ನೇಮದ ಕೂಲಿಯ ಬಿಟ್ಟು
ಹನ್ನೆರಡನೆಯ ಶತಮಾನದ ಪ್ರಸಿದ್ಧ ಶರಣರಲ್ಲಿ “ನುಲಿಯ ಚಂದಯ್ಯ“ನವರು ಪ್ರಮುಖರು. ಬಸವಣ್ಣನವರ ಶಿವಯೋಗ-ಕಾಯಕ-ದಾಸೋಹ ಸೂತ್ರದಂತೆ ಪವಿತ್ರ ಜೀವನ ಸಾಗಿಸುತ್ತಿದ್ದರು. ಪ್ರತಿದಿನ ಹಳ್ಳದಾಚೆಯ ದಂಡೆಗೆ ಹೋಗಿ ಹುಲ್ಲು ತಂದು, ಅದರಿಂದ ನುಲಿ, ಹಗ್ಗ, ಕಣ್ಣಿ ಹೊಸೆದು ಮಾರುವ ಕಾಯಕ ಅವರದ್ದು,ಬಂದ ಹಣದಿಂದ ತಪ್ಪದೇ ದಾಸೋಹ ಮಾಡುತ್ತಿದ್ದರು.
ಒಮ್ಮೆ ಬಾಗಿ ಹುಲ್ಲು ಕೊಯ್ಯುವಾಗ ಎದೆಯ ಮೇಲಿನ ಇಷ್ಟಲಿಂಗ ಜಾರಿ ಹಳ್ಳದ ನೀರಿಗೆ ಬಿತ್ತು. ಸತ್ಯ ಶುದ್ಧ ಕಾಯಕ, ನಿತ್ಯ ದಾಸೋಹಕ್ಕೆ ಚ್ಯುತಿಯಾಗಬಾರದು, ಅದಕ್ಕೆ ಇಷ್ಟಲಿಂಗ ಅಡ್ಡಿಯಾಯಿತೆಂದು ಜಾರಿದ ಲಿಂಗ ಎತ್ತಿಕೊಳ್ಳದೆ ಹುಲ್ಲಿನ ಹೊರೆ ಹೊತ್ತು ಹೊರಟರು.”ನನ್ನನ್ನು ಧರಿಸಿಕೋ ಚಂದಯ್ಯ”ಎನ್ನುತ್ತಾ ಲಿಂಗಯ್ಯನೇ ಅವರನ್ನು ಹಿಂಬಾಲಿಸಿದ.
‘ನಾನು ಹೋಗೆನ್ನದೆ ಹೋಗಿರುವ ನಿನ್ನನ್ನು ಮರಳಿ ಸ್ವೀಕರಿಸಲಾರೆ, ನನಗೆ ಜಂಗಮ ದಾಸೋಹವೇ ಸಾಕು’ಎಂದ ನುಲಿಯ ಚಂದಯ್ಯ. ಇವರಿಬ್ಬರ ವಾದದಲ್ಲಿ ಮಧ್ಯಸ್ಥಿಕೆ ವಹಿಸಿದ ಮಡಿವಾಳ ಮಾಚಿದೇವರರು”ಲಿಂಗವಿಲ್ಲದೆ ಜಂಗಮ ದಾಸೋಹ ಸ್ವೀಕರಿಸಲಾರ ಚಂದಯ್ಯ, ಲಿಂಗಯ್ಯನನ್ನು ಸ್ವೀಕರಿಸು” ಎಂದು ಮನ ಒಲಿಸಿದರು. ” ನನ್ನ ಕಾಯಕದಲ್ಲಿ ನೆರವಾಗುವುದಾದರೆ ಮರಳಿ ಬರಲಿ “ಎಂದ ಚಂದಯ್ಯನವರ ಮಾತಿಗೆ ಲಿಂಗಯ್ಯ ಒಪ್ಪಿದ. ಚಂದಯ್ಯನವರು ಹೊಸೆದ ಹಗ್ಗ ಮಾರಲು ಲಿಂಗಯ್ಯ ಮಹಾಮನೆಯತ್ತ ಹೋದ. ಗುರುತಿಸಿದ ಬಸವಣ್ಣನವರು ಹತ್ತಕ್ಕೆ ಬದಲು ಸಾವಿರ ಹೊನ್ನು ಕೊಟ್ಟು ಹಗ್ಗ ಖರೀಸಿದರು. ಚಂದಯ್ಯನವರು ಹೆಚ್ಚಿನ ಹೊನ್ನು ಕಂಡು ಕಿಡಿ ಕಿಡಿಯಾಗುತ್ತಾರೆ. ಇದು ದುರಾಸೆಯಿಂದ ಬಂದ ಹೊನ್ನು, ಕಾಯಕಕ್ಕೆ ಸಲ್ಲದು.”ನೇಮದ ಕೂಲಿ ಯ ಬಿಟ್ಟು ಹೇಮಾದಾಸೆಗೆ ಕಾಮಿಸಿ ದ್ರವ್ಯವ ಹಿಡಿದರೆ ತಾ ಮಾಡುವ ಸೇವೆ ನಷ್ಟವಯ್ಯಾ” ಎಂದು ಹತ್ತು ಮಾತ್ರ ಇಟ್ಟುಕೊಂಡು ಉಳಿದ ಹೊನ್ನು ಹಿಂದಿರುಗಿಸಿ ಬರಲು ಮತ್ತೆ ಲಿಂಗಯ್ಯನನ್ನು ಕಳುಹಿಸಿದರು.
ತಾವು ನಂಬಿದ ತತ್ವಗಳ ಆಚರಣೆಯಲ್ಲಿ ಎಂತಹ ಶ್ರದ್ಧೆಯಿತ್ತು ನುಲಿಯ ಚಂದಯ್ಯನವರಿಗೆ ಎಂಬುದು ತಿಳಿಯುತ್ತದೆ,ಆಸೆ ಅವರ ಹತ್ತಿರ ಸುಳಿಯಲಿಲ್ಲ. ಅಂತೆಯೇ ಅಂದು ಕಲ್ಯಾಣದಲ್ಲಿ ನೀಡುವವರುಂಟು ಬೇಡುವವರಿಲ್ಲ ಎಂಬಂತಹ ಸಮೃದ್ಧ ಶರಣ ಸಮಾಜ ನಿರ್ಮಾಣಗೊಂಡಿತ್ತು.
–ಶ್ರೀಮತಿ ರೇಖಾ ಶಿವಯೋಗಿ ವಡಕಣ್ಣವರ್
ಲಕ್ಷ್ಮೇಶ್ವರ.