ಗಣೇಶ ಉತ್ಸವ ಮರು ಚಿಂತನೆ
ಮಾನ್ಯರೇ,
ಭಾರತ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು, ಭಾರತೀಯರನ್ನು ಒಟ್ಟುಗೂಡಿಸಲು ಬಾಲಗಂಗಾಧರ ತಿಲಕರು ಮೊಟ್ಟ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ರೂಪಿಸಿದರು. ಭಕ್ತಿಯ ಮಾರ್ಗದ ಮೂಲಕ ದೇವ ಸ್ವರೂಪದ ವಿಚಾರಗಳನ್ನು ಹೇಳುತ್ತ ಒಗ್ಗಟ್ಟಿನ ಮಂತ್ರ, ದೇಶದ ಸ್ವಾತಂತ್ರ್ಯ ಅನಿವಾರ್ಯತೆಯ ವಿಚಾರಗಳನ್ನು ಬಿತ್ತಿದ್ದರು. ಗಣೇಶೋತ್ಸವದಲ್ಲಿ ಹಿಂದು, ಮುಸ್ಲಿಂ,ಕ್ರೈಸ್ತರೆಲ್ಲರೂ ಸೇರಿಕೊಂಡು ಇದೊಂದು ಕಾರ್ಯ ದೇಶವ್ಯಾಪಿ ಹರಡಿ ಅಖಂಡ ಭಾರತ ಒಗ್ಗೂಡಿ ಸ್ವಾತಂತ್ರ್ಯದ ಕಿಚ್ಚು ಹತ್ತಿತ್ತು.
ದೇಶಕ್ಕೇನು ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ನಂತರ ಸಾರ್ವಜನಿಕ ಗಣೇಶೋತ್ಸವ ಹಿಂದು ಸಂಘಟನೆಯ ರೂಪ ತಾಳಿತು.
ಇವತ್ತು ಹಳ್ಳಿಯ ಗಲ್ಲಿಯಿಂದ ಹಿಡಿದು ದಿಲ್ಲಿವರಗೆ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಆದರೆ ಈ ಮೊದಲು ಗಣೇಶೋತ್ಸವದಲ್ಲಿ ಅನೇಕ ವಿದ್ವಾಂಸರಿಂದ ವಿದ್ವತ್ ಪೂರ್ಣ ಉಪನ್ಯಾಸ, ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ, ಭಜನೆ, ಕೀರ್ತನೆಗಳು ನಡೆದು ಮನಸ್ಸಿಗೆ ಉಲ್ಲಾಸ, ಮಿದುಳಿಗೆ ವಿಚಾರಗಳ ವಿಕಾಸಕ್ಕೆ ದಾರಿ ಮಾಡಿಕೊಡುತಿತ್ತು.
ಆದರೆ ಈಗ ಗಣೇಶೋತ್ಸವ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ವಿಚಾರಗಳ ವಿಕಾಸಕ್ಕೆ ಕಡಿವಾಣ ಬಿದ್ದಿದೆ. ಅದರ ಸ್ಥಾನದಲ್ಲಿ ಅಶ್ಲೀಲ ಸಂಭಾಷಣೆಯ ಮಿಮಿಕ್ರಿಗಳು ಆವರಿಸಿಕೊಂಡಿವೆ.
ಸಂಗೀತ, ಭಜನೆ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟು ಅಶ್ಲೀಲ ಹಾಡುಗಳು, ಡಬ್ಬಲ್ ಮೈನಿಂಗ್ ಡೈಲಾಗಗಳು ವಿಜೃಂಭಿಸಿವೆ. ಅನಗತ್ಯವಾದ ಹೃದಯ ಸ್ತಂಭನವಾಗುವ ಡಿಜೆ ಸೌಂಡ ಬಳಸಿ, ಕುಡಿದು ಕುಣಿಯುತ್ತ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಪ್ರದಾಯ ಹುಟ್ಟಿಕೊಂಡಿರುವುದು ದುರ್ದೈವ.
ಜನರನ್ನು ಜಾಗೃತಿಗೊಳಿಸುವುದಕ್ಕಾಗಿ ಹುಟ್ಟಿಕೊಂಡ ಸಾರ್ವಜನಿಕ ಗಣೇಶೋತ್ಸವ ಇಂದು ಮತ್ತೆ ಮರು ಚಿಂತನೆಗೆ ಒಳಪಡಬೇಕಾಗಿದೆ.
ದ್ವೇಷ ಅಸೂಯೆ ಜನಾಂಗೀಯ ಕಲಹವನ್ನು ತಡೆಯುವಲ್ಲಿ ಸಾಮರಸ್ಯದ ಗಣೇಶೋತ್ಸವ ಬೇಕಾಗಿದೆ. ಪ್ರತಿಯೊಂದು ಕುಟುಂಬವನ್ನು, ಪ್ರತಿಯೊಬ್ಬರ ಮನಸ್ಸನ್ನು ಒಗ್ಗೂಡಿಸುವುದು ಇಂದು ಅತ್ಯಂತ ಅವಶ್ಯಕವಾಗಿದೆ.
ಈ ನಿಟ್ಟಿನಲ್ಲಿ ಗಣೇಶೋತ್ಸವ ನಡೆದರೆ ಚಂದ ಅಂದ. ಅಂತಹ ಗಣೇಶೋತ್ಸವ ವನ್ನು ಎಲ್ಲರೂ ಆಚರಿಸುವಂತಾಗಲಿ.
ಇದೆ ಮೊದಲ ಬಾರಿಗೆ ಮಸ್ಕಿಯ ಯುವ ಮಿತ್ರರು ಗಚ್ಚಿನ ಹಿರೇಮಠದಲ್ಲಿ ಸಾಮರಸ್ಯ ವೇದಿಕೆ ರಚಿಸಿಕೊಂಡು 5 ದಿನಗಳ ವರೆಗೆ ವಿಶೇಷ ಉಪನ್ಯಾಸ, ಶಾಲಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಂತಹ ಚಟುವಟಿಕೆಗಳು ಹೆಚ್ಚಾಗಲಿ.ಮನಸ್ಸುಗಳು ಅರಳಲಿ.
ಸಂಪಾದಕ
ವೀರೇಶ ಸೌದ್ರಿ, ಮಸ್ಕಿ
e-ಸುದ್ದಿ ಅಂತರಜಾಲ ಪತ್ರಿಕೆ
ಅಂತೂ ಬದಲಾವಣೆ ನಾಂದಿ ಹಾಡಿದಂತಿದೆ. ನಿಜವಾಗಲೂ ದೈವತ್ವ ಹೋಗಿದ್ದು ಆಚರಣೆಯು ಹಾದಿ ತಪ್ಪುತ್ತಿದೆ. ಗಣಪತಿ ವಿಸರ್ಜನಾ ಮೆರವಣಿಗೆಯಂತೂ ಸಾಂಪ್ರದಾಯಿಕರು ನೋಡಲೇ ಬಾರದ ಸ್ಥಿತಿಗೆ ಮುಟ್ಟಿವೆ. ದೇವರ ಹಾಡುಗಳಿಗೆ ಕೋಲಾಟ, ನೃತ್ಯ ಪ್ರದರ್ಶಿಸುತ್ತಾ ಸಾಗಿದರೆ ಎಷ್ಟು ಚೆನ್ನ. ಹೆಣ್ಣು ಮಕ್ಕಳಂತೂ ಇದರಿಂದ ದೂರವೇ ಉಳಿದಂತಾಗಿದೆ. ಆರಾಧನೆ, ಜಾತ್ರೆಗಳಲ್ಲಿ ನಡೆದಂತೆ ಡೊಳ್ಳು ಕುಣಿತ, ಸಾಂಪ್ರದಾಯಿಕ ನೃತ್ಯಗಳು ಜರುಗಬೇಕು. ಅದನ್ನು ನೋಡಿ ದೈವಭಕ್ತಿ ಹೆಚ್ಚಾಗಬೇಕು. ಆಗ ಮಾತ್ರ ಗಣೇಶೋತ್ಸವಕ್ಕೆ ಧಾರ್ಮಿಕ ಖಳೆ ಬರುತ್ತದೆ.