ಬಸವ ಕಟ್ಟಿದ ಲಿಂಗಾಯತ ಧರ್ಮ ಒಡೆಯುತ್ತಿರುವ ಜಾತಿವಾದಿಗಳು

ಬಸವ ಕಟ್ಟಿದ ಲಿಂಗಾಯತ ಧರ್ಮ ಒಡೆಯುತ್ತಿರುವ ಜಾತಿವಾದಿಗಳು
ಇತ್ತೀಚೆ ಲಿಂಗಾಯತ ಸಮಾಜದಲ್ಲಿ ಒಡೆಯುವಿಕೆ ದಿನೇ ದಿನೇ ಹೆಚ್ಚುತ್ತಲೇ ನಡೆದಿದೆ.ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು ಎನ್ನುತ್ತ ಬಸವಣ್ಣ ಕಟ್ಟಿದ ಸಮಾಜವು ವಿಘಟನೆಗೊಳ್ಳುತ್ತ ನಡೆದು ಇಂದು ಅಪಾಯದ ಅಂಚಿನತ್ತ ಸರಿದಿದೆ.ಇದಕ್ಕೆಲ್ಲ ಕಾರಣ ಜಾತಿವ್ಯವಸ್ಥೆ ಬೆಂಬಲಿಸುತ್ತಿರುವ ನಮ್ಮ ಸ್ವಾಮಿಗಳು.

ಸ್ವಾರ್ಥ ರಾಜಕೀಯಕ್ಕಾಗಿ ಮುಗ್ಧ ಜನರನ್ನು ಬಲಿಕೊಡುತ್ತಲಿರುವ ದುಷ್ಟ,ಬ್ರಷ್ಟ ರಾಜಕಾರಣಿಗಳು.ಪಂಚಮಸಾಲಿ ಮತ್ತು ಬಣಜಿಗರ ಮಧ್ಯದ ಹಗ್ಗ ಜಗ್ಗಾಟ, ಕೆಸರೆರಚಾಟ ಈಗ ಜೋರಾಗುತ್ತಿದೆ.

ಇದೆಲ್ಲ ಇವರಿಗೆ ಯಾಕೆ ಬೇಕಾಗಿದೆ? ಪ್ರಜ್ಞಾವಂತ ಲಿಂಗಾಯತ ಸಮುದಾಯ ಆಲೋಚಿಸಬೇಕಾಗಿದೆ . ಪಂಚಮಸಾಲಿ – ಬಣಜಿಗರ ಮಧ್ಯದ ಕೊಳುಕೊಡುಗೆಗಳು ಮೊದಲಿಂದಲೂ ಮತ್ತು ಈಗ ಸಾಮಾನ್ಯವಾಗುತ್ತಿವೆ. ಒಂದೆ ಮನೆಯಲ್ಲಿ ಅವರು ಅನ್ಯೋನ್ಯವಾಗಿಯೇ ಇದ್ದಾರೆ. ಇಂಥದ್ದರಲ್ಲಿ ಬೆರಳೆಣಿಕೆಯ ಒಬ್ಬಿಬ್ಬರು ಬೆಂಕಿ ಹಚ್ಚುವ,ಕಿತಾಪತಿ ಯಾಕೆ ಮಾಡುತ್ತಿದ್ದಾರೆ?ಅದರಿಂದ ಅವರಿಗೆ ಸಿಗುವ ಲಾಭವಾದರೂ ಏನು? ಸಮಾಜದ ಪ್ರಜ್ಞಾವಂತ ಜನ ಇದನ್ನು ಚರ್ಚಿಸಿ ವಿಚಾರಿಸುತ್ತಿದ್ದಾರೆ,ಕಾದು ನೋಡುತ್ತಿದ್ದಾರೆ.

ಹಾಗೆ ನೋಡಿದರೆ ಪಂಚಮಸಾಲಿ ಎಂಬ ಪದದ ಅರ್ಥ ಇವರಾರಿಗೂ ತಿಳಿದಿಲ್ಲ.ತಿಳಿದುಕೊಳ್ಳುವ ಮನಸ್ಥಿತಿಯಲ್ಲೂ ಅವರಿಲ್ಲ.ಈ ಸಂದರ್ಭದಲ್ಲಿ ನನ್ನ ವಿದ್ಯಾಗುರುಗಳೂ ಕನ್ನಡದ ಮಹತ್ವದ ಸಂಶೋಧಕರೂ ಆದ ಡಾ.ಎಂ.ಎಂ.ಕಲಬುರ್ಗಿಯವರು ೧೫-೨೦ ವರ್ಷಗಳ ಹಿಂದೆ ಪಂಚಮಸಾಲಿ : ಹಾಗೆಂದರೇನು? ಎಂಬ ಲೇಖನ ಬರೆದಿದ್ದರು. ಅದರಲ್ಲಿನ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯವೆನಿಸುತ್ತಿದೆ. ಸುಮಾರು ೨೦೦ವರ್ಷಗಳಷ್ಟು ಹಿಂದಿನ ಕೃತಿಗಳಾದ (೧).ವಾಣಿಜ್ಯ ಉತ್ಪತ್ತಿ, ವಣಿಗುತ್ಪತ್ತಿ (೨).ಪಂಚಮಸಾಲಿ ಉತ್ಪತ್ತಿ, ಪಂಚಮಿ ಸೆಟ್ಟಿಗಳ ವಿಸ್ತೀರ್ಣ ಕೃತಿಗಳು ಪಂಚಮುಖ ಗಣಾಧೀಶ್ವರನ ಮಗ ಮಖಾರಿ ಪ್ಯಾಟಿ, ಪಟ್ಟಣ ಕಟ್ಟಿಸಿ ಪ್ರಸಿದ್ಧ ವ್ಯಾಪಾರಿಯಾಗಿದ್ದನೆಂದು ತಿಳಿಸುತ್ತವೆ. ಈ ಮಖಾರಿ ಮತ್ತು ಅವನ ಹೆಂಡತಿ ಫಣಿಮಣಿಯರಿಗೆ ಐದು ಜನ ಮಕ್ಕಳಾದರು.ತಂದೆ ಇವರಿಗೆ ಒಂದೊಂದು ಹೊಣೆಗಾರಿಕೆ ಹೊರಿಸಿ ವೃತ್ತಿ ಹಂಚಿಕೊಟ್ಟರು.ಅವರೆ ನಾಡನಾಳವ ಸೆಟ್ಟಿ,ಸೆಟ್ಟಿಗುತ್ತ,ಮಹಾಜನಸೆಟ್ಟಿ,ಪಟ್ಟಣಸೆಟ್ಟಿ, ಮಿಂಡಗುದ್ಲಿ

ಸೆಟ್ಟಿ ಎನಿಸಿದರು.

ಮೊದಲಿನ ನಾಲ್ವರು ಒಂದಿಲ್ಲೊಂದು ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರೆ ಐದನೆಯವನಾದ ಮಿಂಡಗುದ್ದಲಿಸೆಟ್ಟಿ ಹೊಲ,ತೋಟ,ಗದ್ದೆಗಳಲ್ಲಿ ೧೮ ತರದ ಧಾನ್ಯಗಳನ್ನು ಬೆಳೆಯುತ್ತಿದ್ದ, ಮಾರುತ್ತಿದ್ದ. ಇಲ್ಲಿನ ಐದನೆಯ ಮಿಂಡಗುದ್ದಲಿ ಸೆಟ್ಟಿಯೇ ಪಂಚಮಸೆಟ್ಟಿ. ಅವನದು ಪಂಚಮಸಾಲು ಅಥವಾ ಪಂಚಮಸಾಲಿ. ಮಿಂಡಗುದ್ದಲಿ ಇದರ ನಿಜರೂಪ ಮೇಂಡೆಗುದ್ದಲಿ. ಮೇಂಡೆ ಎಂದರೆ ಮೇಟೆ. ಮೇಟಿ ಮತ್ತು ಗುದ್ದಲಿ ಇವು ಕೃಷಿ ಉಪಕರಣಗಳು. ಇಂದಿಗೂ ಮೇಂಡೆಗಾರ, ಮೆಟಗುಡ್ಡ, ಮೆಂಡಗುದ್ದಲಿ, ಮೆಟಗೊಡ್ಲಿ ಮೊದಲಾದ ಅಡ್ಡ ಹೆಸರಿನ ಕುಟುಂಬಗಳು ಕಾಣದೊರೆಯುತ್ತವೆ.

ಒಟ್ಟಾರೆ ಪಂಚಮಸಾಲಿಗಳೆಂದರೆ ಅಣ್ಣತಮ್ಮಂದಿರಾದ ಐದು ಬಗೆಯ ಸೆಟ್ಟಿಗಳಲ್ಲಿ ಐದನೆಯವರಾದ ಪಂಚಮಸೆಟ್ಟಿಗಳು ಅಥವಾ ಮಿಂಡಗುದ್ದಲಿ ಸೆಟ್ಟಿಗಳು.ಇವರ ಉಲ್ಲೇಖ ೧೧ನೆಯ ಶತಮಾನದಿಂದಲೂ ಶಾಸನಗಳಲ್ಲಿ ಕಾಣಬರುತ್ತದೆ.ಇದೆಲ್ಲವನ್ನು ನೋಡಿದರೆ ಶಿವೋಪಾಸಕ ಮೂಲದ ಉತ್ಪಾದನೆ – ಮಾರಾಟ – ಉತ್ಪಾದನೆಮಾರಾಟದ ಜನಸಮುದಾಯವೊಂದು ವೃತ್ತಿ ಭೇದದಿಂದ ಐದು ಕವಲಾಯಿತೆಂದೂ,ಇವುಗಳಲ್ಲಿ ಐದನೆಯ ಕವಲಿನ ಸೆಟ್ಟಿಗಳೇ ಪಂಚಮಸಾಲಿಗಳೆಂದೂ ಸ್ಪಷ್ಟವಾಗುತ್ತದೆ. ಇದರಿಂದ ಈ ಐದೂ ಕವಲಿನವರು ಶೆಟ್ಟರಾಗಿದ್ದಾರೆ. ಬಣಜಿಗರಾಗಿದ್ದಾರೆ ಎಂದು ತಿಳಿಯುತ್ತದೆ. ಇವರೆಲ್ಲ ಬಸವೇಶ್ವರನ ಸಂತತಿ ಎಂದು ಕರೆಯಿಸಿಕೊಂಡದ್ದರಿಂದ ಸಂಪ್ರದಾಯದ ಅನುಯಾಯಿಗಳಾಗಿದ್ದಾರೆ.

ಈ ವಸ್ತುಸ್ಥಿತಿಯನ್ನು ಅರಿತು ಪಂಚಮಸಾಲಿಗಳು – ಬಣಜಿಗರು ವರ್ತಿಸಬೇಕು. ಸಮುದಾಯವನ್ನು ಮುನ್ನಡೆಸಿಕೊಂಡು ಹೋಗಬೇಕು.ಇಲ್ಲದಿದ್ದರೆ ಅಧೋಗತಿ ಕಟ್ಟಿಟ್ಟ ಬುತ್ತಿ.

ಡಾ.ಎಸ್. ಕೆ.ಕೊಪ್ಪಾ,ಇಂಡಿ.

Don`t copy text!