ವಚನ ಸಾಹಿತ್ಯದಲ್ಲಿ ಆಯಗಾರರ ಸಾಂಪ್ರದಾಯಿಕ
ಕೌಶಲ್ಯ ಮತ್ತು ಆರ್ಥಿಕ ಅಭಿವೃದ್ಧಿಯ ಆಯಾಮಗಳು
ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಜನಿಸಿ ಕೆನಡಾದ ಮಾಂಟ್ರಿಯಲ್ ನಲ್ಲೇ ಬೆಳೆದು ಕೆನಡಾದ ಪ್ರಜೆಯಾದ “ಕೀಥ್ ಬೆಲ್ಲೋಸ್ (1951-2015)” ನ್ಯಾಶನಲ್ ಜಿಯೋಗ್ರಾಫಿಕ್ ಟ್ರಾವೆಲ್ಲರ್ ನಲ್ಲಿ ಮುಖ್ಯ ಸಂಪಾದಕರಾಗಿ 17 ವರ್ಷ ಕೆಲಸ ಮಾಡುತ್ತಾ ಪ್ರಪಂಚದಾದ್ಯಂತ ಸುತ್ತಿದವರು.
When I first visited India, I was stunned by the richness of land, by its lush beauty and exotic architecture, by its ability to overload the senses with the pure, concentrated intensity of its colors, smells, tastes, and sounds. It was as if all my life I had been seeing the World in black and white and, when brought face-to-face with India, experienced everything re-rendered in brilliant Technicolor.
ಭಾರತದ ಜಾನಪದ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಸಂಸ್ಕೃತಿಗಳ ಸಮ್ಮಿಳಿತ ಮತ್ತು ಸುವ್ಯವಸ್ಥಿತ ಗ್ರಾಮೀಣ ಪರಿಸರ ಅತ್ಯಂತ ಉನ್ನತ ಮಟ್ಟದಲ್ಲಿತ್ತು ಎನ್ನುವುದನ್ನು ಅವರು ಮಾರ್ಮಿಕವಾಗಿ ಉಲ್ಲೇಖಿಸಿದ್ದಾರೆ.
ನಾನು ಭಾರತಕ್ಕೆ ಮೊದಲನೇಯ ಸಾರಿ ಬಂದಾಗ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ ಮಣ್ಣಿನ ಫಲವತ್ತತೆ, ಹಚ್ಚ ಹಸುರಿನಿಂದ ಕಂಗೊಳಿಸುವ ಕಣ್ಮನ ತಣಿಸುವ ಸ್ವಚ್ಛ ಸುಂದರ ಪರಿಸರ, ವೈವಿಧ್ಯಮಯ ಮತ್ತು ವಿಶಿಷ್ಠ ವಾಸ್ತುಶಿಲ್ಪ ಕಲಾಕೃತಿಗಳನ್ನೊಳಗೊಂಡ ಅದ್ಭುತ ದೇವಾಲಯಗಳು ಹೃನ್ಮಣ ತಣಿಸಿ ಮನಸ್ಸಿಗೆ ಮುದ ನೀಡಿದ್ದನ್ನು ಸದಾಕಾಲ ಸ್ಮರಿಸುತ್ತೇನೆ. ಇಂಥ ಭಾರತೀಯ ವೈಭವಗಳ ಚಿತ್ರಣಗಳು ಮುಖಾಮುಖಿಯಾಗುವ ಮುನ್ನ ಇಡೀ ಪ್ರಪಂಚ ನನಗೆ ಕಪ್ಪು-ಬಿಳುಪಿನ ಲೋಕದ ಚಿತ್ರಣ ಎನಿಸಿತ್ತು. ಇಂಥ ಸುಂದರ ಬಣ್ಣ-ಬಣ್ಣದ ಕಲಾಕೃತಿಗಳ ದರ್ಶನದಿಂದ ಒಂದು ಹೊಸ ಪ್ರಪಂಚ ನನಗೆ ಮರುಸೃಷ್ಠಿಯಾದ ಅನುಭವವಾಗಿದೆ.
ಭಾರತ ಕೃಷಿ ಆಧಾರಿತ ದೇಶ. ಶೇಕಡ 60 ರಿಂದ 65 ರಷ್ಟು ಪ್ರಜೆಗಳು ಕೃಷಿ ಅಥವಾ ಕೃಷಿ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Our culture is Agriculture “ನಮ್ಮದು ಕೃಷಿ ಸಂಸ್ಕೃತಿ” Agriculture is Mother of all cultures, ಎನ್ನುವದು ಭಾರತದ ಪರಿಕಲ್ಪನೆ. ಎಲ್ಲ ಕಾಯಕಗಳಿಗೂ ಮತ್ತು ಸಂಸ್ಕೃತಿಗಳಿಗೂ ತಾಯಿಯ ಸ್ಥಾನದಲ್ಲಿರುವುದೇ ವ್ಯವಸಾಯ.
ಹಾಗೆಯೇ ವ್ಯವಸಾಯ ಕೇಂದ್ರೀಕೃತ ಕೆಲಸ-ಕಾರ್ಯಗಳಿಗೆ ಬೇಕಾಗುವಂಥ ಪರಿಕರಗಳನ್ನು ತಯಾರಿಸುವ ಕಾಯಕ ಯೋಗಿಗಳನ್ನು ಬಸವಣ್ಣನವರು “ಆಯಗಾರರು” ಎಂದು ಕರೆದು, ಅವರ ಕಾಯಕಕ್ಕೆ ದೈವತ್ವವನ್ನು ಕಲ್ಪಿಸಿದರು. ಅರ್ಧದಷ್ಟು ಜನರು ನೇರವಾಗಿ ವ್ಯವಸಾಯದಲ್ಲಿ ತೊಡಗಿಸಿಕೊಂಡರೆ ಇನ್ನುಳಿದವರು ವ್ಯವಸಾಯಕ್ಕೆ ನೆರವಾಗುವ ಪರಿಕರಗಳನ್ನು ತಯಾರಿಸುವ ವೃತಿಯಲ್ಲಿ ತೊಡಗಿಸಿಕೊಂಡವರು. ಇದನ್ನೇ 12 ನೇ ಶತಮಾನದಲ್ಲಿ ಬಸವಣ್ಣವರು ತಮ್ಮ ಒಂದು ವಚನದಲ್ಲಿ ಹೇಳಿದ್ದು.
ನಾನು ಆರಂಬವ ಮಾಡುವೆನಯ್ಯಾ | ಗುರುಪೂಜೆಗೆಂದು ||
ನಾನು ಬೆವಹಾರವ ಮಾಡುವೆನಯ್ಯಾ | ಲಿಂಗಾರ್ಚನೆಗೆಂದು ||
ನಾನು ಪರಸೇವೆಯನು ಮಾಡುವೆನಯ್ಯಾ | ಜಂಗಮ ದಾಸೋಹಕ್ಕೆಂದು ||
ನಾನಾವಾವ ಕರ್ಮಂಗಳ | ಮಾಡಿದಡೆಯು ||
ಆ ಕರ್ಮಫಲಭೋಗವ ನೀ ಕೊಡುವೆ | ಎಂಬುದ ನಾನು ಬಲ್ಲೆನು ||
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ | ಮತ್ತೊಂದಕ್ಕೆ ಮಾಡೆನು ||
ನಿಮ್ಮ ಸೊಮ್ಮಿಂಗೆ ಸಲಿಸುವೆನು | ನಿಮ್ಮಾಣೆ ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-65 / ವಚನ ಸಂಖ್ಯೆ-709)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಆರಂಬ : ವ್ಯವಸಾಯ, ವೃತ್ತಿ, ಕಾಯಕ
ಬೆವಹಾರ : ವ್ಯಾಪಾರ, ವಹಿವಾಟು
ಪರಸೇವೆ : ಸೇವೆಗಳು, ಸೌಕರ್ಯಗಳನ್ನು ಒದಗಿಸುವುದು.
ಸೊಮ್ಮು : ಸಂಪತ್ತು, ಸಂಬಂಧ, ಸೊಬಗು, ಸೊತ್ತು, ಆಸ್ತಿ
ಎಷ್ಟು ಅದ್ಭುತವಾಗಿ ಹೇಳುತ್ತಾರೆ ಬಸವಣ್ಣನವರು. “ಆರಂಬವ ಮಾಡುವೆನಯ್ಯಾ ಗುರುಪೂಜೆಗೆಂದು”, ಆರಂಬ ಅಂದರೆ ವ್ಯವಸಾಯ. ಎಲ್ಲ ಕಾಯಕಗಳಿಗೂ ಮತ್ತು ಸಂಸ್ಕೃತಿಗಳಿಗೂ ತಾಯಿಯ ಸ್ಥಾನದಲ್ಲಿರುವುದೇ ವ್ಯವಸಾಯ.
I start my work with agriculture. I take agriculture as a culture, which is mother of all cultures under the sun.
“ಆಯ” ಎಂದರೆ ವ್ಯವಸಾಯ ದೃಷ್ಟಿಯಲ್ಲಿ ಆದಾಯ ಅಥವಾ ಭೂಮಿಯಿಂದ ಬರುವ ಲಾಭ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ ವ್ಯವಸಾಯಕ್ಕೆ ಬೇಕಾದ ಸೇವೆ ಮತ್ತು ಸಲಕರಣೆಗಳನ್ನು ತಯಾರಿಸಿ ಒದಗಿಸಿ ಕೋಡುವ ಕಾಯಕ ಸಮುದಾಯಕ್ಕೆ ರೈತರು ತಾವು ಬೆಳೆದ ಕಾಳು-ಕಡಿಗಳಲ್ಲಿನ ಒಂದು ಪಾಲನ್ನು ನೀಡುವ ಪ್ರತಿಫಲಕ್ಕೆ “ಆಯ” ಎಂದು ಕರೆಯಲಾಗುತ್ತದೆ. ಕಾರ ಅಥವಾ ಗಾರ ಪ್ರತ್ಯಯವನ್ನು ಸೇರಿಸಿ “ಆಯಗಾರ” ಎನ್ನುವ ಶಬ್ದ ಉತ್ಪತ್ತಿಯಾಗಿದೆ. ಅಂದರೆ ರೈತರ ಆದಾಯಕ್ಕೆ ಕೈ ಜೋಡಿಸುವವರು ಆಯಗಾರರು. ಉತ್ತರ ಕರ್ನಾಟಕದಲ್ಲಿ ಆಯಗಾರರಿಗೆ “ಬಾರಾಬುಲತೆ”, ಹಳೆ ಮೈಸೂರು ಭಾಗದಲ್ಲಿ “ಅಡದೆಯವರು” ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ “ಎಚ್ಚಗಾರರು” ಅಂತನೂ ಗುರುತಿಸುತ್ತಾರೆ. ಇನ್ನು ಉತ್ತರ ಭಾರತದಲ್ಲಿಯೂ ಕೂಡ ಆಯಗಾರರನ್ನು ಜಜಮಾನಿ, ಕಾಮೀನ್, ಫರ್ಜನ್, ಪರ್ಧಾನ್, ಕಾಮವಾಲೆ ಅಂತಲೂ ಪ್ರದೇಶಿಕವಾಗಿ ಕರೆಯುವುದು ರೂಢಿಯಲ್ಲಿದೆ.
ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಮಾನತೆಯನ್ನು ಬಿಂಬಿಸುವಲ್ಲಿ ಗ್ರಾಮದಲ್ಲಿದ್ದ ಗೌಡರು, ಪಟೇಲರು, ಶಾನುಭೋಗರು, ಬಣಗಾರ, ತಳವಾರ, ತೋಟಿ, ನೀರಗಂಟಿ, ಅಕ್ಕಸಾಲಿಗ, ಕಮ್ಮಾರ, ಮಡಿವಾಳ, ಕ್ಷೌರಿಕ ಮುಂತಾದ ಎಲ್ಲ ಆಯಗಾರರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಬರುತ್ತಾರೆ. ಪರಸ್ಪರ ಅವಲಂಬನೆ, ಕರ್ತವ್ಯವೇ ದೇವರು ಎನ್ನುವ ತತ್ವ, ನಂಬಿಕೆಗಳು ಈ ಆಯಗಾರರ ಸಿದ್ಧಾಂತಗಳು. ಅದು ಸಮೂಹ ಹೊಣೆಗಾರಿಕೆಯ ಸಂಗತಿಯಾಗಿತ್ತು. ಸುಗಮವಾದ ಜೀವನ ನಡೆಸಲು ಒಂದು ದಾರಿ ಮಾಡಿಕೊಂಡಿದ್ದ ಆಯಗಾರರನ್ನು ಕೂಲಿ ಕಾರ್ಮಿಕರನ್ನಾಗಿ ಗ್ರಾಮೀಣ ಜನರು ಎಂದೂ ನಡೆಸಿಕೊಂಡಿದ್ದಿಲ್ಲ. ಒಂದು ಸಮೂಹ, ಸಮುದಾಯ ಅಥವಾ ಆಯಾ ಪ್ರದೇಶದ ಸಂಸ್ಕೃತಿ, ಸಾಮಾಜಿಕ ಧಾರ್ಮಿಕ ಪ್ರಜ್ಞೆಯಿಂದ ಸುಗಮವಾಗಿ ನಡೆಯುವಲ್ಲಿ ಆಯಗಾರರು ಪ್ರಮುಖ ಪಾತ್ರವಹಿಸುತ್ತಾರೆ. ಆಯಗಾರರ ಪರಿಕಲ್ಪನೆಯನ್ನು ನಮ್ಮ ಜಾನಪದರು ಎಷ್ಟು ಸೊಗಾಗಿ ಹೇಳಿದ್ದಾರೆಂದರೆ ಗ್ರಾಮೀಣ ಆರ್ಥಿಕ ಮಾದರಿಯನ್ನೇ ನೀಡುತ್ತದೆ.
ಸುಣಗಾರ ಮನೀಯಿಂದ | ಸುಣ್ಣ ತಂದು ಮನೀ ಸಾರಿಸಿ ||
ರೈತರ ಮನೀಯಿಂದ | ಜೋಳಾ ತಂದ ||
ವಡ್ಡರ ಮಾಡಿದ | ಬೀಸುಕಲ್ಲಿನ್ಯಾಗ ಜೋಳಾ ಬೀಸಿ ||
ಬಡಿಗೇರ ಮಾಡಿದ | ಕೊಮ್ಮಣಿಗ್ಯಾಗ ರೊಟ್ಟಿ ಬಡದ ||
ಕಂಬಾರ ಮಾಡಿದ | ತೆವಿ ಮ್ಯಾಗ ರೊಟ್ಟಿ ಸುಟ್ಟು ||
ಮ್ಯಾದರ ಮಾಡಿದ | ಬುಟ್ಯಾಗ ರೊಟ್ಟಿ ಹಾಕತೇವರೀ ||
ಕುಂಬಾರ ಮಾಡಿದ | ಗಡಿಗ್ಯಾಗ ಅಡಿಗಿ ಮಾಡತೇವರೀ ||
ಕಿರಸ್ಯಾರ ಮುಂದ ಡೊಗ್ಗಿ | ನಾವು ತೆಲಿ ಬೋಳಸಿಕೊಂಡ ||
ಸಿಂಪಿಗ್ಯಾರ ಹೊಲದ | ಅಂಗಿ ತೊಟಗೊಂಡ ದೇವರಿಗೆ ಹೋಗಿ ||
ಹೂಗಾರ ಮನೀಯಿಂದ | ಹೂವ ತಂದು ದೇವರಿಗೆ ಏರಸತೇವರಿ ||
ಕೊರವರ ಮಾಡಿದ | ನೆಲವಿನ ಮ್ಯಾಲ ಹಾಲಿನ ಗಡಿಗಿ ಇಟ್ಟು ||
ಹೆಪ್ಪ ಹಾಕಿ ಮಾರನೇ ದಿನಾ | ಬೆಣ್ಣಿ ಕಡದ ತುಪ್ಪಾ ತೆಗೆದ ||
ಆ ತುಪ್ಪಾ ಕಾಸಿ ದೇವರಿಗೆ | ಎಣ್ಣಿ ಬತ್ತಿ ಹಚ್ಚತೇವರಿ ||
ಕ್ರ.ಸಂ. ಕಸುಬುದಾರ ಕ್ರ.ಸಂ. ಕಸುಬುದಾರ ಕ್ರ.ಸಂ. ಕಸುಬುದಾರ
1 ಪಂಚಮಸಾಲಿ 26 ಮಾಳಗಾರ 51 ಒಕ್ಕಲುಗ
2 ಬಣಜಿಗ 27 ನಾಯಿಂದ 52 ಗೌಡ
3 ಅಗಸ 28 ನೀಲಗಾರ 53 ಜವಳಿ
4 ಅಕ್ಕಸಾಲಿಗ 29 ಶಿವಸಿಂಪಿಗ 54 ಪಟ್ಟಸಾಲಿ
5 ಅಂಬಿಗ 30 ಉಪ್ಪಾರ 55 ಹಂಡೇವಜೀರ
6 ಭಂಡಾರಿ 31 ಮಡಿವಾಳ 56 ಶೆಟ್ಟರು
7 ಜಂಗಮ 32 ಮೇದಾರ 57 ಎಲಿಗಾರ
8 ಭೋವಿ 33 ಮಾದಾರ 58 ಮಾಳಿ
9 ಗಂಗಾಮತ 34 ಸಮಗಾರ 59 ತೋಟಿಗೇರ
10 ಗೌಳಿ 35 ಡೋಹರ 60 ತಮ್ಮಡಿಗರು
11 ಗುರವ 36 ನಗರ್ತ 61 ಬಣಗಾರ
12 ಹೆಳವ 37 ನಾವಲಿಗ 62 ನಾವಿ
13 ಜೇಡರ 38 ನೇಕಾರ 63 ತಳವಾರ
14 ಕಂಬಾರ 39 ನೊಳಂಬ 64 ಮಠಪತಿ
15 ಕಾವಾಡಿಗ 40 ಪಂಚಾಳ 65 ವಾಲಿಕಾರ
16 ಕ್ಷೌರಿಕ 41 ರೆಡ್ಡಿ 66 ವಡ್ಡರು
17 ಕುಂಚಟಿಗ 42 ಸಾದರ 67 ಪೂಜಾರ
18 ಬಡಿಗೇರ 43 ಶಿವಾರ್ಚಕ 68 ಬಹುರೂಪಿ
19 ಭಜಂತ್ರಿ 44 ಸುಣಗಾರ 69 ಕೊರವ
20 ಬಳೆಶೆಟ್ರು 45 ಚಮ್ಮಾರ 70 ಚಮ್ಮಾರ
21 ಗಾಣಿಗೇರ 46 ಕೊರಮ 71 ಹೊಲೆಯರು
22 ಹಟಗಾರ 47 ಛಲವಾದಿ 72 ಗುರವ
23 ಹೂಗಾರ 48 ವೀರಮಾಹೇಶ್ವರ 73 ಕಾವಾಡಿಗ
24 ಕುಂಬಾರ 49 ಶೀಲವಂತ 74 ಓಲೆಕಾರ
25 ಕುರುಬರು 50 ಮಾಲೇಗೌಡರು 75
ಭಾರತೀಯ ಸಂಸ್ಕೃತಿಯ ತಳಹದಿಯೇ ಕಾಯಕ ಅಥವಾ ದುಡಿಮೆ. ಎಂಥದ್ದೇ ಕೆಲಸವಾದರೂ ಸರಿ ಗೌರವದಿಂದ ಕಂಡ ಅದ್ಭುತ ಲೋಕವಿದು. ಮೂಲ ಮಾನವನ ಬದುಕಿನಲ್ಲಿ ಆಯಾಗಾರರ ಕಲ್ಪನೆಯನ್ನು ಗಮನಿಸಿ ಆ ವ್ಯವಸ್ಥೆಯಲ್ಲಿ ಕೃಷಿ ಮಾಡುವ ರೈತನಷ್ಟೇ ನೇಯುವ ನೇಕಾರನಿಗೂ, ಬುಟ್ಟಿ ಹೆಣೆಯುವ ಮಾದಾರರಿಗೂ, ಚಕ್ಕಡಿ ತಯಾರಿಸುವ ಬಡಿಗೇರರಿಗೂ, ಕುಂಟಿ-ಕುರುಪಿ ಮಾಡುವ ಕಂಬಾರನಿಗೂ, ಮಡಕೆ ಮಾಡುವ ಕುಂಬಾರನಿಗೂ ಗೌರವದ ಸ್ಥಾನಮಾನಗಳು ಇದ್ದವು.
ಜನಪದರ ಪ್ರಪಂಚದೊಳಗೆ ಬದುಕಿರುವ ಇಂಥ ಮೌಲ್ಯಗಳಿಗೇನೂ ಇಂದಿಗೂ ಕೊರತೆಯಿಲ್ಲ. ಮಾಡುವ ವೃತ್ತಿಯನ್ನು ಗೌರವದಿಂದ ಮಾಡಬೇಕೆಂಬುದು ಇಲ್ಲಿಯ ಬಹುಮುಖ್ಯ ಆಶಯವಾಗಿದ್ದು, ಇಂಥ ಭಾವನೆಯನ್ನು ಈ ಕೆಳಗಿನ ತ್ರಿಪದಿಯೊಂದು ಹೀಗೆ ಬಿಂಬಿಸುತ್ತದೆ.
ಕಸವು ಹೊಡೆದ ಕೈಯು | ಕಸ್ತೂರಿ ನಾತಾವ ||
ಬಸವಣ್ಣ ನಿನ್ನ ಸಗಣೀಯ | ಬಳದ ಕೈ ||
ವಿಸಳ ಯಾಲಕ್ಕಿ | ಗೊನಿ ನಾತ ||
(ಜನಪದ ಗೀತಾಂಜಲಿ/ದೇ. ಜವರೇಗೌಡ/12. ಬಸವಯ್ಯ/ಪೇಜ್ ನಂ. 44/ಸಾಲು 78)
ಆಯಗಾರರ ವೃತ್ತಿ ಕೌಶಲ್ಯಗಳು (Professional Skills) ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗುವಂಥ ನಿಸರ್ಗದತ್ತ ಕ್ರಿಯೆ. ಎಲ್ಲ ಆಯಗಾರರೂ ಒಬ್ಬರಿಗೊಬ್ಬರು ಅವಲಂಬಿತವಾಗಿರುವದರಿಂದ ಪರಸ್ಪರ ಗೌರವ ಭಾವನೆಯಿಂದ ಕಾಣುತ್ತಿದ್ದುದನ್ನು ಗಮನಿಸಬಹುದು. ಬಸವಣ್ಣನವರು ಈ ಆಯಗಾರರನ್ನು ಒಟ್ಟುಗೂಡಿಸಿ ಅವರ ಕಾಯಕಕ್ಕೆ ದೈವತ್ವದ ಪಲ್ಪನೆಯನ್ನು ನೀಡಿ ಸಮ ಸಮಾಜವನ್ನು ನಿರ್ಮಿಸಿದರು.
ಅಪಾರ ವೈವಿಧ್ಯಮಯವಾದ ಆಯಗಾರರ ಕುಲ ಕಸುಬುಗಳಿಗೆ ಈಗ ಮೊದಲಿನ ಸ್ಥಾನಮಾನಗಳು ಇಲ್ಲದಿದ್ದರೂ ಸಹ ಅವು ಸಂಪೂರ್ಣವಾಗಿ ನಶಿಸಿ ಹೋಗದೆ ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಅವರು ಮಾಡುವ ಕಾಯಕದಿಂದಲೇ ಬಡಗಿ, ಕುಂಬಾರ, ಕಮ್ಮಾರ, ಕೊರಮ, ಬೇಡ, ನೇಕಾರ, ಅಕ್ಕಸಾಲಿಗ, ಚಮ್ಮಾರ, ಗಾಣಿಗ, ಇಂಥ ಹಲವಾರು ವೃತ್ತಿಗಾರರನ್ನು ಇವತ್ತಿಗೂ ಕಾಣಬಹುದು. ಈ ಎಲ್ಲ ವೃತ್ತಿಗಳು ಜನಪದರ ಬದುಕಿನ ಉಸಿರಾಗಿದ್ದವು. ಆದರೆ ಕಾಲದ ಸ್ಥಿತ್ಯಂತರದಿಂದಾಗಿ ಅವುಗಳ ಮಹತ್ವ ಸ್ವಲ್ಪ ಮಸುಕಾಗಿದೆ.
ಡೇವಿಡ್ ಎಮಿಲಿ ಡರ್ಕಹೈಮ್ (1858-1917) ಅವರು ಫ್ರಾನ್ಸ್ ದೇಶದ ಸಮಾಜ ಶಾಸ್ತ್ರ ವಿಜ್ಞಾನಿ. ಸಮಾಜ ವಿಜ್ಞಾನವೆಂಬ ಶೈಕ್ಷಣಿಕ ವಿಭಾಗವನ್ನು ಹುಟ್ಟು ಹಾಕಿದ ಮೇಧಾವಿ. ಕಾರ್ಲ ಮಾರ್ಕ್ಸ ಮತ್ತು ಮ್ಯಾಕ್ಸ್ ವೆಬರ್ ಅವರ ಜೊತೆಗೂಡಿ ಸಾಮಾಜ ವಿಜ್ಞಾನವನ್ನು ಪ್ರಚುರಗೊಳಿಸಿದವರು.
ಡೇವಿಡ್ ಎಮಿಲಿ ಡರ್ಕಹೈಮ್ ಹೇಳುವಂತೆ:
ಹಳ್ಳಿಯ ಜನ-ಜೀವನ ಮತ್ತು ಅವರ ಬದುಕಿನ ಕಾಯಕಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು. ಈ ಸಿದ್ಧಾಂತಗಳು ಜೈವಿಕ ಐಕ್ಯತೆ (Organic Cohesion) ಯನ್ನು ನಿರೂಪಿಸುತ್ತಿದ್ದವು. ಭೂಮಿ ಮತ್ತು ಆಯ ಎರಡೂ ಸ್ಥಿರವಾಗಿದ್ದಾಗ ಆಯಗಾರರ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿತ್ತು ಮತ್ತು ಜೀವನ ಸುಲಭವಾಗಿತ್ತು. ನಗರೀಕರಣವಾದಂತೆಲ್ಲಾ ಉದ್ಯೋಗಗಳು, ಕುಲ-ಕಸುಬುಗಳು ಯಾಂತ್ರೀಕರಣ ಆಗುತ್ತಿವೆ. ಇದರಿಂದ ಆಯಗಾರರ ತತ್ವ ಸಿದ್ಧಾಂತವಾದ ಕೊಡು-ಕೊಳ್ಳುವಿಕೆ (Barter System) ವ್ಯಾಪಾರದತ್ತ ತಿರುಗಿ ಉದ್ಯಮಗಳ ಐಕ್ಯತೆ (Mechanical Cohesion) ಯತ್ತ ಹೆಜ್ಜೆಯಿಟ್ಟ ಈ ಕಾಲಘಟ್ಟದಲ್ಲಿ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಇದರಿಂದ ಆಯಗಾರರ ಬದುಕು ದುಸ್ತರವಾಗುತ್ತ ಬಂದಿತು. ಇದರಿಂದ ವಂಶ ಪಾರಂಪರ್ಯವಾದ ವೃತ್ತಿ ಬದುಕು ಕೈ ಕೊಟ್ಟಂತಾಗಿದೆ.
ಆಯಗಾರರ ಪರಿಕಲ್ಪನೆ ಭಾರತೀಯರ ಜನಜೀವನದ ಸಾಮಾಜಿಕ ಸಮಾನತೆಯ ಅದ್ಭುತ ಮಾದರಿ. ಪ್ರತೀ ಹಳ್ಳಿಯೇ ಒಂದು ಸ್ವತಂತ್ರವಾದ ವ್ಯಾಪಾರ ಘಟಕ (Independent Tariff Unit) ಗಳು. ಎಲ್ಲ ವ್ಯವಹಾರಗಳೂ ಹಳ್ಳಿಯಲ್ಲಿಯೇ ಹುಟ್ಟಿ ಹಳ್ಳಿಯಲ್ಲಿಯೇ ಕೊನೆಗೊಳ್ಳುತ್ತಿದ್ದವು. ಉತ್ಪಾದನೆ ಮತ್ತು ವಿತರಣೆ ಎಲ್ಲವೂ ಒಂದಕ್ಕೊಂದು ಭಾವನಾತ್ಮಕವಾಗಿ ಹೆಣೆದುಕೊಂಡಿದ್ದವು. ಇದನ್ನೇ ಆರ್ಥಶಾಸ್ತ್ರದಲ್ಲಿ “ಪ್ರಾಚೀನ ಆರ್ಥಿಕ ಮಾದರಿ” (Primitive Model of Economics) ಎಂದು ಹೇಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅರ್ಥಶಾಸ್ತ್ರಜ್ಞರು “ಏಷಿಯಾ ಖಂಡದ ಉತ್ಪಾದನಾ ಮಾದರಿ” (Asiatic Method of Production) ಎಂತಲೂ ವ್ಯಾಖ್ಯಾನಿಸುತ್ತಾರೆ.
ಆಧುನಿಕ ಚೈನಾದ ಶಿಲ್ಪಿ (Architect of Modern China) ಎಂದೇ ಕರೆಯಲಾಗುವ “ಡೆಂಗ್ ಕ್ಷಿಯೊಪಿಂಗ್” ತನ್ನ ಜೀವನದುದ್ದಕ್ಕೂ ಕೃಷಿಗೆ ಒತ್ತು ಕೊಟ್ಟು ಚೈನಾವನ್ನು ಆರ್ಥಿಕ ನೀತಿಯಿಂದ ಸಧೃಢಗೊಳಿಸಿದವನು.
1978 ರಿಂದ 1992 ರ ವರೆಗೆ ಚೈನಾವನ್ನು ಮುನ್ನೆಡೆಸಿದ ಡೆಂಗ್ ಕ್ಷಿಯೊಪಿಂಗ್, ವಿದೇಶಿ ನೀತಿಯನ್ನು ಬಲಪಡಿಸಲು ಹಲವಾರು ಯೋಜನೆಗಳನ್ನು ರೂಪಿಸಿದ ಹರಿಕಾರ. ಅವನ ನಾಲ್ಕು ಆರ್ಥಿಕ ನೀತಿಗಳಲ್ಲಿ ಕೃಷಿಗೆ ಮೊದಲನೇ ಪ್ರಧಾನ್ಯತೆ ನೀಡಿದ್ದನು.
1. ಕೃಷಿ
2. ಕೈಗಾರಿಕೆ
3. ವಿಜ್ಞಾನ ಮತ್ತು ತಂತ್ರಜ್ಞಾನ
4. ರಕ್ಷಣೆ
ಡೆಂಗ್ ಕ್ಷಿಯೊಪಿಂಗ್ ಅವರ ಸಾಧನೆಯ ಹಾದಿಯಲ್ಲಿ ಗ್ರಾಮೀಣ ಭಾಗಕ್ಕೆ ಎಷ್ಟು ಪ್ರಭಾವ ಬೀರಿದ್ದನೆಂದರೆ ಈ ಕೆಳಗಿನ ಸಾಲುಗಳು ಪುಷ್ಠೀಕರಿಸುತ್ತವೆ.
With this economic reform, Deng promoted 28 Million “Micro Business enterprises” in Villages and Small Towns. In turn these enterprises created 128 Million jobs, which lifted China out of poverty.
ತಮ್ಮ ಆರ್ಥಿಕ ನೀತಿಗಳನ್ನು ಗ್ರಾಮೀಣ ಮಟ್ಟದಲ್ಲಿ “ಅತೀ ಸಣ್ಣ ಕೈಗಾರಿಕೆಗಳು ಮತ್ತು ಕರಕುಶಲ” ವಸ್ತುಗಳನ್ನು ತಯಾರಿಸುವ ಸುಮಾರು 2.80 ಕೋಟಿ ಕೈಗಾರಿಕೆಗಳನ್ನು ಪ್ರಾರಂಭಿಸುತ್ತಾನೆ. ಇದರಿಂದ ಸುಮಾರು 12.80 ಕೋಟಿ ಜನರಿಗೆ ಉದ್ಯೋಗಗಳು ದೊರೆತು, ಇಡೀ ಚೈನಾದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುವಲ್ಲಿ ಯಶಸ್ವಿಯಾಯಿತು.
ಅಂದರೆ ಇಡೀ ಪ್ರಪಂಚಾದಾತ್ಯಂತ ಕೃಷಿಗೆ ಪ್ರಾಧಾನ್ಯತೆ ಇರುವದರ ಜೊತೆಗೆ ಗ್ರಾಮೀಣ ಭಾಗದ ಕರಕುಶಲಗಾರರು ಅಥವಾ ಆಯಗಾರರ ಸಹಾಯದಿಂದ ಎಂಥ ಅದ್ಭುತ ಆರ್ಥಿಕ ಸಮೃದ್ಧಿಯನ್ನು ಸಾಧಿಸಬಹುದೆಂದು ಚೈನಾದ ಡೆಂಗ್ ಕ್ಷಿಯೊಪಿಂಗ್ ತೋರಿಸಿದ್ದನ್ನು ನಾವು ಗಮನಿಸಬೇಕು. ಇದನ್ನೇ ಬಸವಣ್ಣನವರು 12 ನೇ ಶತಮಾನದಲ್ಲಿ ಹೇಳಿದ್ದರು ಎನ್ನುವುದು ಆಶ್ಚರ್ಯಕರ ಮತ್ತು ಭಾರತದಲ್ಲಿ ಇದನ್ನು ನಾವು ಗಮನಿಸಲಿಲ್ಲ ಎನ್ನುವುದು ಅಷ್ಟೇ ಖೇದಕರವಾದದ್ದು. ಅವರ ಒಂದು ವಚನ ನಮ್ಮನ್ನು ಈ ದಿಸೆಯಲ್ಲಿ ಚಿಂತನೆಗೆ ಹಚ್ಚುತ್ತದೆ. ಇದು ಗ್ರಾಮೀಣ ಪರಿಸರದ ತಾಕತ್ತು. ಇದನ್ನು ಬಸವಣ್ಣನವರು 12 ನೇ ಶತಮಾನದಲ್ಲಿ ಗುರುತಿಸಿದ್ದರು.
ಹೊಲೆಗಂಡಲ್ಲದೆ ಪಿಂಡದ | ನೆಲೆಗಾಶ್ರಯವಿಲ್ಲ ||
ಜಲ-ಬಿಂದುವಿನ | ವ್ಯವಹಾರ ಒಂದೆ ||
ಆಶೆಯಾಮಿಷ ರೋಷ | ಹರುಷ ವಿಷಯಾದಿಗಳೆಲ್ಲ ಒಂದೆ ||
ಏನನೋದಿ | ಏನಕೇಳಿ ಏನುಫಲ? ||
ಕುಲಜನೆಂಬುದಕ್ಕೆ | ಆವುದು ದೃಷ್ಟ? ||
ಸಪ್ತಧಾತು ಸಮಂ ಪಿಂಡಂ | ಸಮಯೋನಿ ಸಮುದ್ಭವಂ ||
ಎಂದುದಾಗಿ:
ಕಾಸಿ ಕಮ್ಮಾರನಾದ | ಬೀಸಿ ಮಡಿವಾಳನಾದ ||
ಹಾಸನಿಕ್ಕಿ ಸಾಲಿಗನಾದ | ವೇದವನೋದಿ ಹಾರುವನಾದ ||
ಕರ್ಣದಲ್ಲಿ ಜನಿಸಿದವರುಂಟೆ | ಜಗದೊಳಗೆ? ||
ಇದು ಕಾರಣ | ಕೂಡಲಸಂಗಮದೇವ ||
ಲಿಂಗಸ್ಥಲವನರಿದವನೆ | ಕುಲಜನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-55 / ವಚನ ಸಂಖ್ಯೆ-590)
ಈ ವಚನವನ್ನು ಓದಿದರೆ ಮೈನವಿರೇಳುವಂತಾಗುತ್ತದೆ. ಎಂಥ ಅದ್ಭುತ ಕೌಶಲ್ಯಾಭಿವೃದ್ಧಿಯ (Skill Development) ಸಂಕೇತವನ್ನು ಬಸವಣ್ಣನವರು ನಮಗೆ ತಿಳಿಸಿಕೊಟ್ಟದ್ದಾರೆ. ಪ್ರತಿಯೊಬ್ಬ ಮಾನವರಲ್ಲಿರುವಯೂ ಕೌಶಲ್ಯವಿರುವುದು. ಹುಟ್ಟಿನಿಂದ ಯಾರೂ ಕೀಳಲ್ಲವೆಂದು ಹೇಳುವ ವಚನವಿದು. ಚೈನಾದ ಅಭಿವೃದ್ಧಿಯ ಹರಿಕಾರ ಡೆಂಗ್ ಕ್ಷಿಯೊಪಿಂಗ್ ಇದೇ ನೀತಿಯನ್ನು ಕಾರ್ಯರೂಪಕ್ಕೆ ತಂದು ಚೈನಾವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದನೆಂದು ನಿರೂಪಿಸುತ್ತದೆ.
ಈಗ ಕೌಶಲ್ಯಾಭಿವೃದ್ಧಿಯತ್ತ ಗಮನ ಹರಿಸೋಣ. ಶಿಕ್ಷಣವು ಜ್ಞಾನ, ಕೌಶಲ್ಯ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಸಂಗ್ರಹಿಸಲು ಅತ್ಯಂತ ಸಶಕ್ತ ಮಾಧ್ಯಮ. ಯಾವುದೇ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆಯಾ ದೇಶದ ಪ್ರಜೆಗಳ ತರಬೇತಿ ಮತ್ತು ಕೌಶಲ್ಯವನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ಪ್ರತೀ ವರ್ಷ ಸುಮಾರು 1.20 ಕೋಟಿ ಯುವಜನತೆ ತಮ್ಮ ಶಿಕ್ಷಣವನ್ನು ಮುಗಿಸಿ ವೃತ್ತಿ ಜೀವನಕ್ಕೆ ಸಿದ್ಧಗೊಳ್ಳುತ್ತಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸಮಕಾಲೀನ ಶಿಕ್ಷಣ ಮತ್ತು ವೃತಿ ಕೌಶಲ್ಯದಲ್ಲಿ ಗುಣಮಟ್ಟ ಮತ್ತು ಸಾಮರ್ಥ್ಯದ (Quality and Competence) ಕೊರತೆಯನ್ನು ಕಾಣುತ್ತಿದ್ದೇವೆ. ಇದು ನಮ್ಮ ಎದಿರಿಗಿರುವ ಮೊದಲನೇ ಸವಾಲು. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಚನೆ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವ ಅವಶ್ಯಕತೆ ಇದೆ.
ಈಗ ಮೂಲಭೂತ ಪ್ರಶ್ನೆಯಾದ ಕೌಶಲ್ಯಾಭಿವೃದ್ಧಿಯಿಂದ ಪ್ರಾರಂಭಿಸೋಣ. ಇದು ನಾಲ್ಕು ವಿಶೇಷ ವಿನ್ಯಾಸ ಮತ್ತು ಅರ್ಥವನ್ನೊಳಗೊಂಡಿದೆ.
1. ನೈಸರ್ಗಿಕವಾಗಿ ಮತ್ತು ಆನುವಂಶಿಕವಾಗಿ ಬರುವ ಕೌಶಲ್ಯ.
2. ಶೈಕ್ಷಣಿಕ ಅರ್ಹತೆಯೊಂದಿಗೆ ಪಡೆಯುವ ಕೌಶಲ್ಯ.
3. ಶೈಕ್ಷಣಿಕ ಅರ್ಹತೆಯೊಂದಿಗೆ ಇತರೆ ಕೌಶಲ್ಯವನ್ನು ಗಳಿಸುವಿಕೆ.
4. ಉತ್ಸಾಹ ಮತ್ತು ಕನಸಿನ ಕೌಶಲ್ಯ.
ಈ ನಿಟ್ಟನಿಲ್ಲಿ ಆಯಗಾರರ ಮಕ್ಕಳಿಗೆ ಶೈಕ್ಷಣಿಕ ಅರ್ಹತೆಯ ಜೊತೆಗೆ ಕುಲ ಕಸುಬಿನಲ್ಲಿ ಕೌಶಲ್ಯ ಅಭಿವೃದ್ಧಿ ಆಸಕ್ತಿಯನ್ನು ಬೆಳೆಸಿಕೊಂಡರೆ ಮುಂದೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವೃತ್ತಿಯಲ್ಲಿ ಮೇಲೇರಿದಂತೆ ಕೆಲ ಬೇರೆ ಬೇರೆ ಕೌಶಲ್ಯದ ಕಲಿಯುವಿಕೆಗೆ ಅನುಕೂಲ ವಾತಾವರಣ ನಿರ್ಮಾಣವಾಗುತ್ತದೆ.
ಜಾಗತೀಕರಣದ ವ್ಯಾಖ್ಯಾನ ಮತ್ತು ಅದರ ಮಹತ್ವ:
ಅನೇಕ ದೇಶಗಳ ಮಧ್ಯೆ, ವಿವಿಧ ಸರ್ಕಾರಗಳ ಜೊತೆಗೆ ವಾಣಿಜ್ಯ ಹಾಗೂ ಉತ್ಪಾದನಾ ಸಂಸ್ಥೆಗಳ ಜೊತೆಗೆ ಸಂವಹನ ಮತ್ತು ಏಕೀಕರಣ ನಡೆಸುವ ಒಂದು ಕಾರ್ಯ ವಿಧಾನ ಅಥವಾ ಪ್ರಕ್ರಿಯೆ “ಜಾಗತೀಕರಣ (Globalization)”. ತಾಂತ್ರಿಕವಾಗಿ ಅಂತರ್ರಾಷ್ಟ್ರೀಯ ಸ್ಥರದಲ್ಲಿ ನಡೆಯುವ ವ್ಯಾಪಾರ ವಹಿವಾಟು, ಬಂಡವಾಳ ಹೂಡಿಕೆ ಮತ್ತು ಮಾಹಿತಿ ತಂತ್ರಜ್ಞಾನ ವಿನಿಮಯ ಹಾಗೂ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮೂಲಭೂತ ಮಾರುಕಟ್ಟೆಯ ವಿಸ್ತರಣೆ, ಮಾರುಕಟ್ಟೆಯ ಉದಾರೀಕರಣ, ಅರ್ಥ ವ್ಯವಸ್ಥೆಯ ಚಟುವಟಿಕೆಗಳು, ಸೇವೆ ಹಾಗು ಸರಕು ಮತ್ತು ಬಂಡವಾಳದ ವಿನಿಮಯ ಜಾಗತೀಕರಣದ ವ್ಯಾಪ್ತಿಗೆ ಬರುವಂಥಾ ವಿಷಯಗಳು. ಜಾಗತೀಕರಣದ ಪರಿಣಾಮ ಪರಿಸರ, ವಾತಾವರಣ, ಸಂಸ್ಕೃತಿ, ರಾಜಕೀಯ ವ್ಯವಸ್ಥೆ, ಆರ್ಥಿಕ ಅಭಿವೃದ್ಧಿ ಮತ್ತು ಸಮೃದ್ಧಿ, ಸಾಮಾಜಿಕ ಜನಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತದೆ.
ಎರಡನೇ ಮಾಹಾಯುದ್ಧದ ನಂತರ ಮತ್ತು ಇತ್ತೀಚಿನ ಮೂರು ದಶಕಗಳಲ್ಲಿ ಅನೇಕ ದೇಶಗಳು ಉದಾರೀಕರಣವೆಂಬ ಮಂತ್ರವನ್ನು ಪಠಿಸುತ್ತಲೇ ತಮ್ಮ ದೇಶಗಳಲ್ಲಿನ ಉತ್ಪನ್ನಗಳನ್ನು ಮತ್ತು ಸೇವೆ (Products & Services) ಗಳನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕೆಂಬ ಹಠ ತೊಟ್ಟಿರುವದನ್ನು ನಾವು ಕಾಣಬಹುದು. ಈ ನಿಟ್ಟನಲ್ಲಿ ಬರುವ ಹಲವಾರು ತೊಂದರೆಗಳನ್ನು ಮತ್ತು ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸುಲ್ಲಿ ಸಾಕಷ್ಟು ಶ್ರಮವಹಿಸಿರುವುದನ್ನು ನಾವು ಕಾಣಬಹುದು.
ಜಾಗತೀಕರಣದ ಅತಿದೊಡ್ಡ ಪ್ರೇರಣಾ ಶಕ್ತಿಯೆಂದರೆ ಮಾಹಿತಿ ತಂತ್ರಜ್ಞಾನ. ಆಧುನಿಕ ಯುಗದ ಆರ್ಥಿಕ ಇತಿಹಾಸದ ಒಂದು ದೊಡ್ಡ ಕ್ರಾಂತಿ. ಇದು ದೇಶ-ದೇಶಗಳ ನಡುವೆ ಒಂದು ಕೊಂಡಿಯಾಗಿ ಮತ್ತು ನಿರ್ವಹಣಾ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಸಾಮಾಜಿಕವಾಗಿ ದೇಶ-ದೇಶಗಳ ನಡುವೆ ಸಂವಹನ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ.
ಸಾಂಸ್ಕೃತಿಕವಾಗಿ ದೇಶ-ದೇಶಗಳ ನಡುವೆ ವೈಚಾರಿಕತೆ, ಮೌಲ್ಯಗಳು ಮತ್ತು ಕಲಾ ಸಂಪತ್ತಿನ ವಿನಿಮಯಕ್ಕೆ ಪೂರಕ ಪ್ರೇರಣೆಯನ್ನು ನೀಡುತ್ತದೆ.
ವಸುಧೈವ ಕುಟುಂಬಕಂ ಎನ್ನುವ ಭಾರತೀಯ ಮೂಲತತ್ವದಂತೆ ದೇಶಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತದೆ.
ರಾಜಕೀಯವಾಗಿ ಹೇಳುವುದಾದರೆ ಯುನೈಟೆಡ್ ನೇಶನ್ಸ್ (UN), ವರ್ಲ್ಡ್ ಟ್ರೇಡ್ ಸೆಂಟರ್ (WTO) ಎನ್ನುವ ಅಂತರ್ರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ಹುಟ್ಟು ಹಾಕಿದೆ.
ಕಾನೂನಾತ್ಮಕವಾಗಿ ಅಂತರ್ರಾಷ್ಟ್ರೀಯ ನ್ಯಾಯಾಲಯ (International Court of Justice) ಎನ್ನುವ ಅಂತರ್ರಾಷ್ಟ್ರೀಯ ಮಟ್ಟದ ನ್ಯಾಯಾಂಗ ವ್ಯವಸ್ಥೆಯನ್ನು ಹುಟ್ಟು ಹಾಕಿದೆ.
ಭಾರತದ ದೃಷ್ಟಿಯಲ್ಲಿ ಜಾಗತೀಕರಣದ ಚಿಂತನೆ ಮತ್ತು ಪ್ರಭಾವ:
ಭಾರತ ಸ್ವತಂತ್ರವಾದಾಗಿನಿಂದ ಹಿಡಿದು ಕಳೆದ ಏಳೂವರೆ ದಶಕಗಳಲ್ಲಿ ಮೂರು ಸುನಾಮಿಗಳನ್ನು ಕಂಡಿದೆ.
ಮೊದಲನೆ 25 ವರ್ಷ ಸಮಾಜವಾದ (Socialism),
ಎರಡನೆ 25 ವರ್ಷ ಜ್ಯಾತ್ಯಾತೀತತೆ (Secularism),
ಮೂರನೆ 25 ವರ್ಷ ಜಾಗತೀಕರಣ (Globalization).
ಅತೀ ವೇಗವಾಗಿ ಬರುವ ವಾಹನದ ಪ್ರಖರ ಬೆಳಕಿನ ಮುಂದೆ ಜಿಂಕೆಮರಿಯೊಂದು ದಾರಿ ಕಾಣದೇ ನಿಂತಂತೆ ಭಾಸವಾಗಿದ್ದ ಭಾರತ ಮಂಜುಗಡ್ಡೆಯಂತೆ ಆರ್ಥಿಕವಾಗಿ ತಲ್ಲಣಕ್ಕೊಳಗಾಗಿತ್ತು. ಆದರೆ ಕ್ರಿ. ಶ. 1990 ರಿಂದೀಚೆಗೆ ಆರ್ಥಿಕ ಹಿಂಜರಿತದಿಂದ ಹೊರಬರುವ ಪ್ರಯತ್ನ ಅಭೂತಪೂರ್ವವಾಗಿ ಸಾಗಿ ಬಂತು.
ಕ್ರಿ. ಶ. 1990 ರಲ್ಲಿ ಭಾರತಕ್ಕೆ ಜಾಗತೀಕರಣ (Globalization) ಮತ್ತು ಆರ್ಥಿಕ ಉದಾರೀಕರಣ (Economic Liberalization) ಎನ್ನುವ ಎರಡು ಸುನಾಮಿ ಅಪ್ಪಳಿಸಿದಾಗ ಇಡೀ ಭಾರತವೇ ಈ ಎರಡೂ ಮಂತ್ರಗಳನ್ನು ಪಠಿಸತೊಡಗಿತು. ಇವುಗಳ ತ್ವರಿತ, ಅತೀ ಶೀಘ್ರ ಮತ್ತು ದೋಷಪೂರಿತ ಅನುಷ್ಠಾನದ ಜೊತೆ ಜೊತೆಗೆ ಅವುಗಳಲ್ಲಿನ ಸಮಸ್ಯೆಗಳನ್ನೂ ಸಹ ಆಹ್ವಾನ ಮಾಡಿಕೊಳ್ಳಬೇಕಾಯಿತು. ಆದರೆ ಇವುಗಳ ಅನುಷ್ಠಾನ ಆ ಕ್ಷಣದ ಅನಿವಾರ್ಯತೆಯಾಗಿತ್ತು. ಹೀಗಾಗಿ ಭಾರತವೂ ಸಹ ಕಳೆದ ಮೂರು ದಶಕಗಳಿಂದ ಜಾಗತೀಕರಣ (Globalization) ಮತ್ತು ಆರ್ಥಿಕ ಉದಾರೀಕರಣ (Economic Liberalization) ಎನ್ನುವ ಎರಡು ಸುನಾಮಿಗಳನ್ನು ಸ್ವೀಕರಿಸುವ ಅನಿವಾರ್ಯತೆ ಉಂಟಾಯಿತು.
ಆರ್ಥಿಕ ವ್ಯವಸ್ಥೆಗಳು ಮತ್ತು ಮಾದರಿಗಳು :
ಉತ್ಪಾದನೆ ಮತ್ತು ಸೇವೆ (Products & Services) ಗಳನ್ನು ವಿತರಿಸುವುದಕ್ಕೆ ಹಲವಾರು ಆರ್ಥಿಕ ವ್ಯವಸ್ಥೆ ಮತ್ತು ಮಾದರಿಗಳಿವೆ. ಈ ಅರ್ಥಿಕ ವ್ಯವಸ್ಥೆಗಳಲ್ಲಿ ಸರ್ಕಾರದ ಪಾತ್ರ ಎಷ್ಟಿದೆ ಎನ್ನುವುದರ ಮೇಲೆ ಸ್ಥೂಲವಾಗಿ ಮೂರು ಮಾದರಿಗಳನ್ನಾಗಿ ವಿಂಗಡಿಸಬಹುದು.
1. ಆಜ್ಞಾ-ವ್ಯವಸ್ಥೆ ಆರ್ಥಿಕ ಮಾದರಿ (Communist Economic Model)
2. ಬಂಡವಾಳಶಾಹಿ ಮಾದರಿ (Market Driven Economic Model)
3. ಸಮಾಜವಾದ ಮಾದರಿ (Socialist Economic Model)
1. ಆಜ್ಞಾ-ವ್ಯವಸ್ಥೆ ಆರ್ಥಿಕ ಮಾದರಿ (Communist Economic Model) :
ಆಜ್ಞಾ-ವ್ಯವಸ್ಥೆ (Communist Economic Model) ಎನ್ನುವ ಆರ್ಥಿಕತೆಯ ಮಾದರಿಯಲ್ಲಿ ಸರ್ಕಾರ ಸಂಪೂರ್ಣ ಹಿಡಿತವನ್ನು ಹೊಂದಿರುತ್ತದೆ. ಎಲ್ಲ ಉತ್ಪಾದನೆ ಮತ್ತು ವಿತರಣೆಯು ಸರ್ಕಾರದ ಮೂಲಕವೇ ನಡೆಯುತ್ತದೆ.
2. ಬಂಡವಾಳಶಾಹಿ ಮಾದರಿ (Market Driven Economic Model):
ಬಂಡವಾಳಶಾಹಿ ಅಥವಾ ಮಾರುಕಟ್ಟೆ ವ್ಯವಸ್ಥೆಯ ಮಾದರಿಯಲ್ಲಿ ವೈಯಕ್ತಿಕ ಮತ್ತು ವ್ಯಾಪಾರ ಸಂಸ್ಥೆಗಳು ತಮ್ಮ ಹಿಡಿತದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತವೆ. ವಿಕೇಂದ್ರಿಕರಣ ಈ ವ್ಯವಸ್ಥೆಯ ಪ್ರಮುಖ ಅಂಶ ಮತ್ತು ಇದರಲ್ಲಿ ಸರ್ಕಾರದ ಪಾತ್ರ ಬಹಳ ಕಡಿಮೆ.
3. ಸಮಾಜವಾದ ಮಾದರಿ (Socialist Economic Model):
ಸಮಾಜವಾದ (Socialist Economic Model) ಮಾದರಿಯಲ್ಲಿ ವ್ಯಾಪಾರ ವಹಿವಾಟುಗಳು ವೈಯಕ್ತಿಕತೆಯಿಂದ ಮುಕ್ತವಾಗಿ ಸಾರ್ವಜನಿಕ ಸಂಸ್ಥೆಗಳ ಮೂಲಕ ನಡೆಯುತ್ತವೆ. ಸಮಾಜದ ಎಲ್ಲ ವರ್ಗ ಮತ್ತು ವ್ಯಕ್ತಿಗಳಿಂದ ಮುಕ್ತವಾಗಿ ವ್ಯಾಪಾರ ವಹಿವಾಟು ನಡೆಯುವುದರಿಂದ ಎಲ್ಲ ಫಲ ಮತ್ತು ಲಾಭ ಎಲ್ಲರಿಗೂ ಸಮಾನವಾಗಿ ಹಂಚುವುದು ಇದರ ಪ್ರಮುಖ ಅಂಶ. ಇದರಲ್ಲಿಯೂ ಸಹ ಸರ್ಕಾರದ ಪಾತ್ರ ಬಹಳ ಕಡಿಮೆ.
80 ರ ದಶಕದ ಅಂತ್ಯಭಾಗದಲ್ಲಿ ರಶಿಯಾದ ಸಂಯುಕ್ತ ರಾಷ್ಟ್ರಗಳಲ್ಲಿ ಕ್ಷಿಪ್ರ ಕ್ರಾಂತಿಯಾಗಿ 16 ದೇಶಗಳು ಸ್ವತಂತ್ರವಾದವು. ಅಲ್ಲಿಗೆ ಆಜ್ಞಾ-ವ್ಯವಸ್ಥೆಯ ಆರ್ಥಿಕ ಮಾದರಿ (Communist Economic Model) ಮತ್ತು ಸಮಾಜವಾದ ಮಾದರಿ (Socialist Economic Model) ಅರ್ಥ ವ್ಯವಸ್ಥೆಗಳು ಭಾಗಶಃ ಅಂತ್ಯಗೊಂಡವು. ಈ ಎರಡೂ ಅರ್ಥವ್ಯವಸ್ಥೆಯ ಮಾದರಿಗಳು ಅವಸಾನದ ಅಂಚಿನಲ್ಲಿ ಬಂದು ನಿಂತಾಗ ಎಲ್ಲರಿಗೂ ಅನ್ವಯವಾಗುವಂಥ ಮತ್ತು ಎಲ್ಲ ಸಂಸ್ಕೃತಿಗಳಿಗೂ ಒಪ್ಪುವಂಥ ಜಾಗತಿಕ ಆರ್ಥಿಕ ಸಿದ್ಧಾಂತಗಳು ಇಲ್ಲವಾದಾಗ ಉಳಿದ ಏಕೈಕ ಮಾದರಿಯಾದ ಬಂಡವಾಳಶಾಹಿ ಮಾದರಿ (Market Driven Economic Model) ವ್ಯವಸ್ಥೆ ಅನಿವಾರ್ಯವಾಗಿ ಪ್ರಮುಖವಾಗಿ ಹೊರಹೊಮ್ಮತು.
1992 ರಲ್ಲಿ “ಫ್ರಾನ್ಸಿಸ್ ಫುಕೂಯಾಮಾ” ಬರೆದ “The End of History and The Last Man” ಎಂಬ ಪುಸ್ತಕ ಆರ್ಥಿಕ ಸಿದ್ಧಾಂತದ ಬೈಬಲ್ ಎಂದೇ ಖ್ಯಾತಿಯನ್ನು ಪಡೆಯಿತು. ಇದರ ಮೂಲ ಸಿದ್ಧಾಂತ ಬಂಡವಾಳಶಾಹಿ ಮತ್ತು ಮಾರುಕಟ್ಟೆ ವ್ಯವಸ್ಥೆಯ ವೈಭವೀಕರಣ.
ಈ ಪುಸ್ತಕದಲ್ಲಿ ಹೇಳಲಾದ ಅತ್ಯಂತ ಸರಳ ಮತ್ತು ಪ್ರಮುಖ ಅಂಶವೆಂದರೆ “Best for the rest to follow the West” ಅಂದರೆ ನಮಗೆ ಉಳಿದ ಏಕೈಕ ಭರವಸೆ ಪಾಶ್ಚಿಮಾತ್ಯ ರಾಷ್ಟ್ರಗಳ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ. 80 ರ ದಶಕದ ಮಧ್ಯಭಾಗದಲ್ಲಿ ರಾಜಕೀಯವಾಗಿ ಆಶಕ್ತವಾಗಿದ್ದ ಭಾರತದಲ್ಲಿಯೂ ಸಹ ಯಾವ ಮಾದರಿಯನ್ನು ಅಳವಡಿಸಿಕೊಳ್ಳಬೇಕೆಂಬ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
1984 ರಲ್ಲಿ 404 ಸದಸ್ಯರ ಬಲದಿಂದ ಆಧಿಕಾರಕ್ಕೆ ಬಂದ ಶ್ರೀ ರಾಜೀವ ಗಾಂಧಿಯವರ ಕಾಂಗ್ರೇಸ್ 1989 ರಲ್ಲಿ 200 ಸದಸ್ಯರ ಬಲದೊಂದಿಗೆ ಅನ್ಯ ಮಿತ್ರ ಪಕ್ಷಗಳ ಜೊತೆಗೆ ಸರ್ಕಾರ ರಚನೆ ಮಾಡುವ ಹಂತಕ್ಕೆ ತಲುಪಿತು. ರಾಜಕೀಯವಾಗಿ ದುರ್ಬಲಗೊಂಡ ಭಾರತವು ಯಾವ ಆರ್ಥಿಕ ನೀತಿಯನ್ನು ಅನುಸರಿಸಬೇಕು ಎನ್ನುವ ವಿಷಯದಲ್ಲಿ ಗೊಂದಲದ ಗೂಡಾಯಿತು. ಆರ್ಥಿಕವಾಗಿ ಜರ್ಜರಿತವಾಗಿದ್ದ ವಿಷಮ ಪರಿಸ್ಥಿತಿಯಲ್ಲಿ ಭಾರತವೂ ಸಹ ಅನಿವಾರ್ಯವಾಗಿ ಪ್ರಪಂಚದ ಎಲ್ಲ ರಾಷ್ಟ್ರಗಳೂ ಅಪ್ಪಿಕೊಂಡಂಥ ಬಂಡವಾಳಶಾಹಿ ಮತ್ತು ಮಾರುಕಟ್ಟೆಯಾಧಾರಿತ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಜಾಗತಿಕ ಆರ್ಥಿಕ ವ್ಯವಸ್ಥೆಯ ಸವಾಲುಗಳು :
ಇಂಥ ವಿಷಮ ಪರಿಸ್ಥಿತಿಯಲ್ಲಿ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳು ನಮ್ಮ ಗಮನಕ್ಕೆ ಬರಲೇ ಇಲ್ಲ. ಇದರಿಂದ ನಮ್ಮ ಪರಂಪರೆ, ಸಂಸ್ಕೃತಿ, ಜನಜೀವನ, ಸಾಮಾಜಿಕ ಜೀವನ ಶೈಲಿ, ವ್ಯವಹಾರ ಮತ್ತು ಹಣ ಚಲಾವಣೆ, ಉಳಿತಾಯದ ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸಿದವು. ಈ ವಿಷಯದ ಬಗ್ಗೆ ತಿಳುವಳಿಕೆ, ಆತ್ಮಾವಲೋಕನ ಮತ್ತು ಪುನರ್ ಪರಿಶೀಲಿಸುವ ಮುನ್ನವೇ ಜಾಗತಿಕ ಆರ್ಥಿಕ ವ್ಯವಸ್ಥೆ ತನ್ನ ಕಭಂಧ ಬಾಹುಗಳನ್ನು ಚಾಚಿತ್ತು. ಜಾಗತೀಕರಣದ Side Effect ಅಂದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ಬಿರುಕು ಮೂಡಿದ್ದು. ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬ ವ್ಯವಸ್ಥೆಗಳಾಗಿದ್ದು. ಅತ್ಯಂತ ಗಾಢವಾದ ಸಂಬಂಧಗಳಾದ ತಂದೆ-ತಾಯಿ, ಅಕ್ಕ-ತಮ್ಮ, ಅಳಿಯ-ಮಾವ, ಅತ್ತೆ-ಸೊಸೆ, ಭಾವ-ಮೈದುನ ಮುಂತಾದವುಗಳ ಅವನತಿ ಅಥವಾ ಅಸಡ್ಡೆ. ತಲ ತಲಾಂತರದಿಂದ ಬೆಸೆದುಕೊಂಡಿದ್ದ ಈ ಸಂಬಂಧಗಳು ದುಃಸ್ಥಿತಿಗೆ ತಲುಪಿದ್ದು ಜಾಗತೀಕರಣದಿಂದ ಉಂಟಾದ ದುರಂತಗಳಲ್ಲೊಂದು. ಇಂಥ ಸಂಬಂಧಗಳನ್ನು ಜನಪದರು ಎಷ್ಟು ಸೊಗಸಾಗಿ ಹೇಳಿದ್ದಾರೆ.
ತಂದೆಯ ನೆನೆದರೆ | ತಂಗುಳು ಬಿಸಿಯಾಯ್ತು ||
ಗಂಗಾದೇವಿ ನನ್ನ | ಹಡೆದವ್ನ ನೆನೆದರೆ ||
ಮಾಸಿದ ತಲೆಯು | ಮಡಿಯಾಯ್ತು ||
(ಜನಪದ ಗೀತಾಂಜಲಿ/ದೇ.ಜವರೇಗೌಡ/1. ಹಾಲುಂಡತೌರು/ಪೇಜ್ನಂ. 52/ಸಾಲು 15)
ಕಾಶಿಗೆ ಹೋಗಲಿಕ | ಏಸೊಂದು ದಿನ ಬೇಕು ||
ತಾಸ್ಹೊತ್ತಿನ ಹಾದಿ | ತೌರೂರು ಮನೆಯಲ್ಲಿ ||
ಕಾಶಿ | ಕುಂತವಳೆ ಹಡೆದವ್ವ ||
(ಜನಪದ ಗೀತಾಂಜಲಿ/ದೇ. ಜವರೇಗೌಡ/2. ಹಡೆದವ್ವ/ಪೇಜ್ ನಂ 54/ಸಾಲು 27)
ಎಂಥ ಅದ್ಭುತ ಸಂಬಂಧಗಳು ಎಂದರೆ ಕಾಕಾ, ದೊಡ್ಡಪ್ಪ, ಚಿಗವ್ವ, ಅತ್ತೆ, ಅಳಿಯ ಮುಂತಾದ ಶಬ್ದಗಳಲ್ಲಿ ನಮ್ಮ ಕೌಟುಂಬಿಕ ಮತ್ತು ಸಾಂಸ್ಕೃತಿಕ ಬದುಕಿನ ಅನಾವರಣವೇ ಎದ್ದು ಕಾಣುತ್ತದೆ. ಇಂಥ ಸಂಸ್ಕೃತಿಯನ್ನು ಆಪೋಷಣೆ ಮಾಡಿದ್ದು ಜಾಗತೀಕರಣ. ಇದನ್ನು ಮರಳಿ ಪ್ರತಿಷ್ಠಾಪಿಸುವುದೇ ನಮ್ಮ ಮುಂದಿದ್ದ ಪ್ರಪ್ರಥಮ ಸವಾಲು.
ಕಮ್ಯೂನಿಸ್ಟ್ ಮತ್ತು ಸಮಾಜವಾದವನ್ನು ಬೆಂಬಲಿಸುತ್ತಿದ್ದ ಭಾರತದ ಅರ್ಥ ಶಾಸ್ತ್ರಜ್ಞರು, ರಾಜಕೀಯ ಪಂಡಿತರು, ರಾಜಕೀಯ ಪಕ್ಷಗಳು, ಆಡಳಿತ ವರ್ಗದವರು, ಮುದ್ರಣ ಮತ್ತು ದೃಶ್ಯ ಮಾಧ್ಯಮದವರು, ಬುದ್ಧಿಜೀವಿಗಳು ಸಾರಾ ಸಗಟಾಗಿ ಮಾರುಕಟ್ಟೆಯಾಧಾರಿತ ಆರ್ಥಿಕ ಮಾದರಿಯ ಬೆಂಬಲಕ್ಕೆ ನಿಂತರು. ಈ ದಿಸೆಯಲ್ಲಿ ಭಾರತ ಹೊರಟರೆ ಅಭಿವೃದ್ಧಿ ಹೊಂದುತ್ತದೆಯೇ, ಈ ಮಾದರಿ ಸರಿಯೋ ತಪ್ಪೋ, ಇದರಲ್ಲಿ ಎಷ್ಟು ಅಪಾಯವಿದೆ, ನಾವು ಇಡುತ್ತಿರುವ ಹೆಜ್ಜೆ ಸಂಪೂರ್ಣವಾಗಿ ಎಷ್ಟು ಸಮಂಜಸ ಎನ್ನುವುದು ನಮಗೆ ಅರ್ಥವಾಗಲೇ ಇಲ್ಲ. ಇದು ನಮ್ಮ ಮುಂದಿದ್ದ ಎರಡನೇ ಸವಾಲು.
ಭಾರತೀಯ ಆರ್ಥಿಕ ಮಾದರಿಯ ಜಾಗೃತಿ :
ಇಂಥ ಗೊಂದಲದ ನಿರ್ಧಾರಗಳ ನಡುವೆ ಭಾರತದಲ್ಲಿರುವ ಆರ್ಥಿಕ ಮಾದರಿಗಳು ಮತ್ತು ವ್ಯವಸ್ಥೆಗಳ ತುಲನಾತ್ಮಕ ಅಧ್ಯಯನಕ್ಕಾಗಿ ಕೆಲ ಆರ್ಥಿಕ ತಜ್ಞರು, ಬುದ್ಧಿಜೀವಿಗಳು ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಂಡಂಥವರು ಸುಮಾರು 25 ವರ್ಷಗಳ ಕಾಲ ಭಾರತದ ಉದ್ದಗಲಕ್ಕೂ ಸಂಚರಿಸಿ ಸುಮಾರು 2 ಲಕ್ಷ ಹಳ್ಳಿಗಳಿಗೆ ಭೆಟ್ಟಿ ಕೊಟ್ಟು ಅಲ್ಲಿರುವ ಗ್ರಾಮೀಣ ಕಲೆ, ಜಾನಪದ ಸಂಸ್ಕೃತಿ, ಕಾಯಕ, ಉದ್ಯೋಗ, ವ್ಯವಹಾರಗಳು ಮತ್ತು ಅಲ್ಲಿರುವ ತಾಂತ್ರಿಕತೆಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದೆವು.
ನಾವು ಗ್ರಾಮೀಣ ಮಟ್ಟದಲ್ಲಿ ಮತ್ತು ಸಣ್ಣ ಸಣ್ಣ ಹೋಬಳಿ ಮಟ್ಟದಲ್ಲಿ ಕಂಡುಕೊಂಡಂಥ ತಿಳಿದುಕೊಂಡಂಥ ಮಾಹಿತಿ ಮತ್ತು ದೃಶ್ಯ ಅತ್ಯಂತ ಆಶ್ಚರ್ಯ ಅನುಪಮ ಮತ್ತು ಅಮೋಘ. ಜಾಗತಿಕ ಮಟ್ಟದಲ್ಲಿ ಉಂಟಾದ ಪರಿವರ್ತನೆ ಮತ್ತು ಸಮೂಹ ಸನ್ನಿಯಂಥ ವಾತಾವರಣ ಈ ಪ್ರದೇಶಗಳನ್ನು ತಲುಪದೇ ಇರುವುದು ನಮ್ಮ ಅದೃಷ್ಟ. ಇಲ್ಲಿ ಪ್ರಚಲಿತವಿರುವ ಆರ್ಥಿಕ ಮಾದರಿಯ ಕಲ್ಪನೆ ಮತ್ತು ಇಲ್ಲಿ ನಡೆಯುವ ಮಾರುಕಟ್ಟೆ ವ್ಯವಸ್ಥೆ ಅದ್ಭುತ ಮತ್ತು ಅತ್ಯಂತ ವೈಜ್ಞಾನಿಕ.
ಭಾರತದಲ್ಲಿರುವ ಸುಮಾರು 6 ಲಕ್ಷ 38 ಸಾವಿರ ಹಳ್ಳಿಗಳಲ್ಲಿ ನಾವು ಅರ್ಧದಷ್ಟು ಹಳ್ಳಿಗಳಲ್ಲಿ ಇರುವ ಆಯಗಾರರು, ಕುಶಲ ಕರ್ಮಿಗಳು ತಯಾರಿಸುವ ಜಾಗತಿಕ ಗುಣಮಟ್ಟದ ವಸ್ತುಗಳನ್ನು ನೋಡಿದಾಗ ನಮ್ಮ ಆರ್ಥಿಕ ಚಿಂತನೆಯ ಪರಿಧಿಯನ್ನೂ ಮೀರಿ ಬೆಳೆದಿತ್ತು. ಈ ಆರ್ಥಿಕ, ವ್ಯಾಪಾರ ನಿರ್ವಹಣಾ ಮಾದರಿಗಳು ಪ್ರಪಂಚದ ಎಲ್ಲ ಮಾದರಿಗಳಿಗಿಂತ ವಿಭಿನ್ನ.
ಇದೇ ಬಸವಾದಿ ಶರಣರ ಕಾಲಘಟ್ಟದಲ್ಲಿದ್ದ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳನ್ನೊಳಗೊಂಡ “ಕಾಯಕ ಮತ್ತು ದಾಸೋಹ ಸಿದ್ಧಾಂತದ ತಳಹದಿ” ಯಲ್ಲಿ ಬೆಳೆದು ಬಂದ ಆರ್ಥಿಕ ಮಾದರಿ. ಶ್ರೇಣೀಕೃತ ಸಮಾಜದಲ್ಲಿ ಸರ್ವ ಸಮಾನತೆಯ ಹಾದಿಯಲ್ಲಿ ನಡೆದ ಬಸಾವಾದಿ ಶರಣರು ಇಡೀ ಪ್ರಪಂಚಕ್ಕೆ ನೀಡಿದ ಆರ್ಥಿಕ ಮಾದರಿ. ನಾವು ಭಾರತದ ಉದ್ದಲಗಲಕ್ಕೂ ಪ್ರವಾಸ ಮಾಡಿದ ಸಂದರ್ಭದಲ್ಲಿ ಉಂಟಾದ ಅನುಭವಗಳು ಭಾರತದ ಆರ್ಥಿಕ ವಿಚಾರಧಾರೆಗಳು ಈ ಕಾಯಕ ಮತ್ತು ದಾಸೋಹದ ಸಿದ್ಧಾಂತವನ್ನು ಇನ್ನಷ್ಟು ಗಟ್ಟಿಗೊಳಿಸಿದವು.
ಇಲ್ಲಿ ಕೆಲವು ರಾಜ್ಯಗಳನ್ನು ಉಲ್ಲೇಖಿಸಬಹುದು.
ಕರ್ನಾಟಕದಲ್ಲಿ ರೇಷ್ಮೆ, ಕೃಷಿ ಉತ್ಪನ್ನಗಳು
ಗುಜರಾತಿನಲ್ಲಿ ವಾಚು, ಬಟ್ಟೆ, ಸೆರಾಮಿಕ್ ವಸ್ತುಗಳ ಉದ್ಯಮ
ರಾಜಸ್ಥಾನದಲ್ಲಿ ಬಟ್ಟೆ ಮತ್ತು ಗ್ರಾನೈಟ್ ಉದ್ಯಮ
ಪಂಜಾಬಿನಲ್ಲಿ ಸೈಕಲ್ ಮತ್ತು ಯಂತ್ರೋಪಕರಣಗಳ ಉದ್ಯಮ
ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಕೃಷಿ ಉತ್ಪಾದನೆ
ಆಂಧ್ರ ಪ್ರದೇಶದಲ್ಲಿ ಕೃಷಿ ಮತ್ತು ಹೂವುಗಳ ಉತ್ಪಾದನೆ
ಮಹಾರಾಷ್ಟ್ರದಲ್ಲಿ ವಾಹನಗಳು ಮತ್ತು ವಾಹನಗಳ ಬಿಡಿಭಾಗಗಳ ಉತ್ಪಾದನೆ
ತಮಿಳುನಾಡಿನಲ್ಲಿ ಬಟ್ಟೆ, ಪಟಾಕಿ, ಯಂತ್ರೋಪಕರಣಗಳ ಉದ್ಯಮ
ಕೇರಳದಲ್ಲಿ ಚಿನ್ನಾಭರಣ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮ
ತಮಿಳುನಾಡಿನ ಕರೂರ ಮತ್ತು ಗುಜರಾತಿನ ಮೋರ್ಬಿಯ ಕಥೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಈ ಎರಡೂ ಪಟ್ಟಣಗಳು ತಲ ತಲಾಂತರದಿಂದ ಬಟ್ಟೆ ಮತ್ತು ಸೆರಾಮಿಕ್ ವ್ಯಾಪಾರ ಮಾಡುತ್ತ ಬಂದಿವೆ. ಈ ಎರಡೂ ಪ್ರದೇಶಗಳ ತಲಾ ಆದಾಯ (Per Capita Income) ಭಾರತದಲ್ಲಿಯೇ ಅತಿ ಹೆಚ್ಚು. ಮೋರ್ಬಿಯ ಜನಸಂಖ್ಯೆ ಸುಮಾರು 3 ಲಕ್ಷ. ಆದರೆ 2 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಹೊಂದಿದಾರೆ. ಕರೂರಿನ ಜನಸಂಖ್ಯೆ ಸುಮಾರು 8 ಲಕ್ಷ. ಆದರೆ 5 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಹೊಂದಿದ್ದಾರೆ. 90% ಜನರು ತಮ್ಮ ಪರಂಪರಾನುಗತವಾಗಿ ಬಂದ ಕೆಲಸಗಳನ್ನೇ ಮುಂದುವರೆಸಿದ್ದಾರೆ. ಶೈಕ್ಷಣಿಕವಾಗಿ ಕಡಿಮೆ ಓದಿದ ಈ ಜನರ ಉದ್ದಿಮೆಗಳಲ್ಲಿ ಉನ್ನತ ವ್ಯಾಸಂಗ ಮಾಡಿದವರು ಕೆಲಸ ಮಾಡುತ್ತಾರೆ. ಕರೂರಿನಂಥ ಸಣ್ಣ ಪಟ್ಟಣದಲ್ಲಿ ಎರಡು ದೊಡ್ಡ ದೊಡ್ಡ ಬ್ಯಾಂಕಗಳಿವೆ ಎನ್ನುವುದು ಚಕಿತಗೊಳಿಸುವ ಸಂಗತಿ. ಈ ಎರಡೂ ಪಟ್ಟಣಗಳು ಒಂದು ಸಂಶೋಧನಾ ವಸ್ತುಗಳಾಗಿವೆ. ಅಷ್ಟೊಂದು ಆರ್ಥಿಕ ಕ್ರಾಂತಿಯನ್ನುಂಟು ಮಾಡಿವೆ.
ಪೀಳಿಗೆಯಿಂದ ಪೀಳಿಗೆಗೆ ತಮ್ಮ ಕೌಶಲ್ಯವನ್ನು ಧಾರೆಯೆರೆದ ಪರಿಣಾಮವೇ ಈ ಆರ್ಥಿಕ ಸಧೃಢತೆಗೆ ಸಾಕ್ಷಿ. ಇದು ಮೂಲಭೂತ ಜಾಗತಿಕ ವ್ಯಾಪಾರ ನೀತಿಯನ್ನು ಸಾರಿ ಸಾರಿ ಹೇಳುತ್ತದೆ. ಇಂಥ ಆರ್ಥಿಕ ಮತ್ತು ಸಾಮಾಜಿಕ ಕ್ರಾಂತಿಯ ಬೀಜವನ್ನು ಮೊಳಕೆಯೊಡೆಯಿಸಿ ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದ ಗರಿಮೆ ಭಾರತದ್ದು ಮತ್ತು ಇದು ಬಸವಾದಿ ಶರಣರ ಕಾಯಕ ಮತ್ತು ದಾಸೋಹದ ಪರಿಕಲ್ಪನೆ.
2017 ರಲ್ಲಿ ಲಂಡನ್ನಿನ “Global Entrepreneur Monitor” ಸಂಸ್ಥೆಯವರು ನಡೆಸಿದ ಸಮೀಕ್ಷೆಯಲ್ಲಿ ಅತ್ಯಂತ ಆಶ್ಚರ್ಯಜನಕ ವಿಚಾರಗಳು ಬೆಳಕಿಗೆ ಬಂದವು. ಭಾರತದಲ್ಲಿ 18 ರಿಂದ 64 ರ ವಯಸ್ಸಿನ ಅಂತರದಲ್ಲಿ ಸ್ವಂತ ಉದ್ಯಮ ಮಾಡುವ ವಾಣಿಜ್ಯೋದ್ಯಮಿಗಳು 18% ಇದ್ದರೆ ಚೈನಾದಲ್ಲಿ 11% ಮತ್ತು ಅಮೇರಿಕಾದಲ್ಲಿ 10% ಮಾತ್ರವಿತ್ತು. ಈ ಸಮೀಕ್ಷೆ ಪ್ರಪಂಚದ ಎಲ್ಲ ದೇಶಗಳ ಕಣ್ಣು ತೆರೆಯಿಸಿತು ಎಂದೇ ಹೇಳಬಹುದು. ಅಲ್ಲಿಯವರೆಗೆ ಭಾರತೀಯರು ಜಾಗತಿಕ ಮಟ್ಟದಲ್ಲಿ ವ್ಯಾಪಾರ ಮಾಡಲು ಅನರ್ಹರು ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಬೇಕಾದ ಜಾಗತಿಕ ಮಟ್ಟದ ತಂತ್ರಜ್ಞಾನವಿಲ್ಲದವರು ಎಂಬ ಗ್ರಹಿಕೆಗೆ ಒಳಗಾಗಿದ್ದರು. ಭಾರತೀಯರು ಪ್ರಪಂಚದ ಎಲ್ಲ ದೇಶಗಳಿಗಿಂತ ಮುಂದಿದ್ದಾರೆ ಎಂದು ಮನವರಿಕೆಯಾಯಿತು.
ಅರ್ಥ ಮಾಡಿಕೊಳ್ಳುವದೇನೆಂದರೆ ಭಾರತದಲ್ಲಿ ಸ್ವಂತ ಉದ್ಯಮ ಅಥವಾ ವ್ಯಾಪಾರ ವಹಿವಾಟು ತಲ ತಲಾಂತರದಿಂದ ಮುಂದುವರೆಯುತ್ತದೆ. ಕೌಟುಂಬಿಕ ಉದ್ಯೋಗಗಳು ಭಾರತದ ಸಾಂಸ್ಕೃತಿಕ ಇತಿಹಾಸದ ಅವಿಭಾಜ್ಯ ಅಂಗ. ಪರಂಪರಾನುಗತವಾಗಿ ಬಂದ ಕಮ್ಮಾರಿಕೆ, ಬಡಗಿತನ, ಕುಂಬಾರಿಕೆ ಮುಂತಾದ ಉದ್ಯೋಗಗಳು ಭಾರತದ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಕಲ್ಪಿಸಿವೆ. ಇದು ಬಸವಾದಿ ಶರಣರ ಆಯಗಾರರ ಅದ್ಭುತ ಪರಿಕಲ್ಪನೆ. ಇದನ್ನೇ ಅರ್ಥಶಾಸ್ತ್ರದಲ್ಲಿ “ಏಷ್ಯಾಟಿಕ್ ಮೆಥಡ್ ಆಫ್ ಪ್ರೊಡಕ್ಶನ್ ಆಂಡ್ ಮಾರ್ಕೇಟಿಂಗ್” ಎನ್ನುತ್ತಾರೆ. ಈ ಸ್ವಂತ ಉದ್ದಿಮೆದಾರರು ಬಗ್ಗೆ Peter Drucker ಹೇಳುತ್ತಾರೆ:
An entrepreuner is the one who always searches for change, responds to it and exploits it as an opportunity. Innovation is the specific tool of entreoreuners, the means by which they exploit changes as an opportunity for different business or different service.
ಎಂಥ ಅದ್ಭುತ ಪರಿಕಲ್ಪನೆ. ಸ್ವಂತ ಉದ್ದಿದಾರರು ನಮ್ಮ ಭಾರತೀಯ ಸಂಸ್ಕೃತಿಯ ಅವುಭಾಜ್ಯ ಅಂಗ ಅಂತ ನನಗನಿಸುತ್ತದೆ.
ಗುಜರಾತಿನ ಮೋರ್ಬಿ-ಸೂರತ್-ರಾಜಕೋಟ್, ಪಂಜಾಬಿನ ಲೂಧಿಯಾನಾ-ಹೋಶಿಯಾರಪೂರ-ಜಲಂಧರ, ಮಹಾರಾಷ್ಟ್ರದ ಔರಂಗಾಬಾದ-ಬಾರಾಮತಿ-ಸಾಂಗ್ಲಿ-ಪುಣೆ, ಕರ್ನಾಟಕದ ಬೆಳಗಾಂವಿ-ಮೈಸೂರ-ಇಳಕಲ್ಲ, ತಮಿಳುನಾಡಿನ ತಿರುಪ್ಪೂರ-ಕೋಯಿಮತ್ತೂರ-ಮಧುರೈ ಮುಂತಾದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ.
ಪೀಳಿಗೆಯಿಂದ ಪೀಳಿಗೆಗೆ ತಮ್ಮ ಕೌಶಲ್ಯವನ್ನು ಧಾರೆಯೆರೆದ ಪರಿಣಾಮವೇ ಈ ಆರ್ಥಿಕ ಸಧೃಢತೆಗೆ ಸಾಕ್ಷಿ. ಇದು ಮೂಲಭೂತ ಜಾಗತಿಕ ವ್ಯಾಪಾರ ನೀತಿಯನ್ನು ಸಾರಿ ಸಾರಿ ಹೇಳುತ್ತದೆ. ಇಂಥ ಆರ್ಥಿಕ ಮತ್ತು ಸಾಮಾಜಿಕ ಕ್ರಾಂತಿಯ ಬೀಜವನ್ನು ಮೊಳಕೆಯೊಡೆಯಿಸಿ ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದ ಗರಿಮೆ ಭಾರತದ್ದು.
ಈ ಹಂತದಲ್ಲಿ ಹಳ್ಳಿಗಳಲ್ಲಿ ಕೇಂದ್ರೀಕೃತವಾದ ಜನರಲ್ಲಿರುವ ಕೌಶಲ್ಯಗಳು ಮತ್ತು ಆರ್ಥಿಕ ಅಭಿವೃದ್ಧಿಯ ಚಿಂತನೆಗಳು ನಗರ ಕೇಂದ್ರೀಕೃತ ಕೌಶಲ್ಯಗಳ ಸಂಯೋಜನೆ ಮತ್ತು ಅಳವಡಿಕೆಯತ್ತ ಗಮನ ಹರಿಸಬೇಕಾಗಿದೆ (Bridge between City & Village) ಕುಶಲ ಕರ್ಮಿಗಳು ಸಿದ್ಧಪಡಿಸುವ ಉತ್ಪನ್ನಗಳು ಆಧುನಿಕ ಪ್ರಪಂಚದ ಉಪಯುಕ್ತತೆಯನ್ನು ಗಮನಿಸಿ ತಯಾರಿಸುವತ್ತ ಸಾಗಬೇಕಾಗಿದೆ. ಇದಕ್ಕಾಗಿ ಆಧುನಿಕ ಚಿಂತಕರು ಮೂರು ಮೂಲಭೂತ ಪ್ರಭಾವಿ ಹಂತಗಳತ್ತ (Hingh Intensity Modifications) ನೋಡಬೇಕಾಗಿದೆ. ಇದಕ್ಕಾಗಿ ಆಧುನಿಕ ಚಿಂತಕರು ಮೂರು ಮೂಲಭೂತ ಪ್ರಭಾವಿ ಹಂತಗಳತ್ತ ನೋಡಬೇಕಾಗಿದೆ.
1. ಪ್ರಚಲಿತ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಆರ್ಥಿಕ ಸುಧಾರಣೆಯಲ್ಲಿ ಮೌಲ್ಯವರ್ಧನೆಯ ಪಾತ್ರ.
2. ಮೌಲ್ಯವರ್ಧನೆಯಲ್ಲಿ ಕಂಡುಬರುವ ಖರ್ಚು-ವೆಚ್ಚಗಳ ಪಾತ್ರ.
3. ಈ ಮೌಲ್ಯವರ್ಧನೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪಾತ್ರ.
ಈ ನಿಟ್ಟಿನಲ್ಲಿ ನಮಗೆ ಮಾರ್ಗದರ್ಶನೆ ನೀಡುವುದಕ್ಕೆ 5 ಸ್ಥರದಲ್ಲಿ ನಡೆದು ಬಂದ ಸಂಶೋಧನೆಗಳು ನೆರವಾಗುತ್ತವೆ.
1. ಮೊದಲನೇಯ ಪೀಳಿಗೆ-1950 ರಿಂದ 1960 ರ ಬೇಡಿಕೆಯ ಸಂಶೋಧನೆ: ಪರಂಪರಾನುಗತವಾಗಿ ನಡೆದು ಬಂದ ಉತ್ಪನ್ನಗಳ ಮಾರುಕಟ್ಟೆ.
2. ಎರಡನೇಯ ಪೀಳಿಗೆ-1960 ರಿಂದ 1970 ರ ಮಾರುಕಟ್ಟೆಯಾಧಾರಿತ ಬೇಡಿಕೆ: ಉತ್ಪನ್ನಗಳನ್ನು ಮಾರುವಲ್ಲಿ ಮಾರುಕಟ್ಟೆಯನ್ನೇ ತನ್ನತ್ತ ಸೆಳೆಯುವ ವಿಧಾನ.
3. ಮೂರನೇಯ ಪೀಳಿಗೆ-1970 ರಿಂದ 1980 ರ ತರ್ಕಬದ್ಧ ಆಧಾರಿತ ಮಾರುಕಟ್ಟೆ: ಬೃಹತ್ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸುವ ವಿಧಾನ.
4. ನಾಲ್ಕನೇಯ ಪೀಳಿಗೆ-1980 ರಿಂದ 1990 ರ ಸಮಯಾಧಾರಿತ ಮಾರುಕಟ್ಟೆ ವ್ಯವಸ್ಥೆ: ಉತ್ಪನ್ನಗಳ ಉಪಯೋಗ ಕೇಂದ್ರೀಕರಣದಿಂದ ಸಾಮೂಹಿಕ ಉಪಯೋಗದಿಂದ ಕೇಂದ್ರೀಕೃತ
5. ಐದನೇಯ ಪೀಳಿಗೆ-1990 ರಿಂದ ಇತ್ತೀಚಿನವರೆಗೇ ಏಕೀಕೃತ ಮಾರುಕಟ್ಟೆ ವ್ಯವಸ್ಥೆ: ಜಾಗತೀಕರಣದ ಪ್ರಭಾವದಿಂದ ಉತ್ಪನ್ನಗಳನ್ನು ಜಗತ್ತಿನಾದ್ಯಂತ ತಲುಪುವ ವ್ಯವಸ್ಥೆ.
ಈ ಐದನೇಯ ಪೀಳಿಗೆಯ ಕೌಶಲ್ಯಾಭಿವೃದ್ಧಿಯಿಂದ ಕಮ್ಮಾರರು ವ್ಯವಸಾಯಕ್ಕೆ ಬೇಕಾಗುವ ಯಂತ್ರೋಪಕರಣ, ಅಕ್ಕಸಾಲಿಗರು ಬಂಗಾರದ ಆಭರಣ, ಬಡಿಗೇರರು ಆಧುನಿಕ ಪೀಠೋಪಕರಣಗಳು, ಕುಂಬಾರರು ಮಣ್ಣಿನ ಸಾಮಾನುಗಳು, ಮೇದಾರರು ಮನೆ ಬಳಕೆಯ ಸಾಮಾನು, ನೇಕಾರರು ಕಾಲಕ್ಕೆ ತಕ್ಕ ಉಡುಪು, ಶಿಲ್ಪಿಗಳು ಕಂಚು-ಹಿತ್ತಾಳೆ-ಕಲ್ಲಿನ ಮೂರ್ತಿಗಳನ್ನು ಸಂಶೋಧಿಸಿ ಪರಿಷ್ಕರಿಸಿ ಮೌಲ್ಯವರ್ಧಿಸಿ ಜಗತ್ತಿನಾದ್ಯಂತ ಮಾರುಕಟ್ಟೆ ಮಾಡುವ ಸುವರ್ಣಾವಕಾಶ ನಮಗೆ ಇದೆ.
ಆಧುನಿಕ ಪೂರ್ವ ಭಾರತದ ಗ್ರಾಮೀಣ ಕರಕುಶಲ ವೃತ್ತಿಗಳು ಹಾಗೂ ವ್ಯವಸಾಯ ಪದ್ಧತಿಗಳು ಬದುಕಿನ ನೆಲೆಗಳಾಗಿದ್ದವು. ಸ್ವಾವಲಂಬನೆಯಿಂದ ಉತ್ಪಾದನೆ ನಡೆಯುತ್ತಿತ್ತೇ ವಿನಹಃ ಮಾರುಕಟ್ಟೆ ಆಧಾರಿತ ವ್ಯಾಪಾರವಾಗಿರಲಿಲ್ಲ. ಆದರೆ ಆಧುನಿಕತೆಯು ಭಾರತೀಯ ಸಮಾಜದಲ್ಲಿ ಬೇರೂರುತ್ತ ನಡೆದಂತೆ ಗ್ರಾಮೀಣ ಕಸುಬು ಹಾಗೂ ಕೃಷಿ ಹೆಚ್ಚು ಹೆಚ್ಚು ವ್ಯಾಪಾರೀಕರಣದತ್ತ ವಾಲಿತು. ಅಂದರೆ ಪರರಿಗಾಗಿ ಉತ್ಪಾದಿಸುವ ಪರಿಸ್ಥಿತಿ ಎದುರಾಗಿದೆ. ಆಧುನಿಕ ಜೀವನ ಪದ್ಧತಿಯ ಗುಣ ಪರಿಸರದ ಮಿತಿಯನ್ನು ಮೀರಿ ಅಸಹಜಗತಿಯಲ್ಲಿ ಬದಲಾವಣೆ ಹೊಂದಿದೆ. ಇಂಥ ಅಸಹಜ ಬದಲಾವಣೆಯೇ ಪಾರಂಪರಿಕ ಕಲೆಗಳ ಪುನರುಜ್ಜೀವನಕ್ಕೆ ಅಡ್ಡಿಯಾಗಿದೆ.
ಬೆವಸಾಯವ ಮಾಡಿ ಮನೆಯ | ಬೀಯಕ್ಕೆ ಭತ್ತವಿಲ್ಲದಿರ್ದಡೆ ||
ಆ ಬೆವಸಾಯದ | ಘೋರವೆನಗೇತಕ್ಕಯ್ಯಾ? ||
ಕ್ರಯ ವಿಕ್ರಯವ ಮಾಡಿ | ಮನೆಯ ಸಂಚ ನಡೆಯದನ್ನಕ್ಕ ||
ಆ ಕ್ರಯ ವಿಕ್ರಯದ | ಘೊರವೆನಗೇತಕ್ಕಯ್ಯಾ? ||
ಒಡೆಯನ ನೋಲೈಸಿ ತನುವಿಂಗೆ | ಅಷ್ಟಭೊಗವ ಪಡೆಯದಿರ್ದಡೆ ||
ಆ ಓಲಗದ | ಘೊರವೆನಗೇತಕ್ಕಯ್ಯಾ? ||
ಭಕ್ತನಾಗಿ ಭವಂ | ನಾಸ್ತಿಯಾಗದಿರ್ದಡೆ ||
ಆ ಉಪದೇಶವ ಕೊಟ್ಟ ಗುರು | ಕೊಂಡ ಶಿಷ್ಯ ||
ಇವರಿಬ್ಬರ ಮನೆಯಲ್ಲಿ | ಮಾರಿ ಹೊಗಲಿ ||
ಗುಹೇಶ್ವರನೆಂಬವನತ್ತಲೆ | ಹೋಗಲಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಬೀಯ : ವೆಚ್ಚ, ಉಪಯೋಗ
ಸಂಚ : ಮನೆ ನಡೆಸಲು ಬೇಕಾಗುವ ಖರ್ಚು-ವೆಚ್ಚ
ಇದು ಈ ಲೇಖನದ ಮೂಲ ಸೆಲೆ. ಅಂದರ ಯಾವುದೇ ಒಂದು ಕಾರ್ಯ ಕೆಲಸ ಅಥವಾ ನೈಪುಣ್ಯತೆ ಎಲ್ಲಿಯವರೆಗೂ ಫಲ ನೀಡುವುದಿಲ್ಲವೋ ಅದು ವ್ಯರ್ಥ ಅಂತ.
A successful process is the one which produces the results. Whatever the adjectives, names, and any thing we can make statements, unless it produces the results it is a failure.
ಕೌಶಲ್ಯಾಭಿವೃದ್ಧಿಯ ಹತ್ತು ಗುಣಗಳು:
1. ಮೂಲಭೂತ ಕೌಶಲ್ಯ (Formal Skill)
2. ಸಂವಹನ ಕಲೆ (Communication Skill)
3. ಮಾಹಿತಿಯ ಬಳಕೆ (Information Utilization Skill)
4. ವಾತಾವರಣಕ್ಕೆ ತಕ್ಕಂತೆ ಹೊಂದಾಣಿಕೆ (Adjustment to the Environmrnt)
5. ತಂಡ ಮನೋಭಾವ (Working as a Team)
6. ಉತ್ತಮ ವ್ಯಕ್ತಿತ್ವ (Good Personality & Behaviour)
7. ತಂತ್ರಜ್ಞಾನದ ಬಳಕೆ (Technology Utilization)
8. ಸಮಯ ನಿರ್ವಹಣೆ (Time Management)
9. ಸಂಘಟನೆ (Team Building)
10. ನಾಯಕತ್ವ (Leadership Quality)
ಹಾಗಾದರೆ ಮಾರುಕಟ್ಟೆ ವ್ಯವಸ್ಥೆ ಮತ್ತು ವ್ಯಾಪಾರ ಅಭಿವೃದ್ಧಿಯ ಚಿಂತನೆಗಳೇನು ಅನ್ನೋದನ್ನ ನೋಡೋಣ. ಐದನೇಯ ಪೀಳಿಗೆಯ (5th Generation) ಆಯಗಾರರ ಐದು ಕೌಶಲ್ಯ ಕಾಯಕಗಳು ಮೂಲಭೂತವಾಗಿ ನಮಗೆ ಕಂಡು ಬರುತ್ತವೆ. ಈ ಐದು ಜನ ಕುಶಲಕರ್ಮಿಗಳಾದ ಕಮ್ಮಾರ, ಅಕ್ಕಸಾಲಿಗ, ಬಡಿಗೇರ, ಕುಂಬಾರ ಮತ್ತು ಆಚಾರರುಗಳ ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ ಮತ್ತು ಆರ್ಥಿಕ ಚಿಂತನೆಯನ್ನು ನೋಡೋಣ.
1. ಕಮ್ಮಾರ :
ಕಮ್ಮಾರರು ಕೃಷಿಗೆ ಸಂಬಂಧಿಸಿದಂತೆ ಪರಿಕರಗಳನ್ನು ತಯಾರಿಸುವ ಆಯಗಾರರು. ಕೃಷಿ ಉಪಕರಣಗಳನ್ನು ಬಿಟ್ಟು ಇನ್ನುಳಿದ ಮನೆ ಬಳಕೆಯ ಉಪಕರಣಗಳನ್ನು ಮಾಡುವಲ್ಲಿಯೂ ಕೂಡ ನಿರತರಾಗಿದ್ದರು. ಇದರ ಜೊತೆಗೆ ಕೃಷಿ ಉಪಕರಣಗಳನ್ನು ದುರಸ್ತಿ ಮಾಡುವಲ್ಲಿ ಪರಿಣಿತಿಯನ್ನು ಪಡೆದವರಾಗಿದ್ದರು. ಆದರೆ ಆಧುನಿಕತೆ ಬೆಳೆದಂತೆಲ್ಲಾ ಕಮ್ಮಾರರ ಅವಶ್ಯಕತೆ ನಗರಗಳಿಗೆ ಅವಶ್ಯಕವಾಯಿತು ಅಂತ ಎನಿಸುತ್ತದೆ. ಆದರೂ ನಗರಗಳಲ್ಲಿ ತಮ್ಮ ವಾಸ್ತವ್ಯವನ್ನು ಹೂಡದೇ ಗ್ರಾಮಗಳಲ್ಲಿ ತಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ.
ಆಧುನಿಕ ಕೃಷಿ ಯಂತ್ರಗಳನ್ನು ತಯಾರಿಸುವತ್ತ ಕಮ್ಮಾರರು ಈಗ ಗಮನ ಹರಿಸಬೇಕು. ಬಿತ್ತುವ ಯಂತ್ರ, ಕಳೆ ತೆಗೆಯುವ ಯಂತ್ರ, ಕೀಟ ನಿಯಂತ್ರಣ ಯಂತ್ರ ಇತ್ಯಾದಿ. ಇಂದಿಗೂ ಸುಧಾರಿತ ಯಂತ್ರಗಳನ್ನು ತಯಾರಿಸುವ ಕ್ಷಮತೆ ಕಮ್ಮಾರರಲ್ಲಿದೆ. ಆಫ್ರಿಕಾದ ದೇಶಗಳಲ್ಲಿ ಕೃಷಿಭೂಮಿಯ ಒಡೆತನ ಅತ್ಯಂತ ವಿಸ್ತಾರದಲ್ಲಿದೆ. ಹಾಗಾಗಿ ಭಾರತದಲ್ಲಿರುವ ಕೃಷಿ ಉಪಕರಣಗಳಿಗಿಂತ ದೊಡ್ಡದಾದ ಉಪಕರಣಗಳನ್ನು ತಯಾರಿಸಿ Export ಮಾಡುವತ್ತ ನಮ್ಮ ಲಕ್ಷ್ಯ ಹರಿಸಬೇಕಾಗಿದೆ.
2. ಅಕ್ಕಸಾಲಿಗ :
ಸಿಂಧೂ ನದಿಯ ನಾಗರೀಕತೆಯಿಂದ ಹಿಡಿದು ಅಕ್ಕಸಾಲಿಗರಿಗೆ ಸರಿ ಸುಮಾರು 5000 ವರ್ಷಗಳ ಇತಿಹಾಸವಿದೆ. ಸುಮಾರು 2000 ವರ್ಷಗಳಿಂದ ಅಕ್ಕಸಾಲಿಗರು ಜಗತ್ತಿಗೆ ವಜ್ರ ವೈಢೂರ್ಯಗಳನ್ನು ಒದಗಿಸುತ್ತಿದ್ದಾರೆ. ಗೋಲ್ಕೊಂಡಾ ವಜ್ರಗಳು, ಕಾಶ್ಮೀರದ ವೈಢೂರ್ಯಗಳು, ಹೈದರಾಬಾದ ಪರ್ಲ್ಗಳು ಸುಪ್ರಸಿದ್ಧವಾದವುಗಳು.
ಎಲ್ಲ ವಿಷಮ ಪರಿಸ್ಥಿತಿಗಳನ್ನು ಎದುರಿಸಿ ಅಕ್ಕಸಾಲಿಗರೂ ಇಂದಿಗೂ ತಮ್ಮ ವ್ಯವಸಾಯವನ್ನು ಉಳಿಸಿಕೊಂಡಿದ್ದಾರೆ ಎಂದರೆ ಅವರ ಕೌಶಲ್ಯ ಎಷ್ಟು ಉನ್ನತ ಮಟ್ಟದಲ್ಲಿದೆ ಎನ್ನುವುದನ್ನು ನಾವು ಮನಗಾಣಬೇಕು. ಯಾವುದೇ ಯಂತ್ರಗಳು ಸೃಜನಾತ್ಮಕ, ಕ್ರಿಯಾತ್ಮಕ, ಹಸ್ತ ನೈಪುಣ್ಯದ ಆಭರಣಗಳನ್ನು ತಯಾರಿಸುವುದು ಅಸಾಧ್ಯ. ಯಂತ್ರಗಳ ಮೂಲಕ ತಯಾರಿಸುವ ವಸ್ತಗಳು ಏಕತಾನತೆಯಿಂದ ಕೂಡಿರುತ್ತವೆ. ಒಂಥರಾ Monotonous Feeling ನೀಡುತ್ತವೆ.
ಹಸ್ತ ಕೌಶಲ್ಯದಿಂದ ಆಭರಣಗಳನ್ನು ತಯಾರಿಸುವುದು ಒಂದು ಉತ್ಕೃಷ್ಟ ಕಲೆ. ಈಗಲೂ ಹಸ್ತ ತಯಾರಿಕಾ ಆಭರಣಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಇತ್ತೀಚೆಗೆ ಹಸ್ತ ತಯಾರಿಕಾ ಆಭರಣಗಳಿಗೆ ಹತ್ತು ಹಲವು ಕಾರಣಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ.
ಸಮೂಹ ಉತ್ಪಾದನಾ ಯಂತ್ರಗಳನ್ನು (Mass Production Machinery) ಬಳಸುವುದಿಲ್ಲ.
ತಯಾರಿಕೆಗೆ ಬಹಳ ವೇಳೆ ಬೇಕು (Value of Time).
ತಯಾರಿಸುವವರ ಕರ ಕುಶಲ ಬಹಳ ನೈಪುಣ್ಯತೆಯಿಂದ ಕೂಡಿರುತ್ತದೆ (Makers Process).
ಆಭರಣಗಳ ತಯಾರಿಕೆಯಲ್ಲಿ ಬಳಸುವ ಉತ್ತಮ ಮಟ್ಟದ ಕಚ್ಚಾ ವಸ್ತುಗಳು (Materials Used).
ಅತ್ಯಂತ ಶ್ರದ್ಧೆ ಮತ್ತು ನೈತಿಕತೆಯಿಂದ ತರಿಸಿಕೊಂಡ ಕಚ್ಚಾ ವಸ್ತುಗಳನ್ನು ಉಪಯೋಗಿಸಿ ಮಾಡುವ ಆಭರಣಗಳು ಉತ್ತಮ ಬಾಳಿಕೆ ಬರುತ್ತವೆ.
ಉತ್ತಮ ಗುಣಮಟ್ಟದಿಂದ (Quality) ಕೂಡಿದ ಆಭರಣಗಳು
ಸ್ಥಳೀಯವಾಗಿ ಉತ್ಪಾದಿಸಲ್ಪಡುವುದರಿಂದ ಅತ್ಯಂತ ಪ್ರೀತಿ ಮತ್ತು ವಿಶ್ವಾಸಾರ್ಹತೆಯಿಂದ ಕೂಡಿರುತ್ತವೆ. ಒಂದು ಕೌಟುಂಬಿಕ ಸಂಬಂಧವಿರುತ್ತದೆ.
ಅಕ್ಕಸಾಲಿಗರು ಸಂಘಟಿತರಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಾವು ತಯಾರಿಸಿದ ಆಭರಣಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದರೊಂದಿಗೆ ವ್ಯಾಪಾರದ ಅಭಿವೃದ್ಧಿಗೆ ಆರೋಗ್ಯಕರ ಪೈಪೋಟಿಯನ್ನು ನೀಡಿ ತಮ್ಮ ಆರ್ಥಿಕವಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಾಗಿದೆ. ಈಗ ಮಾರುಕಟ್ಟೆಯಲ್ಲಿ ಹಸ್ತ ತಯಾರಿಕಾ ಆಭರಣಗಳಿಗೆ ಉತ್ತಮ ಬೇಡಿಕೆ ಇದೆ.
3. ಬಡಿಗೇರ :
ಬಡಿಗೇರರು ಅಡುಗೆಮನೆಯ ದಿನನಿತ್ಯದ ಕಾರ್ಯಗಳಿಗಾಗಿ ಉತ್ಪಾದಿಸುತ್ತಿದ್ದ ಹುಟ್ಟು, ಕಡಗೋಲು, ಲಟ್ಟಣಿಗೆ, ಈಳಿಗೆ ಮಣೆ, ಮೇಜು, ಕುರ್ಚಿ ಇತ್ಯಾದಿ ಅಗತ್ಯ ವಸ್ತುಗಳು ಇಂದು ಸರಕುಗಳಾಗಿ ಮಾರ್ಪಡುತ್ತಿವೆ. ಆಧುನಿಕ ಪ್ರಪಂಚಕ್ಕೆ ಬೇಕಾಗುವ ವಸ್ತುಗಳನ್ನು ತಯಾರಿಸುವತ್ತ ನಮ್ಮ ಗಮನ ಹರಿಯಬೇಕಾಗಿದೆ. ಅಂದರೆ ಇಂದಿನ ದಿನಮಾನಕ್ಕನುಸಾರವಾಗಿ Contemporary Application ನತ್ತ ಸಾಗಬೇಕಾಗಿದೆ. ಆಗ ಮಾತ್ರ ಆರ್ಥಿಕ ಪ್ರಗತಿ ಸುಧಾರಿಸುತ್ತದೆ.
ಪೂರ್ವೋತ್ತರ ರಾಷ್ಟ್ರಗಳಿಂದ Scrap ಪೀಠೋಪಕರಣಗಳನ್ನು ತಂದು ಮತ್ತೆ ಚಂದಾಗಿ ತಯಾರಿಸಿ (Refurbish) ಮಾರುವ MNC ಕಂಪನಿಗಳು ಇಂದು ಭರ್ಜರಿ ವ್ಯಾಪಾರ ಮಾಡುತ್ತಿವೆ. ಒಂದು Recliner ಈಗ ಸರಿ ಸುಮಾರು 20,000 ಇದೆ. Scarp ನಲ್ಲಿ ಅವರು 200/300 ಕೊಟ್ಟು ತಂದಿರತಾರೆ. ನಮ್ಮ ಬಡಿಗೇರರು ಯಾಕ ಮಾಡಬಾರದು.
ಜಲಂಧರ್, ಮೀರತ್ ನಲ್ಲಿ ಅತ್ಯಧುನಿಕ ಕ್ರೀಡಾ ಸಾಮಗ್ರಿಗಳು. ಬ್ಯಾಟ್, ಗಾಲ್ಫ್ ಬ್ಯಾಟ್ ಗಳು, ಚೆಸ್ ಪಾನ್ಸ್ ಮುಂತಾದವುಗಳನ್ನು ತಯಾರಿಸಿ Export ಮಾಡುತ್ತಾರೆ. ಇಂದಿನ ಯುವ ಪೀಳಿಗೆಯ ಬಡಿಗೇರರು ಈ ದಿಸೆಯಲ್ಲಿ ಯೋಚನೆ ಮಾಡಬೇಕಾದ ಅವಶ್ಯಕತೆ ಇದೆ.
ಇನ್ನೂ ಮುಂದುವರೆದ ರಾಷ್ಟಗಳಲ್ಲಿ Antique Furniture ಗಳಿಗೆ ಬಹಳ ಬೇಡಿಕೆ ಇದೆ. There is a steady rise in requirements of antique furnitures.
Decorative Furnitures
Architectural Furnitures
Italian Furnitures
ಕೇರಳ ರಾಜ್ಯದಲ್ಲಿ ಮತ್ತು ತಮಿಳುನಾಡು ರಾಜ್ಯದ ಕಾರೈಕುಡಿಯಲ್ಲಿ ಇಂಥ Antique Furniture ಗಳ ತಯಾರಿಕಾ ಮತ್ತು ಮಾರಾಟ ಸಂಘವನ್ನು ಸ್ತಾಪಿಸಿಕೊಂಡು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಆಧುನಿಕ ಚಿಂತನೆಗಳತ್ತ ಗಮನ ಕೊಡಬೇಕು.
4. ಕುಂಬಾರ :
ಸರಿ ಸುಮಾರು 4000 ವರ್ಷಗಳ ಇತಿಹಾಸವುಳ್ಳ ಕುಂಬಾರಿಕೆ “The History of Pottery is the history of the humanity” ಎನ್ನುವ ಒಂದು ಪ್ರಸಿದ್ಧ ಗಾದೆ ಮಾತಿನಂತೆ ಒಂದು ಶ್ರೇಷ್ಠ ಆಯಗಾರರ ಕುಲ ಕಸುಬು.
ಇದನ್ನೇ ಪುಷ್ಠೀಕರಿಸಿದವರು ಪ್ರಖ್ಯಾತ ಇತಿಹಾಸ ತಜ್ಞ ಸರ್ ಜಾರ್ಜ್ ಕ್ರಿಸ್ಟೋಫರ್ ಬರ್ಡವುಡ್ (ಕ್ರಿ.ಶ 1832 – 1917). ಅವರು ಬಾಂಬೆ ಮೆಡಿಕಲ್ ಸರ್ವಿಸ್ ನಲ್ಲಿ ಇದ್ದವರು. ಅವರು ತಮ್ಮ ಕೃತಿ “The Industrial Arts of India” ದಲ್ಲಿ ಕುಂಬಾರರ ಬಗ್ಗೆ ತಮ್ಮ ಅದ್ಭುತ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
“ಮಣ್ಣಿನಲ್ಲಿ ಅತ್ಯಂತ ಸುಂದರ ಮಡಕೆಗಳನ್ನು ತಯಾರಿಸುವ ಭಾರತೀಯ ಕುಂಬಾರರು ಪ್ರಪಂಚದಲ್ಲೇ ಅತ್ಯಂತ ಪ್ರಭುದ್ಧ ಕುಶಲಕರ್ಮಿಗಳಾಗಿದ್ದಾರೆ’.
ಈ ಮಾತು ಅಕ್ಷರಶಃ ಸತ್ಯವಾದದ್ದು. ನಾಗರೀಕತೆ ಬೆಳೆದಂತೆಲ್ಲಾ ಮಾನವನು ಅಲೆದಾಡುವುದನ್ನು ಬಿಟ್ಟು ನದೀ ಪಾತ್ರಗಳತ್ತ ಹೊರಳಿ ನೆಲೆ ನಿಲ್ಲವುದನ್ನು ಕಲಿತನು. ಆಹಾರವನ್ನು ಬೇಯಿಸಿ ತಿನ್ನುವುದಕ್ಕೆ ಪ್ರಾರಂಭ ಮಾಡಿದನು. ಆಹಾರ ಪದಾರ್ಥಗಳನ್ನು ಬೇಯಿಸಲು ಮಣ್ಣಿನಿಂದ ಮಾಡಿದ ಮಡಕೆಗಳನ್ನು ಉಪಯೋಗ ಶುರುವಾಯಿತು. ಇವೇ ಮಡಕೆಗಳು ಮುಂದೆ ಬದುಕಿನ ಅವಿಭಾಜ್ಯ ಅಂಗಗಳಾದವು. ಹಾಗಾಗಿ ಇತರೆ ಆಯಗಾರರ ಜೊತೆಗೆ ಕುಂಬಾರಿಕೆ ವೃತ್ತಿಯೂ ಕೂಡ ನಾಗರಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಕುಂಬಾರಿಕೆಯನ್ನು ವೃತ್ತಿ ಮಾಡಿಕೊಂಡವರು ಸಮಾಜದ ಒಂದು ಪ್ರಮುಖ ಸಮುದಾಯವಾಗಿಯೂ ಬೆಳೆದರು.
ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ. ಆರೋಗ್ಯದ ಚಿಂತನೆ ಹೆಚ್ಚಾದಂತೆಲ್ಲಾ ಮಣ್ಣಿನಿಂದ ಮಾಡಿದ ಪಾತ್ರೆಗಳತ್ತ ಆಧುನಿಕ ಜನರು ಒಲವು ತೋರಿಸುತ್ತಿದ್ದಾರೆ. One time use plastic ನ ಕಾನೂನಿಂದಾಗಿ, ಬಳಸಿ ಬಿಸಾಡುವ plastic ನಿಷೇಧದಿಂದಾಗಿ ಪರಿಸರ ಸ್ನೇಹಿಯಾದ ಕುಂಬಾರರ ವಸ್ತುಗಳಿಗೆ ಮರುಹುಟ್ಟಿನ ಅವಕಾಶ ಬಂದಿದೆ. ಮಣ್ಣಿನ ಹಲವಾರು ದಿನನಿತ್ಯದ ಉಪಯೋಗಿ ವಸ್ತುಗಳನ್ನು ತಯಾರಿಸುವತ್ತ ಸಂಶೋಧನೆಗಳು ಶುರುವಾಗಿವೆ. ಆಧುನಿಕತೆಯತ್ತ ಗಮನ ಹರಿಸಿ ಯಂತ್ರಗಳನ್ನು ಬಳಸಿದರೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಬೇಕು.
ಆಧುನಿಕ ಮನೆ ಬಳಕೆಯ ವಸ್ತುಗಳನ್ನು ತಯಾರಿಸುವತ್ತ ಗಮನ ಹರಿಸಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಧುನಿಕ ಯಂತ್ರಗಳನ್ನು ಬಳಸಿ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಾರೆ. ಮಾಡ್ರನ್ ಲುಕ್ಗಳಲ್ಲಿ ಜನರ ಮನ ಸೆಳೆಯುತ್ತಿವೆ. ಮಣ್ಣಿನ ಒಲೆ, ಹಣತೆ, ಗಲ್ಲ, ಜಾಮ್ಮು, ಗಡಿಗೆ, ತತ್ರಾಣಿ, ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ವಸ್ತುಗಳನ್ನು ಆಧುನಿಕ ಯಂತ್ರಗಳನ್ನು ಬಳಸಿ ತಯಾರಿಸುತ್ತಿದ್ದಾರೆ. ಈ ಮಣ್ಣಿನ ಪಾತ್ರಗಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕೆಂಬುದನ್ನು ಬಿಟ್ಟರೆ, ಆರೋಗ್ಯದ ದೃಷ್ಟಿಯಿಂದ ಅನುಕೂಲ ವಾತಾವರಣ ನಿರ್ಮಾಣ ಮಾಡಿ ಮಡಿಕೆ-ಕುಡಿಕೆಗಳು ಜನತೆಯ ಮನಗೆದ್ದಿವೆ.
ಮಣ್ಣಿನ ವಸ್ತುಗಳನ್ನು ತಯಾರಿಸಿ ಅವುಗಳನ್ನು ಹೊತ್ತು ಊರೂರು ಸುತ್ತಿ ವ್ಯಾಪಾರ ಮಾಡುವ ವ್ಯವಸ್ಥೆಯಿತ್ತು. ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವೇದಿಕೆ ಅಥವಾ ಸಂಘಟನೆ ಇಲ್ಲದೇ ಇರುವುದು ಕುಂಬಾರಕೆಯಿಂದ ಯುವಕರು ವಿಮುಖರಾಗುತ್ತಿರುವುದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ ಇಂದು ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸ್ವದೇಶದಲ್ಲಿ ಅಷ್ಟೇ ಅಲ್ಲಾ ವಿದೇಶಗಳಿಗೂ ರಫ್ತು ಮಾಡುವ ಅವಕಾಶವಿದೆ. ಕುಂಬಾರರ ಶ್ರಮಕ್ಕೆ ತಕ್ಕಂತೆ ಸೂಕ್ತ ಬೆಲೆಗೆ ವಸಗತುಗಳು ಮಾರಾಟವಾದಲ್ಲಿ ಕುಂಬಾರರ ಜೀವನ ಸುಗಮವಾಗಿ ಸಾಗುವುದರೊಂದಿಗೆ ಸಾಂಪ್ರದಾಯಿಕ ವೃತ್ತಿಯೊಂದನ್ನು ಜೀವಂತ ಉಳಿಸಿದಂತಾಗುತ್ತದೆ.
5. ಆಚಾರರು :
ಭವ್ಯ ಭಾರತದ ಪರಂಪರೆಯಲ್ಲಿ ಆಚಾರರು ನೀಡದ ಕೊಡುಗೆ ಅಪಾರ, ಅಪೂರ್ವ ಮತ್ತು ಅನುಪಮ. ಪ್ರಾಚೀನ ದೇವಾಲಯಗಳು, ವಿವಿಧ ಲೋಹಗಳಿಂದ ಅವರು ಮಾಡಿದ ವಿಗ್ರಹಗಳು ಒಂದೇ ಎರಡೇ ಲಕ್ಷಗಟ್ಟಲೇ ಉದಾಹರಣೆಗಳು ಇವೆ. ಆದರೆ ಸರಿ ಸುಮಾರು ಸಾವಿರ ವರ್ಷಗಳ ಅವಧಿಯಲ್ಲಿ ವಿವಿಧ ರೀತಿಯ ದಾಳಿಗೊಳಪಟ್ಟು ಈ ಎಲ್ಲ ಕಲೆಗಳು ನಶಿಸಿ ಹೋಗುವ ಹಂತ ತಲುಪಿದ್ದವು. ಸ್ವಾತಂತ್ರ್ಯಾ ನಂತರದಲ್ಲಿ ನಮ್ಮವರೇ ಈ ಕಲೆಗಳಿಗೆ ಪ್ರೋತ್ಸಾಹ ನೀಡದೆ ಆಧುನಿಕತೆಯತ್ತ ಮುಖ ಮಾಡಿ ನಿಂತದ್ದರಿಂದ ಈ ಶಿಲ್ಪಕಲೆಗಳು, ಲೋಹಕಲೆಗಳು ಆರ್ಥಿಕವಾಗಿ ಆಧಾರವಾಗದೇ ಅವಜ್ಞೆಗೆ ಒಳಗಾಗಿದ್ದವು.
ಜಾಗತೀಕರಣದ Side effect ನಿಂದ ಆಧುನಿಕ ಕೈಗಾರಿಕಾ ಕ್ರಾಂತಿಯಿಂದ ಯಂತ್ರೋಪಕರಣಗಳನ್ನು ಬಳಸಿ ಆಭರಣಗಳನ್ನು ತಯಾರಿಸುವತ್ತ ಜನರ ಗಮನ ಹರಿಯಿತು. ಸಧ್ಯದ ದಿನಮಾನಗಳಲ್ಲಿ ಇಡೀ ಉದ್ಯಮವನ್ನು ಜಾಹೀರಾತು ಕ್ಷೇತ್ರ ತನ್ನ ವರ್ಣರಂಜಿತವಾದ, ಆಕರ್ಷಕವಾದ ಜಾಹೀರಾತುಗಳನ್ನು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮವನ್ನು ಆವರಿಸಿಕೊಂಡು ಬಿಟ್ಟಿದೆ. ಈ ನಿಟ್ಟಿನಲ್ಲಿ ನಮ್ಮ ಕರಕುಶಲ ವಸ್ತುಗಳಿಗೆ ಮೌಲಿಕ ಚಿಂತನೆಗಳೊಂದಿಗೆ ವ್ಯಾಪಾರ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ.
ಕಂಚು ಹಿತ್ತಾಳೆಯಿಂದ ತಯಾರಿಸಿದ ಆಧುನಿಕ ವಸ್ತುಗಳ ಬಳಕೆ ಈಗ ಹೆಚ್ಚಾಗತಾ ಇದೆ. ಪಂಚತಾರಾ ಹೋಟೆಲ್, ದೊಡ್ಡ ದೊಡ್ಡ ಮಾಲ್, ಅಪಾರ್ಟಮೆಂಟ್ ಗಳಲ್ಲಿ ಹಿತ್ತಾಳೆ ಮತ್ತು ಕಂಚಿನ ವಸ್ತುಗಳಿಂದ ಮಾಡಿದ Hanldes, Door Fittings, Decorative Articles ಉಪಯೋಗಿಸುತ್ತಾರೆ. ಇವುಗಳನ್ನು ತಯಾರಿಸುವತ್ತ ನಮ್ಮ ಚಿತ್ತ ಹರಿಯಬೇಕಾಗಿದೆ. ಈಗಾಗಲೇ ಗುಜರಾತಿನ ರಾಜಕೋಟ್ ಮತ್ತು ಮೋರ್ಬಿಯವರೊಂದಿಗೆ ನಾವು ಮಾರುಕಟ್ಟಯಲ್ಲಿ ಸ್ಪರ್ಧೆ ಮಾಡಬೇಕಾಗಿದೆ. ಈ ಎಲ್ಲ ವಿಚಾಋಗಳನ್ನು ಚಿಂತನ ಮಂಥನದ ಮೂಲಕ ಆಚಾರ ವರ್ಗವನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವಾಗಬೇಕು. ಇದು ದೂರದೃಷ್ಟಿಯ ಚಿಂತನೆ. ಹಾಗಾಗಿ Immediate Result Expect ಮಾಡುವ ಹಾಗಿಲ್ಲ.
ನಝರ್ ಬದಲೋ ನಝಾರಾ ಅಪನೆ ಆಪ್ ಬದಲ್ ಜಾಯೆಗಾ.
ಹಾಗಾದರೆ ಇದಕ್ಕೆ ನಾವು ಈಗ ಏನ ಮಾಡಬೇಕು.
1. 1 ರಿಂದ 10 ನೇ ತರಗತಿಯವರೆಗೆ ಮಕ್ಕಳಿಗೆ ಶೈಕ್ಷಣಿಕವಾಗಿ ಸಂಘದ ವತಿಯಿಂದ ಎಲ್ಲ ಸವಲತ್ತುಗಳನ್ನೂ ನೀಡಬೇಕು.
2. ಉನ್ನತ ಶಿಕ್ಷಣಕ್ಕೆ ಧನ ಸಹಾಯ ನೀಡುವುದು.
3. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಧ್ಯಾರ್ಥಿಗಳನ್ನು ತರಬೇತಿ ನೀಡುವುದು. (IAS/KAS)
4. ತಲ ತಲಾಂತರದಿಂದ ಬಂದ ಕೌಶಲ್ಯಾಭಿವದ್ಧಿಗೆ ಒತ್ತು ಕೊಟ್ಟು ತರಬೇತಿ ಕೇಂದ್ರಗಳನ್ನು ಗ್ರಾಮ ಮಟ್ಟದಲ್ಲಿ ಸ್ಥಾಪಿಸುವುದು.
5. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಸಿಯಲ್ಲಿ ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳಿಗೆ ತರಬೇತಿ ನೀಡುವ ಗುರುಕುಲವನ್ನು ಸ್ಥಾಪನೆ ಮಾಡಿದ್ದಾರೆ. ಹಾಗೆಯೇ ಎಲ್ಲ ಗ್ರಾಮ ಮಟ್ಟದಲ್ಲಿ ಈ ಕಾರ್ಯ ನಡೆಯಬೇಕು.
6. ಹರಿಯಾಣಾದಲ್ಲರುವ “ವಿಶ್ವಕರ್ಮ ಸ್ಕಿಲ್ ವಿಶ್ವವಿದ್ಯಾಲಯದವರಿಂದ ಮಾರ್ಗದರ್ಶನ ಪಡೆಯಬಹುದು. (svsu.av.in)
7. Indira Gandhi National Tribal University – Amarakantak (MP)
8. ಸಂಘದಿಂದ ಜಾಗತಿಕ ಮಟ್ಟದಲ್ಲಿ ವಿಶ್ವಕರ್ಮರ ಉತ್ಪಾದನೆಗಳನ್ನು ಮಾರಾಟ ಮಾಡುವಲ್ಲಿ ಎಲ್ಲರೂ ಸಹಕಾರ ನೀಡಬೇಕು. ಈ ಕೆಲಸ ಸಂಘದಿಂದ ಮಾತ್ರ ನಡೆಯಬೇಕು.
9. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಮ್ಮಲ್ಲಿ ಒಂದು ಸಾಮಾಜಿಕ ಸಮಾನತೆಯ ಪ್ರಜ್ಞೆ ಇರಬೇಕು.
ಅರ್ಥಕ್ರಾಂತಿಯಲ್ಲಿ ಸಂಸ್ಕೃತಿಯ ಪಾತ್ರ :
ಎರಡನೇ ಮಹಾಯುದ್ಧದ ನಂತರ ಇಡೀ ಪ್ರಪಂಚದಲ್ಲಿ ಹಸಿವು ಬಡತನ ಎಲ್ಲೆ ಮೀರಿ ಸಮಾಜ ಕಲುಷಿತ ಮಟ್ಟಕ್ಕೆ ತಲುಪಿತ್ತು. ಇದನ್ನರಿತು ದೇಶ ದೇಶಗಳ ನಡುವೆ ಸಮಾನತೆ ಮತ್ತು ಸೌಹಾರ್ದತೆಯನ್ನು ಬೆಳೆಸಲು 1945 ರಲ್ಲಿ ವಿಶ್ವಸಂಸ್ಥೆ (United Nations-UN) ಎಂಬ ಮಹಾನ್ ಸಂಸ್ಥೆಯ ಸ್ಥಾಪನೆಯಾಗುತ್ತದೆ. 1951 ರಲ್ಲಿ ಇದರ ಅಧ್ಯಕ್ಷರಾಗಿದ್ದಂಥಾ “ಲೂಯೀಸ್ ನೆರ್ವೋ” ಈ ಹಸಿವು ಬಡತನ ನೀಗಿಸುವ ಮಾದರಿಯನ್ನು ತರುವ ಉದ್ದೇಶದಿಂದ ಒಂದು ಅಧಿವೇಶನವನ್ನು ಕರೆಯುತ್ತಾರೆ. ಈ ಅಧಿವೇಶನದಲ್ಲಿ ಮೂರು ದಿನ ಚಿಂತನ ಮಂಥನ ಮಾಡಿ ಒಂದು ನೀತಿ ಸಂಹಿತೆಯನ್ನು ಬಿಡುಗಡೆ ಮಾಡುತ್ತಾರೆ.
The United Nation’s Policy Statement (03.05.1951): Measures for the Economic Development of under developed Countries.
The statement:
There is a sense in which rapid economic progress is impossible without painful readjustment. Ancient philosophies have to be scrapped; old social institutions have to disintegrate; bonds of caste, creed and race have to be burst; and large numbers of persons who cannot keep up with progress have to have their expectations of a comfortable life frustrated. Very few communities are willing to pay the full price of rapid economic progress.
ಯಾವುದೇ ದೇಶ ಅತಿ ಶೀಘ್ರವಾಗಿ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಅನೇಕ ನೋವುಗಳನ್ನು ಅನುಭವಿಸಿಯಾದರೂ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ತಮ್ಮ ತಮ್ಮ ದೇಶಗಳ ಪುರಾತನ ಹಾಗೂ ಪ್ರಾಚೀನ ತತ್ವ ಶಾಸ್ತ್ರಗಳನ್ನು ಬಿಡಬೇಕಾಗುತ್ತದೆ. ಹಳೆಯ ಸಾಂಪ್ರದಾಯಿಕ ಸಂಸ್ಥೆಗಳ ವಿಕೇಂದ್ರೀಕರಣ ಮಾಡಬೇಕಾಗುವುದು. ಸಮಾಜದ ನಡುವೆ ಇರುವ ಜಾತಿ, ಪಂಥಗಳಿಂದ ಹೊರಗೆ ಬರಬೇಕಾಗಬಹುದು. ನಾವು ಸೂಚಿಸುವ ಪಾಶ್ಚಿಮಾತ್ಯ ಅರ್ಥ ವ್ಯವಸ್ಥೆ ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು.
ವಿಶ್ವಸಂಸ್ಥೆಯು ಒಳ್ಳೆಯ ಉದ್ದೇಶದಿಂದ ಈ ಮಾರ್ಪಾಡನ್ನು ಸೂಚಿಸಿತ್ತು. ಆದರೆ ಇದನ್ನು ಆಚರಣೆಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಆಯಾ ದೇಶಗಳ ಸಂಪ್ರದಾಯ, ಸಂಸ್ಕೃತಿ, ಪರಂಪರೆ ಪ್ರಾಚೀನ ಆಚರಣೆಗಳನ್ನು ಮೀರಿ ಅಭಿವೃದ್ಧಿಯನ್ನು ಸಾಧಿಸುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಇದನ್ನು ಭಾರತವೂ ಸೇರಿದಂತೆ ಎಲ್ಲ ಬಡರಾಷ್ಟ್ರಗಳು ಒಪ್ಪಿಕೊಂಡು ಅನುಷ್ಠಾನ ಮಾಡಲಾರಂಭಿಸಿದವು. ಈ ಮಾರುಕಟ್ಟೆ ಆಧಾರಿತ ಅರ್ಥಶಾಸ್ತ್ರದ ಮಾದರಿಯನ್ನು 50 ವರ್ಷಗಳವರೆಗೆ ಅನುಷ್ಠಾನಕ್ಕೆ ತಂದು ಮೇಲ್ವಿಚಾರಣೆ ನಡೆಸಿದಾಗ ಬದಲಾವಣೆಯ ಸುಳಿವು ಸಿಗಲಿಲ್ಲ. ಅದಕ್ಕಾಗಿ ವಿಶ್ವಸಂಸ್ಥೆ 2001 ರಲ್ಲಿ ಮತ್ತೆ ಸಭೆ ಕರೆದು ಈ 50 ವರ್ಷಗಳ ಸ್ಥೂಲ ಅಧ್ಯಯನವನ್ನು ಪಾರಾಮರ್ಶಿಸಿತು. ಹೊಸದಾದ ಮತ್ತೊಂದು ನೀತಿ ಸಂಹಿತೆಯನ್ನು ಪ್ರಕಟಿಸಿತು.
The statement:
There is no unique universal set of rules. Sustained growth depends on key functions that need to be fulfilled over a period of time. Accumulation of physical and human capital, efficiency in the allocation of resources, adoption of technology, and the sharing of the benefits of growth.
ಎಲ್ಲ ದೇಶಗಳಿಗೆ ಅನ್ವಯವಾಗುವಂಥಾ ಯಾವುದೇ ಆರ್ಥಿಕ ನೀತಿಯಿಲ್ಲ. ಎಲ್ಲ ದೇಶಗಳ ಆರ್ಥಿಕ ಅಭಿವೃದ್ಧಿಯ ಚಾಲಕ ಮತ್ತು ಪ್ರೇರಕ ಶಕ್ತಿಯೆಂದರೆ ಆಯಾ ದೇಶಗಳ ಸಂಸ್ಕೃತಿ, ಪರಂಪರೆ, ಸಾಮಾಜಿಕ ವ್ಯವಸ್ಥೆ ಮತ್ತು ಸಂಪ್ರದಾಯ.
ಎಂಥ ವಿಡಂಬನೆ ಮತ್ತು ವಿಪರ್ಯಾಸ ಮತ್ತು ದೋಷಯುಕ್ತ ವಿಧಾನ. ವಿಶ್ವಸಂಸ್ಥೆ 50 ವರ್ಷಗಳ ತುಲನಾತ್ಮಕ ಅಧ್ಯಯನವನ್ನು ಬಸವಣ್ಣನವರು 12 ನೇ ಶತಮಾನದಲ್ಲಿಯೇ ಹೇಳಿದ್ದಾರೆಂದರೆ ರೋಮಾಂಚನ, ವಿಸ್ಮಯ ಮತ್ತು ಆಶ್ಚರ್ಯಕರ. ಈ ವಚನ ಆರ್ಥಿಕ ಅಭಿವೃದ್ಧಿಯ ಮೂಲಮಂತ್ರ ಮತ್ತು ಸಿದ್ಧಾಂತ.
ಕಾಂಚನವೆಂಬ ನಾಯ ನಚ್ಚಿ | ನಿಮ್ಮ ಮರೆದೆನಯ್ಯಾ ||
ಕಾಂಚನಕ್ಕೆ ವೇಳೆಯಲ್ಲದೆ | ಲಿಂಗಕ್ಕೆ ವೇಳೆ [ಯಿ] ಲ್ಲ ||
ಹಡಿಕೆಗೆ ಮೆಚ್ಚಿದ | ಸೊಣಗ ಅಮೃತದ ||
ರುಚಿಯ ಬಲ್ಲುದೆ | ಕೂಡಲಸಂಗಮದೇವ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-34 / ವಚನ ಸಂಖ್ಯೆ-314)
ಅರ್ಥಶಾಸ್ತ್ರದಲ್ಲಿ ಸಂಸ್ಕೃತಿಯ ಪಾತ್ರವನ್ನು ಬಸವಣ್ಣನವರು ಕೇವಲ ನಾಲ್ಕೇ ನಾಲ್ಕು ಸಾಲುಗಳಲ್ಲಿ ವಿವರಿಸಿದ್ದಾರೆ, ಕಾಂಚನ ಎಂದರೆ ನಮ್ಮ ಆರ್ಥಿಕ ವ್ಯವಸ್ಥೆ. ನಿಮ್ಮ ಮರೆದೆನಯ್ಯಾ ಎಂದರೆ ನಮ್ಮ ಸಂಸ್ಕೃತಿಯನ್ನು ಮರೆತಂತೆ. ಲಿಂಗ ಎಂದರೆ ನಮ್ಮ ಪರಂಪರೆ. ನಮ್ಮ ಪರಂಪರೆ, ಸಂಸಕೃತಿಯನ್ನು ಮರೆತರೆ ಆರ್ಥಿಕ ಅಭಿವೃದ್ಧಿಯಿಲ್ಲ. ಹೀಗಾಗಿ ಅರ್ಥವ್ಯವಸ್ಥೆಯಲ್ಲಿ ಸಂಸ್ಕೃತಿ, ಪರಂಪರೆ, ಸಾಮಾಜಿಕ ವ್ಯವಸ್ಥೆ ಮತ್ತು ಸಂಪ್ರದಾಯ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.
ಇದು ಹನ್ನರಡನೇ ಶತಮಾನದ ವಚನ ಸಾಹಿತ್ಯ, ಎಂಥವರನ್ನು ಚಕಿತಗೊಳಿಸುವ, ಜ್ಞಾನದ ದೀಪ್ತಿಯನ್ನು ಬೆಳಗಿಸಬಲ್ಲ ಒಂದು ತಾಕತ್ತು, ಒಂದು ಶಕ್ತಿ ಈ ಸಾಹಿತ್ಯ ಪ್ರಕಾರಕ್ಕಿದೆ. ಇಂತಹ ಸುಂದರ ಚಿತ್ರಣಕ್ಕಾಗಿಯೇ ಇನ್ನೂ ಜೀವಂತವಾಗಿದೆ ಈ ಸಾಹಿತ್ಯ ಮತ್ತು ಮುಂದೆಯೂ ಜೀವಂತವಾಗಿರಬಲ್ಲ ಸಾಹಿತ್ಯ.
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : 97413 57132 / 97418 89684
ಈ-ಮೇಲ್ : vijikammar@gmail.com
ಸಹಾಯಕ ಗ್ರಂಥಗಳು :
• ಕಲ್ಯಾಣದ ಶರಣರು : ಡಾ. ವೀರಣ್ಣ ದಂಡೆ.
• ಉತ್ತರ ಕರ್ನಾಟಕದ ಆಯಗಾರರು : ಡಾ, ಎಸ್. ಎಮ್. ವೃಷಭೇಂದ್ರಸ್ವಾಮಿ.
• ಜಾನಪದ ಸಾಹಿತ್ಯ ದರ್ಶನ – ಭಾಗ 7 : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
• ಶೂನ್ಯ ಸಂಪಾದನೆ : ಸಂಪಾದಕರು – ಡಾ.ಬಸವರಾಜ ಸಬರದ
• ಬಸವಯುಗದ ವಚನ ಮಹಾಸಂಪುಟ : ಡಾ. ಎಮ್. ಎಮ್. ಕಲಬುರ್ಗಿ.
• ಕರ್ನಾಟಕ ಆಯಗಾರರ ಸಂಸ್ಕೃತಿ : ಡಾ. ವೀರೇಶ ಬಡಿಗೇರ.
• A History of Village Community in
Western India : A. S. Altekar
• Recent Development in
Agriculture Research : Rahija Pal & Beintema
• Agricultural Statistics at a glance
(2011-12) (http://agricoop.nic.in) : Ministry of Agriculture, GOI.
• ICAR Vision 2020 (2013) Report : Indian Council of Agricultural
Research, New Delhi.
• Fourth Generation R&D, ICAR 2001 : W L Miller & L Moris.
• Agrarian India between the World
Wars : Rostislav Ulyanosky
• Transforming India’s Gold Market : NITI Aayog Report 2018.
• India’s Villages in the 21st Century
Revisits and Revisions : Surinder S Jodhka & Edward Simpson.
• The End of History and the last man : Francis Fukuyama.
• A History of India : James H. Gense
• Global Entrepreneurship Monitor : Global Report 2016/17.
• Impact of Culture on Economic
Development of Cities : J Van Der Bourg & A P Russo,