ವಾಸ್ತವದ ಒಡಲು
ಸಿದ್ದರೇಖೆಯ ಅಭಿವ್ಯಕ್ತಿಯೊಂದಿಗೆ ಸಂಧ್ಯಾಕಾಲ
‘ಮಕ್ಕಳು ದೇವರಂತೆ’ ಎನ್ನುವ ಮಾತಿದೆ. ಮನುಷ್ಯನಲ್ಲಿ ಎಲ್ಲಾ ಸಕಾರ, ನಕಾರ ಗುಣಗಳೂ ಇರುತ್ತವೆ. ಆದರೆ ದೈವೀ ಗುಣ ಎನ್ನುವುದು ಕೇವಲ ದೇವರಿಗೆ ಮಾತ್ರ ಸಾಧ್ಯ ಎನ್ನುವ ಭಾವನೆ. ಮನುಷ್ಯ ಕೂಡ ದೇವರಾಗಬಹುದೆಂದು ನಿರೂಪಿಸುವ ಶಕ್ತಿ ಮಕ್ಕಳಲ್ಲಿರುತ್ತದೆ. ಬಹುಶಃ ಅವರಲ್ಲಿರುವ ಆ ಮುಗ್ಧತೆಗೆ ದೇವರನ್ನು ಹೋಲಿಸುತ್ತೇವೋ ಏನೊ? ಇಷ್ಟು ಮಾತ್ರ ಸತ್ಯ, ಮಕ್ಕಳಲ್ಲಿ ಕಪಟವರಿಯದ ಮುಗ್ಧ ಮನಸು ಇರುತ್ತದೆ. ಇರುವುದನ್ನು ಇರುವಂತೆಯೇ ಗ್ರಹಿಸುವ ಶಕ್ತಿ ಇಂದಿನ ಯುವ ಮನಸ್ಥಿತಿಗೆ ಇರುತ್ತದೆ. ಅದೇ ದೇವರು! ಅದೇ ದೈವೀ ಸ್ವರೂಪ!
ಗದುಗಿನ ಖ್ಯಾತ ಆಯುರ್ವೇದಿಕ್ ತಜ್ಞ ಡಾ.ಐ.ಬಿ.ಕೊಟ್ಟೂರಶೆಟ್ಟಿಯವರ ಕುರಿತು ಯಲ್ಲಪ್ಪ ಹಂಚಿನಾಳ ಅವರು ಬರೆದ ‘ಬೆವರ ಹನಿಯ ಪಯಣ’ ಕೃತಿ ಲೋಕಾರ್ಪಣೆಗಾಗಿ ಕಲಬುರಗಿಯಿಂದ ಗದುಗಿಗೆ ಹೋದ ಸಂದರ್ಭ. ಅದೊಂದು ಸಾಹಿತ್ಯಕ, ಪಾರಿವಾರಿಕ ಕಾರ್ಯಕ್ರಮ. ಅದರಲ್ಲಿ ಯಾಪಲಪರವಿ, ಕೊಟ್ಟೂರಶೆಟ್ಟಿ, ಹಳ್ಳೂರ ಪರಿವಾರದ ಆರು ಜನ ಹೆಣ್ಣುಮಕ್ಕಳು ಸಭಾ ಭವನದ ತುಂಬೆಲ್ಲಾ ಕಣ್ಸೆಳೆಯುವಂತೆ ಓಡಾಡಿ, ಇಡೀ ವಾತಾವರಣವನ್ನು ಆಹ್ಲಾದಗೊಳಿಸಿದರು.
ಮರುದಿನ ಅವರೆಲ್ಲರ ಮಧ್ಯೆ ರೇಖಾ ಮತ್ತು ಸಿದ್ದು ಯಾಪಲಪರವಿಯವರ ಮಗಳು ಅಭಿವ್ಯಕ್ತಿಯೊಂದಿಗೆ ಒಂದಿಷ್ಟು ಸಮಯ ಕಳೆಯುವಂತಾಯಿತು. ಗದುಗಿನ ಭೀಷ್ಮ ಕೆರೆಯ ದಂಡೆಯ ಮೇಲಿರುವ ಬಸವಣ್ಣನ ಮೂರ್ತಿ, ತೋಂಟದಾರ್ಯ ಶ್ರೀಗಳ ಮಠ, ಅಲ್ಲೇ ನಡೆಯುತ್ತಿದ್ದ ಜಾತ್ರೆಗೆ ಪ್ರೊ.ಸಿದ್ದು ಯಾಪಲಪರವಿ ಮತ್ತವರ ಮಗಳು ಅಭಿವ್ಯಕ್ತಿಯೊಂದಿಗೆ ಮೌನವಾಗಿ ಜೊತೆಗೂಡಿದೆ.
ಅಭಿವ್ಯಕ್ತಿ ಮಂಗಳೂರಿನ ನಿಟ್ಟೆಯಲಿ ಡಿಪ್ಲೊಮಾ ಇನ್ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿ, ಅಂತಿಮ ವರ್ಷದ ಪದವಿಯಲ್ಲಿ ಬೆಂಗಳೂರಿನಲ್ಲಿರುವ ಅವಳು. ಯಾವಾಗಲೂ ಅಪ್ ಟು ಡೇಟ್ ಮಾಡರ್ನ್ ಗರ್ಲ್! ಕಣ್ಸೆಳೆಯುವ ಹೇರ್ ಸ್ಟೈಲ್, ಲಿಪ್‌ಸ್ಟಿಕ್‌ನ ಆಕರ್ಷಣೆ. ಅವಳ ಬಿಳಿ ವರ್ಣಕೆ ಮುದದ ಮೆಲುಮಾತಿನ ಸಿಂಗಾರ. ನನ್ನೊಂದಿಗೆ ಮುಕ್ತವಾಗಿ ಬೆರೆತು, ಹೊಟ್ಟೆ ತುಂಬ ನಕ್ಕಾಗ ಪ್ರೀತಿ, ವಾತ್ಸಲ್ಯ ಎದೆತುಂಬಿ ಬಂದಿತು. ಅವಳು ತನ್ನ ಅಪ್ಪನೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ರೀತಿ, ಆಡುವ ಮಾತು, ಹುಸಿಕೋಪ, ತಿಳಿಹೇಳುವ ಬಗೆ, ಎಲ್ಲವನ್ನೂ ಮುಗುಳ್ನಗೆಯೊಂದಿಗೆ ಗಮನಿಸಿದೆ.
ಗದಗ ನಗರದ ನಡುವೆ ಎದ್ದು ನಿಂತಿರುವ ಬಸವಣ್ಣನ ಮೂರ್ತಿಯನ್ನು ದೂರದಿಂದ ನೋಡಿದ್ದೆ. ಅಲ್ಲಿಗೆ ಮೊದಲು ಹೋದೆವು. ಭೀಷ್ಮ ಕೆರೆ ದಂಡೆ ಮೇಲೆ ನೂರಾ ಹದಿನಾರು ಅಡಿ ಎತ್ತರದ ಭಕ್ತಿ ಭಂಡಾರಿಯನ್ನು ನೋಡಿ ಮೂಕಳಾದೆ. ಆ ಉದ್ಯಾನವನದಲ್ಲಿ ಕಾಲಿಟ್ಟರೆ ಪಕ್ಕದ ಕೆರೆ, ಸುತ್ತಮುತ್ತಲಿನ ಹಸಿರು, ವಿಶಾಲ ಆಕಾಶ, ಕಾಲ್ದಾರಿಯಲಿ ನಡೆಯುತ್ತ ಬಸವಣ್ಣನನ್ನು ತಲೆಯೆತ್ತಿ ನೋಡುವುದೇ ಚಂದ!
ಮೂರ್ತಿಯ ತಳಭಾಗದಲ್ಲಿ ಚಿಕ್ಕದೊಂದು ಮ್ಯೂಸಿಯಂ. ಹನ್ನೆರಡನೇ ಶತಮಾನದ ಶರಣರ ಕಾಲವನ್ನು ಪ್ರತಿಬಿಂಬಿಸುವ ಕಲಾತ್ಮಕ ಶರಣರ ಮೂರ್ತಿಗಳು. ವಚನ ಸಾಹಿತ್ಯದಿಂದ ಆಯ್ದ ವಚನಗಳಿಗೆ ಅನುಗುಣವಾಗಿ ದೃಶ್ಯಗಳನ್ನು ಪ್ರತಿಷ್ಠಾಪಿಸಿದ್ದಾರೆ. ಆ ಆಯ್ದ ವಚನಗಳು, ಶರಣರ ಕಲಾಕೃತಿಗಳು, ಅಂದಿನ ಇಡೀ ಕಲ್ಯಾಣ ಕ್ರಾಂತಿಯ ಕತೆಯನ್ನು ನೋಡುಗರಿಗೆ ಕಟ್ಟಿ ಕೊಡುತ್ತವೆ. ಶರಣರ ಬದುಕನ್ನು ಮೆಲುಕು ಹಾಕುತ್ತ ಅಪ್ಪ, ಮಗಳೊಂದಿಗೆ ಹಜ್ಜೆ ಹಾಕಿದೆ. ಮಧ್ಯೆ ಮಧ್ಯೆ ಫೋಟೊ ತೆಗೆಯುತ್ತ, ಸೆಲ್ಫಿಗೆ ನಗಿಸುತ್ತ ಅಭಿವ್ಯಕ್ತಿ ರಂಜಿಸಿದಳು.
ಅಣ್ಣ ಬಸವಣ್ಣನ ಮುಗಿಲು ಮುಟ್ಟಿದ ವ್ಯಕ್ತಿತ್ವಕ್ಕೆ ಪ್ರತೀಕವಾದ ಬೃಹದಾಕಾರ ಕಲೆಯ ಶಿಲೆ ಮೂಕಗೊಳಿಸುತ್ತದೆ. ಸುತ್ತಲೂ ಸುಂದರ ತಾಣ, ಆಕರ್ಷಣೀಯ ನೋಟ, ‘ಸಂಧ್ಯಾಕಾಲ’ದ ಮುದ ನೀಡುವ ಸಮಯ. ಬೀಸುವ ತಂಗಾಳಿಗೆ ಮೈಯೊಡ್ಡಿ ಇನ್ನೂ ಇರಬೇಕೆನ್ನುವಾಗಲೇ ಗಾರ್ಡ್ ಹೊರ ಕಳಿಸಲು ಸಿದ್ಧನಾಗಿದ್ದ. ‘ಸಂಜಿಯಾದ್ರ ಎಣ್ಣಿ ಹೊಡೈವ್ರ ಕಾಟ, ಗೊತ್ತೈತಲ್ರೀ, ನಡೀರಿ ನಡೀರಿ…’ ಶೀಟಿ ಹೊಡೆಯುತ್ತ, ಜೋರು ಮಾಡಿ ಹೊರ ಹಾಕಿದಂತೆ ಮಾಡಿದ. ಈ ಕಹಿಸತ್ಯದ ಆಳ ಮೆಲುಕು ಹಾಕುತ್ತ ಹೊರ ಬಂದೆವು.
ಅಲ್ಲಿಂದ ತೋಂಟದಾರ್ಯ ಮಠಕ್ಕೆ ಹೋದೆವು. ಹಿಂದೆ ಅಜ್ಜಾವ್ರು ಲಿಂಗೈಕ್ಯರಾದ ಸಂದರ್ಭದಲ್ಲಿ, ಮಾಧ್ಯಮದಲಿ ನೋಡಿದ ದೃಶ್ಯ ನೆನಪಾಯಿತು. ಒಂದು ಕ್ಷಣ ಮೈಯೆಲ್ಲಾ ರೋಮಾಂಚನ! ಬಹುದಿನದ ಆಸೆಯೊಂದು ಈಡೇರಿದಂತೆ, ಅಲ್ಲಿದ್ದ ಭಸ್ಮ ಹಚ್ಚಿಕೊಂಡು, ಕಣ್ಮುಚ್ಚಿ ನಮಸ್ಕರಿಸಿದೆ.
ಮಠದ ಹೊರವಲಯದಲ್ಲಿ ಜಾತ್ರೆ ನಡೆದಿತ್ತು. ಅಭಿವ್ಯಕ್ತಿ ಜಾತ್ರೆಗೆ ಹೋಗೋಣ ಎಂದಾಗ ನನ್ನೊಳಗಿನ ಬಾಲ್ಯ ಥಟ್ಟಂತ ಜಾಗೃತವಾಯಿತು. ‘ಹಾ!’ ಎಂದವಳು ಮತ್ತೆ ‘ನಡಿ ನಡಿ ಹೋಗಣ’ ಎಂದೆ. ಐವತ್ತು ದಾಟಿದ ನನ್ನ ಕೈ ಹಿಡಿದು, ಕಾಳಜಿಯಿಂದ ಕೊಲಂಬಸ್ ಮತ್ತು ಜಾಯಿಂಟ್ ವ್ಹೀಲ್‌ನಲ್ಲಿ ಕೂರಿಸಿದಳು. ಎದುರುಬದುರು ಗಟ್ಟಿಯಾಗಿ ಹಿಡಿದು ಕುಳಿತೆವು. ನಿಧಾನ ತಿರುಗಲು ಆರಂಭಿಸಿದಾಗ ಹೊಟ್ಟೆಯೆಲ್ಲಾ ಕಚಗುಳಿ. ತೊಟ್ಟಿಲು ಜೀಕುವಾಗ ಚೀರುತ್ತ ನಕ್ಕು ನಕ್ಕು, ಸರಿಯಾಗುವಷ್ಟರಲ್ಲಿ ಮತ್ತೆ ಇನ್ನೊಂದು ಸುತ್ತಿನ ಕಚಗುಳಿ! ಮೇಲೆ ಏರಿದಾಗ ಇಡೀ ಗದಗ ದರ್ಶನ. ಅಷ್ಟರಲ್ಲಿ ಕಚಗುಳಿಯ ಕುಚೋದ್ಯ. ಇಬ್ಬರೂ ಮನದುಂಬಿ ಚೀರಿ, ನಕ್ಕು ನಲಿದೆವು.
ಹೀಗೆ ಜಾತ್ರೆಯಲಿ ತಿರುಗಾಡುವ, ಆಟಗಳಲ್ಲಿ ಕೂತು ನಲಿಯುವ, ಬಳೆ ಖರೀದಿಸುವ ಹಂಬಲ ಯಾವತ್ತೂ ನನ್ನಲ್ಲಿತ್ತು. ಆದರೆ ಈಗ ಸಂಸಾರ, ಸಾಹಿತ್ಯಿಕ ಚಟುವಟಿಕೆಗಳ ನಡುವೆ ಬಿಡುವಿಲ್ಲದೆ ಆ ಕಡೆ ಗಮನವಿರಲಿಲ್ಲ. ಮಕ್ಕಳು ದೊಡ್ಡವರಾಗಿ ಜಾತ್ರೆಗೆ ಹೋಗುವುದೇ ನಿಂತಿತ್ತು. ಮೊಮ್ಮಕ್ಕಳು ಮುಂಬೈನಲ್ಲಿರುವುದರಿಂದ ಕೈಗೆ ಸಿಗುವುದಿಲ್ಲ. ಹತ್ತು ವರ್ಷಗಳ ಹಿಂದಿನ ಅನುಭವವನ್ನು ಮರುಕಳಿಸಿದವಳು ಅಭಿವ್ಯಕ್ತಿ! ಮಗಳಂತೆ ಸುತ್ತಾಡಿಸಿದಳು.
ಟ್ರೈನ್ ಟೈಮ್ ಆಗುತ್ತದೆಂದು ಜಾತ್ರೆಯಿಂದ ಬೇಗ ಹೊರ ಬಂದೆವು. ಅಲ್ಲಿ ಗಿರಮಿಟ್, ವಡಾ, ಬದನೆಕಾಯಿ ಭಜಿ ಕೈಬೀಸಿ ಕರೆಯುತ್ತಿತ್ತು.
ದಾರಿಯಲ್ಲಿ ಅಭಿವ್ಯಕ್ತಿ, ‘ಆಂಟಿ ಪಾನಿಪೂರಿ ತಿಂತೀರಿ? ಇಲ್ಲಿ ಛಲೋ ಸಿಗುತ್ತ’ ಎಂದಾಗ ಪುಳಕ. ನನಗಿಷ್ಟವಾದ ಪಾನಿಪೂರಿ ಇವಳಿಗೆ ಹೇಗೆ ಗೊತ್ತು? ಆಶ್ಚರ್ಯ! ತಿನ್ನಲು ‘ಒಲ್ಲೆ’ ಎನ್ನುವ ಮಾತೇ ಇಲ್ಲ. ನಕ್ಕು ‘ಹೂಂ’ ಅಂದೆ. ‘ಅಪ್ಪ ಅಪ್ಪ ಕಾರ್ ನಿಲ್ಸು’ ಎಂದ್ಹೇಳಿ, ನನ್ನ ಕೈ ಹಿಡಿದು ರಸ್ತೆ ದಾಟಿಸಿ ಪಾನಿಪೂರಿಯವನ ಎದುರು ನಿಲ್ಲಿಸಿದಳು. ಇಬ್ಬರೂ ವಿವಿಧ ಪಾನಿಯ ರುಚಿ ನೋಡುತ್ತ ಸವಿದೆವು. ಕೊನೆಗೆ ಕೊಡುವ ಸುಕ್ಕಾ ಪೂರಿ ಫಿಲ್ಲಿಂಗನ್ನು ಕೈಯಲ್ಲಿ ಹಾಗೇ ಹಿಡಿದುಕೊಂಡು ಬಂದು, ಕಾರಿನಲ್ಲಿ ಕುಳಿತ ತನ್ನಪ್ಪನಿಗೆ ತಿನಿಸಿದಾಗ ನನ್ನ ಹೃದಯದಲ್ಲಿ ಆನಂದಬಾಷ್ಪ!
ಒಂದು ಸುತ್ತು ಹೊಡೆದು ಮನೆಗೆ ಬಂದಾಗ ರೇಖಾ ಕಾಯುತ್ತಿದ್ದರು. ಎಲ್ಲರೂ ಸೇರಿ ತಿನಿಸುಗಳ ಮುಗಿಸಿದೆವು. ಅವಸರದಲ್ಲಿ ಭೇಟಿಯಾಗುವವರನ್ನೆಲ್ಲಾ ಭೇಟಿ ಮಾಡಿಸಿ, ಸ್ಟೇಷನ್ ತಲುಪಿಸಿದರು. ಬೀಳ್ಕೊಂಡು ಕಲಬುರಗಿಯ ಕಡೆ ರೈಲು ಮುಖ ಮಾಡಿ ಹೊರಟಾಗ ಗದುಗಿನ ಗಿರಮಿಟ್, ವಡಾ, ಬದನೆಕಾಯಿ ಭಜಿ ತಿಂದ ಘಮಲು ಪಸರಿಸಿತು. ಮನದಲ್ಲಿ ಸಿದ್ದರೇಖೆಯ ಮಗಳು ಅಭಿವ್ಯಕ್ತಿಯ ನಗು ಆವರಿಸಿತು. ಶರಣಾರ್ಥಿಯಲಿ ಕಳೆದ ದಿನ ಕಣ್ಣಿಗೆ ಕಟ್ಟಿದಂತಾಗಿ ಮನದಲಿ ಶರಣೆಂದೆ.
–ಸಿಕಾ ಕಲಬುರ್ಗಿ