ನೆತ್ತಿಗೆ ಕುಡಿಸುವ ಟಾನಿಕ್ಕು – ಹುಡಾರವರ ಹೈಕು

ನೆತ್ತಿಗೆ ಕುಡಿಸುವ ಟಾನಿಕ್ಕು – ಹುಡಾರವರ ಹೈಕು

ಗುಂಡುರಾವ್ ದೇಸಾಯಿ
ಕೃತಿ ಅವಲೋಕನ

(ಜೂಲೈ ೩೧ ರಂದು ಸದರಿ ಕವನ ಸಂಕಲನ ಬಿಡುಗಡೆಯಾಗುತ್ತಿರುವುದರ ಪ್ರಯುಕ್ತ)

ಮಂದಾರ(ಹೈಕು ಸಂಕಲನ)
ಲೇಖಕರು:ಅಯ್ಯಪ್ಪಯ್ಯ ಹುಡಾ
ಪುಟಗಳು:೧೧೨ ಬೆಲೆ:೧೦೦
ಪ್ರಕಾಶಕರು:ಅಮರ ಬಸವ ಪ್ರಕಾಶನ ರಾಯಚೂರು

ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ನೋಡಿದಾಗ ಸಾಹಿತ್ಯದ ಪ್ರಕಾರದ ಹಲವು ಧಾರೆಗಳ ಮೂಲ ನೆಲವು ರಾಯಚೂರಾಗಿದೆ. ಅದರಲ್ಲಿ ಹೈಕು ರಚನೆಗಳಲ್ಲಿ ಯಾವುದೆ ಭಾಗದಲ್ಲಿ ಆಗದಂತಹ ಸೃಜನಶೀಲತೆ ಈ ನೆಲದಲ್ಲಿ ಆಗುತ್ತಿದೆ. ಮಕ್ಕಳ ಕವಿತೆ, ಚರಿತ್ರೆ, ಕಾವ್ಯ, ಕಾದಂಬರಿ, ಶರಣ ಸಾಹಿತ್ಯ, ಆಧ್ಯಾತ್ಮ ವಿಶೇಷವಾಗಿ ಹಾಸ್ಯ ಪ್ರಬಂಧ ಸಂಕಲನ ಹೀಗೆ ಹಲವು ಪ್ರಕಾರಗಳ ೨೧ ಕೃತಿಗಳನ್ನು ಕನ್ನಡ ಸಾರಸ್ವತಕ್ಕೆ ನೀಡಿರುವ ನಗುಮೊಗದ ಎಪ್ಪತ್ತರ ಹಿರಿತನದಲ್ಲಿದ್ದರೂ ಯುವಕರನ್ನು ನಾಚಿಸುವಂತಹ ಜೀವನೋತ್ಸಾಹ ಹೊಂದಿರುವ ಅಯಪ್ಪಯ್ಯ ಹುಡಾರವರು ೨೨ನೇ ಕೃತಿಯಲ್ಲಿ ಅದೆ ಹರೆಯಕ್ಕೆ ಇಳಿದಿದ್ದಾರೆ.

ಎಲ್ಲಾ ಪ್ರಕಾರಗಳಲ್ಲೂ ತಮ್ಮ ಗುರುತರ ಹೆಜ್ಜೆ ಮೂಡಿಸಿರುವ ಹುಡಾರವರು ‘ಅಂಕುರ’ದ ಮೂಲಕ ಅಂಕುರಿಸಿ ಪ್ರಸ್ತುತ ಮಂದಾರ ಸಂಕಲನ ಮೂಲಕ ಹೈಕು ಘಮಲನ್ನು ಪಸರಿಸಿದ್ದಾರೆ.

ಹೈಕು ನಮ್ಮ ಭಾಷೆಗೆ ಹೊಸದು. ಜಪಾನಿಯರ ಈ ವಿಶಿಷ್ಟ ಕಾವ್ಯ ಪ್ರಕಾರವನ್ನು ನಮ್ಮ ನೆಲಭಾಷೆಗೆ ಒಳಪಡಿಸಿ ಹೃದಯಕ್ಕೆ ತಾಗುವಂತಹ ಪ್ರಯತ್ನ ಮಾಡಿದ್ದಾರೆ. ೫+೭+೫ ಅಕ್ಷರಗಳ ವಿನ್ಯಾಸದ ಹೈಕು ನೋಡಲು ಸರಳ ಎನಿಸಿದರು ರಚನೆ ಬಲು ಕಷ್ಟ. ಒಂದು ಸಾಲು ಜ್ಞಾನೇಂದ್ರಿಯಾನುಭವ ಎರಡನೆ ಸಾಲು ಇನ್ನೊಂದು ಸಂದರ್ಭಕ್ಕೆ ಅಥವಾ ಭಾಗಕ್ಕೆ ಪ್ರವೇಶ ಮೂರನೆ ಸಾಲು ಹೊಸತನ್ನು ಸೃಷ್ಟಿಸಿ ಅಚ್ಚರಿಗೊಳಿಸುವಂತೆ ಮಾಡುವ ಕೌಶಲ. ಇದು ಎಲ್ಲರಿಗೂ ಆಗದು. ಅಪಾರ ಜೀವಾನುಭವ ಹೊಂದಿದ ಹುಡಾ ಗುರುಗಳಂತವರಿಂದ ಮಾತ್ರ ಸಾಧ್ಯ ಹಾಗೆ ಯಶಸ್ವಿಯೂ ಆಗಿದ್ದಾರೆ.

ಮುನ್ನುಡಿಯಲ್ಲಿ ಹಿರಿಯ ಕವಿಗಳಾದ ಮಂಡಲಗಿರಿ ಪ್ರಸನ್ನ ಅವರು ‘ಐದು ದಶಕಗಳ ಕಾಲ ಸಾಹಿತ್ಯದ ಒಲವ ಗುಟುಕನ್ನು ಹನಿಹನಿಯಾಗಿ ಮನೆಯಿಂದ ಸಮಾಜದಿಂದ ಪಡೆದವರು ಎಪ್ಪತ್ತರ ಏರು ವಯಸ್ಸಿನಲ್ಲಿ ಅವರ ಅನುಭವಕ್ಕೆ ಸಾಣಿ ಹಿಡಿದಂತೆ ಈ ಹೈಕು ಸಂಕಲನ ಪ್ರಕಟವಾಗುತ್ತಿದೆ’ ಅಭಿಪ್ರಾಯಿಸಿದಂತೆ ಸತ್ಯವೂ ಆಗಿದೆ. ದಿನಕ್ಕೊಂದರಂತೆ ಹಠವಿಡಿದು ಕುಳಿತು ಬರೆದಂತಿರುವ ೩೬೫ ಹೈಕುಗಳು ನಿಜಕ್ಕೂ ದಿನಕ್ಕೊಂದು ಗುಟುಕು ನೆತ್ತಿಗೆ ಕುಡಿಸಬಹುದಾದ ಒಳ್ಳೆಯ ಟಾನಿಕ್ ಇದ್ದಂತೆ ಇವೆ. ನವರಸಗಳಿಂದ ಕೂಡಿರುವ ಈ ಎಲ್ಲಾ ಹೈಕುಗಳು ಭಾವಾನಂದ ನೀಡುತ್ತವೆ.
ಬದುಕಬೇಕು/ನಾಕು ಮಂದಿ ಮೆಚ್ಚುವ/ಸೌಂಧರ್ಯದAತೆ
ಹಾವಿನ ಹಲ್ಲು/ಕಿತ್ತುವ ಮುನ್ನ ನಿನ್ನ/ಸೊಕ್ಕನ್ನು ಕೊಲ್ಲು
ಮಾತಲ್ಲಿ ಸೋತು/ಮೌನದಲ್ಲಿ ಗೆದ್ದವ/ಧ್ಯಾನಸ್ಥ ಸಂತ
ಕಣ್ಣು ನೋಡಿತು/ಬಾಯಿ ಆಡಿತು ಪೆಟ್ಟು/ಮಾತ್ರ ಬೆನ್ನಿಗೆ

ಮೇಲಿನ ಈ ಮೂರು ಹೈಕುಗಳು ದರ್ಶಿಸುವ ಒಳನೋಟ ಎಂತಹದು. ಅಪಾರ ಜೀವನಾನುಭವದ ಹಿನ್ನಲೆಯಲ್ಲಿ ಮೂಡಿ ಬಂದ ಈ ಹೈಕುಗಳು ಚಿಂತನೆಗೆ ಹಚ್ಚುತ್ತವೆ.
ಅದೇ ರೀತಿಯಲ್ಲಿ ತಮ್ಮ ಎಂದಿನ ವಿಡಂಬನೆಯ ಬರವಣಿಗೆಯನನು ಹೈಕುಗಳಲ್ಲಿಯೂ ತೋರಿಸಿ ಚಿಂತಿಸುವAತೆ ರಂಜಿಸುತ್ತಾರೆ. ಹುಡಾರವರಿಗೆ ವಯಸ್ಸು ಎಪ್ಪತ್ತೊ ಇಪ್ಪತ್ತೋ ಎನ್ನುವ ಸಂಶಯವನ್ನು ಹೈಕಿನ ಮೂಲಕ ಮೂಡಿಸುತ್ತಾರೆ ಎನ್ನುವುದಕ್ಕೆ ಈ ಹೈಕುಗಳೆ ನಿದರ್ಶನ.
ಉಪವಾಸಕೆ/ಹಣ್ಣು ಹಂಪಲ ಹಾಲು/ಬಲಿಯಾಗಿತ್ತು
ವಿಚಾರವಾದಿ /ಆಚಾರ ಬಿಟ್ಟು/ ಪ್ರಚಾರಿಯಾದ
ನಿರೋಧವೇಕೆ/ನಪುಂಸಕಗೆ ವೃಥಾ/ಸಮಯ ವ್ಯರ್ಥ
ಬೆಳದಿಂಗಳೂ /ಕೂಡಾ ಬೆಂಕಿಯಾಗಿತ್ತು/ವಿರಹದಲಿ/
ಚುನಾವಣೆಯ /ಸಂದರ್ಭ ಮತದಾರ/ ಪ್ರಯೋಗ ಪಶು

ಸದರಿ ಸಂಕಲನದ ಕವಿಯ ಹೈಕುವಿನೊಂದಿಗೆ ಹೊಂದಿರುವ ತಾದಾತ್ಮತೆಯನ್ನು ಕೆಳಗಿನ ಹೈಕುಗಳು ರುಜುವಾತುಪಡಿಸುತ್ತವೆ.
ಕಂಬನಿಯದು/ ಬಿಸಿಯಾದುದೇಕೆ/ನೋವು ಕುದಿತ
ಉದಯರವಿ/ಸದಾ ಕಾಯಕ ಜೀವಿ/ಸಂತೃಪ್ತಿ ಸಂತ
ಸಮುದ್ರರಾಜ /ಜಗದ ನೋವನುಂಡು/ಉಪ್ಪೊಡಲಾದ
ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಉಳಿದಿರದ ವಿಷಯವಿಲ್ಲ ಎನ್ನುವಂತೆ ಇಲ್ಲಿಯ ಹೈಕುಗಳು ಸಮಾಜದ ಎಲ್ಲಾ ಸ್ಥರಗಳನ್ನು ಬಿಡದೆ ಮುಟ್ಟಲು ಪ್ರಯತ್ನಿಸಿವೆ. ಕೆಲವೊಂದು ರಚನೆಗಳು ಮನಸ್ಸಿಗೆ ಚಿಂತನೆಗೆ ಒಳಪಡಿಸುತ್ತವೆ, ಆಹ್ಲಾದವನ್ನುಂಟು ಮಾಡುತ್ತವೆ. ಪುಟದಷ್ಟು ಹೇಳುವ ವಿಷಯವನ್ನು ಪುಟ್ಟ ರಚನೆಯಲ್ಲಿ ಹೇಳಿರುವುದು ಬೆರಗು ಮೂಡಿಸುತ್ತದೆ. ಕೆಲೆ ಹೈಕುಗಳು ಅವರಿಂದ ಏಕೆ ರಚಿತಗೊಂಡವು ಎನ್ನುವ ಪ್ರಶ್ನೆಯನ್ನು ಹುಟ್ಟಿಸುತ್ತವೆ.

ಹೈಕು ರಚನೆ ಒಂದು ಧ್ಯಾನ ಮಾರ್ಗ. ಜೀವನ ಮಾರ್ಗ. ಧ್ಯಾನ ಪ್ರಪಂಚವನ್ನು ಅರ್ಥೈಸಿಕೊಂಡು ಹೊಸ ಚಿಂತನೆಯನ್ನು ಸೃಜಿಸುವ ಸಾಧ್ಯತೆಯನ್ನು ತಂದು ಕೊಡುತ್ತದೆ. ಆ ಸಾಧ್ಯತೆಯೆ ಇಂತಹ ಹೊಸ ಬಗೆಯ ಹೊಸ ಒಳನೋಟದ ಹೈಕುಗಳಿಗೆ ಕಾರಣವಾಗಿದೆ. ಅಪಾರ ಅರ್ಥ ಕೊಡುವ ನಮ್ಮ ತ್ರಿಪದಿಯ ರಚನೆಯಂತೆಯೆ ಇರುವ ಹೈಕು ಒಂದರ್ಥ ದಲ್ಲಿ ೧೭ ಅಕ್ಷರಗಳ ಅಲಂಕಾರದ ಸೊಬಗು ಅನ್ನಬಹುದು. ಹೈಕುವಿನಲ್ಲಿ ವ್ಯಾಕರಣದ ಹಲವು ಅಲಂಕಾರಗಳು ಸಾಂದರ್ಭಿಕವಾಗಿ ಪ್ರವೇಶ ಪಡೆದಿವೆ ಏನೊ ಎನಿಸುತ್ತವೆ. ಅದು ನನ್ನ ವ್ಯಕ್ತಿಗತ ಅಭಿಪ್ರಾಯ. ತ್ರಿಪದಿ ರಚನೆ ಸುಲಭವಾದರು ಕಡಿಮೆ ಅಕ್ಷರಗಳಲ್ಲಿ ಹಲವು ವಿಚಾರಗಳನ್ನು ಸೆರೆಹಿಡಿಯುವ ಹೈಕು ರಚನೆ ತುಸು ಕಷ್ಟವೆ.
‘ಮಂದಾರ’ ಕೃತಿಯ ಮೂಲಕ ತಮ್ಮದೆ ವಿಶಿಷ್ಟ ಹೈಕುವಿನ ಪರಿಮಳದ ಐಸಿರಿಯನ್ನೆ ಸೂಸಿರುವ ಅಯ್ಯಪ್ಪಯ್ಯ ಹುಡಾ ರವರು ವಯಸ್ಸಾದರೂ ಹೊಸ ಪ್ರಕಾರಕ್ಕೆ ಸಿದ್ಧ ಎಂದು ಸೆಡ್ಡು ಹೊಡೆದು ಪಂಥಾಹ್ವಾನ ಸ್ವೀಕರಿಸಿ ಸಂಕಲನ ಪ್ರಕಟಿಸಿದಂತಿದೆ. ನನಗೆ ನೋವೆನಿಸುವುದು ಈ ಸಂಕಲನದಲ್ಲಿ ಅಧ್ಭುತವಾಗಿ ಕಾವ್ಯವಾಗುವ ಎಷ್ಟೋ ಸಾಲುಗಳು ಹೈಕುಗಳಾಗಿ ಕುಬ್ಜವಾಗಿ ಬಿಟ್ಟವಲ್ಲ ಎನ್ನುವುದು. ಇರಲಿ ನಗುಮೊಗದ, ಲವಲವಿಕೆಯ, ನೋವಿನಲ್ಲೂ ನಲಿವನ್ನು ಹುಡುಕುವ ಅಯ್ಯಪ್ಪಯ್ಯ ಹುಡಾ ಗುರುಗಳಿಂದ ಮನಸ್ಸನ್ನು ಉಲ್ಲಾಸ ಗೊಳಿಸುವ, ಜೊತೆಗೆ ಚಾಟಿಯ ಏಟನ್ನು ನೀಡುವ ಎಂದಿನ ಹಾಸ್ಯ ಪ್ರಬಂಧ, ಅನುಭವ ಮುಖಿ ಕಾವ್ಯವನ್ನು ನಾನು ನಿರೀಕ್ಷಿಸುತ್ತೇನೆ.

-ಗುಂಡುರಾವ್ ದೇಸಾಯಿ ಮಸ್ಕಿ

Don`t copy text!