ಬೆಳ್ಳಿಗನೂರು ಬೆಳಕಾಗಲಿಲ್ಲ, ವಿದ್ಯೂತ್ ಕಂಬಕ್ಕೆ ಕಾದಿಹರು ಗ್ರಾಮಸ್ಥರು
e- ಸುದ್ದಿ ಮಸ್ಕಿ
ವರದಿ:ವೀರೇಶ ಸೌದ್ರಿ
ಬೆಳ್ಳಿಗನೂರು ಹೆಸರಿಗೆ ತಕ್ಕಂತೆ ಬೆಳಕಾಗಬೇಕಾಗಿತ್ತು. ಆದರೆ ಕತ್ತಲಲ್ಲಿ ಕಳೆದು ಹೋಗುತ್ತಿದೆ. ಈ ಊರಿನ ಬಗ್ಗೆ ತಿಳಿದುಕೊಳ್ಳಲು ಗ್ರಾಮ ಸುತ್ತಾಡಿದಾಗ ಹತ್ತಾರು ಸಮಸ್ಯೆಗಳು ದುಪ್ಪೆಂದು ಕಣ್ಣಿಗೆ ರಾಚುತ್ತವೆ.
ಬಳಗಾನೂರು ಹೊಬಳಿಯ ಗೌಡನಬಾವಿ ಪಂಚಾಯಿತಿಯ ಬೆಳ್ಳಿಗನೂರಿನ ಜನಸಂಖ್ಯೆ ೧೩೦೦ ಜನ. ೯೫೦ ಜನ ಮತದಾರರು ಇದ್ದು ೩ ಜನ ಪಂಚಾಯತಿ ಸದಸ್ಯರಿದ್ದಾರೆ.
ಇಲ್ಲಿನ ಬಹುತೇಕ ಜನ ರೈತಾಪಿ ವರ್ಗದವರು, ಕೃಷಿಕಾರ್ಮಿಕರು ಹೆಚ್ಚಿಗೆ ಓದದಿದ್ದರು ತಮ್ಮ ಮಕ್ಕಳು ಓದಲಿ ವಿದ್ಯಾವಂತರಾಗಲಿ ಎಂದು ಹಂಬಲಿಸುವವರಾಗಿದ್ದಾರೆ.
ಶಿಕ್ಷಣ ಃ ೧ ರಿಂದ ೮ ನೇ ತರಗತಿ ವರೆಗೆ ಶಾಲೆಯಿದ್ದು ೫ ಜನ ಶಿಕ್ಷಕರಿದ್ದಾರೆ. ೧೧೬ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ತಕ್ಕೆಂತೆ ಶಾಲ ಕೊಠಡಿಗಳಿಲ್ಲ. ಕೇವಲ ೪ ಕೊಠಡಿಗಳಿದ್ದು ಅವುಗಳಲ್ಲಿ ಎರಡು ಕೊಠಡಿಗಳು ಶಿಥಿಲಗೊಂಡಿವೆ. ಉಳಿದ ಎರಡು ಕೊಠಡಿಗಳಲ್ಲಿ ಶಾಲ ಕಚೇರಿ ಮತ್ತು ತರಗತಿಯನ್ನು ಒಂದೇ ಕೊಠಡಿಯಲ್ಲಿದ್ದು ಪಾಠ ಮಾಡುವ ದುಸ್ಥಿತಿ ಬಂದೊದಗಿದೆ. ಕಂಪೌಂಡ ಬಿದ್ದಿದ್ದರಿಂದ ಶಾಲೆಯಲ್ಲಿ ದನಕರುಗಳು, ಹಂದಿ ನಾಯಿಗಳು ನುಗ್ಗಿ ಸ್ವಚ್ಛತೆಗೆ ತೊಂದರೆ ಮಾಡುತ್ತಿವೆ ಎಂದು ಶಿಕ್ಷಕರು ಅಸಮದಾನ ವ್ಯಕ್ತಪಡಿಸುತ್ತಾರೆ.
೯ ಮತ್ತು ೧೦ ನೇ ತರಗತಿಗಾಗಿ ವಿದ್ಯಾರ್ಥಿಗಳು ೫ ಕೀ.ಮೀ ಅಂತರದಲ್ಲಿರುವ ಬಳಗಾನೂರು ಪಟ್ಟಣಕ್ಕೆ ಹೋಗುತ್ತಿದ್ದು ಬಸ್ಸಿನ ಸೌಕರ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳು ನಡೆದುಕೊಂಡು, ದಾರಿಯಲ್ಲಿ ಹೋಗುವ ದ್ವಿಚಕ್ರವಾಹನಗಳ ಸವಾರರ ಸಹಾಯ ಪಡೆದುಕೊಂಡು ಇಲ್ಲವೇ ಅಟೋಗಳಿಗೆ ಹಣ ಕೊಟ್ಟು ಹೋಗುತ್ತಿರುವದರಿಂದ ಪಾಲಕರು ಮಕ್ಕಳನ್ನು ಪ್ರೌಢಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಶಾಲ ಆವರಣದಲ್ಲಿ ೨೦೧೫-೧೬ ನೇ ಸಾಲಿನಲ್ಲಿ ಅಂದಾಜು ೧೨ ಲಕ್ಷ ರೂ ಕುಡಿಯುವ ವೆಚ್ಚದಲ್ಲಿ ನೀರಿನ ಟ್ಯಾಂಕ್ ಕಟ್ಟಲಾಗಿದೆ. ಆದರೆ ಟ್ಯಾಂಕ್‌ಗೆ ಇದುವರೆಗೂ ಪೈಪ್ ಲೈನ್ ಇಲ್ಲ, ಟ್ಯಾಂಕ್‌ಗೆ ನೀರು ಸರಬರಾಜು ಮಾಡಿಲ್ಲ.
ಸರ್ಕಾರದ ಹಣ ಅನವಶ್ಯಕವಾಗಿ ದುಂದುವಚ್ಛವಾಗಿ ಗುತ್ತೇದಾರರ ಜೇಬು ಸೇರಿತು ಎಂದು ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಾರೆ. ಮಕ್ಕಳು ಟ್ಯಾಂಕ್‌ನ ಮೆಟ್ಟಿಲು ಹತ್ತಿ ಇಳಿಯುವದು ಮಾಡುತ್ತಿರುವದರಿಂದ ಎಲ್ಲಿ ಬಿದ್ದು ಗಾಯಮಾಡಿಕೊಳ್ಳತ್ತಾರೆ ಎಂದು ಪಾಲಕರು ಆತಂಕದಲ್ಲಿ ಇರುತ್ತಾರೆ. ಉಪಯೋಗವಿಲ್ಲದ ಮತ್ತು ಈಗಗಾಲೇ ಟ್ಯಾಂಕ್ ಶಿಥಿಲವಾಗಿರುವದರಿಂದ ನೆಲಸಮ ಮಾಡಬೇಕು. ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕೊಠಡಿಗಳು, ಶೌಚಾಲಯ ಮತ್ತು ಕಂಪೌಂಡ ನಿರ್ಮಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಳ್ಳದ ದಂಡಿಗೆ ಬೊರವೆಲ್ಲ ಕೊರೆಸಿದ್ದು ಅಲ್ಲಿಂದ ನೇರವಾಗಿ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ನೀರನ್ನು ಶುದ್ಧ ಮಾಡುವ ವ್ಯವಸ್ಥೆ ಇಲ್ಲದೆ, ನೇರವಾಗಿ ಬೊರವೆಲ್ ನೀರು ಕುಡಿಯುವದರಿಂದ ಕಾಲು ನೋವು ಕಾಣಿಸಿಕೊಳ್ಳುತ್ತಿದೆ.
ಬಸ್ ಸೆಲ್ಟರ್ ಅವಶ್ಯ ಃ ಬೆಳ್ಳಿಗನೂರು ಬಳಗಾನೂರು ಮತ್ತು ಪೊತ್ನಾಳ ನಡುವೆ ೧೬ ಕೀಮೀ ಅಂತರವಿದೆ. ಈ ಎರಡು ಊರುಗಳ ಮದ್ಯೆ ಬೆಳ್ಳಿಗನೂರು ಇದ್ದು ಬಳಗನೂರು, ಮಸ್ಕಿ ಮತ್ತು ಪೊತ್ನಾಳ ಗ್ರಾಮಗಳಿಗೆ ಹೋಗಬೇಕಾದರೆ ಊರಿಗೆ ಹೊಂದಿಕೊಂಡು ಕಳೆದ ೩೦ ವರ್ಷಗಳ ಹಿಂದೆ ಬಸ್ ಶೆಲ್ಟರ್ ನಿರ್ಮಿಸಿದ್ದಾರೆ. ಆದರೆ ಅಲ್ಲಿ ತಂಗುವುದಿಲ್ಲ. ಸೆಲ್ಟರ್ ಚತ್ತು ಶಿಥಿಲವಾಗಿದ್ದು ಸಿಮೆಂಟು ಉದರೂತ್ತಿದ್ದೆ. ಕೂಡಲು ಆಸನದ ವ್ಯವಸ್ಥೆ ಇಲ್ಲ ಹಾಗಾಗಿ ಪ್ರಯಾಣಿಕರು ರಸ್ತೆಯ ಬದಿಯಲ್ಲಿ ಬಸ್‌ಗಾಗಿ ಕಾಯುವಂತ ಪರಸ್ಥಿತಿ ಬಂದಿದೆ. ಈಗ ಹೊಸ ಬಸ್ ಶೆಲ್ಟರ್ ನಿರ್ಮಾಣ ಅವಶ್ಯಕವಾಗಿದೆ. ”
ರಕ್ಷಣೆ ಇಲ್ಲದ ಸ್ಮಶಾನ ಃ ಗ್ರಾಮದಲ್ಲಿ ಯಾರದರೂ ಮರಣ ಹಂದಿದರೆ ಅವರನ್ನು ಹೂಳಲು ಸರಿಯಾದ ಜಾಗವಿಲ್ಲ. ಕೇವಲ ೨೦ ಗುಂಟೆ ಸ್ಮಶಾನ ಭೂಮಿಯಿದ್ದು ಅದರಲ್ಲಿ ಹೆಣವನ್ನು ಮಣ್ಣ ಮಾಡಬೇಕಾಗಿದೆ. ಜಾಗದ ಬಂದೋಬಸ್ತ ಇಲ್ಲದೆ ಅತಿಕ್ರಮಣವಾಗಿದೆ ಎಂಬ ಆರೋಪವು ಇದೆ.
ಹಾಳದ ರಸ್ತೆಗಳು ಃ ಗ್ರಾಮಕ್ಕೆ ಹೊಂದಿಕೊಂಡು ಹೊಲಗಳಿಗೆ ಹೋಗಬೇಕಾದ ರಸ್ತೆಗಳು ಸರಿಯಾಗಿಲ್ಲದೆ ಜಾಲಿಗಿಡಗಳಿಂದ ಆವೃತ್ತವಾಗಿ ರಸ್ತೆ ಮೇಲೆ ಎಲ್ಲಾ ಕಡೆ ನೀರು ನಿಂತು ತಿರುಗಾಡಲು ಬಾರದಂತಾಗಿದೆ. ಯುಗಾದಿ ಮತ್ತು ಇನ್ನಿತರ ಧಾರ್ಮಿಕ ಆಚರಣೆಗಾಗಿ ಇದೇ ಮಾರ್ಗದಲ್ಲಿ ಹೋಗಬೇಕಾದರೆ ನೀರಿನ ಹೊಂಡ ದಾಟಿಕೊಂಡು ಹೋಗಬೇಕು. ಇದರಿಂದಾಗಿ ಸರ್ವಾಜನಿಕರಿಗೆ ತೊಂದರೆಯಾಗಿದ್ದು ರಸ್ತೆಗೆ ಮರಮ್ ಹಾಕಿ ತಿರುಗಾಡಲು ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒಕ್ಕೂರಲಿನ ಅಭಿಪ್ರಾಯವಾಗಿದೆ.
ಕಳಪೆ ಸಿ.ಸಿ.ರಸ್ತೆ ಃ ಗ್ರಾಮದಲ್ಲಿ ಸಿಸಿ ರಸ್ತೆಗಳು ಕಳಪೆಯಾಗಿವೆ. ಮಾಡಿದ ಸ್ವಲ್ಪ ದಿನಗಳಲ್ಲಿ ಕಂಕರ್ ತೇಲಿದ್ದು ತಿರುಗಾಡುವಾಗ ಕಾಳಿಗೆ ಚುಚ್ಚುತ್ತಿವೆ. ಇನ್ನೂ ಕೆಲ ಕಡೆ ಸಿಸಿ ರಸ್ತೆ ಮಾಡಿಲ್ಲ. ಚರಂಡಿ ಇಲ್ಲ. ಮಳೆ ನೀರು ಬೊರವೆಲ್ಲ ನೀರು ರಸ್ತೆಗೆ ಹರಿಯುತ್ತಿದ್ದು ರಸ್ತೆ ಮೇಲಿರುವ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಪಾಚಿಗಟ್ಟಿ ಅನೇಕ ಸಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಎಸ್.ಸಿ ಕಾಲೋನಿಯಲ್ಲಿ ಸರಿಯಾದ ಚರಂಡಿ ಇಲ್ಲದೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.
ರಸ್ತೆ ಬದಿಯಲ್ಲಿ ಶೌಚ ಃ ಗ್ರಾಮದಲ್ಲಿ ಬಹುತೆಕರು ತಮ್ಮ ಮನೆಯಲ್ಲಿ ಶೌಚಗೃಹ ಕಟ್ಟಿಕೊಂಡಿದ್ದರು ಅದನ್ನು ಬಳಸುವಲ್ಲಿ ಸಂಕೋಚ ಪಡುತ್ತಾರೆ. ಈಗಲೂ ಸೌಚಕ್ಕೆ ರಸ್ತೆ ಬದಿಯ ಜಾಗದ ಮೊರೆಹೋಗುತ್ತಿರುವುದು ಕಂಡು ಬಂದಿದೆ. ಹಾಗಾಗಿ ಮಹಿಳೆಯರಿಗೆ ರಸ್ತೆ ಬದಿ ಶೌಚದಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.
ಹಕ್ಕು ಪತ್ರ ಮತ್ತು ವಿದ್ಯೂತ್ ಕಂಬಕ್ಕೆ ಬೇಡಿಕೆ ಃ ಕಳೆದ ಮೂವತ್ತು ವರ್ಷಗಳಿಂದ ಎಸ್.ಸಿ ವಾರ್ಡನಲ್ಲಿ ೨೦ ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇದುವರೆಗೂ ಅವರಿಗೆ ಹಕ್ಕು ಪತ್ರ ಸಿಕ್ಕಿಲ್ಲ. ತಹಸೀಲ್ ಕಚೇರಿ ಸೇರಿದಂತೆ ಪಂಚಾಯಿತಿಗಳಿಗೆ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ಚಾಂದಾಸಾಬ ಎರಿಯಾದಲ್ಲಿ ಹೊಸ ಮನೆಗಳಾಗಿವೆ ಅಲ್ಲಿನ ಜನರಿಗೆ ವಿದ್ಯೂತ್ ಕಂಬಗಳಿಲ್ಲದೆ ಕತ್ತಲಲ್ಲಿ ದಿನ ದೂಡುವಂತಾಗಿದೆ. ಜೆಸ್ಕಾಂ ಇಲಾಖೆಗೆ ಅಲೆದಾಡುತ್ತಿದ್ದು ಕಂಬಗಳು ಬಂದ ತಕ್ಷಣವೇ ಹಾಕಲಾಗುತ್ತದೆ ಎಂಬ ಆರಿಕೆಯ ಉತ್ತರ ಸಿದ್ದವಿರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅನೇಕ ಬೇಡಿಕೆಗಳನ್ನು ಮಂಡಿಸಿದ್ದು ಪರಿಹಾರವಾಗದಿದ್ದಲ್ಲಿ ಗ್ರಾಮಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಬರಮಾಡಿಕೊಳ್ಳುವುದಿಲ್ಲ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ