ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.

ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.


ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.
ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.
ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು.
ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ
ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.

                      -ನೀಲಮ್ಮನ ವಚನ

ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದರೂ. ಅವರಲ್ಲಿ ಅತ್ಯಂತ ವಿಶಿಷ್ಟ ಪ್ರಮುಖ ಚಿಂತಕಿ ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಲೋಚನೆ ಅಥವಾ ನೀಲಾಂಬಿಕೆ ಮತ್ತು ನೀಲಮ್ಮ ಎಂದು ಕರೆಯಲ್ಪಟ್ಟವಳು.

ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲನೆಯವಳು ಸಹೋದರ ಮಾವ ಬಲದೇವನ ಮಗಳು. ನೀಲಾಂಬಿಕೆ ನೀಲಲೋಚನೆ ನೀಲಮ್ಮ ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನ ಅಪ್ಪ ಅಮ್ಮ ಇವರ ಬಗ್ಗೆ ಸಾಕಷ್ಟು ಗೊಂದಲಗಳು ಇವೆ .ಹರಿಹರ ಬಸವಣ್ಣನವರ ಮತ್ತು ಭೀಮ ಕವಿಗಳು ಮಡದಿ ನೀಲಾಂಬಿಕೆಯನ್ನು ಮಾಯಿದೇವಿ ಎಂದು ಕರೆದಿದ್ದಾರೆ. ಅಲ್ಲದೆ ಹರಿಹರನು ಸಿದ್ಧರಸ ಮಂತ್ರಿಗಳ ಆಸ್ತಿಗೆ ಬಸವಣ್ಣನೇ ವಾರಸುದಾರನಾದನು ಎಂದು ಹೇಳಿದ್ದಾನೆ.ಲಕ್ಕಣ್ಣ ದಂಡೇಶನು ನೀಲಮ್ಮ ಬಿಜ್ಜಳನ ತಂಗಿ ಎಂದು ಹೇಳಿದ್ದಾನೆ.ಬಿಜ್ಜಳನ ತಾಯಿ ಸತ್ತ ಮೇಲೆ ಬಿಜ್ಜಳ ಮತ್ತು ಆತನ ತಮ್ಮ ಕರ್ಣ ದೇವನು ಸಿದ್ಧರಸ ಮತ್ತು ಪದ್ಮಗಂಧಿಯವರ ಮನೆಯಲ್ಲಿ ಬೆಳೆದರು ಎನ್ನುವ ಐತಿಹಾಸಿಕ ಸಂಗತಿಗಳಿವೆ ಹೀಗಾಗಿ ನೀಲಮ್ಮ ಬಿಜ್ಜಳನ ಸಾಕು ತಂಗಿ ಎಂದು ಗೊತ್ತಾಗುತ್ತದೆ. ನೀಲಮ್ಮಳ ಸಂಗಯ್ಯ ಎಂಬ ಅಂಕಿತದಲ್ಲಿ ಸುಮಾರು 288 ವಚನಗಳು ದೊರೆಯುತ್ತವೆ.
ಈಕೆ ಬಸವಣ್ಣನವರ ಧರ್ಮಪತ್ನಿ. ಸಿದ್ಧರಸನ ಮಗಳು. ಬಿಜ್ಜಳನ ಸಾಕುತಂಗಿ. ಈಕೆಗೆ ಬಾಲಸಂಗಯ್ಯ ಹೆಸರಿನ ಮಗನಿದ್ದನೆಂದು ಸಣ್ಣ ವಯಸ್ಸಿನಲ್ಲಿ ತೀರಿಕೊಂಡನೆಂದು ತಿಳಿದುಬರುತ್ತದೆ. ‘ವಿಚಾರಪತ್ನಿ’ ಎಂದು ತನ್ನನ್ನು ಕರೆದುಕೊಂಡ ಈಕೆ, ಬಸವಣ್ಣನವರ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾಳೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಕೂಡಲಸಂಗಮ ಸಮೀಪದ ತಂಗಡಗಿಯಲ್ಲಿ ಐಕ್ಯಳಾದಳೆಂದು ತಿಳಿಯುತ್ತದೆ.

ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.

ನೀಲಮ್ಮ ಬಸವಣ್ಣನವರ ಮದುವೆ ಮಾಡಿ ಕೊಂಡ ನಂತರ ತಮ್ಮ ಬದುಕಿನಲ್ಲಿ ಅತ್ಯಂತ ಮಹತ್ತರವಾದ. ಬದಲಾವಣೆ ಆಯಿತು ಎಂದು ನಿವೇದನೆ ಮಾಡಿಕೊಂಡಿದ್ದಾಳೆ. ಮಾಂಸದ ಮುದ್ದೆಯಾದ ತನ್ನನ್ನು ಬಸವಣ್ಣನವರು ಬಣ್ಣದ ಗೊಂಬೆಯನ್ನಾಗಿ ಸಲುಹಿದರು. ಜೈನ ಧರ್ಮ ಮೂಲದ ನೀಲಾಂಬಿಕೆ ತನ್ನ ಅಸ್ಮಿತೆ ಮತ್ತು ಸಂಸ್ಕೃತಿಗೆ ತಾನು ಬಸವಣ್ಣ ನಿರ್ಮಿಸಿದ ಬಸವಣ್ಣನ ನಿರ್ಮಿಸಿದ ಬಣ್ಣದ ಪುತ್ತಳಿ ಎಂದು ಹೇಳಿಕೊಂಡಿದ್ದಾಳೆ.

ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.

ಅಂಗ ಭಾವ ಹರಿದು ಲಿಂಗ ಚೈತನ್ಯ ಭಾವಕ್ಕೆ ಕಾಯದ ಹಂಗು ತೊರೆದು ನಿಕಾಯವೆಂಬ ಪುತ್ತಳಿಗೆ ದೇಹ ಭಾವವಿಲ್ಲದವಳು ಎಂದು ತನಗೆ ಹೆಸರನ್ನಿಟ್ಟು ಪೋಷಿಸಿದರು ಎನ್ನಯ್ಯ ಬಸವಣ್ಣನವರು. ಎಂದು ಹೇಳಿದ್ದಾಳೆ. ಮಡದಿ ಎನ್ನಲಾಗದು ತನ್ನನ್ನು ಬಸವಂಗೆ ಎನ್ನುವ ಆಶಯ ಇಲ್ಲಿ ವ್ಯಕ್ತವಾಗುತ್ತದೆ. ಹೆಣ್ಣು ಗಂಡು ತಾರತಮ್ಯ ವೈದಿಕರಲ್ಲಿ ಅಷ್ಟೆ ಅಲ್ಲ ಅದು ಜೈನ ಧರ್ಮದಲ್ಲಿಯೂ ಇದೆ ಇತ್ತು. ಲಿಂಗ ತಾರತಮ್ಯವನ್ನು ಮೀರಿ ತನ್ನನ್ನು ನಿರ್ದೇಹಿ ಎಂದು ಗುರುತಿಸಿದರು ಎಂದು ಬಸವಣ್ಣನವರ ಬಗ್ಗೆ ಅಭಿಮಾನದಿಂದ ಹೇಳುತ್ತಾಳೆ ನೀಲಮ್ಮ. ಕಾರಣ ಅವಳ ಮೊದಲಿನ ಹೆಸರು ನೀಲಾಂಬಿಕೆ ನೀಲಲೋಚನೆ ಮಾಯಾದೇವಿ ಮಾಯಾವಿ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಟ್ಟ ಸಿದ್ಧರಸ ಮತ್ತು ಪದ್ಮಗಂಧಿಯ ಒಬ್ಬಳೇ ಮಗಳು.

ವೃತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು.

ವೃತ ನೇಮ ಪೂಜೆ ನಿಷ್ಠೆ ಅಂದಿನ ವೈದಿಕ ಮತ್ತು ಜೈನ ಸಂಸ್ಕೃತಿಯಲ್ಲಿ ಕಂಡು ಬರುವ ಸಹಜ ಆಚರಣೆ ಮತ್ತು ಅನುಸರಿಸುವ ಆನೇಕ ಕ್ರಿಯೆಗಳು ಇದ್ದವು. ಆದರೆ ಬಸವಣ್ಣವರು ಮದುವೆಯಾದ ಮೇಲೆ ಬಸವಣ್ಣ ತನಗೆ ಬೇಕಾದ ರೀತಿಯಲ್ಲಿ ಅನುಭಾವಿಕ ನೆಲೆಯಲ್ಲಿ ಬಣ್ಣದ ಪುತ್ತಳಿ ಮಾಡಿದರು ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಂದು ಹೇಳುತ್ತ ಪೂರ್ವಾಶ್ರಮದಲ್ಲಿ ಇರುವ ಎಲ್ಲಾ ನಿಯಮ ವೃತ ನೇಮ ಪೂಜೆ ಮುಂತಾದ ಆಚರಣೆಗಳನ್ನು ಅಳಿದು ಹೊಸ ಧರ್ಮ ಪ್ರಪಂಚ ಎಂದು ತನ್ನನ್ನು ಕರೆದರು ಎಂದು ಬಸವಣ್ಣನವರ ಬಗ್ಗೆ ಅಭಿಮಾನದಿಂದ ಹೇಳುತ್ತಾಳೆ

ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ.

ನೀಲಮ್ಮ ಒಬ್ಬಳೇ ಮಗಳು ತಂದೆ ತಾಯಿ ಅಗಾಧವಾದ ಸಾಗರದಷ್ಟು ಪ್ರೀತಿ ಮುಂದೆ ತನ್ನ ಅಣ್ಣ ಬಿಜ್ಜಳನ ಮಮತೆ ಪ್ರೀತಿ ಇಂತಹ ಬಂಧನಕ್ಕೂಳ ಪಟ್ಟ ಭಾವ ಜೀವಿಯಾಗಿದ್ದಳು. ಆದರೆ ಬಸವಣ್ಣವರು ಇವಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಅನುಭವ ಮಂಟಪದ ಸಂಸ್ಕೃತಿ ಮಗ ಮನೆಯ ದಿಟ್ಟ ಧ್ಯೇಯದ ವಿಚಾರಗಳಿಂದ ಅವಳ ಸಂಸಾರ ಕೌಟುಂಬಿಕ ಜೀವನ ಹೊರತು ಪಡಿಸಿ ತಾನು ಸಮಷ್ಟಿಯ ಸಂಪೂರ್ಣ ಭಾಗ . ಜಂಗಮ ಜೀವನ ನಡೆಸುವ ಗುರಿ ತನ್ನದು ಎಂದು ಹೇಳುತ್ತ ಪೂರ್ವಾಶ್ರಮದಲ್ಲಿ ಇರುವ ಸಂಸಾರ ಮತ್ತು ಮದುವೆಯಾದ ನಂತರದ ಕೌಟುಂಬಿಕ ಜೀವನ ನಿರ್ವಹಣೆ ಮಾತ್ರಕ್ಕೆ ಸೀಮಿತಗೊಳಿಸದೆ ನಿಲಮ್ಮಳು ಬಸವನ್ನವರ ಜೊತೆಗೆ ಮಹಾ ಮನೆ ಮತ್ತು ಅನುಭವ ಮಂಟಪದ ನಿರ್ವಹಣೆಗೆ ಜವಾಬ್ದಾರಿ ಹೊತ್ತ ಮಹಿಳೆ ಹೀಗೆ ಮಾಡಿದವರು ಬಸವಣ್ಣನವರು ಎಂದಿದ್ದಾಳೆ.

ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ

ಬಸವಣ್ಣನವರು ತನ್ನನ್ನು ಬಣ್ಣದ ಪುತ್ತಳಿ ಮಾಡಿದರು ತಾನು ಆಂಗ ಭಾವ ಬಿಟ್ಟ ನಿರ್ದೇಹಿ ಕಾಯವಳಿದ ಪ್ರಜ್ಞೆ ಎಂದು ಹೆಸರಿಟ್ಟರು ಬಸವಣ್ಣ ಅಷ್ಟೆ ಏಕೆ ಪೂರ್ವಾಶ್ರಮದ ಎಲ್ಲಾ ವೃತ ನೇಮ ಪೂಜೆ ತೊರೆದು ತನಗೆ ಹೊಸ ಮಾರ್ಗ ಕಲ್ಪಿಸಿದರು ತನ್ನನ್ನು ಕೇವಲ ಸಂಸಾರ ಪ್ರಪಂಚಕ್ಕೆ ಸಿಲುಕಿಸದೆ ಶರಣ ಸಂಸ್ಕೃತಿ ಅಡಿಯಲ್ಲಿ ಮಹಾ ಮನೆಯ ಮಗಳ ಜವಾಬ್ದಾರಿ ಕೊಟ್ಟು ತನ್ನನ್ನು ನಿಃಸಂಸಾರಿ ಮಾಡಿದರು ಬಸವಣ್ಣ. ಹೀಗೆ ಇಂತಹ ಅಮೂಲ್ಯ ಬದಲಾವಣೆಯಿಂದ ಬಸವಣ್ಣನವರ ಕರುಣೆಯಿಂದ
ಅಂಗ ಲಿಂಗವಾಗಿ ಜಂಗಮ ಚೇತನಕ್ಕೆ ಅಣಿಯಾಗಿ ಅವರ ಕರುಣೆಯಿಂದ ತಾನು ಪರಮ ಪ್ರಸಾದಿಯಾದೇನು ಎಂದು ಹೇಳಿಕೊಳ್ಳುತ್ತಾಳೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!