ಟು ಲೋಕಾನುಭವಕ್ಕೆ ಅಡ್ಡಿಯುಂಟಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಕವಿ, ಸಂದರ್ಭದಂತೆ ಹರಿದಾಡುವ ಮನಸ್ಸಿಗೆ ತಡೆಯನ್ನೂ ಹಾಕಿ; ಭಾವನೆಗಳು, ಸಹಜ ಚಲನೆಗೆ ಮುಕ್ತವಾಗಿರಬೇಕೆನ್ನುತ್ತಾ,

ನೀರಿನಂತಾಗಿ ನುಗ್ಗಬೇಕು,
ಸಿಕ್ಕ ಕಡೆ ಸುಳಿಯಬೇಕು
ಕಳೆ ಕೀಳಬೇಕು
ಬೆಳೆ ಏಳಬೇಕು
ಒಂದು ಗೂಡಿ ಹಂಚಿ
ಬಾಳಬೇಕು, ಇದ್ದೂ ಇಲ್ಲದಂತೆ (ಸಹನೆ)

ಎಂದು ಬದುಕಿನ ಆಗುಹೋಗುಗಳ ಪ್ರತಿಕ್ರಿಯೆಯ ಸಂದರ್ಭದಲ್ಲಿ ಧ್ಯಾನಸ್ಥನಾಗಿಯೇ ಸ್ವಚ್ಛಂದತೆ ಮತ್ತು ಸೌಂದರ್ಯತೆಗಳೊಂದಿಗೆ ಬದುಕು ತನ್ನತನವನ್ನು ಮೀರಿ ವಿಕಾಸಗೊಳ್ಳಬೇಕೆಂಬ ಜೀವನ ದರ್ಶನವನ್ನುಂಟುಮಾಡುತ್ತಾರೆ.
ಜೀವನ ದರ್ಶನದ ಬಳ್ಳಿ ಏಸು ಕಾಲದಿಂದ ಬೆಳೆದರೂ ಕೂಡ ಈ ಜಗತ್ತು ಅನೇಕ ಅಸಂಗತೆಗಳಿಗೆ ಮತ್ತೆ ಮತ್ತೆ ನೆಲೆಯಾಗುತ್ತಿರುತ್ತದೆ. ಅದಕ್ಕೆ ಕಾರಣ..

ಬದುಕಲಿ ತುಸು ತಾಳ್ಮೆ ಇಲ್ಲ
ಪ್ರೀತಿ ಒಂದಿಷ್ಟಿಲ್ಲ
ಸ್ವಾರ್ಥ ಬಂಡಿಯೇರಿ
ವ್ಯರ್ಥ ದಾರಿಯಲಿ
ಸದ್ಗುಣ ಕಳಚಿ
ಮಿಥ್ಯಾಹಾರ ಧರಿಸಿ
ಉರುಳುತಿಹೆವು … (ಮಿಥ್ಯಾವತಾರ)

ಎನ್ನುವಲ್ಲಿ ನಮ್ಮ ಮನಸ್ಸಿನ ಡೋಂಗಿತನವೇ ಮೂಲವಾದದ್ದೆಂದೂ, ಅದರಿಂದಾಗುವ ಪರಿಣಾಮದ ಸೂಕ್ಷ್ಮ ಎಚ್ಚರಿಕೆಯನ್ನೂ ಇಲ್ಲಿ ಕಾಣುತ್ತೇವೆ. ಅಷ್ಟೇ ಅಲ್ಲ ಮನಸ್ಸು ಹೇಗೆ ಡಾಂಭಿಕತನಕ್ಕೀಡಾದರೆ ಅದರ ಅಗಾಧ ಶಕ್ತಿಯಾದ ಸತ್ಯದೃಷ್ಟಿಯಬಲವೂ ಕರಗಿ ಅದರಿಂದಾಗುವ ಅಪಾಯದ ಬಗೆಗೂ.. ಕವಿ

ತಾ ಸುಡುವ ಭಯವಿಲ್ಲದೆ
ಬೆಳಕ ನೀಡುವ ನೇಸರ
ತಾ ಕರಗುವ ಕೊರಗಿಲ್ಲದೆ
ಮನತಣಿಸುವ ಚಂದಿರ
ಇಂಥ ದೈವ ಕಾಣುವಾಗ
ನೀ ಏಕೆ ಹೀಗೆ ಮನವೇ
ನಿನಗೂ ಇರಬಾರದಿತ್ತೆ ಉದಾರ ಮತಿ (ಕುರುಡು ಮನಸು)

ಎಂದು ಮನಸಿಗೆ ತಿಳುವಳಿಕೆ ನೀಡುತ್ತ ಈ ಮನಸ್ಸು ತನಗಾಗುವ ಎಲ್ಲ ತಲ್ಲಣಗಳನ್ನೂ ಸಹಿಸಿ ಬದುಕನ್ನು ತಣಿಸಬೇಕು. ಅಂದಾಗಲೇ ಅವರ ಇರುವಿಕೆಗೂ ಅರ್ಥ-ಸಾರ್ಥಕ.

ಬೇಸರ, ಖಿನ್ನತೆ, ನಿರಾಸೆಯಂಥ ಮನೋವ್ಯಾಕುಲತೆಗಳು ಬರೀ ನಮ್ಮ ಮನವನ್ನಷ್ಟೇ ಕಾಡುವಂಥವುಗಳಲ್ಲ. ಅವು ಪ್ರಕೃತಿಗೂ ಕೂಡ ಅಂಟಿಕೊಂಡಿವೆ. ಆದರೂ ನಮ್ಮಂತೆ ಮಾತನಾಡದ, ಸ್ಪಂದಿಸಲಾರದ ಭೂಮಿಯಂಥ ಪ್ರಕೃತಿಗೂ ಸ್ಪಂದನ ಶೀಲತೆ ಇದೆ. ಬಾಳಿನ ಬಗ್ಗೆ ಅಕ್ಕರತೆ ಇದೆ. ಅದಕ್ಕಾಗಿಯೇ ಈ ಭೂಮಿ ಎಲ್ಲದಕ್ಕೂ ನೆಲೆಯಾಗಿದೆ. ಅಷ್ಟೇ ಅಲ್ಲ ..

ಇಳೆ ಜಡವಾದರೂ
ನೆಲೆಯಾಗಿ ನಿಂತಿಹುದು ಗಿಡ
ಜೀವದ ವ್ಯಾಮೋಹ ಬಿಟ್ಟುಬಿಡು
ಬದುಕು ಆಗುವುದು ಸಂಪೂರ್ಣ (ಜಡ)

ಎಂದು ಹೇಳುತ್ತ, ಈ ಐಹಿಕ ಬದುಕಿನ ಆಗು ಹೋಗುಗಳಿಗೆ ಆಶ್ರಯವಾಗಿರುವ ನಮ್ಮ ಮನಸ್ಸು; ಸಹನೆ ಮತ್ತು ತ್ಯಾಗಗಳನ್ನು ತುಂಬಿಕೊAಡಾಗಲೇ ಅದರ ಘನತೆ ಮತ್ತು ಸಾರ್ಥಕ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಆದರೂ ಇಲ್ಲಿನ ಅನೇಕ ಅವಘಡಗಳಿಗೆ ಮನಸ್ಸು ಉದಾರವಾಗಿರಲು ಸಾಧ್ಯವಿಲ್ಲ. ಆದರೆ, ಈ ಅವಘಡಗಳಿಗೂ ನಮ್ಮ ಮನೋವಿಕಾರತೆಗಳೇ ಕಾರಣ. ದುರಾಸೆ, ದುರ್ಮೋಹ, ಸೋಮಾರಿತನಗಳೇ ಮೊದಲಾದ ಸಂಗತಿಗಳೇ ಈ ವಿಕಾರತೆಗೆ ಕಾರಣಗಳಾಗಿವೆ. ಆದರೆ ಇದರ ಪರಿಣಾಮದ ಪ್ರಜ್ಞೆ ಮಾತ್ರ, ವಿಕಾರತನ ನಮ್ಮನ್ನು ಬಾಧಿಸಿದಾಗಲೇ ಎಚ್ಚರಗೊಳ್ಳುತ್ತದೆ. ಹಾಗಾಗಿ ಕವಿ ಆ ಎಚ್ಚರಿಕೆಯ ಗಂಟೆಯನ್ನು ಬಾರಿಸುವಂತೆ..

ಒಲೆ ಹತ್ತಿಲ್ಲ…
ಊರ ತುಂಬ ಕಿಡಿ
ಬೇಯಿಸಲು ಕಾಳಿಲ್ಲ
ಗೋದಾಮು ಭರ್ತಿ
ನೀರಿಲ್ಲ ಹೊಲಕೆ
ಕೈಗಾರಿಕೆಗೆ ಬರವಿಲ್ಲ
ವಿದ್ಯುತ್ತಿನ ಹಂಗಿನಲಿ ಏತ
ಮರೆತ ರೈತ ತಕ್ಕುದಾದ ಪಾಠ ನಿನಗೆ
ಪ್ರಜಾ ನಾಯಕನಿಂದ

ಎಂದು ರೈತನ ಅಜ್ಞಾನ, ಬಂಡವಾಳಶಾಹಿಗಳ ಹೊಟ್ಟೆಬಾಕತನ ಹಾಗೂ ಆಳುವವರ ಸ್ವಾರ್ಥಯುಕ್ತ ಮೋಸಗಳಿಗೆ ಮನಸು ತತ್ತರಿಸದೇ ವಿರಕ್ತಿಯಿಂದಿರಬೇಕೇ? ಎಂಬ ಪ್ರಶ್ನೆಯನ್ನು ಕವಿ ಮುಂದಿಟ್ಟಿದ್ದಾರೆ.
ಇAಥ ನೋವಿನಿಂದ ತತ್ತರಿಸಿದ ಜೀವ, ಅದರ ಪರಿಹಾರಕ್ಕಾಗಿ ಹಂಬಲಿಸುವುದು ಸಹಜ; ಆದರೆ ಅದಕ್ಕೆ ಸಿಗುವ ಪ್ರತಿಕ್ರಿಯೆ ಎಂಥದ್ದು..?

ಉಸಿರಿರುವಷ್ಟು ದಿನ ಮಿಥ್ಯ ಹೀನಾಯ ನಡೆ
ನಿಂತ ಮೇಲೆ ವಿನಾಯಿತಿ,
ಪಾಪ ಪುಣ್ಯದ ಲೆಕ್ಕಾಚಾರ
ಗೇಣು ಹೊಟ್ಟೆಗಾಗಿ ಕಚ್ಚಾಟ
ತುಂಬಿದ ಮರುಕ್ಷಣ ಉದರ ಭರ್ತಿ
ಮನದ ಕಿಚ್ಚು..? ಅಪೂರ್ಣ
ಮತ್ತೆ ಶುರು ವ್ಯರ್ಥ ಡೊಂಬರಾಟ (ಮನದ ಕಿಚ್ಚಿಗೆ)

ಎನ್ನುವಲ್ಲಿ ಬೆಂದು-ನೊಂದು ನಮ್ಮ ಮನಸ್ಸಿನ ಪರಿಹಾರದ ಬೇಡಿಕೆಗಾಗಿ ಆ ಎಲ್ಲವುಗಳ ಪಾಲುದಾರರಾದ ನಮ್ಮ ನಾಯಕರ ಸ್ಪಂದನೆಯ ಬೂಟಾಟಿಕೆತನಗಳು ನೊಂದವರ ಮತ್ತು ಆ ನೋವಿಗೆ ಕಾರಣರಾದ ಇಬ್ಬರ ಮನಸ್ಸನ್ನು ತಣಿಸಲು ಸಾಧ್ಯವಿಲ್ಲ. ಒಬ್ಬರ ಬದುಕನ್ನು, ಮನಸ್ಸನ್ನು ನೋಯಿಸಬೇಕೆಂಬುವರ ಮನಸ್ಸು ತಾನೇ ಮೊದಲು ಸ್ವಾರ್ಥ ಲಾಲಸೆಗೀಡಾಗಿ ನೆಮ್ಮದಿಯನ್ನು ಕಳೆದುಕೊಳ್ಳುತ್ತದೆಂಬ ಸತ್ಯಕ್ಕೆ ನಾವೆಲ್ಲರೂ ಜಾಣ ಕುರುಡರಾಗುತ್ತೇವೆ. ಹಾಗಾಗಿ ಕ್ಷೋಬೆಗೊಂಡ ಆ ಮನದ ಬೆಂಕಿಗೆ ಇಡೀ ಬಾಳೇ ಆಪೋಶನವಾಗುತ್ತದೆ. ಆದರೂ ಸ್ವಾರ್ಥವೆನ್ನುವ ನಾಲಿಗೆ ಚಪಲಕ್ಕೆ ಅಲಕ್ಷ್ಯತನ ಮತ್ತು ಅಜ್ಞಾನಗಳು ಪೋಷಕಾಂಶಗಳಾಗುತ್ತವೆ. ಹಾಗಾಗಿ ನಾಯಿ ರಕ್ತದ ರುಚಿಗೆ ಒಣ ಮೂಳೆಯನ್ನು ಕಡಿಯುವಂತೆ ವಿಕಾರತೆಗೀಡಾದ ಮನಸ್ಸು..

ನಾಯ ಬಾಯೊಳಗಣ ಎಲುಬು
ದಂತ ಪಂಕ್ತಿಗೆ ಸಿಲುಕಿ
ನರಳಿ ನಂಬಿದ ಮನಕೆ
ಬಿಕ್ಕಿ ಬಿಕ್ಕಿ ಸಂಕಟದಿ ಕೇಳುತಿದೆ
ಸರಿಯೇ ನಿನ್ನ ಕೋರೆಗೆ ನನ್ನ ಕರುಳು? (ನಾಯ ಬಾಯೊಳಗಣ ಎಲುಬು)

ಹೀಗೆ ಒಣಗಿದ ಎಲುಬನ್ನು ಕಡಿಯುತ್ತಾ ತನ್ನ ನಾಲಿಗೆಯನ್ನೇ ಕಡಿದುಕೊಂಡಾಗಲೊ ಎಚ್ಚರಗೊಂಡು, ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತದೆ ಅಂದರೆ ಆತ್ಮಸಾಕ್ಷಿ ಜಾಗೃತಗೊಳ್ಳುತ್ತದೆ. ಆದರೇನಂತೆ ನಮ್ಮ ಈ ಡೊಂಕು ಮನಸಿನ ನಾಯಕರಿಗೆ ನಾಚಿಕೆಯೇ ಮರೆತಂತಿರುತ್ತದೆ..

ಬರಗಾಲವಿರೆ ಅಲ್ಲಿಗೆ ಹೋಗಿ
ಆಶ್ವಾಸನೆಯ ನೀಡುವಿರಿ
ಬಡವರ ಶ್ವಾಸ ಕಟ್ಟಿಸಿ ನೀವು
ಹಣವನು ಏಸು ಎಣಿಸುವಿರಿ (ಡೊಂಕು ಮನಸಿನ ನಾಯಕರು)

ಎನ್ನುತ್ತ ಅವರ ಬದ್ಧತೆ, ಪ್ರಜ್ಞೆ ಕಳಕಳಿಗಳೊಂದಿಗೆ ಗಳಿಕೆಯ ಲೆಕ್ಕವನ್ನೂ ಕೂಡ ಕವಿ ಪ್ರಶ್ನಿಸುತ್ತಾರೆ. ಇಲ್ಲಿ ಕವಿ ವರದೇಂದ್ರರಿಗೆ ದಾಸ ಶ್ರೇಷ್ಠರಾದ ಪುರಂದರದಾಸರ ದಟ್ಟ ಪ್ರಭಾವ ಆಗಿರುವುದನ್ನು ಕಾಣುತ್ತೇವೆ.
ಹೀಗೆ ತೀರಾ ಮಲಿನಗೊಂಡ ನಮ್ಮ ಪರಿಸರಕ್ಕೆ ಕನ್ನಡಿಯಾಗುವುದರೊಂದಿಗೆ, ಬದುಕಿನ ನೋವು ಸಂಕಟಗಳಿಗೆ ಧ್ವನಿಯಾಗುತ್ತಾ, ಅದರ ಅಂಕು ಡೊಂಕುಗಳನ್ನು ತಿದ್ದುವ ಪ್ರಜ್ಞೆಯಾಗುವ ಕವಿಯ ಹೊಣೆಗಾರಿಕೆಯನ್ನು ನಿರ್ವಹಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗುವ ಕವಿ ವರದೇಂದ್ರರವರು ಬದುಕಿನ ಗಂಭೀರತೆಯ ಅನಾವರಣಗೊಳಿಸುತ್ತಾರೆ.

ಒಟ್ಟಿನಲ್ಲಿ ಗೆಳೆಯ ಕೆ.ವರದೇಂದ್ರ ಅವರ ಈ ಚೊಚ್ಚಲ ಕೃತಿ ಅವರಲ್ಲಿ ಕಾಡುವ ಸಂಕೋಚವನ್ನು ಮೀರಿ ಪ್ರಬುದ್ಧತೆಯೊಂದಿಗೆ ಓದುಗರ ಮುಂದೆ ಪ್ರಕಟಗೊಳ್ಳುತ್ತಿದೆ. ಲೋಕದ ಆಗು ಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಸಂವೇದನಾಶೀಲವಾದ ಕವಿಗೆ ಅವುಗಳ ಅಭಿವ್ಯಕ್ತಿಗಾಗಿ ಆತನ ಮನಸ್ಸು ಯಾವುದೇ ಕಾರಣಕ್ಕೂ ವಿಕಾರಗೊಳ್ಳದೇ, ಆಕ್ರೋಶ ರೂಪವನ್ನು ತಾಳದೇ, ಧ್ಯಾನಸ್ಥ ಸ್ಥಿತಿಯಿಂದ ಅವುಗಳನ್ನು ಅರಗಿಸಿಕೊಂಡು ಸಂಯಮತೆಯಿAದ ಶಬ್ದ ಸಂಸ್ಕಾರವನ್ನು ನೀಡಬೇಕು. ಅಂದಾಗಲೇ ಕಾವ್ಯಕ್ಕೆ ರುಚಿಯೂ, ಶಕ್ತಿಯೂ, ಸೌಂದರ್ಯವೂ ಪ್ರಾಪ್ತವಾಗುತ್ತದೆ. ಅಂಥ ಕಾವ್ಯ ಸಹೃದಯರ ಎದೆಯನ್ನು ಕರಗಿಸುತ್ತದೆ. ಭಾವಗಳನ್ನು ಶುದ್ಧಗೊಳಿಸುತ್ತದೆ, ಬದುಕಿನ ಪರಿವರ್ತನೆಯ ಸಾಧನವಾಗುತ್ತದೆ.
ಈ ಹಿನ್ನೆಲೆಯಲ್ಲಿ ತಮ್ಮ ಸುತ್ತಲಿನ ಬದುಕಿನ ಪರಿಸ್ಥಿತಿಗೆ ಸ್ಪಂದಿಸುತ್ತಿರುವ ಕವಿ ವರದೇಂದ್ರರವರ ಮನಸ್ಸು, ಬಾಳಿನ ಸಂಕಟಗಳನ್ನು ಸುಡುವ ಕಿಚ್ಚಾಗಿ ರೂಪಗೊಂಡು ಆ ಕಿಚ್ಚು ನೀರೊಳಗಣ ಬೆಂಕಿಯಂತೆ ನೇರವಾಗಿ ಪ್ರಕಟಗೊಳ್ಳದೇ, ಮೃದುವಾದ ಬಂಧಗಳ ಮೂಲಕ ಲೋಕದ ಕೇಡನ್ನು ಸುಡುವ ಕಾಯಕದಲ್ಲಿ ನಿರತವಾಗಿರುವುದನ್ನು ನಾವಿಲ್ಲಿ ಅರಿಯಬಹುದಾಗಿದೆ. ಹಾಗಾಗಿ ‘ಹರಿದ ಹೊಕ್ಕಳ ಬಳ್ಳಿ’ಯಿಂದ ರೂಪ ಪಡೆದ ಕವಿತೆಗಳೆಲ್ಲವೂ ಅವರ ಹೊಕ್ಕಳ ಪ್ರೀತಿಯಿಂದಲೇ ಮೈದಾಳಿ, ಜೀವಪರ ಕಾಳಜಿಯ ಕಾವ್ಯದ ಮನೋಭಿಲಾಷೆಗೆ ಶಕ್ತಿಯಾಗಿ ನಮ್ಮ ಬದುಕಿನ ಭರವಸೆಗಳಾಗುವುದರೊಂದಿಗೆ ಸಂಕಟದ ಜೀವಗಳಿಗೆ ಬರೀ ಸಾಂತ್ವನವಾಗದೇ, ಧೈರ್ಯ-ಸ್ಥೈರ್ಯ ಮತ್ತು ಆತ್ಮಬಲಗಳಾಗಿ ಚಿರಸ್ಥಾಯಿಯಾಗುತ್ತವೆ. ಈ ಕಾರಣವಾಗಿ ಕವಿಮಿತ್ರ ವರದೇಂದ್ರರವರು ನಮ್ಮೆಲ್ಲರ ಪ್ರೀತಿಯಾಗುತ್ತಾರೆ, ಅಭಿನಂದನಾರ್ಹರಾಗುತ್ತಾರೆ.


ಡಾ.ಕೆ.ಶಶಿಕಾಂತ
ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು
ಲಿಂಗಸೂಗೂರು

Don`t copy text!