ಬಸವಣ್ಣನವರ ಆಪ್ತ ಒಡನಾಡಿ, ಶರಣ ಶ್ರೇಷ್ಠ ನಿಜಸುಖಿ ಶ್ರೀ ಹಡಪದ ಅಪ್ಪಣ್ಣನವರು
೧೨ ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಹಡಪದ ಅಪ್ಪಣ್ಣನವರೂ ಒಬ್ಬರು. ಬಸವಣ್ಣನವರ ಅಂತರಂಗದ ಆಪ್ತನಾಗಿದ್ದುಕೊಂಡು ಮಹಾಮನೆ ಹಾಗೂ ಅನುಭವ ಮಂಟಪದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಹಡಪದ ಅಪ್ಪಣ್ಣನವರು ಬಸವಣ್ಣನ ಆಪ್ತಕಾರ್ಯದರ್ಶಿ ಅಷ್ಟೇ ಅಲ್ಲ ಅವರ ಜೀವಿತದ ಕೊನೆಯ ಹಂತದವರೆಗೂ ಜತೆಯಾಗಿಯೇ ಉಳಿದುಕೊಂಡವರು. ಕೊನೆಗೆ ಒಂದೇ ಕಾಲಕ್ಕೆ ಲಿಂಗದಲ್ಲಿ ಐಕ್ಯವಾದ ಮಹನೀಯರು. ಹೀಗಾಗಿ ಶರಣರ ಚರಿತ್ರೆಯಲ್ಲಿ ಹಡಪದ ಅಪ್ಪಣ್ಣನವರದು ಬಹು ದೊಡ್ಡ ಪಾತ್ರವಿದೆ ಎಂದು ಹೇಳಬಹುದು.
ಭಕ್ತಿ ,ಜ್ಞಾನ , ವೈರಾಗ್ಯಗಳಲ್ಲಿ ಅಲ್ಲಮ ಪ್ರಭುಗಳಿಗೆ ಸರಿಸಮನಾಗಿ ಗೋಚರಿಸುವ ಮರುಳ ಶಂಕರದೇವರು ತಮ್ಮ ಒಂದು ವಚನದಲ್ಲಿ ” ಎನ್ನ ಮಹಾತ್ಮನ ಚೇತನವಯ್ಯಾ ಸಂಗನಬಸವಣ್ಣನ ನಿಜಸುಖಿ ಅಪ್ಪಣ್ಣ ” ಎಂದು ಮನದುಂಬಿ ಹೇಳಿದ್ದಾರೆ. ಇದು ಅಪ್ಪಣ್ಣನವರ ವ್ಯಕ್ತಿತ್ವ ಮತ್ತು ಅವರ ಮಹತ್ವವನ್ನು ಹೇಳುತ್ತದೆ. ಬಸವಣ್ಣ ಸಹಿತ ಇನ್ನುಳಿದ ಶಿವಶರಣರು ಅಪ್ಪಣ್ಣನರ ಕುರಿತು ವಚನಗಳಲ್ಲಿ ಹೀಗೆ ಹೊಗಳಿದ್ದಾರೆ.
” ಹಡಪದ ಅಪ್ಪಣ್ಣನಿಂದ ಎನ್ನ ಜನ್ಮ ಸಫಲವಾಯಿತಯ್ಯಾ”
– ಬಸವಣ್ಣ
“ಎನ್ನ ಪ್ರಾಣದ ಪರಿಣಾಮವೇ ಹಡಪದ ಅಪ್ಪಣ್ಣನು”
– ಅಂಗಗಸೋಂಕಿನ ಲಿಂಗ ತಂದೆ
” ಎನ್ನ ಪುಂಜದ ಪುಂಜವೇ ಹಡಪದ ಅಪ್ಪಣ್ಣ”
– ಗುಮ್ಮಳಾಪುರದ ಸಿದ್ಧಲಿಂಗದೇವರು
“” ಎನ್ನ ಶ್ರೋತ್ರದಲ್ಲಿ ‘ಯ’ ಕಾರವಾಗಿದ್ದಾತ ಹಡಪದ ಅಪ್ಪಣ್ಣ
– ಸಿದ್ದರಾಮೇಶ್ವರ
ಹೀಗೆ ಇನ್ನೂ ಅನೇಕ ಶಿವಶರಣರು ಅಪ್ಪಣ್ಣರನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆಂದರೆ ಅದು ಅಪ್ಪಣ್ಣನವರು ಅವರೆಲ್ಲರ ಮೇಲೆ ತಮ್ಮ ವ್ಯಕ್ತಿತ್ವದ ಪ್ರಭಾವ ಬೀರಿದ್ದೇ ಕಾರಣ. ಅಪ್ಪಣ್ಣನವರ ಎಲ್ಲ ವಚನಗಳು ಮನುಷ್ಯನ ಮೌಢ್ಯಗಳನ್ನು ಕಳಚಿ ಅರಿವಿನ ಕಣ್ಣು ತೆರೆಯುತ್ತವೆ. ಅವುಗಳಲ್ಲಿ ಒಂದು ಇಂತಿದೆ.
ಮನವನರಿದಂಗೆ ಮತದ ಹಂಗೇಕೋ ?
ನಿತ್ಯವನರಿದಂಗೆ ತೀರ್ಥದ ಹಂಗೇಕೋ ?
ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೋ ?
ಜ್ಯೋತಿಯವನರಿದಂಗೆ ವ್ಯಾಕುಲದ ಹಂಗೇಕೋ ?
ಈ ತೆರನನರಿದಂಗೆ ಮುಂದಾವ ಭೀತಿಯುಂಟು
ಹೇಳಾ ಬಸವಪ್ರಿಯ ಕೂಡಲ ಚೆನ್ನಬಸವಣ್ಣ
ಹಡಪದ :
ಹಡಪದ ಎಂಬ ಶಬ್ದವು “ಅಡಪದ ” ಎಂಬ ಪದದಿಂದ ಬಂದುದಾಗಿದೆ. “ಅಡಪವಳ” ಎಂದರೆ ಎಲೆ ಅಡಿಕೆಯ ಸಂಚಿಯನ್ನು ಹಿಡಿಯುವವನು ಎಂದರ್ಥ ಮತ್ತು ಕ್ಷೌರಿಕ ವೃತ್ತಿಯವನು ಎಂಬರ್ಥವನ್ನೂ ನೀಡುತ್ತದೆ.ಆದ್ದರಿಂದ ಅಡಪಿಗ -ಹಡಪಿಗ, ಅಡಪದ -ಹಡಪದ ಹೀಗೆ ರೂಪಾಂತರಗೊಂಡಿದ್ದನ್ನು ಕಾಣಬಹುದಾಗಿದೆ. ಪ್ರೊ.ಬಿ.ಎಸ್.ಗೊರವರ ಇವರು ತಮ್ಮ “ಶರಣ ಹಡಪದ ಅಪ್ಪಣ್ಣಗಳು” ಎಂಬ ಕೃತಿಯಲ್ಲಿ ಅಡಪ/ಅಡಪವಳ ಎಂದು ಮನೆ ಹೆಸರುಳ್ಳ ಅಡ್ಯಜನರ ಉದ್ಧಪಟ್ಟಿಯಿದೆ ಎಂದು ಹೇಳುತ್ತಾ ಕ್ರಿ.ಶ.೧೦೫೦ ರಲ್ಲಿ ಅಕ್ಕಾದೇವಿಯ ಆಡಳಿತದಲ್ಲಿ ಅಡಪದ ಚಾವುಂಡರಾಯ , ಕ್ರಿ. ಶ.1118 ರಲ್ಲಿ ಆರನೇ ವಿಕ್ರಮಾಡಿತ್ಯನ ಸಚಿವನಾಗಿದ್ದ ಹಡಪವಳ ನೀಲಕಂಠ , ಕ್ರಿ.ಶ 1122 ರ ಅಕ್ಕಲಕೋಟ ಶಾಸನದಲ್ಲಿಯ ಹಡಪವಳಂ ದಂಡನಾಯಕ ಮಾಧವ ಭಟ್ಟರ ವ್ಯಕ್ತಿ ನಾಮಗಳನ್ನು ಉಲ್ಲೇಖಿಸುತ್ತಾರೆ. ಇದರ ಜತೆಗೆನೆ ಇವರು ಬ್ರಾಹ್ಮಣರಾಗಿರಬೇಕೆಂದು ತೋರುತ್ತದೆ ಎಂದೂ ಅಭಿಪ್ರಾಯಿಸುತ್ತಾರೆ. ಕ್ರಿ.ಶ.1150 ರಿಂದೀಚೆ ಹಡಪದ/ಅಡಪದ ಎಂಬುದು ಅರಮನೆಯ ಸೇವಾ ಕಾರ್ಯವೆಂದೇ ವೃತ್ತಿನಾಮವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ಹಡಪದ ಎಂಬುದು ಮುಖ್ಯವಾಗಿ ಕ್ಷೌರಿಕ ಜನಾಂಗದ ಪದವಾಗಿದೆ.
ಸವಿತಾ ಎಂಬ ಸಮಾಜವಿದ್ದು ಅದು ಕೂಡ ಕ್ಷೌರಿಕ ಕಾಯಕದ ಜನಾಂಗವಾಗಿದೆ. ಈ ಜನಾಂಗವನ್ನು ನಾವಿ, ನಾಪಿಕ , ನಾವಲಿಗ ಮುಂತಾದ ಹೆಸರುಗಳಿಂದ ಗುರ್ತಿಸಲಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ನಾಮಗಳಿಂದ ಗುರ್ತಿಸುವುದೂ ಉಂಟು. ಆದರೆ ಅಪ್ಪಣ್ಣನವರು ಕ್ಷೌರಿಕ ವೃತ್ತಿ ಮಾಡುತ್ತಿದ್ದರು ಎಂಬುದಕ್ಕೆ ಯಾವುದೇ ಆಧಾರ ಸಿಗದಿದ್ದರೂ ಕೂಡ ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿಕೊಂಡಿದ್ದಾರೆ .
” ಹಣೆಯ ಹೊಣೆಯ ತೋರಿ ಉದರವ ಹೊರೆವಂತ ನಿಮ್ಮ ಮರೆಯಲಡರ್ಗಿಪ್ಪ ಹಡಪಿಗ ನಾನಯ್ಯ “
ಹಡಪಿಗ ಎಂದರೆ ಕ್ಷೌರಿಕ ಎಂಬರ್ಥವುಂಟು . ಹಡಪದ ಎಂಬುದು ಕ್ಷೌರಿಕ ಜನಾಂಗದ ನಾಮವಾಗಿದೆ. ಆದ್ದರಿಂದ ನಾಡಿನ ಚಿಂತಕರು ಹಡಪದ ಅಪ್ಪಣ್ಣನವರನ್ನು ಹಡಪದ ಜನಾಂಗದವರೆಂದು ಗುರಿತಿಸುತ್ತಾರೆ , ಹಡಪದ ವೃತ್ತಿ ಬಾಂಧವರು ಅಪ್ಪಣ್ಣನವರನ್ನು ತಮ್ಮ ಕುಲಗುರು ಎಂದೇ ಆರಾಧಿಸುತ್ತಾರೆ. ಅಂತಲೇ ಇಂದು ಹಡಪದ ಜನಾಂಗದವರು “ಹಡಪದ ಅಪ್ಪಣ್ಣನವರಮಹಾಸ್ಸಂಸ್ಥಾನ ಪೀಠ “ ವನ್ನು ಸ್ಥಾಪಿಸಿದ್ದು ಅಪ್ಪಣ್ಣನವರ ಐಕ್ಯ ಸ್ಥಳ ತಂಗಡಗಿ ಕೇಂದ್ರಸ್ಥಾನವಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಪೀಠದ ಗುರುಗಳು ಪೂಜ್ಯಶ್ರೀ ಬಸವಪ್ರಿಯ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಇದ್ದು ನಾಡಿನಾದ್ಯಂತ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಶರಣ ತತ್ವದಲ್ಲಿ ಜಾತಿ ಆಧಾರಿತ ವೃತ್ತಿಗೆ ಮಹತ್ವವಿಲ್ಲ ಆದರೆ “ಕಾಯಕ” ತತ್ವಕ್ಕೆ ಬಹಳ ಮಹತ್ವ ಕೊಟ್ಟಿದ್ದಾರೆ. ಬಸವಣ್ಣನವರ ಈ ವಚನ ಗಮನಿಸಬಹುದು.
ದೇವ ಸಹಿತ ಭಕ್ತ ಮನೆಗೆ ಬಂದೆಡೆ
ಕಾಯಕವಾವುದೆಂದು ಬೆಸೆಗೊಂಡೆನಾದಡೆ
ನಿಮ್ಮಾಣೆ ! ನಿಮ್ಮ ಪ್ರಮಥರಾಣೆ ! ತಲೆದಂಡ ತಲೆದಂಡ
ಕೂಡಲ ಸಂಗಮದೇವಾ ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ!!
ಮೇಲಿನ ವಚನದಿಂದ ತಿಳಿದು ಬರುವುದೇನೆಂದರೆ ಎಲ್ಲ ಕಾಯಕಗಳಿಗೂ ಸಮಾನವಾದ ಗೌರವವನ್ನು ನೀಡಬೇಕು. ತನ್ಮೂಲಕ ಜಾತಿ ಭೇದಗಳನ್ನು ತೊಡೆದು ಹಾಕಿ ಸರ್ವ ಸಮಾನತೆಯನ್ನು ಸಾಧಿಸಬೇಕು ಎಂಬುದೇ ಆಗಿದೆ.
ನಿಜಸುಖಿ ಹಡಪದ ಅಪ್ಪಣ್ಣ:
ಅಪ್ಪಣ್ಣನವರ ಜಯಂತಿಯನ್ನು ಪ್ರತಿವರ್ಷ ಕಡ್ಲಿಗಡಬು ಹುಣ್ಣಿಮೆ ಅಥವಾ ಗುರುಪೂರ್ಣಿಮೆಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಅಪ್ಪಣ್ಣನವರ ಜನ್ಮ ಸ್ಥಳದ ಕುರಿತು ಈ ಹಿಂದಿನ ಯಾವುದೇ ಗ್ರಂಥಗಳಲ್ಲಿ ಲಭ್ಯವಿರುವಂತೆ ಕಾಣುವುದಿಲ್ಲವಾದರೂ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಸುಬಿನಾಳ ಗ್ರಾಮದಲ್ಲಿ ಎಂದು ಖಚಿತಪಡಿಸಲಾಗಿದೆ. ಇವರ ಜನ್ಮ ನಾಮ ಜೀವಣ್ಣ . ಚೆನ್ನವೀರಪ್ಪ ಮತ್ತು ದೇವಮ್ಮ ದಂಪತಿಗಳಿಗೆ ಒಬ್ಬನೇ ಪುತ್ರ. ಜನ್ಮನಾಮ ಜೀವಣ್ಣ ಎಂತಿದ್ದರೂ ಇವರನ್ನು “ಅಪ್ಪಣ್ಣ ” ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಾಲಕ ಅಪ್ಪಣ್ಣ ತುಂಬಾ ತೀಕ್ಷ್ಣಮತಿಯನಾಗಿದ್ದನು. ಇವರ ಮೊದಲ ವಿದ್ಯಾಗುರು ಮುಸುಬಿನಾಳ ಗ್ರಾಮದ ಶಿವಶಂಕ್ರಯ್ಯ ಸ್ವಾಮಿ ಹಿರೇಮಠ . ನಂತರ ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದು ವಿಜಾಪುರದ ಗಣಾಚಾರಿ ಮಠದ ಈಶ್ವರಯ್ಯನವರಲ್ಲಿ ಇವರ ಪತ್ನಿಯ ಹೆಸರು ಲಿಂಗಮ್ಮ. ಲಿಂಗಮ್ಮಳೂ ಶಿವಶರಣೆ , ವಚನಗಾರ್ತಿ . ಹಂಪಿಯ ಪೀಠಾಧೀಶರಾಗಿದ್ದ ಶ್ರೀ ಚನ್ನಮಲ್ಲೇಶ್ವರರು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಇವರುಗಳಿಗೆ ಶಿವದೀಕ್ಷೆಯನ್ನು ನೀಡುತ್ತಾರೆ. ಹೀಗಾಗಿ ಅಪ್ಪಣ್ಣ ಮತ್ತು ಲಿಂಗಮ್ಮ ಇರ್ವರೂ ತಮ್ಮ ವಚನಗಳಲ್ಲಿ ‘ಚೆನ್ನಮಲ್ಲೇಶ್ವರ” ರನ್ನು ನೆನಪಿಸಿಕೊಂಡಿದ್ದುಂಟು.
ಬಸವಣ್ಣ ಮತ್ತು ಅಪ್ಪಣ್ಣನವರ ಬಾಲ್ಯದ ಊರುಗಳು ಸಮೀಪದಲ್ಲಿ ಇದ್ದುದರಿಂದ ಬಾಲ್ಯದಿಂದಲೇ ಪರಸ್ಪರ ಆತ್ಮೀಯರಾಗಿದ್ದಿರಲೂಬಹುದು. ನಂತರ ಬಸವ ಕಲ್ಯಾಣದಲ್ಲಿ ಬಸವಣ್ಣನವರ ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದರಿಂದ ಮತ್ತು ಅವರ ಕಾರ್ಯವೈಖರಿಯಿಂದ ಪ್ರಭಾವಿತನಾಗಿ ಅಪ್ಪಣ್ಣನವರು ಬಸವಣ್ಣನವರ ಜತೆಗೆ ಸೇರಿಕೊಂಡಿರಲೂಬಹುದು. ಆದರೆ ಬಸವಣ್ಣನವರ ಅಂತರಂಗದ ಆಪ್ತನಾಗಿ ಹಗಲಿರುಳೆನ್ನದೆ ಬಸವಣ್ಣನವರ ಸೇವಾ ಚಿಂತಕನಾಗಿ ಬೆಸೆದುಕೊಂಡಿದ್ದು ಗಮನಾರ್ಹವಾಗಿದೆ. ಅವರ ಅಂಕಿತನಾಮ “ಬಸವಪ್ರಿಯ ಕೂಡಲ ಚೆನ್ನಸಂಗಯ್ಯ “ ದಲ್ಲಿ ‘ ಬಸವಪ್ರಿಯ’ ಎಂಬ ಪದವು ಅವರು ಬಸವಣ್ಣನ ಮೇಲಿಟ್ಟ ಜೀವಭಾವವನ್ನು ತೋರಿಸುತ್ತದೆ. ಬಸವಣ್ಣನವರು ಕಟ್ಟಿದ ಮಹಾಮನೆ , ಅನುಭವ ಮಂಟಪದಿಂದ ಬಸವಣ್ಣನವರ ಅಂತಃಪುರದವರೆಗೂ ನಿರ್ಭಿತನಾಗಿ ಪ್ರವೇಶ ಪಡೆದ ಏಕೈಕ ವ್ಯಕ್ತಿಯೆಂದರೆ ಅಪ್ಪಣ್ಣನೆಂಬುದು ದಿಟವಾಗುತ್ತದೆ.
ಬಸವಣ್ಣನವರನ್ನು ಕಾಣಲು ಯಾರಾದರೂ ಜಂಗಮರು ಬಂದರೆ ಮೊದಲು ಹಡಪದ ಅಪ್ಪಣ್ಣನವರನ್ನು ಬೆಟ್ಟಿಯಾಗಬೇಕಿತ್ತು . ಅಪ್ಪಣ್ಣನವರು ಜಂಗಮರ ನಡೆ-ನುಡಿಗಳನ್ನು ತೀಕ್ಷ್ಣವಾಗಿ ಪರೀಕ್ಷಿಸಿ ನಂತರ ಬಸವಣ್ಣನವರನ್ನು ಬೆಟ್ಟಿಯಾಗಲು ಅನುಮತಿ ನೀಡುತ್ತಿದ್ದರು . ಬಸವಣ್ಣನವರ ಸಾಂಗತ್ಯ ಬಯಸುವವರು ತನು, ಮನ, ಶುದ್ಧವಾಗಿರಬೇಕೆಂದು , ದೇಹವನ್ನೇ ಮಹಾಮನೆಯ ಮನೆಯಾಗಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತಿದ್ದರು ಬಸವಣ್ಣನವರ ವಿಚಾರ ಮತ್ತು ಅವರ ಸೇವಾ ನಿಷ್ಠೆಯಲ್ಲಿಯೇ ಗುರು, ಲಿಂಗ , ಜಂಗಮ , ಪ್ರಸಾದದ ನಿಜಾರ್ಥವನ್ನು ಕಂಡುಕೊಂಡಿದ್ದರು.
ಅಪ್ಪಣ್ಣನವರು ಮಹಾಜ್ಞಾನಿಗಳಾಗಿದ್ದರು ಎಂಬುದನ್ನು ಅವರ ವಚನಗಳಿಂದ ಹಾಗೂ ಅಂದು ನಡೆದ ಕೆಲವು ಘಟನೆಗಳಿಂದ ತಿಳಿದುಕೊಳ್ಳಬಹುದು . ಅಲ್ಲಮಪ್ರಭು ದೇವರು ಬಸವಣ್ಣನು ಸ್ಥಾಪಿಸಿದ ಮಹಾಮನೆಯ ವಿಷಯ ತಿಳಿದುಕೊಂಡು ಬಳ್ಳಿಗಾವೆಯಿಂದ ಕಲ್ಯಾಣಕ್ಕೆ ಆಗಮಿಸುತ್ತಾರೆ. ಅವರ ಜತೆಯಲ್ಲಿ ಸೊನ್ನಲಗೆಯ ಶಿವಶರಣ ಸಿದ್ದರಾಮರೂ ಇರುತ್ತಾರೆ. ಆದರೆ ಯಾರೂ ಅವರನ್ನು ಗುರ್ತು ಹಿಡಿಯಲಿಲ್ಲ. ಆ ಸಮಯದಲ್ಲಿ ಬಸವಣ್ಣನವರು ಇಷ್ಟಲಿಂಗ ಪೂಜೆಯಲ್ಲಿ ನಿರತರಾಗಿದ್ದರು. ಆದರೆ ಅಪ್ಪಣ್ಣವರು ಮಹಾಮನೆಯ ಬಾಗಿಲಲ್ಲಿ ಮತ್ತೊಬ್ಬ ಯೋಗಿಯೊಡನೆ ನಿಂತಿರುವ ಅಲ್ಲಮರನ್ನು ತಮ್ಮ ಅನುಭಾವಿಕ ಪ್ರಜ್ಞೆಯಿಂದ ಗುರ್ತಿಸಿ ಅರಿತುಕೊಳ್ಳುತ್ತಾರೆ. ಪೂಜಾನಿರತ ಬಸವಣ್ಣನವರಿಗೆ ಹೀಗೆ ಹೇಳುತ್ತಾರೆ.
ಕಾಂಬರೆ ಕಂಗಳಿಗೆ ಅಸಾಧ್ಯ ,ಮುಟ್ಟುವರೆ ಸೋಂಕಿಗಸಾಧ್ಯ
ಮಾತನಾಡಿಸಿದರೆ ವಾಂಗ್ಮನೋತೀತ , ನಿಂದರೆ ನೆರಳಿಲ್ಲ
ಸುಳಿದರೆ ಹೆಜ್ಜೆಯಿಲ್ಲ , ಪ್ರಭುದೇವರೆಂಬ ಭಾವ ತೋರುತಿದೆ
ಬಸವಪ್ರಿಯ ಕೂಡಲ ಚೆನ್ನಸಂಗಯ್ಯನ ಶರಣನ ಚರಣವಿಡೆಯೆ ಏಳಾ ಸಂಗನ ಬಸವಣ್ಣ
ಆದರೆ ಬಸವಣ್ಣನವರು ಇಷ್ಟಲಿಂಗ ಪೂಜೆ ಬಿಟ್ಟು ಏಳದೆ ಹೀಗೆ ಹೇಳುತ್ತಾರೆ.
ಕಾಯವೆ ಭಕ್ತ ಪ್ರಾಣವೆ ಜಂಗಮ
ಅವುದು ಘನವೆಂಬೆ , ಅವುದು ಕಿರಿದೆಂಬೆ ?
ಕೂಡಲ ಸಂಗನ ಶರಣರು ಬಂದರೆ ಇಂಬಿಲ್ಲ
ಕರುಣದಿಂದ ಬರ ಹೇಳಾ ಅಪ್ಪಣ್ಣ !
ಹೀಗೆ ಬಸವಣ್ಣನವರು ಬರಲು ನಿರಾಕರಿಸಿದಾಗ ವಿಧಿಯಿಲ್ಲದೆ ಅಪ್ಪಣ್ಣನವರು ಬಸವಣ್ಣನವರ ಅಸಹಾಯಕತೆಯನ್ನು ವಚನದ ಮೂಲಕವೇ ಅಲ್ಲಮರಿಗೆ ವಿವರಿಸಿ ಒಳ ಬರಲು ವಿನಂತಿಸಿಕೊಳ್ಳುತ್ತಾರೆ.
ಆಗ ಅಲ್ಲಮರು ” ಆನಾಗದೆ ಮುನ್ನವೇ ತಾನಾದರೆಂಬುವರಲ್ಲಿಗೆ ನಮ್ಮ ಗುಹೇಶ್ವರ ಲಿಂಗವು ಅಡಿಯಿಡುವವನಲ್ಲ” ಎಂದು ನಿಷ್ಠುರವಾಗಿಯೇ ಹೇಳುತ್ತಾರೆ. ವಿಧಿಯಿಲ್ಲದೆ ಅಪ್ಪಣ್ಣನವರು ಬಸವನಿದ್ದಲ್ಲಿಗೆ ಹೋಗಿ “ಹಿರಿಯರು ಬಂದರೆ ಇದಿರಿದ್ದು ಬಾರದವರ ಮನೆಗೆ ಅಡಿಯಿಡೆವು ಎಂದು ಕಾಡಿಹರು” ಎಂದು ಹೇಳಿದರಲ್ಲದೆ ಇನ್ನೊಂದು ವಚನದಲ್ಲಿ “ಪ್ರಭುದೇವರ ಬರವು ಕಾಣಬರುತ್ತದೆ ನೋಡಾ ಸಂಗನ ಬಸವಣ್ಣಾ” ಎಂದು ಹೇಳಿ, ಈ ಎಚ್ಚರಿಸಿ ಅವರನ್ನು ಕರೆದುಕೊಂಡು ಬರುತ್ತಾರೆ. ಅಲ್ಲಮರನ್ನು ಮಹಾಮನೆಗೆ ಕರೆತರುವುದರ ಮೂಲಕ ಅಲ್ಲಮ ಮತ್ತು ಬಸವಣ್ಣನವರು ಸಂಗಮಿಸುವುದನ್ನು ಕಣ್ಣಾರೆ ಕಂಡು ಖುಷಿಪಡುತ್ತಾರೆ . ಅಂತಲೇ ಬಸವಣ್ಣನವರು ಅಪ್ಪಣ್ಣನವರನ್ನು ಕುರಿತು ಹೀಗೆ ಹೇಳಿದ್ದು “ಮರುಳಶಂಕರದೇವರ ನಿಲುವ ಪ್ರಭುದೇವರು ಸಿದ್ದರಾಮಯ್ಯನವರು ಹಡಪದ ಅಪ್ಪಣ್ಣನಿಂದ ಕಂಡು ಎನ್ನ ಜನ್ಮ ಸಫಲವಾಯಿತಯ್ಯಾ” ಹೀಗೆ ಅಪ್ಪಣ್ಣನವರ ಭವ್ಯ ವ್ಯಕ್ತಿತ್ವವನ್ನು ಅಲ್ಲಾಮಾದಿ ಜತೆಗೆ ಗುರ್ತಿಸಿ ಹೊಗಳಿದ್ದು ಬಹು ವಿಶೇಷವಾದದ್ದು.
ಇನ್ನು ಎರಡನೆಯ ಪ್ರಸಂಗವು ಬಸವಣ್ಣ , ನೀಲಾಂಬಿಕೆ ಹಾಗೂ ಅಪ್ಪಣ್ಣನವರ ನಡುವೆ ನಡೆಯುತ್ತದೆ. ಅದು ಕಲ್ಯಾಣದಲ್ಲಿ ನಡೆದ ಶರಣ ಕ್ರಾಂತಿ ಸಮಯ. ಬಿಜ್ಜಳನ ಸೈನಿಕರು ಶರಣ ವಚನಕಾರರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಹಲವಾರು ಶರಣರು ತಾವು ಸಂಗ್ರಹಿಸಿದ್ದ ವಚನ ಕಟ್ಟುಗಳ ಭಂಡಾರವನ್ನು ತೆಗೆದುಕೊಂಡು ಕಲ್ಯಾಣದಿಂದ ದೂರ ದೂರದ ಸುರಕ್ಷಿತ ಸ್ಥಳಗಳನ್ನರಿಸಿ ಹೋಗುತ್ತಿದ್ದಾರೆ . ಇದರಿಂದ ಮನನೊಂದ
ಬಸವನ್ನಣ್ಣವರು ಅಪ್ಪಣ್ಣನವರೊಬ್ಬರನ್ನೇ ಕರೆದುಕೊಂಡು ಕಪ್ಪಡಿ(ಕೂಡಲ ಸಂಗಮ) ಕ್ಕೆ ಹೋಗುತ್ತಾರೆ. . ಮಾರ್ಗ ಮಧ್ಯದಲ್ಲಿ ನೀಲಾಂಬಿಕೆಯ ನೆನಪಾಗಿ ಕರೆದುಕೊಂಡು ಬರಲು ಆಪ್ತ ಶರಣ ಅಪ್ಪಣ್ಣನವರನ್ನು ಕಳುಹಿಸಿಕೊಡುತ್ತಾರೆ. ಕಲ್ಯಾಣಕ್ಕೆ ಬಂದ ಅಪ್ಪಣ್ಣನವರು ನೀಲಾಂಬಿಕೆಯಲ್ಲಿ ಬಸವಣ್ಣನವರ ಇಂಗಿತವನ್ನು ನಿವೇದಿಸಿಕೊಳ್ಳುತ್ತಾರೆ. ಆಗ ನೀಲಂಬಿಕೆಯವರು ಹೀಗೆ ಪ್ರಶ್ನಿಸುತ್ತಾರೆ.
ನೋಡು ನೋಡು ನೋಡು ನೋಡು ಲಿಂಗವೆ
ನೋಡು ಬಸವಯ್ಯನು ಮಾಡಿದಾಟವಾ
ಅಲ್ಲಿಗೆನ್ನನು ಬರಹೇಳಿದರಂತೆ
ಇಲ್ಲಿ ತಾವಿಲ್ಲದ ಸಂಗಯ್ಯನು
ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವು
ಬಲ್ಲ ಮಹಾತ್ಮರಿಗೆ ಗುಣವೆ “
ಕೊನೆಗೆ ಅಪ್ಪಣ್ಣನವರ ಮನವಿಗೆ ಸ್ಪಂದಿಸಿದ ನೀಲಾಂಬಿಕೆ ಕಪ್ಪಡಿಗೆಗೆ ಹೊರಡುತ್ತಾಳೆ. ಮಧ್ಯದಲ್ಲಿ ತಂಗಡಿಯ ಹತ್ತಿರ ಕೃಷ್ಣಾ ನದಿಯು ತುಂಬಿ ಹರಿಯುತ್ತಿರುವುದರಿಂದ ನದಿಯನ್ನು ದಾಟಲಾಗದೇ ತೀರದಲ್ಲಿ ಕುಳಿತು ಹೇಳುತ್ತಾಳೆ “ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ ? ಎಂದೆನ್ನುತ ಅಂಗೈಯಲ್ಲಿ ಇಷ್ಟಲಿಂಗಲಿಂಗವಿಟ್ಟುಕೊಂಡು ಧ್ಯಾನ ನಿಷ್ಠಳಾಗಿ ಐಕ್ಯಳಾಗುತ್ತಾಳೆ. ಲಿಂಗದಲ್ಲಿ. ಲೀನವಾಗುತ್ತಾಳೆ. ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ಅಪ್ಪಣ್ಣನವರು ದಿಗ್ಮೂಢರಾಗುತ್ತಾರೆ. ತುಂಬಿ ಹರಿಯುತ್ತಿದ್ದ ಕೃಷ್ಣೆಯನ್ನು ಈಜಿ ಕೂಡಲ ಸಂಗಮಕ್ಕೆ ತೆರಳಿ ಬಸವಣ್ಣನವರಿಗೆ ನಡೆದ ವೃತ್ತಾಂತ ತಿಳಿಸುತ್ತಾರೆ. ಮನನೊಂದ ಬಸವಣ್ಣನವರು ಕೂಡ ಲಿಂಗೈಕ್ಯರಾಗುತ್ತಾರೆ. ಅಪ್ಪಣ್ಣನವರಿಗೂ ತಾಯಿ ಲಿಂಗಮ್ಮ ಮತ್ತು ಬಸವಣ್ಣನವರಿಲ್ಲದ ಅನಾಥಪ್ರಜ್ಞೆ ಕಾಡುತ್ತದೆ. ಅವರು ಕೂಡ ಇಷ್ಟಲಿಂಗ ಕರಸ್ಥಳದಲ್ಲಿಟ್ಟುಕೊಂಡು ತದೇಕಚಿತ್ತದಿಂದ ಧ್ಯಾನಸ್ಥರಾಗಿ ಲಿಂಗದಲ್ಲಿಯೇ ಐಕ್ಯವಾಗುತ್ತಾರೆ. ಶರಣರ ಘನ ಸಂಸ್ಕೃತಿಯಲ್ಲಿ ಬದುಕಿದ ಅಪ್ಪಣ್ಣನವರು ಮರಣದಲ್ಲೂ ಕೂಡ ತಮ್ಮ ಘನ ಶ್ರೇಷ್ಠತೆಯನ್ನು ತೋರಿದವರು. “ಶರಣರ ಮಹಿಮೆಯನ್ನು ಮರಣದಲ್ಲಿ ಕಾಣು” ಎಂಬ ವಚನ ವಾಕ್ಯರ್ಥವನ್ನು ಸಾರ್ಥಕಗೊಳಿಸಿದವರು . ತಂಗಡಗಿಯಲ್ಲಿ ಶರಣ ಅಪ್ಪಣ್ಣನವರ ಮತ್ತು ತಾಯಿ ನೀಲಾಂಬಿಕೆಯವರ ಐಕ್ಯ ಸಮಾಧಿ ಸ್ಥಳಗಳಿವೆ .
ಮಹಾಶರಣ ಹಡಪದ ಅಪ್ಪಣ್ಣನವರು ರಚಿಸಿದ ಸುಮಾರು 243 ವಚನಗಳು ಲಭ್ಯವಾಗಿದ್ದು , ಸಂಗಮೇಶ್ವರದ ಅಪ್ಪಣ್ಣನವರ ಹೆಸರಿನಲ್ಲಿ 103 ವಚನಗಳನ್ನು ಗುರುತಿಸಲಾಗಿದೆ. ಅಪ್ಪಣ್ಣನವರು ಬೇರೆ ಬೇರೆ ಪ್ರಕಾರಗಳಲ್ಲಿ ತಮ್ಮ ಅಂಕಿತನಾಮವನ್ನು ಬಳಸಿಕೊಂಡಿದ್ದಾರೆ. ಆದರೆ ಅವುಗಳೆಲ್ಲವುಗಳಲ್ಲಿ “ಬಸವಪ್ರಿಯ” ಎಂಬುದು ಸ್ಥಾಯಿಯಾಗಿ ಗುರ್ತಿಸಿಕೊಂಡಿದೆ. ಅಪ್ಪಣ್ಣನವರ ಪತ್ನಿಯೂ ಕೂಡ ಶ್ರೇಷ್ಠ ವಚನಗಾರ್ತಿಯಾಗಿದ್ದು ಶರಣ ಸಂಸ್ಕೃತಿಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಇವರಿಬ್ಬರದು ಆದರ್ಶ ದಾಂಪತ್ಯ ಜೀವನ. ಅಪ್ಪಣ್ಣನವರು ನಿಜಸುಖಿಯಾದರೆ ಲಿಂಗಮ್ಮ ನಿಜಮುಖೆ.
ಹಡಪದ ಅಪ್ಪಣ್ಣನವರು ಬಹಳ ಮೇಧಾವಿಯಾಗಿದ್ದರು , ಅತ್ಯುತ್ತಮ ಚಿಂತಕರಾಗಿದ್ದ್ರ ಅಪ್ಪಣ್ಣ ಮತ್ತು ಲಿಂಗಮ್ಮನವರ ಕುರಿತು ಇನ್ನಷ್ಟು ಆಳ ಮತ್ತು ಖಚಿತ ಅಧ್ಯಯನದ ಅಗತ್ಯವಿದೆ. ಗುಲಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಹಡಪದ ಅಪ್ಪಣ್ಣನವರ ಅಧ್ಯಯನ ಪೀಠ ಸ್ಥಾಪನೆಯಾಗಿದೆ. ತಂಗಡಿಯಲ್ಲಿ ಅಪ್ಪಣ್ಣನವರ ಮಠ(ಪೀಠ) ಸ್ಥಾಪನೆಯಾಗಿದೆ . ಹಡಪದ ಸಮಾಜದ ನೌಕರರು ಸಂಘಟನೆ ಮಾಡಿಕೊಂಡಿದ್ದಾರೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಇನ್ನಷ್ಟು ಮತ್ತಷ್ಟು ಅಪ್ಪಣ್ಣ ಮತ್ತು ಲಿಂಗಮ್ಮನವರ ಕುರಿತು ಹೆಚ್ಚಿನ ಅಧ್ಯಯನ ಮಾಡಿಸುವುದರ ಮೂಲಕ ಸಂಶೋಧನಾ ಗ್ರಂಥಗಳನ್ನು ಹೊರ ತರಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಅಪ್ಪಣ್ಣನವರ ಕುರಿತು ಪರಿಚಯ ಪಾಠವನ್ನು ಅಳವಡಿಸಲು ಪ್ರಯತ್ನಪಡಬೇಕಾಗಿದೆ.
ಅಪ್ಪಣ್ಣನವರ ಒಂದು ವಚನ ನಿಮ್ಮ ಓದಿಗೆ
ನುಡಿದರೆ ಗುರುವಾಗಿ ನುಡಿಯಬೇಕು
ನಡೆದರೆ ಪರವಾಗಿ ನಡೆಯಬೇಕು
ಇದ್ದರೆ ಜಂಗಮವಾಗಿ ಇರಬೇಕು
ಕುಳಿತರೆ ಲಿಂಗವಾಗಿ ಕುಳಿತಿರಬೇಕು
ಈ ನಾಲ್ಕರ ಹೊಂದಿಗೆಯನರಿಯದವರು
ಎಷ್ಟು ದಿನವಿದ್ದರೂ ಫಲವೇನು ಹೇಳಾ
ಬಸವಪ್ರಿಯ ಕೂಡಲ ಚೆನ್ನಬಸವಣ್ಣ
ಲೇಖನ – ಈಶ್ವರ ಮಮದಾಪೂರ , ಗೋಕಾಕ .
ಮೊಬೈಲ್ – ೯೫೩೫೭೨೬೩೦೬