ಮನಕ್ಕಿದೆ ಮಹಾದೇವನ ಶಕ್ತಿ
ಸಕಲೇoದ್ರಿಯಂಗಳಲ್ಲಿ ವಿಕಾರಿಸುವ
ಮನವ ಸೆಳೆದು ನಿಂದಾತನೇ ಸುಖಿ.
ಪಂಚೇoದ್ರಿಯಂಗಳಿಚ್ಛೆಯಲ್ಲಿ ಮನಂಗೊಂಡು ಸುಳಿವಾತ ದುಃಖಿ
ಮನ ಬಹಿರ್ಮುಖವಾಗಲು ಮಾಯಾ ಪ್ರಪಂಚಿ.
ಮನವಂತರ್ಮುಖವಾದಡವಿರಳ ಜ್ಞಾನಿ.
ಮನವು ಮಹದಲ್ಲಿನಿಂದಡಾತ ಮುಕ್ತನು
ಮನೋರ್ಲಯವಾದಡೆ ಸೌರಾಷ್ಟ್ರ ಸೋಮೇಶ್ವರ
ಲಿಂಗದಲ್ಲಿ ಅಭೇದ್ಯನು.
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಮೊದಲಾದ ಇಂದ್ರಿಯಂಗಳಲ್ಲಿ ವಿಹರಿಸುತ್ತದೆ ಮನ. ವಿಹಾರ ಎಂದರೆ ತಿರುಗುವಿಕೆ. ವಿಕಾರ ಎಂದರೆ ವಸ್ತುವನ್ನು ತನ್ನದಾಗಿಸಿಕೊಳ್ಳುವ ಬಯಕೆ. ಹೂವನ್ನು ನೋಡುವುದು, ಅದರ ರೂಪ- ಬಣ್ಣ -ಗಾತ್ರಗಳನ್ನು ಗುರುತಿಸಿ ಆನಂದಿಸುವುದು ವಿಹಾರವಾದರೆ, ಆ ಹೂವನ್ನು ಕಿತ್ತು ತನ್ನದಾಗಿಸಿಕೊಳ್ಳಬೇಕೆನ್ನುವುದು ವಿಕಾರ, ವಿಹರಿಸಿದರೆ ತೊಂದರೆಯಿಲ್ಲ. ವಿಕಾರಗೋಳ್ಳುವುದರಿಂದ ದುಃಖವಿದೆ. ಹೀಗೆ ಹರಿದಾಡುವ ಮನವನ್ನು ನಿಲ್ಲಿಸಿದವರು ಸುಖಿಗಳಾಗುತ್ತಾರೆ. ಮನ ಹರಿದತ್ತ ಹೋದವರು ದುಃಖಿಗಳಾಗುತ್ತಾರೆ.
ಆಕಸ್ಮಿಕವಾಗಿ ರಾಜನ ಆಸ್ಥಾನಕ್ಕೆ ಒಬ್ಬ ಸಂತರು ಆಗಮಿಸುತ್ತಾರೆ. ಆದರೆ ರಾಜನಿಗೆ ನಮಸ್ಕರಿಸದೆ ಕುಳಿತು ಬಿಡುತ್ತಾರೆ. ಪಕ್ಕದಲ್ಲೇ ಇದ್ದ ಮಂತ್ರಿಯು, ‘ಸಂತರೇ ಮಹಾರಾಜರಿಗೆ ನಮಸ್ಕರಿಸಿ’ ಎನ್ನುತ್ತಾರೆ. “ಅಯ್ಯಾ ಮಂತ್ರಿ ನಿಮ್ಮ ರಾಜ ನನ್ನ ದಾಸನದಾಸ ಯಾರಿಗೆ ನಮಸ್ಕರಿಸಲಿ ಹೇಳು? ಎಂದಾಗ ಮಂತ್ರಿ ಗಾಬರಿಯಾದ. ಅದು ಹೇಗೆ ಅಂದ ರಾಜ, ಆಗ,
ಸಂತ: ರಾಜರೇ, ನೀವು ನಿಮ್ಮ ಮನ ಹೇಳಿದಹಾಗೆ ಕೇಳುವಿರೋ ಅಥವಾ ನಿಮ್ಮ ಮನಸ್ಸು ನೀವು ಹೇಳಿದ ಹಾಗೆ ಕೇಳುತ್ತದೆಯೋ?
ರಾಜ : ಸಂತರೇ,ಎಲ್ಲರೂ ನಾನು ಹೇಳಿದ ಹಾಗೆ ಕೇಳುತ್ತಾರೆ. ನಾನು ನನ್ನ ಮನಸ್ಸು ಹೇಳಿದ ಹಾಗೆ ಕೇಳುತ್ತೇನೆ.
ಸಂತ: ನೋಡಿ ಮಂತ್ರಿಗಳೇ, ಮನಸ್ಸು ನನ್ನ ದಾಸ. ಅದು ನಾನು ಹೇಳಿದಂತೆ ಕೇಳುತ್ತದೆ. ಆದರೆ ನಿಮ್ಮ ರಾಜ ಮನಸ್ಸು ಹೇಳಿದ ಹಾಗೆ ಕೇಳುತ್ತಾನೆ. ಅಂದ ಮೇಲೆ ನನ್ನ ದಾಸನ ದಾಸನಾದವನಿಗೆ ನಾನು ನಮಸ್ಕರಿಸಬೇಕೇ?
ಮನಸ್ಸು ಇಂದ್ರಿಯಗಳ ಮುಖಾಂತರ ಬಹಿರ್ಮುಖವಾಯಿತೆಂದರೆ ಮಾಯಾತ್ಮಕವಾದ ಪ್ರಪಂಚ ಪರ್ಯಟನ ಪ್ರಾರಂಭಿಸುತ್ತದೆ. ಬಯಸುತ್ತದೆ, ನೋಡುತ್ತದೆ, ಕೇಳುತ್ತದೆ, ರುಚಿಸುತ್ತದೆ, ಸ್ಪರ್ಶಿಸುತ್ತದೆ, ಇವೆಲ್ಲ ದೊರೆತರೆ ಸುಖಿಸುತ್ತದೆ. ಸಿಗದಿದ್ದರೆ ದುಃಖಿಸುತ್ತದೆ. ಹೀಗೆ ಸುಖ-ದುಃಖಗಳ ಕೊಳಚೆಯಲ್ಲಿ ಓಡಾಡುತ್ತದೆ. ಮನ ಅಂತರ್ಮುಖಿಯಾದರೆ, ವಸ್ತುವಿನ ರೂಪ- ಲಾವಣ್ಯ ಸುಖಗಳಿಗೆ ಮಾರುಹೋಗದೆ, ಅದರ ಸ್ವರೂಪವನ್ನರಿಯುತ್ತದೆ. ಈಗ ಕಾಣುವ ವಸ್ತುವಿನ ಜೊತೆಗೆ ಒಂದು ದಿನ ಕಾಣದಾಗುವಿಕೆಯ ನಶ್ವರತೆಯನ್ನೂ ಕಾಣುತ್ತದೆ. ಆಗ ಅವಿರಳ ಜ್ಞಾನಿ, ಅಂದರೆ ಪರಿಪೂರ್ಣ ಜ್ಞಾನಿಯಾಗುತ್ತದೆ. ಅದೇ ಮನ ಮಹದಲ್ಲಿ ಅಂದರೆ ಮಹಾಸತ್ಯವಾದ ಪರಮಾತ್ಮನಲ್ಲಿ ಅರ್ಥಾತ್ ಲಿಂಗದಲ್ಲಿ ನಿಂತರೆ, ಈ ಸುಖ -ದುಃಖಗಳ, ಜನನ -ಮರಣಗಳ ಬಲೆಯಿಂದ ಮುಕ್ತವಾಗುತ್ತದೆ. ನಿಂತ ಮನದ ಶಕ್ತಿ ಅಪಾರ, ಎನ್ನುತ್ತಾರೆ ಅನುಭಾವಿಗಳು, ಲಿಂಗದಲ್ಲಿ ಲೀಯವಾದ ತಕ್ಷಣವೇ ಮನ ಇಲ್ಲಿಂದಲೇ ಸರ್ವಜಗತ್ತನ್ನು ಅರಿಯಬಲ್ಲದು.ಏಕೆಂದರೆ ಮನ ಮಹಾದೇವನಲ್ಲಿ ಸಮರಸಗೊಂಡು ಮಹಾದೇವನೇ ಆಗುತ್ತದೆ. ಮನ ಲಯವಾಗುವ ಮುನ್ನ ವಿಹಾರ -ವಿಕಾರ ನಿಲ್ಲಬೇಕು. ಅಂತರ್ಮುಖಿಯಾಗಬೇಕು. ಲಿಂಗದಲ್ಲಿ ನಿಲ್ಲಬೇಕು, ನಂತರ ಲಿಂಗದಲ್ಲಿ ಲಯವಾಗಬೇಕು.
–ಶ್ರೀಮತಿ ರೇಖಾ ಶಿ ವಡಕಣ್ಣವರ್
ಲಕ್ಷ್ಮೇಶ್ವರ