ವಚನಗಳ ವೈಶಿಷ್ಠ್ಯ

ಮನುಷ್ಯನು ತನ್ನ ವಿಚಾರ ಮತ್ತು ಭಾವಗಳನ್ನು ಸ್ಪಷ್ಟವಾಗಿ ಬೇರೆಯವರಿಗೆ ತಿಳಿಯುವಂತೆ ವ್ಯಕ್ತ ಮಾಡುವುದೇ ಭಾಷೆಯ ಮೂಲ ಉದ್ಧೇಶ. ಅವುಗಳನ್ನು ಆದಷ್ಟು ಮನೋವೇಧಕ ರೀತಿಯಿಂದ ವ್ಯಕ್ತ ಮಾಡಿದ ಭಾಷಾ ರೂಪವೇ, ಸಾಹಿತ್ಯ ಅಥವಾ ವಾಙ್ಮಯವೆನಿಸುವದು.

ಶರಣರು ತಮ್ಮ ಉಚ್ಛವಾದ ವಿಚಾರಗಳನ್ನು, ಆತ್ಮಜ್ಞಾನದ ಭಾವಗಳನ್ನು ಮನೋವೇಧಕ ರೀತಿಯಿಂದ ವಚನಗಳಲ್ಲಿ ವ್ಯಕ್ತಪಡಿಸಿರುವದರಿಂದ ಶರಣ ಸಾಹಿತ್ಯವನ್ನು ವಚನ ವಾಙ್ಮಯವೆನ್ನುವದು ಸೂಕ್ತವಾಗಿದೆ. ಪ್ರತಿಕ್ಷಣ ಮಾನವನ ಹೃದಯ ಸಮುದ್ರದಲ್ಲಿ ಏಳುವ ಅನಂತ ಕಲ್ಪನಾ ತರಂಗಗಳು, ವಿವಿಧ ವಿಚಾರ ಲಹರಿಗಳು, ಭಾವೊದ್ರೇಕದಿಂದ ಕೂಡಿದ ಅವ್ಯಕ್ತ ಮತ್ತು ಅಸ್ಪಷ್ಟ ರೂಪದಲ್ಲಿ ಇರುತ್ತವೆ. ಅವು ಶಬ್ದ ರೂಪವನ್ನು ತಾಳಿದಾಗ ಸ್ಪಷ್ಟತೆಯನ್ನು ಪಡೆಯುತ್ತವೆ. ಚಿತ್ತವೃತ್ತಿಯ ಮನೋಭಾವಗಳು, ಅರಿವೆಂಬ ಕನ್ನಡಿಯಲ್ಲಿ ಪ್ರತಿಬಿಂಬಿತವಾಗಬೇಕಿದ್ದರೆ, ಅವು ಶಬ್ಧಭಂಡಾರವನ್ನುಟ್ಟು, ಉಪಮಾದಿ ಅಲಂಕಾರಗಳನ್ನಿಟ್ಟು, ಗದ್ಯಗತಿಯಿಂದ, ಪದ್ಯ ಪದ್ದತಿಯಿಂದ ವನಪು ವೈಯಾರಗಳೊಡನೆ, ವಾಙ್ಮಯರೂಪ ಪಡೆದಿದೆ.
ಮಾನವನ ಮನೋಂಡಲದಲ್ಲಿಮ ಮೂಡುವ ಪ್ರತಿಯೊಂದು ಭಾವವು, ವಿಚಾರವು, ಕಲ್ಪನಯು, ಹೊರಗೆ ಬರಲು ಒಂದು ಯೋಗ್ಯ ವಾಹಕವು ಮತ್ತು ಅದು ವ್ಯಕ್ತವಾಗಲು ಒಂದು ಬಾಹ್ಯ ರೂಪವೂ ಬೇಕು, ಆ ವಾಹಕದ ಅಥವಾ ರೂಪದ ಮುಖಾಂತರವೇ ಆ ಭಾವವನ್ನು ಅಥವಾ ವಿಚಾರವನ್ನು ಮತ್ತೊಬ್ಬರಿಗೆ ವ್ಯಕ್ತ ಪಡಿಸಲು ಸಾಧ್ಯ.

ಆ ವ್ಯಕ್ತ ರೂಪ, ಧರ್ಮ ಸ್ಪೂರ್ತಿಯಿಂದ, ವೈಜ್ಞಾನಿಕ ಅರಿವಿನಿಂದ, ಸಮಾನತೆಯ ತತ್ವದಿಂದ, ಸಾಮಾಜಿಕ ಕಳಕಳಿಯಿಂದ, ಶರಣರ ಅಂತರಾಕಾಶದಲ್ಲಿ ಉದಯಿಸಿದ ಉನ್ನತ ಭಾವವೇ ವಚನ ರೂಪದಿಂದ ಕಂಗೊಳಿದಸುತ್ತಿವೆ. ನೀತಿ ನಿಯಮಗಳು ಇಲ್ಲಿ ಶರಣರ ಅಂತರಂಗದ ಅರಿವಿನ ಅನುಭವಗಳ ವ್ಯಕ್ತ ರೂಪ.

ಶರಣರು ಹವ್ಯಾಸಕ್ಕಾಗಿ ಸಾಹಿತ್ಯದಲ್ಲಿ ತೊಡಗಿದವರಲ್ಲ. ಅವರು ಅಹರ್ನಿಶ ತಮ್ಮಂತರಂಗದಲ್ಲಿಯ ಸತ್ಯವನ್ನು ಶೋಧಿಸುವ ಸಾಧಕರು. ಸತ್ಯದಂತೆ ನಡೆಯಲೆತ್ನಿಸಿದ ವೀರರು. ಅಜ್ಞಾನದ ಅಂಧಕಾರವನ್ನು ಕಳೆದು, ಸಂದೇಹದ ಮುಸುಕನ್ನು ಸೆಳೆದೊಗೆದು, ಓದುಗನ ಅಂತಃಕರಣದಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗುವವರು.
“ವ್ಯಾಸನ ಪುರಾಣ, ಶತರುದ್ರಯಾಗ, ಗಾಯತ್ರಿ ಜಪ” ಇವು ಯಾವವು ವಚನಕ್ಕೆ ಸಮಬಾರವು. ಎಂದು ವಚನದ ಘನ ವ್ಯಕ್ತಿತ್ವವನ್ನು ಸಾರಿದ್ದಾರೆ. ವಚನದ ಅನುಭಾವವು ವಚನಾತೀತ. ಬರಿ ವಚಿಸಿ ಅನುಭಾವಿಯಾಗದಿದ್ದರೆ, ಬಸವ ತತ್ವ ಸಂಸ್ಕಾರ ಪಡೆದಂತಾಗುವದಿಲ್ಲ.ಗಿಳಿಯೋದಿ ಫಲವೇನು. ಬೆಕ್ಕು ಬಹುದ ಅರಿಯದನ್ನಕ್ಕರ, ಆಡಿದರೇನು, ಹಾಡಿದರೇನು, ಪಾಡಿದರೇನು ಇಂತಹ ಎಷ್ಟೊ ವಚನಗಳನ್ನು ನೋಡಬಹುದು.

“ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ”. “ಲಿಂಗಾನು ಭಾವದಿಂದ ನಿಮ್ಮ ಕಂಡೆನ್ನ ಮರೆದೆ ಕೂಡಲ ಸಂಗಮದೇವಾ” ಎಂಬಂತೆ, ದೇಹದ ಬಯಕೆಗಳನ್ನು ಅರಿತು ಅದನ್ನು ತೃಪ್ತಿಪಡಿಸುವಂತೆ, ಆತ್ಮದ ಬಯಕೆಯಾದ ಪರಮಸುಖದ ಪ್ರಾಪ್ತಿಯನ್ನು ಪಡೆದು, ಜನನ ಮರಣಗಳಿಂದ ಮುಕ್ತಿಪಡೆಯುವುದೇ ಮಾನವ ಜನ್ಮದ ಪರಮ ಗುರಿ. ಪದ್ಯ ಯಾವಾಗಲೂ ಭಾವಾಭಿವ್ಯಕ್ತಿಯ ಸಾಧನವೆಂದು, ಮತ್ತು ಗದ್ಯವು ವಿಚಾರಾಭಿವ್ಯಕ್ತಿಯ ಸಾಧನವೆಂದು ತಿಳಿಯಲ್ಪಟ್ಟಿದೆ. ಮಾನವನಿಗೆ ಪರಮ ಸುಖವೇ ಮುಖ್ಯ ಧೇಯವಾಗಿರುವದರಿಂದ, ವಚನಗಳು ಸಾಧನೆಯ ಸಿದ್ಧಿಯ ಅನುಭವಪೂರ್ಣ ವಾಙ್ಮಯವು. ಸರ್ವಕಾಲಕ್ಕೂ ಸಲ್ಲತಕ್ಕ, ಜ್ಞಾನಾಮೃತವನ್ನು ಉಣಬಡಿಸಿ, ತೃಪ್ತಿಪಡಿಸುವ ದಿವ್ಯ ಸಾಧನವು.

ದೇಹ ಪೋಷಣೆಗೆ ಅನ್ನವಸ್ತ್ರಗಳು ಅವಶ್ಯವಿದ್ದಂತೆ, ಆತ್ಮ ಮತ್ತು ಮನಸ್ಸನ್ನು ಉನ್ನತ ಸ್ಥಿತಿಗೆ ಏರಬೇಕಾರೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳು ಅವಶ್ಯಕವಾಗಿರುವವು. ಮಣಿಗಳಿಗೆ ಸೂತ್ರದ ಸಹಾಯದಿಂದ ಸುಂದರ ಹಾರವಾಗುವಂತೆ, ಬದುಕಿಗೆ, ಧರ್ಮ ಮತ್ತು ನೀತಿಯ ಸೂತ್ರವಿರದೆ ಬಾಳು ಸುಂದರವಾಗದು. ಆದ್ದರಿಂದ ಧರ್ಮ ಮಾರ್ಗ ಪ್ರತಿಯೊಬ್ಬರಿಗೂ ಅವಶ್ಯಕ.

ವಚನಗಳು –ಷಟ್ಸ್ಥಲ, ಪಂಚಾಚಾರ, ಅಷ್ಟಾವರಣ, ಅಂಗಲಿಂಗ ಸಂಬಂಧ ಹೀಗೆ ಹಲವಾರು ವಿಷಯಗಳ ಕುರಿತು ವಿವೇಚಿಸುತ್ತವೆ. ತಾತ್ವಕ ಮತ್ತು ತುಲನಾತ್ಮಕವಾಗಿ ನೋಡಲಾಗಿ, ಅನ್ಯಧರ್ಮದ ವಿಷಯಕ್ಕಿಂತ ವಚನಗಳು ಅತ್ಯಂತ ಸರಳ ಮತ್ತು ಆಕರ್ಷಕವಾಗಿರುವವು.

ವಚನಗಳಲ್ಲಿ ರೂಢಿಯಲ್ಲಿರುವ ಎಷ್ಟೋ ನುಡಿಗಟ್ಟುಗಳು ಇದ್ದಕ್ಕಿದ್ದಹಾಗೆ ಅಥವಾ ಸ್ವಲ್ಪ ಪಲ್ಲಟಿಸಿದ ಸ್ವರೂಪದಲ್ಲಿ ದೃಗ್ಗೋಚರವಾಗುತ್ತವೆ. ಉದಾ: “ಕಂಬಳಿಯಲ್ಲಿ ಕಣಕವ ನಾದಿದಂತೆ” “ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ” “ಸುಣ್ಣದ ಕಲ್ಲು ಮಡಿಲಲ್ಲಿ ಕಟ್ಟಿಕೊಂಡು ಮಡುವಿನಲ್ಲಿ ಬಿದ್ದಂತೆ” “ನೊಂದವರ ನೋವ ನೋಯದವರೆತ್ತ ಬಲ್ಲರು” ಇಂತಹ ಎಷ್ಟೋ ನುಡಿಗಟ್ಟುಗಳನ್ನು ವಚನಗಳಲ್ಲಿ ನೋಡುತ್ತೆವೆ.

ವಚನಗಳಲ್ಲಿ ಅಲಂಕಾರಗಳು ಹೇರಳವಾಗಿ ಬಳಕೆಯಾಗಿವೆ. ನಮ್ಮ ಶರಣರು ಉಪಮಿಸಬಾರದ ಉಪಮಾತೀತರು. ನಮ್ಮ ಶರಣರನ್ನು ಯಾರಿಗೂ ಹೊಲಿಸಲು ಸಾಧ್ಯವಿಲ್ಲ. ಶರಣರಿಗೆ ಶರಣರೇ ಸಾಟಿ.

ಪ್ರತಿಯೊಬ್ಬ ವಚನಕಾರರು ಒಂದೊಂದು ಅಂಕಿತನಾಮವನ್ನು ಉಪಯೋಗಿಸಿದ್ದಾರೆ. ಕೆಲವರು ತಮ್ಮ ಇಷ್ಟದೈವವನ್ನು ಬಳಸಿದರೆ, ಇನ್ನು ಕೆಲವರು ತಮಗೆ ದೀಕ್ಷೆಕೊಟ್ಟ ಗುರುವಿನ ಹೆಸರನ್ನು ಉಪಯೋಗಿಸಿದ್ದಾರೆ. ಉದಾ: ಮುಕ್ತಾಯಕ್ಕ ತನ್ನ ಅಣ್ಣನಾದ ಅಜಗಣ್ಣನ ಹೆಸರನ್ನೇ ವಚನಾಂಕಿತವಾಗಿ ಬಳಸಿದ್ದಾಳೆ. ಮತ್ತೆ ಕೆಲವರು ತಮ್ಮ ವೃತ್ತಿಯನ್ನು ತಮ್ಮ ಹೆಸರಿನೊಂದಿಗೆ ಸೇರಿಸಿ ಹೇಳಿದ್ದಾರೆ. ಉದಾ: ಅಂಬಿಗರ ಚೌಡಯ್ಯ.

ವಚನಗಳ ಭಾಷೆ- ವಚನಗಳಲ್ಲಿ ಬಳಸಿದ ಶಬ್ಧ ಭಂಡಾರ ಅಮೋಘ, ಅಷ್ಟೇ ಅದ್ಭುತ. ಶುದ್ಧ ಕನ್ನಡ, ಸಂಸ್ಕೃತ ಮತ್ತು ತದ್ಭವಗಳಿರುವವು. ಧರ್ಮ ಸಂಬಂಧದಿಂದ ಉಪಯೋಗಿಸಲ್ಪಟ್ಟ ಎಷ್ಟೋ ಪದಗಳು ಸಂಸ್ಕೃತ ಮತ್ತು ಪಾರಿಭಾಷಿಕವಾಗಿರುವವು. ಅವುಗಳ ಅರ್ಥವನ್ನು ಒಮ್ಮೆ ಪೂರ್ಣವಾಗಿ ಅರ್ಥಮಾಡಿಕೊಂಡರೆ ಮುಂದೆ ಗೊಂದಲಗಳು ಇರಲಾರವು. ಉದಾ: ಲಿಂಗ, ಅಂಗಸಂಬಂಧಿ ಪದಗಳು, ಇಷ್ಟಲಿಂಗ, ಪ್ರಾಣಲಿಂಗ, ನಿಜೈಕ್ಯ, ಇನ್ನು ಹಲವಾರು ಪದಗಳು ಇವೆ.

ಶುದ್ಧ ಕನ್ನಡದ ಎಷ್ಟೋ ಪದಗಳು ಇಂದು ಕಣ್ಮರೆಯಾಗಿವೆ. ಉದಾ: ಒಗೆತನ, ಗಡಣ, ಸಯ್ಪು, ಮಾಣು, ಸಸಿನ ಇನ್ನು ಹಲವಾರು ಪದಗಳು ಇಂದು ಬಳಕೆಯಲ್ಲಿಲ್ಲ. ಇಂತಹ ಅನೇಕ ಶಬ್ಧಗಳನ್ನು ರೂಢಿಯಲ್ಲಿ ತಂದರೆ ಕನ್ನಡ ಭಾಷೆಯ ಸೊಬಗು ಇನ್ನಷ್ಟು ವೃದ್ಧಿಸುವದು. ಈಗಿಗ ಬಸವ ಭಕ್ತರೆಲ್ಲರೂ , ಶರಣು ಶರಣಾರ್ಥಿಗಳು, ಪ್ರಾಸಾದವಾಯಿತೆ, ಶರಣರೆ ಬನ್ನಿ ಹೀಗೆ ಕೆಲವೇ ಕೆಲವು ಶಬ್ಧಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಪದಗಳನ್ನು ಬಳಸುವ ಮೂಲಕ ವಚನ ಸಾಹಿತ್ಯ ಭಾಷೆಯನ್ನು ರೂಢಿಸಿಕೊಂಡು ಕನ್ನಡ ಭಾಷೆಯ ಶೋಭೆಯನ್ನು ಹೆಚ್ಚಿಸೋಣ.

ಸವಿತಾ ಮಾಟೂರ ಇಲಕಲ್ಲ

Don`t copy text!