ಅಕ್ಕನೆಡೆಗೆ…4 ನೇ ವಾರದ ಲೇಖನ
ಅಕ್ಕನ ಅರಿವಿನ ಪಥ…
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲ ಹೊಯ್ದು ಕಿಡಿಯ ಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ಕೊಂಬಂತೆ
ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣರ ಸಂಗ
ಕರ್ಪೂರಗಿರಿಯ ಉರಿಯಕೊಂಬಂತೆ.
ಹನ್ನೆರಡನೇ ಶತಮಾನದ ಶರಣರ ಸಂದೇಶಗಳಲ್ಲಿ ಗುರು, ಲಿಂಗ, ಜಂಗಮ, ಕಾಯಕ, ದಾಸೋಹ ಈ ಐದು ಶಬ್ದಗಳು ಪ್ರಮುಖವಾಗಿ ಹರಿದು ಬಂದವು. ಇದರ ಮಹತ್ವ ಸರ್ವ ಕಾಲಕ್ಕೂ ಮಾನ್ಯವಾದುದು. ಅಂತಹ ಶರಣರ ಆಶ್ರಯದಲ್ಲಿ ಕೆಲ ಸಮಯ ಕಳೆದ ಅಕ್ಕನದು ‘ಅರಿವು’ ಕುರಿತು ವಿಚಾರಪೂರ್ಣ ಚಿಂತನೆ.
ಗುರು ಶಬ್ದದ ಅಡಿಯಲ್ಲಿ ಅರಿವು ತನ್ನ ಭಾವವನ್ನು ಅಡಗಿಸಿಕೊಂಡಿದೆ. ’ಹಿಂದೆ ಗುರು ಮುಂದೆ ಗುರಿ ಇರಬೇಕು’ ಎನ್ನುವುದು ಜನ ಸಾಮಾನ್ಯರ ನಾನ್ನುಡಿ. ಬಸವಾದಿ ಶರಣರ ಪರಿಕಲ್ಪನೆಯಲ್ಲಿ ಅರಿವು ತೀರಾ ವೈಯಕ್ತಿಕ ನೆಲೆಯಲ್ಲಿ ಅರಳಿ ಸಮಾಜೀಕರಣಗೊಳ್ಳುವ ಪ್ರಕ್ರಿಯೆ.
ಅಂತಹ ಬಸವಾದಿ ಶರಣರ ನಡೆಯಲ್ಲಿ, ನುಡಿಯಲ್ಲಿ, ಬೆರೆತು, ಅರಿವು ಆಚಾರಗಳನ್ನು ಆಳವಾಗಿ ಪರಾಮರ್ಶಿಸಿ, ವಿವೇಚಿಸಿ, ಕೆಲಕಾಲ ಅವರೊಂದಿಗೆ ಕಳೆದು, ಮುಂದೆ ಶ್ರೀಶೈಲದ ಕಡೆಗೆ ಸಾಗುತ್ತ, ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ, ತನ್ನ ಆಧ್ಯಾತ್ಮದ ಹಾದಿಯನ್ನು ಹಿಡಿದು ಹೊರಟ ಅಕ್ಕನ ವಿಷಯ ಎಲ್ಲರಿಗೂ ತಿಳಿದಿದೆ.
ಅಂದು ಹನ್ನೆರಡನೇ ಶತಮಾನದಲ್ಲಿ, ಇಂದಿನ ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕು ಶರಣರ ಕೇಂದ್ರವಾಯಿತು. ಅನೇಕ ಸ್ಥಳಗಳಿಂದ ಶರಣ ತತ್ವ ಹಾಗೂ ವಚನ ಸಾಹಿತ್ಯದ ಆಕರ್ಷಣೆಗೊಳಗಾಗಿ ಕಲ್ಯಾಣದ ಕಡೆಗೆ ಧಾವಿಸಿ ಬಂದರು. ಅನುಭವ ಮಂಟಪ, ಮಹಾಮನೆಯು ಶರಣರು ವಿಕಾಸತಾಣವಾಗಿಸಿದರು. ಸಮಾಜಮುಖಿ ಚಿಂತನೆಗೆ ಹೊಸ ದಾರಿ ಕಂಡುಕೊಂಡು ಚಳುವಳಿಗೂ ನಾಂದಿಯಾಯಿತು. ಹಾಗೆ ಕಲ್ಯಾಣಕ್ಕೆ ಬಂದವರಲ್ಲಿ ಅಕ್ಕ ಪ್ರಮುಖ ವಚನಕಾರ್ತಿ.
ಎಲ್ಲಾ ಶರಣರ ಜೀವನಾನುಭವ, ಕಂಡುಂಡ ಸತ್ಯಗಳು ವಚನ ರೂಪ ಪಡೆದುಕೊಂಡವು. ಶೂನ್ಯ ಸಂಪಾದನೆಯ ಆಧಾರದ ಮೇರೆಗೆ ಅಕ್ಕನ ಅನೇಕ ವಚನಗಳು ಶರಣರ ಸಮ್ಮುಖದಲ್ಲಿ ಕಳೆದ ಸಮಯವನ್ನು ದಾಖಲಿಸುತ್ತವೆ. ಪೂರ್ವಾಶ್ರಮದಲ್ಲಿ ಅಕ್ಕ, ಅಕ್ಕನ ತಂದೆ ತಾಯಿ, ಕೌಶಿಕ ಮಹಾರಾಜ, ಮುಂತಾದ ಬದುಕಿನ ಸತ್ಯಾಸತ್ಯದಲ್ಲಿ ಕುತೂಹಲ ತೋರುವುದು ಮುಖ್ಯ ಎನಿಸುವುದಿಲ್ಲ. ಅಕ್ಕನ ಸೈದ್ಧಾಂತಿಕ ನಿಲುವಿನ ಸ್ಪಷ್ಟತೆ ಸಾಕು. ಅವಳು ತನ್ನ ಅಧ್ಯಾತ್ಮದ ಗುರಿ ಸಾಧನೆಯ ಮಾರ್ಗವನ್ನು ನಿಚ್ಚಳವಾಗಿಸಿಕೊಂಡಿದ್ದಳು ಎಂಬುದು ಸತ್ಯ ಮತ್ತು ಅದು ಇಡೀ ಸ್ತ್ರೀ ಕುಲಕ್ಕೇ ಮಾದರಿ.
ಈ ಮೇಲಿನ ವಚನವು ಅಕ್ಕ ಶರಣರ ಜೊತೆಗೂಡಿದ ನಂತರದ ಅನುಭವ ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ. ಅಕ್ಕ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಉಡುತಡಿಯಿಂದ ಕಾಲ್ನಡಿಗೆಯಲ್ಲಿ ಬಸವ ಕಲ್ಯಾಣವನ್ನು ತಲುಪುತ್ತಾಳೆ. ಅಲ್ಲಿ ಶರಣರ ಸಂಗದಲ್ಲಿ ತನ್ನ ಜ್ಞಾನವನ್ನು ಒರೆಗೆ ಹಚ್ಚಿಸಿಕೊಳ್ಳುವ ಅವಕಾಶವನ್ನು ಅರ್ಥಪೂರ್ಣವಾಗಿ ಎದುರಿಸುತ್ತಾಳೆ. ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುಗಳು, ಬಸವಣ್ಣ, ಚೆನ್ನಬಸವಣ್ಣ, ಅಕ್ಕನಾಗಮ್ಮ ಮತ್ತು ಉಳಿದ ಶರಣ ಶರಣೆಯರ ಒಡನಾಟ. ಆ ಶರಣರೆಲ್ಲರ ಪ್ರಭಾವದಲ್ಲಿ ಅಂಗ – ಲಿಂಗ – ಸಂಗದ ಅನುಭವ, ಲಿಂಗಾಂಗ ಸಾಮರಸ್ಯದ ಅನುಭೂತಿ ಪಡೆದುಕೊಳ್ಳುತ್ತಾಳೆ.
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲ ಹೊಯ್ದು ಕಿಡಿಯ ಕೊಂಬಂತೆ
ಮನುಷ್ಯನ ಬದುಕಿನಲ್ಲಿ ಅರಿವು ಬಹಳ ಮಹತ್ವದ್ದು. ಅದು ಇಲ್ಲದಿದ್ದರೆ ಬದುಕೇ ನಿರರ್ಥಕ. ಯಾರ ಬಳಿ ಅರಿವು ಇರುವುದಿಲ್ಲವೊ ಅಂತವರ ಸಹವಾಸವೂ ಕಷ್ಟ. ಎರಡು ಕಲ್ಲುಗಳು ಒಂದಕ್ಕೊಂದು ಘರ್ಷಿಸಿದಾಗ ಬೆಂಕಿಯ ಕಿಡಿಗಳು ಹಾರುತ್ತವೆ. ಅರಿವಿಲ್ಲದವರೊಂದಿಗೆ ಸಮಯ ಕಳೆಯುವುದೆಂದರೆ ಬೆಂಕಿಯ ಕಿಡಿಗಳನ್ನು ಪಡೆದಂತೆ.
ಅರಿವೇ ಗುರು ಎಂದವರು ಶರಣರು. ಯಾವ ಗುರು ಎಷ್ಟೇ ಹೇಳಿಕೊಟ್ಟರು, ತನಗೆ ತಿಳಿಯುವವರೆಗೂ ಜ್ಞಾನೋದಯವಾಗದು ಎಂಬ ಸಸ್ಯವನ್ನು ಅರುಹಿದವರು. ಅಕ್ಕನೇ ತನ್ನ ಇನ್ನೊಂದು ವಚನದಲ್ಲಿ ಹೇಳುತ್ತಾಳೆ.
‘ಅರಿದೆನೆಂದಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೆ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು.’
ಹಾಗೆಯೇ ಇನ್ನೊಂದು ವಚನದಲ್ಲಿ, ‘ಶರಣರಾದ ಮಹಾನುಭಾವಿಗಳ ಸಂಗದಲ್ಲಿ ತನು, ಮನ, ಪ್ರಾಣ ಶುದ್ಧವಾಯಿತು‘ ಎಂದು ಹೇಳುತ್ತಾಳೆ. ಅದೆಷ್ಟು ಶುದ್ಧ ಎಂದರೆ ಚೆನ್ನಮಲ್ಲಿಕಾರ್ಜುನನಿಗೆ ತಾನು ತೊಡುಗೆಯಾಗುವಷ್ಟು ಅಪ್ಪಟವೆಂದು ಹೋಲಿಸುವ ಉಪಮೆ ಅದ್ಭುತ.
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ಕೊಂಬಂತೆ
ಬಲ್ಲವರು ಎಂದರೆ ತಿಳುವಳಿಕೆ ಇದ್ದವರು. ಅಂಥವರೊಂದಿಗೆ ವ್ಯವಹರಿಸುವುದೆಂದರೆ ಅದು ಅಪ್ಯಾಯಮಾನ. ಹಾಲಿಗೆ ಹೆಪ್ಪು ಹಾಕಿ, ಮೊಸರು ಮಾಡಿ, ಬೆಣ್ಣೆ ಬರುವವರೆಗೂ ಕಟೆಯುತ್ತೇವೆ. ಅದು ಒಳ್ಳೆಯವರು, ಸಜ್ಜನರು, ತಿಳಿದವರ ಜೊತೆಯಲ್ಲಿ ಕಳೆದ ಸಮಯದಂತೆ. ಅರಿವಿದ್ದವರು ಬೆಣ್ಣೆಯಂಥ ಸಾರವನ್ನು ನೀಡುತ್ತಾರೆ.
ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣರ ಸಂಗ
ಕರ್ಪೂರಗಿರಿಯ ಉರಿಯಕೊಂಬಂತೆ.
ವಚನದ ಕೊನೆಯ ಎರಡು ಸಾಲುಗಳು ಅಶಯದ ಗಮ್ಯ ತಲುಪುತ್ತದೆ. ಕರ್ಪೂರವನ್ನು ಹೊತ್ತಿಸಿದರೆ ಸುಗಂಧವನ್ನು ಬೀರುತ್ತ, ಪ್ರಭೆಯನ್ನು ತೋರುತ್ತ, ಕರಗಿ ಬಯಲಲ್ಲಿ ಬಯಲಾಗುತ್ತದೆ. ತನ್ನ ಅಸ್ತಿತ್ವದ ಅವಶೇಷಗಳ ಲವಲೇಶವೂ ಉಳಿಯುವುದಿಲ್ಲ. ಅಂತೆಯೆ ಶರಣರೂ ಕೂಡ. ಅವರ ಸಂಗ, ಸಹವಾಸವನ್ನು ಅಕ್ಕ ಕರ್ಪೂರ ಗಿರಿಯ ಉರಿಗೆ ಹೋಲಿಸಿದ್ದಾಳೆ. ಅವರು ಬದುಕಿದಷ್ಟು ಕಾಲ ಜ್ಞಾನದ ಪರಿಮಳ ಬೀರಿದ್ದಾರೆ. ವಚನಗಳು ಆ ಸುಗಂಧವನ್ನು ಇನ್ನೂ ಕಾಪಾಡಿಕೊಂಡೇ ಮುಂದುವರಿಯುತ್ತಿದೆ.
ಹೀಗೆ ಅಕ್ಕ ಹನ್ನೆರಡನೇ ಶತಮಾನದಲ್ಲಿ ಬರೆದಿದ್ದರೂ, ಅದು ಸರ್ವಕಾಲಿಕವಾದ ಸತ್ಯ. ಪ್ರತಿಯೊಬ್ಬರೂ ಒಳ್ಳೆಯ ಸ್ನೇಹಿತರನ್ನು ಮಾತ್ರ ಪರಿಚಯ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ‘ಜೈಸಾ ಸಂಗ್ ವೈಸಾ ರಂಗ್’. ಸಹವಾಸ ಯಾವತ್ತು ದೋಷವಾಗಬಾರದು.
ಇಂದಿನ ಕಾಲದಲ್ಲಿ ಶರಣರಂತಹ ಸಂಗ ಬಯಸಿದರೆ, ಸಿಗುವುದು ಕಷ್ಟಕರ ಎನಿಸಬಹುದು. ಆದರೂ ಆ ವಾತಾವರಣ ಸೃಷ್ಟಿಸುವ ಶಕ್ತಿ ನಮ್ಮ ಕೈಯಲ್ಲಿದೆ. ಆಧುನಿಕತೆಯಿಂದಾಗಿ ಮಕ್ಕಳ ಕೈಗೆ ಬಹಳ ಬೇಗ ಎಲೆಕ್ಟ್ರಾನಿಕ್ಸ್ ವಸ್ತುಗಳು ಸಿಗುತ್ತವೆ. ಇದು ಪ್ರಸ್ತುತದ ಅನಿವಾರ್ಯತೆಯೂ ಹೌದು. ಪಾಲಕರು ತಮ್ಮ ಮಕ್ಕಳೊಂದಿಗೆ ಸ್ನೇಹದ ವ್ಯವಹಾರವನ್ನಿಟ್ಟುಕೊಂಡು, ಅವರ ದಿನನಿತ್ಯದ ಆಗುಹೋಗುಗಳನ್ನು ಗಮನಿಸಿದರೆ, ಅವರ ಚಟುವಟಿಕೆಯ ಕುರಿತು ತಿಳಿಯಬಹುದು. ಅವರ ಸ್ನೇಹ ಸಂಪರ್ಕದ ಗುಣಮಟ್ಟವನ್ನು ಪರಿಶೀಲಿಸಲು ಸಾಧ್ಯ.
ಇಂದು ದೂರದರ್ಶನ, ಕಂಪ್ಯೂಟರ್, ಮೊಬೈಲ್‌ಗಳೇ ಸಂಗಾತಿಗಳಾದುದರಿಂದ, ಅದರಿಂದಾಗುವ ಪರಿಣಾಮ ಮತ್ತು ದುಷ್ಪರಿಣಾಮಗಳ ಎಚ್ಚರಿಕೆ ತಿಳಿಸಿಕೊಡುವುದು ಅನಿವಾರ್ಯ. ಬೇಕು ಬೇಡವಾದ ಅನೇಕ ವೈಬ್ ಸೈಟ್‌ಗಳ ಮಧ್ಯದಲ್ಲಿ ಮಕ್ಕಳು ಕಳೆದು ಹೋಗದಂತೆ, ಅವುಗಳಿಂದಾಗುವ ಹಾನಿಗಳ ಪಟ್ಟಿ ಮಾಡಿ ಒಳ್ಳೆಯ ಆಯ್ಕೆ ಮಾಡಿಕೊಳ್ಳುವಂತೆ ಸಹಕರಿಸುವುದು ಶ್ರೇಯಸ್ಕರ.
ಮಕ್ಕಳಿಗಿಂತ ಹೆಚ್ಚು ಪಾಲಕರು ತಮ್ಮ ನಡವಳಿಕೆ, ಅಭ್ಯಾಸ, ರೂಢಿಗಳನ್ನು ಮಾದರಿಯಾಗಿಟ್ಟುಕೊಂಡರೆ, ಮಕ್ಕಳಿಗೆ ಪ್ರೇರಣದಾಯಕ. ಹಿರಿಯರೇ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಕಳೆದುಹೋದರೆ ಮುಂದಿನ ಭವಿಷ್ಯ ಶೂನ್ಯವಾದೀತು.
ಅಕ್ಕ ಹೇಳುವಂತೆ ಕರ್ಪೂರಗಿರಿಯ ಉರಿಯಂತಿರುವ ಸ್ನೇಹವನ್ನು ಬೆಳೆಸಬೇಕು. ನಾವು ಸಂಪರ್ಕಿಸುವ ಪ್ರತಿಯೊಬ್ಬ ವ್ಯಕ್ತಿಯೂ ಸ್ನೇಹಕ್ಕೆ ಯೋಗ್ಯನೆ? ಎನ್ನುವುದನ್ನು ಮೊದಲು ತಿಳಿದುಕೊಂಡು ಮುಂದುವರಿಯಬೇಕು. ಆಗಾಗ ಶರಣರ, ದಾಸರ, ಸಂತರ, ದಾರ್ಶನಿಕರ ಕುರಿತು ಮಹತ್ವದ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುವುದು ಉತ್ತಮ ಜೀವನ ಶೈಲಿ.
–ಸಿಕಾ ಕಲಬುರ್ಗಿ