ಅತ್ತರಿನ ಅಮಲಿನಲಿ

ಪುಸ್ತಕ ಪರಿಚಯ
ಕೃತಿ ಹೆಸರು……….. *ಅತ್ತರಿನ ಭರಣಿ* (ಗಜಲ್ ಸಂಕಲನ)

ಲೇಖಕರು……… ಶ್ರೀ ಮತಿ.ಜ್ಯೋತಿ ಬಿ ದೇವಣಗಾವ

ಪ್ರಕಾಶಕರು……. ಮಹಾಕವಿ ಲಕ್ಷೀಶ ಪ್ರಕಾಶನ,ಕನ್ನಡ ಸಾಹಿತ್ಯ ಸಂಘ ಸುರುಪೂರ
ಪ್ರಥಮ ಮುದ್ರಣ……ಎಪ್ರಿಲ್ ೨೦೨೨
ಬೆಲೆ ……….. ೨೦೦₹
ಪುಸ್ತಕ ಗಳಿಗೆ ಸಂಪಕಿ೯ಸುವ ಮೊಬಾಯಿಲ್……೯೯೬೪೮೨೮೩೭೩

ಅತ್ತರಿನ ಅಮಲಿನಲಿ

ಜ್ಯೋತಿ ಬಿ ದೇವಣಗಾವ ಅವರ ಅತ್ತರಿನ ಭರಣಿ ಗಜಲ್ ಸಂಕಲನದ ಶೀಷಿ೯ಕೆಯು ನನ್ನನ್ನು ಬಾಲ್ಯದ ಕಡೆ ಕೊಂಡ್ಯೊಯಿತು.ನಾನು ಹುಟ್ಟಿ ಬೆಳೆದಿದ್ದು ಕಲ್ಯಾಣ ಕನಾ೯ಟಕ( ಹೈದ್ರಾಬಾದ್ ಕನಾ೯ಟಕ)ದ ರಾಯಚೂರುದಲ್ಲಿ ಹುಟ್ಟಿ ಗುಲಬರ್ಗಾ ದಲ್ಲಿ ಬೆಳೆದವಳು.

ನಮ್ಮಲ್ಲಿ ಕೆಲವೊಂದು ಸಂಪ್ರದಾಯಗಳನ್ನು ನಾವು ನವಾಬಿ ಪದ್ದತಿಯಂತೆ ಮಾಡುತ್ತಾ ಬಂದಿದ್ದೇವೆ. ಪ್ರತಿಯೊಬ್ಬರ ಮನೆಯಲ್ಲಿ ಸಾಧಾರಣವಾಗಿ ಆಗ ಅತ್ತರಿನ ಭರಣಿ ಗಳು ಇರುತ್ತಿದ್ದವು.

ಹಬ್ಬ ಹರಿ ದಿನಗಳಲ್ಲಿ ಮದುವೆ ಮುಂಜುವಿಗಳಲ್ಲಿ ಹೊಸ ಬಟ್ಟೆ ಹಾಕಿ ಕೊಂಡಾಗ ಎಲ್ಲರೂ ಅತ್ತರ ಹಚ್ಚಿ ಕೊಳ್ಳುವುದು ಸಾಮಾನ್ಯವಾಗಿತ್ತು. ಈಗಿನಂತೆ ರಸಾಯನಿಕ ಸುಗಂಧ ದ್ರವ್ಯವಾಗಿರದೆ ನೈಸರ್ಗಿಕ ವಾದ ಕೇದಿಗೆ,ಮಲ್ಲಿಗೆ,ಸಂಪಿಗೆ, ಗುಲಾಬಿ ಹೂಗಳ ಸುಗಂಧ ದ್ರವ್ಯಗಳನ್ನು ಬಳಿಸಲಾಗುತ್ತಿತ್ತು.

ಈ ದ್ರವ್ಯವನ್ನು ಒಂದು ಗಾಜಿನ ಸಣ್ಣ ಹೂಜಿ ಆಕಾರದ ಗಾಜನ ಬಾಟಲಿಗಳಲ್ಲಿ ಮುಚ್ಚಿ ಇಟ್ಟಿರುತ್ತಿದ್ದರು. ಇವುಗಳಿಗೆ ಅತ್ತರಿನ ಭರಣಿ ಎಂದು ಕರೆಯುತ್ತಿದ್ದರು. ದಸರಾ ಸಂಕ್ರಾಂತಿ ಹಬ್ಬಗಳಲ್ಲಿ ಮನೆ ಮನೆಗೆ ಹೋಗಿ ಬನ್ನಿ,ಎಳ್ಳು ಬೆಲ್ಲ ಕೊಟ್ಟು ಚಿಕ್ಕವರು ದೊಡ್ಡವರಿಗೆ ನಮಸ್ಕರಿಸಿದಾಗ ಅವರು ಆಶೀವಾ೯ದ ಮಾಡಿ ನಮ್ಮ ಮುಂಗೈಗೆ ಅತ್ತರ ಹಚ್ಚಿ ತಿನ್ನಲು ಸಿಹಿ ಕೊಡುತ್ತಿದ್ದರು.ಈಗ ಆ ಸಂಪ್ರದಾಯ ಕಡಿಮೆ ಆಗಿದೆಂದು ಅನಿಸುತಿದೆ , ಯಾರೂ ಯಾರ ಮನೆಗೆ ಹೋಗಿ ಹಬ್ಬ ಸಂಭ್ರಮಿಸುವುದು ಮಾಯವಾಗಿದೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು ಜ್ಯೋತಿ ಅವರ ಅತ್ತರಿನ ಭರಣಿ ಶೀಷಿ೯ಕೆಯು.

ಅಪ್ಪಟ ಗೃಹಣಿಯಾದ ಜ್ಯೋತಿ ದೇವಣಗಾವ ಅವರು ಚಿಕ್ಕಂದಿನಿಂದಲೂ ಓದುವ ಗೀಳ ಹಚ್ಚಿ ಕೊಂಡವರು. ಬದುಕು ಮತ್ತು ಸಾಹಿತ್ಯವನ್ನು ಪ್ರೀತಿಸುತ್ತಾ ತಮ್ಮ ಅನುಭವಗಳನ್ನು ಸಾಹಿತ್ಯದಲ್ಲಿ ಸೆರೆಹಿಡಿಯುತ್ತಾ ಬಂದಿದ್ದಾರೆ. ಕವಿತೆ ,ಹನಿಗವನ, ವಚನ, ವಿಮಶೆ೯ಗಳನ್ನು ಮಾಡುತ್ತಾ ಈಗಾಗಲೇ “ವಿಹಗ ವಿಹಾರ” ಎಂಬ ವಿಮಶಾ೯ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪಿ೯ ಸಿದ್ದಾರೆ.ವಾಟ್ಸಪ್ ಗಳಲ್ಲಿ ,ಆನ್ ಲೈನ್ ಪತ್ರಿಕೆಗಳಲ್ಲಿ, ಮತ್ತು ಆಫ್ ಲೈನ್ ಪತ್ರಿಕೆಗಳಲ್ಲಿ ಇವರ ಗಜಲ್ ಗಳು ಪ್ರಕಟವಾಗಿದ್ದು ಓದುಗರ ಮೆಚ್ಚುಗೆಯನ್ನು ಪಡೆದಿವೆ.ಗಜಲ್ ಉದು೯ ಭಾಷೆಯ ಕಾವ್ಯದ ರಾಣಿಯಾಗಿದ್ದು ಇಂದು ಕನ್ನಡ ನೆಲದಲ್ಲಿಯೂ ಅನೇಕ ಉತ್ಸಾಹಿ ಕವಿಗಳು ಗಜಲ್ ಗಳನ್ನು ಬರೆಯುತ್ತಾ ಕನ್ನಡ ಗಜಲ್ ಸಾಹಿತ್ಯವನ್ನು ಸಮೃದ್ಧ ಗೊಳಿಸುತ್ತಿದ್ದಾರೆ.

ಈಗ ಜ್ಯೋತಿ ದೇವಣಗಾವ ಅವರ ಅತ್ತರಿನ ಭರಣಿ ಎಂಬ ಗಜಲ್ ಸಂಕಲನವನ್ನು ಮಹಾಕವಿ ಲಕ್ಷೀಶ ಪ್ರಕಾಶನ ಕನ್ನಡ ಸಾಹಿತ್ಯ ಸಂಘ ಸುರುಪುರ ಇವರು ಪ್ರಕಟಿಸಿ ಲೋಕಾರ್ಪಣೆ ಮಾಡಿ ಕನ್ನಡಾಂಬೆಯ ಉಡಿ ತುಂಬಿದ್ದಾರೆ.

ಜ್ಯೋತಿ ದೇವಣಗಾವ ಅವರ ಅತ್ತರಿನ ಭರಣಿ ಗಜಲ್ ಸಂಕಲನದಲ್ಲಿರುವ ೮೦ ಗಜಲ್ ಗಳಿಂದ ವಿವಿಧ ಹೂಗಳ ಸುಗಂಧ ನಮ್ಮನ್ನು ಮತ್ತೇರಿಸುತ್ತಾ ಚಿಂತನೆಗೆ ಹೆಚ್ಚುತ್ತವೆ . ಗಜಲ್ ಗಳಲ್ಲಿ ಇರಬೇಕಾದ ಪ್ರೀತಿ, ಪ್ರೇಮ, ವಿರಹ, ಗಳಲ್ಲದೆ ಸಮಾಜಿಕ ಕಳಕಳಿ ,ಮಹಿಳಾ ಸಂವೇದನೆ ,ಧರ್ಮ, ಮೂಢನಂಬಿಕೆ, ಆಧ್ಯಾತ್ಮಿಕ ಚಿಂತನೆ,ಹೀಗೆ ಹಲವು ವಿಷಯಗಳ ಮೇಲೆ ಜ್ಯೋತಿ ಅವರು ಗಜಲ್ ರಚಿಸಿದ್ದಾರೆ.

ಅವನು ಲೌಕಿಕಕೆ ಎಳೆಯಲು ಪ್ರಯತ್ನಿಸುವನು ಅನುಕ್ಷಣವು
ಅವಳು ಅಲೌಕಿಕದೆಡೆ ಸಾಗಿಹಳು ಬದುಕಿನ ಮೋಹವಿಲ್ಲದೆ (ಗಜಲ್ ೧)

ವಿರಾಗಿಣಿಯಾದ ಅಕ್ಕಮಹಾದೇವಿಯ ಬದುಕಿನ ಹಾದಿ ಸದಾ ಅಲೌಕಿಕದೆಡೆ,ಮಲ್ಲಿಕಾರ್ಜುನ ತನ್ನ ಪತಿ ಎಂದು ನಂಬಿ ನಡೆದವಳು,ಆದರೆ ಕೌಶಿಕ ಮಹಾ ರಾಜ ಅವಳ ಚೆಲುವಿಗೆ ಮೋಹ ಕೊಂಡವ, ಅವಳನ್ನು ಲೌಕಿಕ ಬದುಕಿನಲ್ಲಿ ಬಂದಿಸಲು ಬಯಸಿದವ ,ಆದರೆ ಅಕ್ಕ ಲೌಕಿಕ ಬದುಕು ಮತ್ತು ಕೌಶಿಕ ರಾಜನನ್ನು ಧಿಕ್ಕರಿಸಿ ಅಲೌಕಿಕ ಬದುಕು ಬದುಕಲು ಬಯಸಿ ಜಗದ ಕಟ್ಟು ಪಾಡುಗಳನ್ನು ಮೀರಿ ಬಾಳಿದವಳು,ಹೆಣ್ಣಿಗೆ ತನ್ನ ಇಚ್ಛೆಯಂತೆ ಬದುಕಲು ಹಕ್ಕಿದೆಂದು ತೋರಿಸಿಕೊಟ್ಟವಳು. ಅಕ್ಕನ ವಿಚಾರಗಳನ್ನು ಆಕೆ ಮನದ ಆಸೆಗಳನ್ನು ಗಜಲ್ ದಲ್ಲಿ ಕವಿಯತ್ರಿ ಸುಂದರವಾಗಿ ನಿವೇದಿಸಿದ್ದಾರೆ.

ಅವಳಿರದೆ ಬದುಕೇ ಇಲ್ಲ ಮನುಕುಲಕೆ ಬಾಳಿಲ್ಲ ಜೀವಜಾಲಕೆ
ಇರುವಿಕೆಯ ಜರೂರಿ ತಿಳಿಯ ಬೇಕಿತ್ತು ತಿಳಿಯಲಾರಿರಿ ನೀವು ( ಗಜಲ್೧೦)

ಇದು ಒಂದು ಮಹಿಳಾ ಸಂವೇದನೆ ಗಜಲ್ ಆಗಿದ್ದು ಹೆಣ್ಣಿನ ಮಹತ್ವವನ್ನು ಸಾರುತ್ತದೆ.ಹೆಣ್ಣು ಸಮಾಜದ ಕಣ್ಣು ,ಅವಳಿಲ್ಲದೆ ಮನುಕುಲಕೆ ಬದುಕಿಲ್ಲ ವೆಂದು ಎಲ್ಲರಿಗೂ ಗೊತ್ತು,ಆದರೂ ಅವಳ ಇರುವಿಕೆ ,ಅವಳ ಅವಶ್ಯಕತೆ, ಮಹತ್ವ ತಿಳಿಯಲಾರದೆ ಅವಳನ್ನು ಕಡೆಗಣಿಸುವ ಸಮಾಜದ ರೀತಿ ನೀತಿಗಳಿಗೆ ಕವಿಯತ್ರಿ ಪ್ರಶ್ನೆ ಮಾಡುತ್ತಾಳೆ. ಈ ಗಜಲ್ದಲ್ಲಿ ” ನೀವು” ಎಂಬ ರದೀಫ್ ದಿಂದ ಪುರುಷ ಸಮಾಜಕ್ಕೆ ಪ್ರಶ್ನೆ ಮಾಡುತ್ತಾ ಹೋಗುತ್ತಾಳೆ ಕವಿಯತ್ರಿ.

ನಂಬಿದವರ ದ್ರೋಹವೆ ಘಾಸಿ ಮಾಡಿತು ನೋಡು
ನೆಚ್ಚಿದವರ ಮೋಹವೆ ಪಾಸಿ ಮಾಡಿತು ನೋಡು ( ಗಜಲ್ ೨೯)

ಪ್ರೀತಿಸಿದವಳಿಗೆ ಮೋಸ ಮಾಡಿ ಅವಳನ್ನು ಧಿಕ್ಕರಿಸಿದಾಗ ಮುಗ್ಧ ಪ್ರೇಮಿಗೆ ಆಘಾತ ವಾಗುತ್ತದೆ,ನೆಚ್ಚಿ ಮೆಚ್ಚಿ ಮೋಹದ ಜಾಲದಲ್ಲಿ ಸಿಲುಕಿದವಳಿಗೆ ಆ ಮೋಹವೇ ಕೆಲವು ಸಾರೆ ನೇಣಿನ ಹಗ್ಗವಾಗುತ್ತದೆ.ಕೆಲವರು ಈ ಮೋಸದ ಆಘಾತ ಸಹಿಸದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಕವಿಯತ್ತಿ ಈ ಗಜಲ್ ದಲ್ಲಿ ಹೇಳಿದ್ದಾರೆ.

ಶೀಲವಂತರ ಭಾವಿನೀರು ಸಿಹಿಯೋ ಸವುಳೋ ಕುಡ್ದಿಲ್ಲ ಅವನು
ಮಡಿವಂತರ ಜಗುಲಿ ದೇವರು ಗಂಡೋ ಹೆಣ್ಣೋ ಕಂಡಿಲ್ಲ ಅವನು ( ಗಜಲ್ ೩೩)

ಈ ಗಜಲ್ ದಲ್ಲಿ ಕವಿಯತ್ರಿ ಸಮಾಜದ ವ್ಯವಸ್ಥೆಯ ಬಗ್ಗೆ ಹೇಳುತ್ತಾ ಹೋಗುತ್ತಾರೆ ,ಕೆಳ ವರ್ಗದ ಜನರ ಜೀವನ ಪದ್ದತಿ ಮತ್ತು ಮೇಲು ವರ್ಗದವರ ಜೀವನ ಪದ್ದತಿಗಳ ಬಗ್ಗೆ ಹೇಳುತ್ತಾ ದಲಿತರು ಅನುಭವಿಸುವ ಕಷ್ಟಗಳನ್ನು ವಿವರಿಸುತ್ತಾ ಕೊನೆಗೆ ಡಾ.ಅಂಬೇಡ್ಕರ್ ಅವರು ಬಯಸಿದ ಸಮಾನತೆ,ಸಹ ಬಾಳವೆ ಇನ್ನೂ ಕನಸಾಗಿಯೇ ಉಳಿದಿದೆ ನನಸಾಗಲಿಲ್ಲ ವೆಂದು ಹಳಹಳಿಸುತ್ತಾರೆ.ಇದರಿಂದ ನಮಗೆ ತಿಳಿಯುವುದೇನೆಂದರೆ ಕವಯತ್ರಿ ಯವರಿಗೆ ಇರುವ ಸಮಾಜದ ಕಾಳಜಿ ಕಂಡು ಬರುತ್ತದೆ.

ನವಿಲೂರ ವೃಂದಾವನ ನೀ ಬಾರದೆ ಮುಗಿದವು
ನೀರೆರೆದ ಲತೆಗಳು ನಿನ್ನ ನೆನಪಲಿ ಒರಗಿದವು ( ಗಜಲ್ ೩೭)

ಇದು ಒಂದು ವಿರಹದ ತೀವ್ರತೆಯನ್ನು ತೋರಿಸುವ ಗಜಲ್ ಆಗಿದೆ.ಪ್ರಿಯತಮೆ ತನ್ನ ಪ್ರೇಮಿಯ ಬರುವನ್ನು ಕಾದು ಕಾದು ಬೇಸರಿಯುವುದಲ್ಲದೆ ಅವಳ ಜೊತೆ ನಿಸರ್ಗದ ಚರಾಚರ ವಸ್ತುಗಳು ಅವನ ಬರುವನ್ನು ಕಾಯುತ್ತಿವೆಂದು ಹೇಳುತ್ತಾಳೆ.ನಿನ್ನ ಆಗಮವಿಲ್ಲದೆ ನಿಸರ್ಗದ ವಸ್ತುಗಳು ಮರುಗಿದವು, ಒರಗಿದವು, ಕಂಬನಿ ಸುರಿಸಿದವು ,ತಾರೆಗಳು ಹೊಳೆಯುವುದನು ಮರೆತವು ಎಂಬ ಕಾಫಿಯಾಗಳಿಂದ ವಿರಹದ ತೀವ್ರತೆಯನ್ನು ಸುಂದರವಾಗಿ ಗಜಲ್ ದಲ್ಲಿ ವಿವರಿಸಿದ್ದಾರೆ.

ನಿನ್ನೆ ತಂದ ಮೊಳ ಹೂವು ಅದೇ ಕೊನೆಯಾಯಿತು
ಮೊನ್ನೆ ಕಟ್ಟಿದ ತಾಳಿ ಕೊರಳಿಂದ ಇಳಿದಾಯಿತು (ಗಜಲ್ ೭೮)

ಇದು ಒಂದು ಮನ ಕಲಕುವ ಗಜಲ್ ಆಗಿದ್ದು ,ಮಹಿಳೆ ತನ್ನ ಬಾಳ ಸಂಗಾತಿಯನ್ನು ಕಳೆದು ಕೊಂಡು ವಿಧವೆಯಾದಾಗ ಮನದಲ್ಲಿ ಏಳುವ ಅನೇಕ ಪ್ರಶ್ನೆಗಳು ಇದರಲ್ಲಿ ಅಡಗಿವೆ.ಜೊತೆಗೆ ಸಮಾಜವು ವಿಧವೆಯರ ಮೇಲೆ ಹೇರಿದ ಮೂಢ ನಂಬಿಕೆಗಳಿಂದ ಹೆಣ್ಣು ಜರಜರಿತವಾಗಿ ಎಲ್ಲಾ ಸೌಭಾಗ್ಯ ಅವನಿಂದ ಹೋದವಲ್ಲಾ ಎಂದು ಹಲಬುವುದು ಕಂಡು ಬರುತ್ತದೆ.ವಿಧವೆ ಯಾದ ಮೇಲೆ ಹೂ ಮುಡಿಯಬಾರದು,ಕುಂಕುಮ ಅರಿಶಿಣ ಹಚ್ಚಿಕೊಳ್ಳ ಬಾರದು,ಬಳೆ ಹಾಕಿಕೊಳ್ಳಬಾರದೆಂದು,ಶುಭ ಕಾರ್ಯಗಳಲ್ಲಿ ಭಾಗವಹಿಸಬಾರದೆಂದು ಹೀಗೆ ಆನೇಕಕಟ್ಟು ಪಾಡುಗಳಿಂದ ಸಮಾಜವು ಹೆಣ್ಣನ್ನು ಬಂಧಿಸಿದ್ದು ಈ ಗಜಲ್ ದಲ್ಲಿ ಕವಿಯತ್ರಿ ಸುಂದರವಾಗಿ ನಿರೂಪಿಸಿದ್ದಾರೆ.

ಜ್ಯೋತಿ ದೇವಣಗಾವ ಅವರ *ಅತ್ತರಿನ ಭರಣಿ* ಗಜಲ್ ಸಂಕಲನದಲ್ಲಿ ಇನ್ನೂ ಅನೇಕ ಗಜಲ್ ಗಳು ಚಿಂತನೆಗೆ ಹಚ್ಚುತ್ತವೆ,ಅವರು ಇನ್ನೂ ಅನೇಕ ವಿಷಯಗಳನ್ನು ತೆಗೆದು ಕೊಂಡು ಗಜಲ್ ಗಳನ್ನು ರಚಿಸಿದ್ದಾರೆ.ಈ ಸಂಕಲನದ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ ಮತ್ತು ಮನ ಗೆಲ್ಲುತ್ತವೆ.ಇವರಿಂದ ಇನ್ನೂ ಉತ್ತಮವಾದ ಅನೇಕ ಗಜಲ್ ಸಂಕಲನಗಳು ಹೊರಬರಲೆಂದು ಹಾರೈಸುವೆ.

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

Don`t copy text!