ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

 


ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರು. ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ ಮಾರ್ಪಟ್ಟಾಗ, ವಚನಗಳಿಗೆ ಸನಾತನಿಗಳಿಂದ ಆಪತ್ತು ವಿಪತ್ತು ಬಂದೊದಗಿದಾಗ, ವಚನಗಳ ಸಂರಕ್ಷಣೆಗೆ ಮುಂದಾದ ಧೀರ ಗಣಾಚಾರಿ ಮಾಚಿದೇವರು.

ಏಕೆಂದರೆ, ಶರಣರು ತಮ್ಮ ವಿಚಾರಗಳನ್ನು, ಚಿಂತನೆಗಳನ್ನು, ಪ್ರಗತಿಪರ ಆಲೋಚನೆಗಳನ್ನು ವಚನಗಳಲ್ಲಿ ನಿರ್ಭಿಡೆಯಿಂದ ದಾಖಲಿಸಿದ್ದರು. ಇದರಿಂದ ಕೆರಳಿದ್ದ ಸನಾತನಿಗಳು ಅವುಗಳನ್ನು ನಾಶಗೊಳಿಸಲು ಹಾತೊರೆಯುತ್ತಿದ್ದರು. ಮುಂದಿನ ಜನಾಂಗಕ್ಕೆ ಇವನ್ನು ಸುರಕ್ಷಿತವಾಗಿ ತಲುಪಿಸುವ ಅವಶ್ಯಕತೆಯಿತ್ತು.

ಹೀಗಾಗಿ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಅವುಗಳನ್ನು ಒಂದೆಡೆ ಕ್ರೋಡೀಕರಿಸಿ, ಬಿಜ್ಜಳನ ಮಗ ಸೋವಿದೇವ ಹಾಗೂ ಅವನ ಸೈನ್ಯದ ದಾಳಿಯಿಂದ ಸಾಹಿತ್ಯ ಉಳಿಸಲು ಮಡಿವಾಳ ಮಾಚಿದೇವರು ಖಡ್ಗ ಹಿಡಿಯಬೇಕಾಯಿತು, ರಣರಂಗಕ್ಕೆ ಧುಮುಕ ಬೇಕಾಯಿತು.

ಬಸವ ನಿಷ್ಠ ವಚನಕಾರ ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು ಇಂದಿನ ವಿಜಯಪುರ ಜಿಲ್ಲೆಯ ಹಿಪ್ಪರಗಿ(ದೇವರ ಹಿಪ್ಪರಗಿ)ಯಲ್ಲಿ ಫೆಬ್ರವರಿ 1 ರಂದು ಜನ್ಮ ತಾಳಿದರು. ಹುಟ್ಟು ದೇವರ ಹಿಪ್ಪರಗಿಯಲ್ಲಾದರೂ ಅವರ ಕಾರ್ಯಕ್ಷೇತ್ರವು ಕಲ್ಯಾಣವಾಗಿತ್ತು. ಶರಣರ ಬಟ್ಟೆಗಳನ್ನು ಮಡಿ ಮಾಡುವ, ಅಂದರೆ ಶರಣರ ಬಟ್ಟೆಗಳನ್ನು ಒಗೆದು, ಹಸನುಗೊಳಿಸಿ ಶುಭ್ರ ಮಾಡಿ ಅವುಗಳನ್ನು ಅವರವರ ಮನೆಗಳಿಗೆ ತಲುಪಿಸುವ ಪಾವನ ಕಾಯಕವನ್ನು ಮಾಚಿದೇವರು ಕೈಗೊಂಡಿದ್ದರು.

ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ಹೋರಾಟದಲ್ಲಿ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ ಮುನ್ನಡೆಯುತ್ತಾರೆ. ಶರಣರ ಒಂದು ತಂಡ ತೊರಗಲ್ಲ, ಮುನವಳ್ಳಿ, ಸವದತ್ತಿ, ಧಾರವಾಡ ಮಾರ್ಗದಲ್ಲಿ ಉಳವಿಗೆ ಹೋಯಿತು. ಇನ್ನೊಂದು ತಂಡದ ಶರಣರು ಉಣಕಲ್, ಹುಬ್ಬಳ್ಳಿ, ಎಣ್ಣೆ ಹೊಳೆ, ನುಲಿಗನೂರು ಮುಂತಾದ ಪ್ರದೇಶಗಳಲ್ಲಿ ಚದುರಿದರು.

ಮಾದನ ಹಿಪ್ಪರಗಿ, ಬೆಳಗಾವಿ, ಕಾದ್ರೊಳ್ಳಿ, ಹುಣಶೀಕಟ್ಟಿ, ಮೂಗಬಸವ, ಮುರಗೋಡ, ತಲ್ಲೂರು, ಕಾರಿಮನಿ, ಕಟಕೋಳ, ಚಂದರಗಿ ಮಾರ್ಗವಾಗಿ ಬಂದು ಗೊಡಚಿಯಲ್ಲಿ ಮಾಚಿದೇವರು ಐಕ್ಯರಾಗುತ್ತಾರೆ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿರುವ ಮುದಿ ವೀರಣ್ಣನ ಗುಡಿಯೇ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಇಲ್ಲಿ ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ ಮೇಲೆ ಇಷ್ಟಲಿಂಗದ ಕರಡಗಿ ಇದೆ.

ಮಡಿವಾಳ ಮಾಚಿದೇವನನ್ನು ಪುರಾಣಗಳಲ್ಲಿ ವೀರಭದ್ರನ ಅವತಾರವೆಂದು ಬಿಂಬಿಸುತ್ತಾರೆ. ಹೀಗಾಗಿ ಜಾನಪದ ಸಾಹಿತಿಗಳು, ಅನೇಕ ಸಂಶೋಧಕರು, ತಜ್ಞರು ಮಡಿವಾಳ ಮಾಚಿದೇವರ ಐಕ್ಯಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬಂದಿದ್ದಾರೆ. ಮಡಿವಾಳ ಮಾಚಿದೇವರ ಶಿಲ್ಪ ಕಲೆಯ ಮೂರ್ತಿಗಳನ್ನು ಗದಗ, ಮುಳಗುಂದ, ಶಿಂಗಟಾಲೂರು ಮುಂತಾದ ಪ್ರದೇಶಗಳಲ್ಲಿ ಕಾಣುತ್ತೇವೆ.

ವೀರಭದ್ರ ದೇವರ ಗುಗ್ಗಳದಲ್ಲಿಯೂ ಅಂಬಿಗರ ಚೌಡಯ್ಯನವರ ವಚನ, ಮಡಿವಾಳ ಮಾಚಿದೇವರ ವಚನ, ಅಲ್ಲಮರ ಬೆಡಗಿನ ವಚನಗಳು ಹೇಳಲ್ಪಡುತ್ತವೆ. ಗುಗ್ಗಳದಲ್ಲಿನ ಪುರವಂತರ ಉಡುಪು, ಅಲ್ಲಿರುವ ಸಂಬಾಳ ವಾದ್ಯಗಳು ಕಲ್ಯಾಣದ ಚಾಲುಕ್ಯ ಕಳಚೂರ್ಯರ ಸೈನಿಕ ಸೇನೆಯ ವಾದ್ಯ ಪೋಷಾಕುಗಳಾಗಿವೆ.

ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ಮಾಚಿದೇವರು ತಮ್ಮ ಪರಾಕ್ರಮದಿಂದ ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆಗೈದಿದ್ದಾರೆ. ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ, ದಿಟ್ಟ ಗಣಾಚಾರಿ.

ಶರಣರಿಗೆಲ್ಲ ಪ್ರಿಯವಾಗಿದ್ದ ಶರಣ ಮಡಿವಾಳ ಮಾಚಿದೇವ

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ ಮತ್ತು ಮರುಳ ಶಂಕರದೇವರ ವಚನಗಳಲ್ಲಿ ಮಾಚಿದೇವರ ಪ್ರಸ್ತಾಪ ಬರುತ್ತದೆ. ಹೀಗೆ ಅವರೆಲ್ಲರ ಪ್ರೀತಿಗೆ ಪಾತ್ರರಾಗಿ ಅವರಿಂದ ಸ್ತುತಿಗೆ ಒಳಗಾಗುತ್ತಾರೆ ಮಡಿವಾಳ ಮಾಚಿದೇವರು. ಅನೇಕ ಲಿಂಗಾಯತ ಕೃತಿಗಳಲ್ಲಿ ಮಡಿವಾಳ ಮಾಚಿದೇವರ ಶೌರ್ಯವನ್ನು ಕಥೆ ಹಾಗೂ ರೂಪಕಗಳಲ್ಲಿ ಚಿತ್ರಿಸಲಾಗಿದೆ. ಜನಪದಿಗರಂತೂ ಮಾಚಿದೇವರ ನಿಷ್ಠೆ, ಭಕ್ತಿ, ಬದ್ಧತೆಯನ್ನು ಕೊಂಡಾಡಿದ್ದಾರೆ.

ಮಡಿವಾಳ ಮಾಚಿದೇವರ ದೀಕ್ಷಾ ಗುರು ಮಲ್ಲಿಕಾರ್ಜುನ ಹಾಗೂ ಪೂರ್ವಾಶ್ರಮದ ದೈವವು ಕಲ್ಲಿನಾಥ. ಹೀಗಾಗಿ ಇವರ ವಚನಗಳಲ್ಲಿ ಕಲಿದೇವರ ದೇವಾ ಎಂಬ ಅಂಕಿತವನ್ನು ಕಾಣುತ್ತೇವೆ. ಮಡಿವಾಳ ಮಾಚಿದೇವರ ಒಟ್ಟು 146 ವಚನಗಳು ದೊರೆತಿವೆ. ಅವರ ವಚನಗಳಲ್ಲಿ ನಿಷ್ಠುರತೆ, ಗಣಾಚಾರ, ಕಲಿತನ, ಸಾಮಾಜಿಕ ಕಳಕಳಿ, ವಿಡಂಬನೆ ಮತ್ತು ಟೀಕೆಗಳನ್ನು ಕಾಣುತ್ತೇವೆ.

ಮಹಾಜ್ಞಾನಿ ಅಲ್ಲಮರು ತಮ್ಮ ವ್ಯಕ್ತಿತ್ವದಲ್ಲಿ ಮಡಿವಾಳ ಮಾಚಿದೇವರ ಸ್ಥಾನವನ್ನು ಹೀಗೆ ಗುರುತಿಸುತ್ತಾರೆ:

ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ.
ಎನ್ನ ಮನವ ಚನ್ನಬಸವಣ್ಣನಳವಡಿಸಿಕೊಂಡ.
ಎನ್ನ ಭಾವವ ಮಡಿವಾಳಯ್ಯನಳವಡಿಸಿಕೊಂಡ-
ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ
ಗುಹೇಶ್ವರಾ, ನಿಮ್ಮ ಶರಣರೆಂಬ ತ್ರಿಮೂರ್ತಿಗಳಿಗೆ
ನಮೋ ನಮೋ ಎನುತಿರ್ದೆನು.

(ಕಾಯ, ಮನಸ್ಸು ಮತ್ತು ಭಾವ (ಆತ್ಮ) ಇವು ಚೈತನ್ಯದ ಸಂಯೋಜನೆ. ಬಸವಣ್ಣನವರು ಅಲ್ಲಮರ ಕಾಯವನ್ನು ಅಳವಡಿಸಿಕೊಂಡರು. ಮನವನ್ನು ಚೆನ್ನಬಸವಣ್ಣ ಅಳವಡಿಸಿಕೊಂಡರು. ಭಾವವನ್ನು ಮಡಿವಾಳಯ್ಯನವರು ಅಳವಡಿಸಿಕೊಂಡರು. ಹೀಗಾಗಿ ಗುಹೇಶ್ವರ ಲಿಂಗದಲ್ಲಿ ನಾನು ಬಯಲಾದೆನು ಎಂದು ಅಲ್ಲಮರು ತಮ್ಮ ನಿರಾಳತೆಯನ್ನು ವ್ಯಕ್ತಪಡಿಸುತ್ತಾರೆ.)
ಬಸವಣ್ಣನವರು ಮಡಿವಾಳ ಮಾಚಿದೇವರ ಕರ್ತೃತ್ವದ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದರೆನ್ನುವುದು ಈ ಕೆಳಗಿನ ವಚನದಲ್ಲಿ ವ್ಯಕ್ತವಾಗುತ್ತದೆ:

ಎನ್ನ ಭಕ್ತಿಯ ಶಕ್ತಿಯು ನೀನೆ,
ಎನ್ನ ಯುಕ್ತಿಯ ಶಕ್ತಿಯು ನೀನೆ,
ಎನ್ನ ಮುಕ್ತಿಯ ಶಕ್ತಿಯು ನೀನೆ.
ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು
ತಳವೆಳಗಾದ ಸ್ವಯಜ್ಞಾನಿ
ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ
ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ

ವೈರಾಗ್ಯ ಮೂರ್ತಿ ಅಕ್ಕಮಹಾದೇವಿ ಕಲ್ಯಾಣಕ್ಕೆ ಬಂದು ಎಲ್ಲ ಶರಣರ ಭಾವಗಳಲ್ಲಿ ಬೆರೆತು ಮಹಾ ಮನೆಯ ಮಗಳಾಗಿ, ತಾನು ಕಂಡ ಶರಣರ ದಿವ್ಯ ವ್ಯಕ್ತಿತ್ವವನ್ನು ಹರುಷದಿಂದ ಕೊಂಡಾಡಿದ್ದಾಳೆ:

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,
ಸಿದ್ಧರಾಮಯ್ಯನೆ ಜಂಗಮ,
ಮಡಿವಾಳಯ್ಯನೆ ಜಂಗಮ,
ಚೆನ್ನಬಸವಣ್ಣನೆನ್ನ ಪರಮಾರಾಧ್ಯರು.
ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.

ಚೆನ್ನಬಸವಣ್ಣ ಇವರೆಲ್ಲರಿಗಿಂತ ಅತ್ಯಂತ ಭಿನ್ನವಾಗಿ ಬಸವಣ್ಣ, ಅಲ್ಲಮ ಮತ್ತು ಮಡಿವಾಳರನ್ನು ತಮ್ಮಲ್ಲಿ ಅಳವಡಿಸಿಕೊಂಡು ಹೇಗೆ ಬದುಕಿದೆ ಎಂಬುದನ್ನು ಹೀಗೆ ಹೇಳಿದ್ದಾರೆ:

ಎನ್ನಂತರಂಗವೆ ಬಸವಣ್ಣ, ಬಹಿರಂಗವೆ ಮಡಿವಾಳಯ್ಯ
ಈ ಉಭಯದ ಸಂಗವೆ ಪ್ರಭುದೇವರು!
ಇಂತೀ ಮೂವರ ಕರುಣದ ಕಂದನಾಗಿ ಬದುಕಿದೆ ಕಾಣಾ
ಕೂಡಲಚೆನ್ನಸಂಗಮದೇವಾ.

ಪುರಾಣದಲ್ಲಿ ಮಾಚಿದೇವ

ಪುರಾಣವೊಂದರಲ್ಲಿ ಬರುವ ಮಾಚಿದೇವರ ಕಾಯಕ ನಿಷ್ಠೆಯ ಕಥೆ ಹೀಗಿದೆ. ಇವರ ಕಾಯಕವನ್ನು ಕಂಡು ಬೆರಗಾಗಿ ಆಸ್ಥಾನದ ಅನೇಕ ಮಂತ್ರಿಗಳು ದೊರೆ ಬಿಜ್ಜಳನ ಬಳಿ ರಾಣಿಯರ ಬಟ್ಟೆಗಳನ್ನು ಮಡಿ ಮಾಡಿಸಲು ಸಲಹೆ ನೀಡುತ್ತಾರೆ. ರಾಜ ಬಿಜ್ಜಳನು ಮಡಿವಾಳ ಮಾಚಿದೇವನಿಗೆ ಆಜ್ಞೆ ಹೊರಡಿಸಿ ಬಿಜ್ಜಳನ ಮತ್ತು ಅರಸು ಮನೆತನದ ಬಟ್ಟೆಗಳನ್ನು ಮಡಿ ಮಾಡಲು ಸೂಚಿಸುತ್ತಾನೆ.

ಇದಕ್ಕೊಪ್ಪದ ಮಾಚಿದೇವರು ರಾಜನ ಆಜ್ಞೆಯನ್ನು ತಿರಸ್ಕರಿಸುತ್ತಾರೆ. ಇದರಿಂದ ಕುಪಿತಗೊಂಡ ರಾಜಭಟರು ರಾಜ ಬಿಜ್ಜಳನಿಗೆ ಮಡಿವಾಳ ಮಾಚಿದೇವರ ನಿರಾಕರಣೆಯನ್ನು ಬಿತ್ತರಿಸುತ್ತಾರೆ. ಆತನಿಗೆ ಎಂಥ ಸೊಕ್ಕಿರಬೇಡ ಎಂದು ದೊರೆ ಬಿಜ್ಜಳ ಕೆರಳುತ್ತಾನೆ. ಮಾಚಿದೇವರನ್ನು ಕರೆತರಲು ಆನೆಯೊಂದಿಗೆ ಸೇನೆಯನ್ನು ಕಳಿಸಿಕೊಡುತ್ತಾನೆ. ಆ ಸೈನ್ಯವು ಮಾಚಿದೇವರ ಮನೆಗೆ ಬಂದು ರಾಜಾಜ್ಞೆ ಪಾಲಿಸಲು ಸೂಚಿಸುತ್ತದೆ.

ಕೋಪಗೊಂಡ ಮಾಚಿದೇವರು ತಾನು ಭಕ್ತರ ಬಟ್ಟೆ ವಸ್ತ್ರ ಮಡಿ ಮಾಡುವೆನೆ ಹೊರತು ಭವಿಗಳ ಬಟ್ಟೆಯನ್ನಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಸೈನಿಕರು ಮಾಚಿದೇವರನ್ನು ಬಂಧಿಸಿ ಆನೆಗೆ ಕಟ್ಟಿ ಎಳೆದುಕೊಂಡು ಹೋಗಲು ಮುಂದಾದಾಗ, ಉಗ್ರರಾದ ಅವರು, ತಮ್ಮ ವೀರಗತ್ತಿಯಿಂದ ಆನೆಯನ್ನು ಕೊಂದು ಬಿಡುತ್ತಾರೆ.

ಸೈನಿಕರು ಮಾಚಿದೇವರ ಕಾರ್ಯವನ್ನು ಬಿಜ್ಜಳನಿಗೆ ಹೇಳುತ್ತಾರೆ. ಬಿಜ್ಜಳನು ಬಸವಣ್ಣನವರನ್ನು ಕರೆದುಕೊಂಡು ಮಾಚಿದೇವರ ಮನೆಗೆ ಬಂದು ಕಾರಣ ಕೇಳುತ್ತಾನೆ. ಆಗ ಮಾಚಿದೇವರು ಸತ್ಯ ಶುದ್ಧ ಕಾಯಕ ಮಾಡುವ ಶರಣರ ಬಟ್ಟೆಯನ್ನು ಮಾತ್ರ ತಾವು ಮಡಿ ಮಾಡುವುದಾಗಿ ಹೇಳುತ್ತಾರೆ. ಇದು ವರ್ಗ ಸಂಘರ್ಷದ ಮೊದಲ ಕ್ರಾಂತಿಯ ಕಹಳೆ ಎಂದರೆ ತಪ್ಪಾಗಲಾರದು. ಆಗ ಬಿಜ್ಜಳ ಮಹಾರಾಜನು ಮಡಿವಾಳ ಮಾಚಿದೇವರಲ್ಲಿ ಕ್ಷಮೆ ಕೇಳುತ್ತಾನೆ.

ಬಸವಪ್ರಿಯ ಮಾಚಿದೇವ
ಮಾಚಿದೇವರಿಗೆ ಲಿಂಗ ತತ್ವದ ರೂವಾರಿಗಳಾದ ಬಸವಣ್ಣನವರೆಂದರೆ ಅತ್ಯಂತ ಪ್ರೀತಿಯ ಮೌಲಿಕ ವ್ಯಕ್ತಿ. ಅವರನ್ನು ತಮ್ಮ ಅನೇಕ ವಚನಗಳಲ್ಲಿ ಸ್ಮರಿಸಿದ್ದಾರೆ:

ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಿಹಿತವು ಬಸವಣ್ಣನಿಂದ.
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ ಕಲಿದೇವರದೇವಾ

ಡಾ ಶಶಿಕಾಂತ ಪಟ್ಟಣ ಪುಣೆ

Don`t copy text!