ಬಸವಣ್ಣನರ ವಚನಗಳು ಮತ್ತು ಭಗವದ್ಗೀತೆಯ ಶ್ಲೋಕಗಳು ತುಲನಾತ್ಮಕ ಚಿಂತನೆ

ಬಸವಣ್ಣನರ ವಚನಗಳು ಮತ್ತು ಭಗವದ್ಗೀತೆಯ ಶ್ಲೋಕಗಳು ತುಲನಾತ್ಮಕ ಚಿಂತನೆ

ಶೈವಧರ್ಮವು ಸೃಷ್ಟಿ ಆರಂಭವಾದಾಗಿಂದ ಇದೆ.12ನೇ ಶತಮಾನದಲ್ಲಿ ಧರ್ಮಕ್ರಾಂತಿಯ ಜ್ಯೋತಿ, ವಿಶ್ವಗುರುಬಸವಣ್ಣನವರು ಶೈವಧರ್ಮವನ್ನು ಪುನರುಜ್ಜೀವನಗೊಳಿಸಿದರು.ವಚನ ಸಾಹಿತ್ಯವು ಅಷ್ಟಾವರಣ, ಪಂಚಾಚಾರ,ಷಟ್ಸ್ಥಲಗಳೆಂಬ ತ್ರಯಿಗಳಿಂದ ಕೂಡಿದುದಾಗಿದೆ. ಆಡು ಭಾಷೆಯಲ್ಲಿ,ಸಹಜವಾಗಿ, ಸರಳವಾಗಿಎಲ್ಲ ಜಾತಿ ಧರ್ಮ ಬಾಂಧವರಿಗೆ ತಿಳಿಯುವಂತೆ ವಚನಗಳನ್ನು ರಚಿಸಿದ್ದಾರೆ.ವಚನ ಸಾಹಿತ್ಯ ಅನುಷ್ಠಾನ ಪ್ರಧಾನ ಹಾಗೂ ಆಚರಣೆಯ ಪವಿತ್ರ ಗ್ರಂಥವಾಗಿದೆ. ಭಗವದ್ಗೀತೆಯು ಆತ್ಮ ವಿದ್ಯೆ, ಆತ್ಮತತ್ವವನ್ನು ತಿಳಿಸುವ ಮಹಾನ್ ಗ್ರಂಥವಾಗಿದೆ.ಕರ್ಮದ ಕರ್ತೃತ್ವ, ಹಾಗೂ ಕರ್ಮ ಫಲದ ಭೋಕ್ತೃತ್ವ,ಇವೆರಡನ್ನೂ ತ್ಯಾಗ ಮಾಡಿದಾಗ ಯೋಗ ಪ್ರಸ್ಥಾಪಿತವಾಗುತ್ತದೆ

ಯೋಗಸಾಧನೆಯಿಂದ ಬ್ರಹ್ಮವಿದ್ಯೆ ಪ್ರಾಪ್ತವಾಗುತ್ತದೆ .ಇದರಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತವೆಂಬ ತತ್ವಗಳನ್ನು ಹೇಳಲಾಗಿದೆ. ಬ್ರಹ್ಮಸೂತ್ರ, ವೇದಗಳು, ಉಪನಿಷತ್ತು, ಇವು ಪ್ರಸ್ಥಾನತ್ರಯಿಗಳಾಗಿವೆ. ಅವುಗಳ ಸಾರ ಭಗವದ್ಗಿತೆಯಾಗಿದೆ.
ವ್ಯಾಸಮಹರ್ಷಿಗಳು ಗೀತೆಯಲ್ಲಿ ಭಗವಂತನ ಮುಖದಿಂದ 700 ಶ್ಲೋಕಗಳನ್ನು ಹೇಳಿಸಿದ್ದಾರೆ. ಶೈವಧರ್ಮದಲ್ಲಿ, ಅಣ್ಣನವರ ಅನುಭವ ಮಂಟಪದಲ್ಲಿ 700 ಶಿವಶರಣ, ಶರಣೆಯರು ಸಾವಿರಾರು ತಮ್ಮ ದಿನ ನಿತ್ಯದ ಅನುಭವಗಳನ್ನೇ ವಚನಗಳನ್ನಾಗಿ ರಚಿಸಿದ್ದಾರೆ. ಗೀತೆಯಲ್ಲಿ ವರ್ಣನೀತಿ,ಜಾತಿಬೇಧ ಅವರು ಮಾಡುವ ಮೂಲ ಕಸಬುಗಳನ್ನವಲಂಬಿಸಿ ಹೇಳಲಾಗಿದೆ.ಆದರೆ ಬಸವಣ್ಣನವರು ಜಾತಿಬೇಧವನ್ನೇ ತೊಡೆದು ಹಾಕಿದ್ದರು .ಮೂಢನಂಬಿಕೆ
ಕರ್ಮಕಾಂಡದ ಕರ್ಮಠತೆಯನ್ನು, ಮೇಲು ಕೀಳು, ಉತ್ತಮ ಹೀನ, ಜಾತಿ ಮೌಢ್ಯತೆಗಳನ್ನು ಪ್ರಖರವಾಗಿ ವಿರೋಧಿಸಿ, ಸ್ವತಃ ಆಚರಿಸಿ ತೋರಿಸಿದಂಥ ಧೀಮಂತ ವ್ಯಕ್ತಿ.
ಗೀತೆಯು ಸಂವಾದ ಗ್ರಂಥವಾಗಿದೆ. ವಚನ ಸಾಹಿತ್ಯವು ಆಚರಿಸಿ ತೋರಿಸಿದ ಗ್ರಂಥವಾಗಿದೆ.
ಗೀತೆಯ ಶ್ಲೋಕಗಳು ಸಂಸ್ಕೃತದಲ್ಲಿದ್ದರೆ ,ವಚನಗಳು ಮಾತೃಭಾಷೆಯಲ್ಲಿ, ಹಳಗನ್ನಡದಲ್ಲಿವೆ. ಹೀಗಾಗಿ ಕನ್ನಡಿಗರ ಮನೆ ಮನೆಗಳಲ್ಲಿ, ಪೂಜ್ಯ ಬಸವಣ್ಣನವರಿಗೆ ಪವಿತ್ರ ಸ್ಥಾನವಿದೆ. ಒಂದಾದರೂ ವಚನ ಪ್ರತಿಯೊಬ್ಬ ಕನ್ನಡಿಗನಿಗೆ ಬಂದೇ ಬರುತ್ತದೆ.
ಗೀತೆಯಲ್ಲಿಯ ಶ್ಲೋಕಗಳು ಹಾಗೂ ವಚನ ಸಾಹಿತ್ಯದಲ್ಲಿ ಪದ ಪದಗಳು ಮಂತ್ರಮಯವಾಗಿವೆ. ಎರಡರಲ್ಲಿಯೂ ಪರಮಾತ್ಮನ ಪರಮ ರಹಸ್ಯ ತುಂಬಿ ತುಳುಕುತ್ತಲಿದೆ. ಸೃಷ್ಟಿಯ ಧರ್ಮ, ವ್ಯಷ್ಟಿಯ ಕರ್ಮ, ಸಮಷ್ಟಿಯ ಜ್ಞಾನ, ಪರಮೇಷ್ಟಿಯ ಪರಮ ತತ್ವ, ಎಲ್ಲವೂ ಅಡಕವಾಗಿದೆ. ಗೀತೆಯು ವಿಷಾದಯೋಗದಿಂದ ಆರಂಭವಾಗಿ ಪ್ರಸಾದಯೋಗದಲ್ಲಿ ಮುಕ್ತಾಯವಾಗುತ್ತದೆ. ಅಣ್ಣನ ವಚನ ಸಾಹಿತ್ಯ ಪೂರ್ಣ ಪ್ರಸಾದಮಯವಾಗಿದೆ.
ಈಗಿನ ಕಂಪ್ಯೂಟರ ಯುಗದಲ್ಲಿ ಎಷ್ಟೋ ಪ್ರಕಾರದ ಮ್ಯಾನೇಜಮೆಂಟ ಕೋರ್ಸಗಳಿವೆ. ಅವೆಲ್ಲ ಉಪಜೀವನಕ್ಕಾಗಿ ಮಾತ್ರ ಇವೆ. ಆತ್ಮೋನ್ನತಿಗಾಗಿ ,ಭಗವದ್ಗೀತೆಯಾಗಲಿ, ವಚನಸಾಹಿತ್ಯವಾಗಲಿ, ” One of the best business management’s course” ಎಂದು ಧೈರ್ಯದಿಂದ ಹೇಳಬಹುದು.

ಅನ್ನಪೂರ್ಣ ಸು ಸಕ್ರೋಜಿ
ಪುಣೆ.

Don`t copy text!