ಚೆಲುವ ಕನ್ನಡ ನಾಡಿನ
ಉದಯದ ಕನಸು ಕಂಡಿದ್ದ
ಹುಯಿಲಗೋಳ ನಾರಾಯಣರಾಯರು
(ಇಂದು ಜನ್ಮದಿನ)
ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು
ಈ ಹಾಡನ್ನು ಕೇಳದ, ಮೆಚ್ಚದ ಕನ್ನಡಿಗರು ಯಾರು? ಈ ಹಾಡು ಕನ್ನಡ ನೆಲದ ನಾಡಗೀತೆ ಎಂದು ಗಾಂಧೀಜಿಯವರಿಂದಲೇ ಪ್ರಶಂಸೆಗೊಳಗಾದದ್ದು ೧೯೨೪ ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ. ಗಾಂಧೀಜಿಯವರು ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರಾದದ್ದೂ ಅದೇ ವರ್ಷ.
ಉದಯವಾಗಲಿ ಹಾಡನ್ನು ಮೊದಲ ಸಲ ಹಾಡಿದ ಸಂದರ್ಭ ಅದು. ಹಾಡಿದ ಬಾಲಕಿಯರಲ್ಲಿ ೧೨ ವರ್ಷ ವಯಸ್ಸಿನ ಗಂಗೂಬಾಯಿ ಹಾನಗಲ್ ಅವರೂ ಇದ್ದರೆನ್ನುವದು ವಿಶೇಷ.
ನಾರಾಯಣರಾಯರು ಜನಿಸಿದ್ದು ಗದಗ ಜಿಲ್ಲೆಯ ಹುಯಿಲಗೋಳದಲ್ಲಿ ೧೮೮೪ ರ ಅಕ್ಟೋಬರ್ ೪ ರಂದು. ಮೊದಲು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ನಂತರ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ ನಾರಾಯಣ ರಾಯರು ಮುಂಬಯಿ ವಿ. ವಿ. ದಿಂದ ಸಂಸ್ಕೃತ ಇಂಗ್ಲಿಷ ಭಾಷೆಗಳಲ್ಲಿ ಪದವಿ ಪಡೆದು ಧಾರವಾಡ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ನಂತರ ಎಲ್. ಎಲ್.ಬಿ ಪಾಸುಮಾಡಿ ಗದಗಿನಲ್ಲಿ ವಕೀಲಿಕೆ ನಡೆಸಿದರು.
ಅವರ ಮೊದಲ ಕವನವೇ ಕನ್ನಡಮ್ಮನ ಸ್ಥಿತಿ ಎನ್ನುವದಾಗಿತ್ತು. ಮುಖ್ಯವಾಗಿ ಅವರು ನಾಟಕಕಾರರು. ಅನೇಕ ನಾಟಕಗಳನ್ನು ಬರೆದರು. ಹವ್ಯಾಸಿ ಕಲಾವಿದರ ತಂಡ ಕಟ್ಟಿ ನಾಟಕಗಳನ್ನಾಡಿದರು. ವಜ್ರಮುಕುಟ, ಪ್ರೇಮಾರ್ಜುನ, ಕನಕವಿಲಾಸ, ಅಜ್ಞಾತವಾಸ, ಪ್ರೇಮವಿಜಯ, ಭರತ ಸಂಧಾನ, ಉತ್ಋ ಗೋಗ್ರಹಣ, ವಿದ್ಯಾರಣ್ಯ , ಸ್ತ್ರೀ ಧರ್ಮ ರಹಸ್ಯ, ಪತಿತೋದ್ಧಾರ, ಶಿಕ್ಷಣ ಸಂಭ್ರಮ ಮೊದಲಾದವು ಅವರ ಕೃತಿಗಳು. ೧೦೦ ದೇವರ ನಾಮಗಳನ್ನೊಳಗೊಂಡ ಪುಸ್ತಕವೂ ಪ್ರಕಟವಾಗಿದೆ. ಬಹಳಷ್ಟು ಅಪ್ರಕಟಿತವಿವೆ. ಅವರಿಗೆ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಮತ್ತು ಬಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರಕಿದೆ.
೧೯೨೪ ರ ಅಧಿವೇಶನದಲ್ಲಿ ಹಾಡಲ್ಪಟ್ಟ ಉದಯವಾಗಲಿ ಹಾಡು ಮುಂದೆ ೧೯೫೬ ರಲ್ಲಿ ಕರ್ನಾಟಕ ರಾಜ್ಯ ಉದಯವಾದ ಸಂದರ್ಭದಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರು ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭದಲ್ಲಿ ಪಿ. ಕಾಳಿಂಗರಾವ್ ಅವರಿಂದ ಹಾಡಲ್ಪಟ್ಟಾಗ ಮೆಚ್ಚಿಕೊಂಡ ಅಧ್ಯಕ್ಷರು ನಾರಾಯಣರಾಯರಿಗೆ ೧ ಸಾವಿರ ರೂ. ಮತ್ತು ಕಾಳಿಂಗರಾಯರಿಗೆ ೫೦೦ ರೂ. ಕೊಟ್ಟು ಗೌರವಿಸಿದರು.
ಉತ್ತರ ಕರ್ನಾಟಕದಾದ್ಯಂತ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಅತ್ಯಂತ ಜನಪ್ರಿಯವಾದದ್ದು. ಆ ಹಾಡಿನ ಮೂಲಕವೇ ಅವರು ಕನ್ನಡಿಗರೆಂದೂ ಮರೆಯಲಾಗದ ವ್ಯಕ್ತಿಯೆನಿಸಿದ್ದಾರೆ
– ಎಲ್. ಎಸ್. ಶಾಸ್ತ್ರಿ