ಕಿತ್ತೂರಿನ ಕನಸು ನುಚ್ಚು ನೂರಾಯಿತೇ ?

ಕಿತ್ತೂರು ಇತಿಹಾಸ ಭಾಗ 8

ಬಂಧುಗಳೇ
ಕಿತ್ತೂರ ಇತಿಹಾಸ ಜಾಗತಿಕ ಮಟ್ಟದಲ್ಲಿ ವೈಭವಿಸಬೇಕು. ಅದನ್ನು ಬಿಟ್ಟು ಲಿಂಗಾಯತ ಒಳಪಂಗಡದವರು ದಾಯಾದಿಗಳಂತೆ ಕಚ್ಚಾಡುವುದನ್ನು ಬಿಟ್ಟು ಕಿತ್ತೂರು ಇತಿಹಾಸ ಲಿಂಗಾಯತರ ಸ್ವಾಭಿಮಾನದ ಪ್ರತೀಕವಾಗಲಿ.
ನಿನ್ನೆ ಬರೆದ ಲೇಖನದಲ್ಲಿ ದತ್ತು ಪುತ್ರ ಮೆಕಲಮರಡಿ ಗೌಡರ ಎಂದು ತಪ್ಪಾಗಿ ನಮೂದಾಗಿದೆ ಅದು *ಮಾಸ್ತಮರಡಿ* ಎಂತಾಗಬೇಕು. ಕಿತ್ತೂರು ಇತಿಹಾಸದ ಸಮಗ್ರ ಅಧ್ಯಯನ ಅಗತ್ಯ ಈ ಹಿನ್ನೆಲೆಯಲ್ಲಿ ಎಲ್ಲಾ ಲಿಂಗಾಯತ ಸಮಾಜದವರು ಕೂಡಿ ವಿಚಾರ ಸಂಕಿರಣ ಎರ್ಪಡಿಸಬೇಕು. ಕಿತ್ತೂರು ಚೆನ್ನಮ್ಮ ಒಂದು ಜಾತಿ ಧರ್ಮಕ್ಕೆ ಸೀಮಿತಗೋಳಿಸದೆ ಸಮಸ್ತ ಕನ್ನಡಿಗರ ಭಾರತಿಯರ ಆಸ್ತಿಯಾಗಬೇಕು.
ಇಂತಹ ರಾಷ್ಟ್ರೀಯ ಒಂದು ಜಾತಿಗೆ ಕಟ್ಟಿ ಹಾಕಿ ವೈಭವಿಸುವ ಸ್ವಭಾವ ನಮ್ಮದಾಗಬಾರದು. ಕಿತ್ತೂರು ಇತಿಹಾಸದ ಬಗ್ಗೆ ಇನ್ನೂ ಅನೇಕ ವಿಷಯಗಳು ಸತ್ಯದಿಂದ ಮರೆಮಾಚಿವೆ. ಆದರೆ ನಾನು ಅವುಗಳನ್ನು ನನ್ನ ಅಧ್ಯಯನ ಮಾತ್ರಕ್ಕೆ ಸೀಮಿತ ಗೊಳಿಸಿದ್ದೇನೆ. ಇಲ್ಲಿಗೆ ನನ್ನ ಲೇಖನ ಮುಗಿಸುವೆ.

ಕಿತ್ತೂರಿನ ಕನಸು ನುಚ್ಚು ನೂರಾಯಿತೇ ?
ಚೆನ್ನಮ್ಮಳ ಮರಣದ ಬಳಿಕವೂ ದೇಶನಿಷ್ಠರ ಹೋರಾಟ ಮುಂದುವರಿಯುತ್ತದೆ. ಯುದ್ದ ಖೈದಿಯಾಗಿದ್ದು ಬಿಡುಗಡೆಯಾದ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣನು ತಾನು ಚೆನ್ನಮ್ಮಳ ದತ್ತು ಪುತ್ರ ಶಿವಲಿಂಗಪ್ಪನ ಮುಂದಾಳತ್ವವನ್ನಿಟ್ಟುಕೊಂಡು ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾನೆ. ಸರದಾರ ಗುರು ಸಿದ್ದಪ್ಪನವರು ಅವರಡಿ ವೀರಪ್ಪನವರು ರುದ್ರಪ್ಪ ನಾಯಕರು ಬಿಚ್ಚುಗತ್ತಿ ಚೆನ್ನಬಸಪ್ಪ ಮುಂತಾದ ಆಸ್ಥಾನದ ಯೋಧರ ಗುಂಪು ಸಂಗೊಳ್ಳಿ ರಾಯಣ್ಣ ಗಜವೀರ ( ಹಬಸ್ಯಾ ) ಇವರ ನೆರವಿನೊಂದಿಗೆ ಕಿತ್ತೂರನ್ನು ಮತ್ತೆ ಸ್ವತಂತ್ರಗೊಳಿಸಲು ಸೆಣಸಾಡಿದರು ಅವರ ಹೋರಾಟ ಕುತಂತ್ರದ ಆಟದ ಮುಂದೆ ನಡೆಯಲೇ ಇಲ್ಲ .

ಮುಂದೆ ಖೋದಾನಪುರ ಮತ್ತು ನೇಗಿನಾಳಗೌಡರ ವಿಶ್ವಾಸ ದ್ರೋಹತನದಿಂದ ೧೮೩೦ ಫೆಬ್ರವರಿಯಲ್ಲಿ ಸಂಗೊಳ್ಳಿ ರಾಯಣ್ಣನಿರುವ ಸ್ಥಳವನ್ನು ಕಂಪನಿ ಸರ್ಕಾರದವರಿಗೆ ತೋರಿಸಿ ಅವನನ್ನು ಸೆರೆಹಿಡಿಸುತ್ತಾರೆ. ಅದೇ ೧೮೩೦ ಮೇ ನಲ್ಲಿ ಕಿತ್ತೂರ ದೊರೆಯಾದ ಶಿವಲಿಂಗಪ್ಪ ಮತ್ತವನ ನಾಲ್ಕು ಸಾವಿರ ಬೆಂಬಲಿಗರು ತಾವು ಬ್ರಿಟೀಷರಿಗೆ ಸ್ವಯಂ ಶರಣಾಗುತ್ತಾರೆ. ಇದಾದ ಬಳಿಕ ಜುಲೈ ೧೮೩೦ ಕ್ಕೆ ಚೆನ್ನಮ್ಮಳ ಪ್ರೀತಿಯ ಸೊಸೆ ವೀರಮ್ಮ ತಾನು ಸೆರೆಮನೆಯಲ್ಲಿಯೇ ಸಾವನ್ನಪ್ಪುತ್ತಾಳೆ.ಸರಿಸುಮಾರು ಆರು ತಿಂಗಳುಗಳ ತರುವಾಯ ೧೮೩೧, ಜನವರಿ ೨೬ ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಲಾಗುತ್ತದೆ. ಮತ್ತೆ ಸ್ವಾತಂತ್ರ್ಯ ಪಡೆಯಬೇಕೆನ್ನುವ ಕನಸು ನುಚ್ಚು ನೂರಾಯಿತು . ಬ್ರಿಟಿಷ್ ಕಂಪನಿ ಸರಕಾರವು ಕಿತ್ತೂರನ್ನು ಸವಣೂರ ನವಾಬರಿಗೆ ವಹಿಸಿಕೊಟ್ಟರು . ಕಿತ್ತೂರಿಗೆ ದುಡಿದ ಅಪ್ರತಿಮ ಯೋಧರ ಸಂಕ್ಷಿಪ್ತವಾಗಿ ಪರಿಚಯವನ್ನು ನಾವು ಮಾಡದಿದ್ದರೆ ಅದು ಇತಿಹಾಸಕ್ಕೆ ಮತ್ತು ಕನ್ನಡದ ನೆಲದ ಸಂಸ್ಕೃತಿಗೆ ದ್ರೋಹ ಮಾಡಿದಂತಾಗುತ್ತದೆ.

ಸರದಾರ ಗುರುಸಿದ್ದಪ್ಪನವರು
ಸರದಾರ ಗುರುಸಿದ್ದಪ್ಪನವರು ಕಿತ್ತೂರಿನ ಸಂಸ್ಥಾನದ ರಾಜತಾಂತ್ರಿಕರು ಸೇನೆಯ ಮುಖ್ಯಸ್ಥರು ಮಂತ್ರಿಗಳು .ಬೈಲಹೊಂಗಲ ತಾಲೂಕಿನ ಅಂಬಡಗಟ್ಟಿ ಗ್ರಾಮಕ್ಕೆ ಸೇರಿದವರೆಂದು ಚರಿತ್ರೆ ಹೇಳುತ್ತದೆ . ಮಲ್ಲಸರ್ಜ ದೊರೆಯ ಆಪ್ತ ಬಂಟ ಸರದಾರ ಗುರುಸಿದ್ದಪ್ಪನವರು ಕಿತ್ತೂರಿನ ಸಮಗ್ರ ಅಭಿವೃದ್ಧಿ ದಕ್ಷತೆ ಹೋರಾಟದ ರೂಪರೇಷೆ ಹಾಕಿಕೊಟ್ಟ ಧೀಮಂತ ಯೋಧರು .

ರುದ್ರಪ್ಪ ನಾಯಕರು
ರುದ್ರಪ್ಪ ನಾಯಕರು ಕಿತ್ತೂರಿನ ಸರ್ವಶ್ರೇಷ್ಠ ದಿಟ್ಟ ಸೇನಾನಿಗಳು ಕಿತ್ತೂರಿನ ಸೈನಿಕರಲ್ಲಿ ಧೈರ್ಯ ಸ್ಥೈರ್ಯವನ್ನು ತುಂಬಿ ಬ್ರಿಟಿಷರ ವಿರುದ್ಧ ಹೋರಾಡಲು ವೀರಯೋಧರಲ್ಲಿ ಕೆಚ್ಚು ತುಂಬಿದ ಕಿತ್ತೂರು ಸಂಸ್ಥಾನದ ಆಪ್ತವಲಯದ ರಾಜತಾಂತ್ರಿಕರು .

ಅವರಾದಿ ವೀರಪ್ಪನವರು
ಅವರಾದಿ ವೀರಪ್ಪನವರು ಕಿತ್ತೂರಿನ ಖಜಾನೆ ಹಣಕಾಸು ಆರ್ಥಿಕ ವ್ಯವಸ್ಥೆಯನ್ನು ನೋಡಿಕೊಳ್ಳುವ ಚಾಣಾಕ್ಷ ಬುದ್ಧಿಯ ಆಸ್ಥಾನದ ಮಂತ್ರಿಗಳಾಗಿದ್ದವರು ಅಪ್ಪಟ ದೇಶ ಪ್ರೇಮ ಪ್ರಾಮಾಣಿಕತೆ
ಕಿತ್ತೂರಿನ ಬಗ್ಗೆ ಅವರಿಗಿರುವ ಪ್ರೇಮ ರಾಷ್ಟ್ರ ಭಕ್ತಿ ಪ್ರಶ್ನಾತೀತವಾದದ್ದು . ಕಿತ್ತೂರು ಕೋಟೆಗೆ ಬೇಕಾದ ಆಹಾರ ಧಾನ್ಯ ಸರಬರಾಜು ಸೈನಿಕರಿಗೆ ಬೇಕಾದ ತೋಪು ಕೋವಿ ಮದ್ದು ಗುಂಡು ಸೈನಿಕರ ಸಮವಸ್ತ್ರವನ್ನು ಪೂರೈಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು .ಮೂಲತಃ ಅವರು ಇಂದಿನ ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದವರಿರಬಹುದು.

ಬಿಚ್ಚುಗತ್ತಿ ಚೆನ್ನಬಸಪ್ಪ
ಬಿಚ್ಚುಗತ್ತಿ ಚೆನ್ನಬಸಪ್ಪ ಕಿತ್ತೂರಿನ ಆಳರಸರ ಸಂಬಂಧಿ ಎಂದು ತಿಳಿದು ಬರುತ್ತದೆ. ಕಿತ್ತೂರಿನ ಸೇನೆ ಮತ್ತು ಗೌಪ್ಯತೆ ಮತ್ತು ಗೂಢಚರತನಾದ ಜವಾಬ್ದಾರಿ ಬಿಚ್ಚುಗತ್ತಿಯ ಚೆನ್ನಬಸಪ್ಪನ ಮೇಲಿತ್ತು .ಅಪ್ಪಟ ರಾಷ್ಟ್ರ ಭಕ್ತ ಕಿತ್ತೂರು ಸಂಸ್ಥಾನದ ನಂಬಿಕೆಯ ಯೋಧ. ಕಿತ್ತೂರು ರಾಣಿ ಚೆನ್ನಮ್ಮನವರು ತಮ್ಮ ಸೊಸೆಯೊಂದಿಗೆ ಬಂಧನಕ್ಕೆ ಒಳಗಾದಾಗ ದೃತಿಗೆಡದೆ ಪರ್ಯಾಯ ಹೋರಾಟಕ್ಕೆ ಮಾರ್ಗ ಕಂಡು ಹಿಡಿದು ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸೇನಾನಿಯನ್ನು ಸಂಪರ್ಕಿಸಿ ಅವರೊಂದಿಗೆ ಸುಮಾರು ನಾಲ್ಕು ಸಾವಿರ ಸೈನಿಕರನ್ನು ಕಿತ್ತೂರಿನ ಸೇನೆಯಲ್ಲಿ ಜಮಾಯಿಸಲು ಬಿಚ್ಚುಗತ್ತಿ ಚೆನ್ನಬಸಪ್ಪನವರ ಶ್ರಮ ಅದ್ಭುತವಾಗಿದೆ. ಇವನು ಕಿತ್ತೂರಿನ ಪರಿಸರದ ಬಿಚ್ಚುಗತ್ತಿಯವನು.

ಗಜವೀರ ( ಸಿದ್ಧಿ ಹಬಸ್ಯಾ )
ಗಜವೀರ ಮುಂಡಗೋಡು ಯೆಲ್ಲಾಪುರದ ಮೂಲದವನಾಗಿದ್ದು ಸಿದ್ಧಿ ಜನಾಂಗಕ್ಕೆ ಸೇರಿದ ಬಲಿಷ್ಠ ಕಾಯದ ಗಟ್ಟಿ ಜಟ್ಟಿಯಾಗಿದ್ದನು ತನ್ನ ತಂಡವನ್ನು ಕಟ್ಟಿಕೊಂಡು ಕಾಡಿನಲ್ಲಿ ದಾಟಿಹೋಗುವ ಶ್ರೀಮಂತರನ್ನು ದೋಚುವ ಮತ್ತು ಬಡವರಿಗೆ ಹಂಚುವ ಉದಾತ್ತ ಗುಣವುಳ್ಳವನಾಗಿದ್ದನು . ಮುಂದೆ ಸಂಗೊಳ್ಳಿ ರಾಯಣ್ಣ ಮತ್ತು ಬಿಚ್ಚುಗತ್ತಿ ಇವರ ಸಂಪರ್ಕಕ್ಕೆ ಬಂದ ಮೇಲೆ ಅಪ್ಪಟ ರಾಷ್ಟ್ರ ಪ್ರೇಮಿಯಾದನು ಎಂದು ಇತಿಹಾಸ ಹೇಳುತ್ತದೆ. ಗಜವೀರ ಅಂದರೆ ಆನೆಯನ್ನು ಕೊಂದು ಶತ್ರುಗಳನ್ನು ಸಂಹಾರ ಮಾಡುವ ಶಕ್ತಿ ಯುಕ್ತಿ ಹೊಂದಿದ್ದಾನೆಂದು ತಿಳಿದು ಬರುತ್ತದೆ.

ರಾಯನಾಯಕ
ಸಂಗೊಳ್ಳಿ ರಾಯಣ್ಣನ ಬಲಗೈ ಬಂಟನೆನಿಸಿಕೊಂಡ ರಾಯ ನಾಯಕ ಕಿತ್ತೂರು ಸಂಸ್ಥಾನದ ಉಳಿವಿಗೆ ಅಪ್ರತಿಮ ಕೊಡುಗೆ ನೀಡಿದ್ದಾನೆ.

ಮಲ್ಲಪ್ಪಶೆಟ್ಟಿ ಎಂಬವನು ದೇಶ ದ್ರೋಹಿಯೇ ??
ಕಿತ್ತೂರು ಸಂಸ್ಥಾನದ ಇತಿಹಾಸದಲ್ಲಿ ಕೋಣೂರು ಮಲ್ಲಪ್ಪಶೆಟ್ಟಿ ಎಂಬವನು ನಿಜಕ್ಕೂ ದೇಶ ದ್ರೋಹಿಯೇ ಕಿತ್ತೂರು ಸಂಸ್ಥಾನವನ್ನು ಅಡವಿಟ್ಟ ಸ್ವಾರ್ಥಿ ನೀಚನೇ ಎಂಬ ಅನೇಕ ಊಹಾಪೋಹಗಳು ಅನೇಕರಿಗೆ ಕಾಡುತ್ತವೆ. ಮಲ್ಲಪ್ಪಶೆಟ್ಟಿ ಕಿತ್ತೂರು ಸಂಸ್ಥಾನದ ಕಾರಬಾರಿಯಾಗಿದ್ದನು ಎಂದು ನಾಟಕ ಮತ್ತು ಚಲನ ಚಿತ್ರದಲ್ಲಿ ಹೊರತು ಪಡಿಸಿದರೆ ಕಿತ್ತೂರಿನ ಗಝೆಟ್ಟೆಯರ ಸರಕಾರೀ ದಾಖಲೆ ಮತ್ತು ಕಿತ್ತೂರಿನ ಪಾತ್ರ ವ್ಯವಹಾರಗಳಲ್ಲಿ ಕಂಡ ಬರಬೇಕಿತ್ತು.ಕಿತ್ತೂರ ಕದನ ದೊಡ್ಡ ಭಾವೆಪ್ಪ ಮೂಗಿ ಅವರು ರಚಿಸಿದ ಕಾಲ ೧೯೫೦- ೧೯೬೦
ಅವರ ಸಹೋದ್ಯೋಗಿಗಳಾದ ಶ್ರೀ ಜಕಾತಿ ಮಾಸ್ತರ ಕಿತ್ತೂರಿನವರು ಮತ್ತು ಹಲಸಿಯ ಮೂಲದ ಶ್ರೀ ಸದಾಶಿವ ವೀರಭದ್ರಪ್ಪ ಹಂಜಿ ಹಿರಿಯ ಸಂಶೋಧಕ ಡಾ ಎಂ ಎಂ ಕಲಬುರ್ಗಿ ಹಾಗು
ಎಸ ವಿ ಕೋಟಿ ವಕೀಲರು ಬಾಗಲಕೋಟೆ ಇವರ ಕೆಲ ಮೌಖಿಕ ಆಧಾರಗಳ ಮೇಲೆ ಹಾಗು ನನ್ನ ವ್ಯಕ್ತಿಗತ ಸಮೀಕ್ಷೆಯ ಹಿನ್ನೆಲೆಯಲ್ಲಿ ಮಲ್ಲಪ್ಪಶೆಟ್ಟಿ ಎಂಬವನು ಕಿತ್ತೂರಿನ ಖಳನಾಯಕನೇ ಎಂಬುದನ್ನು ಬಗೆಹರಿಸುವ ಪ್ರಯತ್ನವು ನನ್ನದಾಗಿದೆ.
ಕೋಣೂರು ಮಲ್ಲಪ್ಪಶೆಟ್ಟಿ ಮತ್ತು ಹಾವೇರಿ ವೆಂಕೋಬರಾಯರು ಕಿತ್ತೂರಿನ ಕಾರಭಾರಿಗಳಾಗಿದ್ದರು ಇವರಿಬ್ಬರೂ ಕೂಡಿ ಕಿತ್ತೂರಿಗೆ ಮೋಸ ಮಾಡಿದರೆಂದು ಇತಿಹಾಸದಲ್ಲಿ ಸೇರ್ಪಡೆಯಾದ ಸಂಗತಿಯು. ಆದರೆ ಮಲ್ಲಪ್ಪಶೆಟ್ಟಿಯ ಬಗ್ಗೆ ಬೇರೆ ಬೇರೆ ಲೇಖಕರು ಬೇರೆ ಬೇರೆ ಅಭಿಪ್ರಾಯವನ್ನು ಹೊಂದಿದ್ದಾರೆ.
ದೊಡ್ಡಭಾವೆಪ್ಪ ಮೂಗಿ ಅವರ ಸಮಕಾಲೀನ ಇತಿಹಾಸ ಶಾಸ್ತ್ರಜ್ಞ ಸಾಹಿತಿ ಶ್ರೀ ಸದಾಶಿವ ವೀರಭದ್ರಪ್ಪ ಹಂಜಿ ಗುರುಗಳ ಅಭಿಪ್ರಾಯದಂತೆ
ಕಿತ್ತೂರು ಚೆನ್ನಮ್ಮ ನಾಟಕವನ್ನು ಸ್ವಾತಂತ್ರ ಪೂರ್ವದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮಾಡಿಸಬೇಕೆಂಬ ಉದ್ದೇಶವನ್ನು ಅಂದಿನ ನಾಟಕ ಕಂಪನಿಯ ಮಾಲೀಕರು ಆಗಿನ ಪದ್ಧತಿಯಂತೆ
ತಹಸೀಲ್ದಾರ ಅವರ ಪರವಾನಿಗೆಯನ್ನು ಪಡೆದು ನಾಟಕವಾಡಬೇಕಿತ್ತು. ಇಂತಹ ಸಂದರ್ಭವನ್ನು ನಾನು ಸಂಗ್ಯಾ ಬಾಳ್ಯಾ ನಾಟಕವಾಡಲು ಪೋಲೀಸರ ಪರವಾನಿಗೆ ಪಡೆಯುವದನ್ನು ನೋಡಿದ್ದೇನೆ . ಕಿತ್ತೂರು ಚೆನ್ನಮ್ಮ ನಾಟಕವಾಡಲು ತಹಸೀಲದಾರರಾದ ಶ್ರೀ ದೇಶಪಾಂಡೆಯವರನ್ನು ಸಂಪರ್ಕಿಸಿದಾಗ ನಾಟಕದ ಸಮಗ್ರ ಕಥೆಯನ್ನು ಕೇಳಿ ,
ಇದು ಲಿಂಗಾಯತ ಬಣಜಿಗ ಸಂಸ್ಥಾನವಾಗಿದ್ದು ಇದನ್ನು ಬಣಜಿಗರೇ ದ್ರೋಹ ಬಗೆದರೆನ್ನುವ ಹಾಗೆ ಬಿಂಬಿಸುವ ಒಂದು ಪಾತ್ರವನ್ನು ಸೃಷ್ಟಿಯಬೇಕೆಂದು ಆಜ್ಞೆ ಇಟ್ಟನು .ಕಾರಣ ಹಾವೇರಿ ವೆಂಕೋಬರಾಯರು ದೇಶಪಾಂಡೆ ತಹಸೀಲದಾರರಿಗೆ ದೂರದ ಸಂಬಂಧಿಯಾಗಿದ್ದರಂತೆ ,ಹೀಗಾಗಿ ಎಲ್ಲಿಯೂ ನಮೂದಿಸಲಾಗದ ಮಲ್ಲಪ್ಪಶೆಟ್ಟಿ ನಾಟಕದಲ್ಲಿ ಹುಟ್ಟಿಕೊಂಡನು ಇದು ಶ್ರೀ ಎಸ ವಿ ಹಂಜಿಯವರ ವಾದವಾಗಿದೆ.
ಇನ್ನು ಡಾ ಎಂ ಎಂ ಕಲಬುರ್ಗಿ ಗುರುಗಳ ಖರೆ ಖರೆ ಕಿತ್ತೂರಿನ ಇತಿಹಾಸದಲ್ಲಿ ಇಂತಹ ಅನೇಕ ಪ್ರಸಂಗಗಳನ್ನು ಸಾದರಪಡಿಸಿದ್ದಾರೆ.ಅವುಗಳಲ್ಲಿ ಮಲ್ಲಪ್ಪಶೆಟ್ಟಿ ಎಂಬ ವ್ಯಕ್ತಿಯು ಇತಿಹಾಸದಲ್ಲಿ ಚಿತ್ರಿತವಾದಂತೆ ದುಷ್ಟನಾಗಿರಲಿಲ್ಲ ಮತ್ತು ಅವನು ಕಿತ್ತೂರಿನ ಏಕತೆ ಸಮಗ್ರತೆಗೆ ಪ್ರಾಮಾಣಿಕವಾಗಿ ದುಡಿದವನು ಎಂಬ ಅಂಶವನ್ನು ಹೊರಹಾಕಿದ್ದಾರೆ .

ಇನ್ನು ಬಾಗಲಕೋಟೆಯ ಶ್ರೀ ಕೋಟಿ ವಕೀಲರು ಕೋಣೂರು ಮಲ್ಲಪ್ಪಶೆಟ್ಟಿ ಎಂಬವರ ವಂಶಾವಳಿಯನ್ನು ಗುರುತಿಸುವಲ್ಲಿ ಸ್ವಲ್ಪ ಮಟ್ಟಿಗೆ ಹೊಸ ಸುಳಿಹು ನೀಡಿದ್ದಾರೆ ಅಲ್ಲದೆ ಅವರ ವಂಶದವರು ಎಂದು ಹೇಳುವ ಮನೆತನಗಳು ಈಗಲೂ ಬೈಲುಹೊಂಗಲ ಮತ್ತು ರಾಮದುರ್ಗ ಮತ್ತು ರಾಯಚೂರಿನಲ್ಲಿ ಇದ್ದಾರೆ ಎಂದು ನನಗೆ ತಿಳಿಸಿದರು .ರಾಮದುರ್ಗ ಮತ್ತು ಬೈಲಹೊಂಗದಲ್ಲಿ ಕನ್ನೂರು ಎಂಬ ಮನೆತನಗಳಿದ್ದು ಅವರು ಕೋಣೂರು ಮಲ್ಲಪ್ಪಶೆಟ್ಟಿಯ ವಾರಸದಾರರು ಎಂದು ಜನರ ಅಭಿಪ್ರಾಯವಾಗಿದೆಯಂತೆ.
ಬ್ರಿಟಿಷರು ತಮಗೆ ಸಹಾಯ ಮಾಡಿದವರಿಗೆ ಇನಾಮು ಕೊಟ್ಟಿದ್ದಾರೆ .ನೇಗಿನಾಳ ವೆಂಕನಗೌಡರು ಇನಾಮದಾರ ಆದದ್ದು ಹೀಗೆಯೇ ಅದೇ ರೀತಿ ಖೋದಾನಪುರ ಲಿಂಗನಗೌಡರಿಗೂ ಇನಾಮು ಸಿಕ್ಕಿದೆ.. ಆದರೆ ಮಲ್ಲಪ್ಪಶೆಟ್ಟಿಗೆ ಇಂತಹ ದೊಡ್ಡ ಪ್ರಮಾಣದ ಇನಾಮು ಸಿಕ್ಕಿದ್ದು ಎಲ್ಲಿಯೂ ಕಂಡು ಬಂದಿಲ್ಲವಾದದ್ದರಿಂದ ಮಲ್ಲಪ್ಪಶೆಟ್ಟಿ ದೇಶದ್ರೋಹ ಮಾಡದೇ ಇರುವುದರ ಬಗ್ಗೆ ಖಾತ್ರಿ ಎನಿಸುತ್ತದೆ .
ನಾನು ಮಲ್ಲಪ್ಪಶೆಟ್ಟಿಯ ವಂಶಾವಳಿಯವರ ಬಗ್ಗೆ ಸುಳಿಹು ಹುಡುಕುತ್ತಾ ಇಂದಿನ ಗೋವಾದಲ್ಲಿನ ಮಾಪುಸಾದಲ್ಲಿ ಒಂದು ಲಿಂಗಾಯತ ವ್ಯಾಪಾರಸ್ಥ ಕುಟುಂಬವಿದ್ದು ಅವರು ಕಾಗತಿ ಮತ್ತು ಕಿತ್ತೂರು ಮೂಲದವರೆಂದು ಮತ್ತು ನೂರು ವರುಷಕ್ಕೂ ಅಧಿಕವಾಗಿ ಮಾಪುಸಾದಲ್ಲಿ ವಾಸವಾಗಿರುವ ಕೋಣೂರಿ ಎಂಬ ಲಿಂಗಾಯತ ಕುಟುಂಬವೊಂದು ವಾಸವಾಗಿದೆ ಎಂದು ತಿಳಿದು ಬಂತು .ಅವರನ್ನು ವಿಚಾರಿಸಲಾಗಿ ಅವರು ಲಿಂಗಾಯತರು ಆದರೆ ಬಣಜಿಗ ಒಳಪಂಗಡವರಲ್ಲದ ಬೇರೆ ಒಳಪಂಗಡಕ್ಕೆ ಸೇರಿದವರೆಂದು ತಿಳಿದು ಬಂತು .
ಕಿತ್ತೂರಿನ ಇತಿಹಾಸದಲ್ಲಿ ಒಬ್ಬರನ್ನು ತಿರಸ್ಕರಿಸುವ ಮತ್ತು ಇನ್ನೊಬ್ಬರನ್ನು ವೈಭವೀಕರಿಸುವ ಕಾರ್ಯ ನಡೆದಿದೆ .ಇದನ್ನು ಸಂಗೊಳ್ಳಿ ರಾಯಣ್ಣನ ಮೇಲೆ ಸಂಶೋಧನೆ ನಡೆಸಿದ ಹಿರಿಯ ಸಂಶೋಧಕ ಪ್ರೊ ಜ್ಯೋತಿ ಹೊಸುರ ಅವರು ಇದೆ ಅಭಿಪ್ರಾಯ ಪಡುತ್ತಾರೆ .

ಕಿತ್ತೂರು ಸಂಸ್ಥಾನದ ನೆರವಿಗೆ ಬಂದ ಇತರ ಅರಸೊತ್ತಿಗೆಗಳು
೧೮೨೪ ರ ಯುದ್ಧದಲ್ಲಿ ಪೇಶ್ವೇಗಳು ಮರಾಠರು ಮತ್ತು ಅರಬರು ಸಹಾಯ ಮಾಡುತ್ತಾರೆ. ೧೮೨೮
ರಲ್ಲಿ ಸಂಗೊಳ್ಳಿ ರಾಯಣ್ಣ ಮೊದಲ ಬಾರಿಗೆ ರಾಣಿ ಚೆನ್ನಮ್ಮಳನ್ನು ಭೇಟಿ ಮಾಡಲು ಬೈಲಹೊಂಗಲದ ಜೈಲಿಗೆ ಬಂದಾಗ ರಾಣಿಯ ಸಲಹೆಯ ಮಾತಿನಂತೆ ಸಂಗೊಳ್ಳಿ ರಾಯಣ್ಣ ಸುರಪುರದ ನಾಯಕರ ಸಹಾಯ ಪಡೆದು ತನ್ನ ಸೈನ್ಯದೊಳಗೆ ಸುಮಾರು 300 ಜನ ಬೇಡರನ್ನು ಸೈನಿಕರನ್ನಾಗಿ ನೇಮಕಮಾಡಿ ಕಿತ್ತೂರು ವಿಮೋಚನಿಗೆ ಸಂಗೊಳ್ಳಿ ರಾಯಣ್ಣ ಪ್ರಯತ್ನ ಪಡುತ್ತಾನೆ,.ಹಬಸಿ ಅಂದರೆ ಸಿದ್ಧಿ ಮೂಲದ ಗಜವೀರ ಆನೆಯನ್ನು ಯುದ್ಧದಲ್ಲಿ ಕೊಂದುದ್ದಕ್ಕೆ ಅವನಿಗೆ ಗಜವೀರ ಎಂಬ ಹೆಸರು ಬಂದಿತ್ತು. ಅವನ ಹಿಂಬಾಲಕರು ಕಿತ್ತೂರು ವಿಮೋಚನೆಗೆ ಬಿಚ್ಚುಗತ್ತಿ ಚೆನ್ನಪ್ಪ ಮತ್ತು ಸಂಗೊಳ್ಳಿ ರಾಯಣ್ಣನವರ ನೇತೃತ್ವದಲ್ಲಿ ಸಿದ್ಧಿ ಜನಾಂಗದವರು ಯುದ್ಧಕ್ಕೆ ಸನ್ನದ್ಧರಾಗುತ್ತಾರೆ. ಹೀಗೆ ಭಾರತದ ನೆಲದಲ್ಲಿ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿ ಅಪ್ಪಟ ರಾಷ್ಟ್ರ ಪ್ರೇಮ ಮೆರೆದ ಕಿತ್ತೂರಿನ ಯೋಧರ ಇತಿಹಾಸವು ಭಾರತದ ಚರಿತ್ರೆಯಲ್ಲಿ ದಾಖಲಾಗದೆ ಹೋಗಿದ್ದು ದುರಂತದ ಸಂಗತಿಯೇ ಸರಿ.

ಕಿತ್ತೂರು ಇತಿಹಾಸದ ಪುಟದಲ್ಲಿ ದಾಖಲಾಗಬೇಕಾದ ಸತ್ಯ ಸಂಗತಿಗಳು
ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು ಎಂಬ ನನ್ನ ಎಂಟು ಸಂಶೋಧನಾ ಲೇಖನಗಳಲ್ಲಿ ನಾನು ಕಂಡುಕೊಂಡ ಮತ್ತು ಪರಾಮರ್ಶಿಸಿದ ಅನೇಕ ಸತ್ಯ ಸಂಗತಿಗಳನ್ನು ಮತ್ತೊಮ್ಮೆ ಸಾದರ ಪಡಿಸುವ ಕಾರ್ಯ ನನ್ನದು .

೧) ಕಿತ್ತೂರಿನ ಮೂಲ ಪುರುಷರ ಬಗ್ಗೆ ಇರುವ ಗೊಂದಲದ ನಿವಾರಣೆ
ಕಿತ್ತೂರಿನ ಇತಿಹಾಸದ ಬಹುತೇಕ ಸಂಶೋಧಕರು ಕಿತ್ತೂರಿನ ಮೂಲ ಪುರಷರು ಇಂದಿನ ಶಿವಮೊಗ್ಗಾ ಜಿಲ್ಲೆಯ ಸಾಗರದವರೆಂದು ದಾಖಲಿಸಿದ್ದಾರೆ .ಸತ್ಯವೆಂದರೆ ಅವರು ಇಂದಿನ ಕಲ್ಯಾಣ ಕರ್ನಾಟಕದ ಸಾಗರ ನಾಡಿನವರು ಅಂದರೆ ಯಾದಗಿರಿ ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೆಲ ಹಳ್ಳಿಗಳನ್ನು ಸೇರಿಸಿ *ಸಗರ ನಾಡು* ಎಂದು ಕರೆಯುತ್ತಾರೆ ಕರುನಾಡದವರು. ಎಲ್ಲ ಲೇಖಕರು ನಾಟಕಕಾರರು ಕಾದಂಬರಿಕಾರರು ಸಾಹಿತಿಗಳು ಇತಿಹಾಸ ತಜ್ಞರು ಸಾಗರವೆಂದು ಹೇಳಿ ಸತ್ಯ ಸಂಗತಿಗಳು ಮರೆಮಾಚುವಂತೆ ಮಾಡಿದ್ದರು .ತಪು ಗ್ರಹಿಕೆಯ ಪುನರುಚ್ಚಾರ ಮತ್ತೆ ಮತ್ತೆ ನಡೆದುಹೋಯಿತು . ಕಿತ್ತೂರಿನ ಮೂಲ ಪುರುಷರ ಬಗ್ಗೆ ಮೊದಲು H J STROKES ಎಂಬ ಬ್ರಿಟಿಷ್ ಅಧಿಕಾರಿ SAGAR ( ಸಗರ ) ಎಂಬ ಪದವನ್ನು ಇತಿಹಾಸಕಾರರು ಸಾಗರ ಎಂದು ಹೇಳಿದ್ದಾರೆ .ಆದರೆ ವೆಂಕಟ್ ರಂಗೋ ಕಟ್ಟಿ ಮತ್ತು ಕಲ್ಮೇಶ್ವರ ಚೆನ್ನಮಲ್ಲಪ್ಪ ಶ್ರೇಷ್ಠಿ ಇವರು ಕಿತ್ತೂರಿನ ಮೂಲ ಪುರಷರು ಕಲಬುರ್ಗಿ ಕಡೆಯಿಂದ ಬಂದವರ ಬಗ್ಗೆ ತಮ್ಮ ಸುಳಿಹು ನೀಡುತ್ತಾರೆ . ಮೊದಲಿಗೆ ಡಾ ಸೂರ್ಯನಾಥ ಕಾಮತ ಅವರು ಕಿತ್ತೂರಿನ ಮೂಲ ಪುರುಷರ ಬಗ್ಗೆ ಇವರು ಸಗರ ನಾಡಿನವರು ಎಂದು ದಾಖಲಿಸಿದರು ( ೧೯೯೫ ) ಇದರ ಸೆಲೆ ಹಿಡಿದು ಮುಂದೆ ಪ್ರೊ ಜ್ಯೋತಿ ಹೊಸುರ ಅವರು ತಮ್ಮ ಸಂಗೊಳ್ಳಿ ರಾಯಣ್ಣ ಎಂಬ ಪುಸ್ತಕದಲ್ಲಿ ಕಿತ್ತೂರಿನ ಮೂಲ ಪುರುಷರು ಸಗರ ನಾಡಿನವರು ಅದು ಕಲಬುರ್ಗಿ ಜೇವರ್ಗಿ ಶಹಾಪುರ ಮುದ್ದೇಬಿಹಾಳ ಪ್ರದೇಶಗಳಿಂದ ಕೂಡಿದ್ದು ಎಂದಿದ್ದಾರೆ .ಇದನ್ನು ಅನುಮೋದಿಸಿ ಸ್ಪಷ್ಟವಾಗಿ ಕಿತ್ತೂರಿನ ಮೂಲ ಪುರುಷರು ಸಗರನಾಡಿನವರೆಂದು ರುಜುವಾತು ಮಾಡಲಾಯಿತು

೨) *ಕಿತ್ತೂರಿನ ಆಳರಸರು ಲಿಂಗಾಯತ ಬಣಜಿಗರು
ಇಲ್ಲಿಯವರೆಗೆ ಸಂಶೋಧನೆ ನಡೆಸಿದ ಎಲ್ಲ ಸಂಶೋಧಕರು ಕಿತ್ತೂರು ಅರಸರು ಮತ್ತು ರಾಣಿ ಚೆನ್ನಮ್ಮ ಬಣಜಿಗರೆಂದು ಸಿದ್ಧ ಪಡಿಸಿದ್ದಾರೆ ಪ್ರೊ ವಿ ಜಿ ಮಾರಿಹಾಳ ,ಡಾ ಸಂತೋಷ ಹಾನಗಲ್ಲ ,ಡಾ ಚೆನ್ನಕ್ಕ ಪಾವಟೆ,ಡಾ ರತ್ನಶೀಲಾ ಗುರಡ್ಡಿ ,ಪ್ರಿ ಸಿ ವಿ ಮಠದ ಡಾ ಗ ಸ ಹಾಲಪ್ಪ .ಸದಾಶಿವ ಒಡೆಯರ ಪ್ರೊ ಜ್ಯೋತಿ ಹೊಸುರ ಡಾ ಶೆಟ್ಟರ ಹಾಗು ಎಲ್ಲ ಇತಿಹಾಸ ತಜ್ಞರು ಕಿತ್ತೂರಿನ ವಂಶಸ್ಥರು ಮತ್ತು ರಾಣಿ ಚೆನ್ನಮ್ಮ ಲಿಂಗಾಯತ ಬಣಜಿಗರು ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನು ಎಲ್ಲ ಸಾಕ್ಷಾಧಾರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಇವರು ಲಿಂಗಾಯತ ಬಣಜಿಗ ಎಂದು ಸ್ಪಷ್ಟವಾಗಿ ನಾನು ದಾಖಲಿಸಲು ಇಚ್ಛೆ ಪಡುತ್ತೇನೆ ( ಜಾತಿ ವ್ಯವಸ್ಥೆಯನ್ನು ಸಂಪೂರ್ಣ ದಿಕ್ಕರಿಸಿದ ನಾನು ಸತ್ಯ ಸಂಗತಿಯನ್ನು ಹೇಳಬೇಕೆನ್ನುವ ಒಂದೇ ಉದ್ಧೇಶದಿಂದ ಸಂಶೋಧನಾತ್ಮಕ ದೃಷ್ಟಿಯಿಂದ ಇಲ್ಲಿ ಕಿತ್ತೂರಿನ ರಾಜಮನೆತನವು ಲಿಂಗಾಯತ ಬಣಜಿಗರು ಎಂದು ದಾಖಲಿಸುತ್ತೇನೆ ) ೧೮೯೧ ಮತ್ತು ೧೯೧೧ ರ ಜನಗಣತಿ ವರದಿಯಲ್ಲಿ ಬಣಜಿಗ ಶೀಲವಂತ ಮತ್ತು ಜೊತೆಗೆ ಮುವತ್ತಾರು ಬೇರೆ ಬೇರೆ ಕಸಬುಗಾರರ ಜಾತಿ ನಮೂದಾಗಿದೆ. *ಕಿತ್ತೂರು ಚೆನ್ನಮ್ಮಳನ್ನು ಲಿಂಗಾಯತ ಧರ್ಮದ ಒಂದು ಉಪ ಪಂಗಡಕ್ಕೆ ಸೇರಿಸದೆ ಬಸವಣ್ಣನವರು ಸ್ಥಾಪಿಸಿದ ಸಮತೆಯ ತೇರನ್ನು ಲಿಂಗಾಯತ ಬಣಜಿಗ ಪಂಚಮಸಾಲಿ ಕೂಡಿ ಉಳಿದ ಎಲ್ಲಾ ಸಮುದಾಯದ ಜನರ ಜೊತೆಗೆ ಎಳೆಯೋಣ. ಜಾಗತಿಕ ಮಟ್ಟದಲ್ಲಿ ಅವ್ವ ರಾಣಿ ಚೆನ್ನಮ್ಮ ಕನ್ನಡಿಗರ ಲಿಂಗಾಯತರ ಅಸ್ಮಿತೆಯಾಗಲಿ ಎಂದು ಪ್ರಾರ್ಥಿಸುತ್ತೇನೆ.*

3 ) ಸಮಾಧಿಗಳು
ಮಲ್ಲಸರ್ಜನ ಸಮಾಧಿ ಮತ್ತು ರಾಣಿ ರುದ್ರಮ್ಮ ತಾಯಿ ಸಮಾಧಿ ಕಿತ್ತೂರಿನ ರಾಜಗುರು ಕಲ್ಮಠದಲ್ಲಿವೆ ಎಂಬ ಸುಳ್ಳು ಹೇಳಿಕೆಗಳನ್ನು ತಿರಸ್ಕರಿಸಿ ಮಲ್ಲಸರ್ಜನ ಸಮಾಧಿ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿದೆ ಮತ್ತು ರುದ್ರಮ್ಮ ತಾಯಿಯ ಸಮಾಧಿಯು ಸಂಗೊಳ್ಳಿಯಲ್ಲಿದೆ.ಇದನ್ನು ನನ್ನ ಸಂಶೋಧನೆ ಸ್ಥಳ ಪರಿಶೀಲನೆ ಮತ್ತು ಸ್ಥಾನಿಕ ಜನರ ಮೌಖಿಕ ಹೇಳಿಕೆಗಳಿಂದ ದಾಖಲಿಸುತ್ತೇನೆ. ಕಿತ್ತೂರು ಶಿವಲಿಂಗಸರ್ಜನ ಮಡದಿ ವೀರಮ್ಮಳ ಸಮಾಧಿಯು ಅವಳ ತವರು ಮನೆ ಧಾರವಾಡದ ಇಂದಿನ ಯಾಲಕ್ಕಿ ಶೆಟ್ಟರ ಕಾಲನಿಯ ಹಪ್ಪಳ ಶೆಟ್ಟರ ತನ್ನ ತವರುಮನೆಯಲ್ಲಿರುವ ಸುಳಿವನ್ನು ಶ್ರೀ ಶಂಕರ ಕುಂಬಿ ಮತ್ತು ರುದ್ರಣ್ಣ ಹೊಸಕೇರಿ ಕೊಟ್ಟಿರುವುದು ಒಂದು ದಾಖಲೆಯೇ ಮತ್ತು ಅವಳು ಅಕ್ಕಲಕೋಟೆ ಮಂಗಳವೇಡೆ ದೇಸಾಯಿಯವರ ಸಂಬಂಧಿ ಮತ್ತು ವೀರಮ್ಮ ಶಿವನಗುತ್ತಿಯವಳು ಎಂಬ ವಿಚಾರಗಳು ಚರ್ಚೆಗೆ ಬರುತ್ತವೆ.ಆದರೆ ಮರೆತು ಹೋದ ವೀರಮ್ಮನ ಸಮಾಧಿ ಹಪ್ಪಳ ಶೆಟ್ಟರ ಮನೆಯಲ್ಲಿ ಇದೆ. ಇದೆ ಸಂದರ್ಭದಲ್ಲಿ ಆ ಮನೆತನದ ಮೊಮ್ಮಗ ಡಾ ಸುಭಾಷ್ ಮಾರಿಹಾಳ ಅವರ ದೊಡ್ಡಪ್ಪನವರು ನೀಡಿದ ಅನೇಕ ವಿಚಾರ ಹಂಚಿ ಕೊಂಡಿದ್ದಾರೆ.

೪ ) ಮಲ್ಲಸರ್ಜನ ತಮ್ಮನ ಮರೆತ ಕಿತ್ತೂರು ಇತಿಹಾಸ
ಮಲ್ಲಸರ್ಜನ ಸಹೋದರ , ( ಹೆಸರಿನಲ್ಲಿ ಸ್ವಲ್ಪ ಗೊನ್ದಲವಿದೆ) ಶಿವಲಿಂಗಸರ್ಜನು ಶೂರನು ಉದಾರಿಯೂ ಜಾತ್ಯಾತೀತ ಮನೋಭಾವದವನಾಗಿದ್ದು ಅವನು ದೂರದ ಕಾಶ್ಮೀರ ಮುಸ್ಲಿಂ ಕನ್ಯೆಯನ್ನು ಮದುವೆಯಾಗಿ ದೇಶನೂರಿನಲ್ಲಿ ಅವಳಿಗೆ ಲಿಂಗ ದೀಕ್ಷೆ ಕೊಟ್ಟು ಅವಳಿಗೆ ಅಂತಃಪುರವನ್ನು ಕಟ್ಟಿಸಿದ ಸಂಗತಿ ಇತಿಹಾಸದ ಪುಟಗಳ ಸೇರಲೇ ಇಲ್ಲ.

೫) ವ್ಯಕ್ತಿ ಚಿತ್ರಣ ಸ್ಪಷ್ಟಿಕರಣ

ಅಮಟೂರು ಬಾಳಾಸಾಹೇಬ -ಲಿಂಗಾಯತನಲ್ಲ ಆತ ಅಮಟೂರಿನ ಸೈದಾನಸಾಬನ ಮಗ ಬಾಳಾಸಾಹೇಬ ಅವನೇ ಬ್ರಿಟಿಷ ಅಧಿಕಾರಿಯನ್ನು ಕೊಂದದ್ದು .
ಸಂಗೊಳ್ಳಿರಾಯಣ್ಣ -ಕಿತ್ತೂರಿನ ಮೊದಲ ಯುದ್ಧದಲ್ಲಿ ಭಾಗಿಯಾದ ಯಾವುದೇ ದಾಖಲೆಯಿಲ್ಲ ಡಿಸೆಂಬರ್ ೪ ಮತ್ತು ೫ ರ ಯುದ್ಧದಲ್ಲಿ ಭಾಗಿಯಾಗಿ ಸೆರೆಯಾಗಿ ಬಿಡುಗಡೆಯಾದ ಬಗ್ಗೆ ದಾಖಲೆ ಸಿಕ್ಕಿವೆ. ಮತ್ತು ಸಂಗೊಳ್ಳಿರಾಯಣ್ಣನು ರಾಣಿ ಚೆನ್ನಮ್ಮಳನ್ನು ಭೇಟಿ ಆದದ್ದು ಬೈಲಹೊಂಗಲದ ಜೈಲಿನಲ್ಲಿ ೧೮೨೭ ಮತ್ತು ೧೮೨೮ ರ ಸುಮಾರಿಗೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ .
ಸಂಗೊಳ್ಳಿ ರಾಯಣ್ಣನನ್ನು ಹಿಡಿದು ಕೊಟ್ಟದ್ದು ಈ ಮುಂಚೆ ಸಂಗೊಳ್ಳಿ ರಾಯಣ್ಣನ ತಾಯಿಯ ಸ್ವಂತ ತಮ್ಮ ಲಕ್ಕಪ್ಪ ( ಲಕ್ಷ್ಯಾ ) ಬ್ರಿಟಿಷರಿಗೆ ಮತ್ತು ನೇಗಿನಾಳ ಮತ್ತು ಖೋದಾನಪುರದ ಗೌಡರಿಗೆ ಸಹಾಯ ಮಾಡಿದನೆಂಬುದು ದಾಖಲಾಗಿದ್ದು ಶುದ್ಧ ಸುಳ್ಳು.ಸಂಗತಿಯಾಗಿದೆ. ಬದಲಾಗಿ ಖೋದಾನಪುರ ಲಿಂಗನಗೌಡರ ಹಳಬ ಪುಟದಮ್ಮನವರ ಲಕ್ಕ ಸಂಗೊಳ್ಳಿ ರಾಯಣ್ಣನ್ನು ಬ್ರಿಟಿಷರಿಗೆ ಹಿಡಿದುಕೊಡಲು ಸಹಾಯ ಮಾಡುತ್ತಾನೆ . ಹೀಗೆ ಇತಿಹಾಸದ ಪುಟಗಳಲ್ಲಿ ಮರೆತು ಹೋದ ಅನೇಕ ಅಧ್ಯಾಯ ವಿಷಯಗಳ ಹುಡುಕಾಟ ಇಲ್ಲಿ ನಡೆದಿದೆ
ಇಂತಹ ಅನೇಕ ವಿಷಯಗಳನ್ನು ನನ್ನ ಲೇಖನಗಳ ಮೂಲಕ ಹೊರಹಾಕಿದ್ದೇನೆ.

ನನ್ನ ಈ ಸರಣಿ ಸಂಶೋಧನಾ ಲೇಖನಗಳ ಸಿದ್ಧ ಪಡಿಸುವ ಸಂದರ್ಭದಲ್ಲಿ ನಡೆದ ಸಂವಾದ ಚರ್ಚೆ ಆಕರಗಳ ಕ್ರೋಡೀಕರಣದಲ್ಲಿ ಸಹಕಾರಿಯಾದ ಶಿವಾನಂದ ಹತ್ತಿಕಾಳ,ಅಥಣಿಯ ಡಾ ಮಹಾಂತೇಶ ಉಕ್ಕಲಿ ,ಬಾಗಲಕೋಟಿಯ ಎಸ ವಿ ಕೋಟಿ ವಕೀಲರು ,ಜಮಖಂಡಿಯ ಸಿ ಎಸ ಝಳಕಿ ,ಖ್ಯಾತ ಸಂಶೋಧಕ ಪ್ರೊ ಜ್ಯೋತಿ ಹೊಸುರ ,ಬೈಲಹೊಂಗಲದ ಶ್ರೀ ಪಟ್ಟಣಶೆಟ್ಟಿ , ಧಾರವಾಡದ ಶಂಕರ ಕುಂಬಿ ,ರುದ್ರಣ್ಣ ಹೊಸಕೇರಿ ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ನನ್ನ ಆತ್ಮೀಯ ಗೆಳೆಯ ಡಾ ಮೃತ್ಯುಂಜಯ ಶೆಟ್ಟರ ( ಪ್ರೊ ಶಿ ಶಿ ಬಸವನಾಳರ ಮೊಮ್ಮಗ ) ಪಾರ್ವತಿ ಅಂಬಲಿ ಪ್ರೊ ಪ್ರಿಯಾ ಹುಲಗಬಾಳಿ ಪ್ರೊ ರವೀಂದ್ರ ಪಟ್ಟಣ ಶಿವರಾಜ್ ಅಕ್ಕಿ ಜಿ ಬಿ ಸಾಲಕ್ಕಿ ಗಿರೀಶ ಉದೊಶಿ ಹೀಗೆ ಹಲವಾರು ಜನರು ಅತ್ಯಂತ ಆಸಕ್ತಿಯಿಂದ ನನ್ನ ಸರಣಿ ಲೇಖನಗಳನ್ನು ಮುಂದುವರೆಸುವಂತೆ ಮಾಡಿದ್ದಾರೆ .
ಡಾ ಎಮ್ ಎಂ ಕಲಬುರ್ಗಿ ಗುರುಗಳ ಮಾತಿನಂತೆ ಸಂಶೋಧನೆ ತುಂಬಾ ಕಷ್ಟದ ಕೆಲಸ ಜನರ ಶೃದ್ಧೆ ನಂಬಿಕೆಯ ಬೇರುಗಳನ್ನು ಸಡಿಲಿಸುವ ಹೀಗಾಗಿ ಸಂಶೊಧಕ ಹಲವು ಬಾರಿ ಶಿಲುಬೆಗೆ ಎರುತ್ತಾನೆ. ಒಮ್ಮೊಮ್ಮೆ ನಡೆದು ಹೋಗುತ್ತವೆ.
ಸಂಶೋಧನೆಯು ಅಲ್ಪ ವಿರಾಮದಿಂದ ಪೂರ್ಣ ವಿರಾಮದವರೆಗೆ ಸಾಗುವ ಬೌದ್ಧಿಕ ವೈಚಾರಿಕ ಚಿಂತನೆ ಅನ್ವೇಷಣೆ ಅಷ್ಟೇ , ವಸ್ತು ನಿಷ್ಠ ಚಿಂತನೆ ಸಂಶೊಧನೆ ವಾಸ್ತವಿಕ ಸಂಗತಿಗಳ ಅನಾವರಣ ನಮ್ಮ ಉದ್ದೇಶವಾಗಿರಬೇಕು.

ಸಂತಸದ ವಿಷಯವೆಂದರೆ ಅಂತಹ ಗೊಂದಲಗಳು ಕಳೆದ ಎಂಟು ತಿಂಗಳಲ್ಲಿ ಬರದೇ ಇರುವುದು ನಮ್ಮ ಪ್ರಯತ್ನಕ್ಕೆ ಸಂದ ಗೌರವವೆಂದು ನಂಬಿದ್ದೇನೆ .ಕ್ಷೇತ್ರ ಸಮೀಕ್ಷೆ ಗ್ರಂಥ ಪರಾಮರ್ಶೆ ಕಿತ್ತೂರಿನ ಇತಿಹಾಸದ ವಿಭಿನ್ನ ನೋಟ ಸತ್ಯ ಸಂಗತಿಗಳ ಶೋಧನೆಯಲ್ಲಿ ನನ್ನ ಮಡದಿ ಡಾ ಜಯಶ್ರೀ ಪಟ್ಟಣ ಮುದ್ದು ಮಗ ಮುರುಗೇಂದ್ರನನ್ನು ಬಿಟ್ಟು ಹತ್ತಾರು ದಿನಗಳವರೆಗೆ ಊರೂರು ತಿರುಗಿದ್ದುಂಟು ಅವರ ಸಹಕಾರ ದೊಡ್ಡದು . ಇಂತಹ ಲೇಖನಗಳ ಸರಣಿಯನ್ನು ಮುಗಿಸಲು ಪ್ರೇರೇಪಿಸಿದ ನನ್ನ ಹಡೆದವ್ವ ಸರೋಜಾ ಪಟ್ಟಣ ಮರಾಠಿ ದಾಖಲೆ ಮತ್ತು ಪುಸ್ತಕಗಳನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿ ಲೇಖನ ಸಿದ್ಧಮಾಡಲು ಸಹಾಯ ಮಾಡಿದ ಮಡದಿ ಡಾ ಜಯಶ್ರೀ ಪಟ್ಟಣ ರಾಮದುರ್ಗದ ಸಮಸ್ತ ಲಿಂಗಾಯತ ಬಂಧುಗಳು
ಕಿತ್ತೂರಿನ ಇತಿಹಾಸದ ಸತ್ಯ ಶೋಧನೆಯು ಮುಂದುವರೆಯಲಿ ,ಸ್ಥಾಪಿತ ಸಂಗತಿಗಳಿಗಿಂತ ಸಂಶೋಧಿತ ವಿಷಯಗಳು ಹೊಸ ಆಲೋಚನೆ ಮಾರ್ಗಗಳನ್ನು ಹುಡುಕುವಲ್ಲಿ ಸಹಾಯಕಾರಿಯಾಗುವವು. ಪ್ರತಿಸಲ ಬಣಜಿಗ ಬಂಧು ಮುಟ್ಟಿದ ಕೂಡಲೇ ಓದಿ ತಮ್ಮ ಸಂತಸ ಅನಿಸಿಕೆಯನ್ನು ಹಂಚಿಕೊಂಡವರು ಸಾವಿರಾರು ಅವರಲ್ಲಿ ಮಹಾಂತಪ್ಪ ಖೇಣೆದ, ಮಹೇಶ ಮಿಟ್ಟಲಕೋಡ ,ಗುಳೇದಗುಡ್ದದ ಸಂಗಣ್ಣ ಪಟ್ಟಣಶೆಟ್ಟಿ ಪ್ರೊ ಸಿದ್ದಲಿಂಗಪ್ಪ ಬರಗುಂಡಿ ಗದಗ ಬಾಗಲಕೋಟೆ ಹಾವೇರಿ ಜಮಖಂಡಿ ಬೈಲಹೊಂಗಲ ಪುಣೆ ಬೆಂಗಳೂರು ದಾವಣಗೆರೆ ಕೊಪ್ಪಳ ಹುಬ್ಬಳಿ ಧಾರವಾಡ ಮುಂತಾದ ಕಡೆಗಳಿಂದ ಸಾವಿರಾರು ಜನರು ತಮ್ಮ ಸಂತಸ ಹಂಚಿಕೊಂಡಿದ್ದಾರೆ ಅವರೆಲ್ಲರಿಗೂ ನನ್ನ ಅನಂತ ಶರಣು .

ಸಹಾಯಕ ಗ್ರಂಥ ಆಕರಗಳು
———————–
೧) ಸಂಗೊಳ್ಳಿ ರಾಯಣ್ಣ ಸಂಪಾದಕರು ಡಾ ಸೂರ್ಯನಾಥ ಕಾಮತ ( ೧೯೯೫)
೨) ರಾಣಿ ಚೆನ್ನಮ್ಮ ತೃತೀಯ ಮುದ್ರಣ ಸದಾಶಿವ ಒಡೆಯರ (೧೯೯೬)
೩) ಬೆಳಗಾವಿ ಜಿಲ್ಲೆಯ ವಾಡೆಗಳು (,೨೦೦೯ ) ಡಾ ಸಂತೋಷ ಹಾನಗಲ್ಲ
೪) ಸಗರ ನಾಡು ದರ್ಶನ ಏ ಕೃಷ್ಣ ಸುರಪುರ
೫) ಮಲ್ಲಸರ್ಜ ಕಾವ್ಯ ಮತ್ತು ಕಿತ್ತೂರು ಬಂಡಾಯ ಸಂಪಾದಕರು ಬಸನಗೌಡ ಆರ್ ಪಾಟೀಲ
೬ ) ಮುಂಬೈ ಗಝೆಟ್ಟಿಯರ (೧೮೯೧ ೧೮೯೩ ೧೯೧೧) ಮತ್ತು ಜನಗಣತಿ ಜಾತಿವಾರು ಪಟ್ಟಿ
೭) An Historical account of Belgaum district in the Bombay Presidency ೧೮೭೦.

೮ )ಬಸವರಾಜ ಕಟ್ಟಿಮನಿ ಅನಕೃ ಅವರ ಕಾದಂಬರಿಗಳು

೯) ಸಂಗೊಳ್ಳಿ ರಾಯಣ್ಣ ಚರಿತ್ರೆ ಶೋಧನೆಗಳು (೨೦೧೫) ಪ್ರೊ ಜ್ಯೋತಿ ಹೊಸೂರು
೧೦) ಕಿತ್ತೂರಿನ ಮಠದ ಶಾಸನ ಹಾಗು ಮೌಖಿಕ ಹೇಳಿಕೆಗಳು

*ಉಪಕೃತ ( Acknowledgement )*
————————————–
ಕಿತ್ತೂರಿನ ಇತಿಹಾಸದ ಮೇಲೆ ಹೊಸ ಬೆಳಕು ಎಂಬ ಸರಣಿ ಲೇಖನಗಳನ್ನು ನನಗೆ ಬರೆಯಲು ನಿರಂತರ ಪ್ರೇರೇಪಿಸಿದ ಬಣಜಿಗ ಬಂಧುವಿನ ಪ್ರಧಾನ ಸಂಪಾದಕ ಶ್ರೀ ರುದ್ರಣ್ಣ ಹೊಸಕೇರಿ
ಅಧ್ಯಕ್ಷ ಡಾ ಶಿವಬಸಪ್ಪ ಹೆಸರೂರು ,ಕಿತ್ತೂರು ನಾಡಿನ ಸ್ವಾಭಿಮಾನಿ ಲಿಂಗಾಯತರಿಗೆ ನಾನು ಉಪಕೃತನಾಗಿದ್ದೇನೆ.ಮೂರೂ ವರುಷಗಳ ಹಿಂದೆ ಬಣಜಿಗ ಬಂಧುವಿನಲ್ಲಿಎಂಟು ಕಂತಿನಲ್ಲಿ ಪ್ರಕಟಗೊಂಡ ಕಿತ್ತೂರಿನ ಇತಿಹಾಸವನ್ನು ಮತ್ತೊಮ್ಮೆ ಕೆಲ ಮಾರ್ಪಾಡುಗಳಿಂದ ಪ್ರಕಟಿಸಲು ಮುಂದಾದ ಶ್ರೀ ವೀರೇಶ ಸೌದ್ರಿ ಸಂಪಾದಕರು ಈ ಸುದ್ಧಿ ಮಸ್ಕಿ ಇವರಿಗೂ ಅನಂತ ಧನ್ಯವಾದಗಳು.

-ಡಾ.ಶಶಿಕಾಂತ ಪಟ್ಟಣ ರಾಮದುರ್ಗ, ಪುಣೆ

9552002338

—-++—————————

ಮಾನ್ಯ ಓದುಗರಲ್ಲಿ ವಿನಂತಿ,
ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು *ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು*
ಎಂಬ ಸರಣಿ ಲೇಖನ ಪ್ರಕಟವಾಗಲಿದೆ..
ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ, ಈ ಲೇಖನ ಸರಣಿ‌ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ, ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ. 9552002338

ಸಂಪಾದಕ

****************

ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ

 

 

Don`t copy text!