ಅಪ್ಪ ಎಂದರೆ!!


ಅಪ್ಪ ಎಂದರೆ ಬರೀ ಆಕಾಶವಲ್ಲ, ಅಪರಿಮಿತ ಬ್ರಹ್ಮಾಂಡ. ಅಪ್ಪ ಎಂದರೆ ಬರೀ ಮರವಲ್ಲ ಹೆಮ್ಮರ! ತಾನೇ ದುಡಿದು ತಾನೇ ತಂದು, ತನ್ನ ಹೊಟ್ಟೆ ತುಂಬದಿದ್ದರೂ ಕುಟುಂಬದ ಎಲ್ಲಾ ಪ್ರಭಾರಗಳನ್ನೂ ವಹಿಸಿಕೊಳ್ಳುವ ಅಪ್ಪ ಅಪ್ರತಿಮ ಸಾಧಕ!. ಅಪ್ಪ ಎಂದರೆ ಎಲ್ಲವನ್ನೂ ಎದುರಿಸಿ ಮತ್ತೇ ನಿಲ್ಲಬಲ್ಲ ಪರ್ವತ! ಅಪ್ಪ ಇದ್ದರೆ ಮನೆಯಲ್ಲಿ ಒಂಥರಾ ನೆಮ್ಮದಿ, ತೃಪ್ತಿ, ಸಡಗರ, ಸಮಾಧಾನ. ಅಪ್ಪ ಇದ್ದಾರೆಂಬುದೇ ಬದುಕಿಗೊಂದು ಛಲ! ಅಪ್ಪನ ಬಗೆಗೆ ಅದೆಷ್ಟು ಹೇಳಿಕೊಂಡರೂ ಸಾಲದು.

ಇಂಥ ಅಪ್ಪನ ಗುಣಗಳಲ್ಲಿ ಗಂಡಿನ ಗಡಸುತನ, ಸಿಟ್ಟು, ಅಸಹನೆ, ಕೋಪ, ಮುನಿಸು, ದರ್ಪ, ಗರ್ವಗಳೂ ಇರುವುದನ್ನು ನೋಡಿದ್ದೇವೆ. ಆದರೆ ನಮ್ಯ ನಡತೆ, ಮೃದು ಮನಸ್ಸು, ಮೌನ ಮನೋಭಾವ, ಅನುರಾಗ, ಅನುಕಂಪ, ತಾಯಿಯ ಮನೋಧರ್ಮಗಳನ್ನೇ ಹೋಲುವ ಅಪ್ಪಂದಿರೂ ಇದ್ದಾರೆ. ಜಗತ್ತಿಗೆ ಅದೆಷ್ಟು ಬರಡು ಬರಡಾಗಿದ್ದರೂ ಮಕ್ಕಳಿಗಾಗಿ ಮಾತ್ರ ಅಪ್ಪ, ಬಲಿಷ್ಠರೇ!!
ಮಕ್ಕಳ ವಿಕಸನಕ್ಕಾಗಿ ಅಪ್ಪ ಅದೇನೇನೋ ಮಾಡುತ್ತಾರಂತೆ. ನಮ್ಮಪ್ಪ ವಿಭಿನ್ನ, ವೈವಿಧ್ಯಮಯ ವ್ಯಕ್ತಿತ್ವ ಹೊಂದಿದವರು, ಎಂದೂ ತಿದ್ದಿ ತೀಡಿ ಬುದ್ಧಿ ಹೇಳಲು ಬಲ ಪ್ರಯೋಗ ಮಾಡಲೇ ಇಲ್ಲ. ಇದಕ್ಕೊಂದು‌‌ ನಿದರ್ಶನ ಎಂದರೆ ಒಮ್ಮೆ ನಮ್ಮ ಅಣ್ಣ ತಮ್ಮ ತರಗತಿಯ ಹುಡುಗರೊಂದಿಗೆ ಜಗಳವಾಡಿ ಮನೆಗೆ ಬಂದು ಅಪ್ಪರವರನ್ನು ಕರೆದುಕೊಂಡು ಹೋಗಿ ಆ ಹುಡುಗರನ್ನು ಬೈಯ್ಯಲು ಹೇಳಿದ್ದರಂತೆ, ಆಗ ಅಪ್ಪ ಅಣ್ಣನೊಂದಿಗೆ ಹೋಗಿ, ಆ ಹುಡುಗರನ್ನು ಕರೆದು ತನ್ನ ಜೇಬಿನಲ್ಲಿದ್ದ ಚಾಕಲೇಟುಗಳನ್ನು ಕೊಟ್ಟು “ಮಕ್ಕಳೇ ನೀವೆಲ್ಲಾ ಒಂದೇ! ಹಿಂಗಿಲ್ಲಾ ಜಗಳವಾಡಬಾರದು” ಎಂದು ಮುದ್ದು ಮುದ್ದಾಗಿ ಮಾತಾಡಿ ಬಂದಿದ್ದರಂತೆ.

ಅಣ್ಣನವರು, “ನಮ್ಮಪ್ಪ ಅಂದರೆ ಹಂಗೆ ಹಿಂಗೆ ಬಂದು ನಿಮ್ಮೆಲ್ಲರಿಗೊಂದು ಗತಿ ಕಾಣಿಸುತ್ತಾರೆ” ಎಂದು ಹೇಳಿಕೊಂಡಿದ್ದು ಅಪ್ಪನ ಮೃದು ಸ್ವಭಾವ ದಿಂದಾಗಿ ಮುಜುಗರಕ್ಕೀಡಾಗಿದ್ದರಂತೆ. ಇದಕ್ಕಾಗಿಯೇ ಇರಬಹುದು ನಮ್ಮೂರಿನ ಜನ ನಮ್ಮಪ್ಪರವರಿಗೆ ದೇವರಂಥ ಮನುಷ್ಯ ಎಂದು ಹೇಳುತ್ತಿದ್ದರು. ಇಂಥ ಅಪರೂಪದ ಸ್ವಭಾವ ಹೊಂದಿದ್ದ ಅಪ್ಪ ತಮ್ಮ ಸಿಟ್ಟನ್ನು ನಮ್ಮ ಮೇಲೆ ತೋರಿಸಲೇ ಇಲ್ಲ.

ಪ್ರಶಾಂತ ಸಾಗರದಂತಿದ್ದ ಅಪ್ಪ ನಿಜಕ್ಕೂ ಅಂತರ್ಗತ ಅಮೂಲ್ಯ, ಅಮೋಘ, ಅಸಿಮ ಜ್ಞಾನಿ. ನಮ್ಮ ಬದುಕಿನಲ್ಲಿ ನಡೆವ ಪ್ರತಿಯೊಂದು ಆಗುಹೋಗುಗಳನ್ನು ವಿವರಿಸಲು ಅವರಲ್ಲೊಂದು ನೀತಿ ಕಥೆ ಇದ್ದೇ ಇರುತ್ತಿತ್ತು. ಕಥೆಗಳ ಮೂಲಕವೇ ಜೀವನ ಪಾಠ ಕಲಿಸಿಕೊಟ್ಟಿದ್ದು ಅಪ್ಪ. ಮಕ್ಕಳನ್ನು ತನ್ನ ಕುಡಿಗಳೆಂದಷ್ಟೇ ಅಲ್ಲದೇ ಸಮಾಜದ ಭಾವಿ ಪ್ರಜೆಗಳೆಂದೇ ತಿಳಿದು ಎಲ್ಲಾ ಥರದ ನೈತಿಕತೆ, ಹೊಣೆಗಾರಿಕೆ, ಜವಾಬ್ದಾರಿಗಳನ್ನೂ ಹೇಳಿಕೊಟ್ಟವರು. ಆದ್ದರಿಂದ ಮಕ್ಕಳೊಂದಿಗೆ ಗೆಳೆಯನಂತೆಯೇ ವರ್ತಿಸುತ್ತಿದ್ದರು.

ಅದೆಷ್ಟೋ ಜನರು ಹೇಳುತ್ತಾರೆ ಅಪ್ಪ ಅಂದರೆ ಭಯ ಅಂತ. ಆದರೆ ನಮಗೆ ಅಂಥ ಅನುಭವವೇ ಇಲ್ಲ. ನಮ್ಮ ಅಪ್ಪ ಅದೆಷ್ಟು ಪ್ರೀತಿ‌ ನೀಡುತ್ತಿದ್ದರೆಂದರೆ ನಾವೆಲ್ಲಾ ಚಿಕ್ಕವರಿದ್ದಾಗ ಒಮ್ಮೆ ಅಪ್ಪನ ಕಾಲಿಗೆ ಅದೇನೋ ಪೆಟ್ಟಾಗಿ ರಕ್ತ ಬರುತ್ತಿತ್ತು. ಅಮ್ಮ ತುಂಬಾ ಗಾಬರಿಯಿಂದ ಅಪ್ಪನ ಕಾಲಿಗೆ ಔಷಧಿ ಲೇಪಿಸುತ್ತಿದ್ದರು. ಅಮ್ಮನ ಮುಖದಲ್ಲಿ ನೋವು, ಸಂಕಷ್ಟ ಎದ್ದು ಕಾಣುತ್ತಿದ್ದವು. ಆದರೆ ಮಕ್ಕಳಾದ ನಾವೆಲ್ಲಾ ತುಂಬಾ ಸಂತಸ ಪಡುತ್ತಿದ್ದೆವು. ಅದನ್ನರಿತ ಅಮ್ಮ “ ನೀವೆಲ್ಲಾ ಹುಚ್ಚರಾಗಿದ್ದೀರಿಯೇ ನಿಮ್ಮ ಅಪ್ಪನವರಿಗೆ ಗಾಯ ಆಗಿದೆ. ಅವರು ನೋವಿನಲ್ಲಿದ್ದಾರೆ, ನೀವ್ಯಾಕೆ ಸಂತಸ ಪಡುತ್ತಿದ್ದೀರಾ?” ಎಂದು ಬೈಯ್ಯಲಾರಂಭಿಸಿದರು, ಆಗ ನಾವೆಲ್ಲಾ “ಇಲ್ಲಮ್ಮ, ಅಪ್ಪನವರಿಗೆ ಗಾಯ ಆಗಿದೆ ಅಲ್ವಾ? ನಾಳೆ ಅಪ್ಪ ಮನೆಯಲ್ಲೇ ಇರುತ್ತಾರೆ, ನಮ್ಮೊಂದಿಗೆಯೇ ಕಾಲ ಕಳೆಯುತ್ತಾರೆ ಅಲ್ವಾ” ಎಂದು ಹೇಳಿದಾಗ ಅಪ್ಪ ಅಮ್ಮ ಇಬ್ಬರೂ ನಗಲಾರಂಭಿಸಿದ್ದರು.

ಹೀಗೆ ಅಪ್ಪ ಮನೆಯಲ್ಲಿ ನಮ್ಮೊಟ್ಟಿಗೆಯೇ ಇದ್ದರೆ ಅದುವೇ ಸ್ವರ್ಗ. ಆ ಸ್ವರ್ಗಾನುಭವ ನೀಡುವ ಅಪ್ಪನವರ ಹರಸಾಹಸ ನಮಗೆಲ್ಲಾ ಅಂದು ತಿಳಿಯುತ್ತಿರಲಿಲ್ಲ. ಮಕ್ಕಳನ್ನು ಒಳ್ಳೆಯ ಬದುಕು ಕಟ್ಟಿಕೊಡಲು ಅವರು ಮಾಡಿದ ತ್ಯಾಗ ಬಲಿದಾನಗಳೇನು ನಮಗೆ ಅರಿವಾಗಲೇ ಇಲ್ಲ. ಅದೆಷ್ಟು ತೊಂದರೆಗಳಿದ್ದರೂ ನಮಗೆ ಮಾತ್ರ ಅಪ್ಪನಲ್ಲಿ ಬದುಕುವ ಛಲ, ನಮ್ಮ ಬಗೆಗೆ ಇರುವ ಪ್ರೀತಿ ಮಾತ್ರ ಕಂಡಿದ್ದವು.

ಬೆಳೆದು ದೊಡ್ಡವರಾದ ಮೇಲೂ ನಾವೆಲ್ಲಾ ಮಕ್ಕಳು ಅಪ್ಪನವರ ಸುತ್ತ ಕೂತುಕೊಂಡು ಅವರ ಬಾಲ್ಯದ ಕಥೆಗಳು ಮತ್ತು ಅನುಭವಗಳನ್ನು ಕೇಳುತ್ತಿದ್ದೆವು. ಅಪ್ಪ ಅದೆಷ್ಟು ಕಷ್ಟ ಪಟ್ಟು ನಮ್ಮನ್ನೆಲ್ಲಾ ಬೆಳೆಸಿದ್ದಾರೆಂದು ದೊಡ್ಡವರಾದ ಮೇಲೆ ತಿಳಿದಂತಾಯಿತು.
ಈ ಕೊರೊನಾ ಮಹಾಮಾರಿಗೆ ತುತ್ತಾಗಿ ಎಪ್ಪತ್ತೆರಡರ ಜೀವ ಸತತ ಹತ್ತು ಹನ್ನೆರಡು ದಿನಗಳ ವರೆಗೆ ಜೀವನ್ಮರಣದ ಹೋರಾಟದಲ್ಲಿ ಹೊರಟೇ ಹೋಯಿತು. ಅದೆಷ್ಟು ಕಷ್ಟಗಳು ಬಂದರೂ ನಗು ಮುಖ ಬೀರುತ್ತಿದ್ದ ಅಪ್ಪನವರು ಈ ಪಿಶಾಚಿ ಕೊರೊನಾದಿಂದಾಗಿ ನಗುವುದನ್ನೇ ಬಿಟ್ಟಿದ್ದರು. ಅದೆಷ್ಟು ತೊಂದರೆ ಆದರೂ ಹೇಳಿಕೊಳ್ಳದ ಅಪ್ಪ ಕೊರೊನಾ ದಿಂದಾಗುತ್ತಿದ್ದ ಉಸಿರಾಟದ ತೊಂದರೆಯನ್ನೂ ಹೇಳಲೇ ಇಲ್ಲ.

ತಾನಾಗಿಯೇ ಐದಾರು ದಿನಗಳ ವರೆಗೆ ಒಬ್ಬಂಟಿಯಾಗಿ ಅದನ್ನು ನಿಭಾಯಿಸಿಕೊಂಡು ಹೋದರು. ನಮ್ಮ ಬದುಕಿನ ಹೀರೋ ಹೀಗೆ ನಮ್ಮ ಮುಂದೆ ಪ್ರಾಣ ಬಿಡುತ್ತಿರುವ ಸಂದರ್ಭ ಬರುತ್ತದೆ ಎಂದು, ಅಂದುಕೊಂಡಿರಲೇ ಇಲ್ಲ! ಅಪ್ಪರವರ ಪ್ರಾಣ ಉಳಿಸಲು ಬೆಂಗಳೂರಿನ ಬೀದಿ ಬೀದಿಗೆ ರಾತ್ರಿ ಒಂದು ಎರಡು ಗಂಟೆಗಳೆನ್ನದೇ ಬೈಕ್ ಮೇಲೆ ಆಸ್ಪತ್ರೆ ಆಸ್ಪತ್ರೆ ಸುತ್ತಾಡಿದೆವು. ಮನೆಗೆ ಬಂದು ಬಿರಿಯಾನಿ ತಿಂದು ಹೋದ ಅದೆಷ್ಟೋ ಗೆಳೆಯರೂ ಮೂಕರಾಗಿಬಿಟ್ಟಿದ್ದರು. ತಮ್ಮ ಕಷ್ಟಗಳಿಗಾಗಿ, ಹೆಣ್ಣು ಮಕ್ಕಳ ಮದುವೆಗಳಿಗಾಗಿ, ಹಬ್ಬ ಹರಿದಿನಗಳಲ್ಲಿ ಖುಷಿ ಅಂತ ಹಣ ಕೇಳಲು ಮನೆಗೆ ಬರುತ್ತಿದ್ದ, ಕರೆ ಮಾಡುತ್ತಿದ್ದ ಗೆಳೆಯರು, ಸಂಬಂಧಿಗಳು ಕುಶಲ, ಕ್ಷೇಮ ವಿಚಾರಿಸಲೂ ಬಡವರಾಗಿ ಬಿಟ್ಟಿದ್ದರು. ಕೊನೆಗೆ ಮನುಷ್ಯತ್ವ ಉಳಿದಿದೆ ಎಂಬಂತೆ ಅನೇಕ ಅಪರಿಚಿತರು ನಮಗೆ ಸಹಕಾರ ನೀಡಿದರು. ನಮಗೆ ಒಂದ್ಚೂರು ನೋವಾಗದಂತೆ ನೋಡಿಕೊಳ್ಳುತ್ತಿದ್ದ ಅಪ್ಪರವರನ್ನು ಉಳಿಸಲು ಅಣ್ಣಂದಿರೂ ಹಗಲಿರುಳು ಎನ್ನದೆ ಜೊತೆಯಾಗಿಯೇ ಉಪಚರಿಸಿದರು.

ಸಿಕ್ಕ ಸಿಕ್ಕವರನ್ನು ಬೇಡಿಕೊಂಡಾಗ ಕೊನೇ ಕ್ಷಣಗಳಲ್ಲಿ ಆಸ್ಪತ್ರೆ ವ್ಯವಸ್ಥೆ ಮಾಡಲಾಯಿತು. ಆದರೆ ನಮ್ಮ ಪ್ರಾರ್ಥನೆಗಳೆಲ್ಲಾ ವ್ಯರ್ಥವಾದವು ದೇವರಿಗೆ ಮಾತ್ರ ನಮ್ಮ ಮೇಲೆ ಕರುಣೆ ಬರಲೇ ಇಲ್ಲ!! ಅಪ್ಪರವರಿಗೆ ಉಳಿಸುವ ನಮ್ಮ ಪ್ರಯತ್ನದ ಮುಂದೆ ದೇವರು ತೋರಿಸಿದ ಪ್ರೀತಿ ಗೆದ್ದು ಬಿಟ್ಟಿತು. ಅಪ್ಪ ನಮ್ಮನ್ನಗಲಿ ದೇವರತ್ತ ಹೋರಟು ಬಿಟ್ಟರು.
ನಿತ್ಯ ಚಾಚು ತಪ್ಪದೇ ಬಾಗಿಲು ತೆರೆದು ನನ್ನ ಬೀಳ್ಕೊಡುತ್ತಿದ್ದ ಅಪ್ಪ ದಿಢೀರನೇ ಹೊಗಿಬಿಟ್ಟಿದ್ದಾರೆ. ಕೆಲಸಕ್ಕಾಗಿ ಹೊರಡಲು ರೆಡಿಯಾಗಿ ನಿಂತರೆ ನೀರಿನ ಬಾಟಲ್ ತುಂಬಿ ಕೈಗೆ ಕೊಡುತ್ತಿದ್ದ ಅಪ್ಪ ಈಗ ಇಲ್ಲದಿದ್ದರಿಂದ ಆ ಬಾಟಲಿನ ನೀರೂ ಸಹ ಗಂಟಲಿನಿಂದ ಇಳಿಯುವಾಗ ಅಪ್ಪನಿಲ್ಲದ ಕಟು ಸತ್ಯವನ್ನು ಮತ್ತೇ ಮತ್ತೇ ನೆನಪಿಸುತ್ತಿದೆ. ಒಂದು ದಿನವೂ ಮನೆಯ ಹೊಸ್ತಿಲು ಒಬ್ಬಂಟಿಯಾಗಿ ದಾಟಲೂ ಬಿಡದೇ ಜೊತೆಯಲ್ಲಿ ಕಾವಲುಗಾರನಾಗಿದ್ದ ಅಪ್ಪ ಈಗಿಲ್ಲದಿರುವಾಗ ಪ್ರತಿ ಹೆಜ್ಜೆ ಹೆಜ್ಜೆಗೂ ತಾಗುವ ಕವಲುದಾರಿಗಳು ತೊಂದರೆಯನ್ನುಂಟುಮಾಡುತ್ತಿವೆ.
“ಅದೆಷ್ಟು ದೊಡ್ಡವರಾದರೂ ಅಪ್ಪ ಅಮ್ಮರನ್ನು ಮರೆಯುವಷ್ಟು ಬಲಿಷ್ಠತೆ ಬರೋದೇ ಇಲ್ಲ!!
ಅದೆಷ್ಟು ಮುಂದೆ ನೆಡದರೂ ಅಪ್ಪ ಅಮ್ಮನ ಕೈ ಹಿಡಿದು ಹಿಂದೆ ಸಾಗಿದ ದಾರಿ ಮರೆಯಕಾಗಲ್ಲ!!
ಅದೆಷ್ಟು ಧೈರ್ಯದಿಂದ ಹಿಗ್ಗಿದರೂ,
ಅಪ್ಪ ಅಮ್ಮನ ಅಗಲಿಕೆ, ಕುಗ್ಗಿಸದೇ ಬಿಡೋದಿಲ್ಲ”!!
ಆದರೂ ವಿಧಿಯಾಟ ನಾವೆಲ್ಲರೂ ಎದುರಿಸಲೇ ಬೇಕು. ಏನೇ ನೋವು ಬಂದರೂ ಬಾಗದ ಅಪ್ಪನ ಗುಣ,ಛಲ ಮಾತ್ರ ಇಂದಿಗೂ ನಮ್ಮಲ್ಲಿದೆ. ಎಲ್ಲವನ್ನೂ ನಿಭಾಯಿಸುವ ಆತ್ಮವಿಶ್ವಾಸ, ಅಪ್ಪ ಕಲಿಸಿಕೊಟ್ಟ ಅಮೂಲ್ಯ ಸಂಸ್ಕಾರಗಳು ನಮ್ಮೊಟ್ಟಿಗಿವೆ. ಅಪ್ಪ ದೈಹಿಕವಾಗಿಲ್ಲದಿದ್ದರೂ ಮಾನಸಿಕವಾಗಿ ಎಂದಿಗೂ ನಮ್ಮೊಟ್ಟಿಗಿದ್ದಾರೆಂದೇ ಬದುಕುತ್ತಿದ್ದೇವೆ. ಬಾಲ್ಯದಿಂದಲೂ ಅಪ್ಪಂದಿರ ದಿನವನ್ನು ತುಂಬಾ ಸಡಗರದಿಂದ ಆಚರಿಸುತ್ತಿದ್ದೆವು. ಇಂದು ಈ ದಿನ ಅಪ್ಪ ಜೊತೆಗಿಲ್ಲ ಎಂಬ ಕಟು ಸತ್ಯದೊಂದಿಗೆ ಬದುಕುವುದು‌ ಸ್ವಲ್ಪ, ಇಲ್ಲ ಇಲ್ಲ ಬಲೂ ಭಾರ ಅನ್ನಿಸುತ್ತಿದೆ!!! ಆದರೂ ಬದುಕಬೇಕು, ಬದುಕುತ್ತಿದ್ದೇವೆ!!!

ಫರ್ಹಾನಾಜ್ ಮಸ್ಕಿ (ತಂದೆ- ಖ್ವಾಜಾ ಗೇಸುದರಾಜ್ ಹುಸೇನ್ ಕಿರನ್ ಬ್ಯಾಟರೀಸ್ ಮಸ್ಕಿ), ಸಹಾಯಕ ಪ್ರಾಧ್ಯಾಪಕರು ನೆಲಮಂಗಲ, ಬೆಂಗಳೂರು

Don`t copy text!